"ಇದು ವಿಮರ್ಶೆಯಲ್ಲದ ಚಿಂತನ"

Sunday, April 10, 2016

ಮನ ಮುಟ್ಟುವ ಮಿಜಾರು ಹಾಸ್ಯಗಳು


ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಹಾಸ್ಯ ವಿಶಾರ ಶ್ರೀ ಮಿಜಾರು ಅಣ್ಣಪ್ಪನವರ ಹಾಸ್ಯದ ತುಣುಕುಗಳು.  ಹಾಸ್ಯ ಕೇವಲ ಶಬ್ದ ಜೋಡಣೆಯಲ್ಲಿ ಮಾತುಗಳು ಉಚ್ಚಾರಗಳಲ್ಲಿ ಬರುವುದಿಲ್ಲ. ಅದಕ್ಕೆ ತಕ್ಕ ಭಾವಾಭಿನಯ, ಅಂಗಭಂಗಿ ಅನುಕೂಲ ಉಚ್ಚಾರ ಶುದ್ಧಿ ಇದು ಮೇಳೈಸಿದಾಗಲೇ  ರಸೋತ್ಪತ್ತಿ ,  ಹಾಸ್ಯೋತ್ಪತ್ತಿ ಸಾಧ್ಯವಾಗುತ್ತದೆ. ಹಿಂದಿನ ಕಲಾವಿದರು ತಾವು ಕಂಡ ಜೀವನವನ್ನೇ ರಂಗದ ಮೇಲೆ ತಮ್ಮ ದೃಷ್ಟಿಕೋನದಿಂದ ರಸವಾಗಿ ಪರಿವರ್ತಿಸಿದವರು. ಅದರಲ್ಲೂ ಮಿಜಾರು ಹಾಸ್ಯಗಳಲ್ಲಿ ಜೀವನದ ನಿತ್ಯ ಅನುಭವಗಳು ಯಥೇಚ್ಛವಾಗಿ ಕಾಣಬಹುದು. ಸಾಮಾನ್ಯವಾಗಿ ಯಕ್ಷಗಾನವೆಂದರೆ ಬಣ್ಣ ಬಣ್ಣದ ಝಗಮಗಿಸುವ ವೇಷ ಭೂಷಣಗಳು ಇಂತಹ ಭ್ರಾಮ ಕಲ್ಪನಾ ಲೋಕವೇ ಕಣ್ಣ ಮುಂದೆ ಬರುತ್ತದೆ. ಅದ್ಧೂರಿ ವೇಷ ಭೂಷಣಗಳು ಹೆಚ್ಚು ಪ್ರಭಾವ ಬೀರುತ್ತದೆ ಎಂಬ ಭಾವನೆ ವ್ಯಕ್ತವಾಗುತ್ತದೆ. ಆದರೆ ಮಿಜಾರು ಪಾತ್ರಗಳು ಜನಸ್ಪಂದನೆಯನ್ನು ಗಳಿಸುವುದು ಇವುಗಳಿಗೆಲ್ಲದಕ್ಕಿಂತ ಭಿನ್ನವಾಗಿರುತ್ತದೆ. ಇದು ಯಕ್ಷಗಾನಕ್ಕೆ ಎಷ್ಟು ಸೂಕ್ತ ಎಂಬುದು ಚಿಂತಿಸುವ ವಿಚಾರವಾದರೂ ಅಂದಿನ ಸಾಮಾಜಿಕ ನೆಲೆಗಟ್ಟಿನಲ್ಲಿ ಇದು ಅನಿವಾರ್ಯವಾಗಿತ್ತು ಎಂಬುದು ಬಹಳ ಜನರ ಅಂಬೋಣ. ಯಾವುದೇ ವಿಚಾರವಾದರೂ ಆ ಕಾಲದ ನೆಲೆಗಟ್ಟಿನಲ್ಲಿ ನಿಂತು ಯೋಚಿಸುವುದು ಅನಿವಾರ್ಯವಾಗುತ್ತದೆ. ಹಾಗೆ ಯೋಚಿಸುವಾಗ ಕಲಾವಿದರ ಜೀವನ ಮತ್ತು ಅಸ್ತಿತ್ವದ ಅನಿವಾರ್ಯತೆ ಒದಗಿ ಬಂತು ಎಂದು ಅನ್ನಿಸಬಹುದು. ಈಗ ಲಭ್ಯವಾಗುವಂತೆ ಕಲಾವಿದರಿಗೆ  ಭೂರಿ ಭೋಜನ ಪಾನೀಯ ಅಂದು ಕನಸಿನ ಮಾತೇ ಸರಿ.  ಒಂದು ಚಹ ಕುಡಿಯುವುದಾದರೂ ಸ್ವಂತ ಕಿಸೆಯನ್ನೇ ಅವಲಂಬಿಸಿಕೊಂಡಿರುವಂತಹ ಕಾಲದಲ್ಲಿ ಒಂದಷ್ಟು ಕಲಾವಿದರ ಜೀವನ ಬಹಳ ಕಷ್ಟಕರವಾಗಿತ್ತು. ಇಂದು ಹೊಟ್ಟೆ ತುಂಬಿದ ಕಲಾವಿದರೇ ಜವಾಬ್ದಾರಿ ರಹಿತರಂತೆ ವರ್ತಿಸುವಾಗ ಅರೆಹೊಟ್ಟೆಯ ಕಲಾವಿದನಿಗೆ ಬಂದ ವೇಷವನ್ನು ತೊಡುವುದು ಅನಿವಾರ್ಯವಾಗಿತ್ತು. ಅದೇನಿದ್ದರೂ ಅದಿಲ್ಲಿ ಚರ್ಚೆಯ ವಿಚಾರವಲ್ಲ. ಮಿಜಾರು ಎಂದಾಕ್ಷಣ ಅಲ್ಲಿ ಬಣ್ಣಬಣ್ಣದ ಅದ್ಧೂರಿ ವೇಷದ ಕಲ್ಪನೆ ಬರುವುದಿಲ್ಲ. ಜನಜೀವನದಲ್ಲಿ ನಿತ್ಯವೂ ಕಾಣ ಸಿಗುವ ಬಡಗಿ ಕಮ್ಮಾರ ಕೂಲಿ ಕಾರ್ಮಿಕ, ಕೃಷಿಕ ಹೀಗಿರುವ ವ್ಯಕ್ತಿತ್ವಗಳೇ ರಂಗದ ಮೇಲೆ ಬಂದು ಮಾನಸಿಕ ಸ್ಪಂದನೆಯನ್ನುಂಟು ಮಾಡಿ ಜನರಂಜನೆಯನ್ನು ಗಳಿಸುತ್ತಿದ್ದವು. ಹಾಸ್ಯ ಕಾಣುವುದಕ್ಕೆ ಸುಲಭವಾಗಿದ್ದರೂ ಅದು ಬಣ್ಣದ ಬೆಳಕಿನ ಎದುರು ಸುರಿಯುವ ಕಾರಂಜಿಯ ನೀರಿನಂತೆ ಮಿಜಾರು ಮೂಲಕ ಅವತರಿಸಿದಾಗ ಮಾತ್ರ ಹಾಸ್ಯವಾಗುತ್ತಿತ್ತು. ಅದು ಮಿಜಾರು ಕಲಾವಂತಿಕೆಯ ಮಹತ್ವ.  ಹಾಗಾಗಿ ಕೆಳಗೆ ವಿವರಿಸಿದ ಹಾಸ್ಯಗಳಲ್ಲಿ ಹಾಸ್ಯ ಕಾಣಿಸಬೇಕಿದ್ದರೆ ಅಲ್ಲಿ ಮಿಜಾರುವನ್ನು ಕಣ್ಣೆದುರು ಕಾಲ್ಪನಿಕವಾಗಿಯಾದರೂ ತಂದು ನಿಲ್ಲಿಸಬೇಕು. ಆಗ ಆ ಘಾಢವಾದ ಹಾಸ್ಯದ ಸ್ಪರ್ಶದ ಅನುಭವವಾಗುತ್ತದೆ.  ಈ ಅನುಭವ ನಿಮಗಾದಲ್ಲಿ ಇದು ಸಾರ್ಥಕವಾದಂತೆ. ಆ ಮಹಾನ್ ಕಲಾವಿದನ ಒಂದು ಕಿರು ಸ್ಮರಣೆಯಲ್ಲಿ ಒಂದೆರಡು ಘಳಿಗೆಯನ್ನು ಕಳೆದು ನುಡಿನಮನ ಸಲ್ಲಿಸಿದ ಧನ್ಯತೆ ನಿಮ್ಮದಾಗುತ್ತದೆ. ನಿಮಗೆ ಏನನ್ನಿಸಿತು ಇದು ಮುಖ್ಯ. ಅದನ್ನು ಕೇಳುವ ಉತ್ಸುಕತೆ ಪ್ರತಿಯೊಬ್ಬರಿಗೂ ಇರುತ್ತದೆ.

ಪ್ರಸಂಗ ಕಾನದ ತನಿಯೆ.
ಅರಸನ ಮಕ್ಕಳು ಅಣ್ಣ ತಂಗಿ ತಂದೆಯ ಹತ್ಯೆಯ ನಂತರ ತಪ್ಪಿಸಿಕೊಂಡು ಕಾಡಿನಲ್ಲೇ ಬರುವ ಸನ್ನಿವೇಶ. ಅಣ್ಣ ತಂಗಿ ಇಬ್ಬರೂ ತಪ್ಪಿ ಬೇರೆ ಬೇರೆ ಯಾಗುತ್ತಾರೆ. ಆಗ ಅಣ್ಣ ತಂಗಡಿ...ತಂಗಡಿ ಎಂದು ಕೂಗುತ್ತಾ ತನಿಯನ ಗುಡಿಸಲು ಬಳಿಯೇ ಬರುತ್ತಾನೆ. ಆಗ ಮಿಜಾರು...
ಓ ಮಗಾ....ಮೂಲು ಓಲುಲಾ ಅಂಗಡಿ ಇಜ್ಜಿ ಮಗ. ಈ ಕಾಡ್ ದ ಬರಿಟ್ಟೆ ಅಂಗಡಿ ನಾಡುವತ್ತಾ....ಈ ಮಲ್ಲಕುಲು ಪೂರ ಜೋಕುಲೆಗ್ ಕಾಸ್ ಕೊರ್ದು, ಕಾಸ್ ತಿಕ್ಕಿಪೆಟ್ಟಿಗೆ ಅಂಗಡಿ ನಾಡೊಂದು ಪಿದಡುವ...ಅಂದ ಮಗ ಈ ಕಾಡ ಬರಿಟ್ ಅಂಗಡಿ ಒಲ್ತು ಮಗ?

ಪ್ರಸಂಗ ಗೋಣ ತಂಕರ....,
 ಹೆಚ್ಚಿನ ಎಲ್ಲ ಪ್ರಸಂಗಗಳಲ್ಲಿ ಮಿಜಾರು ಸೌಮ್ಯ ಮತ್ತು ಸಭ್ಯ ವ್ಯಕ್ತಿತ್ವದ ಪಾತ್ರ ಮಾಡಿದ್ದರೆ ಈ ಪ್ರಸಂಗದಲ್ಲಿ ಒಂದು ರೀತಿಯ ಕುಯುಕ್ತಿಯ ಖಳ ಪಾತ್ರವನ್ನು ನಿರ್ವಹಿಸುತ್ತಾರೆ. ಪಾತ್ರದ ಆರಂಭದ ಪ್ರವೇಶದಲ್ಲಿ ಅರುವ ಕೊರಗಪ್ಪನವರ ಖಳ ಪಾತ್ರದೊಂದಿಗೆ ಪ್ರವೇಶವಾಗುತ್ತದೆ. 
ಅರುವ:   ಈ ಸಾದಿ ಓಡೆಗ್ ಪೋಪುಂಡು ?
ಮಿಜಾರು:  ಈ ತಾದಿ ಓಡೆಗ್ ಲಾ ಪೋಪುಜಿ ಪಾಕ ಸಮಯಡ್ದು ಉಂದು ಮುಲ್ಪನೇ ಉಂಡು ಉಂದೆಟ್ಟ್ ಪೋಂಡ ಓಡೆಗಾಂಡಲ ಎತ್ತು.
(ಇದರನಂತರ ಇದನ್ನು ಹಲವರು ತಮ್ಮ ಹಾಸ್ಯದಲ್ಲಿ ಸೇರಿಸಿಕೊಂಡಿದ್ದಾರೆ)

ಪ್ರಸಂಗ ಬೊಳ್ಳಿಗಿಂಡೆ
ಇದರಲ್ಲಿ ಮಿಜಾರು ಅವರದ್ದು ಪೆದ್ದನಾದ ಅರಸುಕುಮಾರನ ಪಾತ್ರ. ಸದಾ ಮಲತಾಯಿಯಿಂದ ಹಿಂಸೆ ಬವಣೆಯನ್ನು ಪಡುವಂತಹ ಪಾತ್ರ. ತಂದೆಯ ಮರಣಾನಂತರ ಈತನಿಗೆ ಬರಬೇಕಾದ ಪಟ್ಟದ ಅಧಿಕಾರವನ್ನು ಮಲತಾಯಿ ಹಿಡಿದಿರಿಸಿಕೊಂಡು ಈತನಿಗೆ ಬಹಳಷ್ಟು ಕಷ್ಟಗಳನ್ನು ಕೊಡುತ್ತಿರುತ್ತಾಳೆ. ಹೀಗೆ ಒಂದು ಸಲ ಊರ ಮಹನೀಯನೊಬ್ಬ  ಈತನಿಗೆ,  ಹೋಗಿ ಮಲತಾಯಿಯಲ್ಲಿ ಹಾಕಿದ ಗೆರೆ ದಾಟಬೇಕಿದ್ದರೆ ಪಟ್ಟದ ಮಣೆ ಬಿಟ್ಟುಕೊಡುವಂತೆ ಕೇಳಲು ಪ್ರಚೋದಿಸುತ್ತಾನೆ.   ಪೆದ್ದ ಹೋಗಿ ಮಹಾರಾಣಿಯಾದ ಮಲತಾಯಿಯಲ್ಲಿ ಕೇಳುವ ರೀತಿ ಹೀಗಿದೆ....” ಸಿದ್ಯಪ್ಪೆ ಪಟ್ಟ ಎನ್ನ ಅಮ್ಮನ ಎಂಕ್ ಪಟ್ಟದ ಮಣೆ ಬುಡುದು ಕೋರು....ಹಾಂ ಗೀಟ್.....” ಹೀಗೆ ಹೇಳಿ ಒಂದು ಗೆರೆಯನ್ನು ಕಾಲಿನಿಂದಲೇ ಏಳೆಯುವ ಭಂಗಿಯನ್ನು ನೋಡುವುದೇ ಸೊಗಸು. “ ಎಂಕ್ ಪಟ್ಟ ಕೋರು ಹಾಂ ಗೀಟ್....ಕೊರು” ಪದೆ ಪದೇ ಹೀಗೆ ಹೇಳುತ್ತಾ ಗೆರೆ ಎಳೆಯುವಾಗ ಮಿಜಾರು ಪ್ರತಿಭೆಗೆ ಬೆರಗಾಗಬೇಕು.  ಅದು ಹಾಸ್ಯವಾಗಿಯೂ ಕಾಣುತ್ತದೆ ಭಾವನಾತ್ಮಕವಾಗಿಯೂ ಮನಸ್ಸನ್ನು ಕರಗಿಸುತ್ತದೆ. ಆ ದಯನೀಯ ಸ್ವರ ಪೆದ್ದುತನದ ಶೈಲಿ ಅದು ಮಿಜಾರ್ ಗಾಗಿಯೇ ಸೃಷ್ಟಿಯಾದ ಪಾತ್ರ ಸಂಶಯವಿಲ್ಲ.
ಅದೊಂದು ದುಃಖದ  ಸಾವಿನ ಬಗ್ಗೆ ದುಃಖಿಸುವ ಸನ್ನಿವೇಶ.  : ಮಿಜಾರು ಪಾತ್ರ ಅಳುತ್ತಾ ಸ್ವಗತವಾಗಿ ಮಾತನಾಡುತ್ತ ಇರುತ್ತದೆ. ಅಷ್ಟರಲ್ಲಿ ಅದು ದುಃಖದ ಸನ್ನಿವೇಶವಲ್ಲವೇ? ಮುಂದೆ ಕುಳಿತ ಸಭಿಕನೊಬ್ಬ ಎದ್ದು ಹೊರ ನಡೆಯುತ್ತಾನೆ.  ಇದನ್ನು ನೋಡಿದ ಮಿಜಾರು  ಸಭಿಕನತ್ತವೇ ಕೈ ತೋರಿಸಿ ಪಾತ್ರವಾಗಿಯೇ ಹೇಳುವ ಮಾತಿದೆ...  ” ಆಯೆ ಲಕ್ಕ್ ದ್ ಪೋಯೆನ  ಫೋವಡ್.....ಆಂಡ ಮುಲ್ಪ ಇತ್ತಿನಕುಲು ಮುಲ್ಪನೇ ಬದ್ ಕೊಡತ್ತೇ? ಅಂಚ ಲಕ್ಕ್ ದ್ ಪೋಯೆರ ಆಪುಂಡ ......” ಹೀಗೆ ದಯನೀವಾಗಿಯೇ ಸಮಯ ಪ್ರಜ್ಞೆಯಿಂದ  ಪಾತ್ರ ಮುಖೇನ ಡೋಸು ಇಡುವಾಗ ಆ ದುಃಖದ ಸನ್ನಿವೇಶದಲ್ಲೂ ಸಭೆಯಲ್ಲಿ ನಗುವಿನ ಅಲ್ಲೆ ಉಕ್ಕುತ್ತದೆ.  ಇಂತಹ ಸಮಯ ಪ್ರಜ್ಜೆಯ ಮಾತು (timing dialog ) ಗಳಿಗೆ ಮಿಜಾರು ಸಿದ್ಧ ಹಸ್ತರು.   

ಪ್ರಸಂಗ ಜಾಲ ಕೊರತಿ  ಇರಬೇಕು. ಅದರಲ್ಲಿ ಕಾಡಿನಲ್ಲಿ ಬೇಟೆಯಾಡುವ ಸನ್ನಿವೇಶ. ಎಲ್ಲ  ಅದನಂತರ ಪರಸ್ಪರ ಮಾತನಾಡುವಾಗ ಬೆಳ್ಳಗೇ ಇದ್ದವನು ಒಬ್ಬ ಕೇಳುತ್ತಾನೆ  “ ಈ ಎಂಕ್ ದಾಯೆ ಆಕಿನಿ? “  
ಆಗ ಮಿಜಾರು ಆತನ ಶ್ವೇತ ವರ್ಣವನ್ನು ಹಂಗಿಸುವ ಪರಿ ಹೀಗೆ.
  “ಓ ಅವು ಈಯಾ….. ಯಾನ್ ಬೊಲ್ದು ಕಾರ್ ಎರ್ನವು ಪಂಗ್  ಸಾದಿಗ್ ಅಡ್ಡ ಉಂಡತ್ತಾ ದೆತ್ತ್ ಕಲ್ಲ್ ದಕ್ಕಿನಿ. ಅವು ನಿನ್ನ ಕಾರ್ ಅತ್ತಾ… ಬೇನೆ ಆಂಡ ಮಗಾ” 
ಹೌದು ದಪ್ಪ ಮೀಸೆಯ ಕೃಶವಾದ ಹೊಳೆಯುವ ಕಣ್ಣಿನ ಮೊನಚು ದೃಷ್ಟಿಯ  ಮಿಜಾರು ಮುಖ ಈಗ ಕಣ್ಣೆದುರಿಗೆ ಬಂದು ನಿಂತಂತಾಗುತ್ತದೆ.
ಧನ್ಯವಾದಗಳು. ಯಕ್ಷಗಾನಂ ಗೆಲ್ಗೆ.


Tuesday, April 5, 2016

ಮರೆಯದ ಹಾಸ್ಯದ ಹೊನಲು.... ಮಿಜಾರು



“ ಎಂಕ್ ದಾನೆ ಮಗಾ,  ಪರ್ಕಟ್ ಅಂಗಿಗ್ ಕೈ ಪಾಡ್ನವುಲೇ ಕಿಸೆಗೆ”

            ಈ ಮಾತು ಕೇಳಿದಾಗ ಗಂಭೀರ ಸನ್ನಿವೇಶದಲ್ಲೂ ಪ್ರೇಕ್ಷಕ ಮನಸ್ಸಿನೊಳಗೆ ನಕ್ಕುಬಿಡುತ್ತಾನೆ. ಹಾಗೆ ನಕ್ಕುಬಿಡುವ ಹಾಸ್ಯದ ಸನ್ನಿವೇಶವಾದರೆ ಇದು ಅತಿಶಯವಲ್ಲ. ಆದರೆ ಇದು ಕಾಡ ಮಲ್ಲಿಗೆ ಎಂಬ ತುಳು ಪ್ರಸಂಗದ ಗಂಭೀರ ಸನ್ನಿವೇಶವೊಂದರಲ್ಲಿ ಚೋಂಕ್ರ ಎಂಬ ಅರಮನೆಯ ಆಳು  ನೋವಿನಿಂದ ಹೇಳುವ ಮಾತು.  ದಯನೀಯತೆಯಲ್ಲೂ ವಿಡಂಬನೆಯನ್ನು ತೋರಿಸುವ ಈ ಗಾದೆ ಮಾತಿನ ಜನಕ ಬೇರಾರೂ ಅಲ್ಲ. ಪ್ರಸಿದ್ಧ ಹಾಸ್ಯಗಾರ, ರಸಿಕ ವಿಶಾರದ ಎಂಬ ಅನ್ವರ್ಥ ನಾಮದ ಮಿಜಾರು ಅಣ್ಣಪ್ಪ. ಬಾಯಿ ತೆರೆದರೆ  ಹಾಸ್ಯದೊಂದಿಗೆ ಅಸ್ಖಲಿತವಾಗಿ ಉದುರಿ ಬೀಳುವ ಶುದ್ದ ಜಾನಪದ ಅಣಿಮುತ್ತುಗಳು ಕರ್ನಾಟಕ ಮೇಳದ ಆಟವನ್ನು ಕಂಡು ಅನುಭವಿಸಿದವರು ಮರೆಯುವುದಕ್ಕೆ ಸಾಧ್ಯವಿಲ್ಲ.  ಕೆಲವಂತೂ ಅದು ಶುದ್ದ ಮಿಜಾರು ಸೃಷ್ಟಿ ಎಂದರೆ ತಪ್ಪಾಗಲಾರದು. ಸಹಜ ಮಣ್ಣಿನ ಪ್ರತಿಭೆ ಎಂದರೆ ಇದುವೆ ಅಲ್ಲವೇ?  

            ಹಾಸ್ಯಕ್ಕೊಂದು ಅಣ್ಣಪ್ಪನೆಂದರೆ ಅದು ಮಿಜಾರು.  ಒಂದು ದೊಗಲೆ ಅಂಗಿ ಇನ್ನೊಂದು ಕಚ್ಛೆ ಮತ್ತೊಂದು ತಲೆಗೆಗೆ ದಪ್ಪಗೆ ಸುತ್ತಿದ ಮುಂಡಾಸು... .ಕಾಡ ಮಲ್ಲಿಗೆ ಪ್ರಸಂಗದಲ್ಲಿನ ಚೋಂಕ್ರನ ಪಾತ್ರ ಸಾವಿರ ಸಾವಿರ ಸಂಖ್ಯೆಯ ಕಲಾ ರಸಿಕರನ್ನು ಉನ್ಮೇಷಗೊಳಿಸಿದ ಪಾತ್ರ. “ತಾರಾಮೌಲ್ಯ” (ಸ್ಟಾರ್ ವ್ಯಾಲ್ಯು)  ಎಂದು ನಾವು ಏನನ್ನು ಕರೆಯುತ್ತೇವೆಯೋ  ಅದು  ಅದ್ಧೂರಿಯ ಆಡಂಬರದಲ್ಲಿ ಇಲ್ಲ ಎಂದು ತೊರಿಸಿಕೊಟ್ಟದ್ದು ಮಿಜಾರು ಅಣ್ಣಪ್ಪನವರು. ಸುಕ್ಕು ಕಟ್ಟಿದ ಕೈ,  ತೊಗಲು ಅಂಟಿಸಿದಂತಹ ಮುಖ ಬಾಗಿನಿಂತುಕೊಂಡ ಅಂಗಭಂಗಿಯ ಸಣಕಲು ಶರೀರ ..!!!  ಇಡೀ ಸಭೆಯನ್ನು ತನ್ನ ನಿಯಂತ್ರಣದಲ್ಲಿ ತರುತ್ತದೆ ಎಂದರೆ ಸ್ವಾಮಿ ಅದೇನು ಸಾಮನ್ಯವೇ? 

            ಇಂದೀಗ  ದಶಕದ ಹಿಂದಿನ ಪುರಾತನ ಹಾಸ್ಯದ ಕೊಂಡಿ ತನ್ನ ಹಿಡಿತವನ್ನು ಸಡಿಲಿಸಿ  ಕಳಚಿಕೊಂಡಿದೆ. ಹೀಗೆ ಒಂದು ಭವ್ಯ ಇತಿಹಾಸದ ಅಂತಿಮ ಪುಟವೂ ದಾಖಲಾಗಿಬಿಟ್ಟದ್ದು ಯಕ್ಷಕಲಾರಸಿಕರ ಹೃದಯವನ್ನು ಭಾರಗೊಳಿಸಿದೆ.

ಎಪ್ಪತ್ತು ಎಂಭತ್ತರ ದಶಕದ ಕರ್ನಾಟಕ ಮೇಳದ ಆಟ ಎಂದ ತಕ್ಷಣ ಅಬಾಲ ವೃದ್ದರಿಗೆ ಕಂಡುಬರುವ ಮುಖಗಳಲ್ಲಿ ಮಿಜಾರು ಚಹರೆಯೂ ಒಂದು.  ಅಂದು ಹಲವರು ಆಟ ಆರಂಭವಾಗುವ ಮೊದಲು ಚೌಕಿಯಲ್ಲಿ ಇಣುಕಿ ಮಿಜಾರು ಹಾಜರಾತಿಯನ್ನು ಖಚಿತ ಪಡಿಸಿಕೊಂಡು ರೋಮಾಂಚನ ಅನುಭವಿಸುವುದನ್ನು ಕಣ್ಣಾರೆ ಕಂಡಿದ್ದೇನೆ.  ಕೇವಲ ತನ್ನ ನಿಲುವಿನಂದಲೇ ನಗುವನ್ನು ಉಕ್ಕಿಸಬಲ್ಲ ಸಾಮಾರ್ಥ್ಯ ಮಿಜಾರು ಅಣ್ಣಪ್ಪನವರಂತೆ ಬೇರೆ ಯಾವ ಕಲಾವಿದನಲ್ಲೂ ನಾನು ಕಂಡಿಲ್ಲ ಎಂದರೆ ಅದು ಅತಿಶಯವಾಗಲಾರದು.  ಓಟದ ಸ್ಪರ್ಧಾಳುಗಳು ಸೀಟಿ ಊದುವ ಮೊದಲೇ ಓಡಲು ತೊಡಗುವಂತೆ, ಇವರು ಮಾತನಾಡುವುದಕ್ಕೆ ತೊಡಗುವ ಮೊದಲೇ ಸಭೆ ನಗುವುದಕ್ಕೆ ಆರಂಭಿಸುತ್ತದೆ. ಆಲ್ಲಿ ಹಾಸ್ಯವಿದ್ದೇ ಇರುತ್ತದೆ ಎಂಬ ಖಿಚಿತ ವಿಶ್ವಾಸ ಸಭೆಯ ಪ್ರೇಕ್ಷಕನದ್ದು.  

ತುಳು ಪ್ರಸಂಗವೆಂದರೆ ಸ್ವಲ್ಪ ಮಡಿವಂತರಿಂದ ದೂರವಿದ್ದ ಕಾಲವದು. ’ತುಳು ವಾ....’   .ಎಂದು ಮೂಗು ಮುರಿದು ರಾಗ ಎಳೆಯುವಲ್ಲಿ  ಮಿಜಾರು ಹಾಸ್ಯ ಮೊದಲು ನೆನಪಿಗೆ ಬಂದು ಎಲ್ಲ ಪ್ರತಿಬಂಧಕವನ್ನು ಮೀರಿ ಆಟದ ಟೆಂಟೆನೊಳಗೆ ಸೆಳೆಯಲ್ಪಡುತ್ತದೆ. ಕಣ್ಣಿಗೆ ಕಾಣುವ ನಿಲುವು ಅಂಗ ಭಂಗಿಯ ಮಾತು ಹಾಗಿರಲಿ...ಕೇವಲ ಧ್ವನಿಯನ್ನು ಕೇಳುವಾಗಲೂ ಶುದ್ದ ಭಾಷಾಪರಿಜ್ಞಾನದ ಮಾತುಗಳಿಗೆ ಮೌಲ್ಯವನ್ನು ಕಟ್ಟುವುದು ಸಾಧ್ಯವಾಗುವುದಿಲ್ಲ.  ಕಾಡ ಮಲ್ಲಿಗೆ ಚೋಂಕ್ರ ಎಂಬ ಪಾತ್ರ ಆ ಪ್ರಸಂಗದ ಹಲವು ಆಕರ್ಷಣೆಗಳಂತೆ ಇದು ಒಂದಾಗಿದ್ದರೂ ಉಳಿದ ಪಾತ್ರಗಳಂತೆ ವೈಭವೀಕರಿಸಲ್ಪಡುವುದಿಲ್ಲ. ಆದರೂ ಅದಕ್ಕೆ ತಾರಾಮನ್ನಣೆ ಸಿಗುವುದರಲ್ಲಿ ಮಿಜಾರು ಪ್ರತಿಭೆ ಬಹಳಷ್ಟು ಕೆಲಸ ಮಾಡುತ್ತದೆ. ಇದು ಕೇವಲ ಒಂದು ಪಾತ್ರಕ್ಕಷ್ಟೇ ಸೀಮಿತವಲ್ಲ. ಹಲವು ಪೌರಾಣಿಕ ಪ್ರಸಂಗಗಳು ಒಂದು ಕಾಲದಲ್ಲಿ ಇವರ ಅನಿವಾರ್ಯತೆಯನ್ನು ಹೇಳುತ್ತಿತ್ತು. ನಳದಮಯಂತಿಯ ಬಾಹುಕ ಇದರಲ್ಲಿ ಒಂದು.  ಮಾಗಧವಧೆಯ ಶ್ರೀಕೃಷ್ಣ ಬ್ರಾಹ್ಮಣನಾಗಿ ಬರುವ ಪಾತ್ರವನ್ನು ಬಹಳ ಸುಂದರವಾಗಿ ಪ್ರಸ್ತುತ ಪಡಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಹೀಗೆ ಹತ್ತು ಹಲವು ಪಾತ್ರಗಳು ಇರಬಹುದು. ಅವುಗಳಲ್ಲಿ ಬಹಳಷ್ಟು ಅನಾಮಧೇಯವಾಗಿ ಎಲ್ಲೋ ನೆನಪಿನಾಳದಲ್ಲಿ ಹುದುಗಿದ್ದರೆ ಅವುಗಳು ಪರ್ಯಾಯವಾಗಿ ಮಿಜಾರು ಮುಖದಿಂದಲೇ ನೆನಪಿಗೆ ಬರುತ್ತದೆ.

ಮಿಜಾರು ಹಾಸ್ಯ ಎಂದರೆ ಅದು ಶುದ್ದ ಜಾನಪದ ಹಾಸ್ಯ. ಸರಳವಾದ ಉಪಮೆಯ ಕಲ್ಪನೆಗಳು.   ಪರಿಶುದ್ದ ಉಚ್ಚಾರ. ಅದರಲ್ಲೂ ತುಳು ಭಾಷೆಯ ಸೊಗಸು ಕೇಳುವುದೇ ಮಧುರ ಅನುಭವ. ಅದೆಂತಹ ಪಾಂಡಿತ್ಯವೋ ಬೆರಗಾಗಿಬಿಡುತ್ತದೆ. ಇವರ ಹಾಸ್ಯಗಳಲ್ಲಿ ಸಂಪ್ರದಾಯವೋ ಶಾಸ್ತ್ರೀಯತೆಯೋ ಅದಾವ ಗೋಜಿಗೂ ಹೋಗದ,  ಮನುಷ್ಯ ಜೀವನದ ವಿಡಂಬನೆಗಳೇ ಹಾಸ್ಯದ ರೂಪಲ್ಲಿ ರಂಗದಲ್ಲಿ ಹಾಸುಹೊಕ್ಕಾಗುತ್ತದೆ. ಸರಳವಾದ ಹಾಸ್ಯ ಗಂಭೀರ ಚಿಂತನೆಗಳೊಂದಿಗೆ  ರಂಗದ ಮೇಲಿನ ಸನ್ನಿವೇಶಗಳಿಗೆ ಅಡಿಗೆರೆಗಳನ್ನು ಎಳೆಯುತ್ತಿದ್ದರೆ ಎಂತಹ ಪ್ರಸಂಗಗಳೂ ಕಳೆಕಟ್ಟುತ್ತವೆ. ಕೆಲವೊಮ್ಮೆ ಇವರ ಹಾಸ್ಯ ಮತ್ತು ಪಾತ್ರ ಪೋಷಣೆ ಸಂಪ್ರದಾಯವನ್ನು ಮೀರಿದಂತೆ ವಿಮರ್ಶೆಗೆ ಒಳಗಾದರೂ ಹಾಸ್ಯವೆಂಬುದು ಹಲವು ಸಲ ವಿಮರ್ಶೆಗೆ ಅತೀತವಾಗಿ ಇರಬೇಕು ಎಂದು ಅನ್ನಿಸುವುದು,  ಅದರ ಅನಿವಾರ್ಯತೆಯಿಂದ. ಆದರೆ ಮಿಜಾರು ಹಾಸ್ಯಗಳು ಹೆಚ್ಚು ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಅದಕ್ಕೆ ಕಾರಣ ಮಿಜಾರು ಹಾಸ್ಯದ ಗಟ್ಟಿತನವೇ ಕಾರಣ. ಕಥಾಹಂದರವೋ ಸನ್ನಿವೇಶವೋ ಅದಕ್ಕೊಪ್ಪುವ ಪಾತ್ರ ಪೋಷಣೆಯೋ ಮಿಜಾರು ವಹಿಸುವ ಪಾತ್ರಗಳಲ್ಲಿ ಪ್ರತಿಯೊಂದು ಅನನ್ಯ ಸಂಬಂಧಗಳನ್ನು ಹೊಂದಿರುತ್ತದೆ.  ರಂಗದ ಮೇಲೆ ಇವು ಸಕ್ರಿಯವಾಗುವಾಗ ಪ್ರೇಕ್ಷಕ ಎಲ್ಲವನ್ನೂ ಮರೆತು ಪಾತ್ರದೊಂದಿಗೆ ವಲೀನವಾಗಿ ಪಾತ್ರದ ಬಗ್ಗೆ ಮಾತ್ರವೇ ಯೋಚಿಸುತ್ತಾನೆ.  ಇದು ಮಿಜಾರು ಪ್ರತಿಭೆಯ ಸೆಳೆತ ಎನ್ನಬೇಕು. ಹಾಗಾಗಿಯೇ ತುಳು ಪ್ರಸಂಗಕ್ಕೆ ಮಿಜಾರು ಹೆಚ್ಚು ಅನಿವಾರ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.

ಆರಂಭದಿಂದಲೇ ಒಂದು ಪಂಚ್ ಹಾಸ್ಯವನ್ನು ಕೊಡುವುದು ಇವರ ಅದ್ಭುತ ಶೈಲಿಯಲ್ಲಿ ಒಂದು. ಕಾನದ ತನಿಯೆ ಎಂಬ ಪ್ರಸಂಗದಲ್ಲಿ ಕಾಡಿನ ಬದಿಯ ತನಿಯ ನೆಂಬ ಪಾತ್ರ ಆರಂಭವಾಗುತ್ತದೆ. ಇಲ್ಲಿ ಪರದೆ ಸರಿದ ಕೂಡಲೇ ಮಿಜಾರು ವೃದ್ದ ಒಂದು ಕಾಲು ಕೆಳಗೆ ಹಾಕಿ ಮತ್ತೊಂದನ್ನು ಮೇಲೆ ಮಡಿಸಿ ಕುಳಿತಿದ್ದು ಮಾತಿಗೆ ತೊಡಗುವುದು ಹೀಗೆ...” ಹೂಂ ಈ ದಾಯೆ ನೇಲುನೂ...ಮಿತ್ತ್ ಕುಲ್ಲು...” ಎಂದು ಕೆಳಗೆ ಇಳಿಬಿಟ್ಟಿರುವ ಕಾಲನ್ನು ಮೇಲೆತ್ತಿ ಇಡುತ್ತಾರೆ. ಸಹಜವಾಗಿ ಹಾಸ್ಯದ  ನಿರೀಕ್ಷೆಯಲ್ಲಿದ್ದ ಸಭೆ ಕೇಕೆ ಹಾಕಿ ನಗುವಕ್ಕೆ ಆರಂಭಿಸುತ್ತದೆ.  ಇದರ ಸಂಕೇತಾರ್ಥ ಪಾತ್ರದಲ್ಲೂ ಮತ್ತೆ ವ್ಯಕ್ತವಾಗುವುದು ಬೇರೆ ವಿಚಾರ.

ಆರಂಭದಲ್ಲಿ ಬಣ್ಣದ ವೇಷಧಾರಿಯಾಗಿದ್ದರು ಎಂದು ಕೇಳಿದ್ದೆ. ಆದರೆ ನಂತರ ಹಾಸ್ಯಕ್ಕೆ ಅನ್ವರ್ಥವಾಗಿ ಬೆಳೆದದ್ದು ಇತಿಹಾಸ.  ಕರ್ನಾಟಕ ಮೇಳದ ಕರಪತ್ರ ಕಂಡಾಗ, ಆ ಮೇಳದಲ್ಲಿನ ದೈತ್ಯ ಪ್ರತಿಭೆಗಳು ಅದೆಷ್ಟೋ ಇರಬಹುದು,  ಆದರೆ ಮೊದಲು ಕಂಡುಬರುವ ಮುಖವೆಂದರೆ ಅದು ಮಿಜಾರು ಚಹರೆ.  ಇದಕ್ಕೆ ಕಾರಣ ಮಿಜಾರು ತನ್ನ ಪಾತ್ರಗಳಿಂದ ಜನಜೀವನಕ್ಕೆ ಹತ್ತಿರವಾಗುವ ರೀತಿ. ಶುದ್ದ ಜಾನ ಪದ ಹಾಸ್ಯ, , ಗಾದೆಗಳು,  ಉಪಮೆಗಳು,  ಸರಳವಾದ ಸುಂದರವಾದ ಸಂಭಾಷಣೆ ಇವುಗಳಿಗೆಲ್ಲ ಹೊಂದಿಕೆಯಾಗುವ ಅವರ ಸ್ವರ ಭಾರ ಎಲ್ಲವನ್ನೂ ಸೇರಿಕೊಂಡ ಮೊನಚು ಹಾಸ್ಯ ಇಂತಹ ಮಿಜಾರು ಪಾತ್ರಗಳಿಗೆ ಅನ್ಯರನ್ನು ಹೋಲಿಸುವುದು ಕಠಿಣವಾದ ಕೆಲಸ.  ಇಂದು ಹಾಸ್ಯಗಳಿಗೆ ಪ್ರಸಂಗಗಗಳಲ್ಲಿ ತಾರಾಮೌಲ್ಯ ವಿದ್ದರೂ ಅದು ಮೌಲ್ಯವನ್ನು ಕಂಡುಕೊಳ್ಳುವ ಅಭಿರುಚಿಯನ್ನು ಹೊಂದಿಲ್ಲ. ಹಾಸ್ಯಕ್ಕಾಗಿ ಬಗೆ ಬಗೆಯ ಸರ್ಕಸ್ ನ ಸರಕುಗಳ ನೈಪುಣ್ಯತೆಯೊಂದೆ ಕಾಣುತ್ತದೆ.  ಕಲೆಯಲ್ಲಿ ಸದಭಿರುಚಿ ಅಂತೆಯೇ ಸದಭಿರುಚಿಯ ಕಲೆ ನೆಲೆಗೊಳ್ಳಬೇಕಿದ್ದರೆ ಪ್ರಜ್ಞಾವಂತ ಪ್ರೇಕ್ಷಕನ ಆನಿವಾರ್ಯತೆ ಹೇಗೋ ಹಾಗೆ ಕಲಾವಿದನ ಇರುವಿಕೆಯೂ ಅಗತ್ಯ.  ಇಂತಹ ಸಂದಿಗ್ಧತೆಯಲ್ಲಿ ಸರಳವಾದ ಮಿಜಾರು ಪಾತ್ರಗಳು ಬಹುವಾಗಿ ನೆನಪಿಗೆ ಬರುತ್ತವೆ. ಹಿತ ಮಿತವಾದ ಕುಣಿತ ಸಂದರ್ಭೋಚಿತ ಮೊನಚು ಸಂಭಾಷಣೆ ಅತ್ಯಂತ ಶ್ರೀಮಂತ ಶರೀರ ಭಾಷೆ ಮತ್ತು ಆರ್ಜಿಸಿದ ವಿಪುಲವಾದ ಲೋಕಾನುಭವ ಇನ್ನು ರಂಗದ ಮೇಲೆ ಕಾಣುವುದು ದುರ್ಲಭ ಎಂತಲೇ ಹೇಳಬೇಕು.  ಹಲವು ರಾತ್ರಿಗಳನ್ನು ಇವರ ಹಾಸ್ಯದ ಹೊನಲಿನಲ್ಲಿ ಮಿಂದು ನಕ್ಕು ಕಳೆದವರು ನಾವು.  ಮಿಜಾರು ಎಂದಾಕ್ಷಣ  ಎಲ್ಲವನ್ನು ಮರೆತ ಆ ನಮ್ಮ ನಗು ಮತ್ತೆ ಮತ್ತೆ ನೆನಪಾಗುತ್ತದೆ. 


ಕಲಾವಿದನಾಗಿ ಉನ್ನತ ವ್ಯಕ್ತಿತ್ವದಿಂದ ಕೂಡಿದ ಪರಿಪೂರ್ಣ ಜೀವನವನ್ನು ಕಂಡ ಶ್ರೀ ಮಿಜಾರು ಅಣ್ಣಪ್ಪ ತಮ್ಮ ಪಾತ್ರಗಳ ನೆನಪಿನ ಗಾಢ ಮುದ್ರೆಯನ್ನು ಬಿಟ್ಟು ಐಹಿಕ ಲೋಕದಿಂದ ದೈಹಿಕವಾಗಿ ಕಣ್ಮರೆಯಾದರೂ ರಸಿಕರ ಹೃದಯದಲ್ಲೂ ಯಕ್ಷಗಾನ ಲೋಕದಲ್ಲೂ ಮರೆಯದ ಚಿರಸ್ಥಾಯಿ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ. 

Monday, March 14, 2016

ಬೇಟೇಯಾಡುತ್ತಾ ಬಂದ ಭೂಪ

“ಬೇಟೆಯಾಡಿದರೈ ವನದಿ.........” ಯಕ್ಷಗಾನದ ಎಲ್ಲಾ ಪ್ರಸಂಗಗಳಿಗೂ ಸಾಮಾನ್ಯ ಎನ್ನಬಹುದಾದ ಈ ಯಕ್ಷಗಾನ ಪದ ಒಂದನ್ನು    ಹಳೆಯ ಧ್ವನಿ ಮುದ್ರಣ ಸಂಗ್ರಹದಿಂದ ಕೇಳುತ್ತಿದ್ದೆ.  ಅಗರಿ ಭಾಗವತರ ಸ್ವರ ನೆಡ್ಲೆ ಅಜ್ಜನ ಚೆಂಡೆ. ನಳ ದಮಯಂತಿ ಆಖ್ಯಾನದ ಋತುಪರ್ಣ ಪ್ರಸಂಗ. ಇದನ್ನು  ಕೇಳಿದಂತೆ ಮತ್ತೂ ಮತ್ತೂ ಕೇಳುವಂತೆ ಪ್ರಚೋದನೆಯನ್ನು ನೀಡಿ ಆ ಸಾಮಾನ್ಯ ಪದವೇ  “ಮತ್ತು”  ಏರಿಸುತ್ತಿತ್ತು. ಅಂದು ರಾತ್ರಿಯಿಂದ ಮುಂಜಾನೆವರೆಗೆ ಮೈದಾನದ ಧೂಳಿನಲ್ಲಿ ಜಾಗರಣೆ ಮಾಡಿ ಆಟವನ್ನು ನೋಡಿದ,  ಆ ಧೂಳಿನ ವಾಸನೆ ಕಮ್ಮನೆ ಮೂಗಿಗೆ ಬಡಿದಂತೆ ಭಾಸವಾಯಿತು. ಆ ಮಧುರ ಸ್ಮೃತಿಯನ್ನು  ತರುವಲ್ಲಿ ಧೂಳಿನ ಕಣಗಳು ಇನ್ನೂ ಉಳಿದು ಬಿಟ್ಟಿದೆಯೋ ಎಂದು ಮೂಗಿನ ಮೇಲೆ ಬೆರಳೇರಿಸುವಂತಾಯಿತು.  ಹಾಸಿಕುಳಿತ ಗೋಣಿಚೀಲದ ಕಮಟುವಾಸನೆ,   ಮುಷ್ಟಿಯಲ್ಲಿ ಚೂಪಾದ ಮಸಾಲೆ ಕಡಲೆ ತೊಟ್ಟೆ, ಅದರಿಂದ ಒಂದೊಂದೆ ಕಾಳುಗಳನ್ನು ತಿನ್ನುತ್ತಾ ರಂಗದ ಮೇಲೆ ಕುಣಿಯುತ್ತಿರುವ ಭೂಪನನ್ನು ಕಂಡಂತೆ ಮತ್ತು  ಕಾಣುತ್ತಾ ನಿದ್ದೆ ಬಿಟ್ಟ ಕಣ್ಣುಗಳನ್ನು ತೀಡುವಾಗ ಮಸಾಲೆ ಕಡಲೆಯ ಖಾರ ಕಣ್ಣಿಗೆ ಅಡರಿ ಕಣ್ಣುರಿಯಲ್ಲಿ ಮತ್ತೂ ಪಿಳಿ ಪಿಳಿ ನೋಡುತ್ತಿದ್ದ ಆ ಮಧುರ ನೆನಪುಗಳು ಮರುಕಳಿಸಿ....ಕಣ್ಣನ್ನೊಮ್ಮೆ ತೀಡಿ ನೋಡುವಂತಾಯಿತು....ಖಾರವಾದರೂ ಅಡ್ಡಿಲ್ಲ, ಆ ಉರಿ ಇನ್ನು ಉಳಿದಿರಬಹುದೇ?

ಹಳೆಯ ಯಕ್ಷಗಾನದ ಕೇವಲ ಧ್ವನಿ ಮುದ್ರಣವೊಂದೇ ಇಷ್ಟೆಲ್ಲ ಭಾವನೆಯ ಮೂಟೆಯನ್ನು ಸ್ಮೃತಿ ಪಟಲಕ್ಕೆ ಹೊರಿಸುವುದಾದರೆ ಅದರ ಪ್ರತ್ಯಕ್ಷ ದರ್ಶನದ ಅನುಭವ ಹೇಗಿರಬಹುದು? ಬರಿದೇ ಕಲ್ಪಿಸಿದರೂ ಮನಸ್ಸು ನವಿರಾದ ಅನುಭವ. ಅದು ಇಂದಿನ ಪ್ರೇಕ್ಷಕನ ಕಲ್ಪನೆಗೂ ನಿಲುಕದ ಆ ಅನುಭವಗಳು,  ಇಂದು ಕೇವಲ ಧ್ವನಿ ತರಂಗಗಳಿಗೆ ಮತ್ತೆ ಮತ್ತೆ ಕುಣಿದಾಡುತ್ತವೆ ಎಂದರೆ ಬದಲಾದ ಕಾಲಗತಿಯಲ್ಲಿ  ಬದಲಾಗಿ ಹೋದದ್ದು ಕಳೆದು ಹೋದುದನ್ನು ಯೋಚಿಸುವಂತೆ ಮಾಡುತ್ತವೆ. ಆದುದರಿಂದ ಇಂದಿನದ್ದು   ಬಲವಂತವಾಗಿಯಾದರೂ ಕಣ್ಣೆದುರು ಬಂದು ನಿಂತರೆ ನೋಡುವ ಪ್ರೇರಣೆ ಒದಗಿಬರುವುದಿಲ್ಲ.  ಹಿಂದೆ ನೋಡುತ್ತಿರುವಾಗ ಶ್ರೇಷ್ಠವಾದುದನ್ನು ನೋಡುತ್ತೇವೆ ಮತ್ತು ಅದನ್ನು ಕಳೆದುಕೊಳ್ಳುತ್ತೇವೆ ಎಂದು ಯೋಚಿಸುವ ಮನೋಭಾವ ಇರಲಿಲ್ಲ. ಆದರೆ ಇಂದು ಅದು ಪದೇ ಪದೇ ಧಾಳಿಮಾಡಿ ವಿಷಾದಭಾವವನ್ನು ತುಂಬಿಬಿಡುತ್ತದೆ.

ಮಾಧ್ಯಮಗಳಲ್ಲಿ ಅತ್ಯಂತ ಬೃಹತ್ ಮಾಧ್ಯಮ ಅಂತರ್ಜಾಲ ಮಾಧ್ಯಮ. ಇದನ್ನು ಯಾವರೀತಿಯಲ್ಲಿ ಬಳಸಿಕೊಳ್ಳಬಹುದು ಎಂಬುದು ಅವರವರ ನೈಪುಣ್ಯತೆಗೂ ವಿವೇಚನೆಗೂ ಬಿಟ್ಟದ್ದು.   ಹಲವರು ಇದನ್ನು ಬಹಳ ಸೂಕ್ತ ರೀತಿಯಲ್ಲಿ ಬಳಸುತ್ತಾರೆ.  ಅದರೆಂತೆ ಮಿತ್ರ ರಂಗನಾಥರ ಶ್ರಮದಿಂದ ಅಂತರ್ಜಾಲದಲ್ಲಿ ಪ್ರಸಾರವಾಗುವ ಹಿರಿಯ ಕಲಾವಿದರ ಸಂದರ್ಶನದ ವೀಡಿಯೋ ಅದೆಷ್ಟು ಮಂದಿ ಆಸಕ್ತಿಯಿಂದ ಕಾಣುವರೋ ತಿಳಿಯದು. ಆದರೆ ಅವುಗಳಲ್ಲಿ ಹಲವಾರು ಸಂದರ್ಶನಗಳನ್ನು ಆಸಕ್ತಿಯಿಂದ ನಾನು ನೋಡಿದ್ದೇನೆ. ಗಮನಿಸಿದ್ದೇನೆ. ಇವುಗಳಲ್ಲಿ ಹಿರಿಯರ ಸಾರ್ವತ್ರಿಕ ಅಭಿಪ್ರಾಯ ಒಂದಿರುತ್ತದೆ. ಕಾಲ ಸರಿದಂತೆ ಯಕ್ಷಗಾನದಲ್ಲಿ  ಹಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಾಗೆ ನೋಡಿದರೆ ಪ್ರಕೃತಿ ನಿಯಮವೇ ಹಾಗೆ ಹೊಸಚಿಗುರಿಗೆ ಹಣ್ಣಾದ ಎಲೆ ಸ್ಥಾನ ಕಲ್ಪಿಸುವಂತೆ ಹೊಸದು ಬಂದಾಗ ಹಳೆಯದು ಸರಿದು ಹೊಗುತ್ತದೆ.. ಆದರೆ ಯಕ್ಷಗಾನದಲ್ಲಿ ಹಳೆಯದನ್ನು ಕಳೆದುಬಿಡುತ್ತೇವೆ ಆ ಸ್ಥಾನದಲ್ಲಿ ಹೊಸದಾಗಿ ಏನು ಬಂದಿದೆ?   ಬಂದರೂ ಅದು ಹೇಗಿದೆ, ಚಿಗುರು ಬಂದಿದೆ…..  ಎಂದರೆ ಮೊಂಡುತ್ತಿರಿ ರೋಗ ಬಾಧೆಯ ಚಿಗುರಿನಂತೆ ಇದೆ.  ಸತ್ವವೂ ಇಲ್ಲ ಫಲವೂ ಇಲ್ಲ. ಇಲ್ಲಿ ಮಿತ್ರನ ಮೂಲ ಉದ್ದೇಶ ಸುಸ್ಪಷ್ಟ. ಹಿಂದೆ ಹೀಗೆ ಇತ್ತು ಎಂಬುದನ್ನು ಕಲ್ಪಿಸುವ ಪ್ರಯತ್ನ.  ಯಾಕೆಂದರೆ ಅದನ್ನು ಪ್ರತ್ಯಕ್ಷವಾಗಿ ತೋರಿಸುವುದು ಆಸಾಧ್ಯ. ಹಾಗಾಗಿ ಸ್ವತಃ ಅವುಗಳನ್ನು ಅನುಭವಿಸಿ ತೋರಿಸಿದ ಹಿರಿಯ ಕಲಾವಿದರ ನೆನಪುಗಳ ಗಂಟುಗಳನ್ನು ಅನಾವರಣ ಗೊಳಿಸುವುದು, ಆಮೂಲಕ ಹಿಂದಿನದಕ್ಕೆ ಪುಷ್ಟಿ ಒದಗಿಸುವುದು.  ಜತೆಗೆ ಅತಿ ಮುಖ್ಯವೆಂದರೆ ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ತಿಳಿಸುವುದು. ಕಳೆದುಕೊಂಡದ್ದು ಅರಿವಾಗಬೇಕಾದರೆ ಅದರ ಮೌಲ್ಯ ಅರಿವಾಗಬೇಕು. ಮೌಲ್ಯ ಅರಿವಾಗಬೇಕಾದರೆ ಆ ವಸ್ತುವಿನ ಬಗ್ಗೆ ಗೌರವಾದರ ಉಂಟಾಗಬೇಕು.  ಹೀಗೆ ಯೋಚಿಸುವಾಗ ವಿಷಾದದ ಮೋಡ ಮತ್ತಷ್ಟು ದಟ್ಟೈಸುತ್ತದೆ.  ಇಂದು ತಮ್ಮ  ಮೌಲ್ಯ(ಸಂಭಾವನೆ)ವನ್ನಷ್ಟೇ ಗಮನಿಸುವಲ್ಲಿ ಕಲೆಯ ಮೌಲ್ಯದತ್ತ ಗಮನ ಕಡಿಮೆಯಾಗುತ್ತಿದೆ. ಹಾಗಾಗಿ ಅಮಾವಾಸ್ಯೆಯ ಆಕಾಶದಂತೆ ಆಕಾಶದಲ್ಲಿ ತಾರೆಗಳು ಅಸಂಖ್ಯವಾಗಿವೆ, ಆದರೇನು ಆಕಾಶ ಮಾತ್ರ ಕಪ್ಪಾಗಿ ಹೋಗಿದೆ.   ಹಾಗಾಗಿ ಹಳೆಯ ಯಕ್ಷಗಾನವನ್ನು ಕೇಳುವಾಗ ನೋಡುವಾಗ ಮಧುರ ನೆನಪು ಜತೆಯಲ್ಲಿ ವಿಷಾದವನ್ನೂ ತರುತ್ತದೆ.  ಪ್ರಸಂಗದಲ್ಲಿ ಬಾಹುಕನ ರಥದ ವೇಗಕ್ಕೆ ರಥಿಕನಾದ ಋತುಪರ್ಣ ಮಹಾರಾಜನ ಕರವಸ್ತ್ರ ಬಿದ್ದು ಹೋಗುತ್ತದೆ.  ಮಹಾರಾಜ ರಥವನ್ನು ನಿಲ್ಲಿಸುವಂತೆ ಹೇಳಿ ಕರವಸ್ತ್ರ ಹಾರಿಹೋದ ಬಗೆಯನ್ನು ಹೇಳುತ್ತಾನೆ. ಆಗ ಬಾಹುಕ ಹೇಳುವ ಮಾತು “ ಅದು ಹಲವು ಯೋಜನದಷ್ಟು ದೂರ ಸರಿದು ಹೋಯಿತು. ಆ ಕರವಸ್ತ್ರ ಇನ್ನು ಸಿಗಲಾರದು.”  ಈ ಮಾತು ನಿಜವಾಗಿಯೂ ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಯಿತು. ಕಳೆದು ಹೋದ ಕರವಸ್ತ್ರದಂತೆ ಹಳೆಯ ಯಕ್ಷಗಾನ ಮತ್ತೆ ಸಿಗದ ವಸ್ತುವಾಗಿ ಸರಿದು ಹೋಗಿದೆ. ಈಗಿನ ವೇಗದ ಯಕ್ಷಗಾನದಲ್ಲಿ ನಾವೇನು ಕಳೆದುಕೊಳ್ಳುತ್ತಿದ್ದೇವೆ ಅದು ಅರಿವಾಗುವಾಗ  ಬಹಳ ದೂರ ಮುಟ್ಟಿಯಾಗಿರುತ್ತದೆ.

ಕಳೆದು ಹೋದ ಯಕ್ಷಗಾನದ ಬಹಳಷ್ಟು ಅಂಶಗಳನ್ನು ಅರುವತ್ತರ ದಶಕದಲ್ಲಿ ಮರುಸೃಷ್ಟಿ ಮಾಡಲಾಯಿತು. ಅದಕ್ಕೆ ಕಾರಣ ಮಹಾನ್ ಸಾಹಿತಿ ಚಿಂತಕ ಕೋಟ ಶಿವರಾಮ ಕಾರಂತರು.  ಕಾರಂತರು ಬೀಸಿದ ಚಾಟಿಗೆ ಎಲ್ಲರೂ ಎದ್ದು ನಿಂತುಬಿಟ್ಟರು. ಆಗ ಯಕ್ಷಗಾನ ಮರುಸೃಷ್ಟಿಯಾಯಿತು. ಕಳೆದು ಹೋದ ಹಲವನ್ನು ಮರುಬಳಕೆಗೆ ತಂದರು. ಬಹುಶಃ ಯಕ್ಷಗಾನ ಲೋಕ ಮತ್ತೊಮ್ಮೆ ಅಂತಹ ಮಹಾನ್ ಅವತಾರ ಪುರುಷನ ಆಗಮನಾಕ್ಕಾಗಿ ಕಾಯಿತ್ತಿದೆಯೇನೋ ಎಂದನಿಸುತ್ತದೆ.  ಆಶಾ ಭಾವನೆಯ ನಿರೀಕ್ಷೆ ಇರಬಹುದು, ಆದರೆ ಎಂತಹ ಮಹಾ ಪುರುಷ ಬಂದರೂ ಇದು ಸರಿಯಾಗಲಾರದೇನೋ ಎಂಬ ಆತಂಕವೂ ತಾನೂ ಜತೆಗಿದ್ದೇನೆ ಎನ್ನುತ್ತಿರುತ್ತದೆ.   ಆತಂಕ ನಿರಾಶೆಯೋ  ಕೆಲವು ಸಲ ಹೀಗೆ ಬರಹ ರೂಪ ತಳೆಯುತ್ತದೆ. ಏಲ್ಲೋ ಕುಳಿತು ಬರೆದುಬಿಡುತ್ತಾರೆ, ಬಂದು ನೋಡಿ ಬರೆಯುವುದಿಲ್ಲ ಎಂಬ ಅರೋಪವೂ ಇರುತ್ತದೆ. ಆರೋಪ ಯಾಕೆ ಇದನ್ನು ಸ್ವತಃ ತಪ್ಪು ಎಂದು ಬಗೆಯುವ ಮನಸ್ಸು ಇರುತ್ತದೆ. ಆದರೆ ಈ ನಡುವಿನ ಆತಂಕ ಒಂದೇ ಹೋಗಿ ನೋಡುವುದಾದರೂ ಏನನ್ನು?  ಅದು ಪ್ರಶ್ನೆಯಾಗಿಯೇ ಉಳಿದುಬಿಡುತ್ತಾ ನಿರಾಸಕ್ತಿ ಮತ್ತಷ್ಟು ಹೆಚ್ಚುತ್ತದೆ.

ಇದೆಲ್ಲ ಅತಿಯೆನಿಸಬಹುದು. ಆದರೆ ಹಳೆಯ ನೆನಪಿನ ಕಡತಗಳ ಪುಟಗಳಲ್ಲಿನ  ಚೆಂಡೆಮದ್ದಲೆಯ ಝೇಂಕಾರವೋ,      ವಾಗ್ದೇವಿ ನಿತ್ಯ ಕುಣಿಯುವ ಅರ್ಥಗಾರಿಕೆಯೋ, ಆಗ ಶುರುವಾಗಿ ಈಗ ಮುಗಿದು ಬಿಟ್ಟು ಇನ್ನೂ ಬೇಕು ಎನ್ನಿಸುವಂತಹ ಸ್ವರ ಮಾಧುರ್ಯದ ಭಾಗವತಿಕೆಯೋ, ಇವುಗಳನ್ನೆಲ್ಲ ನೋಡುವುದು ಬೇಡ ಕೇಳುವಾಗ ಉಂಟಾಗುವ ಸಂತಸ ಜತೆಯಲ್ಲಿ ಈಭಾವನೆಗಳಿಗೂ ಪ್ರೇರೆಪಣೆ ಈಯುತ್ತದೆ.



Monday, February 29, 2016

ಭಾಷ್ಪಾಂಜಲಿ ಸ್ಪಟಿಕವಾಗಲಿ


ತುಳಸೀ ಜಲಂಧರ ಎಂಬ ಪೌರಾಣಿಕ ಪ್ರಸಂಗ ಒಂದಿದೆ.  ಅಸುರರು ದೇವೇಂದ್ರನಿಗೆ ಹೆಂಡ ಕುಡಿಸಿ ಪರಮೇಶ್ವರನ ಆಗ್ರಹಕ್ಕೆ ತುತ್ತಾಗುವಂತೆ ಮಾಡುತ್ತಾರೆ. ಇಲ್ಲಿ ದೇವೆಂದ್ರನಿಗೆ ಅದು ದುರ್ವ್ಯಸನವಲ್ಲ.  ಆದರೆ ಅಸುರರ ಮಾಯೆಗೆ ಆತ ಪ್ರಚೋದಿತನಾಗುವುದು ಮತ್ತು ಅದರ ವಶವರ್ತಿಯಾಗಿ ತನ್ನ ಯೋಗ್ಯತೇಯ ಜತೆಗೆ ಪರರ ಯೋಗ್ಯತೆಯನ್ನು ಮರೆತು ಬಿಡುತ್ತಾನೆ.  ವಾಸ್ತವದಲ್ಲಿ ಇಂತಹ ರಾಕ್ಷಸೀ ಪ್ರವೃತ್ತಿಗಳ ಪ್ರಚೋದನೆಗೆ ಮನುಷ್ಯರೂ ಹೊರತಾಗಿಲ್ಲ ಎಂಬುದು ಅಪ್ಪಟ ಸತ್ಯ.  ತಾನು ಕೆಡುವುದು ಮಾತ್ರವಲ್ಲ, ಊರ ಕೆಡಿಸಿತು ಎಂಬ ಗಾದೆಯಂತೆ ಊರು ಕೆಡುತ್ತದೋ ಇಲ್ಲವೋ ಆದರೆ ನಶೆಯಲ್ಲಿ ಆತನ ಪಾಲಿಗೆ ಕೆಟ್ಟು ಹೋದ ಪರಿಸರ ಮತ್ತೆ ಸರಿಯಾಗುವುದೇ ಇಲ್ಲ.

“ಅನುಭವ” ಮನುಷ್ಯ ಹುಟ್ಟಿದಕೂಡಲೆ ನೋಡುವಂತಹ ಮುಖವಿದು. ಅದೊಂದು ಪಾಠವಿದ್ದಂತೆ. ನಮ್ಮ ವರ್ತಮಾನದ ಘಟನೆಗಳೆಲ್ಲಾ ಸಮಯ ಜಾರಿದಂತೆ ಇತಿಹಾಸದ ಪುಟಗಳಿಗೆ ಸೇರಿಬಿಡುತ್ತವೆ. ಕಳೆದ ಇತಿಹಾಸವನ್ನು ತಿಳಿದುಕೊಳ್ಳುವುದೆಂದರೆ ಇತಿಹಾಸದ ಅಧ್ಯಯನ ಜತೆಯಲ್ಲಿ ಅದು ಭವಿಷ್ಯತ್ ಗೆ ಅನುಭವವೂ ಆಗುತ್ತದೆ. ಆದರೆ ಅನುಭವದಿಂದ ಮನುಷ್ಯ ಪಾಠ ಕಲಿಯುವುದಿಲ್ಲ ಎಂಬುದನ್ನು ಹಲವುಘಟನೆಗಳು ಶ್ರುತ ಪಡಿಸುತ್ತಾ ಸಾಗುತ್ತದೆ. ಅದರಲ್ಲೊಂದು ದುರ್ವ್ಯಸನ.  ಬದುಕಿನ ಸಮಸ್ಯೆಗಳನ್ನು ಹಿರಿದಾಗಿ ತೋರಿಸಿ, ಭ್ರಾಮಕ ಲೋಕದಲ್ಲಿ ತಾತ್ಕಾಲಿಕ ಶಮನವನ್ನು ಮಾಡಿ ಸಮಸ್ಯೆಗಳನ್ನು ಮತ್ತೂ ದೊಡ್ಡದಾಗಿಸುತ್ತದೆ. ಕ್ಷಣಿಕ ಮುಕ್ತತೆಯನ್ನು ವ್ಯಸನ ಮುಖನಾಗುವುದು ಸಾಮಾನ್ಯ.

ದುರ್ವ್ಯಸನ ಇರುವುದಕ್ಕಿಂತ ಅದನ್ನು ಪ್ರೇರೇಪಿಸುವ ಪರಿಸರವನ್ನು ಮೊದಲು ನಿಯಂತ್ರಿಸಬೇಕು. ಶರೀರಕ್ಕೆ ಗಾಯವಾದಾಗ ಆ ಗಾಯ ಶಮನವಾಗುವುದಕ್ಕೆ ರೋಗ ನಿರೋಧಕ ( ಆಂಟಿ ಬಯೋಟಿಕ್) ಔಷಧವನ್ನು ಪ್ರಯೋಗಿಸುತ್ತೇವೆ. ಅದರ ಕೆಲಸ ಬ್ಯಾಕ್ಟೀರಿಯಾ ಸೋಂಕಿನಿಂದ ಬೇರೆ ರೋಗಗಳು ಬಾರದಿರುವಂತೆ ಕೇವಲ ತಡೆಯುವುದಷ್ಟೇ ಕೆಲಸ. ಶಮನ ಮಾಡುವುದಲ್ಲ.  ಅಷ್ಟರಲ್ಲೇ ಆ ಗಾಯ ಗುಣವಾಗಿಬಿಡುತ್ತದೆ. ಅಂದರೆ ರೋಗ ಶಮನವನ್ನು ಶರೀರವೇ ಹೊಂದಿದೆ ಎಂದಾಯಿತಲ್ಲ? ಹಾಗಾಗಿ  ಪರಿಸರವನ್ನು ಶುದ್ದವಾಗಿಸುವುದು ಇಲ್ಲಿ ಮುಖ್ಯವಾಗುತ್ತದೆ. ಪರಿಸರ ಕೆಟ್ಟು ಹೊದರೆ ಎಂತಹ ಆರೋಗ್ಯವಂತ ಜೀವವಾದರೂ ಜೀವಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಒಬ್ಬ ದುರ್ವ್ಯಸನ ಬಾಧಿತನಾಗಿದ್ದಾನೆ ಎಂದಾದರೆ ಪೂರ್ಣ  ಪರಿಸರ ಕೆಟ್ಟಿದೆ ಎಂದರ್ಥವಲ್ಲ. ಆತನ ಸುತ್ತಲು ಪರಿಸರ ಕೆಡದಂತೆ ನೋಡಿಕೊಳ್ಳಬೇಕಾದದ್ದು ಮೊದಲ ಅನಿವಾರ್ಯತೆ. ಅಲ್ಲಿ ಮತ್ತಷ್ಟು ಪ್ರಯತ್ನ ಪೂರ್ವಕವಾಗಿ ಪರಿಸರವನ್ನು ಕೆಡಿಸಿ ದುರ್ವ್ಯಸನಕ್ಕೆ ಪ್ರೇರಪಣೆಯನ್ನು ಒದಗಿಸುತ್ತಾನೆ ಎಂದಾದಲ್ಲಿ ಅನುಭವದಿಂದ ಪಾಠ ಕಲಿಯಲಿಲ್ಲ ಎಂದೇ ಖೇದ ಪೂರ್ವಕವಾಗಿ ಹೇಳಬೇಕು.

ವ್ಯಸನ ಬಾಧೆ ಎಂಬುದು ಸರ್ವೇಸಾಮಾನ್ಯವಾದರೂ ಕಲಾವಿದನಿಗೆ ಇದು ಸ್ವಲ್ಪ ಗಣನೀಯವಾಗಿರುತ್ತದೆ. ಇದೊಂದು ಅನಧಿಕೃತ ಪ್ರಕೃತಿ ನಿಯಮ. ಯಾಕೆಂದರೆ ಇಲ್ಲಿ ಲಭ್ಯವಾಗುವ ವಿಪುಲ ಅವಕಾಶಗಳೊಂದಿಗೆ ಹಲವು ಸಮರ್ಥನೆಗಳೂ ಕಾರಣವಾಗುತ್ತವೆ. ಹಲವು ಸಲ ಇದನ್ನು ಸ್ವಯಂಕೃತ ಅಪರಾಧವೆಂದು ಪರಿಗಣಿಸಿದರೂ ಇಲ್ಲಿ ಪರಿಸರದ ಜವಾಬ್ದಾರಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ಕಲೆ ಮತ್ತು ಕಲಾವಿದ ಎರಡೂ ಒಂದೇ ಮುಖಗಳಾಗಿ ಕಂಡಾಗ ಕಲಾವಿದ ಕಲೆಯ ಒಂದು ಅಂಗವೇ ಆಗಿಬಿಡುತ್ತಾನೆ. ಇದೊಂದು ಅವಿನಾಭಾವ ಸಂಬಂಧ.  ಕಲಾವಿದ ಕೆಡುವಾಗ ಕಲೆಯೂ ಕೆಟ್ಟಹಾಗೆ. ಕಲಾವಿದ ನೇಪಥ್ಯದಿಂದ ಸರಿದಾಗಲೂ ಕಲೆಯಿಂದ ದೂರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ಹೂವನ್ನು  ದೇವರ ಪ್ರಸಾದ ಎಂದು ಕಲ್ಪಿಸಿಕೊಂಡಾಗ ಭಕ್ತಿಯಿಂದ  ಎತ್ತಿಕೊಂಡು ಹೋಗುತ್ತೇವೆ. ಕಾರಣ ಅದು ದೇವರ ಸಾನ್ನಿಧ್ಯದಲ್ಲಿ ಮಾತ್ರವಲ್ಲ ಪ್ರಸಾದವಾಗಿರುವುದು.  ಈ ಸಂಬಂಧದ ಗಂಭೀರತೆಯನ್ನು ಅರಿತಾಗ ಕಲೆ ಮತ್ತು ಕಲಾವಿದನ ಅನ್ವರ್ಥ ಸಾಧ್ಯವಾಗುವುದು.  ಕಲಾವಿದನ ಕಲಾ ಪ್ರವೃತ್ತಿಗೆ ನೈಪುಣ್ಯತೆಗೆ ಪ್ರೋತ್ಸಾಹಿಸುವಾಗ ಪರೋಕ್ಷವಾಗಿ ಕಲೆಯ ಪ್ರೋತ್ಸಾಹ ಹೇಗೆ ಸಾಧ್ಯವಾಗುತ್ತದೋ ಕಲಾವಿದನ ದೌರ್ಬಲ್ಯವನ್ನು  ಸತ್ಕರಿಸಿ ಹುರಿದುಂಬಿಸುವುದು ಕಲೆಗೆ ಅಪಚಾರವೆಸಗಿದಂತೆ. ಆದರೆ ಅಪ್ಪಟ ಕಲಾಭಿಮಾನ ಎಂದು ಹೇಳಿಕೊಳ್ಳುವಾಗ ಇಂತಹ ಗಹನ ವಿಚಾರಗಳು ಯೋಚನೆಗೆ ಸಿಲುಕುವುದೇ ಇಲ್ಲ.  ದೀಪದಲ್ಲಿ ಎಣ್ಣೆ ಬತ್ತಿಹೋದಾಗ ತುಸು ನೀರು ಹಾಕಿದರೂ ದೀಪ ಮತ್ತಷ್ಟು ಹೊತ್ತು ಉರಿಯುತ್ತದೆ. ಹಾಕಿದ  ನೀರಿನ ಪ್ರಭಾವದಿಂದ ಎಣ್ಣೆಯನ್ನು ಮತ್ತಷ್ಟು ಹಿಂಡಿ,  ಹೀರಿ ದೀಪ ಬೆಳಗುತ್ತದೆ. ನಮ್ಮ ಸ್ವಾರ್ಥ,  ದೀಪ ಒಂದಷ್ಟು ಉರಿದರೆ ಸಾಕು. ಮತ್ತೆ ಆರಿ ಹೋದರೂ ಪರವಾಗಿಲ್ಲ. ದೀಪವನ್ನು ಎಸೆದು ಬಿಡುವ ಮನೋಭಾವ ಇಂದು ಕಲಾವಿದನನ್ನು ದುರಂತದತ್ತ ಮುಖಮಾಡುವಂತೆ ಮಾಡಿದೆ.  ಹೀಗಿರುವಾಗ ಮಿಡಿವ ಕಂಬನಿಯ  ಹೃದಯದ ಭಾವನೆಗಳ ಪ್ರಾಮಾಣಿಕತೆಯನ್ನು ಗೇಲಿ ಮಾಡಿದಂತೆ ಅನ್ನಿಸುತ್ತದೆ.   

ಕಾಲ ಮಿತಿ ಯಕ್ಷಗಾನ ಇಂತಹ ಅನಪೇಕ್ಷಿತ ಸತ್ಕಾರಕ್ಕೆ ಸೂಕ್ತ ಅವಕಾಶವನ್ನು ನೀಡಿದೆಯೋ ನಿರ್ಧರಿಸುವುದು ಕಷ್ಟ.  ಆದರೆ ಬೇಗನೇ ಮುಗಿಯುವ ಪ್ರದರ್ಶನ ಇದಕ್ಕಂತೂ ಕಾಲವನ್ನು ಒದಗಿಸಿದೆ ಎನ್ನಬಹುದು.  ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಇದು ಬೆಳೆದು ಬಂದಿರುವುದು ಕತ್ತಲೆಯಲ್ಲೂ ಗೋಚರಿಸುವ ಅಪ್ಪಟ ಸತ್ಯ. ಕಾರ್ಯಕ್ರಮದ ಆಯೋಜನೆಯಲ್ಲಿ ಇದೊಂದು ರಹಸ್ಯ ಅಜೆಂಡಾ ಆಗಿರುವುದು ನಿಜಕ್ಕೂ ಕಳವಳಿಸಬೇಕು.    ಯಕ್ಷಗಾನ ಪ್ರಾಯೋಜಕರ ಹಣ ಇದಕ್ಕೂ ವಿನಿಯೋಗವಾಗುವುದು ಹಲವು ಸಲ ಪ್ರಾಯೋಜಕರಿಗೂ ಅರಿವಿರುವುದಿಲ್ಲ. ಅರಿವಿದ್ದರೂ ಅವರಿಗೆ ಅಸಹಾಯಕತೆ ಅನಿವಾರ್ಯವಾಗುತ್ತದೆ.  ಯಕ್ಷಗಾನದ ಮೇಲಿನ ಅಭಿಮಾನದಿಂದ ನೀಡಿದ ದೇಣಿಗೆ ಹೀಗೆ ದುರ್ವ್ಯಸನಗಳಿಗೆ  ದುರ್ವಿನಿಯೋಗ ವಾಗುವುದಿದ್ದರೆ ಕೊಟ್ಟವರಿಗೆ ಹೇಗಾಗಬೇಡ. ?  ಪೂಜೆಯಾದಮೇಲೆ ಸಮಾರಾಧನೆ ಸಹಜವೇ. ಆದರೆ ಸಮವಾಗಿ ಮಾಡುವ ಆರಾಧನೆ ಹೀಗೆ ದುರಂತ ಪ್ರಸಾದವನ್ನು ವಿತರಿಸಬಾರದು.
ಇಂತಹ ವಿಷವರ್ತುತಲದಿಂದ ಕಲಾವಿದರನ್ನು ಹೊರತರುವ ಪ್ರಯತ್ನ ಕಲೆಯ ದೃಷ್ಟಿಯಿಂದ ಮಾತ್ರವಲ್ಲ ಮಾನವೀಯತೆಯಿಂದಲೂ ಶ್ಲಾಘನೀಯ. ಆದರೇನು ಮಾಡುವುದು?  ಈ ಪ್ರಯತ್ನಗಳು ಕೆಲವೇ ಕ್ಷಣದ ದೌರ್ಬಲ್ಯದ ಪರೀಕ್ಷೆಗೆ ಸೋತುಬಿಡುತ್ತದೆ. ಕುಂಬಾರನಿಗೆ ವರುಷ  ಎಂಬ ಗಾದೆ ನೆನಪಾಗುತ್ತದೆ. ಇದಕ್ಕೆ ಕಾರಣ ಕಲೆಗಿಂತಲೂ ಕಲಾವಿದರನ್ನು ಅಭಿಮಾನಿಸುವ ಉತ್ಕಟ ಅಭಿಮಾನಿಗಳು ಮತ್ತವರ ಅಭಿಮಾನದ ಪ್ರಕಟನೆ.  ಕ್ಷಣವೊಂದರ ಮೋಜಿಗೆ ಎಲ್ಲವೂ ಬಲಿಯಾಗಿ ಪೂರ್ಣ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ.  ಮನುಷ್ಯನ ಸಹಜ ಸ್ಥಿತಿ ಎಂದರೆ ಅದು ನಶೆಯೊಳಗಿನ ಲೋಕವಾದರೆ, ಆವಾಗ ಬಂದು ಬಳಗ ಸ್ನೇಹಿತರು ಹಿತೈಷಿಗಳು ಹೀಗೆ ಪರಿಸರವೇ ಅಸಹಜವಾಗಿಬಿಡುತ್ತದೆ.  ಜೀವನ ಎಂಬುದು ಪ್ರಕೃತಿಗೆ ವಿರುದ್ದವಾದ ಜೀವನವಾಗುತ್ತದೆ.  

ಪ್ರೀತಿ ಪಾತ್ರರು ಅಭಿಮಾನವೆತ್ತವರ ಬದುಕು ದುರಂತಮಯವಾದಾಗ ಪ್ರತಿಯೊಬ್ಬರ ಮನಸ್ಸು ಪರಿತಪಿಸುತ್ತದೆ. ಅದು ಪ್ರಾಮಾಣಿಕ ಮನಸ್ಸಿನ ಭಾವನೆ. ಭಾವನೆ ಪ್ರಾಮಾಣಿಕವಾದಾಗ ನಮ್ಮ ಕ್ರಿಯೆಯೂ ಪ್ರಾಮಾಣಿಕವಾಗಿರಬೇಡವೇ? ಭಾವನೆಗೆ ವಿರುದ್ದವಾದ ಕ್ರಿಯೆ ಎಂದರೆ ದುರಂತದ ಅರಿವಿದ್ದರೂ ಆದುರಂತದೆಡೆಗೆ ತಳ್ಳುವ ಕ್ರಿಯೆ ನಮ್ಮದಾದರೆ, ನಮ್ಮ ಭಾವನೆಯನ್ನು ನಾವೇ ಅಣಕಿಸಿದಂತೆ. ಅದಕ್ಕೆ ನಾವೇ ಅಪ್ರಾಮಾಣಿಕರಾದಂತೆ. ಹೀಗಿರುವಾಗ ಮಿಡಿಯುವ ಕಂಬನಿಗೆ ಅರ್ಪಿಸುವ ಶ್ರದ್ಧಾಂಜಲಿಗೆ ಅರ್ಥವಾದರೂ ಏನು?  ಕಾಯಾ ವಾಚಾ ಮನಸಾ ಪ್ರಾಮಾಣಿಕರಾದಾಗ ಕಳೆದು ಅನುಭವಗಳು ಪಾಠವಾಗಿ ಎಚ್ಚರಿಸುತ್ತವೆ. ಆವಾಗ ಭಾಷ್ಪಾಂಜಲಿ ಸ್ಪಟಿಕದಂತೆ ತನ್ನೊಳಗೆ ಕೇವಲ ಭಾವನೆಯನ್ನಷ್ಟೆ ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ನಾವು ಸುರಿಸುವ ಭಾಷ್ಪಾಂಜಲಿ ಬಣ್ಣಗೆಟ್ಟು ಕಲುಷಿತವಾಗಿ ಅದು ತೋರಿಕೆಯ ವಂಚನೆಯಾದೀತೆ ಹೊರತು ಶ್ರದ್ಧಾಂಜಲಿಯಾಗದು. ಹಾಗಾಗಿ ಕಳೆದು ಹೋದದ್ದು ನಮ್ಮ ಅಸಹಾಯಕತೆ ಎಂದು ಸಾಂತ್ವನಿಸುತ್ತಾ ಮುಂದೆಯಾದರೂ ನಮ್ಮ ಪ್ರಚೋದನೆಗಳು ಅಭಿಮಾನದ ಕುರುಡು ನೋಟವಾಗದಿರಲಿ ಎಂದು ಹಾರೈಸುವ.

ಈ ಲೇಖನ ಈ ಅನಿಸಿಕೆಗಳು ಕೇವಲ ನನ್ನ ವೈಯಕ್ತಿಕ. ಯಾರನ್ನೂ  ನೋಯಿಸಲು ಬಯಸದ ವಿಷಾದನೀಯ ಮಾತುಗಳು. ಯಾವುದೇ ಬ್ಲಾಗಿನಿಂದ ಎರವಲು ಅಥವಾ ಕದ್ದು ಬರೆದು ನನ್ನ ಯೋಗ್ಯತೆಯನ್ನು ಹೆಚ್ಚಿಸಿ ಹೆಸರು ಗಳಿಸುವ ಆ ಯೋಗ್ಯತೆಯ ಅವಶ್ಯಕತೆ ಇಲ್ಲಿರುವುದೇ ಇಲ್ಲ. ಉಲ್ಲೇಖಿಸುವ ಪ್ರತಿಯೋಂದು ಅನಿಸಿಕೆಗಳೂ ನನಗಷ್ಟೇ ಸೀಮಿತ. ಎಲ್ಲರ ಭಾವನೆ ಇದೇ ಆಗಿರಬೇಕೆಂದೇನು ಇಲ್ಲವಲ್ಲ. ಇವುಗಳನ್ನು ಓದುವಂತೆ ಬಲವಂತವಾಗಿ ಹೇರುವ ಮನೋಭಾವ ಇಲ್ಲಿಲ್ಲ. ಆಸಕ್ತಿ ಇಲ್ಲದ ಅವಲೋಕನ ವ್ಯರ್ಥವೆಂದೇ ನನ್ನ ಭಾವನೆ.


Wednesday, February 10, 2016

ಅಭಿಮಾನಿ ಎಂಬ ಶತಮೂರ್ಖ.....( ವಿಷಾದದಿಂದ)


ಕಲೆ ಸಾಹಿತ್ಯ ಇತ್ಯಾದಿ ಚಟುವಟಿಕೆಗಳು ದೈನಂದಿನ ಬದುಕಿನ ಭಾರವನ್ನು ಹಗುರವಾಗಿಸುವಂತಹ ಸಾಧನಗಳು. ನಿತ್ಯಬದುಕಿನ ಗೊಂದಲಗಳಿಂದ ದೂರಾಗಿ ಒಂದಿಷ್ಟು ನಾವು ನಾವಾಗಿಯೇ ಇರುವ ಎಂಬ ಭಾವದಲ್ಲಿ ಇವುಗಳು ಉಪಯೋಗಿಸುವಂತಿದ್ದರೆ ಅದು ಅರ್ಥಪೂರ್ಣವಾಗುತ್ತದೆ. ಆದರೆ ಇದರೊಂದಿಗೆ ಹಲವು ಬಗೆಯ ಸ್ವಾರ್ಥದ ವಿಭವಗಳು ಸೇರಿ ಕಲೆಯನ್ನು ಬಿಟ್ಟುಳಿದವುಗಳೇ ಆಸಕ್ತಿಯನ್ನು ಗಳಿಸುವಂತಹ ಪ್ರಮೇಯ ಬಂದಾಗ ಕಲಾಸ್ವಾದನೆ ಎಂಬುದು ಶತ ಮೂರ್ಖತನವಾಗುತ್ತದೆ.
ಹಸಿದ ನಾಯಿಗಳಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಅನ್ನವಿಟ್ಟರೆ ಸ್ವಲ್ಪ ಹೊತ್ತು ಅದು ಶ್ರದ್ದೆಯಿಂದ ಅನ್ನವನ್ನೇ ತಿನ್ನುತ್ತದೆ. ಆನಂತರ ಆ ಪಾತ್ರೆಯೊಳಗೇ ಲಗ್ಗೆಯಿಟ್ಟು ಅನ್ನವನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿಬಿಡುತ್ತದೆ. ಇದನ್ನು ಬಹಳ ಖೇದದಿಂದ ಉದಾಹರಿಸಬೇಕಾಗಿದೆ. ಹಸಿದಾಗ ಆಹಾರದ ಮೇಲೆ ಇರುವ ಗೌರವ ಹೊಟ್ಟೆತುಂಬಿದ ನಂತರ ಬರುವುದಿಲ್ಲ.
ಹಿಂದೊಮ್ಮೆ ಅಭಿಮಾನಂ ದಂತ ಭಗ್ನಂ  (ಅಭಿಮಾನಂ ದಂತ ಭಗ್ನಂ ಲೇಖನ) ಎಂಬ ಬರಹದಲ್ಲಿ ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದೆ. ಅದೇ ರೀತಿಯ ಅಹಿತಕರ ಘಟನೆಯೊಂದಕ್ಕೆ ಯಕ್ಷಗಾನ ರಂಗಸ್ಥಳ ವೇದಿಕೆಯಾಗುತ್ತದೆ ಎಂದಾಗ ಬಹಳ ಖೇದವಾಗುತ್ತದೆ. ಶ್ರದ್ದೆಯಿಂದ ಕಷ್ಟ ಪಟ್ಟು ಸೇರಿಸಿಟ್ಟ ಆಹಾರ ಚೆಲ್ಲಪಿಲ್ಲಿಯಾಗಿ ಆನಂತರ ಅದನ್ನೆ ಹೆಕ್ಕಿ ತಿನ್ನುವ ಪ್ರಮೇಯ ಬಾರದಿರಬಹುದೇ? ಇಬ್ಬರು ಪ್ರಬುದ್ಧ ಕಲಾವಿದರು ಯಾವುದೇ ವೈಯಕ್ತಿಕ ದ್ವೇಷಾಸೂಯೆ ಇಲ್ಲವಾದರೂ ಸ್ವಭಾವದೋಷದಿಂದ ರಂಗದ ಮೇಲೆ ಚರ್ಚೆಗಿಳಿದದ್ದು ವಿಚಿತ್ರವೇ ಸರಿ. ಯಕ್ಷಗಾನದ ಪ್ರಸಂಗವನ್ನೂ ಮೀರಿ ತಮ್ಮ ವಿದ್ವತ್ತನ್ನು ಪ್ರದರ್ಶನಕ್ಕಿಡುವುದು ಸಂದರ್ಭಾನುಸಾರ ಸರಿ ಎಂದು ತೋರಿದರೂ ಅಲ್ಲಿ ಅಭಾಸ ಉಂಟಾದಾಗ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಗಮನಿಸಬೇಕು. ಕಲಾವಿದರೇನು ...ಹಾಳಾದರೆ ಒಂದು ಆಟ , ನಾಳೆ ಹೇಗಿದ್ದರೂ ಮತ್ತೊಂದು ಲಭ್ಯವಾಗುತ್ತದೆ.  ಹಾಗಾದರೆ ಇಲ್ಲಿ ಮೂರ್ಖನಾಗುವುದು ಯಾರು? ಹೀಗೆ ಪದೇ ಪದೇ ಮೂರ್ಖನಾಗಿಯೂ ಪ್ರೇಕ್ಷಕ ಯಕ್ಷಗಾನದಲ್ಲಿ ಒಲವು ಮತ್ತೂ ಇರಿಸಿಕೊಂಡಿದ್ದಾನೆ ಎಂದಾದರೆ ಆ ಪ್ರೇಕ್ಷಕನ ಅಭಿಮಾನ ಮನೋಭಾವ ಇವರಿಗೆ ಅದೇಕೆ ಅರ್ಥವಾಗುತ್ತಿಲ್ಲ?
ಒಂದು ಯಕ್ಷಗಾನ ಪ್ರದರ್ಶನ ಕೆಲವು ಕಾರಣಗಳಿಗೆ ಹಲವು ಸಲ ರಸಭಂಗ ಅನುಭವಿಸುವುದುಂಟು. ಮಧ್ಯೆ ಏರ್ಪಡಿಸುವ ಸಭಾಕಾರ್ಯಕ್ರಮಕ್ಕೋ, ಇನ್ನಿತರ ಪ್ರಕಟನೆಗೋ ಅಥವಾ ಅನಿರೀಕ್ಷಿತ ತೊಂದರೆಗಳಿಗೋ ಪ್ರದರ್ಶನ ಮಧ್ಯೆ ವಿರಾಮವನ್ನು ಪಡೆಯುತ್ತದೆ. ಆಗಲೂ ನಿಜವಾದ ಯಕ್ಷಗಾನ ರಸಿಕ ಒದಗುವ ರಸಭಂಗಕ್ಕೆ ತಳಮಳಿಸುವುದುಂಟು. ಆದರೂ ಮತ್ತೆ ಆರಂಭದ ನಿರೀಕ್ಷೆಯಲ್ಲಿ ಅದು ಸಹ್ಯವಾಗುತ್ತದೆ. ಆದರೆ ಇದು...??? ವೈಯಕ್ತಿಕ ವಿಚಾರಕ್ಕೆ ಯಕ್ಷಗಾನ ರಂಗಸ್ಥಳವನ್ನು ಮಾರುಕಟ್ಟೆಯ ರಸ್ತೆಯಂತೆ ಬೇಕಾದಾಗ ಹತ್ತಿಳಿಯುವಂತೆ ಮಾಡುತ್ತಾರಲ್ಲ? ಅದೇನು ಸಲುಗೆ  ? ಅದೇನು ಪ್ರೀತಿ ಇದು?  ಇದನ್ನು ಯಕ್ಷಗಾನ ಸೇವೆ ಎಂದರೆ ಅಮಾಯಕ ಪ್ರೇಕ್ಷಕ ಗಲ್ಲಕ್ಕೆ ಕೈ ಊರಿ ಸುಮ್ಮನಾಗಬೇಕಷ್ಟೆ.  ಹೊಟ್ಟೆತುಂಬಿದ ನಂತರ ಆಹಾರದ ಮೌಲ್ಯ ಅರಿವಿಗೆ ಬರುವುದಿಲ್ಲ. ಯಾಕೆಂದರೆ ಒಂದು ಸಲ ಹಲವರಲ್ಲಿ ಕೇಳಿ ನಮಗೆ ಇದರಿಂದಲೇ ಹೊಟ್ಟೆ ಹೊರೆಯುವ ಅಗತ್ಯ ಇಲ್ಲವೆಂಬ ಸಿದ್ಧ ಉತ್ತರ ಬರುತ್ತದೆ. ಆವಾಗ ಭಾವಿಸುತ್ತೇವೆ. ಛೇ ಎಂತಹ ಅಪ್ಪಟ ಯಕ್ಷಗಾನ ಅಭಿಮಾನವಿದು.  ಆದರೆ ಇಂತಹ ಸಂದರ್ಭದಲ್ಲಿ ಅದಾವುದೂ ನೆರವಿಗೆ ಬರುವುದಿಲ್ಲವಲ್ಲ?  ಅದಕ್ಕೆ ಹೇಳುವುದು ಹೊಟ್ಟೆ ತುಂಬಿಬಿಟ್ಟಿದೆ ಎಂದು.  ಆದರೂ ಒಂದು ಅನಿಸಿಕೆ ಹೊಟ್ಟೆ ತುಂಬಿದ್ದರೆ ಹೀಗೆ ತಾತ್ಸಾರವನ್ನು ತಾಳುವ ಬದಲು ಬದಿಗೆ ಸರಿದು ನಿಂತರೆ ಮತ್ತೊಬ್ಬನ ಹಸಿವಾದರೂ ನೀಗಬಹುದು. ಇದನ್ನು ಹಸಿವಿಗೆ ಹೋಲಿಸುವುದೂ ಒಂದು ಪ್ರಮಾದ .

ಹಲವು ಸಲ ಇಂತಹ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಅನಿಸಿಕೆ ಹೇಳುವಾಗ ನೋಡಿ ಹೇಳಬೇಕು ಎಂಬ ಸಾಮಾನ್ಯ ಆಕ್ಷೇಪ ಬರುವುದುಂಟು. ಇಂತಹುಗಳ ಬಗ್ಗೆಯೂ ಇದೇ ರೀತಿ ಆಕ್ಷೇಪಿಸುವವರು ಇರಬಹುದು. ಆದರೆ ಒಂದು ದೂರದ ಊರಲ್ಲಿ ಅನಾಚಾರವೋ ಕಳ್ಳತನವೋ ನಡೆದಾಗ ನಾವು ಅದನ್ನು ನೋಡದೇ ಇದ್ದರೂ ನಮ್ಮ ಅನಿಸಿಕೆಗಳನ್ನು ಮನುಷ್ಯರಾಗಿ ಹೇಳಿಬಿಡುತ್ತೇವೆ.  ನೋಡದೇ ಇದ್ದವನು ಹೇಳುವುದಕ್ಕೆ ಯೋಗ್ಯನಲ್ಲ ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ. ಹೀಗೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಉದ್ದೇಶವಾದರೂ ಎನು?  ತಮ್ಮ ಕಷ್ಮಲವನ್ನು ಒರೆಸಿಕೊಳ್ಳುವ ತಂತ್ರವೇ ಅಲ್ಲ ಮುಚ್ಚಿಹಾಕುವ ಪ್ರಮೇಯವೇ?  ನೀರಿನ ತಳದಲ್ಲಿ ಕಲ್ಪಷ ಸುರಿದರೂ ಅದು ನಮ್ಮಿಂದ ಮೊದಲು ಹೊರಗಿನ ಪ್ರಪಂಚಕ್ಕೆ ಕಾಣುತ್ತದೆ.  ಇಂದಿನ ಮಾಧ್ಯಮ ಈ ರೀತಿ ಬೆಳೆದಿರುವಾಗ ಶ್ವೇತ ವಸ್ತ್ರ ಧರಿಸಿದವನು ಅದರ ಹಿರಿಮೆಯನ್ನು ಅರಿತಿರಬೇಕು. ಇಲ್ಲವಾದರೆ ಅದಕ್ಕೆ ಆತ ಅರ್ಹನಲ್ಲ ಎನ್ನುವುದು ಸಾಮಾನ್ಯ ಜ್ಜಾನ.

ಈಗ ನಡೆದು ಹೋಗಿದೆ.  ಹಲವು ಸ್ಪಷ್ಟೀಕರಣಗಳು ತೇಪೆಹಾಕುವುದಕ್ಕೆ ಒದಗಿ ಬರಬಹುದು. ಕಲಾವಿದರಾದ ನಮ್ಮಲ್ಲಿ ಯಾವುದೇ ವೈಷಮ್ಯ  ಇಲ್ಲಎಂದು ಪೋಸುಕೊಡಬಹುದು.  ಆದರೆ ಒಂದು ಸಲ ಯೋಚಿಸುವ,  ಆಗಿ ಹೋದ ಆಭಾಸದಿಂದ ಸುಸಂಸ್ಕೃತ ಕಲೆಯ ಇತಿಹಾಸದ ಪುಟಗಳಲ್ಲಿ ಬಿದ್ದು ಹರಡಿದ ಮಸಿಯನ್ನು. ಇಲ್ಲಿ ಬಿದ್ದುಹೋದದ್ದು ಮಸಿ ಎಂಬ ಅರಿವಾದರೂ ಇರುತ್ತಿದ್ದರೆ,   ಅಷ್ಟು ಯೋಚಿಸುವ ವ್ಯವಧಾನವಿದ್ದರೆ  ಹೀಗಾಗುತ್ತಿರಲಿಲ್ಲ ಎಂದುಕೊಳ್ಳಬೇಕು.  ಮತ್ತೇನು ಉಳಿದಿದೆ? ಇವುಗಳೆಲ್ಲ ನೊಂದ ಮನಸ್ಸಿನ ಹತಾಶೆಯ ಮಾತುಗಳು ಎಂದು ತಿಳಿದುಕೊಂಡಲ್ಲಿ ಇದರ ಅಂತರಾರ್ಥ ಮನವರಿಕೆಯಾಗುತ್ತದೆ. 

Sunday, January 31, 2016

ಪದ್ಯಾಣ ವೆಂದರೆ ಪದ್ಯಗಳ ಯಾನ


                ಬಹಳ ಹಿಂದಿನ ಯಕ್ಷಗಾನ ಬಯಲಾಟದಲ್ಲಿನ ಹಾಸ್ಯ ದೃಶ್ಯ. ಅದು ನನಗೆ ಈಗಲೂ ನೆನಪಿನಲ್ಲಿ ಉಳಿದಿದೆ. ತುಳು ಪ್ರಸಂಗ ಒಂದರ ಸನ್ನಿವೇಶವದು. ಹಾಸ್ಯಗಾರ ಭಾಗವತರ ಪದಕ್ಕೆ ಕುಣಿಯುತ್ತಾ ತನ್ನ ವಿಚಿತ್ರ ಹಾವಭಾವಗಳಿಂದ ನಗೆಯ ಅಲೆಯನ್ನು ತರಿಸುತ್ತಾನೆ. ಹೇಳಿ ಕೇಳಿ ಹಾಸ್ಯದ ಸನ್ನಿವೇಶ. ಒಂದು ಸಲ ನಕ್ಕು ಹಗುರಾಗಿಬಿಡುವ ಗಂಭೀರವಲ್ಲದ ಸನ್ನಿವೇಶ. ಆದರೆ ಗಂಭೀರ ಚಿಂತನೆಯ ಒರೆಗೆ ಹಚ್ಚುವ ಅಂಶವೊಂದು ಅಲ್ಲಿ ಅನಾವರಣಗೊಳ್ಳುತ್ತಿರುವುದು ಆವಾಗ ಯೋಚನೆಗೆ ಬರುವುದಿಲ್ಲ. ಭಾಗವತರು ಹಾಡುತ್ತಾ ಹಾಡುತ್ತಾ ಗಾಯನದ ಉತ್ತುಂಗಕ್ಕೆ ಸ್ವರವನ್ನು ಎರಿಸುತ್ತಾ ಹೋಗುತ್ತಾರೆ. ಹಾಸ್ಯಗಾರನೂ ಅದಕ್ಕೆ ತಕ್ಕಂತೆ ಅಭಿನಯಿಸುತ್ತಾ ಎದ್ದು ನಿಂತು ಹಾಡಿನ ಭಾವಕ್ಕೆ ಏರುವಿಕೆಗೆ ಸರಿಯಾಗಿ ಮತ್ತೂ ಮತ್ತೂ ಮೇಲೇರುತ್ತಾ ಹೋಗುತ್ತಾನೆ. ಅಷ್ಟೇ ಏರಿದ ಸ್ವರ ಮತ್ತೆ ಇಳಿಯುವುದಕ್ಕಾರಂಭಿಸುತ್ತದೆ. ಇಳಿಯುತ್ತದೆ ಮಧ್ಯಮ,  ಮಧ್ಯಮದಿಂದ ಮತ್ತೂ ಇಳಿಯುತ್ತಾ ಇಳಿಯುತ್ತಾ ಪಂಚಮಕ್ಕೆ ಬಂದು ...ಇನ್ನೂ ಇಳಿಯುತ್ತಾ ಗಂಟಲೊಳಗಿನ ಸ್ವರ ಆ ನಿಷಬ್ಢದಲ್ಲೂ ಸೂಕ್ಷ್ಮವಾಗಿ ಕೇಳಿಸುತ್ತದೆ.  ಆವರೆಗೆ ಏರುವಿಕೆ ಮೇಲೇರಿದ ಹಾಸ್ಯಗಾರ ಇಳಿಯುವಿಕೆಗೆ ಸರಿಯಾಗಿ ಇಳಿಯುತ್ತಾ ಇಳಿಯುತ್ತಾ ರಂಗದಲ್ಲಿ ಮಲಗಿಬಿಡುತ್ತಾನೆ. ಗಾಯನ ಸ್ವರ ಮತ್ತೂ ಇಳಿಯುತ್ತದೆ. ಆತ ಗಾಬರಿಯನ್ನು ಪ್ರಕಟಿಸಿ ರಂಗಸ್ಥಳದ ಅಡಿಭಾಗಕ್ಕೆ ದೃಷ್ಟಿ ಬೀರುತ್ತಾನೆ. ಇನ್ನೂ ಇಳಿಯುವುದಕ್ಕೆ ಜಾಗವಿದೇಯೇ ಎಂಬ ಹುಸಿ ಆತಂಕ ಮುಖದಲ್ಲಿ. ಸಭೆ ಆ ನವಿರು ಹಾಸ್ಯಕ್ಕೆ  ಬಿದ್ದು ಬಿದ್ದು ನಗಲಾರಂಬಿಸುತ್ತದೆ. ಭಾಗವತರ ಇಳಿ ಸ್ವರ ಸಭಿಕರ ಚಪ್ಪಾಳೆಯಲ್ಲಿ ಕರಗಿ ಹೋಯಿತೇನೋ ಎಂಬ ಭ್ರಮೆಯಲ್ಲಿದ್ದಂತೆ  ಒಮ್ಮಿಂದೊಮ್ಮೆಲೆ ಮಧ್ಯಮವನ್ನು ದಾಟಿ ಷಡ್ಜಕ್ಕೆ ಚಿಮ್ಮಿ ಬಿಡುತ್ತದೆ. ಆ ಸ್ವರದ ಸಂಚಲನಾ ಚೈತನ್ಯ ಗಾಬರಿ ಹುಟ್ಟಿಸುವಂತೆ ಇದ್ದರೂ ಹಾಸ್ಯದ ಸನ್ನಿವೇಶದ ನಡುವೇ ಅದರ ಬಗ್ಗೆ ಗಮನ ಹರಿಯುವುದಿಲ್ಲ. ಹೀಗೆ ಒಮ್ಮೇಲೆ ಆಕಾಶದೆತ್ತರಕ್ಕೆ ಚಿಮ್ಮಿ ಮತ್ತೆ ಪಾತಾಳದತ್ತ ಮುಖಮಾಡುವ ಆ ಗಾನವೈಖರಿಯ ಬಗ್ಗೆ ಈಗ ಯೋಚಿಸುವಾಗ ಅದ್ಭುತ ಎಂದನಿಸುತ್ತದೆ. ಬಹುಶಃ ಇದು ಯಕ್ಷಗಾನದಲ್ಲಿ ಮಾತ್ರವೇ ಸಾಧ್ಯ.

            ಮೇಲಿನ ಹಾಸ್ಯದ ಸನ್ನಿವೇಶ ಹಲವು ವೈಶಿಷ್ಟ್ಯವನ್ನು ಬಿಂಬಿಸಿ ಇಂದಿಗೂ ಮರೆಯದೇ ಉಳಿದರೆ ಅದಕ್ಕೆ ಕಾರಣ ಆ ಕಲಾವಿದ ನೈಪುಣ್ಯ. ಇದು ಸುರತ್ಕಲ್ ಮೇಳದ ತುಳು ಆಟವೊಂದರ ಸನ್ನಿವೇಶ. ಇಲ್ಲಿ ಹಾಸ್ಯಗಾರನಾಗಿ ದಿವಂಗತ ವೇಣೂರು ಸುಂದರ ಆಚಾರಿಯಾದರೆ, ಹೀಗೆ ಷಡ್ಜದಿಂದ ಪಂಚಮಕ್ಕೆ , ಪಂಚಮದಿಂದ ಷಡ್ಜಕ್ಕೆ ಸ್ವರ ಸಿಂಚನವನ್ನು ಚಿಮ್ಮಿಸುತ್ತಾ ಸ್ವರ ವೈಖರಿಯ ರಸಧಾರೆಯನ್ನು ಹರಿಸಿದವರು ಭಾಗವತ ಶ್ರೀ ಪದ್ಯಾಣ ಗಣಪತಿ ಭಟ್ ರವರು. ಬಹಳ ಪಳಗಿದ ಸಂಗೀತಗಾರನಿಗೂ ಇದು ಗಾಬರಿ ಹುಟ್ಟಿಸುವ ಕಂಠ ಸಾಮಾರ್ಥ್ಯ.  ಇಂದು ಹಲವು ಭಾಗವತರು ಮಂದ್ರದಿಂದ ತಾರಕಕ್ಕೆ ತಾರಕದಿಂದ ಮಂದ್ರಕ್ಕೆ ನಡೆಸುವ ಕಸರತ್ತನ್ನು ಹಲವು ದಶಕಗಳ ಮೊದಲು ಗಣಪಣ್ಣ ರಂಗದಲ್ಲಿ ಪ್ರಯೋಗಿಸಿದವರು. ಮಂದ್ರದಿಂದ ತಾರಕಕ್ಕೂ ತಾರಕದಿಂದ ಮಂದ್ರಕ್ಕೂ ಬೇಕಾದಂತೆ ಸಂಚರಿಸುವ ಇವರ ಸರ ಸಂಚಾರ ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.  ಯಾವುದೇ ಪದವನ್ನು ಆರಂಭದಲ್ಲಿ ತಾರಕದಲ್ಲೇ ಎಬ್ಭಿಸುವ ಇವರ ಶೈಲಿಗೆ ಮರುಳಾಗದ ರಸಿಕನಿಲ್ಲ. ಪದ್ಯಾಣದ ಪದ ಮುದ್ರೆ ಎಂದರೆ ಅದು.

            ಎಂಭತ್ತು ತೊಂಭತ್ತರ ದಶಕದಲ್ಲಿ ಯಕ್ಷಗಾನ ಬಯಲಲ್ಲಿ ಸುರತ್ಕಲ್ ಮೇಳದ ಆಟಗಳನ್ನು ರಸಿಕರು ಮರೆಯುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಹಲವು ಕಾರಣಗಳು ಕಂಡು ಬರಬಹುದು. ಅತಿರಥ ಮಹಾರಥರೆನಿಸಿದ ಗಣ್ಯ ಕಲಾವಿದರ ಮುಮ್ಮೇಳ ಒಂದೆಡೆಯಾದರೆ ಅದಕ್ಕೊಪ್ಪುವ  ಹಿಮ್ಮೇಳ ಒಂದೆಡೆ. ಇನ್ನು ಅದ್ವಿತೀಯ ಎನ್ನಬಹುದಾದ ವಿಶಿಷ್ಟ ಪ್ರಸಂಗಗಳು. ಈ ಎಲ್ಲಾ ಪ್ರವಾಹದ ಮಧ್ಯೆ ಪ್ರತ್ಯೇಕ ರಂಗು ತುಂಬಿಕೊಂಡು ಆಕರ್ಷಣೀಯ ವಸ್ತುವಿನಂತೆ ಭಾಸವಾದರೆ ಅದು ಗಣಪಣ್ಣನ ಭಾಗವತಿಕೆ. ನನ್ನ ನೆನಪಿನಲ್ಲಿ ಚಿಕ್ಕ ಪ್ರಾಯದ ಬಾಲೆ ಚದುರೆ ಎಂದು ಹಾಡಲು ತೊಡಗುತ್ತಿದ್ದ ಆರಂಭದ ದಿನಗಳ ಆಕರ್ಷಣೆಯಂತೆ ಕ್ರಮೇಣ ಉತ್ತರಾರ್ಧದ ನಿಶಿತ ಕಾಲದಲ್ಲೂ ನಿಶೆ ಏರಿಸುತ್ತಿತ್ತು ಪದ್ಯಾಣರ ಪದ್ಯಗಳು. ಅವಾಗೆಲ್ಲ ಕೌತುಕದ ಮಾತೊಂದು ಯೋಚನೆಗೆ ಬರುತ್ತಿತ್ತು. ಪದ್ಯ ಮತ್ತು ಪದ್ಯಾಣ ಇವೆರಡು ಹೊಂದಿಕೊಂಡ ಎರಡಲ್ಲದ ಅದ್ವೈತ ಶಕ್ತಿಯೇ?
               
            ನಮ್ಮೂರಲ್ಲಿ ಸುರತ್ಕಲ್ ಮೇಳದ ಆಟ ಬಂತೆಂದರೆ ಇಡೀ ಇರುಳು ಈಸೀ ಚೆಯರಿಗೆ ಒರಗಿ ಆಟ ನೋಡುವ ಮಜವೇ ಬೇರೆ. ಆ  ಕೌತುಕ ತಣಿಯದೇ ಇದ್ದರೂ ಹಲವು ಸಲ ಕೆಲಸದ ಒತ್ತಡದಿಂದ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಿದ್ದರೂ ಮನಸ್ಸು ತಣಿಯಬೇಕಲ್ಲ. ರಾತ್ರಿ ಎರಡು ಘಂಟೆ ಅಲಾರಾಂ ಇಟ್ಟು ಎದ್ದು ಬೈಕು ತೆಕ್ಕೊಂಡು ಆಟಕ್ಕೆ ಓಡುತ್ತಿದ್ದರೆ ಆಲಿದ್ದ ಆಕರ್ಷಣೆ ಒಂದೇ ಅದು ಗಣಪ್ಪಣ್ಣನ ಎರಡು ಪದ ಕೇಳುವ ಅದಮ್ಯ ಬಯಕೆ. ನಂತರ ಮಂಗಳದವರೆಗೂ ಯಾವುದೇ ಒತ್ತಡವಿಲ್ಲದೆ  ಗಾಯನವನ್ನು ಆಸ್ವಾದಿಸಿ ಬಿಚ್ಚಿಕೊಂಡ ಟೆಂಟ್ ಟರ್ಪಾಲನ್ನು ದಾಟಿ ನಶೆ ಏರಿದವರಂತೆ ಬರುತ್ತಿದ್ದ ನೆನಪು ಈಗಲೂ ಇದೆ.
                ಪದ್ಯಾಣ ಗಣಪತಿ ಭಟ್ ಶೈಲಿಯೇ ಹಾಗೆ,  ಅದು ಕೇಳುತ್ತಾ ಕೇಳುತ್ತ ಒಂದು ರೀತಿ ಮೋಹಕ ಬಲೆಯನ್ನು ಸುತ್ತಿಬಿಡುತ್ತದೆ. ಯಕ್ಷಗಾನ ಪದಗಳಲ್ಲಿ ರಾಗಗಳು ಸಲೀಸಾಗಿ ಅನಾವರಣಗೊಳ್ಳುವಾಗ ಎಂತಹ ವಿದ್ವಾಂಸರೂ ಅಚ್ಚರಿ ಪಡಬೇಕು. ಪರಂಪರೆಯಿಂದ ತೊಡಗಿ ನವ್ಯ ಎನ್ನ ಬಹುದಾದ ನವೀಕೃತ ಶೈಲಿ  ಯಾವುದೇ ಅದರೂ  ಈ ಶೈಲಿ ಸುಲಭವಾಗಿ ಒಗ್ಗಿಕೊಂಡು ಅಪ್ಪಿಬಿಡುತ್ತದೆ.  ಅದನ್ನು ಅಲ್ಲಗಳೆಯುವ ಮನೋಭಾವ ಅಲ್ಲಿ ಬರುವುದಿಲ್ಲ. ಒಟ್ಟಿನಲ್ಲಿ ರಂಗದ ಮೇಲೆ ಹೇಗಾಯಿತು ಇವಿಷ್ಟನ್ನೇ ನೋಡುತ್ತಿರುತ್ತದೆ.  ಮುಖ್ಯವಾಗಿ ಇವರ ಹಾಡಿನಲ್ಲಿನ ಸಂಗೀತ ಸಂಯೋಜನೆ ಬಹಳ ಅದ್ಭುತ ಎನ್ನಬೇಕಾಗುತ್ತದೆ. ಬಹುಷಃ ಇಂದಿನ ಜನಪ್ರಿಯ ಕಲೆ ಸಿನಿಮಾರಂಗದವರು ಆಟಕ್ಕೆ ಬಂದು ಇದನ್ನು ಗಮನಿಸಿದರೆ ಕಕ್ಕಾಬಿಕ್ಕಿಯಾಗುವಷ್ಟು ನಡುವಿರಳ ಗಾನದಲ್ಲಿ ರಸಧಾರೆ ಹರಿಸಬಲ್ಲರು.

            ಇದೀಗ ಗಣಪ್ಪಣ್ಣನಿಗೆ ೬೦ರ ಸಂಭ್ರಮ. ಅರುವತ್ತು ಎಂಬುದು ಮನುಷ್ಯನ ಜೀವನದ ಒಂದು ಮಹತ್ತರ ಘಟ್ಟ ಎನ್ನಬಹುದು. ಜನನದಿಂದ ತೊಡಗಿ ಆರನೇ ವಯಸ್ಸಿಗೆ  ಮನುಷ್ಯ ಪ್ರಾಪಂಚಿಕ ವ್ಯವಹಾರವನ್ನು ಕಲಿಯುವುದಕ್ಕೆ ಆರಂಭಿಸುತ್ತಾನೆ. ಕಲಿಯುತ್ತಾ ಆರರೊಂದಿಗೆ ಶೂನ್ಯವನ್ನು ಸುತ್ತುವಾಗ ಪೂರ್ಣ ಬದುಕನ್ನು ಕಂಡು ಒಂದು ಆವರಣವನ್ನು ಸುತ್ತಿಕೊಂಡ ಅನುಭವವಾಗಿ ವಯೋಮಾನದ ಸಹಜತೆಯಲ್ಲಿ ವೈರಾಗ್ಯತೆಯ ಶೂನ್ಯತೆ ಅಂಟಿಬಿಡುತ್ತದೆ. ಹೀಗೆ ೬೦ ಎಂಬುದು ಎಲ್ಲವನ್ನು ಒಳಗೊಂಡ ಒಂದು ಸಹಜ ಪಕ್ವತೆಯ ಸ್ಥಿತಿ.  ಹಾಗಾಗಿ ಇದು ಸಂಭ್ರಮ ಎಂದು ಕಂಡುಕೊಳ್ಳುವುದು ಸೂಕ್ತವೇ ಆಗಿದೆ.

            ಯಕ್ಷಗಾನಕ್ಕೆ ಒಂದು ಪರಂಪರೆ ಬೆಸೆದುಕೊಂಡಿದ್ದರೆ, ಆ ಪರಂಪರೆಯಲ್ಲಿ ಪದ್ಯಾಣ ಎಂಬ ಮನೆತನದ  ಪರಂಪರೆಯೂ  ಬೆಸೆದುಕೊಂಡಿದೆ.  ಅಂದಿನಿಂದ ಇಂದಿನವರೆಗೂ ತೇರ ಮೆರವಣಿಗೆಯ ದೈವಕ್ಕೆ ಅಲ್ಲಲ್ಲಿ ಸಲ್ಲುವ ಪೂಜಾವಿಧಿಯಂತೆ ಯಕ್ಷಗಾನಕ್ಕೆ ಸಲ್ಲುತ್ತಾ  ಈ ಪರಂಪರೆ ಮತ್ತೂ ಮುಂದುವರೆದಿದೆ.
            ಸಂಭ್ರಮದ ಹೊಸ್ತಿಲಲ್ಲಿ ಅದನ್ನು ಇದಿರುಗೊಳ್ಳುವುದಕ್ಕಾಗಿ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದಾರೆ.  ಕಲಾವಿದನಿಗೆ ತನ್ನ ಮನೋಭಾವದ ಗೌರವದ ಮನ್ನಣೆಯನ್ನು ಸಲ್ಲಿಸುವ ಅಪೂರ್ವ ಕ್ಷಣಕ್ಕಾಗಿ ಹೃದಯದ ಹೊನ್ನ ಹರಿವಾಣದಲ್ಲಿ ಅಭಿಮಾನದ ಫಲ ಪುಷ್ಪ ಹಿಡಿದು ನಿಂತುಕೊಂಡರೆ  ಇದನ್ನು ಕಾಣುವುದು ಒಂದು ವಿಶಿಷ್ಟ ಅನುಭವ.    ಈ ಸಂಭ್ರಮ ಚಿರಸ್ಥಾಯಿಯಾಗಿ ಉಳಿಯಲಿ ಎಂದು ಹಾರೈಸುವುದರೊಂದಿಗೆ ಇಲ್ಲಿ ಯಾವುದೇ ಸ್ವಾರ್ಥ ನುಸುಳದೇ ಸಾಹೋದರ್ಯದ ಕಂಪು ಹರಡಲಿ ಎಂಬ ಹಾರೈಕೆ ಮನದುಂಬುತ್ತದೆ.   ಸ್ವಾರ್ಥ ತುಂಬಿದ ಕೊಡುಗೆ ಅದು ಕೊಡುಗೆಯಾಗುವುದಿಲ್ಲ.  ಹೆತ್ತ ತಾಯಿಗೆ ಸಹಜ ಪ್ರೀತಿಯಿಂದ ಸೀರೆ ಕುಪ್ಪಸ ವಡವೆಯನ್ನು ಕೊಡುವಾಗ ಯಾವುದೋ ಕಾರ್ಯಸಾಧನೆಯ ಸ್ವಾರ್ಥ ಅಡಗಿದ್ದರೆ ಆ ತಾಯಿ ಅದನ್ನು ಮನಸ್ಸು ತುಂಬಿ ಸ್ವೀಕರಿಸಿಯಾಳೆ? ಖಂಡಿತ ಇಲ್ಲ. ಹಾಗಾಗಿ ಇಲ್ಲಿ ನಿಸ್ವಾರ್ಥ ಕಾಮನೆಯ ಆಚರಣೆ ಸಂಭ್ರಮಿಸುತ್ತಿರರಲಿ. ಗಾನ ಮಾಧುರ್ಯವನ್ನುಂಡ ಸವಿ ನೆನಪಲ್ಲಿ ಧನಕನಗಳಿಗೆ ಮನಮಾಡದ ಹಿರಿಮೆ ಗರಿಮೆಗಳಿಗೆ ಸ್ಪಂದಿಸದ ನಿಷ್ಕಾಮ ಅಭಿಮಾನ ವಿಜ್ರಂಭಿಸಿ ಸಂಭ್ರಮ ದೀಕ್ಷೆ ಸತ್ಫಲವನ್ನು ನೀಡಲಿ ಎಂದು ಹಾರೈಸುವ.


Monday, January 25, 2016

ನಂಬಿಯಾರರ ಯಕ್ಷಸಂವಾದ


            ಹಲವು ಸಲ ನಮ್ಮ ಅನಿಸಿಕೆಗಳು ಮನಸ್ಸಿನಲ್ಲಿ ಕಲ್ಪನೆಯ ಗರಿಗಳನ್ನು ಅರಳಿಸುತ್ತಿದ್ದರೆ ಮಾತಿನಲ್ಲಿ ಅವುಗಳು  ನಿರ್ವಚಿಸುವುದಿಲ್ಲ. ಅಥವಾ ಅದನ್ನು ನಿರ್ವಚಿಸುವ ಸಾಮಾರ್ಥ್ಯ ಇರುವುದಿಲ್ಲ ಎನ್ನುವುದೇ ಸರಿ. ಷಡ್ರಸ ಭೋಜನದಲ್ಲಿ ಯಾವುದೋ ಒಂದು ಕೊರತೆ ಕಂಡಾಗ ಎಲ್ಲವೂ ಸರಿ ಇದೆ ಆದರೂ ಒಂದು ಅತೃಪ್ತಿ ಅದು ಹೇಳುವುದಕ್ಕೆ ಅರಿಯದೇ ಅದು ಕತ್ತಲಕೊಣೆಯ ಅರಸುವಿಕೆಯಾಗಿಬಿಡುತ್ತದೆ. ಹುಟ್ಟಿದ ಮಗುವಾದರೂ ಆರಂಭದಲ್ಲಿ ಅದು ಮಾತು ಕಲಿಯುವುದು ಶಬ್ದ ನಾದಗಳ ಅನುಕರಣೆಯಿಂದ. ಮನಸ್ಸಿಗೆ ತಿಳಿದರೂ ನಾಲಿಗೆ ತೊದಲುತ್ತದೆ .  ಬಾಲ್ಯದಲ್ಲಿ ನಮ್ಮಜ್ಜ ಭಜನೆಯನ್ನು ಕಲಿಸುವಾಗ ಮೊದಲು ನಾವು ಬೇರೆಯವರ ಧ್ವನಿಗೆ ತಾಳ ಬಡಿಯಬೇಕಿತ್ತು. ಅದರ ಅರ್ಥ ರಂಗೋಲಿಯನ್ನು ಬಿಡಿಸುವುದಕ್ಕೆ ಚುಕ್ಕೆಗಳನ್ನು ಮೊದಲು ಒತ್ತಿದಂತೆ ಭಜನೆಗಳನ್ನು ಕಲಿಯಲು ಅದರ ಹಾದಿಗುರುತನ್ನು ತಾಳದಿಂದ ಮೊದಲು ಹಾಕಿಬಿಡಬೇಕು. ತಾಳ ಬಡಿದವನಿಗೆ ಹಾಡುವುದು ಸುಲಭವಾಗುತ್ತದೆ. ಈ ಭಾವ ಅರ್ಥವಾದದ್ದು ಇತ್ತೀಚೆಗೆ ಶ್ರೀ ಡಾ| ಕೆ. ಎಂ.  ರಾಘವನಂಬಿಯಾರರ ಸಂದರ್ಶನವೊಂದನ್ನು ನಮ್ಮ ರಂಗಣ್ಣನ ಬ್ಲಾಗಿನಲ್ಲಿ ಕಂಡಾಗ.

            ಪ್ರಶ್ನೆಗಳು ಹೇಗೂ ಹುಟ್ಟಬಹುದು. ಆದರೆ ಉತ್ತರಗಳು ಹುಟ್ಟುವುದು ಕಷ್ಟ. ಅದಕ್ಕೆ ಅಲ್ಲವೇ ಪ್ರಶ್ನೆಯನ್ನು ಇರಿಸುವಾಗ ಒಂದು ವಾಕ್ಯದಲ್ಲಿ ಉತ್ತರಿಸಿ ಅಥವಾ ಹತ್ತು ವಾಕ್ಯಕ್ಕೆ ವಿಸ್ತರಿಸಿ ಎಂದು ನಿಬಂಧನೆಯನ್ನು ಹಾಕುವುದು. ಇಲ್ಲಿ ಪ್ರಶ್ನೆಗಿಂತ ಅದರ ಉತ್ತರವೇ ಪ್ರಧಾನವಾಗಿಬಿಡುತ್ತದೆ. ಪ್ರಶ್ನೆಗಳಿಗೆ ಬದಲಾಗಿ ಉತ್ತರಕ್ಕೇ ಅಂಕಗಳ ಮೌಲ್ಯವನ್ನು ನಿರ್ಧರಿಸಿರುವುದು. ಆದುದರಿಂದ ಉತ್ತರ ಇಲ್ಲಿ ಮಾರ್ಮಿಕವಾಗಿದ್ದಷ್ಟೂ ಅದರ ಮೌಲ್ಯ ವೃದ್ಧಿಯಾಗುತ್ತದೆ.






            ಪ್ರಶ್ನೆಗಳು ಹಲವಾರು ಬಂದು ಉತ್ತರವನ್ನು ಹಿಡಿದೆತ್ತಿಕೊಂಡು ಸರಿದು ಹೋದುವು. ಆದರಲ್ಲಿ ಕೆಲವೊಂದು ಪ್ರಶ್ನೆಗಳು ಎತ್ತಿಕೊಂಡ ಉತ್ತರಗಳನ್ನು ಕಂಡಾಗ ನಾಸಿಕಾಗ್ರವನ್ನು ತೋರುಬೆರಳು ಸ್ಪರ್ಶಿಸಿದ ಅನುಭವ. ನಂಬಿಯಾರರ ಉತ್ತರ ವಾಸ್ತವದಲ್ಲಿದ್ದ ಸತ್ಯಗಳನ್ನು ಎದುರು ತೋರಿಸಿದಂತೆ. ಸತ್ಯಗಳ ಅರಿವಿದ್ದರೂ ಆ ಸತ್ಯಾನ್ವೇಷಣೆಯ ಹಾದಿಯನ್ನು ತೋರಿ ಸತ್ಯವನ್ನು ಹೊರಗೆಡಹಿದಂತೆ. ಬಹಳಷ್ಟು ಸತ್ಯಗಳು ನಮ್ಮರಿವಿಗೆ ಬಂದವುಗಳೇ ಆಗಿರುತ್ತದೆ.  ಆದರೆ ಅದಕ್ಕೆ ರೂಪವಿರುವುದಿಲ್ಲ ಎಂಬುದು ಮತ್ತೊಂದು ಸತ್ಯ.  ಹಾಗಾಗಿ ಡಾ| ನಂಬಿಯಾರರ ಉತ್ತರ ಉದಾಹರಣೆಗಳು ಸತ್ಯವನ್ನು ತೋರಿಸಿ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತದೆ.

            ಈ ಸಂದರ್ಶನವನ್ನು ಹಲವಾರು ಬಾರಿ ನೋಡಿ ಕೇಳಿದ್ದೇನೆ. ಅದ್ವಿತೀಯ ಅನುಭವ. ಅದು ಹಲವು ಸಲವಾಗಿದೆ.  ಆದುದರಿಂದ ಭಾವನೆಗಳು ನನ್ನ ತಿಳುವಳಿಕೆಯ ವ್ಯಾಪ್ತಿಯಲ್ಲಿ ಅರಳಿವೆ. ಹೂವು ಅರಳುವುದಕ್ಕೆ ಅದರ ಬುಡದ ಪೋಷಕಾಂಶಗಳೂ ಕಾರಣವಾಗುವಂತೆ ನನ್ನ ತಿಳುವಳಿಕೆಯ ವ್ಯಾಪ್ತಿ ಇಲ್ಲಿ ಬಹಳ ಕಿರಿದಾಗಿದೆ ಎನ್ನಬಹುದು. ಆದರೂ ಅನುಭವ ಎಂಬುದು ಪಾಮರನ ಮನಸ್ಸಿಗೂ ಆತನಿಗೆ ಸಂಬಂಧಿಸಿದಂತೆ ಪ್ರಧಾನವಾಗಿಬಿಡುತ್ತವೆ. ಆದುದರಿಂದ ಸಂದರ್ಶನ ಆಸ್ವಾದಿಸುತ್ತಿದ್ದಂತೆ ಆ ಅನುಭವಗಳೂ ಇಲ್ಲಿ ಬೆರೆತುಕೊಂಡು ಬಿಟ್ಟಿವೆ.  ಪೂರ್ಣಸಂದರ್ಶನ ವರದಿಯಾದರೆ ಅದಕ್ಕೆ ಮಹತ್ವವಿರುವುದಿಲ್ಲ. ಅದು ಆ ಕ್ರಿಯೆ ಸಾರ್ಥಕತೆಯನ್ನೂ ತೋರಿಸುವುದಿಲ್ಲ. ಹಾಗಾಗಿ ನನ್ನ ಅನಿಸಿಕೆಗಳು ಸೀಮಿತ ಪರಿಧಿಯೊಳಗೆ ಇಲ್ಲಿ ಮಿಸುಕಾಡುತ್ತವೆ.




            ಯಕ್ಷಗಾನದ ಪದಗಳು ಛಂದೋಬದ್ಧವಾಗಿರುವುವಂತಹುಗಳು. ಅವುಗಳು ಆ ಚೌಕಟ್ಟಿನೊಳಗಿದ್ದಾಗ ಅರ್ಥವನ್ನು ಭಾವವನ್ನೂ ಉಳಿಸಿಕೊಳ್ಳುತ್ತದೆ. ಪದಗಳು ರಾಗ ಮತ್ತು ತಾಳಕ್ಕೆ ನಿಬಧ್ಧವಾಗಿರುತ್ತದೆ.  ಯಕ್ಷಗಾನದ ಪದಗಳು ಛಂದಸ್ಸಿನಿಂದ ದೂರವಾಗಿರುವುದಕ್ಕೆ ಸಾಧ್ಯವೇ ಇಲ್ಲ. ಮೊದಲು ಇವುಗಳು ಗುರುವಿನಿಂದ ಶಿಷ್ಯನಿಗೆ ನೇರವಾಗಿ ಮೌಖಿಕವಾಗಿ ದಾಟಿಸಲ್ಪಟ್ಟರೆ ಇಂದು ಅವುಗಳು ಬರಹ ರೂಪದಲ್ಲಿ ಪುಸ್ತಕ ರೂಪದಲ್ಲಿ ದೊರೆಯುತ್ತದೆ. ಪ್ರಸಂಗ ಕರ್ತೃ ಯಾವ ರಾಗ ತಾಳದಲ್ಲಿ  ಪದಗಳನ್ನು ರಚಿಸಿದನೋ  ಅದರಲ್ಲೇ ಯಕ್ಷಗಾನದಲ್ಲಿ ಹಾಡಲ್ಪಡಬೇಕು. ಇದವರ ಖಚಿತವಾದ ನಿಲುವು. ಆದರೆ ಇಂದು ಸ್ವ ಇಚ್ಛೆಯ ಚಂದಸ್ಸು ಉಪಯೋಗಿಸುವುದರಿಂದ ಪದಗಳ ಮೂಲಸ್ವರೂಪವೇ ಹೊರಟು ಹೋಗಿ ಪದಳು ಮೂಲಾರ್ಥವನ್ನೇ ಕಳೆದುಕೊಳ್ಳುತ್ತವೆ.

            ಇದು ವಾಸ್ತವಕ್ಕೆ ತೀರ ಹತ್ತಿರವಾದ ನಂಬಿಯಾರರ ಅನಿಸಿಕೆಗಳಾದರೆ ಪ್ರಸ್ತುತ ಇದಕ್ಕಿಂತ ಭೀಕರವಾಗಿದೆ ಎಂದೇ ಅನುಭವಕ್ಕೆ ಬರುತ್ತದೆ. ರಂಗದ ಮೇಲೆ ಯಾವುದೋ  ನಿಯಂತ್ರಣಕ್ಕೆ ಸಿಕ್ಕಂತೆ ಭಾಗವತ ವರ್ತಿಸುವಾಗ ವೇಷಧಾರಿಯ ಪರಿಗಣನೆಯೋ ಪ್ರೇಕ್ಷಕನ ಮನವೊಲಿಕೆಯೋ ಅಂತು ಯಕ್ಷಗಾನ ಪದಕ್ಕೆ ಪರಿಶುದ್ಧವಾದ ಛಂದಸ್ಸು ಎಂಬುದಿದೆ ಎಂಬ ಅರಿವೇ ಇರುವುದಿಲ್ಲ.  ಇಂದಿನ ಪ್ರಸಂಗ ಕರ್ತರೂ ಇದಕ್ಕೆ ವಿಹಿತವಾಗಿರಬಹುದೇ ? ಅನುಮಾನಿಸಲ್ಪಡಬೇಕಾಗುತ್ತದೆ.  ಯಕ್ಷಗಾನ ಕಲಾವಿದನಾದವನು ಹೇಗೆ,  ಕುಣಿತ, ವಾದನ,  ಸ್ವರ,  ಲಯ,  ಹೀಗೆ ಪರಿಣತಿಯನ್ನು ಪಡೆದಿರಬೇಕೋ ಅದರಂತೆ ಪ್ರಸಂಗ ಕರ್ತನಿಗೂ ಕಾವ್ಯ ವ್ಯಾಕರಣ ಛಂದಸ್ಸು ರಾಗಗಳು ಅದು ಯಕ್ಷಗಾನಕ್ಕೆ ಹೊಂದಿಕೊಂಡಂತೆ ಪರಿಜ್ಞಾನವಿರಬೇಕಾದದ್ದು ಅತೀ ಅಗತ್ಯ. ಸಂದೇಹ,  ವಾಸ್ತವದಲ್ಲಿ ಹಾಗಿರಬಹುದೇ? ಯಾವುದೋ ಒಂದು ಪ್ರಸಂಗದಲ್ಲಿ ಭಾಗವತ ತನ್ನದೇ ರಾಗ ಶೈಲಿಯಲ್ಲಿ ಹಾಡಿ ಜನಪ್ರಿಯವಾದ ಹಿಟ್ ಪದವಿದ್ದರೆ ತಮ್ಮ ಪ್ರಸಂಗದಲ್ಲೂ ಅಂತಹುದೊಂದೆರಡು ಬೇಕು ಎಂದು ಅಳವಡಿಸುವಾಗ,  ಯಕ್ಷಗಾನ ಛಂದಸ್ಸಿನ  ಬಗ್ಗೆ ಅರಿವಿರುವುದಕ್ಕೆ ಅನುಮಾನವೆಂದೆನಿಸುತ್ತದೆ. ಇಲ್ಲಿ ಛಂದಸ್ಸು ಎಂಬುದು ಅಪ್ರಸ್ತುತ ಪ್ರಸಂಗವಾಗಿಬಿಡುತ್ತದೆ.  
ಪದವನ್ನು ಹೇಳುವ ಒಂದು ಭಂಗಿ : ಚಿತ್ರ ಕೃಪೆ ರಂಗಾಥರ ವೀಡಿಯೋ ಮುದ್ರಣ

                ಯಕ್ಷಗಾನ ಒಂದು ಪರಿಪೂರ್ಣ ಕಲೆ . ಇದು ಇಲ್ಲಿ ಕಂಡು ಬರುವ ಮತ್ತೊಂದು ಪ್ರತಿಪಾದನೆ.  ಯಕ್ಷಗಾನಕ್ಕೆ ಅನ್ಯ ಕಲೆಗಳಿಂದ ಎರವಲು ಪಡೆದು ಅಳವಡಿಸುವ ಅಗತ್ಯವಿರುವುದಿಲ್ಲ. ಹಾಗೊಂದು ವೇಳೆ ಅಳವಡಿಸಿದಲ್ಲಿ ಅದು ಯಕ್ಷಗಾನದಲ್ಲಿನ ಅಧ್ಯಯನದ ಕೊರತೆಯೇ ಹೊರತು ಯಕ್ಷಗಾನಕ್ಕೆ ಒದಗಿಸುವ ಸಂಪನ್ಮೂಲವಾಗುವುದಕ್ಕೆ ಸಾಧ್ಯವಿಲ್ಲ. ಯಕ್ಷಗಾನದಲ್ಲಿ ಪರಂಪರೆಯಿಂದ ಬಂದವುಗಳು ಮೊದಲು ರೂಢಿಯಾಗಬೇಕು. ಇದು ಹಲವು ಹಿರಿಯ ಕಲಾವಿದರಿಂದ  ಮೊದಲು  ತೊಡಗಿದ ಧ್ವನಿಯ ಪ್ರತಿಧ್ವನಿ.

ತುಂಬಿದ ಕೊಡದಲ್ಲಿ ಪುನಃ ನೀರು ಸೇರುವುದಿಲ್ಲ. ಆದರೆ ಕೊಡ ಅರ್ಧತುಂಬಿದಾಗ ಅಲ್ಲಿ ಮತ್ತೊಂದು ಸೇರಿಸುವ ಅಥವಾ ಸೇರಿಕೊಳ್ಳುವ ಅವಕಾಶವಿರುತ್ತದೆ. ಹಾಗಾಗಿ ಇಲ್ಲಿ ಪೂರ್ಣವಾಗಿ ತಿಳಿದುಕೊಳ್ಳದೇ  ಅಜ್ಞಾನವನ್ನೇ ಪ್ರದರ್ಶಿಸಿದ ಹಾಗಾಗುತ್ತದೆ.

            ಪರಂಪರೆಯ ಆವಶ್ಯಕತೆಗೆ ಸಮಕಾಲೀನ ಉದಾಹರಣೆಯೊಂದು ನಂಬಿಯಾರರಿಂದ ಇಲ್ಲಿ ವ್ಯಕ್ತವಾಗುತ್ತದೆ. ಸ್ವಾತಂತ್ರ್ಯ ಹೋರಾಟ ಭಾರತದಲ್ಲಿ ಯಾಕಾಯಿತು. ನಂತರ ಸ್ವಾತಂತ್ರ್ಯ ಹೇಗೆ ಲಭಿಸಿ ಅದನ್ನು ಭಾರತೀಯ ಹೇಗೆ ಅನುಭವಿಸುವಂತಾಯಿತು? ಒಂದು ಸನಾತನ ಜೀವನ ಕ್ರಮದಲ್ಲಿ ಜೀವಿಸಿದವನಿಗೆ ವಿದೇಶಿಗಳಿಂದ ಧಾಳಿಯಾಗಿ ತನ್ನ ಪರಂಪರೆಯ ಜೀವನವನ್ನೇ ಒತ್ತೆ ಇಟ್ಟು ಗುಲಾಮರಂತೆ ಬದುಕಬೇಕಾಯಿತು. ಇದರಿಂದ ತೊಂದರೆಯಾದಾಗ ಸ್ವಾತಂತ್ರ್ಯ ಬೇಕು ಎಂಬ ಹಂಬಲವೇ ಉಂಟಾಗಿ ಆ ಪ್ರಚೋದನೆಯೇ ಹೋರಾಟಕ್ಕೆ ಮೂಲ ಕಾರಣವಾಯಿತು. ಅದರೆ ಈಗ ಸಮಕಾಲೀನ ಪರಿಸ್ಥಿತಿಯಲ್ಲಿ ಸನಾತನವನ್ನು ಬಿಟ್ಟು ಆವಿಷ್ಕಾರದ ಬದುಕನ್ನು ಅನುಭವಿಸುವ ತವಕ. ಇದರಿಂದ ಪುನಃ ವಿದೇಶಿಗಳ ಧಾಳಿಗೆ ತುತ್ತಾಗಬೇಕಾದ ಆವಶ್ಯಕತೆಯನ್ನು ಪರೋಕ್ಷವಾಗಿ ಸಾರಿದಂತೇ ಅಲ್ಲವೇ?  ಸ್ವಾತಂತ್ರ್ಯ ಹೋರಾಟದ ಮುಖ್ಯ ಧ್ಯೇಯವಾಕ್ಯ ಸತ್ಯ ಸಮತ್ವ ಮತ್ತು ಸ್ವಾತಂತ್ರ್ಯ. ಸತ್ಯವನ್ನು ಬಿಟ್ಟು ಸಮತ್ವ ಇಲ್ಲ. ಇವೆರಡನ್ನು ಬಿಟ್ಟು ಸ್ವಾತಂತ್ರ್ಯವಿಲ್ಲ.  ಇದು ಕೇವಲ ಸ್ವಾತಂತ್ರ್ಯಕ್ಕೆ ಸಂಭಂಧಿಸಿಯಲ್ಲ ಯಕ್ಷಗಾನಕ್ಕೂ ಇದು ಅಳವಡಿಕೆಯಾಗುತ್ತದೆ. ಪರಂಪರೆಯಿಂದ ಬಂದಂತಹ ಸತ್ಯವವನ್ನು ಬಿಟ್ಟು ನಮಗೇನು ತೋಚಿದವೋ ಅವುಗಳನ್ನು ಮಾಡುತ್ತೇವೆ. ಆವಾಗ ಎಲ್ಲರದ್ದು ಭಿನ್ನವಾದಾಗ ಸಮತ್ವ ಎಲ್ಲಿ ಉಳಿಯಿತು? . ಇವೆರಡು ಇಲ್ಲದಾಗ ಸ್ವಾತಂತ್ರ್ಯ ಎಲ್ಲಿ ಲಭ್ಯವಾಯಿತು.? ಅದರಂತೆ ಯಕ್ಷಗಾನದಲ್ಲೂ ಪರಂಪರೆಯನ್ನು ಬಿಟ್ಟುಮತ್ತಾವುದರೋ ಹಿಂದೆ ಸುತ್ತುವುದು  ಎಂದರೆ ನಾವು ಪುನಃ ಗುಲಾಮತನಕ್ಕೆ ತಲೆಯೊಡ್ಡಿದಂತಾಗಿಬಿಡುತ್ತದೆ.

ಯಕ್ಷಗಾನದಲ್ಲಿ ಸರಿಯಾದ ಶಿಕ್ಷಣದ ವ್ಯವಸ್ಥೆಯಾಗಬೇಕೆಂದು ನಂಬಿಯಾರರ ಮತ್ತೊಂದು ಧ್ವನಿ.
ಇಂದು ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲ. ಅಧುನಿಕ ರಂಗಭೂಮಿಯ ಸಿನಿಮಾ ನಾಟಕ  ಮುಂತಾದವುಗಳ ಪ್ರಭಾವಗಳು ಯಕ್ಷಗಾನದಲ್ಲಿ ಬಹಳಷ್ಟು ಆಗಿದೆ. ಇದು ಪೂರ್ಣವಾದ ಅರಿವಿಲ್ಲದೆ ಅಗಿರುವಂಥವುಗಳು.  ಅಲ್ಪಸ್ವಲ್ಪ ಕಲಿತವನು ರಂಗವೇರುವ ಅವಕಾಶ ಇಲ್ಲಿ ಧಾರಾಳವಾಗಿ ಉಂಟು. ಇದರಿಂದ ಆತ ಮಾಡುವುದೆಲ್ಲವೂ ಪ್ರಯೋಗಗಳೇ ಆಗುತ್ತವೆ ಹೊರತು ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವಿಲ್ಲ. ಇಂದು ಆ ಪ್ರಯೋಗಗಳನ್ನೇ ಯಕ್ಷಗಾನವೆಂದು ಪ್ರೋತ್ಸಾಹಿಸುತ್ತಾರೆ. ಇದು ಸರಿಯಲ್ಲ. ಕಥಕ್ಕಳಿಯಲ್ಲಿದ್ದಂತೇ ಇಲ್ಲಿ ಕಠಿಣವಾದ ನಿಯಮವೊಂದನ್ನು ಜಾರಿಗೊಳಿಸಬೇಕು. ಪೂರ್ಣವಾಗಿ ಪಾರಂಗತನಾದವನಿಗಷ್ಟೆ ರಂಗವೇರುವ ಅವಕಾಶ ಅಥವಾ ಕಲಿಸುವ ಅರ್ಹತೆಯನ್ನು ನೀಡುವಂತಾಗಬೇಕು.ತಪ್ಪಿದ್ದಲ್ಲಿ ಇದು ಶಿಕ್ಷಾರ್ಹ ಅಪರಾಧವಾಗುವಂತೆ ಪರಿಗಣಿಸಲ್ಪಡಬೇಕು.  ಅದರಂತೇ  ಇಂದು ಪ್ರೇಕ್ಷಕನಾದವನು ಮೊದಲು ಕೈಕಟ್ಟಿ ಕುಳಿತು ಚಪ್ಪಾಳೆ ಶಿಳ್ಳೆ ಬಡಿಯದೆ ಯಕ್ಷಗಾನವನ್ನು ಮೌನವಾಗಿ ನೋಡಬೇಕು. ಕಲೆಯ ತಿಳುವಳಿಕೆ ಇಲ್ಲದೇ ಆಗುವಂತಹ ಪ್ರಯೋಗಗಳು ಪ್ರೇಕ್ಷಕನ ಪ್ರೋತ್ಸಾಹ ಪಡೆದಲ್ಲಿ ಅದು ಮೌಢ್ಯವೇ ಆಗಿಬಿಡುತ್ತದೆ. ಪ್ರೇಕ್ಷಕ ದಡ್ಡತನವನ್ನು ತೋರಿದಲ್ಲಿ ಆ ದೌರ್ಬಲ್ಯವನ್ನುಉಪಯೋಗಿಸುವ ಕಲಾವಿದ ಅಪಕ್ವವಾದ ಪ್ರಯೋಗವನ್ನೇ ಮುಂದುವರಿಸುತ್ತಾನೆ.  ಪ್ರೇಕ್ಷಕನ ಸ್ಥಾನ ಗೌರವಾನ್ವಿತವಾದದ್ದು. ಸಭಾಲಕ್ಷಣದಲ್ಲಿ ಪ್ರೇಕ್ಷಕನ ಸ್ಥಾನ ದೇವತೆಗಳದ್ದು. ಆದುದರಿಂದ ಆ ಘನತೆಯನ್ನು ಉಳಿಸಿಕೊಳ್ಳಬೇಕು.  

ನಾನು ಹಲವು ಕಥಕ್ಕಳಿಯನ್ನು ನೋಡಿದ್ದೇನೆ, ಅಲ್ಲಿ ಪ್ರದರ್ಶನ ಮಧ್ಯೆ ಚಪ್ಪಾಳೆ ಶಿಳ್ಳೆ ಹೊಡೆದ ನಿದರ್ಶನ ನನಗೆ ಸಿಕ್ಕಿಲ್ಲ.  ಇದು ತುಲನೆಯಲ್ಲ. ಇದು ಪ್ರೇಕ್ಷಕ ಧರ್ಮದ ಪ್ರತಿಪಾದನೆ ಮಾತ್ರ. ಪ್ರೇಕ್ಷಕನಲ್ಲಿನ  ಅಜ್ಞಾನ ಯಕ್ಷಗಾನದ ದೌರ್ಬಲ್ಯವಾಗಬಾರದು. ಗ್ರಾಹಕ ಯಾವ ಮನೋಧರ್ಮವನ್ನು ಹೊಂದಿರುತ್ತಾನೋ ಅದನ್ನೆ ವರ್ತಕ ಅನುಸರಿಸಿಬಿಡುತ್ತನೆ. ಇದು ಸಾಮಾನ್ಯ.  ಯಕ್ಷಗಾನದಲ್ಲಿ ಆಧುನಿಕತೆ ಬಳಕೆಯಾದಾಗ ಅದಕ್ಕೆ ಪ್ರೋತ್ಸಾಹ ದೊರೆತಲ್ಲಿ ಅದು ಯಕ್ಷಗಾನಕ್ಕೆ ಸಿಗುವ ಪ್ರೋತ್ಸಾಹವಾಗುವುದಿಲ್ಲ.  ಸಿನಿಮಾ ಅಥವಾ ನಾಟಕ ಯಕ್ಷಗಾನದಲ್ಲಿ ಪ್ರೋತ್ಸಾಹಿಸಲ್ಪಡುತ್ತಿದ್ದರೆ ಅದು ಯಕ್ಷಗಾನವಾಗುವುದಕ್ಕೆ ಸಾಧ್ಯವೇ? ಇದು ಅರ್ಧ ತುಂಬಿದ ಕೊಡದಲ್ಲಿ ಮತ್ತೇನನ್ನೋ ತುಂಬಿಸಿ ಭಾರ ತೂಗಿಸುವ ಕುಟಿಲ ತಂತ್ರಗಾರಿಕೆ.

ಇಂದು ಯಕ್ಷಗಾನದಲ್ಲಿ ಕಲಾವಿದನನ್ನು ಹೊಂದಿಕೊಂಡು ಪ್ರಯೋಗಗಳಾಗುತ್ತದೆ. ಕಾಲ ಮಿತಿಯ ವೇಗದ ಪರಿಧಿಯೊಳಗೆ ಕಲಾವಿದನಿಗೆ ಹೊಂದಿಕೊಂಡು ವೇಗ ನಿರ್ಣಯಿಸಲ್ಪಡುತ್ತದೆ ಹೊರತು ಪ್ರಸಂಗವನ್ನು ಹೊಂದಿಕೊಂಡು ಅಲ್ಲ. ಕಲಾವಿದನ ವೇಗಕ್ಕೆ ಹೊಂದಿಕೊಳ್ಳದ ಹಿಮ್ಮೇಳದವನು ಪರಿಪೂರ್ಣ ತಜ್ಞನಾಗಿದ್ದರೂ ಅಸಮರ್ಥನಾಗಿ ಬಿಂಬಿಸಲ್ಪಡುತ್ತಾನೆ. ಪರಂಪರೆಯಿಂದ ಬಂದ ಹಿರಿಯ ಕಲಾವಿದ ಒಂದು ವೇಷವನ್ನು ನಿರ್ವಹಿಸುವಾಗ ಆ ಪ್ರಸಂಗಕ್ಕೆ ಮತ್ತು ಕಾಲಕ್ಕೆ ಹೊಂದಿಕೊಂಡು ಪರಂಪರೆಯಂತೆ ನಿಧಾನವಾಗಿ ಕುಣಿದರೆ ಆ ಹಿರಿಯ ಕಲಾವಿದನನ್ನು ವೃದ್ಧನಾಗಿ ಅಸಮರ್ಥ ಎಂದೇ ಪರಿಗಣಿಸುತ್ತಾರೆ ಹೊರತು ಮೂಲದಲ್ಲಿನ ಯಕ್ಷಗಾನದ ಅರಿವು ಅವರಲ್ಲಿರುವುದೇ ಇಲ್ಲ. 

ಹಿರಿಯ ಭಾಗವತರೊಬ್ಬರು ಕಾಲಮಾನಕ್ಕೆ ತಕ್ಕಂತೆ ಯಾವುದೋ ಒಂದು ಪದವನ್ನು ಆ ವೇಷಕ್ಕೆ ಮತ್ತು ಸಂದರ್ಭಕ್ಕೆ ಹೊಂದಿಕೊಂಡು ನಿಧಾನವಾಗಿ ಹಾಡಿದರೆ ಹಿರಿಯ ಮದ್ದಲೆ ವಾದಕ ಪೂರ್ಣ ಅರಿವಿದ್ದರೂ ಆ ತಾಳಕ್ಕೆ ಹೊಂದಿಕೊಳ್ಳಲಾಗದೇ ತಡಬಡಾಯಿಸಿ ಅಸಹಾಯಕನಾಗಿಬಿಡುತ್ತಾನೆ. ಕಾರಣ ಆತ ಈ ವೇಗದ ಇನ್ಸ್ ಟಂಟ್ ಯಕ್ಷಗಾನಕ್ಕೆ ಹೊಂದಿಕೊಂಡು ಪೂರ್ಣವಾಗಿ ಬದಲಾಗಿರುತ್ತಾನೆ. ಇದು ಹಿರಿಯ ಮದ್ದಲೆಗಾರರೊಬ್ಬರ ನೈಜ ಅಳಲು. ಹಾಗಾದರೆ ಯಕ್ಷಗಾನ,  ಯಕ್ಷಗಾನವಾಗಿ ಉಳಿದಿಲ್ಲ ಎಂಬುದಕ್ಕೆ ಬೇರೆ ನಿದರ್ಶನ ಬೇಕಿಲ್ಲ.

            ಯಕ್ಷಗಾನದಲ್ಲಿ ನಿರ್ದೇಶಕನ ಅವಶ್ಯಕತೆಯಿದೆಯೇ? ಇಲ್ಲಿ ಭಾಗವತನ ಸ್ಥಾನ ನಿರ್ದೇಶನಕ್ಕೆ ಪರ್ಯಾಪ್ತವೆ?
            ಯಕ್ಷಗಾನಕ್ಕೆ ಇರುವಂತಹುದು ಮೂಲವಾಗಿ ಒಂದು ಚೌಕಟ್ಟು. ಇದು ಪರಂಪರೆಯಿಂದ ಬಂದದ್ದು. ಒಂದು ವೇಷದ ಪ್ರವೇಶದಲ್ಲಿ,  ದೇವೇಂದ್ರ ಅರ್ಜುನ ಹೀಗೆ ಯಾವುದೇ ವೇಷವಾದರೂ ಅದಕ್ಕೊಂದು ಕ್ರಮ ಸಿದ್ಧವಾಗಿರುತ್ತದೆ. ಇದು ಪ್ರಸಂಗ ಯಾವುದೇ ಆಗಿರಲಿ ಇಲ್ಲೊಂದು ಸಾಮಾನ್ಯ ನಿಯಮವಿರುತ್ತದೆ. ಹಾಗಾಗಿ ಯಕ್ಷಗಾನದಲ್ಲಿ ಪರಂಪರೆಯನ್ನು ತಿಳಿದಾಗ ಮತ್ತು ಅನುಸರಿಸಿದಾಗ ಮುಂದಿನದ್ದು ಸುಲಭವಾಗುತ್ತದೆ. ಪರಂಪಯಿರುವುದು ಸುಲಭಮಾಡುವುದಕ್ಕೆ  ಹೊರತು ಅದೊಂದು ಬಂಧನವಲ್ಲ. ಯಕ್ಷಗಾನದಲ್ಲಿ ನಿರ್ದೇಶಕನ ಸ್ಥಾನವಿದ್ದರೆ ಆತನಿಗೆ ಪರಂಪರೆಯ ಸಂಪೂರ್ಣ ಜ್ಞಾನವಿರತಕ್ಕದ್ದು. ಇದು ಅರಿವಿದ್ದು ಮಾಡಿದಲ್ಲಿ ನಿರ್ದೇಶಕನ ಸ್ಥಾನ ತಪ್ಪಲ್ಲ. ನಿರ್ದೇಶನಕ್ಕಿಂತಲೂ ಇಂದು ಮೊದಲು ಆಗಬೇಕಾದ ಕೆಲಸವೆಂದರೆ ಪರಂಪರೆಯನ್ನು ಕಲಿತುಕೊಳ್ಳುವುದು.  ಇದು ನಂಬಿಯಾರರ ಬಹಳ ಸರಳವಾದ ನಿರೂಪಣೆ.  ಸುಮ್ಮನೇ ಅವರರವರ ಮೂಗಿನ ನೇರಕ್ಕೆ ನಿರ್ದೇಶನ ಮಾಡಿದರೆ ಅದು ನಿರ್ದೇಶನವಾಗಬಹುದು ಆದರೆ ಅದು ಯಕ್ಷಗಾನವಾಗುವುದಿಲ್ಲ. 

ಯಕ್ಷಗಾನದಲ್ಲಿ ಪರಂಪರೆ ಎಂದಾಗ ನಿಂತ ನೀರನ್ನು ಕಂಡಂತೆ ಭಾವಿಸುವುದನ್ನು ಕಾಣಬಹುದು. ಹೊಸತನ ಕೊಡುವುದರಲ್ಲೂ ಪಡೆಯುವುದರಲ್ಲೂ ಒಂದು ಅನಾರೋಗ್ಯಕರ ವಾತಾವರಣ ಕಾಣಬಹುದು.   ಪರಂಪರೆ ಎಂದಾಗ  ಇಲ್ಲೊಂದು ಪರಂಪರೆಯಿಂದ ಬಂದ ನಿಯಮವಿರುತ್ತದೆ. ಆ ನಿಯಮದ ಒಳಗೆಯೇ ಪ್ರಸಂಗ ಹೊಸೆದಿರುತ್ತದೆ. ಹಾಗಾಗಿ ಅದನ್ನು ಬಿಟ್ಟು ಇಷ್ಟದಂತೆ ಮಾಡುತ್ತೇ ವೆ ಎಂದರೆ ಅದು ಯಕ್ಷಗಾನವಾಗುವುದಿಲ್ಲ.

          ಯಕ್ಷಗಾನ ಭಾಗವತಿಕೆಯ ಸಂಗೀತದ ಬಗ್ಗೆ ಪ್ರಸ್ತಾಪ ಬಂದಾಗ ಯಕ್ಷಗಾನ ಹಾಡುಗಾರಿಕೆಯಲ್ಲಿ ಸಂಗೀತವೆಂದರೆ ಆಲಾಪನೆ ಮಾಡಿ ಕಛೇರಿ ಮಾಡುವ ಸಂಗೀತವಲ್ಲ. ಇದು ಕೇವಲ ರಂಗ ಸಂಗೀತ.  ತಾಳದ ಒಳಗೇ ಸಂಗಿತವಿರಬೇಕು. ತಾಳ ಛಂದಸ್ಸಿಗೆ ಹೊಂದಿಕೊಂಡು ಇರುತ್ತದೆ.  ಅಂದರೆ ಛಂದಸ್ಸಿನ ಒಳಗೆ ತಾಳ ಮತ್ತು ಸಂಗೀತವಿದ್ದಾಗ ಅದು ಯಕ್ಷಗಾನ ಹಾಡುಗಾರಿಕೆಯಾಗುತ್ತದೆ. ಯಕ್ಷಗಾನ ಭಾಗವತಿಕೆಯಲ್ಲಿ ಮೊದಲು ತಾಳವನ್ನು ಕಲಿಯಬೇಕು. ಅದರ ದಸ್ತಗಳನ್ನು ಕಲಿಯಬೇಕು ತಾಳದ ಬಿಡ್ತಿಗೆಯನ್ನೂ ಮುಕ್ತಾಯವನ್ನೂ ಕಲಿತನಂತರ,   ಆ ತಾಳಕ್ಕೆ ಪದವನ್ನು ಓದುವುದನ್ನು ಕಲಿಯಬೇಕು. ಅಂದರೆ ತಾಳಕ್ಕೆ ಮಾತ್ರಾಗಣದ ಅನುಸಾರ ಪದವನ್ನು ಕೂರಿಸುವುದಕ್ಕೆ ಅಭ್ಯಾಸ ಮಾಡಬೇಕು. ಇದೆಲ್ಲದರ ನಂತರ ಅದನ್ನು ಹಾಡುವುದಕ್ಕೆ ಕಲಿಯಬೇಕು. ಇದರ ನಡುವೆ ಆತ ಸ್ವರಾಭ್ಯಾಸ ಮಾಡಬೇಕು.  ಆದರೆ ಇಂದು ಹೀಗಾಗದೆ ತಾಳ ಛಂದಸ್ಸನ್ನು ಬಿಟ್ಟು ಕೇವಲ ರಾಗವಿಸ್ತಾರವನ್ನು ಮಾಡಿದರು. ಇದರಿಂದ ಯಕ್ಷಗಾನ ಕುಣಿತ ಬಲ್ಲ ಕಲಾವಿದನೂ ತಾನು ಹೇಗೆ ಕುಣಿಯುವುದಪ್ಪ ಎಂಬಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿತು.  ಯಕ್ಷಗಾನ ಭಾಗವತಿಕೆಗೆ ಬಲಿಪ್ಪರು ಮತ್ತು ಅಗರಿಯವರ ದಾರಿ ಅದು ಅನುಸರಿಸಲೇ ಬೇಕು.  ಹಾಗಿದ್ದಲ್ಲಿ ಮಾತ್ರ ಅದು ಯಕ್ಷಗಾನವಾಗಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸಂಗದಲ್ಲಿ ಸೂಚಿತ ರಾಗದಲ್ಲೇ ಪದಗಳನ್ನು ಹಾಡುವಂತಾಗಬೇಕು. ಇಲ್ಲಿ ಇರುಂವಂತಹುದನ್ನು ಮೊದಲು ಪೂರ್ಣವಾಗಿ ಕಲಿಯಬೇಕು. ಸ್ವಂತಿಕೆಯ ಅಗತ್ಯವಿರುವುದಿಲ್ಲ.

ಯಕ್ಷಗಾನದಲ್ಲಿ ಬಡತನವನ್ನು ಗುರುತಿಸುವ ಅಗತ್ಯವಿಲ್ಲ. ಪ್ರಸಂಗದಲ್ಲಿ ಸೂಚಿಸಿದ ರಾಗದಲ್ಲಿ ಹಾಡಲು ಅಸಮರ್ಥನಾದವನು ಆ ಪ್ರಸಂಗ ನಡೆಸುವುದಕ್ಕೆ ಅಸಮರ್ಥ ಎಂದು ಸಾರಿದಂತೇ ಅಲ್ಲವೆ? ಹಾಗಾಗಿಯೇ ಇವರ ಮಾತುಗಳು ಮನಸ್ಸಿಗೆ ನಾಟುತ್ತವೆ. ಅಲ್ಲವೆನ್ನುವುದಕ್ಕೆ ಕಾರಣಗಳಿರುವುದೇ ಇಲ್ಲ. ನಂಬಿಯಾರರ ಖಚಿತವಾದ ಮಾತುಗಳು ಇಂದಿನ ವರ್ತಮಾನಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಇಂದು ಪರಂಪರೆಯನ್ನು ಅನುಸರಿಸಿದವನ ಸ್ಥಿತಿ ಮೂಗರ ಸಂತೆಯಲ್ಲಿ ಮಾತು ಬಲ್ಲವನೂ  ಮಾತಿಲ್ಲದ ವ್ಯವಹಾರ ಮಾಡುವಂತಾಗಿದೆ.

    ಸುಮಾರು ನಾಲ್ಕುನೂರು ವರ್ಷಗಳಷ್ಟು ಹಳೆಯ ಅಂದರೆ ಸರಿ ಸುಮಾರು ಹದಿನೈದು ತಲೆಮಾರುಗಳ ಬುದ್ಧಿಮತ್ತೆ ನಮ್ಮಲ್ಲಿವರೆಗೆ ದಾಟಿ ಬಂದಿದೆ. ಇದು ಇಂದಿನ ಯಾವುದೇ ತಂತ್ರಜ್ಞಾನದ ಸಹಾಯದಿಂದ ಅಲ್ಲ. ಕೇವಲ ಶೃತಿ  ಸ್ಮೃತಿಯಿಂದಾಗಿ ಬಾಯಿಯಿಂದ ಕಿವಿಗೆ ಕಿವಿಯಿಂದ ಬಾಯಿಗೆ ಹರಿದು ಬಂದಂತಹ ಅಮೂಲ್ಯ ಕಲೆಯಿದು. ಇತ್ತೀಚಿನ ಮೂವತ್ತು ನಲ್ವತ್ತು ವರ್ಷಗಳಲ್ಲಿ ನಾವದನ್ನು ಹಾಳು ಮಾಡುತ್ತೇವೆ ಎಂದರೆ ಇದಕ್ಕಿಂತ ಬೇರೆ ದುರಂತ ಬೇಕೆ?  ಮನನೊಂದ ಮಾತು.  ಎಂತಹಾ ಕಟು ಸತ್ಯವಿದು.

ಪ್ರಸಂಗ ಪುಸ್ತಕ ಅಥವಾ ಬರಹ ರೂಪದಲ್ಲಿ ಬಳಕೆಗೆ ಬಂದದ್ದು ಕೆಲವು ದಶಕಗಳಿಂದ ಇರಬಹುದು. ಆದರೆ ಅದುವರೆಗೆ ಅದು ಹರಿದು ಬಂದ ಬಗೆಯನ್ನು ಕಲ್ಪಿಸೋಣ. ಇದೊಂದೇ ನಿದರ್ಶನ ಸಾಕು ಯಕ್ಷಗಾನ ಒಂದು ಪರಂಪರೆಯ ಕಲೆ ಎಂದು ಹೇಳುವುದಕ್ಕೆ. ಆ ಶುದ್ದ ಪರಂಪರೆ ನಮ್ಮ ವರ್ತಮಾನದಲ್ಲೇ ಕೊಂಡಿ ಕಳಚಿ ಇನ್ನೇನೋ ರೂಪ ತಾಳಬೇಕೆ? ಯಕ್ಷಗಾನದಲ್ಲಿ ಕಿಂಚಿತ್ ಅಭಿಮಾನ ಗೌರವ ಪ್ರೀತಿ ಇದ್ದಲ್ಲಿ ಆ ಪರಂಪರೆಯನ್ನು ಉಳಿಸುವ ನಿಷ್ಠೆಯತ್ತ ಮನ ಹರಿಯಬೇಕು.

ಯಕ್ಷಗಾನ ಶಾಸ್ತ್ರಿಯ ಕಲೆಯಲ್ಲ. ಹೀಗೆ ಹೇಳಬಹುದು. ಅದರ ಸತ್ಯಾಸತ್ಯತೆಯ ವಿಶ್ಲೇಷಣೆಗಿಂತ ಯಕ್ಷಗಾನ ಪದಗಳ ರಾಗ ತಾಳ ಛಂದಸ್ಸು ಅವುಗಳು ಬೆಳೆದು ಬಂದರೀತಿ ಶುದ್ದ ಶಾಸ್ತ್ರೀಯತೆಯ ಅನುಭವವನ್ನು ಕೊಡುವುದಿಲ್ಲವೇ? ಇಲ್ಲಿ ಯಕ್ಷಗಾನ ಶೈಲಿಯಲ್ಲಿ ಬಳಕೆಯಾಗುವ ಸಂಗೀತದ ರಾಗಗಳು ನರ್ತನ ಶೈಲಿಗಳು ಯಕ್ಷಗಾನಕ್ಕಾಗುವಾಗ ಬೇರೆಯೇ ರೂಪವನ್ನು ಪಡೆದುಕೊಂಡಿದೆ.

             ಯಕ್ಷಗಾನದಲ್ಲಿ ಪುರಾಣ ಪ್ರಸಂಗಗಳು ಮೂಲ ಪುರಾಣದಂತೆ ಇಲ್ಲ , ಏಕಿಲ್ಲ ಎಂಬುದಕ್ಕೆ ಸ್ಪಷ್ಟವಾದ ವಿವರಣಿ ಇಲ್ಲಿ ಸಿಗುತ್ತದೆ.  ಪುರಾಣ ಪ್ರಸಂಗಗಳು ಯಾವ ರಂಗ ಪ್ರಾಕಾರಗಳಲ್ಲೂ ಮೂಲ ಪುರಾಣದಂತೆ ಇಲ್ಲ. ರಂಗ ಪ್ರಾಕಾರಗಳು ಇರುವುದು ರಸವನ್ನು ಸೃಷ್ಟಿಸುವುದಕ್ಕೆ. ರಸವಿರುವುದು ಆಸ್ವಾದನೆಗೆ. ಪುರಾಣ ದರ್ಶನಕ್ಕೆ ಮೂಲ ಪುರಾಣ ಕೃತಿಗಳ ಪಾರಾಯಣ ಮಾಡಬಹುದು. ಆಮೂಲಕ ತಿಳಿದುಕೊಳ್ಳಬಹುದು.  ಆದರೆ ರಂಗಕ್ಕೆ ಅವುಗಳನ್ನು ತರುವ ಉದ್ದೇಶ ಕಥೆಯನ್ನು ಹೇಳುವುದಕ್ಕಲ್ಲ.  ರಂಗದಲ್ಲಿ ರಸಗಳೇ ಪ್ರಧಾನ. ಪುರಾಣ ಅದಕ್ಕೆ ಮಾಧ್ಯಮ.  ಹಾಗಾಗಿ ರಂಗಕ್ಕನುಸಾರವಾಗಿ ರಸೋತ್ಪತ್ತಿಗೆ ಅನುಕೂಲವಾಗುವಂತೆ ಇಲ್ಲಿ ಬದಲಾವಣೆ ಸಾಧ್ಯವಾಗುತ್ತದೆ.

            ನಂಬಿಯಾರರು ಸರಳವಾಗಿ ವಿವರಿಸುತ್ತಾ ಚಿಂತನೆಯ ಹೊಸ ಬಿತ್ತನೆಯನ್ನು ಬಿತ್ತುತ್ತಾರೆ ಎಂದನಿಸುತ್ತದೆ.  ರಾಮಾಯಣದ ಕಥೆ ತಿಳಿದಿದ್ದರೂ ಯಕ್ಷಗಾನವನ್ನೋ ನಾಟಕವನ್ನೋ ನೋಡುವ ಕುತೂಹಲವೇಕೆ? ಅಲ್ಲಿ ಕಥೆಯನ್ನು ತಿಳಿಯುವ ಉದ್ದೇಶವಿರುವುದಿಲ್ಲ. ಕಾದಂಬರಿಯನ್ನೋ ಕಥೆಯನ್ನೋ ಸಿನಿಮಾ ಅಥವಾ ನಾಟಕವಾಗಿ ರಂಗದ ಮೇಲೆ ತರುವಾಗ ಮೂಲ ಕಥೆಯಂತೆ ಅಲ್ಲಿ ಚಿತ್ರಿತವಾಗುತ್ತದೆಯೇ? ಇಲ್ಲ. ರಂಗಕ್ಕನುಸಾರವಾಗಿ ಅಲ್ಲಿ ಬದಲಾವಣೆ ಕಾಣಬೇಕಾಗುತ್ತದೆ. ಅಲ್ಲಿ ಆಸ್ವಾದಿಸಬಲ್ಲ ರಸಾನುಭವವೇ ಪ್ರಧಾನವಾಗುತ್ತದೆ. ಕಥೆ ಓದುವಾಗ ಆಗುವ ರಸೋತ್ಪತ್ತಿಗೂ ಕಥೆ ರಂಗದ ಮೇಲೆ ಕಾಣುವಾಗ ಆಗುವ ರಸೊತ್ಪತ್ತಿಗೂ ವೆತ್ಯಾಸ ಇರುತ್ತದೆ.

            ಇನ್ನೊಂದು ಪ್ರಮುಖ ಪ್ರಶ್ನೆ. ಈ ಮೊದಲು ಶೇಣಿಯವರ ರಾವಣ ಪಾತ್ರವನ್ನು ನನ್ನ ಬ್ಲಾಗ್ ಲೇಖನದಲ್ಲಿ ಬರೆದಾಗ ಆಸಕ್ತರೊಬ್ಬರೂ ಇದೇ ರೀತಿಯ ಜಿಜ್ಞಾಸೆಯನ್ನಲ್ಲಿ ಇಟ್ಟಿದ್ದರು. ಯಕ್ಷಗಾನದಲ್ಲಿ ಖಳ ಪಾತ್ರದ ವಿಜ್ರಂಭಣೆ ಅಥವಾ ವೈಭವೀ ಕರಿಸುವುದು ಸರಿಯೇ?  ಮೇಲೆ ಹೇಳಿದ ರಸೋತ್ಪತ್ತಿ ಪ್ರಧಾನವಾಗುವಾಗ ಖಳ ಪಾತ್ರ ವೈಭವೀಕರಿಸಲ್ಪಟ್ಟರೆ ಆ ಮಟ್ಟಿಗೆ ರಸೋತ್ಪತ್ತಿ ಪ್ರಾಮಾಣಿಕರಿಸಲ್ಪಟ್ಟಿತ್ತು ಎಂದು ತಿಳಿದುಕೊಂಡರೆ, ಖಳ ಪಾತ್ರ ವೈಭವೀಕರಣ ತಪ್ಪಲ್ಲ ಎಂದನಿಸುತ್ತದೆ. ಆದರೆ ಇದೇ ಪ್ರಶ್ನೆಗೆ ನಂಬಿಯಾರ ವಿವರಣೆ ಸಹಜವಾಗಿ ಸರಳವಾಗಿ ಬರುತ್ತದೆ.

            ಯಾವುದೇ ಕಥೆಯಲ್ಲಿ ನಾಯಕ ಪಾತ್ರಗಳು ಮತ್ತು ಖಳ ಪಾತ್ರಗಳು ಇರುತ್ತವೆ. ಖಳ ಪಾತ್ರಗಳ ಯೋಗ್ಯತೆಗಳು ಹೆಚ್ಚಾಗುವಾಗ ಖಳನನ್ನು ಸೋಲಿಸುವ ನಾಯಕಪಾತ್ರಗಳ ಯೋಗ್ಯತೆಯೂ ಸಹಜವಾಗಿ ಹೆಚ್ಚೇ ಇರಬೇಕಾಗುತ್ತದೆ. ಹಾಗಾಗಿ ಖಳ  ಪಾತ್ರ ವಿಜ್ರಂಭಿಸುವಾಗ ಅದನ್ನು ಸೋಲಿಸುವ ನಾಯಕ ಪಾತ್ರವೂ ಪರೋಕ್ಷವಾಗಿ ವೈಭವೀಕರಿಸಿದಂತೆ. ಯೋಗ್ಯತಾವಂತ ಖಳನನ್ನು ಸೋಲಿಸುವಾಗ ನಾಯಕನ ಯೋಗ್ಯತೆಯೂ ಅದಕ್ಕಿಂತ ಹೆಚ್ಚೇ ಅಲ್ಲವೇ?

         ಹೀಗೆ ಸಂದರ್ಶನ ಕೇವಲ ಸಂದರ್ಶನವಾಗಿ ಇಲ್ಲಿ ಕಂಡುಬರುವುದಿಲ್ಲ. ಹಲವು ನಿಷ್ಠೂರ ಸತ್ಯದ ಪ್ರತಿಪಾದನೆಯಂತೆ ಇಲ್ಲಿ ಕಂಡುಬಂದರೆ ಇದು  ಅಗಾಧವಾದ ತಿಳುವಳಿಕೆಯ ಕಿಂಚಿತ್ ದರ್ಶನಂತೆ ಭಾಸವಾಗುತ್ತದೆ. ಅದಕ್ಕಾಗಿ ಇದನ್ನು ಗಮನವಿಟ್ತು ನೋಡಬೇಕು. ಕಿವಿಯಾರೆ ಕೇಳಬೇಕು.  ಡಾ| ರಾಘವ ನಂಬಿಯಾರ ಬಗ್ಗೆ ನಾವು ಹೇಳುವುದಲ್ಲ ತಿಳಿಕೊಳ್ಳುವ ಅಗತ್ಯವಿದೆ. ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಆದರೆ ಈ ಸಂವಾದ ಅದನ್ನು ವ್ಯಕ್ತ ಪಡಿಸುತ್ತದೆ. ಯಕ್ಷಗಾನ ಪದಗಳನ್ನು ಹೇಳುವಾಗ ಇವರು ಭಾಗವತನಂತೆ ಅವತರಿಸಿಬಿಡುತ್ತಾರೆ, ಅರ್ಥಗಾರಿಕೆ,  ವೇಷಗಾರಿಕೆ ಕುಣಿತ ಎಲ್ಲದರಲ್ಲೂ ಸಮ ಪ್ರಮಾಣದ ಪ್ರೌಢಿಮೆಯನ್ನು ತೋರುತ್ತಾರೆ. ಹೆಚ್ಚೇಕೆ ಪ್ರೇಕ್ಷಕನಾಗಿಯೂ ಶುದ್ದ ಅವಲೋಕನವನ್ನು ಮಾಡುತ್ತಾರೆ. ಪ್ರತಿಯೋಂದೂ ವಿಚಾರಗಳೂ ಇವರ ಸಂಶೊಧನೆಯ ಹಾದಿಯಲ್ಲಿ ಸಿಕ್ಕ ನಿಲ್ದಾಣಗಳು. ಸಹಜವಾಗಿ ನಿಲ್ದಾಣಗಳ ಬಗ್ಗೆ ಅಲ್ಲಿಂದ ಸರಿದು ಹೋದಮೇಲೆ ಅಲ್ಲಿಯ ಸ್ಥಿತಿಗತಿಯ ಬಗ್ಗೆ ಅರಿವಿರುವಿದಿಲ್ಲ. ಆದರೆ ಇಲ್ಲಿ ಸರಿದು ಹೋದ ನಿಲ್ದಾಣಗಳಲ್ಲಿ ಇವರ ಅವಲೋಕನ ದೃಷ್ಟಿ ಸರಿದಾಡುತ್ತಾ ಇರುತ್ತದೆ. ಹಾಗಾಗಿಯೇ ವಾಸ್ತವದ ಆಗು ಹೋಗುಗಳಬಗ್ಗೆ ಮಾತನಾಡುತ್ತಾರೆ. ಯಕ್ಷಗಾನದಂತೆ ಕೇರಳದ ಕಥಕ್ಕಳಿಯ ಬಗ್ಗೆಯೂ ಹೀಗೆ ಪ್ರವಚಿಸಬಲ್ಲರು ಅಷ್ಟೇ ಏಕೆ ಸಂಗೀತದ ಸ್ವರ ಆಲಾಪಗಳ ಬಗ್ಗೆಯೂ ಇವರ ಮಾತು ಪ್ರಬುದ್ಧತೆಯನ್ನು ಸಾರುತ್ತದೆ. ಇದಲ್ಲವೇ ಸಂಶೋಧಕನ ನಿಜವಾದ ಅರ್ಹತೆ. ಹಾಗಾಗಿಯೇ ಸಂವಾದ ಮುಗಿದಾಗ ಅನ್ನಿಸುತ್ತದೆ. ಯಕ್ಷಗಾನಕ್ಕೊಂದು ಲಾಕ್ಷಣಿಕ ಗ್ರಂಥವಾಗಬೇಕು. ಅದಕ್ಕೆ ಇವರು ಸಂಪಾದಕರಾಗಬೇಕು.  ಯಕ್ಷಗಾನಕ್ಕೊಂದು ಮಾನ್ಯತೆಯ ವಿಶ್ವವಿದ್ಯಾನಿಲಯ  ಸ್ಥಾಪನೆಯಾಗಬೇಕು, ಅದಕ್ಕಿವರು ಪ್ರಾಚಾರ್ಯರಾಗಬೇಕು.  ಎಲ್ಲದಕ್ಕೂ ಮೊದಲು ಯಕ್ಷಗಾನಕ್ಕೆ ಆ ಸೇವಾಭಾಗ್ಯ ಒದಗಿಬರಬೇಕು.

            “ಈ ರೀತಿಯ ಸಂವಾದವನ್ನು ತೆರೆದಿಟ್ಟ ಶ್ರೀ ರಂಗನಾಥ ಸಿತ್ಲರ ಪರಿಶ್ರಮ ಪ್ರಶಂಸನೀಯ.”  ಈ ಒಂದು ವಾಕ್ಯ ಸಾವಿರ ಮಾತುಗಳನ್ನು ಹುದುಗಿಸಿದಂತೆ. ಯಾಕೆಂದರೆ ನಿಸ್ವಾರ್ಥ ಸೇವೆ ಎಂದೂ ಯಾವ ಫಲವನ್ನೂ ನಿರೀಕ್ಷಿಸುವುದಿಲ್ಲ. ಹಾಗಾಗಿ ಈ ಒಂದರಲ್ಲಿ ಸಾವಿರವನ್ನು ತುಂಬಿಕೊಡುವ ಬಯಕೆ ಇದು.
ಯಕ್ಷಗಾನಂ ಗೆಲ್ಗೆ