Saturday, January 25, 2025
ಅನಾವಶ್ಯಕ ವಿಷಯಗಳು
Sunday, September 29, 2024
ಅರುವತ್ತರ ವಿಶ್ವವ್ಯಾಪಿ ವಿಶ್ವಣ್ಣ
ಅರುವತ್ತು ಎಂದರೆ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ. ಲೆಕ್ಕದಲ್ಲಿ ಹೇಳುವಾಗ ಐವತ್ತರ ನಂತರ ಮತ್ತು ಹತ್ತು. ಐವತ್ತು ಬದುಕಿನ ಅರ್ಧವನ್ನು ಹೇಳಿದರೆ ಅರುವತ್ತು ಮತ್ತೆ ಉತ್ತರಾರ್ಧವನ್ನು ಹೇಳುತ್ತದೆ. ಅದುವರೆಗೆ ಮನುಷ್ಯ ತನಗಾಗಿ ಬದುಕಿದರೆ ಆನಂತರದ ಬದುಕು ಅವನದ್ದಾಗಿರುವುದಿಲ್ಲ. ಬದುಕಿನ ಬಹಳಷ್ಟು ಅಂಶ ಪರಾಧೀನವಾಗಿಬಿಡುತ್ತದೆ. ದೇಹ ಮನಸ್ಸು ಚಿಂತನೆ ಎಲ್ಲವೂ ಪರಾಧೀನ. ಮತ್ತೊಬ್ಬರಿಗೆ ಅದು ಮೀಸಲು. ಯಕ್ಷಗಾನದ ಓರ್ವ ಮೇಧಾವಿ ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮಟ್ಟಿಗೆ ಹೇಳುವುದಾದರೆ ಇದು ಐವತ್ತರಿಂದ ನಂತರ ಅಂತ ಹೇಳುವುದಕ್ಕೆ ಬರುವುದಿಲ್ಲ. ಯಕ್ಷಗಾನದ ಕಲೆಗಾಗಿ ತನ್ನದೆಲ್ಲವನ್ನೂ ಮೀಸಲೆಂಬಂತೆ ಬೆಳೆದು ನಿಂತವರು.
ಒಂದು ಸಲ ಕೃಷ್ಣ ಸಂಧಾನದ ವಿದುರನ ಪಾತ್ರದ ಅರ್ಥವನ್ನು ಕೇಳುತ್ತಿದ್ದಂತೆ ನಾನು ಭಕ್ತಿ ಪರವಶನಾಗಿ ಹೋಗಿದ್ದೆ. ಮೃಣ್ಮಯನಾದ ಮನುಷ್ಯ ಮಾತ್ರದವನು ಚಿನ್ಮಯ ಸ್ವರೂಪವನ್ನು ಕಾಣುವ ಪಾತ್ರವದು. ಮಂದವಾಗಿ ತೊಡಗುವ ಸುಣ್ಣಂಬಳ ಅರ್ಥಗಾರಿಕೆ ಅದು ಗಂಭೀರವಾಗಿ ಮನಸ್ಸಿನಾಳಕ್ಕೆ ಇಳಿದು ಬಿಟ್ಟು ಮನಸ್ಸು ಲೌಕಿಕ ಬದುಕಿನಿಂದ ಅಲೌಕಿಕತೆಗೆ ಜಾರಿಬಿಟ್ಟಿತು.
ಸಾಮಾನ್ಯವಾಗಿ ತಾಳಮದ್ದಲೆಯ ಅರ್ಥಗಾರಿಕೆ ಅದು ಸಂಪೂರ್ಣ ವಿಷಯಾಧಾರಿತವಾಗುತ್ತದೆ. ಪಾತ್ರ ಮಾತ್ರವಲ್ಲದೇ ಅಲ್ಲಿ ಪ್ರಸ್ತುತವಾಗುವ ವಿಷಯಗಳು ಸಂಘರ್ಷಗಳು ಆ ಪಾತ್ರದ ವ್ಯಕ್ತಿ ಚಿತ್ರಣವನ್ನು ನೀಡುತ್ತವೆ. ಅದು ಪರಿಪೂರ್ಣ ಕಥೆಯಾಗಬೇಕೆಂದೇನೂ ಇಲ್ಲ. ಆ ಪಾತ್ರಕ್ಕೆ ಮಾತ್ರ ಸೀಮಿತ. ಸುಣ್ಣಂಬಳ ಅರ್ಥಗಾರಿಕೆ ಈ ಚೌಕಟ್ಟಿನಲ್ಲೇ ವ್ಯಕ್ತವಾಗುವುದು ಯಕ್ಷಗಾನದ ವ್ಯಾಪ್ತಿಯನ್ನು ತಿಳಿಸಿಬಿಡುತದೆ. ಪುರಾಣದಲ್ಲಿ ಹೇಗೆ ಇರಲಿ, ಯಕ್ಷಗಾನದಲ್ಲಿ ಅದು ಹೀಗೆ. ಯಕ್ಷಗಾನದ ಶಿಸ್ತುಬದ್ದ ಪರಿಮಿತಿಯಲ್ಲೇ ಇವರ ಅರ್ಥಗಾರಿಕೆ ಮೆರೆಯುವ ಪರಿ ಅದು. ಅವರ ಅರ್ಥಗಾರಿಕೆಯ ಯಾವ ಸಂದರ್ಭದಲ್ಲೂ ಅವರು ವಿಚಲಿತರಾಗದೇ ಸಲೀಸಾಗಿ ಅರ್ಥಗಾರಿಕೆಯನ್ನು ತೋರಿಸಿಕೊಡುತ್ತಾರೆ. ಅರ್ಥಗಾರಿಕೆ ಇಷ್ಟು ಸರಳವೇ ಅಂತ ಹಲವು ಸಲ ಅನಿಸಿಬಿಡುತ್ತದೆ. ಆದರೆ ಅದು ಪ್ರಖ್ಯಾತ ಗಾಯಕ ಹಾಡುವಾಗ ನಾವು ಜತೆಗೆ ಹಾಡಿದಂತೆ...ಗಾಯಕನ ಗಾಯನ ನಿಂತೊಡನೆ ನಮ್ಮದು ಏನೂ ಅಲ್ಲದ ಶೂನ್ಯತೆ ಆವರಿಸಿಬಿಡುತ್ತದೆ. ಅದು ಅಷ್ಟು ಸರಳವಲ್ಲ ಎಂದು ಅರಿವಾಗುತ್ತದೆ. ಯಾಕೆಂದರೆ ಇವರ ಅರ್ಥಗಾರಿಕೆಯ ಶೈಲಿ ಸುಲಭ ಅಂತ ಕಂಡರೂ ಅಲ್ಲಿ ಬರುವ ವಿಷಯಗಳು ಚಿಂತನೆಗಳು ಅದು ಮಂಡನೆಯಾಗುವ ರೀತಿ ಎಲ್ಲವೂ ಬಹಳ ಕಠಿಣ. ಸುಲಭವಾಗಿ ಸರಳವಾಗಿ ಅರ್ಥವಾಗುವ ವಿಚಾರಗಳು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರ ಸರಳ. ಒಬ್ಬ ಉತ್ತಮ ಅಧ್ಯಾಪಕ ಕಠಿಣವಾದ ಪಾಠವನ್ನು ಸರಳವಾಗಿ ಅರ್ಥೈಸುವಂತೆ.
ನಮ್ಮ ಕಾಲಯುಗದಲ್ಲಿ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಒಂದು ಸೆಳೆತವಿತ್ತು. ಅದೊಂದು ವಿಚಿತ್ರ ಆಕರ್ಷಣೆ. ಯಾಕೆಂದರೆ ಆಗ ಇದ್ದ ಅರ್ಥಧಾರಿಗಳು. ಸಾಮಗ ಶೇಣಿ ಪೆರ್ಲ ಹೀಗೆ ಒಬ್ಬೊಬ್ಬರದೂ ಒಂದೊಂದು ವಿಧ. ಈ ವೈವಿಧ್ಯತೆಯೇ ಸೆಳೆತ. ಈ ಎಲ್ಲಾ ಸೆಳೆತವನ್ನೂ ಉತ್ತಮವಾಗಿ ಸಮರ್ಥವಾಗಿ ಮೈಗೂಡಿಸಿಕೊಂಡವರು ಸುಣ್ಣಂಬಳರು. ಅವರ ಹಾಗೋ ಇವರ ಹಾಗೋ ಅಂತ ಅನುಮಾನ ಬಂದರೂ ಇದು ಅದಲ್ಲ ಇದೊಂದು ಬೇರೆ ಸಮನ್ವಯದ ಅರ್ಥಗಾರಿಕೆ, ಇದು ಸುಣ್ಣಂಬಳರ ಶೈಲಿ ಅಂತ ಅನ್ನಿಸುತ್ತದೆ. ಸಾಮಾನ್ಯವಾಗಿ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಧಾಳಿ ಪ್ರತಿಧಾಳಿ ಕಾಲೆಳೆಯುವುದು, ದಮನ ಮಾಡುವುದು ಎಲ್ಲವೂ ಇರುತ್ತದೆ. ಅದು ಪಾತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಆದರೆ ಸುಣ್ಣಂಬಳರು ಆಕ್ರಮಣವಿಲ್ಲ, ಧಾಳಿ ಪ್ರತಿಧಾಳಿಯ ಬಗ್ಗೆ ಯೋಚಿಸುವುದಿಲ್ಲ. ಮತ್ತೊಬ್ಬರನ್ನು ಸೋಲಿಸಲೇ ಬೇಕೆಂಬ ಛಲವೂ ಇರುವುದಿಲ್ಲ. ಆದರೂ ಇವರದ್ದು ಒಂದು ರೀತಿಯ ಗೆಲುವಿನ ಹಾದಿ. ಯಾಕೆಂದರೆ ಅದು ಯಕ್ಷಗಾನದ ಚೌಕಟ್ಟನ್ನೂ ಪಾತ್ರದ ಸಂದರ್ಭದ ಔಚಿತ್ಯವನ್ನು ಎಂದೂ ಮೀರದ ಶಿಸ್ತು ಬದ್ದ ಅರ್ಥಗಾರಿಕೆ. ಮತ್ತೊಬ್ಬರನ್ನು ಸೋಲಿಸುವ ಪ್ರಯತ್ನ ಎಲ್ಲಿಯೂ ಇರುವುದಿಲ್ಲ. ತಾನು ಸೋಲುವುದಿಲ್ಲ ಎಂಬುದರ ಪ್ರತಿಪಾದನೆ ಮಾತ್ರ ಅಲ್ಲಿರುತ್ತದೆ. ಮತ್ತೊಬ್ಬರನ್ನು ಸೋಲಿಸಿ ಗೆಲ್ಲುವುದಕ್ಕಿಂತಲೂ ತಾನು ಸೋಲದೆ ಇರುವುದು ದೊಡ್ಡಗುಣ. ಮುಂದೆ ಹೋಗುವವನ್ನು ಹಿಂದೆ ಹಾಕುವ ಧಾವಂತ ಇದ್ದರೆ ಹೇಗೇ ಆಗಲಿ ಆತ ಹಿಂದೆ ಬಿದ್ದರೆ ಸಾಕು ಎಂಬ ಹವಣಿಕೆ ಇರುತ್ತದೆ. ನಾವು ಮುಂದೆ ಹೋಗುವುದಕ್ಕಿಂತಲೂ ಆತನ ಹಾದಿಗೆ ತಡೆ ಒಡ್ಡಿದರೆ ಸಾಕು. ಹಾಗಾಗಿ ಇವರ ಅರ್ಥಗಾರಿಕೆ ಅದು ನಿಂತಲ್ಲಿಯೇ ನಿಲ್ಲುವುದಿಲ್ಲ.
ಹಲವರಿಗೆ ಹಲವು ವಿಧದಲ್ಲಿ ಸುಣ್ಣಂಬಳರು ಇಷ್ಟವಾಗಿಬಿಡುತ್ತಾರೆ. ರಂಗ ವೇರಿದರೆ ಎಲ್ಲೀಯೂ ಶಿಸ್ತನ್ನು ಮೀರುವುದಿಲ್ಲ. ತೀರಾ ಲೌಕಿಕ ಮಟ್ಟಕ್ಕೆ ಇಳಿಯುವುದಿಲ್ಲ. ಪಾತ್ರದ ಔಚಿತ್ಯ ಮೀರಿದ ಸಂದರ್ಭಗಳೇ ಸಿಗುವುದಿಲ್ಲ. ತಾಳ ಮದ್ದಲೆ ಇವರು ನೆಟ್ಟಗೆ ಕುಳಿತು ಬಿಡುತ್ತಾರೆ. ಆ ಒಂದು ಭಂಗಿ ಸಾಕು ಎದುರಿಗಿದ್ದವರನ್ನು ಎಚ್ಚರಿಸಿಬಿಡುತ್ತದೆ. ರಸಿಕತನದ ಪಾತ್ರವರಲಿ, ಹಾಸ್ಯವಿರಲಿ, ಎಲ್ಲವನ್ನೂ ಮೀರಿದ ಅತಿಗಂಭೀರವಿರಲಿ, ರುದ್ರ ಕ್ರೌರ್ಯ ಏನೂ ಇರಲಿ ಎಲ್ಲವನ್ನೂ ಏಕಪ್ರಕಾರವಾಗಿ ಬಿತ್ತರಿಸುವ ಇವರ ಅರ್ಥಗಾರಿಕೆಯ ಪ್ರತಿಕ್ಷಣವೂ ಅನುಭವಿಸುವುದಕ್ಕೆ ಉದ್ಯುಕ್ತವಾದಂತೆ ನಮ್ಮನ್ನು ಎಲ್ಲೂ ಬಿಟ್ಟುಕೊಡುವುದಿಲ್ಲ. ನನಗೆ ಇವರ ಗಂಭೀರ ಭಾವನಾತ್ಮಕ ಅರ್ಥಗಾರಿಕೆ ಬಹಳ ಇಷ್ಟವಾಗುತ್ತದೆ. ಅತ್ಯಂತ ದುಃಖಮಯ ಸನ್ನಿವೇಷದಲ್ಲಿ, ಕರ್ಣ, ಮಯೂರ ಧ್ವಜ, ವಿದುರ, ಹರಿಶ್ಚಂದ್ರ ಇಂತಹ ಪಾತ್ರಗಳು ಮನಸ್ಸಿನ ಭಾರವನ್ನು ಅಧಿಕವಾಗಿಸುತ್ತದೆ. ಅವರ ಅರ್ಥಗಾರಿಕೆಯ ಶೈಲಿಯಲ್ಲೂ ಅದ್ಭುತ ಆಕರ್ಷಣೆ ಇದೆ. ಯಕ್ಷಗಾನದ ದಂತ ಕಥೆ ಶ್ರೀ ಶೇಣಿಯವರ ಅರ್ಥಗಾರಿಕೆ ಕೇಳುವಾಗ, ಅಲ್ಲಿರುವ ಸ್ವರಭಾರ, ಏರಿಳಿತ ಬಹಳ ಆಕರ್ಷಕವಾಗಿರುತ್ತದೆ. ಬಹುಶಃ ಶೇಣಿಯವರ ಅರ್ಥಗಾರಿಕೆ ಇಷ್ಟವಾಗುವುದು ಆ ಸ್ವರ ಭಾರಕ್ಕೆ, ಜತೆಗೆ ಅಲ್ಲಿರುವ ವಿಚಾರಗಳಿಗೆ. ಶೇಣಿಯವರ ಆಸ್ತಿ ಎಂದರೆ ಆ ಸ್ವರ ಭಾರ. ವಿಷಯಗಳು ಹೇಗೆ ಇರಲಿ ಅದು ಮನಸ್ಸಿಗೆ ನಾಟಿಕೊಳ್ಳುವುದು ಆ ಶೈಲಿಯಿಂದ. ಬಹುಶಃ ಈ ಎಲ್ಲ ಗುಣಗಳು ಆ ಸ್ವರಭಾರ ಸುಣ್ಣಂಬಳರ ಅರ್ಥಗಾರಿಕೆಯಲ್ಲಿ ಯೆಥೇಚ್ಚವಾಗಿದೆ. ಎರುವ ಇಳಿಯುವ ಮನಸ್ಸಿಗೆ ನಾಟಿಕೊಳ್ಳುವ ಅವರ ಸ್ವರಭಾರ ಒಂದು ಆಸ್ತಿಯಾದರೆ, ಇನ್ನೊಂದು ಅರ್ಥಗಾರಿಕೆಯಲ್ಲಿ ಇವರು ಉಪಯೋಗಿಸುವ ಶಬ್ದಗಳು. ಅಲ್ಲಿಗೆ ಹಾಗೆ ಹೇಳಿದರೆ ಸರಿ...ಯಾವುದೋ ಒಂದು ಶಬ್ದದ ಬದಲು ಈ ಶಬ್ದವನ್ನು ಉಪಯೋಗಿಸಿದರೆ ಹೇಗೆ ಎಂದು ನಾವು ಕಲ್ಪಿಸಿದರೂ..ಇಲ್ಲ ಅದಕ್ಕೆ ಅದುವೇ ಸರಿ , ಅವರು ಉಪಯೋಗಿಸುವ ಶಬ್ದಗಳಿಗೆ ಪರ್ಯಾಯ ಯಾವ ಶಬ್ದವೂ ಹೊಂದಿಕೊಳ್ಳದೆ ಅವರ ಪ್ರಯೋಗಕ್ಕೆ ಮಾರು ಹೋಗಲೇ ಬೇಕು. ಅಯಾಚಿತವಾಗಿ ಅದನ್ನು ಇವರು ಹೇಗೆ ಉಪಯೋಗಿಸುತ್ತಾರೆ ಎಂದು ಅಚ್ಚರಿಯಾಗುತ್ತದೆ. ಬರೆದಿಟ್ಟ ಸಂಭಾಷಣೆಯಂತೆ, ಸುಂದರ ಕಾವ್ಯದಂತೆ ಆ ಶಬ್ದಗಳನ್ನು ಬದಲಿಸಿಬಿಡುವುದು ಕಷ್ಟವಾಗುತ್ತದೆ.
ಸಾಮಾನ್ಯವಾಗಿ ಒಬ್ಬ ಕಲಾವಿದ ಪ್ರಸಿದ್ಧಿಗೆ ಬರುವಾಗ ಅವರಂತೆ ಇವರು ಅಂತ ಉತ್ತರದಾಯಿತ್ವವನ್ನು ನಾವೇ ಹೇರಿ ಬಿಟ್ಟು ಉತ್ತರಾಧಿಕಾರಿಯನ್ನಾಗಿ ಮಾಡಿಸುತ್ತೇವೆ. ಎಲ್ಲೋ ಆರಂಭವಾದ ರೇಖೆ ಅಲ್ಲಿಂದ ಮತ್ತೆ ಮುಂದುವರೆಸಿದ ಹಾಗೆ ಇವರನ್ನು ಶೇಣಿಯವರಿಗೆ ಹೋಲಿಸಿದ್ದು ಇದೆ. ಆದರೆ ಒಬ್ಬೊರನ್ನು ಒಬ್ಬರಿಗೆ ಹೋಲಿಸುವುದಕ್ಕಿಂತಲೂ ಅವರ ವೈಶಿಷ್ಟ್ಯವನ್ನು ಗಮನಿಸಬೇಕು. ಇವರ ಅರ್ಥಗಾರಿಕೆ ಎಲ್ಲಿಂದಲೋ ಆರಂಭವಾದ ರೇಖೆಯಲ್ಲ. ಆ ರೇಖೆಯನ್ನು ಇವರೇ ಎಳೆದು ತಂದಿದ್ದಾರೆ. ಇನ್ನು ಯಾರು ಇದನ್ನು ಮುಂದೆ ಎಳೆಯುತ್ತಾರೋ ಗೊತ್ತಿಲ್ಲ. ಆದರೆ ಅದನ್ನು ಎಳೆಯುವುದು ಅನುಸರಿಸುವುದು ಅಷ್ಟು ಸುಲಭವಲ್ಲ. ಅದು ಸುಣ್ಣಂಬಳವಿಶ್ವೇಶ್ವರ ಭಟ್ಟರ ವೈಶಿಷ್ಟ್ಯತೆ.
ಬದುಕಿನ ಆರಂಭದಲ್ಲಿ ಒಂದು ಪ್ರಶ್ನೆ ಏಳುತ್ತದೆ. ಆರು ಹತ್ತುವರು ಈ ಬದುಕೆಂಬ ಪರ್ವತವನ್ನು. ಆರು ಹತ್ತುವ ಪ್ರಶ್ನೆಗೆ ಅರುವತ್ತು ಆಗುವಾಗ ಉತ್ತರ ಸಿಗುತ್ತದೆ. ಶ್ರೀಯುತರಿಗೆ ಅರುವತ್ತರ ಸಂಭ್ರಮದ ಶುಭ ಹಾರೈಕೆಗಳು. ವಿಶ್ವೇಶ್ವರ ಭಟ್ಟರು ವಿಶ್ವವ್ಯಾಪಿಯಾಗಲಿ.
Tuesday, May 28, 2024
ಬದಲಾವಣೆಯ ಪಾಠ
ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಿನಿಮಾಕ್ಕೆ ಹೋಗಬೇಕೆಂದರೆ ಎರಡು ವಾರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅದಕ್ಕೆ ಸಮಯ ಹೊಂದಿಸಿ ಕೆಲಸದ ಒತ್ತಡ ಎಲ್ಲ ಮುಗಿಸಿ ಮನೆ ಮಂದಿಯ ಎಲ್ಲರ ಸಮಯ ಹೊಂದಿಸಿ ಒಂದು ಸಿನಿಮಾಕ್ಕೆ ಕುಟುಂಬ ಸಹಿತ ಹೋಗುವುದು, ಬರುವಾಗ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದು ಮನೆಗೆ ಬರುವುವುದೆಂದರೆ ಅದೊಂದು ಸಂಭ್ರಮ. ಆನಂತರ ಒಂದೆರಡುವಾರ ನೋಡಿದ ಸಿನಿಮಾದ ಪರಿಣಾಮ ಹಾಗೇ ಇದ್ದುಬಿಡುತ್ತಿತ್ತು. ಸಿನಿಮಾದ ಕುರಿತು ಚರ್ಚೆ. ಹೀಗೆ ಒಂದು ಸಿನಿಮಾ ವೀಕ್ಷಣೆ ಎಂದರೆ ಅದೊಂದು ಸಂಭವ... ಆದರೆ ಈಗ? ಹಾಗಿತ್ತು ಎಂದು ಈಗಿನ ಮಕ್ಕಳಿಗೆ ಹೇಳಿದರೆ ಅಚ್ಚರಿ ಮಾತ್ರವಲ್ಲ, ನಮ್ಮದು ಮೂರ್ಖತನವಾಗಿಬಿಡುತ್ತದೆ. ಸಿನಿಮಾದ ಬಗ್ಗೆ ಹಾಗೆ ಸಂಭವಿಸುವುದಕ್ಕೆ ಏನುಂಟು?
ಇನ್ನು ನಮ್ಮೂರಲ್ಲಿನ ಯಕ್ಷಗಾನ ಬಯಲಾಟದ ವಿಷಯ ಇನ್ನಷ್ಟು ರೋಚಕ. ಸಿನಿಮಾದಂತೆ ಒಂದು ಹೊತ್ತಿನ ಕಾರ್ಯಕ್ರಮವಲ್ಲ. ರಾತ್ರಿ ಯಿಂದ ಬೆಳಗಿನ ತನಕದ ಒಂದು ಬಿಡು ಬೀಸಿನ ಕಾರ್ಯಕ್ರಮ. ಒಂದೆರಡು ತಿಂಗಳ ಮೊದಲೆ ಊರ ಹೋಟೆಲ್ ಅಂಗಡಿಗಳ ಬಾಗಿಲಿಗೆ ಆಟದ ನೋಟೀಸು ಅಂಟಿಸಿಬಿಡುತ್ತಾರೆ. ಆಗಲೇ ದಿನ ಲೆಕ್ಕ ಹಾಕಿ ಆಟಕ್ಕೆ ಹೋಗುವ ಕಾರ್ಯಕ್ರಮದ ರೂಪು ರೇಷೆ ಸಿದ್ದವಾಗುತ್ತದೆ. ಹಣವಿಲ್ಲದವರೇ ಹೆಚ್ಚಿರುವುದರಿಂದ ಖರ್ಚು ಹಿಡಿದಿಟ್ಟು ಹಣ ಉಳಿಸುವುದಕ್ಕೆ ತೊಡಗುತ್ತೇವೆ. ಚಿಲ್ಲರೆ ಖರ್ಚಾದರೂ ಹಾಗೆ ಕೂಡಿಡುವುದು ಒಂದು ಸಂಭ್ರಮ. ಯಕ್ಷಗಾನದ ಹುಚ್ಚು....ಸಿನಿಮಾದ ಹುಚ್ಚಿಗಿಂತಲೂ ದೊಡ್ಡ ಹುಚ್ಚು. ಅದು ದೀರ್ಘ ಅವಧಿಯ ನಶೆ.
ಆಗಿನ ಯಕ್ಷಗಾನ ಬಯಲಾಟಗಳು ಹಾಗಿತ್ತೋ ಅಲ್ಲ ಮನುಷ್ಯರಿಗೆ ಸಿಗುವ ಮನರಂಜನೆ ಸೀಮಿತವಾಗಿತ್ತೋ ಅಂತ ಹೇಳುವುದು ಕಷ್ಟವಾದರೂ....ಆಗಿನ ಯಕ್ಷಗಾನ ಬಯಲಾಟದ ಉತ್ಕೃಷ್ಟತೆಯನ್ನು ತಳ್ಳಿಹಾಕುವ ಹಾಗಿಲ್ಲ. ಒಂದಿಷ್ಟು ಕಣ್ಣೆವೆ ಮುಚ್ಚಿದರೂ ಎಲ್ಲಿ ಆಟದ ಅನುಭವ ಕಳೆದು ಹೋಗುತ್ತದೋ ಎಂಬ ಆತಂಕದಲ್ಲಿ ನಿದ್ದೆಯನ್ನು ಕಟ್ಟಿ ಕುಳಿತು ಮರುದಿನಕ್ಕೆ ನಿದ್ದೆಯನ್ನು ಕೂಡಿಸಿಟ್ಟು , ಮರುದಿನ ಅದನ್ನು ದಿನವಿಡಿ ವ್ಯಯಿಸುವ ಮಜವೇ ಬೇರೆ.
ಕ್ರಮೇಣ... ಈಗ ಬಾರದ ನಿದ್ದೆ ಬಂದು ಬಿಡುತ್ತದೆ. ಇಲ್ಲದ ಕೆಲಸ ನೆನಪಾಗಿಬಿಡುತ್ತದೆ. ಅಂತೂ ಯಕ್ಷಗಾನ ಅಲ್ಲವಾ ಅಂತ ಹೋದರೂ..... ಬುಡವನ್ನೂ ನೋಡುವುದಿಲ್ಲ ತುದಿಯೂ ನೋಡುವುದಿಲ್ಲ...ಸಿಕ್ಕಿದ ಸ್ನೇಹಿತರೊಂದಿಗೆ ಪಟ್ಟಾಂಗ ಹೊಡೆದು ಹೊರಗೆ ಸಿಕ್ಕಿದ ಚಟ್ಟಂಬಡೆ ಚಹ ಸವಿಯುವುದರಲ್ಲೇ ಅರ್ಧ ಆಟ ಕಳೆದುಬಿಡುತ್ತದೆ.
ಕಾಲಕ್ಷೇಪಕ್ಕೆ ಅಂದರೆ ಸಮಯ ಕಳೆಯಲು ಮನರಂಜನೆ ಅಂತಾದರೂ ಮೊದಲು ಸಮಯಾವಕಾಶ ಮಾಡಿಕೊಂಡು ಆಟಕ್ಕೆ ಮತ್ತೆ ಸಿನಿಮಾ ನೋಡಲು ಹೋಗುವುದಿತ್ತು. ಈಗ ಸಮಯ ಇದ್ದರೂ ಹೋಗುವ ಮನಸ್ಸಾಗುವುದಿಲ್ಲ ಕಾರಣಗಳು ಹಲವಿರಬಹುದು. ಕೈಯ ಬೆರಳ ತುದಿಯಲ್ಲೇ ಬೇಕಾದಷ್ಟು ಮನರಂಜನೆಯ ವೈವಿಧ್ಯಮಯ ಅಭಿರುಚಿಗಳಿರುತ್ತವೆ ಎಂಬುದು ಒಂದಾದರೆ ಈಗ ಮೊದಲಿನ ಉತ್ಕೃಷ್ಟತೆ ಇಲ್ಲ ಎಂಬುದು ಅಷ್ಟೇ ಮುಖ್ಯವಾಗುತ್ತದೆ.
ಪರಿವರ್ತನೆ ಜಗದ ನಿಯಮ. ಇದು ಜಗತ್ತು ಪರಿವರ್ತಿಸುತ್ತಿದೆಯೋ ಇಲ್ಲ ಮನುಷ್ಯ ಸ್ವತಃ ಪರಿವರ್ತಿಸುತ್ತಿದ್ದಾನೊ ಇಲ್ಲಾ ಇದು ಪ್ರಕೃತಿಯ ಸಹಜ ಧರ್ಮವೋ ಜಿಜ್ಞಾಸೆ ಜಿಜ್ಞಾಸೆಯಾಗಿಯೇ ಉಳಿದಿದೆ. ಇದರ ಪರಿಣಾಮವೋ ಎನೋ ನಾವು ನಮ್ಮ ಜನಾಂಗ ಅಂದರೆ ಈಗ ನಲ್ವತ್ತರಿಂದ ಮೇಲಿನ ವಯೋಮಾನದವರು ಅಗಾಧವಾದ ಬದಲಾವಣೆಯನ್ನು ಪರಿವರ್ತನೆಯನ್ನ ಪ್ರತ್ಯಕ್ಷವಾಗಿ ಕಂಡು ಹೋಗಿದ್ದೇವೆ. ಜಗತ್ತು ಬದಲಾದಂತೆ ಅದಕ್ಕೆ ಹೊಂದಿಕೊಂಡು ಹಲವಾರು ಬದಲಾವಣೆಗಳಾಗಿವೆ. ಮೊದಲು ಪತ್ರ ಬರೆದು ಪ್ರತಿಕ್ರಿಯೆಗೆ ತಿಂಗಳವರೆಗೆ ಕಾಯುತ್ತಿದ್ದವರು ಇಂದು ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. ಈ ಬದಲಾವಣೆ ಮನರಂಜನೆ ಮತ್ತು ಹವ್ಯಾಸಗಳಲ್ಲಿಯೂ ತನ್ನ ಪ್ರಭಾವವನ್ನು ಬೀರಿ ಜನರ ಅಭಿರುಚಿಯನ್ನೇ ಬದಲಾಯಿಸಿದೆ. ಮೊದಲು ಆಟದಲ್ಲಿ ವೇಷ ಹಾಕಿ ದಿನ ಕಳೆದು ಅದು ಪತ್ರಿಕೆಯಲ್ಲಿ ಬಂದು , ಆ ಪತ್ರಿಕೆ ಕಲಾವಿದನ ಕೈಗೆ ಸಿಗುವಾಗ, ಅಥವಾ ಯಾರೋ ಹೇಳುವಾಗ ಆತನಿಗೆ ಮಾಡಿದ ಪಾತ್ರವನ್ನು ನೆನಪಿಸುವ ಅಗತ್ಯ ಇರುತ್ತಿತ್ತು. ಈಗ ಹಾಗಿಲ್ಲ. ಪಾತ್ರ ಮಾಡಿ ವೇದಿಕೆಯಿಂದ ಕೆಳಗಿಳಿಯಬೇಕಾದರೆ ಅದಕ್ಕೆ ಪ್ರತಿಕ್ರಿಯೆ ಸಿಕ್ಕಿಬಿಡುತ್ತದೆ.
ಸಿನಿಮಾ ವೀಕ್ಷಣೆ ಇರಲಿ ಟಿ ವಿ ವೀಕ್ಷಣೆ ಇರಲಿ ಈಗ ಬಹಳ ಸಂಕೀರ್ಣವಾಗಿದೆ. ಮನೆಯಲ್ಲೇ ಟೀವಿ ಹಾಕಿ ಕೇಬಲ್ ಸಿಕ್ಕಿಸಿ ವಿದ್ಯುತ್ ಇದ್ರೆ ಮಾತ್ರ ನೋಡುವ ಕಾಲ ಕಳೆದಾಗಿದೆ. ಎಲ್ಲಿ ಬೇಕೆಂದರಲ್ಲಿ ಇವುಗಳನ್ನೆಲ್ಲ ನೋಡುವ ಅವಕಾಶಗಳಿವೆ. ಇದರಿಂದ ಈಗ ಉತ್ಕೃಷ್ಟತೆ ಎಂಬುದು ಅಷ್ಟು ಸುಲಭ ಸಾಧ್ಯವಾಗುವುದಿಲ್ಲ. ಕಲಾವಿದರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಈ ಎಚ್ಚರಿಕೆಯ ಘಂಟೆ ಬಹಳ ಹಿಂದೆಯೇ ಮೊಳಗಿತ್ತು, ಆದರೆ ಸಿನಿಮಾರಂಗ ಅದರಲ್ಲೂ ಕನ್ನಡ ಸಿನಿಮಾರಂಗವಾಗಲೀ ,ನಮ್ಮ ಯಕ್ಷಗಾನ ರಂಗವಾಗಲೀ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈಗ ನೋಡಬಹುದು, ಹಲವು ಸಿನಿಮಾ ಮಂದಿರಗಳು ಮುಚ್ಚುತ್ತಿವೆ. ಮೊದಲಿನಂತೆ ಸಿನಿಮಾಗಳು ತಯಾರಾಗುವುದಿಲ್ಲ. ವ್ಯಾಪಾರವನ್ನೇ ಗುರಿಯಾಗಿಸಿಕೊಂಡ ನಿರ್ಮಾಪಕರು ಇದಕ್ಕೆ ಭಂಡವಾಳ ಹೂಡುವುದಕ್ಕೆ, ಅಥವಾ ಸಾಲ ಕೊಡುವವರು ಸಾಲ ಕೊಡುವುದಕ್ಕೆ ಹಿಂಜರಿಯುತ್ತಾರೆ. ಕಾರಣ ಇಷ್ಟೆ ಉತ್ಕೃಷ್ಟತೆಯ ಕೊರತೆ. ಉತ್ತಮ ಸಿನಿಮಾಗಳು ಇಲ್ಲ. ದೊಡ್ಡ ದೊಡ್ಡ ತಾರಾಮೌಲ್ಯ ಇದ್ದ ತಾರೆಗಳ ಹೆಸರೆ ಮರೆತು ಹೋಗುವಷ್ಟು ಅವರ ಸಿನಿಮಾ ವಿರಳವಾಗಿ ಹೋಗಿದೆ. ಸಿನಿಮಾಮಂದಿರದ ಮುಂದೆ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವುದು ಅಪರೂಪವಾಗಿದೆ. ಜನರಿಗೆ ಪ್ರಜ್ಞೆ ಬಂದಿದೆ. ಬೇರೆ ಭಾಷೆಯ ವೈವಿಧ್ಯ ಮಯ ಸಿನಿಮಾಗಳು ಭಾಷೆ ತಿಳಿಯದೇ ಇದ್ದರೂ ನೋಡುವ ಅವಕಾಶಗಳಿವೆ. ಹಾಗಾಗಿ ಈ ಎಚ್ಚರಿಕೆಯ ಘಂಟೆಯ ಸದ್ದನ್ನು ಮೊದಲು ಕೇಳಿಸಿಕೊಳ್ಳಲಿಲ್ಲ. ಈಗ ಅದು ಕಠೋರವಾಗಿ ಅನುಭವಕ್ಕೆ ಬಂದಿದೆ. ಕೋವಿಡ್ ಸಮಯದಲ್ಲಿ ಸಿನಿಮಾರಂಗ ಮುಚ್ಚಲ್ಪಟ್ಟಾಗ ಸಿನಿಮಾ ತಂತ್ರಜ್ಞರು ಕಲಾವಿದರು ಹೊಟ್ಟೆ ಪಾಡು ಎಂದು ಹುಯಿಲಿಟ್ಟದ್ದನ್ನು ಕಂಡಿರಬಹುದು. ಆದರೆ ಈಗ ಕೋವಿಡ್ ಅಲ್ಲದೇ ಇದ್ದರೂ ಹೊಟ್ಟೆಪಾಡಿನ ಬಗ್ಗೆ ಮಾತನಾಡುವ ಧೈರ್ಯ ಯಾವ ಕಲಾವಿದನಿಗೂ ಇಲ್ಲ. ಯಾಕೆಂದರೆ ಕಲೆಗೆ ಮಾಡಿದ ಅಪಚಾರ ಅದನ್ನು ಅನುಭವಿಸುವ ಹಂತ ಬಂದಿದೆ. ಆಗ ಹೊಟ್ಟೆ ಪಾಡು ಏನು ಮಾಡೋಣ ಅಂತ ಕಲಾರಂಗವನ್ನು ಭಿಕ್ಷಾ ಪಾತ್ರೆ ಮಾಡಿಕೊಂಡವರು ಈಗ ಅಕ್ಷರಶಃ ಭಿಕ್ಷಾ ಪಾತ್ರೆಯನ್ನು ಕೈಗೆ ಎತ್ತಿಕೊಳ್ಳುವ ಸ್ಥಿತಿ ಬಂದಿದೆ. ಸಿನಿಮಾ ರಂಗ ಮುಚ್ಚುಕುರಿತು ಚಿಂತನೆ ನಡೆದಿದೆ.
ಯಕ್ಷಗಾನವೂ ಸಿನಿಮಾ ಕ್ಕಿಂತ ಏನೂ ಭಿನ್ನವಾಗಿಲ್ಲ. ಹೊಟ್ಟೆ ಪಾಡು ಅಂತ ಎಲ್ಲವನ್ನೂ ರಾಜಿ ಮಾಡಿಕೊಂಡು ಅಪಸವ್ಯಗಳನ್ನೇ ಸವ್ಯಗಳಾಗಿಸಿ ಕಲೆ ಭಿಕ್ಷೆಯನ್ನು ಕೊಡುತ್ತಿದೆ ಎಂಬುದನ್ನೇ ಮರೆತು ವರ್ತಿಸಿದವರು ಈಗ ಪಾಠ ಕಲಿಯುತ್ತಿದ್ದಾರೋ ಇಲ್ಲವೋ ಅಂತೂ ಆ ಹಂತಕ್ಕೆ ಬಂದು ತಲುಪಿದ್ದಾರೆ. ಹೇಗಿತ್ತು ಯಕ್ಷಗಾನ ಅಂತ ಕೇಳಿದರೆ ಪಾಪ ಹೊಟ್ಟೆ ಪಾಡು....ಎಂದು ಪ್ರೇಕ್ಷಕ ಸುಮ್ಮನಾಗಿಬಿಡುತ್ತಾನೆ. ಮೊದಲು ಬಸ್ ಸ್ಟಾಂಡ್ ನಲ್ಲಿ ಬಸ್ ನಲ್ಲಿ ಹೋಗಿ ಕುಳಿತಾಗ ಭಿಕ್ಷುಕರು ಯಾವುದೋ ಹಾಡನ್ನು ವಿಕಾರವಾಗಿ ಹಾಡುತ್ತಾ ಕೈ ಒಡ್ಡುತ್ತಿದ್ದರು. ಈಗಲೂ ಇರಬಹುದು. ಅವರ ಹಾಡಿಗೆ ವ್ಯಾಕರಣ ಇಲ್ಲ, ಆ ಸಂಗೀತಕ್ಕೆ ಶ್ರುತಿಯೂ ಬೇಡ ತಾಳವೂ ಬೇಡ. ಹಾಗೆಲ್ಲ ಇದ್ದರೂ ಯಾರೂ ಅದನ್ನು ವಿಚಾರಿಸುವುದೂ ಇಲ್ಲ, ಹತ್ತಿರ ಬಂದು ಹಾಡು ಹೇಳಿದರೆ ಅದನ್ನು ಕೇಳಿಸುವ ಮನಸ್ಸೂ ಇರುವುದಿಲ್ಲ. ಹಾಗೇ ಭಿಕ್ಷೆ ಹಾಕಿ ಬಿಡುತ್ತಿದ್ದರು. ಇಷ್ಟಾದರೂ ನಾನು ಗಂಟಲು ಹರಿದು ಚಿಲ್ಲರೆ ಸಂಪಾದಿಸಿದ್ದೇನೆ ಎಂದು ಭಿಕ್ಷುಕ ತಿಳಿಯುತ್ತಿದ್ದ. ಭಿಕ್ಷುಕನಿಗೆ ಯಾವ ಪರಿಮಿತಿಯೂ ಇಲ್ಲ. ಆದರೆ ನಾಗರೀಕ ಸಮಾಜದಲ್ಲಿ ಎಲ್ಲ ಪರಿಮಿತಿಗಳು ಇದ್ದರೂ ಸಹ ಕಲಾವಿದ ಹೊಟ್ಟೆ ಪಾಡಿಗೆ ಅಂತ ಕಲೆಯನ್ನು ಭಿಕ್ಷುಕನಿಗಿಂತಲೂ ದೊಡ್ಡ ಭಿಕ್ಷಾಪಾತ್ರೆಯನ್ನಾಗಿ ಮಾಡಿಬಿಟ್ಟ. ಇದನ್ನು ಒಪ್ಪಿಕೊಳ್ಳುವುದಕ್ಕೆ ಆತ್ಮಾಭಿಮಾನ ಎದುರಾಗಬಹುದು. ಆದರೆ ವಾಸ್ತವ ಹಾಗೇ ಇದೆ. ಮೊದಲು ಕಲಾವಿದ ಔದಾಸಿನ್ಯ ಮೆರೆದರೆ ಈಗ ಸರದಿ ಪ್ರೇಕ್ಷಕನದ್ದು. ಯಾಕೆಂದರೆ ಪ್ರೇಕ್ಷಕನಿಗೆ ಹಲವಾರು ಅವಕಾಶಗಳಿದ್ದರೆ...ಕಲಾವಿದನಿಗೆ ಇದ್ದ ಒಂದು ಅವಕಾಶವೂ ಮುಚ್ಚುವ ಹಂತ ತಲುಪಿದೆ.
ಮೊದಲು ಆಟದ ಟಿಕೇಟ್ ಯಾವುದೋ ಹೋಟೇಲಲ್ಲಿ ಇಟ್ಟರೂ ಖರ್ಚಾಗಿ ಹೋಗುತ್ತಿತ್ತು. ಆಟದ ನೋಟೀಸು ಹಿಡಿದು ಬಂದರೆ ಕೆಲವು ಕಡೆ ಅದಕ್ಕೊಂದು ಗೌರವ ಇರುತ್ತಿತ್ತು. ನೋಟೀಸನ್ನು ಸಾದ್ಯಂತವಾಗಿ ಓದಿ ಅದರ ಬಗ್ಗೆ ಚರ್ಚಿಸುತ್ತಿದ್ದರು. ಹಾಗೆ ದುಡ್ದುಕೊಟ್ಟರೂ ಕಾರ್ಯಕ್ರಮಕ್ಕೆ ತಪ್ಪದೇ ಹೋಗಿಬಿಡುತ್ತಿದ್ದರು. ಈಗ ಯಾರೋ ಒಬ್ಬ ನೋಟೀಸು ಹಿಡಿದು ವಂತಿಗೆಗೆ ಬರುತ್ತಾನೆ ಎಂದರೆ ಕಣ್ಣು ತಪ್ಪಿಸಿಕೊಳ್ಳುತ್ತಾರೆ. ಒಂದು ವೇಳೆ ಕೈಗೆ ನೋಟಿಸೂ ಕೊಟ್ಟರೂ ಅದನ್ನು ಓದದೇ ಕೈಗೆ ಒಂದಷ್ಟು ದುಡ್ಡು ಎಸೆದು ಸುಮ್ಮನಿದ್ದು ಬಿಡುತ್ತಾರೆ. ನೋಟಿಸು ಕೊಟ್ಟಾಗ ನಮಗೆ ಬರುವುದಕ್ಕೆ ಸಮಯ ಇಲ್ಲಾ ಕಾರ್ಯಕ್ರಮ ಒಳ್ಳೆದಾಗಲೀ ಎಂದು ಮುಖ ಸ್ತುತಿಗೆ ಹೇಳಿ ಬಂದದ್ದಕ್ಕೆ ಭಿಕ್ಷೆ ಕೊಟ್ಟು ಕಳುಹಿಸಿಬಿಡುತ್ತಾರೆ.
ಕಲಾವಿದರು ಸಭೆಯನ್ನು ಪ್ರೇಕ್ಷಕನನ್ನು ಆಳುವ ಕಾಲವಿತ್ತು. ಈಗ ಆ ಅಧಿಕಾರ ದಂಡ ಪ್ರೇಕ್ಷಕನ ಕೈಯಲ್ಲಿದೆ. ವಾಸ್ತವದಲ್ಲಿ ಅದು ಹಾಗೆಯೇ ಇರಬೇಕು. ಆದರೆ ಅದು ಕಲೆಯ ಮೌಲ್ಯವನ್ನು ಹೊಂದಿಕೊಂಡು ಆಗಿರಬೇಕು. ಯೋಚಿಸಬೇಕು ಕ್ರಿಕೇಟ್ ನಲ್ಲಿ ಯಾವಾಗಲೂ ಬ್ಯಾಟ್ಸ್ ಮನ್ ಹೆಚ್ಚು ಮುಂದೆ ಇರುತ್ತಾನೆ, ಬೌಲರ್ ಯಾವಾಗಲು ಒಂದಷ್ಟು ಹಿಂದೆ. ಆದರೆ ಯೋಚಿಸಿದರೆ, ಬ್ಯಾಟ್ಸ್ ಮನ್ ಗೆ ಒಂದೇ ಬಾಲ್ ಸಾಕು ಔಟ್ ಆಗಿ ಪಂದ್ಯದಿಂದ ಹೊರಬೀಳಲು. ಅದೇ ಸಮಯ ಬೌಲರ್ ಗೆ ಕಡಿಮೆ ಎಂದರೆ ಆರು ಬಾಲ್ ಗಳ ಅವಕಾಶಗಳಿರುತ್ತವೆ. ಬ್ಯಾಟ್ಸ್ ಮನ್ ಒಂದೇ ಬಾಲ್ ಗೆ ಹೊರನಡೆದರೆ ಕೊನೆಯಲ್ಲಿ ಬರುವುದು ಬೌಲರ್. ಹೀಗೆ ಅವಗಣಿಸಲ್ಪಟ್ಟದ್ದು ಮುನ್ನೆಲೆಗೆ ಬಂದೇ ಬರುತ್ತದೆ. ಅದನ್ನೇ ಸಮಯ ಎನ್ನುವುದು. ಅದನ್ನೆ ಬದಲಾವಣೆ ಎನ್ನುವುದು. ಒಂದಿಷ್ಟಾದರೂ ತಾವು ಮಾಡುವ ವೃತ್ತಿಗೆ ವೃತ್ತಿ ಧರ್ಮ, ತಮಗೆ ಅನ್ನ ಹಾಕಿದ ಕೈಗೆ ಕೃತಜ್ಞತೆಯ ಭಾವ ಇರುತ್ತಿದ್ದರೆ, ಈಗ ಹೀಗಾಗುತ್ತಿತ್ತೊ ಇಲ್ಲವೋ ಆದರೆ ನಾವು ಪ್ರಾಮಾಣಿಕವಾಗಿ ನ್ಯಾಯ ಸಲ್ಲಿಸಿದ್ದೇವೆ ಎಂಬ ಆತ್ಮ ತೃಪ್ತಿಯಾದರೂ ಸ್ವಂತವಾಗಿ ಇರುತ್ತಿತ್ತು. ಈಗ ಅದಕ್ಕೂ ಪಶ್ಚಾತ್ತಾಪ ಹಂತವೂ ಸ್ವಯಂಕೃತ ಅಪರಾಧದಿಂದ ಕಳೆದು ಹೋಗಿದೆ.
Thursday, November 30, 2023
ವಿಷಾದೋಕ್ತಿ
ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ ಸಂದರ್ಭ ಬಂತು. ಕಾರಣ ಆದಿನದ ಪ್ರಸಂಗ ಬೇಡರಕಣ್ಣಪ್ಪ. ಅವರ ಜತೆ ಆತ್ಮೀಯ ಸಲುಗೆ ಇತ್ತು. ಅವರಲ್ಲಿ ನಿಮಗೆ ಬೇರೆ ಪ್ರಸಂಗ ಸಿಗಲಿಲ್ಲವಾ ಎಂದು ಕೇಳಿದೆ. ಅವರು ನಗುತ್ತಾ ಹೇಳಿದರು ಇವರು ಕೊಡುವ ಎರಡು ಸಾವಿರಕ್ಕೆ ನಾನು ತಡ್ಪೆ (ಗೆರಸೆ) ಕಿರೀಟ ತರುವುದಕ್ಕೆ ಸಾಧ್ಯವಾ ಮಾರಾಯ? ಅವರು ಹೇಳಿರುವುದು ವಾಸ್ತವ. ಕಡಿಮೆ ಖರ್ಚಿನಲ್ಲಿ ಅಂತ ಆಗುವಾಗ ಎಲ್ಲದರಲ್ಲೂ ಒಂದಷ್ಟು ಹೊಂದಾಣಿಕೆಯಾಗುತ್ತದೆ. ಯಕ್ಷಗಾನ ಆಗ ಕೇವಲ ಯಕ್ಷಗಾನವಾಗುವುದಿಲ್ಲ. ಅದು ಏನೆಲ್ಲವಾಗಿ ಬದಲಾಗಿ ಪರಿಸ್ಥಿತಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ. ಯಕ್ಷಗಾನ ಏನಿಲ್ಲದೆಯೂ ಆಗಿಬಿಡುತ್ತದೆ. ಇದು ಹಾಸ್ಯ ವಿಡಂಬನೆಗೆ ಹೇಳುವುದಾದರೂ ಯಕ್ಷಗಾನಕ್ಕೆ ಸಂಬಂಧಿಸಿ ಇದು ವಿಷಾದ ಭಾವನೆಯನ್ನು ತಳೆಯುವಂತೆ ಮಾಡುತ್ತದೆ.
ಯಕ್ಷಗಾನ ಅದೆಷ್ಟು ಮಧುರವಾದ ಶಬ್ಧ? ಹೆಸರಿನಲ್ಲೇ ಅದರ ಮಾರ್ದವತೆ ಅನುಭವಕ್ಕೆ ಬರುವ ರೀತಿ ಬಹುಶಃ ಯಾವ ಕಲೆಯ ಹೆಸರಲ್ಲಿಯೂ ಕಂಡುವರುವುದಿಲ್ಲ. ಆ ಮಾರ್ದವತೆಯ ಮಿಡಿತ ಅದರಲ್ಲಿ ಸೇರಿಕೊಂಡ ರೀತಿ ಅದರ ಸುಸಂಸ್ಕೃತ ಗುಣಗಳಿಂದ. ಈ ಗುಣಗಳು ನಮ್ಮ ಕಣ್ಣಳತೆಯ ಅವಧಿಯಲ್ಲಿ ಆಗಿ ಹೋದ ಆವಿಷ್ಕಾರ. ಈಗ ಅದು ನಮ್ಮ ಕಣ್ಣೆದುರಿಗೇ ಕುಸಿಯುತ್ತಿರುವ ಅನುಭವ. ಯಕ್ಷಗಾನವನ್ನು ಉಸಿರಾಗಿ ಕಂಡ ಹಿರಿಯರ ಅನಿಸಿಕೆ ಇದು. ಯಾಕೆಂದರೆ ಇದೆಲ್ಲದಕ್ಕೂ ಸಾಕ್ಷಿಯಾಗಿ ನಿಂತವರು. ಈಗ ಇದು ಬೇಡ ಎಂದು ದೂರ ಉಳಿದರೂ ಅದು ಯಾವುದೋ ರೂಪದಲ್ಲಿ ಮೈಮೇಲೆ ಬಿದ್ದಂತಾಗುತ್ತದೆ. ಕೊಡವಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಹಾಯಕತೆ.
ಬಾಲ್ಯದಿಂದಲೇ ಕಲೆ ಎಂದರೆ ಅದು ಯಕ್ಷಗಾನ ಎಂಬಂತೆ ಸರ್ವವ್ಯಾಪಿಯಾಗಿ ಮನಸ್ಸಿನಲ್ಲಿ ಅಚ್ಚೊತ್ತಿರುವುದಕ್ಕೆ ಅದನ್ನು ಸರಳವಾಗಿ ಆಸ್ವಾದಿಸುವುದಕ್ಕೆ ಇದು ಅತಿ ಸೂಕ್ತವಾಗಿತ್ತು.ಕಠಿಣವಾದ ಜ್ಞಾನದ ಅರಿವಿನ ಅವಶ್ಯಕತೆ ಇಲ್ಲದ ಪಾಮರನೂ ಪಂಡಿತನೂ ಏಕರೀತಿಯಲ್ಲಿ ಅನುಭವಿಸ ಬಲ್ಲ ಗುಣ ಆ ಸೆಳೆತ ಅತಿಶಯವೇನೂ ಅಲ್ಲ. ಆದರೆ ಅದೇ ವ್ಯಾಪಕತೆ ಅದಕ್ಕೆ ಈಗ ಮುಳುವಾಗಿ ಪರಿಣಮಿಸಿದೆ. ಯಕ್ಷಗಾನದ flexibility ಅದಕ್ಕೆ ಏನೂ ಸೇರಿಸಬಲ್ಲ ಆವಿಷ್ಕಾರವನ್ನು ತಂದಿದೆ.
ನನಗೆ ಯಕ್ಷಗಾನದ ಸರಳತೆ ಅರ್ಥವಿಸಿದ ಒಂದು ಬಗೆಯಾದರೆ ಅದರಲ್ಲಿನ ವಿಷಯ ಮೌಲ್ಯ ಅರಿವಾದ ನಂತರ ಅದು ಹವ್ಯಾಸವಾಯಿತು. ಬರಿದೇ ಓರ್ವ ಸಾಮಾನ್ಯ ಪ್ರೇಕ್ಷಕನಿಗೂ ತುಂಬಿ ಕೊಡಬಲ್ಲ ಜ್ಞಾನ ಸಂಪತ್ತು ಇಲ್ಲಿ ಸಿಗುವಾಗ ಇದು ಕೇವಲ ಕಲೆ ಹವ್ಯಾಸಕ್ಕೆ ಸೀಮಿತವಾಗಲಿಲ್ಲ. ಇದು ಅಧ್ಯಯನವಾಯಿತು.
ಈಗ ನಮ್ಮ ಅರಿವು ಹೆಚ್ಚಾಯಿತೋ ಇಲ್ಲ ಭ್ರಮಾಧೀನರಾದೆವೋ ಸಂದೇಹ ಪಡುವಂತಾಗಿದೆ. ಯಕ್ಷಗಾನದ ಮೌಲ್ಯ ಕುಸಿಯುವಾಗ ಇನ್ನು ಇದರಲ್ಲಿ ಏನು ಉಳಿದಿದೆ ಎಂಬ ನಿರಾಸಕ್ತಿಯಲ್ಲಿ ಭ್ರಮೆ ಕಳಚಿಬಿಡುತ್ತದೆ. ಕಲ್ಪವೃಕ್ಷದ ಟೊಂಗೆ ಕಳೆದು ಕೇವಲ ಕಂಬವಾದಂತೆ ಯಕ್ಷಗಾನ ನಿರ್ವಾಣವಾಗಿ ಇನ್ನು ಎನಿಲ್ಲ ಎಂಬ ಅಸಹಾಯಕತೆಯಲ್ಲಿ ಅಂಗಲಾಚುತ್ತದೆ. ಇನ್ನೂ ಏನಾದರೂ ಇದೆ ಎಂದು ಹೇಳಿದರೆ ಅದು ಕಸಿದು ತೇಗುವ ಮನೋಭಾವವಾಗುತ್ತದೆ. ಯಾಕೆಂದರೆ ಈಗಿನ ಮನೋವೃತ್ತಿ ಅದೇ ಬಗೆಯಲ್ಲಿದೆ.
ದಶಕಗಳ ಹಿಂದೆ ಅಂದರೆ ಬಾಲ್ಯದಲ್ಲಿ ಕಾಣುತ್ತಿದ್ದ ಯಕ್ಷಗಾನ ಕ್ರಮೇಣ ಹಾದಿ ಪಲ್ಲಟಗೊಂಡಂತೆ ಸಂಗೀತ ಅಳವಡಿಕೆಯಾಯಿತು. ಯಕ್ಷಗಾನದ ಕುಣಿತ ಅದು ಪರಿವರ್ತಿತ ನೃತ್ಯವಾಗಿ ಬದಲಾಗಿ ಯಕ್ಷಗಾನ ಕೇವಲ ಹೊರಾವರಣದಲ್ಲಿ ಉಳಿದು ಅದರ ಒಳಗೆ ಇನ್ನೇನೋ ನುಸುಳುವುದಕ್ಕೆ ತೊಡಗಿತು. ಆದರೆ ಏನೋ ಕಳೆದು ಹೋದ ಅನುಭವ.
ಸಂಗೀತ ಯಕ್ಷಗಾನ ಕಲೆಯ ಆಸ್ವಾದನೆಯ ಹವ್ಯಾಸವಾದರೆ ಬೆವಣಿಗೆ ಒಂದು ರೀತಿಯ ಖಾಸಗೀ ಹವ್ಯಾಸ. ಸಂಗೀತ ಹೀಗೆ ಕಿವಿಯಿಂದ ಹಾದು ಹೋದರೆ ಅದು ಗಾಢವಾದದ್ದು ಮಿತ್ರ ಸಿತ್ಲ ರಂಗನಾಥರ ಸಹವಾಸದಿಂದ, ಅದರಲ್ಲೂ ಶಾಸ್ತ್ರೀಯ ಸಂಗೀತ ಹೇಗೆ ಆಸ್ವಾದಿಸಬೇಕು ಎಂಬುದು ಇವರ ಸಹವಾಸದಲ್ಲಿ ಅರಿವಾಯಿತು. ರಾಗ ತಾಳ ಲಯದ ಬಗ್ಗೆ ಅದ್ಭುತ ಎನಿಸುವ ಮಾಹಿತಿ ಇವರಲ್ಲಿದೆ.
ಇಲ್ಲಿಂದ ನಂತರ ಸಂಗೀತಾಸಕ್ತಿ ಹೊಸರೂಪ ತಳೆದರೆ, ಯಕ್ಷಗಾನ ಅದು ರಕ್ತಗತವಾಗಿ ಬಂದಂತೆ ಸಹಜ ಪ್ರೇಕ್ಷಕನಾದರೂ ಯಕ್ಷಗಾನ ಹೇಗೆ ಆಸ್ವಾದಿಸಬೇಕು ಅದು ಏನು ಎಂದು ಸ್ಥೂಲವಾಗಿ ಅರಿವು ಒದಗಿ ಬಂದದ್ದು ವಿದ್ವಾಂಸ ಡಾ ಶ್ರೀ ರಾಘವ ನಂಬಿಯಾರರ ಸಂಪರ್ಕದಿಂದ. ಅದನ್ನು ಹೇಗೆ ಕಾಣಬೇಕು ಹೇಗೆ ಅನುಭವಿಸಬೇಕು ಎಂದು ಅರಿವಿಗೆ ಬಂತು. ಅದುವೆರೆಗೆ ಯಕ್ಷಗಾನದಲ್ಲಿ ಏನೋ ಕಳೆದುಕೊಂಡಿದ್ದೇವೆ ಎಂದು ಅನುಭವ ವೇದ್ಯವಾದರೂ ಅದು ಏನು ಎಂದು ತೋರಿಸಿಕೊಟ್ಟವರು ಇವರು.
ಗುರು...ಜ್ಞಾನವನ್ನು ಎಲ್ಲಿದೆ ಎಂದು ತೋರಿಸಿದಂತೆ ಏನು ಕಳೆದು ಕೊಂಡಿದ್ದೇವೆ ಎಂದು ತೋರಿಸಿ ಕೊಡುವುದು ಸಹ ಗುರು ಸದೃಶ ಪ್ರಚೋದನೆಯಾಗುತ್ತದೆ. ಇದು ಪರಿಪೂರ್ಣವಲ್ಲ ಎಂಬುದು ಖಾತರಿಯಾಗುವಾಗ ನಂತರ ಅಲ್ಲಿ ಆಸಕ್ತಿ ಸಹಜವಾಗಿ ಇಳಿಮುಖವಾಗಿಬಿಡುತ್ತದೆ.
ಯಕ್ಷಗಾನದಲ್ಲಿ ನನಗೆ ಇಷ್ಟವಾದವು ಎರಡು ಅಂಗ. ಒಂದು ಹಿಮ್ಮೇಳ, ಇನ್ನೊಂದು ಅರ್ಥಗಾರಿಕೆ.ಅದರಲ್ಲಿ ಅರ್ಥಗಾರಿಕೆ ಆಕರ್ಷಣೆಯನ್ನು ಕಳೆದುಕೊಂಡರೆ ಇನ್ನೊಂದು ಸಂಗೀತಮಯವಾಗಿ ಸತ್ವ ಹೀನವಾಗಿದೆ. ಸಂಗೀತ ಇಲ್ಲಿ ಅಸ್ವಾದಿಸುವುದಕ್ಕಿಂತ ಪರಿಶುದ್ಧ ಸಂಗೀತವನ್ನು ಮೂಲದಲ್ಲೇ ಅನುಭವಿಸಬಹುದು.
ಭಗ್ನ ವಾದದ್ದು ಹೇಗೆ ಆರಾಧನೆಗೆ ಅರ್ಹವಲ್ಲವೋ,ಹಾಗೇ ಒಡೆದ ಕನ್ನಡಿಯಲ್ಲಿ ಮುಖಬಿಂಬ ನೋಡಬಾರದು. ಹಾಗಾಗಿ ಅಪೂರ್ಣ ಎಂದು ಅರಿವಾದಾಗ ಮನಸ್ಸಿನ ಅತೃಪ್ತಿ ವೈರಾಗ್ಯ ರೂಪ ತಳೆದು ಬಿಡುತ್ತದೆ. ಭಗ್ನವಾದದ್ದನ್ನು ಉಪಯೋಗಿಸುವುದೆಂದರೆ ಅದು ದಾರಿದ್ರ್ಯದ ಸಂಕೇತ. ಈಗಂತೂ ಅನಿವಾರ್ಯತೆ ಇಲ್ಲ. ಮುಂದೆ ಪರಿಪೂರ್ಣತೆಯಲ್ಲಿ ಅನುಭವಿಸುವ ಆಶಯ ಮಾತ್ರ ಸದ್ಯಕ್ಕೆ ಉಳಿದಿದೆ. ಈಗ ಯಕ್ಷಗಾನ ಪ್ರೇಕ್ಷಕನ ಮಟ್ಟಿಗೆ ಅನಿವಾರ್ಯ ಸಂಗತಿಯಲ್ಲ ಎಂಬುದು ಸತ್ಯ. ಯಕ್ಷಗಾನ ಈಗ ವಿಷಾದ ದರ್ಶನವಾಗುತ್ತದೆ.
Monday, November 13, 2023
ಹೀಗೊಂದು ನಿಟ್ಟುಸಿರು
ಬಲಿಪ್ಪರ ಬಗ್ಗೆ ಹೇಳುವುದಕ್ಕೆ ನಾವುಗಳು ಎಷ್ಟು ಅರ್ಹರೋ ಎಂದು ಪ್ರತಿ ಸಲವೂ ಅನಿಸುತ್ತದೆ. ಆದರೆ ಅವರ ಮೇಲಿಟ್ಟ ಅಭಿಮಾನ ಹಕ್ಕು ಸ್ಥಾಪಿಸಿಬಿಡುತ್ತದೆ. ಹಲವು ನೆನಪುಗಳನ್ನು ಕಟ್ಟಿಕೊಟ್ಟ ಮಹಾವ್ಯಕ್ತಿತ್ವ. ಎಂಭತ್ತು ವರ್ಷವಾದರೂ ಅವರು ಮಗುವಿನಂತೆ ಜಗತ್ತನ್ನು ದಿಗ್ಭ್ರಮೆಯಿಂದ ನೋಡುತ್ತಿದ್ದರು. ನಮ್ಮ ಮನೆಗೆ ಬಂದಿದ್ದರು. ಆಗ ಸಣ್ಣ ಮಕ್ಕಳಂತೆ ಡಿಸ್ಕವರ್ ಚಾನಲ್ ಹಾಕಿಸಿ ನೋಡುತ್ತಿದ್ದರು. ಕಾರ್ಟೂನು ಕೂಡ ನೋಡುತ್ತಿದ್ದರು. ಜತೆಗೆ ಆಗ ಪುಟ್ಟಮಕ್ಕಳಾಗಿದ್ದ ನನ್ನ ತಮ್ಮನ ಮಕ್ಕಳು ಇರುತ್ತಿದ್ದರು. ಅವರಲ್ಲಿ ಅವರು ಮಾತನಾಡುವುದನ್ನು ಕೇಳಬೇಕು. ಗೊಗ್ಗರು ಧ್ವನಿಯಲ್ಲಿ, ಅದು ಯಾಕೆ ಹಾಗೆ ಇದು ಯಾಕೆ ಹೀಗೆ ....ಮಕ್ಕಳೂ ನಗುತ್ತಾ ಅವರೊಂದಿಗೆ ಬೆರೆತದ್ದು ಛೇ ವಯೋ ವೃದ್ಧ ಹೀಗೆಯೂ ಬೆರೆಯಬಹುದೇ. ವೃದ್ದರಾಗುವಾಗ ಒಂದು ಅಹಂಭಾವ ಇರುತ್ತದೆ. ಯಾಕೆಂದರೆ ನಾನೇ ಅದಕ್ಕೆ ಸಾಕ್ಷಿ. ಅದರೆ ಅದೊಂದು ಇಲ್ಲದ ವ್ಯಕ್ತಿತ್ವ.
ಯೋಗಾಭ್ಯಾಸದಲ್ಲಿ ಒಂದು ವಿಷಯ ತಿಳಿದು ಬರುತ್ತದೆ. ಯೋಗಿಯಾದವನು ಯಾರನ್ನೂ ವಿರೋಧಿಸುವುದಿಲ್ಲ. ಮಾತ್ರವಲ್ಲ ಯೋಗಿನ್ನು ಕಂಡರೆ ಯಾರೂ ಭಯ ಪಡುವುದೂ ಇಲ್ಲ. ಬಲಿಪ್ಪರು ಈ ವರ್ಗಕ್ಕೆ ಸೇರಿದವರು. ಹಾಗಾಗಿಯೇ ಅವರು ಅಷ್ಟು ಮುಗ್ಧರಾಗಿ ಸಾಧುವಾಗಿ ಬದುಕುವುದಕ್ಕೆ ಸಾಧ್ಯವಾಯಿತು.
ನಮ್ಮ ಮನೆಗೆ ಬಂದವರಿಗೆ ಒಂದು ಕೋಟು ಚಳಿಗೆ ಧರಿಸುವುದಕ್ಕೆ ಕೊಳ್ಳುವ ಮನಸ್ಸಾಯಿತು. ಸರಿ ನಾನು ಕಾರಿನಲ್ಲಿ ಮಲ್ಲೇಶ್ವರಂ ಕರೆದುಕೊಂಡು ಹೋದೆ. ಒಂದು ಖಾದೀ ಭವನದ ಅಂಗಡಿಯಲ್ಲಿ ಅವರೇ ಹೋಗಿ ಖರೀದಿಸಿದರು. ಅದನ್ನು ಆನಂತರ ಪ್ರತೀ ಕಾರ್ಯಕ್ರಮಗಳಲ್ಲಿ ಹೊರಗೆ ಹೋದಾಗ ಧರಿಸುವುದನ್ನು ಕಂಡಿರಬಹುದು. ಅದು ನನ್ನೆದುರೇ ಖರೀದಿಸಿದ ಕೋಟು. ಹಾಗೆ ಖರೀದಿಸಿ ಹೊರಬರುವಾಗ ನನಗೂ ಏನಾದರೂ ಬೇಕಾ ಎಂದು ಕೇಳಿದ್ದರು. ....ಹಾಗೆ ಬರಬೇಕಾದರೆ ಚೆಡ್ವಾಂಕ ಕೆಶೆಲ್ಲಿ ಕಂಕಣ್ಣುನ್ನ. ಕರಾಡಭಾಷೆಯಲ್ಲೇ ನಾವು ಮಾತನಾಡುತ್ತಿದ್ದದ್ದು. ಮಕ್ಕಳಿಗೆ ಏನಾದರು ತೆಗೆದುಕೊಳ್ಳಬೇಕು. ಹೌದು ಅವರ ಮನೆ ಎಂದರೆ ಸಣ್ಣ ಶಾಲೆ ಇದ್ದ ಹಾಗೆ ಮೊಮ್ಮಕ್ಕಳು. ಸರಿ ಒಂದು ಬೇಕರಿ ಎದುರು ಕಾರ್ ನಿಲ್ಲಿಸಿದೆ ಅವರ ಮಗನೂ ಇದ್ದರು. ಬಹುಶಃ ಶಶಿ ಆಗಿರಬೇಕು. ಒಂದು ದೊಡ್ಡ ತೊಟ್ಟೆ...ಐದು ಕಿಲೋ ಅಕ್ಕಿ ಹಿಡಿಯುವಂತಹ ದೊಡ್ಡ ತೊಟ್ಟೆ ಅದರಲ್ಲಿ ತುಂಬ ಬಿಸ್ಕತ್ತು ಸಿಹಿತಿಂಡಿ ಏನೇನೋ...ಅವರ ಮೊಮ್ಮಕ್ಕಳಿಗೆ ಹೀಗೊಂದು ಅಜ್ಜ ಸಿಕ್ಕಿದ್ದಾರಲ್ಲ ಎಂಬ ಭಾವನೆ. ಸರಿ ಮನೆಯಲ್ಲಿ ರಾತ್ರಿ ಊಟ ಮಾಡಿ ಅವರು ಹೊರಡುವಾಗ ಕೊಂಡು ತಂದ ಅಷ್ಟೂ ತಿಂಡಿಯ ತೊಟ್ಟೆ ನಮ್ಮ ಪುಟ್ಟ ಮಕಳ ಕೈಯಲ್ಲಿಟ್ಟು ನಿನಗೆ ಆಯ್ತಾ ಎಂದು ಹೇಳುವಾಗ ದಿಗ್ಭ್ರಮೆ ಗೊಂಡವನು ನಾನು. ಅದೇ ಮಗಳು ಈಗ ಕಾಲೇಜು ಹುಡುಗಿ. ಮೊನ್ನೆ ಬಲಿಪ್ಪರು ಅಗಲಿದಾಗ ನಾನು ಉತ್ತರ ಭಾರತ ಪ್ರವಾಸದಲ್ಲಿ ಅಲಹಾಬಾದ್ನ ಪ್ರಯಾಗದಲ್ಲಿದ್ದೆ. ಆದಿನ ರಾತ್ರಿ ಫೇಸ್ ಬುಕ್ ಅಲ್ಲ ಟಿವಿಯಲ್ಲಿ ಬಲಿಪ್ಪರ ನಿಧನದ ಸುದ್ದಿ ನೋಡಿ ಮುಂಜಾನೆ ಐದು ಘಂಟೆ ಮಗಳು ಫೋನ್ ಮಾಡಿದ್ದಳು. ದೊಡ್ಡಪ್ಪಾ ನಿಮಗೆ ತುಂಬ ನೋವಾಗಿರಬೇಕಲ್ಲ. ನನಗೆ ಕಣ್ಣೀರು ಬರ್ತ ಉಂಟು. ನಾನು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಎಲ್ಲಿಯ ನಮ್ಮ ಹೆಣ್ಣುಮಗಳು? ಎಲ್ಲಿಯ ಬಲಿಪ್ಪಜ್ಜ? ಮರುದಿನ ವಾರಣಾಶಿ ತಲುಪಿದ್ದೆ. ಇಲ್ಲಿಂದ ಕಾಶಿ ಯಾತ್ರೆ ಹೊರಡುವಾಗ ನಮಗೆ ಶ್ರೀಂಗೇರಿ ಜಗದ್ಗುರುಗಳು ಒಂದು ಆಶೀರ್ವಚನ ಸಂದೇಶ ಕಳುಹಿಸಿದ್ದರು. ಪಿತೃಗಳಿಗೆ ತರ್ಪಣ ಬಿಡಲು ಅಸಾಧ್ಯವಾಗಿದ್ದವರು, ಗಂಗೆಯಲ್ಲಿ ಮುಳುಗಿ ಮೂರು ಸಲ ಅವರನ್ನು ಸ್ಮರಿಸಿ ತರ್ಪಣ ಬಿಡಿ. ಅದು ಧಾರಾಳವಾಗಿ ಸಾಕಾಗುತ್ತದೆ. ಪಿತೃ ಆತ್ಮಕ್ಕೆ ಶಾಂತಿ ಲಭ್ಯವಾಗುತ್ತದೆ. ನಾನು ನನ್ನ ಅಪ್ಪನಿಗೆ ತರ್ಪಣ ಬಿಟ್ಟು ನಂತರ ಬಲಿಪ್ಪರನ್ನು ಸ್ಮರಿಸಿ ಅವರಿಗೂ ತರ್ಪಣ ಬಿಟ್ಟು ಬಿಟ್ಟೆ.
ನಾವು ನಮ್ಮ ಬಗ್ಗೆ ಹಲವು ದೂರುಗಳನ್ನು ನಿಂದನೆಯನ್ನು ಕೇಳಿರಬಹುದು. ಅಥವಾ ಇನ್ನೇಲ್ಲೋ ಯಾರೋ ನಮ್ಮ ಬಗ್ಗೆ ನಿಂದನೆ ಹೇಳಿರಬಹುದು. ಬೈದಿರಬಹುದು. ಆದರೆ ಯಾರಾದರೂ ಬಲಿಪ್ಪರ ಬಗ್ಗೆ ವೈಯಕ್ತಿಕವಾಗಿ ನಿಂದನೆಯ ಮಾತು ಹೇಳಿದ ಉದಾಹರಣೆ ಸಿಗಲಾರದು. ಇದೊಂದು ಸಂಗತಿ ಸಾಕು ಅವರ ವ್ಯಕ್ತಿತ್ವಕ್ಕೆ.
ಅವರ ಬಗ್ಗೆ ಹೇಳುವಾಗ ನಮ್ಮ ಬೆಂಗಳೂರಿನ ಸನ್ಮಾನ ಕಾರ್ಯಕ್ರಮ ನಮ್ಮ ಮಟ್ಟಿಗೆ ಅದು ದೊಡ್ಡದು ನಮ್ಮ ಎಲ್ಲ ಮಿತ್ರರಿಗೂ ಅದು ಗೊತ್ತಿದೆ. ಅವರ ಮೇಲಿನ ಗೌರವ ಅಭಿಮಾನಕ್ಕೆ ಅವರು ಸಹಿ ಹಾಕಿ ಅಂಗೀಕಾರ ಒತ್ತಿದ್ದರು. ಯಾಕೆಂದರೆ ನಾವು ಮರೆಯದಿರುವುದು ಬಿಡಿ, ಆದರೆ ಅವರೆಂದೂ ಮರೆಯಲಿಲ್ಲ, ಅದು ನಾನು ಅವರನ್ನು ಭೇಟಿಯಾಗುವಾಗಲೆಲ್ಲ ಅವರ ಕಣ್ಣು ಸಾರಿ ಹೇಳುತ್ತಿತ್ತು. ಒಂದು ಸಣ್ಣ ಸೇವೆಗೂ ಕೃತಜ್ಞತೆ ಸಲ್ಲಿಸುವ ದೊಡ್ಡ ಹೃದಯ ಅವರದು.
ಒಂದೆರಡು ಸಲ ಅವರ ಮನೆಗೆ ಹೋಗಿದ್ದೆ. ಅದು ಭಾಗವತರ ಮನೆ ಎಂದು ಅನಿಸಲಿಲ್ಲ. ನಮ್ಮ ಅತ್ಮೀಯ ಬಂಧುವೊಬ್ಬರ ಮನೆ ಅಂತ ಅನಿಸಿತ್ತು. ಪಾಯಸದ ಊಟ ಅಕ್ಕರೆಯಲ್ಲಿ ಹಾಕಿ, ಅವರ ಜತೆ ಕುಳಿತು ತಾಂಬೂಲ ಸವಿದ ನೆನಪು, ಹೋಗಲಿ ಹೊರಡುವಾಗ ಮನೆಯಲ್ಲೇ ಆದ ಎರಡು ಸೌತೆ ಮತ್ತೇನೋ ತರಕಾರಿ ತಂದು ಕೈಗೆ ಇತ್ತರು. ಅಲ್ಲಿ ಕ್ರಯ ಕೊಡ್ಬೇಡ್ವೋ ತೆಕ್ಕೊಂಡು ಹೋಗು.... ಆ ತರಕಾರಿ ತಿಂದು ಎಲ್ಲಿ ಹೋಯಿತೋ...ಆದರೆ ಆ ನೆನಪು ಇಂದಿಗೂ ತರಕಾರಿಯಂತೆ ಹಸಿರಾಗಿ ಇದೆ.
ಬಲಿಪ್ಪಜ್ಜ ಕುಳಿತಲ್ಲಿ ನಿಂತಲ್ಲಿ .....ಯಕ್ಷಗಾನದ ಜಪ ಮಾಡುವವರು. ಅವರಿದ್ದಲ್ಲಿ ಯಕ್ಷಗಾನದ ತನು ಗಂಧ ಹರಡದೇ ಇರುವುದಕ್ಕೆ ಸಾಧ್ಯವಿಲ್ಲ. ಅವರ ಅಸ್ತಿತ್ವದಲ್ಲಿ ಪರಂಪರೆಯ ಶಕ್ತಿ ಇದೆ. ಅವರ ಅಗಲಿಕೆ ಯಕ್ಷಗಾನದಲ್ಲಿ ಒಂದು ಶೂನ್ಯವನ್ನು ಸುತ್ತಿದೆ ಸತ್ಯ. ಇಂದು ಆ ಶೂನ್ಯತೆಯ ಅರಿವಿನ ಪ್ರಜ್ಞೆ ಉಂಟಾಗಿ ಜಾಗೃತವಾಗಬೇಕು. ಅದು ಅವರಿಗೆ ಸಲ್ಲಿಸುವ ದೊಡ್ಡ ಗೌರವ. ಅವರೂ ದೂರಾದರೂ....ನನಗೂ ಈಗ ಯಕ್ಷಗಾನಕ್ಕೆ ಹತ್ತಿರವಾಗುವುದಕ್ಕೆ ಯಾವ ಕಾರಣವೂ ಸಿಗುತ್ತಿಲ್ಲ. ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರವಿಷ್ಟೆ....ಮನಸ್ಸು ಬಲಿಪ್ಪರನ್ನು ಮತ್ತಷ್ಟು ನೆನಪಿಸುತ್ತದೆ. ಆ ಶೂನ್ಯ ಅದು ಶೂನ್ಯವಾಗಿ ಮತ್ತಷ್ಟು ವ್ಯಾಪಿಸಿದ ಅನುಭವವಾಗುತ್ತದೆ.
Tuesday, October 24, 2023
ಮಾರ್ನೆಮಿ ವೇಷವೂ ಯಕ್ಷಗಾನವೂ..
ಮಾರ್ನೆಮಿ ವೇಷವೂ ಯಕ್ಷಗಾನವೂ..
ಮಾರ್ನೆಮಿ(ಮಹಾನವಮಿ)ಗೆ ಯಕ್ಷಗಾನದ ವೇಷಹಾಕಿದವನ ವೇಷ ಕಳಚಿದ ವಿಷಯ ಓದಿ ಒಂದಷ್ಟು ಅನಿಸಿಕೆಗಳು ಬೇಡವೆಂದರೂ ನುಸುಳಿಬಿಟ್ಟಿತು. ವ್ಯಾಧಿಗೆ ಬರೇ ಲೇಪನ ಮಾತ್ರ ಸಾಧ್ಯವಿಲ್ಲ. ಆಂತರಿಕ ಚಿಕಿತ್ಸೆ ಅನಿವಾರ್ಯತೆ ಇದೆ. ಆದರೆ ಅದನ್ನು ಅರ್ಥವಿಸುವ ಮನೋಭಾವ ಎಂದೋ ನಶಿಸಿ ಹೋಗಿದೆ. ಈಗ ಕೇವಲ ಹೊರಾವರಣವನ್ನು ಸ್ವಚ್ಛಗೊಳಿಸುವುದನ್ನು ಮಾಡಿ ಒಂದಷ್ಟು ಬದ್ದತೆಯನ್ನು ತೋರಿಸುವುದಷ್ಟೇ ಕಾಣುತ್ತದೆ.
ಊರಿಗೆ ನವರಾತ್ರಿ ಸಮಯದಲ್ಲಿ ಹೋಗುವಾಗಲೆಲ್ಲ ಕಣ್ಣಿಗೆ ಮೊದಲು ಬೀಳುವುದು ಬಗೆ ಬಗೆಯ ವೇಷಗಳು. ಬಾಲ್ಯದಲ್ಲಿ ಹೀಗೆ ವೇಷಗಳು ಮನೆ ಮನೆಗೆ ಬರುವಾಗ ಖುಷಿಯಾಗುತ್ತಿತ್ತು. ಎಲ್ಲ ಮನೆಗೆ ಬಂದು ನಮ್ಮ ಮನೆಗೆ ಬಾರದೇ ಇದ್ದರೆ ಯಾಕೋ ನಮಗೆ ಏನೋ ಕಳೆದುಕೊಂಡ ಅನುಭವವಾಗುತ್ತಿತ್ತು. ಹಲವು ಸಲ ನಾವು ಬಡವರಾಗಿದ್ದುದರಿಂದಲೋ ಏನೋ, ಮನೆಗೆ ಬಂದರೂ ನಾವು ಸಾಕಷ್ಟು ಕೊಡಲಾಗದವರು ಎಂಬ ಭಾವನೆಯಿಂದಲೋ ಏನೋ ಗೊತ್ತಿಲ್ಲ, ವೇಷಗಳು ಹಾಗಿಂದ ಹಾಗೇ ಹೋಗುತ್ತಿದ್ದವು. ಆದರೆ ಮೊನ್ನೆ ನವರಾತ್ರಿಗೆ ಊರಿಗೆ ಹೋದಾಗ ಈ ವೇಷಗಳನ್ನು ಕಂಡಾಗ ಅವರು ಮನೆ ಮನೆಗೆ ಹೋಗಿ ಕುಣಿಯುವುದನ್ನು ಕಾಣುವಾಗ ಇದೊಂದು ಅನಿಷ್ಟ ಅಂತ ಭಾವನೆ ಬಂದು ಬಿಟ್ಟಿತು. ಅದರಲ್ಲಿ ಹುಲಿ ಕರಡಿ ವೇಷಗಳು ಒಂದು ಜಾನಪದೀಯ ಗಂಭೀರತೆ, ಮತ್ತು ಸಾಕಷ್ಟು ಪರಿಶ್ರಮ ಅಭ್ಯಾಸಗಳಿಂದ ಕೂಡಿ ಒಂದು ಸಾಂಸ್ಕೃತಿಕ ಪ್ರತಿನಿಧಿತ್ವ ತೊರಿಸಿದರೆ ಮಿಕ್ಕುಳಿದಂತೆ ವೇಷಗಳನ್ನು ಕಾಣುವಾಗ ಇದೊಂದು ಅನಿಷ್ಟ ಸಂಪ್ರದಾಯದಂತೆ ಭಾಸವಾಯಿತು. ಮೊದಲೆಲ್ಲ ಇದಕ್ಕಾಗಿ ಹರಕೆ ಹೊತ್ತು ಒಂಭತ್ತು ದಿನ ವೇಷ ಹಾಕಿ ಸುತ್ತಾಡಿ ಭಿಕ್ಷಾಟನೆ ಮಾಡಿ ತಂದ ಭಿಕ್ಷೆಯನ್ನು ಊರ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸಿ ವೇಷಕಳಚಿ ಮಾಡಿದ ಪಾಪವನ್ನು ಕಳಚಿದಂತೆ ಪರಿಶುದ್ದರಾಗುತ್ತಿದ್ದರು. ಆ ಭಾವನೆ ಒಂದು ಪಾವಿತ್ರ್ಯತೆಯನ್ನು ತೋರಿಸಿದರೆ ಇಂದು ಇದು ಒಂದು ರೀತಿಯ ದಂಧೆಯೋ ಇನ್ನೇನೋ ಆಗಿ ಹೋಗಿದೆ. ಸುಡುವ ಬಿಸಿಲಿಗೆ ಆ ವೇಷಗಳನ್ನು ತೊಟ್ಟು ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವುದು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ. ಮೊದಲು ಹರಕೆ ರೂಪದಲ್ಲಿ ಮೊದಲು ಹರಕೆ ರೂಪದಲ್ಲಿ ಕಪ್ಪು ಮಸಿಯನ್ನು ಬಳಿದು ಒಂದು ಜಾತಿ ಸೂಚಕದ ವೇಷವನ್ನು ತೊಟ್ಟು ತಿರುಗುವವರನ್ನು ಕಂಡಿದ್ದೆ. ರಾತ್ರಿ ಇವುಗಳನ್ನು ಕಂಡು ಭಯಭೀತರಾಗುತ್ತಿದ್ದೆವು. ಆನಂತರ ಸರಕಾರ ಅದನ್ನು ಸೂಕ್ತವಾಗಿ ನಿಷೇಧಿಸಿತ್ತು. ನನ್ನ ಅಭಿಪ್ರಾಯದಲ್ಲಿ ಉಳಿದವುಗಳನ್ನೂ (ಹುಲಿವೇಷವನ್ನು ಹೊರತುಪಡಿಸಿ) ನಿಷೇಧಿಸಿಬಿಡಬೇಕು. ಅದರಲ್ಲೂ ಆರಾಧಿಸುವ ದೇವರ ವೇಷಗಳನ್ನು ರಾಮ ಈಶ್ವರ ಹನುಮಂತ ಹೀಗೆ ಹಾಕುವುದು ಮಾತ್ರವಲ್ಲ ಮದ್ಯಸೇವಿಸಿ ನಶೆಯಲ್ಲಿ ಅಸಭ್ಯತನವನ್ನು ಪ್ರದರ್ಶಿಸಿ ಎಲ್ಲೋ ಕುಡಿದು ಓಲಾಡುವುದನ್ನು ಕಾಣುವಾಗ ಇವೆಲ್ಲ ಒಂದು ಕೆಟ್ಟ ಸಂಸ್ಕೃತಿಯನ್ನು ತೋರಿಸಿದಂತೆ ಭಾಸವಾಗುತ್ತದೆ. ಈ ಶುದ್ದಿಕರಣ ಕೇವಲ ಯಕ್ಷಗಾನಕ್ಕೆ ಸಂಭಂಧಿಸಿ ಸೀಮಿತಗೊಂಡರೆ ಸಾಲದು. ಕರಾವಳಿಯ ಸಂಸ್ಕೃತಿಗೆ ರೋಗಬಾಧೆಯಂತಿರುವ ಇವುಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಬೇಕು. ಮೊದಲು ಅದಕ್ಕೊಂದು ದೈವೀ ಭಾವನೆ ಹರಕೆಯ ರೂಪವಿತ್ತು. ಈಗ ಅದು ಇದೆ ಎಂದು ಅನಿಸುವುದಿಲ್ಲ. ಹಲವು ಕಡೆ ಇದು ಇನ್ನಿಲ್ಲದ ಅವಾಂತರಗಳಿಗೆ ಅಹಿತಕರ ಕೃತ್ಯಗಳಿಗೆ ಪ್ರಚೋದನೆ ಕೊಡುತ್ತದೆ.
ನವರಾತ್ರಿ ವೇಷಗಳು ಆರಾಧನೆಯ ರೂಪದಲ್ಲಿರಬೇಕು. ಅದಕ್ಕಾಗಿ ಅದು ಇನಷ್ಟು ಸಾಂಕೇತಿಕವಾಗಿ ಆಚರಿಸುವಂತಾದರೆ ಒಂದು ಶುದ್ದ ಸಂಸ್ಕೃತಿಯ ರಕ್ಷಣೆಯಾಗುತ್ತದೆ. ಸಾಂಕೇತಿಕವಾಗಿ ವೇಷತೊಟ್ಟು ಅಲ್ಲಿ ಇಲ್ಲಿ ಅಂಡಲೆಯದೆ ನೇರ ದೇವಸ್ಥಾನಕ್ಕೆ ಹೋಗಿ ಹರಕೆ ಸಲ್ಲಿಸಿ ಶುಭ್ರರಾದರೆ ಅದು ದಿವ್ಯ ಅನುಭವದ ಜತೆಗೆ ಒಂದು ಸಭ್ಯತೆಯನ್ನೂ ಶಿಸ್ತನ್ನೂ ಕಾಪಾಡಿದಂತಾಗುತ್ತದೆ.
ಈಗೀಗ ಸಾಮಾನ್ಯವಾಗಿ ಯಕ್ಷಗಾನದವೇಷಗಳನ್ನು ತೊಟ್ಟು ಓಡಾಡುವುದು ಯಥೇಚ್ಛವಾಗಿ ಕಣ್ಣಿಗೆ ಬೀಳುತ್ತದೆ. ಇನ್ನು ಕಂಠ ಮಟ್ಟ ಕುಡಿದು ಸಿಕ್ಕ ಸಿಕ್ಕ ಹಾಗೆ ವೇಷವನ್ನು ತೊಟ್ಟು ತಿರುಗಾಡಿ ಎಲ್ಲೆಂದರಲ್ಲಿ ಬೀಳುವುದು ಜನರಿಗೆ ಅಂಗಲಾಚಿ ತೊಂದರೆಯನ್ನು ಕೊಡುವಾಗ ಅಸಹ್ಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಯಕ್ಷಗಾನ ಅದಕ್ಕೋಂದು ಮೌಲ್ಯವಿದೆ ಅದು ಯಕ್ಷಗಾನದ ವಲಯದಲ್ಲೇ ಕಳೆದು ಹೋಗುವುದು ನಿಜಕ್ಕೂ ಅಸಹನೀಯ. ಯಕ್ಷಗಾನದ ಬಗ್ಗೆ ಹೇಳುವಾಗ ಇನ್ನೂ ಒಂದೆರಡು ಅನಿಸಿಕೆಗಳು ಮತ್ತಷ್ಟೂ ಹೇಳಬೇಕೆನಿಸುತ್ತದೆ. ಮುಖ್ಯವಾಗಿ ಬೀದಿಯಲ್ಲಿ ಯಾರೋ ಒಬ್ಬನ ವೇಷ ಕಳಚಿ ಔಷಧಿ ಹಚ್ಚಿದರೆ ಯಾವ ಕ್ರಾಂತಿಯೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ರಂಗಸ್ಥಳದಲ್ಲೇ ಯಕ್ಷಗಾನ ಮೌಲ್ಯಗಳು ಕಳೆದು ಇನ್ನೇನು ಕಳೆಯುವುದಕ್ಕೆ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಇಂದು ಯಕ್ಷಗಾನವಿದೆ. ಯಕ್ಷಗಾನ ಮುಖ್ಯವಾಗಿ ಆಂತರಿಕ ವ್ಯಾಧಿಯಿಂದ ತತ್ತರಿಸುತ್ತದೆ. ಇನ್ನು ಇವುಗಳೆಲ್ಲ ಹೊರಗಿಂದ ಹಚ್ಚುವ ಮುಲಾಮು ಆದೀತೇ ಹೊರತು ಒಳಗೆ ಬ್ರಹತ್ತಾಗಿ ಬೆಳೆದ ವೃಣ ವಾಸಿಯಾಗುವುದಕ್ಕೆ ಸಾಧ್ಯವಿಲ್ಲ. ಮೊದಲು ರಂಗಸ್ಥಳದಲ್ಲಿ ಆಗುವ ಆಭಾಸಗಳನ್ನು ನಿಲ್ಲಿಸಬೇಕು. ರಂಗಸ್ಥಳದ ಅಸಹ್ಯ ವೇಷಗಳನ್ನು ಕಳಚುವ ಮಹತ್ಕಾರ್ಯವನ್ನು ಮಾಡಬೇಕು. ವಿಪರ್ಯಾಸವೆಂದರೆ ಅದಕ್ಕೆ ಯಾವ ಕಲಾವಿದರೂ ಧ್ವನಿ ಎತ್ತುವುದಿಲ್ಲ. ಹೀಗೆ ರಸ್ತೆಯ ಬದಿಯ ಬಡಪಾಯಿ ಮೇಲೆ ಧಾಳಿ ಮಾಡಿ ಒಂದಷ್ಟು ಹೆಸರನ್ನು ಗಳಿಸಬಹುದು. ಅದರಿಂದ ಯಕ್ಷಗಾನಕ್ಕೆ ಕಳೆದು ಹೋದ ಗೌರವ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಮುಖ್ಯವಾಗಿ ಹೀಗೆ ಯಕ್ಷಗಾನದ ವೇಷ ಹಾದಿ ಬೀದಿಯಲ್ಲಿ ಓಡಾ(ಲಾ)ಡುತ್ತಿರುವುದಕ್ಕೆ ಮೂಲತಃ ಯಕ್ಷಗಾನದ ಕಲಾವಿದರೂ ಇಲ್ಲ ಅದಕ್ಕೆ ಸಂಭಂಧಿಸಿದವರೇ ಕಾರಣರಾಗಿರುತ್ತಾರೆ. ಯಕ್ಷಗಾನದ ಗಾಂಭೀರ್ಯತೆಯನ್ನು ಗೌರವವನ್ನು ಸ್ವತಃ ಯಕ್ಷಗಾನ ಕಲಾವಿದರೆ ಮಾರಾಟಕ್ಕೆ ಇಟ್ಟರೆ ಅದರ ಬಗ್ಗೆ ಉಳಿದವರಿಗೆ ಭಯ ಭಕ್ತಿ ಗೌರವ ಹೇಗೆ ಪ್ರಚೋದನೆ ಗೊಳ್ಳಬಹುದು? ರಂಗದಲ್ಲಿ ಕಲಾವಿದರು ಕಳೆದು ಬೀಸಾಕಿದ್ದನ್ನು ಈವರು ಬೀದಿಯಲ್ಲಿ ತೊಟ್ಟು ಕಳೆಯುತ್ತಾರೆ. ನಿಜಕ್ಕಾದರೆ ಈಗ ಎರಡೂ ಕಡೆಯಲ್ಲಿ ಆಗುವುದು ಒಂದೇ.
ಯಕ್ಷಗಾನದ ಬಗ್ಗೆ ಒಂದಷ್ಟು ಕಾಳಜಿ ಇದ್ದರೆ ಈ ಶುದ್ದೀಕರಣ ಆಂತರಿಕವಾಗಿ ರಂಗಸ್ಥಳದಿಂದಲೇ ಆರಂಭವಾಗಲೀ ಪರಂಪರೆಯನ್ನು ನಾಶ ಮಾಡಿದವರಿಗೆ ಈ ಗಂಭೀರತೆ ಅರಿವಾಗುವುದಕ್ಕೆ ಸಾಧ್ಯವಿಲ್ಲ. ಹಿಮ್ಮೇಳ ಮುಮ್ಮೇಳ ವನ್ನು ಕುಲಗೆಡಿಸಿ ಸಮಗ್ರ ಯಕ್ಷಗಾನವೇ ವೇಷ ಬದಲಿಸಿ ವಿರೂಪವಾಗಿ ಹೋಗಿದೆ. ಮೊದಲು ಹೊರಗಿನ ಗಾಯಾಕ್ಕೆ ಔಷಧಿ ಹಚ್ಚುವ ಬದಲು ಒಳಗಿನ ವ್ಯಾಧಿಗೆ ಚಿಕಿತ್ಸೆಯಾಗಬೇಕು. ಯಕ್ಷಗಾನಕ್ಕೆ ಭಕ್ತಿ ಗೌರವ ಸಲ್ಲಿಸುವಂತೆ ಯಕ್ಷಗಾನರಂಗವೇ ಬದ್ದತೆಯನ್ನು ತೋರಿಸಬೇಕು. ಇಲ್ಲವಾದರೇ ಹೀಗೆ ಯಕ್ಷಗಾನದ ಘನತೆ ಬೀದಿಯಲ್ಲಿ ಚಿಲ್ಲರೆ ದುಡ್ಡಿಗೆ ಮಾರಾಟವಾಗಿಬಿಡುತ್ತದೆ.
ಈ ಲೇಖನ ಪೋಟೋ ಹಾಕಬೇಕೆಂದು ಯೋಚಿಸಿದ್ದೆ ಆದರೆ ತೆಗೆದ ಫೋಟೋಗಳು ಅಸಹ್ಯ ವೆನಿಸಿ ಅದನ್ನು ಹಾಕುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದೆ ಅನ್ನಿಸಿತ್ತು.
Sunday, July 23, 2023
ಯಕ್ಷಗಾನದಲ್ಲಿ ಹೊಟ್ಟೆ ಪಾಡು
ಕದ್ದ ಕಳ್ಳ ಸಿಕ್ಕಿ ಬೀಳುತ್ತಾನೆ. ಆತ ಕದಿಯಬೇಕಾದ ಕಾರಣ ತಿಳಿದಾಗ ಹೊಟ್ಟೆ ಪಾಡು ಎಂದು ಮರುಕ ಹುಟ್ಟುತ್ತದೆ. ಕರುಣೆ ಮರುಕ ಆರ್ತತೆ ಇವುಗಳೆಲ್ಲ ಹಲವು ಸಲ ಮಾನವೀಯ ಮೌಲ್ಯಗಳ ತುಲನೆಯನ್ನು ಮಾಡುತ್ತವೆ. ಪಾಪ ಕಳ್ಳ ಹೊಟ್ಟೆ ಪಾಡಿಗೆ ಕದ್ದಿದ್ದಾನೆ ಎಂದುಕೊಂಡು ಮಾಲಿಕ ಕರುಣೆಯಿಂದ ಹೊಟ್ಟೆಗೆ ಒಂದಷ್ಟು ಆಹಾರವನ್ನು ನೀಡಿ ಕ್ಷಮಿಸಿ ಬಿಟ್ಟು ಬಿಡುತ್ತಾನೆ. ದೂರು ಕೊಟ್ಟು ಶಿಕ್ಷಿಸುವುದು ಇರಲಿ, ಮೇಲೊಂದಿಷ್ಟು ಆಹಾರನೀಡುವ ಔದಾರ್ಯ ತೋರಿ ಮಾನವೀಯ ಮೌಲ್ಯವನ್ನು ಸಾರುತ್ತಾನೆ. ಅಲ್ಲಿ ಹೊಟ್ಟೆ ಪಾಡು ಎಂಬುದು ನಮ್ಮ ಅಂತಃ ಕರಣದ ಸಂವೇದನೆ.
ಹೊಟ್ಟೆಪಾಡಿನ ಹಸಿವೆ ಎಲ್ಲ ಅಪರಾಧನವನ್ನು ಕ್ಷಮಿಸುವಂತೆ ಮಾಡುತ್ತದೆ. ದಾಸವರೇಣ್ಯರು ಹೇಳಿದಂತೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಎಲ್ಲವೂ ಹೊಟ್ಟೆಗಾಗಿ. ಅನಿವಾರ್ಯತೆಯ ಅಂಕೆಯೊಳಗೆ ಯಾವುದೂ ಅಪರಾಧವಾಗುವುದಿಲ್ಲ. ಹಲವು ಸಲ ಜೀವಭಯಕ್ಕಿಂತಲೂ ಹಸಿವಿನ ತುಡಿತ ಹೆಚ್ಚಾಗಿರುತ್ತದೆ. ಹಸಿವಾಗಬೇಕು ನಂತರ ಹಸಿವು ಶಮನವಾಗಬೇಕು. ಇದು ಲೋಕದ ಜೀವನಚಕ್ರದ ಸಂಕೇತ.
ಒಂದು ಯಕ್ಷಗಾನದ ವೀಡಿಯೋ ತುಣುಕು, ಆನಂತರ ಅದರ ಬಗೆಗಿನ ಅಭಿಪ್ರಾಯಗಳು ನನ್ನಲ್ಲಿ ಹಸಿವಿನ ಚಿಂತನೆಯನ್ನು ಉಂಟುಮಾಡಿತು. ಮನುಷ್ಯನ ಎಲ್ಲ ಪ್ರವೃತ್ತಿಗಳೂ ಹೊಟ್ಟೆ ಹಸಿವಿನ ಕಾರಣಗಳನ್ನೇ ನೀಡುತ್ತದೆ. ಕೆಲವು ಸಮಯಗಳ ಹಿಂದೆ ನಾವೊಂದಷ್ಟು ಸಮಾನ ಚಿಂತನೆಯ ಮಿತ್ರರು ಪರಸ್ಪರ ಯಕ್ಷಗಾನದ ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೆವು. ನಾವು ಕೆಲವರಂತೂ ಅದನ್ನು ಜಾಲತಾಣದಲ್ಲಿ ವ್ಯಕ್ತ ಪಡಿಸುತ್ತಾ ಇದ್ದೆವು. ತಿಳಿದದ್ದು ತಿಳಿಯದೇ ಇದ್ದದ್ದು ಮತ್ತೆ ತಿಳಿಯಬೇಕಾದದ್ದು ಹೀಗೆ ವೈವಿಧ್ಯಮಯ ಅನಿಸಿಕೆಗಳ ಹಂಚಿಕೆಯಾಗುತ್ತಿದ್ದವು. ಆವಾಗ ಎಲ್ಲ ಪ್ರಶ್ನೆಗಳಿಗೂ ಅವಸಾನದ ಒಂದು ಉತ್ತರ ಇರುತ್ತಿತ್ತು. ಅದೇ ಹೊಟ್ಟೆ ಪಾಡು. ದಕ್ಕು ನಿಷ್ಠೂರವಾಗಿ ನಾವು ಸಮರ್ಥನೆಗಳನ್ನು ಕೊಡಬಹುದಿತ್ತು. ಅದರೆ ನಮಗೇಕೆ ಎಂದುಕೊಂಡು ಔದಾಸಿನ್ಯವನ್ನು ತಾಳಿಕೊಂಡದ್ದೇ ಹೆಚ್ಚು. ಆದರೆ ಈಗ ಹೊಟ್ಟೆ ಪಾಡು ಎಂದು ಅನಿವಾರ್ಯವಾಗಿ ನಾವು ಸಮರ್ಥಿಸುವಂತಾಗುತ್ತದೆ.
ಯಕ್ಷಗಾನದ ವಿಚಾರಗಳ ಬಗ್ಗೆ ಈಗ ಆಸಕ್ತಿ ಕುಂಠಿತವಾಗಿದೆ. ಹಲವು ಹಿರಿಯ ಕಲಾವಿದರ ಅನುಪಸ್ಥಿತಿ, ಹಲವರ ಅಗಲಿಕ ಒಂದು ಕಾರಣವಾದರೆ ಯಕ್ಷಗಾನ ಸತ್ವ ಹೀನವಾಗುತ್ತದೆ. ಹಲವು ನವ ವಿನ್ಯಾಸದ ಉಡುಪುಗಳನ್ನು ಧರಿಸಿ ನಾವು ನಮ್ಮ ಮೂಲ ಸ್ವರೂಪವನ್ನು ಹೇಗೆ ಮರೆಮಾಚುತ್ತೇವೋ ಯಥಾ ರೀತಿ ಯಕ್ಷಗಾನವೂ ಅದೇ ಸ್ಥತಿಯನ್ನು ಎದುರಿಸುತ್ತಿದೆ. ಹಲವು ಸಲ ಅಸಲಿಗೆ ಮೂಲ ರೂಪ ಇದಲ್ಲ ಎಂದು ನಾವುಗಳು ಕಂಡ ಅನುಭ ಹೇಳುತ್ತಿದ್ದೆವು. ಆಗ ಬರತ್ತಿದ್ದ ಸಾಮಾನ್ಯ ಉತ್ತರವೆಂದರೆ ಹಸಿವು....ಹೊಟ್ಟೆಪಾಡು. ಒಂದು ಪ್ರದರ್ಶನದ ಬಗ್ಗೆ ಅಥವಾ ಒಬ್ಬ ಕಲಾವಿದನ ಬಗ್ಗೆ ಸಾರ್ವಜನಿಕವಾಗಿ ಹೀಗಲ್ಲ ಅಂತ ಹೇಳಿದರೆ ಅದಕ್ಕೆ ನಿಷ್ಠೂರವಾದ ಆಕ್ಷೇಪಗಳು ಎದುರಾಗುತ್ತಿದ್ದವು. ಸಾರ್ವಜನಿಕವಾಗಿ ಅಭಿಪ್ರಾಯ ಹೇಳಿದರೆ ಇದು ಸರಿಯಲ್ಲ ಎಂದು ಹೇಳಿದರೆ ಹೊಟ್ಟೆಗೆ ಹೊಡೆಯುತ್ತಾರೆ ಎಂಬ ಸಮರ್ಥನೆಗಳು ಎದುರಾಗುತ್ತಿದ್ದವು. ನಮ್ಮ ದಾರಿದ್ರ್ಯ ಹೇಗಿರುತ್ತದೆ ಎಂದು ಅಚ್ಚರಿಯಾಗುತ್ತದೆ. ಸರಿಯಲ್ಲದೇ ಇದ್ದದ್ದನ್ನೂ ಒಪ್ಪಬೇಕಾಗುತ್ತದೆ. ಕಳ್ಳತನವೂ ಇನ್ನು ಏನೇನೋ ಅದು ಹೊಟ್ಟೆ ಹಸಿವಿನ ಎದುರು ಸಕ್ರಮವಾಗುತ್ತದೆ. ವಿಪರ್ಯಾಸವೆಂದರೆ ಇತ್ತೀಚೆಗೆ ಚಿಕ್ಕಮೇಳದ ಬಗೆಗೆ ಹರಿದು ಬರುವ ವಿಮರ್ಶೆಗಳಿಗೆ ಈ ಹಸಿವು ಹೊಟ್ಟೆಪಾಡಿನ ಮಾನದಂಡವೇ ಇರಲಿಲ್ಲ. ಹಿರಿಯ ಕಲಾವಿದರನ್ನು ಅವರ ರಂಗದ ಮೇಲಿನ ವ್ಯವಹಾರವನ್ನು ಒಂದು ಸಲ ನಮ್ಮವರೊಬ್ಬರು ವಿಮರ್ಶಿಸಿದರು. ಇದು ಸರಿಯಲ್ಲ. ಹೌದು ಸರಿಯಲ್ಲ ...ಎಂಬುದು ಸರಿ ಆದರೆ ಅದನ್ನು ಖಾಸಗಿಯಾಗಿ ವೈಯಕ್ತಿಕವಾಗಿ ವ್ಯಕ್ತ ಪಡಿಸಬೇಕು. ಯಾಕೆಂದರೆ ಒಂದು ತೇಜೋವಧೆ...ಇನ್ನೊಂದು ಹೊಟ್ಟೆಪಾಡು. ಆಟದಲ್ಲಿ ನಿತ್ಯ ಸಿಗುವ ಸಂಬಳ ಒಂದು, ಆನಂತರ ಬಿಡುವಿಲ್ಲದ ಕಾರ್ಯಕ್ರಮದ ಸಂಭಾವನೆ ಬೇರೆ...ಬಡತನದ ಹಸಿವು ಬಾಧೆಯಾಗದೆ ಉಳಿದೀತೆ? ಇಷ್ಟೆಲ್ಲ ಚಿಂತನೆಗಳು ಆ ಚಿಕ್ಕ ಮೇಳದ ಬಡಪಾಯಿಗಳಿಗೆ ಅನ್ವಯವಾಗುವುದಿಲ್ಲ. ಈಗ ಅವರಿಗೂ ಒಂದು ನಿಯಮ ನಿಬಂಧನೆಗಳು ರೂಪಿತವಾಗುತ್ತದೆ. ಇದುವರೆಗೆ ಸಮಗ್ರ ಯಕ್ಷಗಾನಕ್ಕೆ ಅನಿವಾರ್ಯವಿಲ್ಲದ ನಿಯಮ ನಿಬಂಧನೆಗಳ ಆವಶ್ಯಕತೆ ಈಗ ಉಂಟಾಗಿದೆ. ಹೋಗಲಿ ಸಮಗ್ರ ಯಕ್ಷಗಾನದ ಬಗ್ಗೆ ಒಂದು ಗಂಭೀರವಾದ ಚಿಂತನೆ ಅದಕ್ಕೊಂದು ಕಟ್ಟು ನಿಟ್ಟಿನ ನಿಯಮ ಸಾಧ್ಯವಾಗಬಹುದೇ? ಹೊಟ್ಟೆಪಾಡಿನ ಸಮಸ್ಯೆ ಇಲ್ಲಿ ಅಡ್ಡಬರುತ್ತದೆ. ಯಾಕೆಂದರೆ ಐವತ್ತರ ದಶಕದಲ್ಲಿ ಯಕ್ಷಗಾನ ಪುನರ್ನಿರ್ಮಾಣಗಿ ಸಂಸ್ಕರಿಸಲ್ಪಡುವಾಗ ಅಲ್ಲಿಯೂ ನಿಯಮಗಳು ವಿಧಿಸಲ್ಪಟ್ಟಿದ್ದವು. ಬಹುಶಃ ಅದರ ಬಗ್ಗೆ ಗಂಭೀರತೆ, ಆಗಿನ ಹಿರಿಯರ ಪರಿಶ್ರಮದ ಬಗ್ಗೆ ಒಂದಷ್ಟು ಗೌರವ ಇದ್ದರೆ ಈಗ ಚಿಕ್ಕ ಮೇಳಕ್ಕೆ ನಿಯಮ ಮಾಡುವ ಅನಿವಾರ್ಯತೆ ಒದಗಿ ಬರುತ್ತಿರಲಿಲ್ಲ. ಹಳೆಯ ನಿಯಮಗಳು ಬಹಳಷ್ಟು ಇವೆ. ಕಲವೆಲ್ಲ ಓದದೇ ಗೆದ್ದಲು ಹಿಡಿದಿರಬಹುದು. ಲವು ಓದಿ ಇದೆಲ್ಲ ಅಗಲಕ್ಕಿಲ್ಲ, ಅದಕ್ಕೆಲ್ಲ ಅರ್ಥವಿಲ್ಲ ಎಂದು ಬದಿಗೆ ಸರಿಸಿ ಈಗ ತುಕ್ಕು ಹಿಡಿದಿರಬಹುದು.
ಮುಖ್ಯವಾಗಿ ನಮ್ಮ ಎಲ್ಲ ಸಮಸ್ಯೆಗೂ ಶಿಕ್ಷಣದ ಅಭಾವವೇ ಮುಖ್ಯ ಕಾರಣವಾಗುತ್ತದೆ. ಈಗಂತೂ ಶಿಕ್ಷಣದ ಸಂಪನ್ಮೂಲಗಳು ಬಹುತೇಕ ನಾಶವಾಗಿದೆ. ಹಿರಿಯ ಕಲಾವಿದರು ಅಗಲಿದರೆ, ಇನ್ನು ಕೆಲವರು ಭೀಷ್ಮನಂತೆ ಶರಶಯ್ಯೆಗೆ ಸರಿಸಲ್ಪಟ್ಟು ಅವರ ಉಪದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಒಂದಿಷ್ಟು ಯಕ್ಷಗಾನದಲ್ಲಿ ಹೆಜ್ಜೆಗಳನ್ನು ಇಡುವಾಗ ಅವರಿಗೆ ಜಗತ್ತಿಗೆ ಯಕ್ಷಗಾನವನ್ನು ಕಲಿಸುವ ಬಯಕೆ ಹುಟ್ಟಿಕೊಳ್ಳುತ್ತದೆ. ತಮ್ಮ ಮಹಾನ್ ಜ್ಞಾನವನ್ನು ಜಗತ್ತಿಗೆ ಸಾರುವ ತವಕ. ಗುರು ಎಂದರೆ ಅಂತ್ಯಂತ ಶ್ರೇಷ್ಠ.ಸರ್ವ ಗುರು ತತ್ವವನ್ನೂ ರಂಗದಲ್ಲಿ ಸಾರುವ ನಮ್ಮ ರಂಗ ಪರಂಪರೆಯಲ್ಲಿ ಗುರುವಿನ ಸ್ಥಿತಿ ಹೇಗಾಗಿದೆ ಎಂದರೆ...ತಾನು ಇಂಥವನ ಶಿಷ್ಯ ಎಂದು ಹೇಳಿ, ನಿರೀಕ್ಷೆಯನ್ನು ಹುಟ್ಟಿಸಿ ಒಂದಷ್ಟು ಲಾಭವನ್ನು ಮಾಡುವುದಕ್ಕಷ್ಟೇ ಸೀಮಿತ. ಗುರು ಉಪದೇಶ ಏನು? ಆ ಉಪದೇಶ ಎಷ್ಟು ಪಾಲಿಸಲಾಗುತ್ತದೆ? ಇದೆಲ್ಲವೂ ಗೌಣ. ಈಗೀಗ ಗುರು ಸ್ಥಾನವೂ ಭ್ರಷ್ಟವಾದಂತೆ, ಒಂದಷ್ಟು ಕಲಿತಕೂಡಲೇ ಅದನ್ನು ಯಾರಿಗೆ ಉಪದೇಶ ಮಾಡಿ ಗುರುವಾಗಬಹುದು ಎಂಬುದು ಆವರಿಗೆ ಮೊದಲು ಹುಟ್ಟುವ ಬಯಕೆ. ಗುರುವಿಗೆ ತಿಳಿಯದೇ ಇರುವುದು ಮಾತ್ರವಲ್ಲ ಇನ್ನೇನೋ ಉಪದೇಶವಾಗಿ ಯಕ್ಷಗಾನ ಎಂಬುದು ಮೂಲದಲ್ಲೇ ಒಸರು ಮಲಿನವಾಗುತ್ತದೆ. ಈಗ ಒಂದೊಂದು ರೂಪದಲ್ಲಿ ಪರಂಪರೆ ಸೃಷ್ಟಿಯಾಗುತ್ತದೆ. ಇಲ್ಲಿಯೂ ಹಲವು ಸಲ ಮೂಲ ಕಾರಣವಾಗುವುದು ಅದೇ ಹೊಟ್ಟೆ ಪಾಡು. ಆದರೆ ಒಂದು ಹಸಿವಿನ ಸಂಪೂರ್ಣ ಅರಿವಾಗಬೇಕಾದರೆ ಅದನ್ನು ಅನುಭವಿಸಿ ತಿಳಿದಿರಬೇಕು. ಯಕ್ಷಗಾನವೂ ಅದೇ ರೀತಿ ಅದು ಸಂಪೂರ್ಣವಾಗಿ ಅರಿವಿಗೆ ಬರಬೇಕು. ಆದರೆ ಆ ಅನುಭವ ಮಾತ್ರ ಈಗ ಇರುವುದಿಲ್ಲ.
ಹಸಿವು ಏನು ಎಂದು ಹೇಳಬೇಕಾದರೆ ಅದರ ಅನುಭವ ಇರಬೇಕು. ಹುಟ್ಟಿದ ಪ್ರತೀ ಪ್ರಾಣಿಗೂ ಇದರ ಅನುಭವ ಮೊದಲಿಗೆ ಆಗುತ್ತದೆ. ಆದರೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಇಲ್ಲದಾಗ ನಿಜವಾಅ ಹಸಿವಿನ ಅನುಭವವಾಗುತದೆ. ಪುರಾಣದಲ್ಲೂ ವಿಶ್ವಾ ಮಿತ್ರ ನಾಯಿ ಮಾಂಸ ತಿಂದ ಕಥೆ ಇದೆ. ಅದು ಎಷ್ಟು ಸತ್ಯವೋ ಸುಳ್ಳೋ ಒತ್ತಟ್ಟಿಗಿರಲಿ. ಆದರೆ ಹಸಿವು ಎಲ್ಲದಕ್ಕೂ ಉತ್ತರವಾಗಿ ನಿಲ್ಲುತ್ತದೆ. ಹಸಿವಿನ ಬಗ್ಗೆ ಹೇಳುವುದಕ್ಕೆ ಹಸಿವಿನ ಅನುಭವ ಹೇಗೆ ಇರಬೇಕೋ, ಹಸಿವಿನ ಅನುಭವದಂತೆ ಯಕ್ಷಗಾನದ ಬಗ್ಗೆ ಹೇಳುವುದಕ್ಕೂ ಅದರ ಅನುಭವ ಇರಲೇ ಬೇಕು. ಈಗ ಯಕ್ಷಗಾನ ಕೇಳುವಾಗ ನೋಡುವಾಗ ನಿಜವಾದ ಯಕ್ಷಾನುಭವ ಸಾಧ್ಯವಾಗುವುದಿಲ್ಲ. ಹಸಿವು ಹಸಿವಾಗಿಯೇ ಊಳಿಯುತ್ತದೆ. ಇದರ ನಡುವೆ ಯಾವುದೋ ಒಂದು ಹಸಿವು ಶಮನವಾಗುತ್ತಿದ್ದರೆ ಅದನ್ನು ಹೊಟ್ಟೆ ಪಾಡು ಎಂದು ಸುಮ್ಮನಾಗುವುದೊಂದೇ ಉಳಿದುಕೊಂಡಿದೆ.
ಯಕ್ಷಗಾನ ಮೂಲ ರೂಪದ ವೃಕ್ಷ ಎಂದೋ ಮರೆಯಾಗಿದೆ. ಅದರ ಬಿಳಲುಗಳು ಬೇರುಗಳು ಅದಕ್ಕೆ ಚಿಗುರಿದ ಚಿಗುರುಗಳು ಯಾವುದೋ ರೂಪದಲ್ಲಿ ಗೋಚರವಾಗುತ್ತಿದೆ. ಎಲ್ಲರೂ ಭ್ರಮಾಧೀನರಾಗಿ ಇದುವೇ ಪುರಾತನ ಮರ ಎಂದುಕೊಂಡು ಅದನ್ನೇ ನೋಡುತ್ತಾ ನಿಂತಿದ್ದಾರೆ.
.

