
ಇದು ತುಂಬಾ ಹಳೆಯ ಧ್ವನಿ ಸುರುಳಿ ಶೇಣಿ ಅರ್ಥವೈಭವ ಎಂಬ ಸರಣಿಯಲ್ಲಿ ಒಟ್ಟು ನನಗೆ ತಿಳಿದಂತೆ ೫ ಧ್ವನಿ ಸುರುಳಿಗಳು ಬಂದುವು. ೧) ವಾಲಿವಧೆ, ೨) ಭೀಷ್ಮ ಪರ್ವ,೩) ಮಾಗಧ ವಧೆ ೪) ಪಾದುಕಾ ಪ್ರದಾನ ೫) ಕೃಷ್ಣ ಸಂಧಾನ. ತುಂಬಾ ಹಳೆಯದಾದ ಧ್ವನಿಸುರುಳಿಗಳು ಇವುಗಳು. ಶೇಣಿಯವರ ಅರ್ಥಗಾರಿಕೆಯ ಮಿಂಚು ಅಂತಲೇ ಹೇಳಬಹುದು. ಆದರೆ ಮುಂದಿನ ಪೀಳಿಗೆಗೆ ಅವರ ಅರ್ಥಗಾರಿಕೆಯನ್ನು ಕಲ್ಪಿಸಲು ಇಂತವುಗಳೇ ಉಳಿದಿರುವ ಪಳೆಯುಳಿಕೆಗಳು. ಶೇಣಿಯವರ ಅರ್ಥವನ್ನು ಸವಿದುಂಡ ಅಭಿಮಾನಿಗಳು ಇವುಗಳಿಂದ ಪುನರಾವರ್ತಿತವಾದರೂ ತ್ರಿಪ್ತಿಹೊಂದುವ ಅನಿವಾರ್ಯತೆ ಇಂದು . ಹಾಗಾಗಿ ಅವುಗಳನ್ನು ಸಂಗ್ರಹಿಸಿ ಅದನ್ನು ಧ್ವನಿಸುರುಳಿ ರೂಪದಿಂದ ಕಂಪ್ಯೂಟರ್ ನಲ್ಲಿ ಶೇಖರಿಸಿ ತಕ್ಕಮಟ್ಟಿನ ಹಸಿವನ್ನು ನೀಗಿಸಿಕೊಳ್ಳುವ ಯತ್ನ ನನ್ನದು.
ಅರ್ಥವೈಭವ ಸರಣಿಯ ವಾಲಿವಧೆ ಧ್ವನಿಸುರುಳಿಯ ಸ್ಥೂಲ ಸೂಕ್ಷ್ಮ ವಿವರಣೆಯನ್ನು ಇಲ್ಲಿ ಕೊಡುವ ಒಂದು ಉದ್ದೇಶ ನನ್ನದು. ಈ ವಾಲಿವಧೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ನಾರಾಯಣ ಭಾಗವತರು., ಮದ್ದಲೆ ಕುದ್ರೆಕೋಡ್ಲು ರಾಮಭಟ್, ಚೆಂಡೆ ಪದ್ಯಾಣ ಶಂಕರನಾರಾಯಣ ಭಟ್, ಮುಮ್ಮೇಳದಲ್ಲಿ ಶ್ರೀ ರಾಮ ಪೆರ್ಲ ಕೃಷ್ಣ ಭಟ್, ಸುಗ್ರೀವ ಸೂರಿಕುಮೆರಿ ಗೋವಿಂದ ಭಟ್, ವಾಲಿ ಶೇಣಿ ಗೋಪಾಲ ಕೃಷ್ಣ ಭಟ್, ತಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಹೀಗೆ ಹಿತ ಮಿತವಾದ ತಂಡದಿಂದ ಉತ್ತಮ ಧ್ವನಿ ಸುರುಳಿ.
ರಾಮ ಹರೇ ರಾಮ ಎಂಬ ಪದದಿಂದ ತೊಡಗಿದ ಈ ಪ್ರಸಂಗ ದಲ್ಲಿ ರಾಮನಲ್ಲಿ ಸಖ್ಯವನ್ನು ಬೆಳೆಸಿದ ಸುಗ್ರಿವನು ವಾಲಿಯ ಪರಾಕ್ರಮವನ್ನು ಒತ್ತಿ ಹೇಳುವ ಸನ್ನಿವೇಶ.ಶಾಂತ ರೀತಿಯಿಂದ ಆರಂಭವಾಗುವ ಈ ಯಕ್ಷಗಾನ ಪ್ರಥಮಾರ್ಧದಲ್ಲಿ ಬಲಿಪ್ಪರ ಪದ ಮತ್ತು ಕುದ್ರೆಕೋಡ್ಲು ಜತೆಗಾರಿಕೆ ವಿಶಿಷ್ಟ್ಯವನ್ನು ತೋರಿಸುತ್ತದೆ. ವಾಲಿವಧೆ ಪ್ರಸಂಗ ಚುರುಕುಗೊಳ್ಳುವುದೇ ವಾಲಿ ಪ್ರವೇಶದಿಂದ ಅದರೂ ರಂಗೇರುವುದು ತಾರಾ ವಾಲಿ ಸಂವಾದದೊಂದಿಗೆ. ಶೇಣಿಯವರ ವಾಲಿ ಹೇಗಿರಬಹುದು ಎನ್ನುವ ಜಿಜ್ಞಾಸೆ ಮೂಡಿದರೆ ತಕ್ಕ ಮಟ್ಟಿಗೆ ಇದನ್ನು ಕೇಳಿ ತೃಪ್ತಿ ಅನುಭವಿಸಬಹುದು.
ನೀತಿಯಲ್ಲ ಪೋಪುದಿಂದು ....... ಎಂಬ ಪದದಿಂದ ಶುರುವಾಗುವ ತಾರೆಯ ಹಿತವಚನ ವಾಲಿಯ ತರ್ಕದ ಮಾತುಗಳಿಗೆ ಆಹಾರವಗುವಂತೆ ಮಾಡುತ್ತದೆ. ಜಾತಾಂಗದ ತಂದ ಸುದ್ಧಿಯಿಂದ ಖಿನ್ನಳಾಗಿ ವಾಲಿಯಲ್ಲಿ ಮೊರೆಯಿಡುವ ತಾರೆಯ ಪಾತ್ರದಲ್ಲಿ ಮೂಡಂಬೈಲು ಶಾಸ್ತ್ರಿಗಳು ಭಾವನಾತ್ಮಕ ಅರ್ಥವನ್ನು ಹೇಳಿದ್ದಾರೆ.ರಾಮ ಬಂದಿದ್ದಾನೆ ಸುಗ್ರೀವನ ಸಹಾಯಕ್ಕೆ ರಾಮನಿದ್ದಾನೆ ಈ ಸರಿ ರಾತ್ರಿಯಲ್ಲಿ ಯುದ್ದಕ್ಕೆ ಕರೆದಿರುವಾಗ ಹೋಗುವದು ತರವಲ್ಲ.. ನಾಳೆ ನೋಡಿಕೊಂಬ ಯುದ್ದ.. ಆವಾಗ ಶೇಣಿಯವರ ತರ್ಕದ ಮಾತುಗಳು ಇಡೀ ಯಕ್ಷಗಾನಕ್ಕೆ ಮೆರುಗನ್ನು ತಂದಿದೆ. ಈ ರಾಮನಿದ್ದರೂ ಒಂದು ಸಲ ಯುದ್ದ ಮಾಡಿ ಪೆಟ್ಟು ತಿಂದು ಸೋತ ಸುಗ್ರೀವ ಆವಾಗ ರಾಮ ಸಹಾಯವೇಕೆ ಮಾಡದಾದ? ಅದರೂ ಸುಗ್ರೀವನ ಧ್ವನಿಯಲ್ಲಿ ಆದ ಬದಲಾವಣೆ ಅಣಕವಲ್ಲ ಮೊದಲಿನಂತೆ ಅಣ್ಣ ಸಾರಿದೆ..ಎನ್ನುವ ಅರ್ಥದಲ್ಲಿ ಶೇಣಿ ತನ್ನ ಗಾಢವಾದ ಛಾಪನ್ನು ತೋರಿದ್ದಾರೆ.
ತಾರೆಯ ಪಾವಿತ್ರ್ಯತೆಯನ್ನು ತರ್ಕಿಸಿ ಹೇಳುವಲ್ಲಿ, ಮತ್ತು ತಾರೆಯ ಸಲಹೆಗೆ ಅವಧಿ ಬಾಧಕ ಬಂತು ಅಂತ ಹೇಳುವಲ್ಲಿ , ಉಗುಳಲಿಕ್ಕೂ ಆಗದ ನುಂಗಲಿಕ್ಕೂ ಆಗದ ವಾಲಿಯ ತಳಮಳವನ್ನು ತೋರಿಸುವಲ್ಲಿ ಶೇಣಿಯವರ ಅರ್ಥಗಾರಿಕೆ ಒಂದು ವೈಭವವೇ ಸರಿ. ಧಾತ್ರಿಯೋಳೆನ್ನ.... ಏರು ಪದ ಕ್ಕೆ ಅದ್ಭುತ ಸನ್ನಿವೇಶವನ್ನು ಮೊದಲೇ ಸೃಷ್ಟಿಸಿ ಬಿಡುತ್ತಾರೆ. ರಾಮನಿದ್ದರೂ ಸಮರ್ಥವಾಗಿ ಎದುರಿಸಿಯೇನು. ವಾಲಿ ಕೇವಲ ದುರ್ಬಲರ ಮುಂದೆ ಅಲ್ಲ ಪ್ರಬಲರ ಮುಂದೆಯೂ ಸಮರ್ಥ.ತಾರೆಯ ಮಾತಿಗೆ ಕಿವಿಗೊಟ್ಟು ಅಂತ: ಪುರದಲ್ಲಿ ಕುಳಿತನೆಂದರೆ ವಾಲಿಗೆ ಅಲ್ಲಿಗೆ ಸತ್ತಂತೆ. ಎನ್ನುತ್ತಾ ಆಕೆಯ ಮಾತನ್ನು ತಳ್ಳಿ ಯುದ್ದಕ್ಕೆ ಹೊರಡುವಾಗ ವಾಲಿ ಕಣ್ಣೆದುರು ಬಂದು ನಿಂತಂತೆ ಭಾಸವಾಗುತ್ತದೆ. ಸನ್ನಿವೇಶವನ್ನು ಇಷ್ಟು ಸುಂದರವಾಗಿ ಕಣ್ಣೆದುರು ಹಿಡಿವ ಶೈಲಿ ಅಮೋಘ.
ರಾಮನ ಮರೆಯ ಬಾಣದ ಘಾತಿಗೆ ಒಳಗಾಗಿ ವಾಲಿ ಬಿದ್ದಲ್ಲಿಂದ ಶೇಣಿಯವರ ಮಾತಿನ ವೈಭವ ಇನ್ನೂ ವೈಭವೀಕ್ರಿತವಾಗಿ ಗೋಚರಿಸುತ್ತದೆ. ರಾಮನನ್ನು ಹೀಯಾಳಿಸುವ ಮಾತುಗಳು, ನೀನೆ ರಾಮನೆಂಬವನು? ಯಾವ ಮುಹೂರ್ತದಲ್ಲಿ ನಿನಗೆ ಆ ಹೆಸರಿಟ್ಟರು ರಾಮ ಶಬ್ದಾರ್ಥದ ಲಘು ವಿವರಣೆ. ರಾಮ ಬಿಲ್ಲು ಹಿಡಿದರೆ ಅದು ಬಿಲ್ಲಲ್ಲ ಕೋದಂಡವಂತೆ. ಆ ಕೊದಂದವನ್ನು ಉಪಯೋಗಿಸಿದ ರೀತಿ, ಬೇಟೆಗಾರ ಬಿಲ್ಲನ್ನು ಉಪಯೋಗಿಸಿದ ಹಾಗಾಯಿತಲ್ಲ., ಹೇಗಾದರೂ ವಾಲಿಯನ್ನು ಬೀಳಿಸುವ ಒಂದೇ ಉದ್ದೇಶವಲ್ಲವೇ?ರಾವಣ ಸೀತೆಯನ್ನು ಕೊಂಡುಹೋದಲ್ಲಿ, ಸುಗ್ರೀವನ ಬದಲು ತನ್ನಲ್ಲೇ ಸಹಾಯ ಯಾಚಿಸಿದ್ದರೆ, ಸಂಕಲ್ಪ ಶಕ್ತಿಯಿಂದ ಬೆಳೆದಷ್ಟು ಬೆಳವ ಬಾಲದಿಂದಲೇ ಲಂಕೆಯಿಂದ ರಾವಣನನ್ನು ತರಿಸುತ್ತಿದ್ದೆ, ಇಲ್ಲ ಅಂಗದನನ್ನು ಕಳಿಸಿ ರಾವಣನಿಗೆ ಆಜ್ಞಾಪಿಸುತ್ತಿದ್ದೆ. ರಾವಣ ಸೀತೆಯನ್ನು ಇಟ್ಟು ಕೊಂಡಾನೋ? ಇಟ್ಟುಕೊಂಡು ಬದುಕುವಾಸೆ ಕೊಂಡಾನೋ? ಶೇಣಿ ಯವರ ಶೈಲಿ ಅದ್ಭುತ. ಒಂದು ಮಿತವಾದ ಸಮಯದಲ್ಲಿ ಇಷ್ಟು ಅದ್ಭುತ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಅಮೋಘವಾಗಿದೆ.
ವಾನರಾಧಿಪ ನೀ ಕೇಳೆನ್ನ ಮಾತಾ ಎನ್ನುತ್ತಾ ಪೆರ್ಲ ಕೃಷ್ಣ ಭಟ್ಟರು ಅಷ್ಟೇ ಸಮರ್ಥವಾಗಿ ರಾಮನಾಗಿಬಿಡುತ್ತಾರೆ. ನೆಟ್ಟ ಬಾಣವನ್ನು ತೆಗೆದು ಬದುಕುವ ಅವಕಾಶವನ್ನು ಮಾಡಿ ಕೊಡುತ್ತೇನೆ ,ಭೂಮಿ ಭಾರವನ್ನು ಇಳಿಸುವಲ್ಲಿ ಉದ್ಯುಕ್ತನಾಗಿ ವಾಲಿ ಹೇಗೆ ತಪ್ಪಿತಸ್ಥ ಎಂದು ತರ್ಕ ಪೂರ್ಣವಾಗಿ ರಾಮ ಉತ್ತರಿಸುವಂತೆ ಮಾಡುತ್ತಾರೆ.ಬದುಕುವ ವಾಗ್ದಾನವನ್ನು ನೀಡಿದ ರಾಮನಲ್ಲಿ .. ರಾಮ ನಿನ್ನ ಬಾಣ ತಾಗಿದ ಮೇಲೆ ಬದುಕಬೇಕೆಂಬಾಶೇ ಉಂಟೆ ? ಎಂದು ವಿನಯವಾಗಿ ಮತ್ತು ವಾಲ್ಯ ಪಾತ್ರವನ್ನು ಇನ್ನೂ ವೈಭವೀಕರಿಸುವಲ್ಲಿ ಶೇಣಿಯವರ ಪಾತ್ರಪೋಷಣೆ ಅನನ್ಯ. ಪುನಃ ಆವರ್ತಿಸಿ ಕೇಳಿದರೂ ಇನ್ನು ಕೇಳಬೇಕು ಎನ್ನುವ ತರ್ಕದ ಮಾತುಗಳು ಮಾತಿನ ಲೋಕದ ಮಹಾಕವಿ ಎಂಬ ನುಡಿಗೆ ಅನ್ವರ್ಥ ಮಾತ್ರವಲ್ಲ ಸಾಕಾರಾವಾಗಿಬಿಡುತ್ತಾರೆ.
ಎಲ್ಲದಕ್ಕೂ ಒಪ್ಪವಿಡುವಂತೆ ಅದ್ಭುತ ಹಿಮ್ಮೇಳ , ಬಲಿಪ್ಪರೊಂದಿಗೆ ಪದ್ಯಾಣ ಶಂಕರನಾರಾಯಣ ಭಟ್ ರವರು ಮತ್ತು ಕುದ್ರೆಕೊಡ್ಲು ರಾಮ ಭಟ್ ರವರು ಉತ್ತಮ ಹಿಮ್ಮೇಳವನ್ನು ಒದಗಿಸಿದ್ದಾರೆ. ಚೆಂಡೆ ಮದ್ದಲೆಗಳು ಪದಕ್ಕೆ ತಕ್ಕಂತೆ ಅನುರಣಿಸುವಾಗ ಬೇರೆ ಏನು ಬೇಕು
ನನ್ನ ಯಕ್ಷಗಾನ ಸಂಗ್ರಹದ ಅಮೂಲ್ಯ ರತ್ನಗಳಲ್ಲಿ "ವಾಲಿವಧೆ" ಒಂದು ಅಮೋಘ ರತ್ನ.







.jpg)

