"ಇದು ವಿಮರ್ಶೆಯಲ್ಲದ ಚಿಂತನ"

Sunday, August 30, 2009

ಬಾಲ್ಯದ ಆಟದ ಸ್ವಾರಸ್ಯಕರ ಘಟನೆಗಳು....


ಬಾಲ್ಯ ಎಂದರೆ ಅದೊಂದು ಅನಿರ್ವಚನಿಯ ಕಾಲ. ಮುಂದೇನೂ ಎಂಬ ಚಿಂತನೆಯನ್ನು ಹಚ್ಚಿಕೊಳ್ಳದ ಕಾಲ. ಬಾಲ್ಯದಲ್ಲಿ ಯಕ್ಷಗಾನ ಬಯಲಾಟ ಎಂದಾಗ ಕೇವಲ ಬಯಲಾಟ ಮಾತ್ರವಲ್ಲ ಆಟದ ಹೊರಗಿನ ಕೆಲವು ಆಟಗಳು ಸ್ವಾರಸ್ಯಕರ ಘಟನೆಗಳು ಈಗ ನೆನಪಿಸಿಕೊಳ್ಳುವಾಗ ಅಹಾ ಬಾಲ್ಯವೆಷ್ಟು ಸುಂದರ ಅನ್ನಿಸಿಬಿಡುತ್ತದೆ. ಹೆಚ್ಚಾಗಿ ಪೋಕರಿ ಅನ್ನಿಸಿಕೊಂಡ ಹುಡುಗರೊಂದಿಗೆ ಆಟಕ್ಕೆ ಹೋಗುವುದೆಂದರೆ ಅದೊಂದು ವಿಶಿಷ್ಟ ಅನುಭವವನ್ನು ಕೊಡುತ್ತಿತ್ತು. ನನಗೂ ಬಾಲ್ಯದಲ್ಲಿ ಹಲವು ಹುಡುಗುಬುದ್ದಿಯ ಸ್ನೇಹಿತರಿದ್ದರು. ಕೆಲವರ ಚೇಷ್ಟೆ ಆ ಚೇಷ್ಟೆಯೊಂದಿಗೆ ನಾನು ಸಹ ಒಂದು ಅಂಗ ಆಗುವಾಗ ನಾನು ಅನುಭವಿಸಿದ ಮನರಂಜನೆ (ಕೆಲವೆಲ್ಲ ತುಂಬಾ ಅತಿರೇಕ ಅಂತ ಈಗ ಅನ್ನಿಸುತ್ತದೆ.) ಯ ಅನುಭವ, ಆ ಸುಂದರ ಬಾಲ್ಯ ಅದೆಷ್ಟು ಸುಂದರ? ಅನ್ನಿಸಿಬಿಡುತ್ತದೆ. ಸಹವಾಸ ದೋಷವೋ ಅಥವಾ ಬಾಲಿಶ ಮನೋವಿಕಾರವೋ ಗೊತ್ತಿಲ್ಲ ಅಲ್ಪಸ್ವಲ್ಪ ಪೋಕರಿತನ ನನ್ನಲ್ಲೂ ಅಡಗಿತ್ತು.

ಒಂದು ಸಲ ನಮ್ಮ ಬಾಯರು ಸೊಸೈಟಿ ಬಳಿಯ ಆಟ.. ಆವಾಗಿನ ಆಟ ಎಂದರೆ ನಾವು ಒಂದು ತಿಂಗಳು ಮೊದಲು ಕ್ಯಾಲೆಂಡರ್ ನಲ್ಲಿ ಗುರುತು ಮಾಡಿ ದಿನ ಲೆಕ್ಕ ಹಾಕುವ , ಅದಕ್ಕಾಗಿಯೇ ದುಡ್ಡು ಒಟ್ಟು ಮಾಡಿ ಕಾಯುವ ಕಾಲ. ಡೇರೆ ಮೇಳದ ಆಟ ಎಂದರೆ ಕೇವಲ ನಮಗೆ ಸಾಧ್ಯವಾಗುತ್ತಿದ್ದುದು ಎಂಟಾಣೆಗೆ ಲಭ್ಯವಾಗುವ ನೆಲ ಕ್ಲಾಸು ಮಾತ್ರ. ಅದರೂ ಅದರಲ್ಲಿರುವ ಮಜಾ ಈಗ ಹುಡುಕಿದರೂ ಸಿಗದು. ಹಾಗೆ ಬಾಯರು ಆಟಕ್ಕೆ ಕೆಲವು ಸಹವಾಸಿಗಳೊಂದಿಗೆ ನಾನು ಹೋದೆ.

ಆಟ ಆಗುತ್ತಿದ್ದಂತೆ ಕೆಲವರೆಲ್ಲ ಬಹಿರ್ದೆಶೆಗೆ ಹೋಗುವುದು ಸಾಮನ್ಯ. ಹಾಗೆ ಉಚ್ಚೆ ಹೊಯಿದು ..ಖಾರ ಹಚ್ಚಿದ ಕಡಲೆ.. ಮಸಾಲೆ ಕಡ್ಲೆ ಈಗ ನೆನಸಿದರೆ ಬಾಯಿಯಲ್ಲಿ ನೀರಾಡುತ್ತದೆ, ಹಾಗೆ ಖಾರ ಚರ್ಮ್ಬುರಿ ..ಇದೆಲ್ಲ ಕಟ್ಟಿಕೊಂಡು ಒಳಬಂದು ತಿನ್ನುವುದು ರೂಢಿ. ಹೀಗೆ ಆದಿನ ನಾನು ನನ್ನ ಜತೆಗಿನ ಪೋಕರಿ ಪಟಾಲಂ ಎದ್ದು ನಿಧಾನಕ್ಕೆ ಟೆಂಟಿನ ಗೇಟ್ ಕೀಪರ್ ಕೊಟ್ಟ ಟಿಕೆಟ್ ತುಂಡನ್ನು ತೆಗೆದುಕೊಂಡು ಹೊರ ನಡೆದೆವು. ವಾಪಸು ಬರುವಾಗ ನಮ್ಮೊಂದಿಗೆ ಇದ್ದ ಪುಣ್ಯಾತ್ಮನಿಗೆ ವಿಚಿತ್ರವೊಂದು ಕಂಡಿತು. !!!! ಒಬ್ಬಾತ ನೆಲದಲ್ಲಿ ಟೆಕೆಟ್ ತೆಗೆದು ತೀರಾ ಹಿಂದೆ ನೆಲದಲ್ಲಿ ಮಲಗಿ ನಿದ್ದೆ ಹೋಗಿದ್ದ. ನಿದ್ದೆ ಮಾಡುತ್ತಿದ್ದ ಪರಿ ಮಾತ್ರ ತುಂಬಾ ವಿಚಿತ್ರವಾಗಿತ್ತು. ಆತನ ಎರಡೂ ಕಾಲುಗಳು ಟೆಂಟಿನ ಹೊರ ಬಂದು ದೇಹದ ಅರ್ಧ ಬಾಗ ಟೆಂಟಿನ ಒಳಗೆ ಇತ್ತು.. ಮೊದಲೇ ಕಳ್ಳು ಕುಡಿದ ಮಂಗನಂತೆ ಇದ್ದ ಮಿತ್ರರಿಗೆ ಒಂದು ಚೇಷ್ಟೆ ಮಾಡುವ ಮನಸ್ಸಾಯಿತು. ಇಬ್ಬರೂ ಸೇರಿ ಮಲಗಿದಾತನ ಎರಡೂ ಕಾಲು ಹಿಡಿವಾಗ ನಂಗೆ ಮುಂದೆ ಆಗಬಹುದಾದ ಚೇಷ್ಟೆಯ ಅರಿವಾಗಿ ನಾನು ಹೆದರಿ ದೂರ ಓಡಿ ಹೋಗಿ ದೂರದಿಂದಲೇ ಗಮನಿಸುವವನಾದೆ. ಈ ಮಹಾ ಪೋಕರಿಗಳು ಮಲಗಿದಾತನ ಎರಡೂ ಕಾಲು ಹಿಡಿದು ಆತನ ಪೂರ್ಣ ದೇಹವನ್ನು ಹೊರಗೆ ಎಳೆದು ಹಾಕಿ ಒಂದೇ ಒಂದು ಓಟ ಅಲ್ಲಿಂದ ಓಡಿದ ಪರಿ ಅದೆಂತು ಬಣ್ಣಿಸಲಿ? ಅಲ್ಲೇ ಇದ್ದ ನಾನು ನಗಲೂ ಆಗದೆ ನಗು ತಡೆಯಲೂ ಆಗದೆ ನಿಂತು ನೋಡುತ್ತಾ ಇದ್ದೆ. ಆ ವ್ಯಕ್ತಿ ನಿದ್ದೆ ಬಿಟ್ಟು ಎಚ್ಚರವಾಗಿ ಕಣ್ಣು ಹೊಸಕಿ ನೋಡ್ತಾನೆ ಇವರು ದೂರ ಕಣ್ಮರೆಯಾಗಿ ಹೋಗಿದ್ದರು..!!! ಈತ ಪೂರ್ಣವಾಗಿ ಟೆಂಟಿನ ಹೊರಗಡೆ ಬಿದ್ದಿದ್ದ..!!! ಎದ್ದು ಪುನಃ ಒಳ ಹೋಗಲು ಗೇಟ್ ಹತ್ತಿರ ಬಂದ್ರೆ ಗೇಟ್ ಕೀಪರ್ ಟಿಕೆಟ್ ಇಲ್ಲದ ಈತನನ್ನು ಬಿಡುವುದಕ್ಕೆ ತಕರಾರು ಮಾಡಿದ. ಈ ಘಟನೆ ನಂಗೆ ಈಗಲೂ ನೆನಸಿ ನಗು ಬರುವುದಿದೆ. ಮತ್ತು ಆ ಚೇಷ್ಟೆಗೆ ಬಲಿಯಾದ ಆವ್ಯಕ್ತಿ ಯಾರೋ ಅವನಬಗ್ಗೆ ಈಗಲೂ ಅಯ್ಯೋ ಪಾಪ ಅನ್ನಿಸುವುದಿದೆ . ಏನಿದ್ದರೂ ಇದು ಮನರಂಜನೆಯಾದರೂ ನಿಜಕ್ಕೂ ನಾವು ಎಸಗಿದ ಪ್ರಮಾದದ ಅರಿವು ಈವಾಗ ಆಗುತ್ತಿದೆ.

ಆವಾಗ ಆಟಕ್ಕೆ ಹೋದರೆ ಹಲವು ತಂಟೆ ಮಾದುವುದರಲ್ಲ ನಮ್ಮ ಅರ್ಧ ಮನರಂಜನೆ ಆಗುತ್ತಿತ್ತು. ನೆಲದಲ್ಲಿ ಕುಳಿತವರು ಕೆಲವರು ಚಳಿಗೆ ಟೆಂಟಿನ ತರ್ಪಾಲಿಗೆ ಬೆನ್ನು ಒತ್ತಿ ಕೂರುತ್ತಿದ್ದರು. ನಾವು ಹೊರಗಿಂದ ಹೋಗಿ ಅಂಥವರ ಬೆನ್ನಿಗೆ ಟೆಂಟ್ ಹೊರಗಿಂದ ಜೋರಾಗಿ ಗುದ್ದುತ್ತಿದ್ದೆವು.ಇದೊಂದು ವಿಚಿತ್ರ ಹವ್ಯಾಸವಗಿದ್ದು ಕೆಲವುಸಲ ಸಿಕ್ಕಿಬಿಳುವುದರಲ್ಲಿ ಸ್ವಲ್ಪದಿಂದಲೇ ಬಚಾವು ಆದ ಘಟನೆಗಳು ಎಷ್ಟೋ.

ನಾನು ಮಂಗಳೂರಲ್ಲಿ ಇದ್ದ ಸಮಯ. ಉರ್ವಸ್ಟೋರು ನಾವು ಆಟ ನೋಡುವ ಪ್ರಧಾನ ಕೇಂದ್ರ. ಹೆಚ್ಚಾಗಿ ಕಟೀಲು ಮೇಳದ ಬಯಲಾಟ ಇಲ್ಲೇ ನೋಡಿದ್ದು. ನೆಲದಲ್ಲಿ ಕೂತು ಮೈಯೆಲ್ಲಾ ಧೂಳು ಮೆತ್ತಿಕೊಂಡು ಮರುದಿನ ಬೆಳಗ್ಗೆ ಮನೆಗೆ ಹೋದಾಗ ಹೊಲದಲ್ಲಿ ಕೆಲಸ ಮಾಡಿದಂತೆ ನಮ್ಮ ಅವಸ್ಥೆ ಯಾಗುತ್ತಿತ್ತು. ಹಾಗೆ ಒಂದು ದಿನ ನೆಲದಲ್ಲಿ ಕುಳಿತು ಆಟ ನೋಡುವಾಗ ನಮ್ಮ ಕೈ ಸುಮ್ಮನಿರಬೇಕೆ.. ನಮ್ಮೆದುರು ನಿದ್ದೆ ಹೋದವರಿಗೆ ಕೀಟಲೆ ಕೊಡುವ ಒಂದು ಮೋಜು. ಕಡಲೆ ಕಟ್ಟಿ ತಂದ ಕಾಗದ ವನ್ನು ಗುಂಡೇ ಮಾಡಿ ಮುಂದೆ ಮಲಗಿದವನ ಚಡ್ಡಿಗೆ ಉದ್ದ ದಾರ ಮಾಡಿ ಕಟ್ಟಿ ಸಂತಸ ಪಡುತ್ತಿದ್ದೆವು. ಒಂದು ಸಲ ನಮ್ಮ ಹಿಂದೆ ಇದ್ದ ಮುದುಕನೊಬ್ಬ ಬೇಡ ಬೇಡ ಅಂತ ಸಾರಿ ಹೇಳಿದರೂ ಅವನಿಗೆ ಗೊತ್ತಾಗದೆ ಎದುರಿಗೆ ಮಲಗಿದವನ ಚಡ್ಡಿಗೆ ಕಟ್ಟಿಯೇ ಬಿಟ್ಟೆವು. ಬೆಳಗ್ಗೆ ನಾವು ಆಟ ಬಿಟ್ಟು ಹೋಗುವಾಗ ನಮ್ಮೊಂದಿಗಿದ್ದ ಹುಡುಗನೊಬ್ಬನ ಬಟ್ಟೆಗೆ ಆ ಮುದುಕ ತಿಳಿಯದಂತೆ ತಾಂಬೂಲ ಲೇಪಿಸಿ ಬಿಟ್ಟಿದ್ದ..!!!

ಒಂದು ಸಲ ನಮ್ಮೂರಿನ ಬಳಿಯ ಊರು ಸರಿ ನೆನಪಿಲ್ಲ ಆದರೆ ಅತ್ಯಂತ ಸ್ವಾರಸ್ಯಕರ ಘಟನೆ. ಬಯಲಾಟ ಊರ ಪರವೂರ ಕಲಾವಿದರ ಸಮ್ಮಿಲನದಿಂದ ನಡೆಯುತ್ತಾ ಇತ್ತು. ಹತ್ತಿರದ ಯಾರೋ ಮನೆಯ ಅಂಗಳವೇ ಅಂದಿನ ಚೌಕಿ. ಸಾಧಾರಣ ಜನ ಜಾತ್ರೆಯೇ ನೆರೆದಿತ್ತು. ಉತ್ಕಟವಾಗಿ ಪ್ರೇಕ್ಷಕರು ಯಕ್ಷಗಾನದಲ್ಲಿ ತಲ್ಲೀನ ವಾಗಿದ್ದ ಸಮಯ ಸಭೆಯ ಒಂದು ಮೂಲೆಯಿಂದ ಹುಡುಗನೊಬ್ಬ ಕಿಟಾರನೆ ಕಿರಿಚಿದ. ನಾವು ಕುಳಿತಲ್ಲಿಂದ ಕೆಲವೇ ಅಡಿಗಳ ದೂರದಲ್ಲಿ ಕಿರುಚಿವಿಕೆ ಒಂದೇ ಸಲಕ್ಕೆ ಉದ್ವೇಗವನ್ನು ಉಂಟು ಮಾಡಿತು. ಸಭೆಯಲ್ಲಿ ಗುಜು ಗುಜು.. " ಎಂಚಿನ ದನಾಂಡ್? " ಎಂಬ ಉದ್ಗಾರ ಬೇರೆ.. ಹುಡುಗ ಕಿರುಚುತ್ತ ಎದ್ದು ಲಾಗ ಹಾಕಿದ . ಆ ಬಾಲಕನ ಬಳಿ ಇದ್ದ ವ್ಯಕ್ತಿ , ಸಣ್ಣ ಹಾವೊಂದು ಬಾಲಕ ಕುಳಿತಲ್ಲಿಂದ ಓಡಿದ್ದನ್ನು ನೋಡಿ. "ಉಚ್ಚು ... ಮಾರಾಯರೇ..ಮುಜಲಿಯೇ ಅದುಪ್ಪು " ಆ ಸಣ್ಣ ಹಾವು ಜೀವ ಭಯದಿಂದ ಸರಿಯುತ್ತ ಹತ್ತಿರವೆ ನೆಲದಲ್ಲಿ ಮಲಗಿದ್ದ ವ್ಯಕಿಯ ಪಂಚೆಯೊಳಗೆ ನುಗ್ಗಬೇಕೆ.? ಅಷ್ಟಾದರೂ ಆ ವ್ಯಕ್ತಿ ಜೋರಾಗಿ ನಿದ್ದೆಯಲ್ಲೇ ಇದ್ದ .. !!! ಕೊನೆಗೆ ಒಬ್ಬ ಆತನನ್ನು ಎಬ್ಬಿಸಿ ನಿಲ್ಲಿಸಿ " ಉಚ್ಚು ಪೋಗ್ಗುದುಂಡು ಮಾರಾಯರೇ..!!!" ಅಂತ ಒಬ್ಬ ಬೊಬ್ಬಿಟ್ಟ.. ಆ ವ್ಯಕ್ತಿ ಅರ್ಧ ನಿದ್ದೆಯಲ್ಲೇ ತಡಬಡಾಯಿಸಿ ಪುಂಡು ವೇಷ ದಿಗಿನ ಹಾಕಿದ್ದು ಇನ್ನೂ ನೆನಪಿದೆ.
ಹೀಗೆ ಹಲವು ಘಟನೆಗಳು ಮರೆಯದ ನೆನಪಿನ ಬೀಜವನ್ನು ಮನದಾಳದಲ್ಲಿ ಬಿತ್ತಿವೆ.



Saturday, August 29, 2009

ವಾಮನ ಮೂರ್ತಿ

ಶ್ರೀ ರಾಮಾ ಕರಕಂಜದಂಗುಲಿಯೋಳಿಟ್ಟ ಮುದ್ರೆಯಂ ನೋಡುತಂ ರಾಮಾ.....
ನಾರೀಜಾನಕಿ ಸೋಕಿಸುತ ಅದನಂ ಕಂಗಳ್ಕೆ
ತಾಂ ಒತ್ತುತಂ ರಾಮಾ...ರಾಮಾ..
ಹೇರಾಕೃತಿ ಶೋಕ ಬಿಂದು ಜಲಗಳ್ ಸರ್ವಾಂಗಮಂ ಲೇಪಿಸಲ್ ರಾಮಾ.. ರಾಮಾ. ....
ಚೂಡಾಮಣಿ ಪ್ರಸಂಗದ ಈ ಪದ ಕೇಳಿರಬಹುದು. ಆದರೆ ಇತ್ತೀಚಿಗೆ ತನ್ನ ಮಧುರ ಕಂಠದಿಂದ ಅಮೋಘವಾಗಿ ಹಾಡಿ ಅದರ ಝೇಂಕಾರವನ್ನು ಮನದಲ್ಲಿ ತುಂಬಿಸಿದ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಈ ಪದ ಕೇಳುತ್ತಿದ್ದರೆ, ಅಶೋಕವನದ ಸೀತೆ ರಾಮನಿತ್ತ ಮುದ್ರೆಯನ್ನು ಭಾವ ಪರವಶಳಾಗಿ ನೋಡುತ್ತಿದ್ದ ದೃಶ್ಯ ಮನಸಲ್ಲಿ ಮೂಡಿದರೆ ಅತಿಶಯವಲ್ಲ. ಯಕ್ಷಗಾನ ಎಂದರೆ ಅದು , ಇಲ್ಲಿ ನೈಜ ಅಭಿನಯವೆಂಬ ರೂಪವೇ ಬೇರೆ. ಸೀತೆಯ ಭಾವನೆಗಳು ಹೇಗಿರಬೇಕು ಆ ಪಾತ್ರಧಾರಿಯ ಅಭಿನಯ ಆವೇಶ ಎಲ್ಲಿವರೆಗೆ ಮುಟ್ಟಿಸಬೇಕು ಇದೆಲ್ಲದರ ಗತಿಯನ್ನು ತನ್ನ ಹಾಡಿನ ಶೈಲಿಯಿಂದ ತೋರಿಸಬಲ್ಲ ಈ ಪ್ರತಿಭಾವಂತ ಮೂರ್ತಿ ಯಕ್ಷಗಾನ ಲೋಕ ಕಂಡ ಅದ್ಭುತ ಪ್ರತಿಭೆ. ಇವರ ಗಡಸು ಸ್ವರದ ಏರಿಳಿತ, ಮನಸ್ಸಿನಲ್ಲಿ ಅಚ್ಚಳಿಯದ ಅಲೆಯ ಸಂಚಲನವನ್ನುಂಟುಮಾಡುತ್ತದೆ. ತೆಂಕು ಬಡಗು ಎರಡೂ ಕಡೆ ಅಪಾರ ಜನಪ್ರಿಯತೆಯನ್ನು ಗಳಿಸಿದ ಈ ವಾಮನ ಮೂರ್ತಿ ಇಂದು ಯಕ್ಷಗಾನ ಪ್ರಪಂಚದ ಅತಿ ಜನ್ಯಪ್ರಿಯ ವ್ಯಕ್ತಿ.
ರಘುರಾಮ ಹೊಳ್ಳರ ಹೆಸರು ಕೇಳಿದರೆ ಇಂದು ಹುಚ್ಚೆದ್ದು ಕುಣಿವ ಅಭಿಮಾನಿಗಳನ್ನು ಕಂಡಾಗ ಅದು ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ಸತ್ವಯುತ ಅಧಿಕಾರಯುತ ಭಾಗವತಿಕೆ ಅವರದ್ದು. ಹಲವು ವರ್ಷಗಳ ಮೊದಲು ಕದ್ರಿ ಮೇಳದ ಭಾಗವತರಾಗಿ ಕಂಡ ಹೊಳ್ಳರಿಗಿಂತ ಈಗಿನ ಅನುಭವದಿಂದ ಮಾಗಿದ ಹೊಳ್ಳರು ಇಷ್ಟವಾಗುತ್ತಾರೆ. ಯಕ್ಷಗಾನ ಕಂಡ ಅತಿ ಜನಪ್ರಿಯ ಭಾಗವತರಲ್ಲಿ ಇವರೂ ಗುರುತಿಸಲ್ಪಡುತ್ತಾರೆ. ತಮ್ಮದೇ ಆದ ಹಲವು ವಿಶೇಷ ಅರ್ಹತೆಯಿಂದ ಇಂದು ಬಹು ಬೇಡಿಕೆಯ ಕಲಾವಿದರಾಗಿರುವುದು ನೋಡಿದಾಗ ಅವರ ಅಭಿಮಾನಿಗಳಿಗೆ ಹೆಮ್ಮೆ ಎನಿಸುವುದು. ಗಧಾಯುದ್ದ , ಪಂಚವಟಿ, ಕುಮಾರವಿಜಯ, ರಾವಣ ವಧೆಯ
ಪದಗಳನ್ನು ಇವರು ಹಾಡುವುದು ಕೇಳುವಾಗ ಮೈಮನ ಅದರಲ್ಲಿಯೇ ತಲ್ಲೀನವಾಗಿಬಿಡುವುದು. ವರ್ಷದ ಮೊದಲು ತಾಳ ಮದ್ದಲೆಯೊಂದರಲ್ಲಿ ಹಾಡಿದ ರಾವಣ ವಧೆಯ ಹಲವು ಪದಗಳು ಇಂದಿಗೂ ಕೇಳಿದಷ್ಟು ಮತ್ತೂ ಕೇಳಬೇಕೆನ್ನುವ ತುಡಿತವನ್ನುಂಟು ಮಾಡುತ್ತದೆ. ಸಲೀಸಾಗಿ ಸ್ವರ ಎತ್ತಿ ಹಾಡುವಾಗ ಏರಿದ ಸ್ವರ ಏರುತ್ತ ಹೋಗಿ ಅದು ಎಲ್ಲಿಯತನಕ ಏರಿಸುತ್ತಾರೋ ಎಂದು ಕೇಳುಗನ ಊಹನೆಗೆ ನಿಲುಕಷ್ಟು ಏರಿಸಿಬಿಡುತ್ತಾರೆ. ಬಹುಶಃ ಇವರೂ ಸಹ ಊಹಿಸುತ್ತಾರೋ ಇಲ್ಲವೊ ಎಂಬ ಅನುಮಾನ ನನಗೆ ಹಲವು ಸಲ ಮೂಡಿದೆ. ಕಂಠಕ್ಕೆ ಸಿಗದ ಸ್ವರವನ್ನು ಛಲದಿಂದ ಎಳೆದು ಹಾಡುವಂತ ಪ್ರವೃತ್ತಿ ಕೆಲವೊಮ್ಮೆ ತುಂಬಾ ಇಷ್ಟವಾಗಿಬಿಡುತ್ತದೆ. ಸಮರ್ಥ ಹಿಮ್ಮೇಳವಾದಕರು ಸಿಕ್ಕಿದರೆ ಯಕ್ಷಲೋಕದ ಸಾಕ್ಷಾತ್ಕಾರವನ್ನು ಮಾಡಿತೋರಿಸಬಲ್ಲರು.ಯುವ ಪ್ರತಿಭೆಯ ಮದ್ದಲೆಗಾರ ಪದ್ಮನಾಭ ಉಪಾಧ್ಯಾಯರು ಇವರಿಗೆ ಈಗ ಸಮರ್ಥ ಮದ್ದಲೆಗಾರ ಅಂತ ಗುರುತಿಸಿಕೊಂಡವರು. ಇವರಿಬ್ಬರ ಜತೆಗಿನ ಪದಗಳನ್ನು ಆಲಿಸುವುದೇ ಒಂದು ಸೊಗಸು. ವೇಷಧಾರಿ ಯಾರೇ ಆಗಲಿ ಅವರ ಮನೋಭಾವಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಇವರಂಥ ಭಾಗವತರು ದುರ್ಲಭ. ಮಾತುಗಾರಿಕೆಯೋ ಕುಣಿತವೋ ಭಾವಾಭಿನಯವೋ ಯಾವುದೇ ಅದರೂ ಕಲಾವಿದನ ಪರಿಪೂರ್ಣ ಪ್ರತಿಭೆಯನ್ನು ಹೊರಗೆಳೆಯುವುದರಲ್ಲಿ ಇವರು ತುಂಬಾ ಚಾಣಾಕ್ಷರು. ಕಲಾವಿದನ ನಾಡಿಮಿಡಿತವನ್ನು ಬೇಗನೆ ಗುರುತಿಸುವ ಇವರಂತಹ ಭಾಗವತ ಸದ್ಯ ಇನ್ನೊಬ್ಬನಿಲ್ಲ. ಇದಕ್ಕೆ ಮೂಲ ಕಾರಣ ಪ್ರತಿಭೆಯನ್ನು ಇವರು ಗುರುತಿಸುವುದು ಮತ್ತು ಅದಕ್ಕೆ ಮನ್ನಣೆ ಕೊಡುವಗುಣ. ಹಿರಿಯ ಕಲಾವಿದರಿಂದ ಇವರು ಗೌರವದಿಂದ ಕೇಳಿ ಕಲಿತು ಅದನ್ನು ಸ್ವಂತ ಶೈಲಿಯಲ್ಲೇ ಅಳವಡಿಸಿಕೂಳ್ಳುವ ಗುಣ ಇಂದು ಇವರನ್ನು ಈಮಟ್ಟಕ್ಕೆ ಏರಿಸಿದೆ ಎಂದೇ ನನ್ನ ಅಭಿಮತ. ಹಿರಿಯ ಭಾಗವತ ಬಲಿಪ್ಪರೊಂದಿಗೆ ಇವರ ದ್ವಂದ್ವ ಕೇಳುವುದೇ ಒಂದು ಸೊಗಸು. ಅದೇ ಮಾತನ್ನು ಸ್ವತಹ ಬಲಿಪ್ಪರೆ ಹೇಳುವುದುಂಟು. ಅವರ ಉಚ್ಚ ಸ್ಥಾಯಿ ಶ್ರುತಿಗೆ ಸರಿಯಾಗಿ ಹೊಂದುವ ಭಾಗವತ ಈಗ ಇರುವುದು ಇವರು ಮಾತ್ರ. ಹಾಗಾಗಿ ಅವರು ಇವರೊಂದಿಗಿನ ದ್ವಂದ್ವ ಹಾಡುಗಾರಿಕೆ ಅವರೂ ಇಷ್ಟ ಪಡುತ್ತಾರೆ.
ಕಲಾವಿದ ಯಾರೇ ಅಗಲಿ, ಆತನ ಮಾತುಗರಿಕೆಯೋ ಕುಣಿತವೋ ಭಾವಾಭಿನಯವೋ ಅಥವಾ ಹಾಸ್ಯಪ್ರಜ್ಞೆ ಯೋ ಯಾವುದೇ ಆಗಲಿ ಅದಕ್ಕೆ ತಕ್ಕ ಸಮಯಾವಕಾಶವನ್ನು ರಂಗದಲ್ಲಿ ಒದಗಿಸುತ್ತಾರೆ. ಯಾವುದೇ ಸ್ಥಾಯಿಯಲ್ಲೂ ರಾಗ ತಾಳ ಶುದ್ದಿಯ ಜತೆಗೆ ಸ್ಪಷ್ಟ ಉಚ್ಚಾರ ಇವರ ಗುಣ. ಯಾವುದೇ ಪದವಾದರೂ ಇದರ ಅಂತರಾರ್ಥವನ್ನು ಪಾಮರನೂ ಗುರುತಿಸುವಷ್ಟು ಸ್ಪಷ್ಟ ಉಚ್ಚಾರ. ಮೊದಲ ಒಂದೆರಡು ಪದವನ್ನು ಸ್ಪಷ್ಟವಾಗಿ ಹೇಳಿ ಆನಂತರ ಅತಿ ಮುಖ್ಯ ಪದಗಳ ಮೇಲೆ ಮಾತ್ರ ಗಮನಕೊಟ್ಟು ಹಾಡುವ..ಏರುಶ್ರುತಿಯನ್ನು ಕಾಯ್ದುಕೊಳ್ಳುವುದಕ್ಕೆ ಶಬ್ದವನ್ನು ನುಂಗುವ ಭಾಗಾತಿಕೆ ಇವರ ಶೈಲಿಯಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಅಷ್ಟು ಕರಾರುವಾಕ್ ಉಚ್ಚಾರಕ್ಕೆ ಇವರು ಗಮನ ಕೊಡುತ್ತಾರೆ.
ಕಡತೋಕ ಶೈಲಿಯ ಉತ್ತರಾಧಿಕಾರಿಯಂತೆ ಗೋಚರಿಸುವ ಇವರು ಇವರದ್ದೇ ಶೈಲಿಯನ್ನು ತೋರುವುದರಲ್ಲಿ ಹಿಂದೆ ಬೀಳುವುದಿಲ್ಲ. ತೆಂಕು ಬಡಗು ಹೀಗೆ ಎರಡೂ ಕಡೆ ಭಾಗವತಿಕೆ ಮಾಡಬಲ್ಲ ಸಾಮರ್ಥ್ಯ ಇವರಲ್ಲಿದೆ. ಅಲ್ಲದೆ ಯಕ್ಷಗಾನದಲ್ಲಿ ಉತ್ತಮ ಸೃಜನ ಶೀಲತೆಯನ್ನು ಹುಟ್ಟುಹಾಕಿದವರು.ಹಿಂದಿ ಭಾಷೆಯನ್ನು ಯಕ್ಷಗಾನಕ್ಕೆ ಅಳವಡಿಸಿ ಅತ್ಯಂತ ಸಮರ್ಥವಾಗಿ ಭಾಗವತಿಕೆ ಮಾಡಿದ ಕೀರ್ತಿ ಇವರಿಗೆ ಸಲ್ಲುವುದು. ಇವರು ಕನ್ನಡ ,ತುಳು, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಯಶಸ್ವಿಯಾಗಿ ಭಾಗವತಿಕೆ ಮಾಡಿದ್ದಾರೆ. ಭಗವದ್ಗೀತೆಯ ಸಂಸ್ಕೃತ ಶ್ಲೋಕವನ್ನೆ ಆಧರಿಸಿದ ಒಂದು ಪ್ರಸಂಗದ ಪದಗಳನ್ನು ಅಷ್ಟೇ ಸುಂದರವಾಗಿ ಇವರು ಹಾಡಿದ್ದಾರೆ. ಹೀಗೆ ಯಕ್ಷಗಾನದ ಎಲ್ಲ ಅಂಗಗಳೂ ಇವರಿಗೆ ಕರತಲಾಮಕ. ತಾಳಮದ್ದಳೆಯಲಿ ಅರ್ಥಗಾರಿಕೆಯನ್ನು ಸಮರ್ಥವಾಗಿ ಹೇಳಬಲ್ಲ ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವಇಷ್ಟೆಲ್ಲಾ ಹಲವು ಪ್ರತಿಭೆಗಳು ಇವರಲ್ಲಿದ್ದರೂ ತಮ್ಮ ಸ್ವ ಪ್ರತಿಭೆಯ ಬಗ್ಗೆ ಒಂದು ವಿಧದ ಔದಾಸಿನ್ಯ ಇವರಲ್ಲಿದೆ ಅಂತ ನನ್ನ ಭಾವನೆ. ಬಹುಶಃ ತಮ್ಮ ಪ್ರತಿಭೆಯ ಬಗ್ಗೆ ಹೆಮ್ಮೆ ಪಡದ ಗುಣ ಅದಾಗಿರಬಹುದು.ಇಂದು ಯಾವುದೇ ಯಕ್ಷಗಾನ ಆಟ ಕೂಟಗಳಲ್ಲಿ ತನ್ನ ಅಂಗ ಮತ್ತು ಹಕ್ಕನ್ನು ತನ್ನ ಸ್ವಂತ ಪ್ರತಿಭೆಯಿಂದಲೇ ಸೆಳೆದು ಕೊಳ್ಳುವ ಇವರು ಒಬ್ಬ ಅಭಿಜಾತ ಕಲಾವಿದ ಎಂದೇ ಗುರುತಿಸಲ್ಪಡುತ್ತಾರೆ. ಯಕ್ಷಗಾನ ಸರ್ವಾಂಗೀಣ ಜ್ಞಾನವನ್ನು ಹೊಂದಿದ್ದರೂ ಅದರ ಹಸಿವನ್ನು ಇನ್ನೂ ವ್ಯಕ್ತ ಪಡಿಸುವ ಇವರ ವಿನಮ್ರತೆ ನಿಜಕ್ಕೂ ಶ್ರೇಷ್ಠ.
ಸದ್ಯ ಧರ್ಮಸ್ಥಳ ಮೇಳದ ಪ್ರಧಾನ ಅಂಗವಾಗಿರುವ ಈ ವಾಮನ ಕಾಯ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥವಾಗಿದ್ದರೆವಾಮನ ರೂಪದ ತ್ರಿವಿಕ್ರಮ ಅವತಾರ ಇನ್ನು ಯಕ್ಷಗಾನ ಅಭಿಮಾನಿಗಳನ್ನು ರಂಜಿಸುತ್ತ ಭಾಗವತ ರೂಪಕ್ಕೆ ಸಾಕಾರವಾಗ್ಳಲಿ ಎಂದೇ ಹಾರೈಕೆ

Saturday, August 22, 2009

ಯಕ್ಷಗಾನಂ ಗೆಲ್ಗೆ



ಯಕ್ಷಗಾನ ಹವ್ಯಾಸ ತುಂಬಾ ಸೂಕ್ಷ್ಮವಾದ ಹವ್ಯಾಸ. ಅದರ ಹುಚ್ಚು ಹಿಡಿಸಿಕೊಂಡವ ಒಂದು ಸಲವಾದರೂ ಮನೆಯವರಿಂದ ಬೈಗಳು ತಿನ್ನದೇ ಇರಲಾರ.ಯಾಕೆಂದರೆ ಅದರ ರೀತಿ ಅದೇ ಆಗಿರುತ್ತದೆ. ಅದರೂ ಆ ಬೈಗುಳಗಳೂ ಒಂದು ತರಹ ಹೊಗಳಿಕೆಯಾಗಿ ಸ್ವೀಕರಿಸುವ ಕಲೆಯ ಮೇಲಿನ ಅಭಿಮಾನ ಅತಿ ಚೋದ್ಯ.ಈಗೀಗ ಇದರ ಹವ್ಯಾಸ ಬೆಳೆಸಿಕೊಳ್ಳುವುದು ಅದೇ ಆಗಿಬಿಟ್ಟಿದೆ. ಯಾಕೆಂದರೆ ಯಕ್ಷಗಾನ ಒಂದು ಪಕ್ಕಾ ಹವ್ಯಾಸಿ ಕಲೆ. ಇದು ಎಂದಿಗೂ commercial art ಆಗಲೇ ಇಲ್ಲ. ವೃತ್ತಿ ಪರ ಕಲಾವಿದರು ಇರಬಹುದು ಮೇಳಗಳು ಇರಬಹುದು ಆದರೆ ಈ ಮಟ್ಟಿಗೆ ಬೇರೆ ಕಲಾಪ್ರಾಕಾರವನ್ನು ಹೋಲಿಸಿದರೆ ಯಕ್ಷಗಾನ ಪಕ್ಕಾ ಹವ್ಯಾಸಿ ಕಲೆ. ಸದ್ಯ ವರ್ತಮಾನದಲ್ಲಿ ಇದು ಹೆಚ್ಚು ಅರ್ಥ ಪೂರ್ಣ ಅಂತ ನನ್ನ ಅನಿಸಿಕೆ. ಇಲ್ಲಿ ಒಂದು ಗಲ್ಲಾಪೆಟ್ಟಿಗೆ ಯಶಸ್ವಿ ಕಲಾವಿದನನ್ನು ಮಾನದಂಡದ ಕೆಳಗೆ ನಿಲ್ಲಿಸುವುದು ಅಷ್ಟೊಂದು ಸಮಂಜಸ ಅಲ್ಲ. ಯಾಕೆಂದರೆ ಯಾವುದೇ ಕಲಾವಿದನಾಗಲಿ ಇದರಿಂದ ಸಿರಿವಂತ ಅಂತ ಅದ ಉದಾಹರಣೆ ಇದೆಯೇ?

ಮೊದಲು ಎಷ್ಟೊಂದು ವ್ಯವಸಾಯಿ ಮೇಳಗಳು ಟೆಂಟು ಕೊಡವಿ ಮಳೆಗಾಲ ಮುಗಿದೊಡನೆ ಪಾಂಡವಾಶ್ವಮೇಧ ಸೇವೆ ಮಾಡಿ, , ದಿಗ್ವಿಜಯಕ್ಕೆ ಹೊರಡುತ್ತಿದ್ದವು.ಈಗ ಹೆಚ್ಚಿನ ಮೇಳಗಳು ಹವ್ಯಾಸಿಗಳಂತೆ ಸೇವೆ ಆಟಕ್ಕೆ ಸೀಮಿತವಾಗಿದೆ.ವ್ಯವಸಾಯಿಗಳು ಹವ್ಯಾಸಿಗಳಾಗಿ ಮಾರ್ಪಾಡು ಹೊಂದುವ ಕಾಲವಿದು. ಆದುದರಿಂದಲೇ ಇಂದು ಹವ್ಯಾಸಿಗಳಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ವ್ಯವಸಾಯಿಗಳಿಗೆ ಆದರೆ ಒಂದು ಮಿತಿ ಅಥವಾ ಒಂದು ನಿಯಂತ್ರಣ ಇರುತ್ತದೆ. ಮನಸ್ಸಿಗೆ ವಿರುದ್ಧವಾಗಿಯೋ ಕಲೆಯಲ್ಲಿ ತೊಡಗಿಗೊಳ್ಳುವ ಅನಿವಾರ್ಯತೆ ಇದೆ. ಏಕೆಂದರೆ ಅದುವೇ ಕಲಾವಿದನ ಜೀವನ. ಆತನನ್ನು ಅವಲಂಬಿಸಿದವರಿಗೆ ಜೀವನಾಧಾರ ಅವನ ಕಾಲ್ಗೆಜ್ಜೆಯ ಸದ್ದೇ ಆಗಿರುತ್ತದೆ. ಹಾಗಾಗಿ ಹಲವು ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ ಇರುವಾಗ, ಹವ್ಯಾಸಿಗಳಿಗೆ ಕೇವಲ ಇದು ಹವ್ಯಾಸ, ಹಾಗಿರುವಾಗಲೇ ಕಲೆಯ ಬಗ್ಗೆ ಹೇಳುವಾಗ ಹವ್ಯಾಸಿಗಳಿಗೆ ಇರುವ ಅಥವಾ ಇರಬೇಕಾದ ಜವಾಬ್ದಾರಿ ಅಧಿಕ ಅಲ್ಲವೇ? ಬಹುಶ ಈಗಿನ ಕಾಲಮಾನಕ್ಕೆ ಅನುಸರಿಸಿ ಹವ್ಯಾಸಿಗಳೇ ಕಲೆಯ ಜೀವನಾಡಿ ಎನ್ನಬಹುದು. ಹವ್ಯಾಸಿಗಳಿಗೆ ಇದು ಕೇವಲ ಹವ್ಯಾಸ ಆದುದರಿಂದ ಅವರಿಂದ ಹೆಚ್ಚು ಅರ್ಥಪೂರ್ಣ ನಿರ್ವಹಣೆಯನ್ನು ಕಲಾಕ್ಷೇತ್ರ ನಿರೀಕ್ಷಿಸುತ್ತದೆ.

ಕೆಲವು ದಿನಗಳ ಮೊದಲು ಮಿತ್ರರೊಬ್ಬರು ಕೇರಳದ ಹವ್ಯಾಸಿ ಕಲಾವಿದರ ಕಥಕ್ಕಳಿ ನೋಡಿ ಆ ಅನುಭವವನ್ನು ನನ್ನಲ್ಲಿ ಹಂಚಿಕೊಂಡಿದ್ದರು. ಆದಿನದ ಕಥಕ್ಕಳಿ ಕಾರ್ಯಕ್ರಮದ ಶಿಸ್ತು ಮತ್ತು ಕಥಕ್ಕಳಿಯ ಬಗ್ಗೆ ತಿಳಿಯದೆ ಇರುವವನ್ನು ಕೂಡ ಆ ಪರಿಧಿಯೊಳಗೆ ತರುವ ಪರಿಸರ ನಿರ್ಮಾಣ ಇವು ಪ್ರಧಾನವಾಗಿ ಮೊದಲ ಅಂಶ. ವೇದಿಕೆಯ ಹಿನ್ನೆಲೆ. ವೇದಿಕೆಯ ಪರಿಕರಗಳು. ಮತ್ತು ಸಭಾಂಗಣದ ವ್ಯವಸ್ಥೆ ಎಲ್ಲವೂ ಅದಕ್ಕೆ ಅನುಯೋಜ್ಯವಾಗಿ ನಡೆದುಕೊಂಡು ಬಂದಂತೆ ಇತ್ತು. ಆದುದರಿಂದ ಕಾರ್ಯಕ್ರಮ ಆರಂಭವಾಗುವ ಮೊದಲೇ ಅದರಬಗ್ಗೆ ಪ್ರಭಾವಿತರಾಗಿ ಬಿಡುತ್ತೇವೆ.ಇಂತಹ ವಾತವರಣ ಕಲೆಯ ತವರೂರಲ್ಲಿ ಉಂಟುಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಅದು ಸ್ವನಿರ್ಮಿತ. ಇದು ಕೇವಲ ಒಂದು ಉದಾಹರಣೆ ಮಾತ್ರ.. ಇದೆ ರೀತಿ ಯಕ್ಷಗಾನದಲ್ಲಿ ಸಾಧ್ಯವಿಲ್ಲವೇ. ಯಾವುದನ್ನು ಅನುಕರಿಸುತ್ತೆವೋ ಅದು ಪೂರ್ಣವಾಗಿ ದಾರಿ ತಪ್ಪಿದಂತೆ ಅನ್ನಿಸಿಬಿಡುತ್ತದೆ. ಕೆಲವೊಮ್ಮೆ ಇದೆಲ್ಲ ಆಭಾಸಗಳಿಗೆ ಎಡೆಮಾಡಿಕೊಡುತ್ತವೆ. ಕೆಲವು ಕಡೆ ಹಿಮ್ಮೆಳದವರು ಕೂರುವ ವ್ಯವಸ್ಥೆಯೇ ಸರಿಯಿರದೆ ಏನೋ ಒಂದು ಹರಕೆ ಸಲ್ಲಿಸಿದಂತೆ ಇರುವುದು. ಯಕ್ಷಗಾನ ಪಾತ್ರಗಳು ಮುಖ್ಯವಾಗಿ ಕೂರುವ ಆಸನ ಸಿಂಹಾಸನ ಯಾವುದೊ ಒಂದು ಪ್ಲಾಸ್ಟಿಕ್ ಕುರ್ಚಿ ಇಟ್ಟಿರುತ್ತಾರೆ ವೇಷಧಾರಿ ಅದರಲ್ಲಿ ಕೂರಬೇಕಾದರೆ ಭಯ ಪಟ್ಟೇ ಕೂರುವಂತ ಸ್ಥಿತಿ. ಕೆಲವೊಮ್ಮೆ ಕುಳಿತನೆಂದರೆ ಆಸನ ಅವನ ಸಹಿತ ಎದ್ದು ಬಂದು ಬಿಡುತ್ತವೆ.ಇಲ್ಲಿ ಅಷ್ಟಾದರೂ ಸಿಗುವುದಲ್ಲ ಎಂದು ತೃಪ್ತಿ ಪಟ್ಟುಕೊಳ್ಳುವ ಸಂಭವವೇ ಅಧಿಕ. ಇದೆಲ್ಲ ಕೆಲವೊಮ್ಮೆ ತೀರ ಅಭಾಸಗಳಿಗೆ ಎಡೆ ಮಾಡಿಕೊಡುತ್ತವೆ. ಯಕ್ಷಗಾನ ಬೆಳೆದು ಬಂದ ಪರಿಸರದಲ್ಲಿ ಒಂದು ಆಟ ನೋಡಿದವನಿಗೆ ಏನೂ ಅನ್ನಿಸದೇ ಇರಬಹುದು ಆದರೆ ಹೊಸತಾಗಿ ಯಕ್ಷಗಾನ ನೋಡುವವ ಪೂರ್ಣವಾಗಿ ವಿಮುಖನಾಗುವ ಸ್ಥಿತಿ.. ಕೇವಲ ಬಣ್ಣ ಬಣ್ಣದ ಝಗ ಮಘಿಸುವ ವೇಷ ಭೂಷಣದಿಂದ ಚೆಂಡೆಯ ಸದ್ದಿನಿಂದ ಸೆಳೆದಿಡಲು ಸಾಧ್ಯವೇ? ಇದ್ದರೂ ಅದು ಕೇವಲ ತಾತ್ಕಾಲಿಕ ಆಗುವ ಸಂಭವವೇ ಹೆಚ್ಚು.

ಎಲ್ಲವನ್ನು ಹೊಂದಿಸಿಕೊಳ್ಳುವಾಗ ಸಂಘಟಕ ಸುಸ್ತಾಗಿಬಿಡುತ್ತಾನೆ. ಇಷ್ಟಾದರೂ ವ್ಯವಸ್ಥೆಯಾಯಿತಲ್ಲ ಎಂಬ ತೃಪ್ತಿಯಿಂದ ಕಾರ್ಯಕ್ರಮ ಹೇಗೋ ಮುಂದುವರಿಯುತ್ತದೆ. ಕಲಾವಿದರೂ ಅಂತೆ ಹಲವು ಸಮಸ್ಯೆಗಳನ್ನು ಎದುರಿಸಿಯೇ ಸಿದ್ದರಾಗುವ ಅನಿವಾರ್ಯತೆ. ಬಿಡುವಿಲ್ಲದ ವೃತ್ತಿ ಚಟುವಟಿಕೆಯಿಂದ ದೈಹಿಕವಾಗಿಯೂ ಸುಸ್ತಾಗಿರುತ್ತಾರೆ. ಹಾಗಾಗಿ ಎಷ್ಟು ಸಾಧ್ಯವಾಯಿತೋ ಅಷ್ಟು ಎಂಬಲ್ಲಿಗೆ ತೃಪ್ತಿಪಡುವ ಅನಿವಾರ್ಯತೆ ಇರುವುದು ಕೂಡ ಸಹಜ.

ಈ ಯಕ್ಷಗಾನ ತೀರ ಅಪರಿಚಿತವಾಗಿರುವ ಒಂದು ಸ್ಥಳದಲ್ಲಿ ತೆಂಕು ಹವ್ಯಾಸಿಗಳ ಒಂದು ಪ್ರದರ್ಶನದಲ್ಲಿ ಚೌಕಿ ಪೂಜೆಯಾಗಿ ಪೀಠಿಕೆ ಆರಂಭಿಸಲು ಹಿಮ್ಮೇಳದವರು ವೇದಿಕೆಯೇರಿ ಭಾಗವತರು ಮದ್ದಲೆಯವರು ಕುಳಿತು ಚೆಂಡೆಯವರು ನಿಂತು ಪೀಠಿಕೆ ಆರಂಭಿಸಿದರು. ಆವಾಗ ಅಲ್ಲೇ ಇದ್ದ ಒಬ್ಬ ಕುರ್ಚಿಯೊಂದನ್ನು ತಂದು ಚೆಂಡೆಯವರನ್ನು " ಯಾಕೆ ಸಾರ್ ನಿಂತೇ ಇದ್ದೀರಾ..ಕುಳಿತುಕೊಳ್ಳಿ ಸಾರ್ " ಎಂದು ಕೂರುವುದಕ್ಕೆ ಒತ್ತಾಯ ಮಾಡಿದ್ದೂ ನಂಗೆ ಇನ್ನೂ ನೆನಪಿದೆ. ಪಾಪ ಅವನಿಗೇನು ಗೊತ್ತು ಚೆಂಡೆಯವರು ನಿಂತೇ ಬಾರಿಸುವುದು ಅಂತ. ಹೀಗೆ ಅತಿ ವ್ಯತಿರಿಕ್ತ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನ ಅತಿ ದೊಡ್ಡ ಸವಾಲಿನ ಕೆಲಸ. ಮತ್ತು ಅಷ್ಟೇ ಜಾಗರೂಕರಾಗಿರಬೇಕಾದ ಸಮಯವೂ ಹೌದು. ಈಗಿನ ಕಾಲದಲ್ಲಿ ಯಾವುದೇ ಒಂದು ವಿಷಯ ಪ್ರಸ್ತುತ ಪಡಿಸುವುದಿದ್ದರೆ ಅದಕ್ಕೆ ತಕ್ಕುದಾದ ವಾತವರಣವನ್ನು ಮೊದಲೇ ನಿರ್ಮಿಸುವುದು ಅನಿವಾರ್ಯ. ಅಂತೆ ಕಲೆಯಬಗ್ಗೆ ಏನೊಂದೂ ತಿಳಿಯದಲ್ಲಿ ಮೊದಲೇ ಅದರಬಗ್ಗೆ ಗೌರವ ಬರುವಂತೆ ಪರಿಸರ ನಿರ್ಮಾಣ ಅತಿ ಅಗತ್ಯ. ಏನೋ ಒಂದು ಹರಕೆ ಸಂದಾಯ ಮಾಡಿ ಯಕ್ಷಗಾನ ಸೇವೆ ಮಾಡಿದೆವು ಎಂದು ಧನ್ಯರಾಗುವ ಬದಲು ಮಾಡಿದ ಕಾರ್ಯಕ್ರಮ ಹೇಗಾಯಿತು ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳಿತಲ್ಲವೇ. ರಾತ್ರಿ ಯಿಂದ ಬೆಳಗಿನ ಜಾವದ ವರೆಗೆ ನಡೆಯುವ ಯಕ್ಷಗಾನ ಪ್ರದರ್ಶನಕ್ಕೂ ಈ ಕಾಲಮಿತಿಯ ಯಕ್ಷಗಾನಕ್ಕೂ ಹಲವು ಭಿನ್ನವಾದ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪ್ರವೇಶವಾಗುವಾಗ ಸರಿ ಸುಮಾರು ನಡು ರಾತ್ರಿ ಕಳೆದು ೧-೨ ಗಂಟೆಯಾಗುತ್ತದೆ ಆವಾಗ ಸಾಮಾನ್ಯವಾಗಿ ಪ್ರೇಕ್ಷಕ ನಿದ್ದೆಗೆ ಶರಣಾಗುವ ಹೊತ್ತು ಹಾಗೆಂದು ಬಡಿದೆಬ್ಬಿಸುವಂತೆ ಮಹಿಷನ ಪ್ರವೇಶ ಆದರೆಯೇ ಆಟಕ್ಕೆ ಒಂದು ಸೊಗಸು.ಸಭೆಯಲ್ಲಿ ಕಲರವ ಉಂಟು ಮಾಡಿ ಮಹಿಷ ಪ್ರವೇಶ ಸಾಧಾರಣ ಒಂದು ಸಂಪ್ರದಾಯ. ಕಾಲಮಿತಿಯಲ್ಲಿ ಅಂತಹ ಭಾಗವನ್ನು ಆದಷ್ಟು ಮೊಟಕು ಗೊಳಿಸುವುದು ಒಳ್ಳೆಯದಲ್ಲವೇ? ಪ್ರೇಕ್ಷಕರೊಂದಿಗೆ ಅನಗತ್ಯ ವಿನೋದವಾಡಿ..ಒಂದು ರೀತಿ ಕಬ್ಬಡ್ಡಿಯಾಡಿ ಕೊಂಡು ವ್ಯರ್ಥ ರಂಜನೆಯನ್ನುಂಟು ಮಾಡಿಕೊಳ್ಳುವುದು ತೀರ ಹಾಸ್ಯಾಸ್ಪದವಾಗಿ ಕೆಲವೊಮ್ಮೆ ಕಂಡು ಬರುವುದು. ತಾತ್ಕಾಲಿಕ ಮನರಂಜನೆಯಾದರೂ ಒಟ್ಟು ಶಿಸ್ತಿನಿಂದ ಅದು ದೂರವಾಗುವ ಸಂಭವವೇ ಹೆಚ್ಚು. ಪ್ರೇಕ್ಷಕರು ಏನು ಬಯಸುತ್ತಾರೋ ಅದನ್ನು ಕೊಡುವಂತಾಗಬಾರದು. ಪರ್ಯಾಯವಾಗಿ ಕಲೆಯ ಅಂತರಂಗದ ತಿರುಳೇನಿದೆ ಅದರ ದರ್ಶನ ಮಾಡಿಸಬೇಕು.

ಇವುಗಳೆಲ್ಲ ಹವ್ಯಾಸಿಗಳಿಂದ ಖಂಡಿತ ಸಾಧ್ಯವಿದೆ. ಯಾಕೆಂದರೆ ಇದೇನೂ ಅವರಿಗೆ ಉದ್ಯೋಗವಲ್ಲ.. ಇದರಿಂದ ಬರುವ ಆದಾಯಕ್ಕೆ ಕಾಯುವ ಕೈಗಳಿಲ್ಲ. ಸಂಬಳ ಕೊಡುವ ಮೇಳದ ಯಜಮಾನನ ನಿಬಂಧನೆ ಕಟ್ಟುಪಾಡುಗಳಿಲ್ಲ. ಹೊಸತನ್ನೇ ಆವಿಷ್ಕರಿಸಬೇಕೆನ್ನುವ ತುಡಿತವಿರಿಸಿಕೊಳ್ಳಬೇಕಾಗಿಲ್ಲ.

Wednesday, August 19, 2009

ಮೈಸೂರು ನಗರಿಯ ಯಕ್ಷಗಾನ



ನಿರೀಕ್ಷೆಯನ್ನು ಎಂದೂ ಹುಸಿಯಾಗಿಸದೆ ಬಯಸಿದುದಕ್ಕಿಂತ ಅಧಿಕವಾಗಿ ಕಲೆಯ ಹಸಿವನ್ನು ನೀಗಿಸುವ ಕಲಾವಿದ ಬ್ರಹ್ಮ ಬಲಿಪ್ಪರ ಆಗಮನ, ಅದೂ ನೆರೆಯ ನಗರಿ ಮೈಸೂರಿಗೆ...!!! ಈ ಸುದ್ದಿಯೇ ನಮ್ಮಲ್ಲೆಲ್ಲ ಸಂಚಲನೆಯನ್ನು ಉಂಟುಮಾಡಿತ್ತು.ಬೆಂಗಳೂರಲ್ಲಿದ್ದುಕೊಂಡು ಆ ಮಹಾ ಕಲಾತಪಸ್ವಿಯ ತಪಸ್ಸಿನ ಮಹಿಮೆಯ ಬಿಂದುಗಾತ್ರದ ದರ್ಶನವಾದರೂ ಅದು ಮಹಾಭಾಗ್ಯ ಅಂತ ತಿಳಿದುಕೊಂಡವರಿಗೆ ಇದು ಒಂದು ಸುಯೋಗವೇ.ಯಾವುದೇ ಆಡಂಬರದ ಪ್ರಚಾರ ಬಯಸದ ಸರಳತೆಯ ಪ್ರತೀಕ ಸದ್ದಿಲ್ಲದೆ ಮೈಸೂರಿಗೆ ಬರುತ್ತಾರೆಂದರೆ..?

ಹೌದು ಕಳೆದ ಆಗಸ್ಟು 15 ರಿಂದ ಬಲಿಪ್ಪರು ಮೂರುದಿನಗಳ ಕಾಲ ಮೈಸೂರಿನ ಪುಣ್ಯವಂತ ಕಲಾಭಿಮಾನಿಗಳ ಮನಸ್ಸು ತಣಿಸಿದರು.ಅವರ ಕಿಂಚಿತ್ ಕಲಾಪ್ರೋಕ್ಷಣೆ ಯಿಂದ ಮಿಂದವನು ನಾನು. ಬಲಿಪ್ಪರ ಪದ ಸಿಂಚನ ಸೋಕಿಸುವ ಸದವಕಾಶದಿಂದ ವಂಚಿತನಾಗಲು ಸಾಧ್ಯವೇ? ಅಂತೇ ಅಂದು ಶನಿವಾರ ನಿಗದಿಯಂತೆ ಮೈಸೂರಿಗೆ ಧಾವಿಸಿದೆ. ಅದಕ್ಕೆ ಸಮಾನ ಮನಸ್ಕ ಸಂಗಾತಿಗಳು ಜತೆಯಾದರು.


ಯಾವುದೇ ವ್ಯಕ್ತಿಯಾಗಲಿ, ಸಂಘ ಸಂಸ್ಥೆಯಾಗಲಿ ಬಲಿಪ್ಪರ ಕಾರ್ಯಕ್ರಮ ಹಮ್ಮಿಕೊಂಡರೆ, ಅದು ಕೇವಲ ಕಾರ್ಯಕ್ರಮವಾಗುವುದಿಲ್ಲ. ಅದರಿಂದ ಆ ಮಹಾವ್ಯಕ್ತಿಗೆವಿಶೇಷವೇನೂ ಆಗುವದಿಲ್ಲ. ಬದಲಾಗಿ ಸಂಭಂಧಿಸಿದ ಕರ್ತೃವಿನ ಧ್ಯೇಯವೇ ಸ್ತುತ್ಯರ್ಹವಾಗುವುದು. ಮಾತ್ರವಲ್ಲ ಈ ಅವಕಾಶ ಲಭಿಸಿದರೆ ಆ ವ್ಯಕ್ತಿ ಸಂಸ್ಥೆಯ ಯೋಗ್ಯತೆ ಹಿರಿಮೆ ಗರಿಮೆಗಳೂ ಅಧಿಕವಾಗುವುದು. ಬಲಿಪ್ಪರ ಯಕ್ಷಗಾನ ಯಾವುದೇ ಯಕ್ಷಗಾನ ಅಭಿಮಾನಿಗಳಿಗೆ ಹೊಸತಲ್ಲ. ನನಗಂತೂ ಅದೆಷ್ಟೋ ಯಕ್ಷಗಾನ ಬಯಲಾಟ , ತಾಳಮದ್ದಲೆ ಕಂಡು ಪುಳಕಿತಗೊಂಡ ಘಳಿಗೆ ಇನ್ನೂ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅದು ತಾಯಿ ಪ್ರೀತಿಯಿಂದ ಬಡಿಸಿದ ಕೈತುತ್ತಿಗೆ ಸಮಾನ.ಅದರ ರುಚಿಯ ಸೊಗಡನ್ನು ಪುನಃ ಸವಿಯುವ ಒಂದು ಸುಂದರ ಅವಕಾಶ.

ಬಲಿಪ್ಪರ ಯಕ್ಷಗಾನ ಎಂದರೆ ಅದು ಹೇಗಿರಬೇಕೋ ಹಾಗೆ. ಅದರಲ್ಲಿ ಯಾವುದೇ ವೆತ್ಯಾಸವಿಲ್ಲ. ತುಂಬಿದ ಸಭಾ ಪ್ರೇಕ್ಷಕರನ್ನು ಅವಲಂಬಿಸಿ ಇಲ್ಲ. ಅದು ನಿತ್ಯ ಪ್ರವಹಿಸುವ ಮಂದಾಕಿನಿಯಂತೆ ನಿತ್ಯ ನೂತನ. ಮುತ್ತುರತ್ನ ಚಿನ್ನ ಹೊಳೆಯುತ್ತದೆ ಅದಕ್ಕೆ ಹೋಲಿಕೆ ಬೇಕೇ.? ಅವನ್ನು ಆಸ್ವಾದಿಸಿಉವ ಮನಸ್ಸು ಬೇಕು ಅಷ್ಟೇ.ಅಂದು ನಾವು ಮೊದಲು ಹೊಕ್ಕಿದ್ದೆ ಚೌಕಿಗೆ.ಅದಾಗಲೇ ಕಲಾವಿದರು ತಮ್ಮ ಕಾಯಕದಲ್ಲಿ ತೊಡಗಿದ್ದರು. ನುರಿತ ಹಲವು ಹಿರಿಯ ಕಿರಿಯ ಕಲಾವಿದರ ಗಡಣ ನಿಡ್ಲೆ ಗೋವಿಂದಣ್ಣನ ಸಾರಥ್ಯದಲ್ಲಿ ಬಲಿಪ್ಪರ ತಾಳಕ್ಕೆ ಕುಣಿಯಲು ಸಿದ್ಧವಾಗಿತ್ತು. ಅದರಲ್ಲೂ ಪ್ರಮುಖ ಕಲಾವಿದ ಸುಬ್ರಾಯ ಹೊಳ್ಳ ರಂತೂ ಈ ಕಲಾ ಬ್ರಹ್ಮನ ಸಾನ್ನಿಧ್ಯದಿಂದ ರೋಮಾಂಚಿತರಾದಂತೆ ಕಂಡಿತು. ಅತಿ ಹಿರಿಯ ಕಲಾವಿದರು ಈ ಮಹಾ ಕಲಾತಪಸ್ವಿಗೆ ತೊಟ್ಟ ವೇಷದಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿ ರಂಗವೇರುವುದನ್ನು ಕಂಡಾಗ ಬೆರಗಾಗುವ ಸರದಿ ನನ್ನದು. ಅದನ್ನು ನೋಡುವ ಅಪೂರ್ವ ಘಳಿಗೆ ನನ್ನದು.

ನಿರ್ವಿಕಲ್ಪ ಭಾವದಿಂದ ಕಲಾವಿದರನ್ನು ಹರಸಿ ಕಳುಹಿಸುವ ಬಲಿಪ್ಪರು ವರ್ತಮಾನ ಕಾಲದ ಯಕ್ಷಗಾನದಲ್ಲಿ ಅತೀ ಮೇರು ವ್ಯಕ್ತಿ ಎಂಬುದು ಸರ್ವ ವಿದಿತ. ಇಂದಿನ ಹಲವು ಹಿರಿಯ ಕಲಾವಿದರು ಅವರ ಗರಡಿಯಲ್ಲೇ ಪಳಗಿದವರು. ಪಟ್ಟಿ ಮಾಡುತ್ತ ಹೊರಟರೆ ಅದಕ್ಕೆ ಅಂತ್ಯವಿಲ್ಲ. ಕಲಾವಿದರಿಗೆ ಕಲಾ ಗುರುಗಳು ಆರಂಭದಲ್ಲಿ ಯಾರೋ ಇರಬಹುದು... ಆರಂಭಿಕ ಪದಗತಿಯ ಉಪದೇಶ ಮಾಡಿರಬಹುದು ಆದರೆ ಬಲಿಪ್ಪರೆಂಬ ವಿಶ್ವ ವಿದ್ಯಾಲಯದಲ್ಲಿ ಸ್ನಾತಕರಾದರೆ ಅದು ಕಲಾವಿದನ ಭಾಗ್ಯ. ಪೌರಾಣಿಕ ಪ್ರಸಂಗ ನಡೆಯನ್ನು ಬಲಿಪ್ಪರಷ್ಟು ಕಲಾವಿದರಿಗೆ ಬೋಧಿಸಿದ ವ್ಯಕ್ತಿ ಬೇರೊಬ್ಬರಿಲ್ಲ. ಇಂದು ಹಲವು ಕಲಾವಿದರು ಯಕ್ಷಗಾನದಲ್ಲಿ ನೆಲೆಯೂರಿದ್ದರೆ ಅದಕ್ಕೆ ಬಲಿಪ್ಪರ ಸಮರ್ಥ ಉಪದೇಶವೇ ಕಾರಣ. ಯಾರೊಬ್ಬ ಕಲಾವಿದನು ಇದನ್ನು ಅಲ್ಲಗಳೆಯಲಾರ. ಇಂದು ಕೂಡ ಅತೀ ಸಣ್ಣವರಿಗೂ ಅಷ್ಟೇ ತಾಳ್ಮೆ ಹಾಗು ಶ್ರದ್ದೆಯಿಂದ ಹೇಳಿಕೊಡುವ ಅವರ ಗುಣ ಅದು ನಿಸ್ವಾರ್ಥಿಯಾಗಿ ಉಪದೇಶ ಮಾಡುವುದನ್ನು ನೋಡಿದರೆ ಬಲಿಪ್ಪ ಎಂಬ ಮಾಹವ್ಯಕ್ತಿಯ ಕಾಲದ ಜೀವಿಗಳು ನಾವಲ್ಲವೇ ಎಂದು ಹೆಮ್ಮೆ ಪಟ್ಟುಕೊಳ್ಳಬೇಕು.

ಚೌಕಿಯ ವಾತಾವರಣ ತುಂಬಾ ಉಲ್ಲಸಿತವಾಗಿತ್ತು. ಯಾವಾಗಲೂ ಪ್ರದರ್ಶನದಲ್ಲಿ ಚೌಕಿಯ ವಾತಾವರಣ ತುಂಬಾ ಪ್ರಭಾವ ಬೀರುತ್ತದೆ ಎಂದು ನನ್ನ ಅನಿಸಿಕೆ. ಯಕ್ಷಗಾನದಂತಹ ಕೂಡು ಕಲೆಗೆ ಇದು ತುಂಬಾ ಅವಶ್ಯ ಕೂಡ. ಅಲ್ಲಿನ ಶಿಸ್ತು ಆತ್ಮೀಯತೆ ಮತ್ತು ಅನಗತ್ಯ ವಾಸನಾರಹಿತ ವಾತಾವರಣ ಕಂಡಾಗ ಮನಸ್ಸು ಹೇಳಿತು ಖಂಡಿತ ಇವತ್ತು ಆಟ ರೈಸುತ್ತದೆ. ಸಾಮಾನ್ಯವಾಗಿ ಇಂತಹ ಕಡೆ ಇರುವ ಗುಟ್ಕ, ಧೂಮ ಪಾನ ಹಾಗು ಇನ್ನಿತರ ಅನಪೇಕ್ಷಿತ ವಾಸನೆಗಳು ಇಲ್ಲದಿರುವುದು ಮತ್ತೆ ಗಮನಕ್ಕೆ ಬಂತು.


ಶಿಸ್ತು ಬದ್ದ ಪ್ರದರ್ಶನ, ಹಿಮ್ಮೇಳದಲ್ಲಿ ಎಲ್ಲರೂ ಕೆಂಪು ಪೇಟದೊಂದಿಗೆ ಗೆ ವೇದಿಕೆ ಏರಿದ್ದು ತುಂಬಾ ಸಂತಸ ತಂದಿತು. ಹೆಚ್ಚಾಗಿ ಇತ್ತೀಚಿಗೆ ಇದು ತೀವ್ರ ಕಡೆಗಣನೆಗೆ ಒಳಗಾದ ಕ್ರಮ. ಬಹುಷಃ ಬಲಿಪ್ಪರು ಯಕ್ಷಗಾನ ಬಯಲಾಟದಲ್ಲಿ ಪೇಟ ಧರಿಸದೆ ಬಂದದ್ದು ನಾನು ನೋಡಿಯೇ ಇಲ್ಲ. ಇದೊಂದು ವೇದಿಕೆಯ ಕಡೆಗೆ ಗೌರವವನ್ನು ಕೊಡುವಂತಹ ಕ್ರಮ.ಅಂದಿನ ಪ್ರಸಂಗ ರೇವತಿ ಕಲ್ಯಾಣ. ಬಹುಶಃ ಒಂದು ಅಪೂರ್ವ ಪ್ರಸಂಗ. ಮತ್ತು ಅಷ್ಟೇ ಕಷ್ಟಕರ ಮತ್ತು ಕಲಾವಿದರಿಗೆ ಸವಾಲೊಡ್ಡುವ ಪ್ರಸಂಗ. ಅದನ್ನು ಅಷ್ಟೇ ಸಲೀಸಾಗಿ ಅಂದು ಪ್ರದರ್ಶಿಸಲಾಯಿತು.

ರೈವತ ಮಹಾರಾಜನಾಗಿ ಕುಂಬ್ಳೆ ಶ್ರೀಧರ, ರೇವತಿಯಾಗಿ ಕೆದಿಲ ಜಯರಾಮ , ಹಂಸ ಡಿಬಿಕರಾಗಿ ನಿಡ್ಲೆ ಗೋವಿಂದ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು ಮುತುವರ್ಜಿ ಮೆರೆದರು. ಬ್ರಹ್ಮದತ್ತನ ಬಣ್ಣದ ವೇಷದಲ್ಲಿ ಶಿರ್ವಪ್ರಸಾದ್ ಭಟ್ ಉತ್ತಮ ಎನ್ನಬಹುದಾಂತ ಪ್ರದರ್ಶನ ನೀಡಿದರು. ಕೃಷ್ಣನಾಗಿ ಜಯಪ್ರಕಾಶ ಪೆರ್ಮುದೆ ಅಂತೂ ತುಂಬಾ ಗಮನ ಸೆಳೆದರು. ಯಕ್ಷಗಾನೀಯ ಕೃಷ್ಣ ವೇಷ ತುಂಬಾ ಆಕರ್ಷಕವಾಗಿತ್ತು. ಬಲರಾಮನಾಗಿ ಸದಾಶಿವ ಕುಲಾಲ್ ಪಗಡಿ ಧರಿಸಿ ಗಧಾಧಾರಿಯಾಗಿ ಬಂದದ್ದು ವಿಚಿತ್ರವಾಗಿತ್ತು. ಮಹೇಶ ಮಣಿಯಾಣಿಯಂತೂ ಹಲವು ಪಾತ್ರಗಳಲ್ಲಿ ಸಮರ್ಥವಾಗಿ ಜೀವ ತಳೆದು ಮಿಂಚಿದರು.


ಹಿಮ್ಮೇಳದಲ್ಲಿ ಗೋರೆ ಮತ್ತು ನಿಡ್ಲೆ ಅಜ್ಜನ ಪಟ್ಟ ಶಿಷ್ಯ ದೇಲಂತ ಮಜಲು ಅದ್ಭುತವಾದ ಹಿಮ್ಮೇಳ ಪ್ರದರ್ಶಿಸಿದರು. ಎಂದಿನಂತೆ ತೆಂಕು ತಿಟ್ಟಿನ ಆಗ್ರಾ ಪಂಕ್ತಿಯ ಹಿಮ್ಮೇಳ ಇವರದ್ದು. ಬಲಿಪ್ಪರ ಸಾಂಪ್ರದಾಯಿಕ ಹಾಡುಗಳಿಗೆ ಉತ್ತಮ ಜತೆಯನ್ನು ನಿರೀಕ್ಷೆಯಂತೆ ನೀಡಿದರು. ಧ್ವನಿವರ್ಧಕ ವ್ಯವಸ್ಥೆ ಮಾತ್ರ ಯಕ್ಷಗಾನಕ್ಕೆ ಹೊಂದುವಂತೆ ಇರಲಿಲ್ಲ. ಮೊದಲಿಗೆ ಭಾಗವತಿಕೆಗೆ ರಾಮಕ್ರಷ್ಣ ಮಯ್ಯ ಸಿರಿಬಾಗಿಲು ಕುಳಿತು ನಂತರ ಪ್ರಸಾದ ಬಲಿಪ್ಪರಿಗೆ ಬಾಗಿಲು ತೆರೆದರು. ಕೊನೆಯಲ್ಲಿ ಬಲಿಪ ನಾರಯಾಣ ಭಾಗವತರು ನಿರೀಕ್ಷೆಯಂತೆ ಸೇರಿದ್ದ ಪ್ರೇಕ್ಷಕರ ಮನಸ್ಸನ್ನು ತಣಿಸಿದರು.

ಇಂತಹ ಒಂದು ಅಪೂರ್ವ ಯಕ್ಷಗಾನವನ್ನು ಮೈಸೂರಿನ ಕೆ ಎಂ ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದರು. ಯಕ್ಷಗಾನದ ಬಗ್ಗೆ ತೀರ ಅಪರಿಚಿತರಾದ ಮಹಾವ್ಯಕ್ತಿಯೋಬ್ಬರು ಈ ಅದ್ಭುತ ಕಾರ್ಯಕ್ರಮ ಆಯೋಜಿಸುವಲ್ಲಿ ಬೆನ್ನೆಲುಬಾಗಿ ಕಾರ್ಯ ಪ್ರವ್ರಿತ್ತರಾಗಿ ಯಕ್ಷಗಾನವೇ ಬೇಕು ಅದೂ ಬಲಿಪ್ಪರು ಬರಬೇಕು ಎಂಬ ಧ್ಯೇಯದಿಂದ ಉತ್ತಮವಾಗಿ ದುಡಿದರು.ನಾವೆಲ್ಲಾ ಅವರಿಗೆ ಆಭಾರಿಗಳು.ಒಂದು ಉತ್ತಮ ಯಕ್ಷಗಾನ ಕಂಡು ಮನಸ್ಸು ಸಂತ್ರಿಪ್ತಿಯಿಂದ ತುಂಬಿ ಬಂತು. ಅತಿ ಭಾರವಾದ ಮನಸ್ಸನ್ನು ಹೊತ್ತು ಕೊಂಡು ಇನ್ನು ಮುಂದೆ ಇಂತಹ ಯಕ್ಷಗಾನ ಎಂದು ಕಂಡೆನೋ ಎಂದು ಚಿಂತಿಸುತ್ತ ಸರಿ ಸುಮಾರು ನಡುವಿರುಳು ಅಲ್ಲಿಂದ ನಿರ್ಗಮಿಸಿದೆವು.

Sunday, August 9, 2009

ಮಾತನಾಡುವವು ಚೆಂಡೆ ಮದ್ದಲೆಗಳು



ಮಾತನಾಡುವವು ಚೆಂಡೆ ಮದ್ದಲೆಗಳು.
ಕಾದು ಕುಳಿತಿವೆ ಶ್ರುತಿ ಸೇರಲು.
ಸಡಿಲ ನರಗಳು ಬಿಗಿಯಲು ಮೈಕೊಡವಲು
ಹುಡುಕುತಿವೆ ಎಲ್ಲಿ ಹೋಯಿತು ಪಳಗಿದ ಕೈಗಳು.

ಆರು ಬಂದರೋ ಆರು ಹೋದರೋ ಕಳಚಿ ನೋಡದೆ ದಿರಿಸನು
ನಸುಕಿನಾಟವ ಮುಗಿಸಿ ತೊಡಿಸಿದರೀ ದಿರಿಸನು
ಶ್ರುತಿಯ ತಿದ್ದಲು ಬಡಿದು ನೋಡಲು
ಎಲ್ಲಿ ಹೋದವು ಕೈಗಳು ಕಾದಿವೆ ಚೆಂಡೆ ಮದ್ದಲೆಗಳು.

ಸಮಯ ಮೀರಿತೇ ಕತ್ತಲಾಯಿತೆ ಚೌಕಿ ದೇವರು ಬಂದರೆ
ಶ್ವೇತ ವಸನವ ಧರಿಸಿ ಕೆಂಪು ಪಗಡಿಯನೇರಿಸಿ
ಬಂದರೇ ಕೈ ಚಳಕ ತೋರಲು ಇಂದಿನಾಟವ ತೊಡಗಲು
ಮೌನ ದೀಕ್ಷೆಯ ಮುರಿಯಲು ಕಾಯುತಿವೆ ಚೆಂಡೆ ಮದ್ದಲೆಗಳು

ಬಂದು ನಿಂತರು ಕೈ ಚಳಕ ತೋರಲು
ನಿಟ್ಟುಸಿರ ಬಿಟ್ಟವು ಧರಿಸಿದುಡುಗೆಯ ತೆಗೆಯಲು
ನರನಾಡಿಗಳನೆಳೆದೆಳೆದು ಬಿಗಿಯುತ ಬೆರಳನಾಡಿಸೆ
ಮೌನ ಮುರಿದವು ಕಾಯುತಿಹ ಚೆಂಡೆ ಮದ್ದಲೆಗಳು.


ತಕ್ ತಕ್ ಟಕ್ ಟಕ್ ಧೀಂ ಎನುತ ಬಡಿದು
ಚಲ್ಲಣವ ಬಿಗಿದಂತೆ ಬಿಗಿ ದಾರವನು ಹಿಡಿದೆಳೆದು
ಶ್ರುತಿಸೇರೆ ಮಾರ್ದನಿಯ ಬೆಸೆಯುತಲಿ ಒಡೆಯನಾಣತಿಗೆ
ಪುಳಕಗೊಂಡವು ಕಾಯುತಿಹ ಚೆಂಡೆ ಮದ್ದಲೆಗಳು.

Tuesday, August 4, 2009

ಯಕ್ಷ ಲಹರಿಯ ಹರಿವಿನೊಳಗೆ..
































ಒಂದು ಉತ್ತಮ ಸಂವಹನದ ಹಿಮ್ಮೇಳ, ಸಮಶ್ರುತಿಯಯಕ್ಷ ಲಹರಿ. ಹೌದು, ಸದ್ಯ ಕೈ ಸೇರಿದ ಒಂದು ಅಪೂರ್ವ ಧ್ವನಿ ಮುದ್ರಿಕೆ., ನನ್ನ
ಮನದಲ್ಲೇ ಮುದ್ರೆಯನ್ನು ಒತ್ತಿಬಿಟ್ಟಿತು.ಯಕ್ಷಗಾನ ಪರಂಪರೆಯ ರೂವಾರಿ ಶ್ರೀ ಬಲಿಪ ನಾರಯಣ ಭಾಗವತರ ಸಾರಥ್ಯದಲ್ಲಿ ಹೊರಬಂದ ಯಕ್ಷಗಾನ ಸಾಂಪ್ರದಾಯಿಕ ಹಾಡುಗಳ ಧ್ವನಿಮುದ್ರಿಕೆ. ಯಕ್ಷ ಲಹರಿ ಎಂಬ CD.
ಬಲಿಪ್ಪರ ಹೆಸರನ್ನು ಕಂಡಾಗಲೇ ಕೊಟ್ಟ ದುಡ್ಡಿಗೆ ನ್ಯಾಯ ದೊರಕಬಹುದು ಎಂದು ಊಹಿಸಬಹುದು.ಈ ನಿರೀಕ್ಷೆಯನ್ನು ಎಣಿಕೆಗಿಂತ ಮಿಗಿಲಾಗಿ ನಿಜವಾಗಿಸಿದೆ. ನಿಜವಾಗಿಸುವಲ್ಲಿ ಇದಕ್ಕೆ ಬಲಿಪ್ಪರಿಗೆ ಹಿಮ್ಮೇಳದಲ್ಲಿ ಜತೆಯಾದವರು ಈಗಿನ ಯುವ ಹಾಗು ಭರವಸೆಯ ಚೆಂಡೆ ಮದ್ದಳೆಯ ಹರಿಕಾರ ಶ್ರೀ ಪದ್ಮನಾಭ ಉಪಾದ್ಯಾಯ. ಅಂತೆಯೇ ಸಿಡಿಲಬ್ಬರದ ಚೆಂಡೆಯನ್ನು ಉತ್ತಮ ಶ್ರುತಿ ಬರಿಸಿ ಮೊಳಗಿಸಿದ ಅಡೂರು ಗಣೇಶ್ ರಾವ್ ಅವರ ಚೆಂಡೆ . ಎಲ್ಲಕ್ಕೂ ಒಪ್ಪ ಎನಿಸುವಂತೆ ಅನುಭವಿ ವಾಗ್ಮಿ ಎಂ ಪ್ರಭಾಕರ ಜೋಷಿ. ಇವರ ಸಮರ್ಥ ನಿರೂಪಣೆ. ಎಲ್ಲವೂ ಮೇಳವಿಸಿದೆ ಈ ಮುದ್ರಿಕೆಯಲ್ಲಿ.

ಮುದದಿಂದ ನಿನ್ನ ಎಂಬ ಗಣಪಪತಿ ಸ್ತುತಿಯಿಂದ ಆರಂಭದಲ್ಲೇ ಚೆಂಡೆ ಮದ್ದಲೆ ಸಮ ಶ್ರುತಿ ನಮ್ಮನ್ನು ಹಿಡಿದು ಇಡುತ್ತವೆ. ಮೊದಲಿಗೆ ವೀರದಶರಥ ನ್ರಿಪತಿ ಇನಕುಲ ವಾರಿಧಿಗೆ ಪ್ರತಿಚಂದ್ರರು ಎಂಬ ಪದ ಸಾಂಪ್ರದಾಯಿಕ ರೂಪದಲ್ಲಿ ತನ್ನದೇ ಶೈಲಿಯಲ್ಲಿ ಅತಿ ಭಿನ್ನವಾಗಿ ಹಾಡಿದ ಬಲಿಪ್ಪರು ಮೊದಲ ಪದದಿಂದಲೇ ಮನಸ್ಸು ಸೆಳೆದು ಬಿಡುತ್ತಾರೆ. ಮಧ್ಯಮಾವತಿ ರಾಗದ ಈ ಪದವನ್ನು ತೀರ ಭಿನ್ನವಾಗಿ ಪರಂಪರೆಯ ಶೈಲಿ ಪ್ರಕೃತ ಅಪರೂಪವಾಗಿರುವ ರೀತಿಯಲ್ಲಿ ಹಾಡುವಾಗ ಪರಂಪರೆಯ ಶಿಕ್ಷಣ ಕೊಟ್ಟಂತೆ ಭಾಸವಾಗುತ್ತದೆ.ಮುಂದೆ ಕಾರ್ತ್ಯವೀರಾರ್ಜುನ ಪ್ರಸಂಗದ ಕರವಿಲ್ಲದಿಹ ಪುತ್ರನನು ಕಂಡು ಸಾಂಗತ್ಯದಲ್ಲಿ ಹಾಡಿದ ಪದಕೇಳಿದಾಗ ಮನಸ್ಸು ಹಲವು ವರ್ಷ ಹಿಂದಕ್ಕೆ ಓಡುತ್ತದೆ ಅಷ್ಟು ಸಂಪ್ರದಾಯ ಬದ್ದ ಶೈಲಿಯದು. ಎಣಿಕೆ ಬೇಡೆಲೇ ಗುಣಮಣಿಯೆ ಪ್ರಮೀಳೆ ಎಂಬ ಪ್ರಮೀಳಾರ್ಜುನದ ಪದ ಅಂತೆ ಕೆಲವು ಪದಗಳು ಬಲಿಪ್ಪರ ಮೆಚ್ಚಿನ ಪ್ರಸಂಗಗಳಲ್ಲಿ ಒಂದಾದ ಕುಮಾರ ವಿಜಯದ.. ಯಾರಿವಳಮಮಾ ವೈಯ್ಯಾರಿ .. ಎಂಬ ಪದವಂತೂ ಅದ್ಭುತವಾಗಿ ಹಾಡಿದ್ದಾರೆ. ಮತ್ತೆ ಕೆಲವು ಪದಗಳು ಈ ಮೊದಲು ಕೆಲವು ಮುದ್ರಿಕೆಗಳಲ್ಲಿ ಹಾಡಿದ್ದವೆ ಹೀಗಿದ್ದರೂ ಅದು ನವೀನ ರೀತಿಯಲ್ಲೇ ಭಾಸವಾಗುತ್ತವೆ. ವಿಶೇಷವಾಗಿ ಅತಿಕಾಯದ ಬಾಲನೆಲ್ಲಿಗೆ ಪೋದನೈ.ಎಂಬ ಪದ ಹೊಸ ರೂಪದಲ್ಲೇ ಕೇಳುಗರನ್ನು ತಣಿಸುತ್ತವೆ.ಅಂತೆಯೇ ಪಂಚವಟಿಯ ಕೆಲವು ಪದಗಳೂ ತಮ್ಮದೇ ಶೈಲಿಯ ಗಾಢ ಛಾಪನ್ನು ಒತ್ತಿ ಹಾಡಿದ್ದಾರೆ.ಎಲ್ಲ. ಯಕ್ಷಗಾನ ಪರಂಪರೆಯ ಭಾಗವತಿಕೆ ಅದು ಒಂದೇ ಸಲಕ್ಕೆ ರಂಜನೆ ಯನ್ನು ಕೊಡುವುದಿಲ್ಲ ಆದರೆ ಅದನ್ನು ತನ್ಮಯರಾಗಿ ಕೇಳುತ್ತಾ ಮಧುರ ಅನುಭವವನ್ನು ಸಾವಧಾನವಾಗಿ ಅನುಭವಿಸುವ ಮನೋಭಾವ ಇದ್ದರೆ ಅದರ ಅನುಭವವನ್ನು ಸವಿಯುವುದೇ ಒಂದು ಸ್ವರ್ಗ ಸುಖ. ಪ್ರತಿಯೊಂದು ಪದವೂ ಭದ್ರವಾದ ಹಾಗು ಆಳವಾದ ಮುದ್ರೆಯನ್ನು ಬಲಿಪ್ಪರಂತೆ ನಮ್ಮ ಹೃದಯದಲ್ಲಿ ಒತ್ತಿ ಬಿಡುತ್ತವೆ. ಇಂದಿನ ಆಧುನಿಕ ಪ್ರಾಕಾರಗಳು ತಾತ್ಕಾಲಿಕ ಜನಪ್ರಿಯತೆಯನ್ನು ಗಳಿಸಿದರೂ ಅದೆಲ್ಲ ಕೇವಲ ರಂಜನೆ ಅಷ್ಟೇ. ಬಲಿಪ್ಪರ ಯಕ್ಷಗಾನೀಯ ಶೈಲಿ ಕೇಳಿದ ಮೇಲೆ ಮತ್ತೊಮ್ಮೆ ಕೇಳುವಂತೆ ಮಾಡುವಲ್ಲಿ ಪ್ರೇರೇಪಣೆ ಕೊಡುತ್ತದೆ. ಬಲಿಪ್ಪರ ಭಾಗವತಿಕೆಯ ವಿಶೇಷತೆ ಏನಿದೆಯೋ ಸಂಕ್ಷೇಪವಾಗಿ ಇಲ್ಲಿ ಧ್ವನಿಸಿದೆ, ಮಂದಗಮನೆಯ ಪ್ರವಾಹದಂತೆ ತಣ್ಣಗೆ ಹಾಗು ಅಷ್ಟೇ ಪ್ರಭಾವಶಾಲಿ ಮುಟ್ಟಬೇಕಾದ ಗಮ್ಯ ಮುಟ್ಟುವಲ್ಲಿ ವಿಳಂಬವಿಲ್ಲ.

ಇದರಲ್ಲಿನ ಹಿಮ್ಮೇಳದ ಬಗ್ಗೆ ಒಂದೆರಡು ವಾಕ್ಯವಾದರೂ ಉಲ್ಲೇಖಿಸದಿದ್ದರೆ ಅದು ಸೂಕ್ತವೆನಿಸಲಾರದು. ಇಂದಿನ ಉದಯೋನ್ಮುಖ ಮದ್ದಲೆಗಾರರು ಎಲ್ಲಕಿಂತ ಮಿಗಿಲಾಗಿ ಬಿಸಿರಕ್ತದ ಯುವಕ ಇಂದು ಅದ್ಭುತ ಪ್ರತಿಭೆಯನ್ನು ಸಾದರ ಪಡಿಸುತ್ತಿದ್ದಾರೆ. ಅಂತೆಯೇ ಇಲ್ಲಿಯೂ. ಹಿರಿಯರಾದ ಬಲಿಪ್ಪರಿಗೆ ಸಲೀಸಾಗಿ ಮದ್ದಲೆ ಮೇಳೈಸಿದ ಪರಿ ಅತ್ಯುತ್ತಮವಾಗಿದೆ. ಆಲಿಸಿ ಮನ ತಣಿಸಿ ಇನ್ನೂ ಇದೆಯೋ ಎಂದು ಮೊಗೆಮೊಗೆದು ಹೀರುವ ದಾಹವನ್ನು ಬಡಿದೆಬ್ಬಿಸಬಲ್ಲ, ಪಂಚೇಂದ್ರಿಯಗಳ ಇರುವಿಕೆಗೆ ಸಾಕ್ಷಿಯಾಗುವ ಭಾವನೆಯನ್ನು ಕೆರಳಿಸುವ ಈ
ಸ್ಪಟಿಕದಂತಹ ಸ್ಪಷ್ಟ ತಾಳಗಳು ಚಾಪುಗಳು ಎಲ್ಲವೂ ಪ್ರತಿಭೆಗೆ ತಕ್ಕ ಸಾಕ್ಷಿಯಾಗಿದೆ. ಇವರಿಂದ ಮುಂದೆಯೂ ಕಲಾಕ್ಷೇತ್ರ ಅದ್ಭುತವನ್ನು ನಿರೀಕ್ಷಿಸಬಹುದು. ಇನ್ನು ಚೆಂಡೆ ಮದ್ದಲೆ ಹಾಗು ಭಾಗವತಿಕೆ ಬಲ್ಲಂತಹ ಅನುಭವಿ ಅಡೂರು ಗಣೇಶ್ ರಾವ್ ರವರ ಚೆಂಡೆ ತುಂಬಾ ಲಯಭರಿತವಾಗಿ ಮೂಡಿಬಂದಿದೆ. ಅತ್ಯುತ್ತಮ ಪ್ರತಿಭಾವಂತರು ಇತ್ತೀಚಿಗೆ ಇವರ ಬಡಗು ಶೈಲಿಯ ಮದ್ದಲೆವಾದನವನ್ನು ನಾನು ಕೇಳಿದ್ದೇನೆ. ತಮ್ಮ ಪ್ರತಿಭೆಗೆ ತಕ್ಕಂತೆ ಚೆಂಡೆಯ ಸ್ವರವನ್ನು ಪೋಣಿಸಿದ್ದಾರೆ ಅಂತಲೇ ಹೇಳಬಹುದು. ಉತ್ತಮ ಶ್ರುತಿಯ ಚೆಂಡೆ. ಪಂಚವಟಿಯ ಪದವೊಂದಕ್ಕೆ ಚೆಂಡೆಯ ಛಾಪು ರಿಂಗಣಿಸಿದ್ದು ಅವರ ಸಮಯ ಪ್ರಜ್ಞೆಗೆ ದ್ಯೋತಕವಾಗಿತ್ತು. ಈಗ
ವಾಸ್ತವವಾಗಿ ಭಾಗವತರ ಹಾಗು ಮದ್ದಲೆಗಾರರ ತಪ್ಪುಗಳನ್ನು ಮರೆಸುವಂತೆ ಇದನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸುವುದನ್ನು ಕಂಡಿದ್ದೇನೆ. ಅಂತ ಹಿಮ್ಮೆಳಗಾರರು ಖಂಡಿತ ಈ ಹಿಮ್ಮೇಳವನ್ನು ಪಠ್ಯ ಕ್ರಮವಾಗಿ ಅಳವಡಿಸಿಕೊಳ್ಳುವುದು ಒಳಿತು. ಮದ್ದಲೆಗೆ ಸಮಾನ ಗೌರವವನ್ನು ಕೊಟ್ಟು ಮದ್ದಲೆಯನ್ನು ಹಿಂಬಾಲಿಸುವ ಅಡೂರು ರೀತಿ ತುಂಬಾ ಸ್ತುತ್ಯರ್ಹ. ಹೀಗಿರುವ ಹಿಮ್ಮೇಳ ಸರಳವಾಗಿದ್ದರೂ ಅದು ಶ್ರೀಮಂತಿಕೆಯನ್ನು ಮೆರೆಸಬಲ್ಲುದು. ಉತ್ತಮ ಹೊಂದಾಣಿಕೆಯ ಚೆಂಡೆ ಮದ್ದಲೆ.

ಯಕ್ಷಗಾನ ಕೇವಲ ರಂಜನೆಯಲ್ಲ ಅದರಲ್ಲಿರುವ ಅಂತಃಸತ್ವ ಇಂತವುಗಳಿಂದಲೇ ಮನವರಿಕೆ ಮಾಡಿಕೊಳ್ಳಬೇಕು. ಏನೇನೋ ತಂತ್ರಗಳಿಂದ ತಾತ್ಕಾಲಿಕ ಮನರಂಜನೆಯೇ ಉದ್ದೇಶವಾಗಿರಿಸಿಕೊಂಡು ಹಾಡುವ ಇಂದಿನ ಯುವ ಪೀಳಿಗೆಯ ಭಾಗವತರೂ ಹಾಗು ಅದನ್ನು ಹಿಂಬಾಲಿಸುವ ಹುರಿದುಂಬಿಸುವ ಪ್ರೇಕ್ಷಕರು ಇದನ್ನು ತನ್ಮಯರಾಗಿ ಆಲಿಸಿದಲ್ಲಿ ಪರಂಪರೆಯ ಈ ಹಾಡುಗಾರಿಕೆಯ ಮಹತ್ವ ಮತ್ತು ಅದರ ಸತ್ವ ಆಳವನ್ನು ಮನವರಿಕೆ ಮಾಡಿಕೊಳ್ಳಬಹುದು. ಪರಂಪರೆಯನ್ನು ಪ್ರಶ್ನಿಸುವುದು ಸುಲಭ ಆದರೆ ಅದರ ಸತ್ವ ಪ್ರಶ್ನಾತೀತವಾಗಿದೆ. ಇವತ್ತು ಹಾಡಿದ ಶೈಲಿ ನಾಳೆಗೆ ರುಚಿಸದೆ ಇರಬಹುದು ಆದರೆ ಶುದ್ದ ಸಂಪ್ರದಾಯದ ಒಳ ಹರಿವು ಇಂದಿಗೂ ಪ್ರವಹಿಸುತ್ತಲೇ ಇದೆ.ಅದುದರಿಂದಲೇ .ಬಲಿಪ್ಪರ ಭಾಗವತಿಕೆ ಎಂಬುದು ಅದು ಕರತಾಡನವನ್ನು ಬಯಸುವುದಿಲ್ಲ ನಮ್ಮ ಮನಸ್ಸಿನ ಭಾವನೆಯ ನರಗಳನ್ನು ಮುಷ್ಟಿಯಲ್ಲಿ ಹಿಡಿದು ಹೊರತರುತ್ತದೆ. ಅಂತಹ ಅಂತರಂಗದ ಸೆಳೆತವನ್ನು ಜಾಗ್ರತಗೊಳಿಸುತ್ತದೆ.ಈ ಪರಂಪರೆಯ ಭಾಗವತಿಕೆಗೆ ಚಲಾವಣೆಯ ನಾಣ್ಯವಾಗುವ ತುಡಿತವಿಲ್ಲ . ಅಂತರಂಗದ ಭಾವನೆಗಳೇ ಚಲಾವಣೆಯನ್ನು ಉಂಟುಮಾಡುತ್ತವೆ. ನನ್ನ ಅಪೂರ್ವ ಸಂಗ್ರಹಗಳಲ್ಲಿ ಒಂದಾಗುವ ಈ ಧ್ವನಿ ಮುದ್ರಿಕೆ ನಿರಂತರ ಧ್ವನಿಯನ್ನು ಹೊರಹೊಮ್ಮಿಸಲೆಂದೇ ನನ್ನ ಬಯಕೆ. ಇದರ ನಿರ್ಮಾತೃಗಳು ಹಾಗು ಸಕಲ ಸಹಕಾರವನ್ನು ಇತ್ತವರಿಗೆ ಈ ಮೂಲಕ ಒಂದು ನಮನ. ಕೊನೆಯಲ್ಲಿ ಹಾಡುವ ಪದ ದೇವ..... ನೀನೆ ಗತಿಯೇನುತ ನಾವಿವರೆಗೆ ನಂಬಿರಲು.................. ಉದಯ ರಾಗದಲ್ಲಿ ಹಾಡಿದ ಭಾಮಿನಿ ತುಂಬಾ ಭಾವುಕವರನ್ನಾಗಿ ಮಾಡುತ್ತಾ. ಅರ್ಥಪೂರ್ಣವೆನಿಸಿದೆ.






Friday, July 31, 2009

ಎಂಗಳ ಪದ್ಯಾಣ ಗಣಪ್ಪಣ್ಣ..

ಕಳೆದು ಹೋದ ದಿನಗಳನ್ನು ಮೆಲುಕುವಾಗ ಯಕ್ಷಗಾನಕ್ಕೆ ಸಂಬಂಧಿಸಿ ಹಲವು ನೆನಪಿನ ಸಂಕೋಲೆ ಬೆಳೆಯುತ್ತಾ ಹೋಗುತ್ತದೆ. ಅವುಗಳಲ್ಲೂ ಮಂಗಳೂರು ಹಾಗು ನಮ್ಮೂರ ಬಾಯಾರು ಆಸುಪಾಸು ನೋಡಿದ ಆಟಗಳು ಇಂದಿಗೂ ನೆನಪಿನ ಪುಟಗಳಲ್ಲಿ ಆಳವಾದ ಮುದ್ರೆಗಳನ್ನು ಒತ್ತಿವೆ. ಅನುಭವಿಸಿದ ರಸಘಳಿಗೆ ಇನ್ನು ಪುನರಾವರ್ತನೆ ಆಗುವುದು ಅಸಾಧ್ಯ.ಹೀಗಿದ್ದರೂ ಮೊದಲು ಯಕ್ಷಗಾನ ಬಯಲಾಟಗಳು ಆಗುತ್ತಿದ್ದ ಸ್ಥಳಗಳನ್ನು ನೋಡುತ್ತಿದ್ದಂತೆ ಮನಸ್ಸಿನಲ್ಲಿ ನೆನಪಿನ ಸುರುಳಿಗಳು ಕಳಚತೊಡಗುತ್ತವೆ. ಅದರಲ್ಲೂ ಬಾಯಾರು ಸೊಸೈಟಿ ಬಳಿಯ ವಿಶಾಲ ಬಯಲು ಪ್ರದೇಶ .. ಈಗ ಅದು ತನ್ನ ವೈಶಾಲ್ಯತೆಯನ್ನು ಕಳೆದುಕೊಂಡಿದೆ. ನೋಡುವಾಗ ಎಷ್ಟೊಂದು ಕಲಾವಿದರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿ ಮತ್ತೂ ನನಗೂ ಅಂತಹ ಪ್ರದರ್ಶನ ಗೋಚರಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಕಳೆದ ಸುಮಾರು ೨೦ ವರ್ಷಗಳ ಹಿಂದಿನ ಯಕ್ಷಗಾನ ವಾತಾವರಣ, ನನ್ನ ರೀತಿಯಲ್ಲಿ ಹೇಳುವುದಾದರೆ ಅದು ಯಕ್ಷಗಾನಕ್ಕೆ ಸಂಬಂಧಿಸಿದಂತೆ "ಸ್ವರ್ಣ ಯುಗ " ಎಷ್ಟೊಂದು ಮೇಳಗಳು. ಅದರಲ್ಲೂ ಡೇರೇ ಮೇಳಗಳ ಸಂಖ್ಯೆ ಅಧಿಕ. ಒಂದನ್ನೊಂದು ಹಿಂದಿಕ್ಕುವ ಪೈಪೋಟಿಯ ಪ್ರದರ್ಶನಗಳು. ಕಲಾಕ್ಷೇತ್ರಕ್ಕೆ ಬರುವ ಕಲಾವಿದರ ಸಂಖ್ಯೆ ಕೂಡ ಗಮನಾರ್ಹ. ಇಂತಹ ಕಾಲಘಟ್ಟ ನನ್ನ ನೆನಪಿನ ಪರದೆಯಲ್ಲಿ ಸುಳಿದಾಡುವಾಗ ಒಂದೊಮ್ಮೆಯದರೂ ಈ ಘಟನೆ ಪುನರಾವರ್ತನೆ ಯಾಗಬಾರದೆ?

ಅಂತಹ ಸ್ವರ್ಣಯುಗದಲ್ಲಿ ಮೆರೆದಾಡಿದ ಹಲವು ಮೇಳಗಳಲ್ಲಿ ಶ್ರೀ ಮಹಾಮ್ಮಾಯಿ ಮೇಳ ಸುರತ್ಕಲ್ , ವಾಡಿಕೆಯಲ್ಲಿ ಸುರತ್ಕಲ್ ಮೇಳ. ಬಹುಶ: ಅಂದಿನ ದಿನಗಳಲ್ಲಿ ಒಂದು ರೀತಿಯ ವೆತ್ಯಸ್ಥ ಸ್ಥಾನವನ್ನು ಹೊಂದಿದ್ದ ವಿಶಿಷ್ಟ ಮೇಳ. ಯಾವುದೇ ಪ್ರಸಂಗವಾದರೂ (ಪುರಾಣಿಕ , ಸಾಮಾಜಿಕ ,ತುಳು ) ತನ್ನದೇ ರೀತಿಯಲ್ಲಿ ಪ್ರದರ್ಶನ ಕೊಡುತ್ತಿದ್ದ ಮೇಳ. ಇದಕ್ಕೆ ಕಾರಣ ಅದರಲ್ಲಿ ಇದ್ದ ಹಲವು ಮಹಾನ್ ಕಲಾವಿದರುಗಳು. ಹಿಮ್ಮೇಳ ವಾದಕರು. ಶೇಣಿ, ತೆಕ್ಕಟ್ಟೆ, ಕೊಕ್ಕಡ , ಜೋಗಿ ಹೀಗೆ ಕಲಾವಿದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂದಿಗೂ ನಾನು ರೋಮಾಂಚಿತನಾಗುವುದು ಪದ್ಯಾಣ ಗಣಪಣ್ಣನ ಇಂಪಾದ ಪದಗಳ ನೆನಪಿನ ಸುರುಳಿ ಬಿಚ್ಚಿದಾಗ. ಕೆಲವು ಸಲವಂತೂ ನಮ್ಮೂರಿಂದ ದೂರವಿರುವ ಉದ್ಯಾವರ ಮಾಡ , ಕುಂಬಳೆ ಇನ್ನು ದೂರವೆಂದರೆ ಮಂಗಳೂರು ಹೀಗೆ ಸುರತ್ಕಲ್ ಮೇಳದ ಪ್ರಧರ್ಶನಕ್ಕೆ ತವಕದಿಂದ ಧಾವಿಸುತ್ತಿದ್ದೆ.

ಕೆಲವೊಂದು ಆಟಗಳು ಇನ್ನು ನನ್ನ ಮನಸಲ್ಲಿ ಹಸಿರನ್ನು ಕಳೆಯದೆ ಹಾಗೆ ನೆನಪಿನ ಹೂರಣವನ್ನು ನೀಡುತ್ತಾ ಬಂದಿದೆ. ಒಂದು ಕಾಲದಲ್ಲಿ ಪೂರ್ವ ರಂಗದ ದ್ವಿತೀಯಾರ್ಧಕ್ಕೆ "ಚಿಕ್ಕ ಪ್ರಾಯದ ಬಾಲೆ ಚದುರೆ..." ಎಂದು ಆಲಾಪಿಸುತ್ತಿದ್ದ ಗಣಪ್ಪಣ್ಣ ಗಡಸು ಹಾಗು ಇಂಪು ಎರಡನ್ನೂ ಬೆರೆಸಿ ಪದ ಹೇಳುತ್ತಿದ್ದ ರೀತಿ ಬಾಲಕನಾದ ನನ್ನನ್ನು ಪುಳಕಿತನಾಗಿ ಮಾಡುತ್ತಿತ್ತು. ಬಲಿಪ್ಪಜ್ಜನ ನಂತರದ ಸ್ಥಾನದಲ್ಲಿ ಭದ್ರವಾಗಿ ನನ್ನನ್ನು ಆವರಿಸಿದ ಈ ಮಹಾನ್ ಕಲಾವಿದನ ಬಗ್ಗೆ ಅಂದಿನ ಕೆಲವು ಆಟಗಳ ನೆನಪಿನ ಸುರುಳಿಗಳು ಜತೆಯಾಗಿ ಸೇರಿಕೊಂಡಿವೆ.

ಅದೊಂದು ಆಟ.. ಶನೀಶ್ವರ ಮಹಾತ್ಮೆ.. ಶೇಣಿಯವರ ವಿಕ್ರಮಾದಿತ್ಯ. ಕೊಕ್ಕಡ ಈಶ್ವರ ಭಟ್ಟರ ಆಲೋಲಿಕೆ ಜತೆಯಾಗಿ ಗಣಪಣ್ಣನ ಭಾಗವತಿಕೆ.. ಶೇಣಿ ಅಜ್ಜ ಅವರದೇ ಸ್ಥಾಯಿಯಲ್ಲಿ ಇವರೊಂದಿಗೆ ಒಂದೆರಡಾದರೂ ಪದಕ್ಕೆ ಧ್ವನಿ ಸೇರಿಸದೆ ಇರುತ್ತಿರಲಿಲ್ಲ. ಬಹುಶ ಅವರ ಸಹಜ ಶೈಲಿಯೋ ನಾನಂತೂ ಪದ್ಯಾಣರ ಸ್ವರದಿಂದ ಪ್ರೇರಿತರಾಗಿ ಹಾಡುತ್ತಾರೆಂದೇ ತಿಳಿದಿದ್ದೆ. ಆದಿನದ ಶನೀಶ್ವರ ಮಹಾತ್ಮೆ ಅದ್ಭುತವಾಗಿತ್ತು.ಶೇಣಿಯವರೊಂದಿಗಿನ ಇವರ ಭಾಗವತಿಕೆ ಯಕ್ಷಗಾನ ಕಲಾರಸಿಕರಿಗೆ ಒಂದು ರಸದೌತಣ. ಶೇಣಿಯ ಆತ್ಮ ಸ್ವರವೇನೋ ಇವರ ಕಂಠ ಎಂದು ಅನ್ನಿಸಿಬಿಡುತ್ತದೆ. ಮುಂಜಾವಿನ ಪದ್ಯಾಣರ ದೀಪಕ ರಾಗದ ಪದವಂತೂ ಇನ್ನೂ ಮೆಲುಕು ಹಾಕಿಸುತ್ತದೆ. ಬಾಯರಿನಲ್ಲಿ ಆಟವಾದರೆ "ಎಂಗಳ ಗಣಪ್ಪ.." ಅಂತ ಬರುವ ಹಿತೈಷಿಗಳ ಸಂಖ್ಯೆಯೂ ಬಹಳವಾಗಿತ್ತು. ಅದೂ ಒಂದು ಕಾಲ.

ಬಹುಷಃ ಅಗರಿಯ ನಿವೃತ್ತಿಯ ನಂತರ ಪೂರ್ಣವಾಗಿ ಮೇಳದ ಚುಕ್ಕಾಣಿಯನ್ನು ಹಿಡಿದ ಗಣಪಣ್ಣ ಎರಡನೇ ಭಾಗವತರಾಗಿ ವೇದಿಕೆಯೇರ ತೊಡಗಿದಾಗ ನನ್ನಂತಹ ಅಭಿಮಾನಿಗಳು ...ರಾತ್ರೆ .ಅದೇ ಸಮಯಕ್ಕೆ ಆಟಕ್ಕೆ ಆಗಮಿಸಲಾರಂಭಿಸಿದ್ದು ಕೇವಲ ಇವರ ಪದ ಕೇಳುವ ತವಕವಲ್ಲದೆ ಮತ್ತೇನೂ ಅಲ್ಲ. ಮನೆಯಲ್ಲಿ ಒಂದು ನಿದ್ದೆ ಮಾಡಿ ಸರಿಯಾಗಿ ರಾತ್ರಿ ಒಂದು ಗಂಟೆಗೆ ಎದ್ದು ಬೈಕು ತೆಕ್ಕೊಂಡು ಆಟಕ್ಕೆ ಹೋದ ಸಂದರ್ಭಗಳು ನೆನಸುವಾಗ ಛೇ... ಆ ಕಾಲ ಕಳೆದು ಹೋಯಿತೆ ಅನ್ನಿಸಿದ್ದಿದೆ.



ಅತ್ಯಂತ ಉಚ್ಚ ಸ್ಥಾಯಿಯ ಕಂಠ ಅಷ್ಟೇ ಸಲೀಸಾಗಿ ಆಕರ್ಷಕವಾಗಿ ಹಾಡುತ್ತಿದ್ದ ರೀತಿ ಸಂಪ್ರದಾಯಿಕವೋ ನವ್ಯವೋ ಎಲ್ಲವನ್ನೂ ಜತೆಯಲ್ಲೇ ಮೇಳೈಸಿಕೊಂಡು ಬಹು ಬೇಗನೆ ಜನಮಾನಸವನ್ನು ಗೆದ್ದುಬಿಟ್ಟ ಪ್ರತಿಭೆ ಇವರದ್ದು. ಹಲವು ಹಿರಿಯಭಾಗವತರ ಸಮರ್ಥ ಶೈಲಿಯನ್ನು ಇವರು ಕರಗತ ಮಾಡಿಕೊಂಡು ತನ್ನದೇ ರೀತಿಯಲ್ಲಿ ಪ್ರಸ್ತುತಪಡಿಸುವ ರೀತಿ ತುಂಬಾ ಕುಷಿಕೊಡುತ್ತಿತ್ತು. ತೆಂಕಬೈಲು, ಬಲಿಪ , ಕಾಳಿಂಗ ನಾವಡ ಹೀಗೆ ಎಲ್ಲ ಭಾಗವತರ ಶೈಲಿಯಲ್ಲಿ ಹಾಡುತ್ತಿದ್ದರೂ.ಇವರನ್ನು ಅಭಿಮಾನಿಗಳು ಮೆಚ್ಚುವುದು ಇವರ ಅಗರಿ ಶೈಲಿಗೆ. ಹಿರಿಯ ಭಾಗವತ ಅಗರಿ ಶ್ರೀನಿವಾಸ ಭಾಗವತರ ಶೈಲಿಯಲ್ಲಿ ಇವರಷ್ಟು ಸುಂದರವಾಗಿ ಹಾಡಬಲ್ಲ ಭಾಗವತ ಇನ್ನೊಬ್ಬನಿಲ್ಲ ಎಂದೇ ನನ್ನ ಅಭಿಮತ.ಯಾವುದೇ ಶೈಲಿಯನ್ನು ಸುಲಭವಾಗಿ ಕರಗತ ಮಾಡುವ ಇವರ ಪ್ರತಿಭೆ ಮತ್ತು ಇವರದೇ ಆದ ಒಂದು ಪದ್ಯಾಣ ಶೈಲಿ ಬಹುಶ ಇವರ ಭಾಗವತಿಕೆ ಎಂದರೆ ಅದೊಂದು ಎಲ್ಲ ಸರಕುಗಳಿರುವ ಬ್ರಿಹತ್ ಮಳಿಗೆಯಂತೆ. ನಿಮ್ಮನ್ನು ಯಾವುದೊ ಸ್ವರ ಸಾಮ್ರಾಜ್ಯ ದರ್ಶನ ಮಾಡಿಸಬಲ್ಲುದು.

ನನ್ನ ಹಲವು ಯಕ್ಷಗಾನ ಧ್ವನಿಮುದ್ರಿಕೆ ಸಂಗ್ರಹಗಳಲ್ಲಿ ಇವರದ್ದೇ ಅದ ಹಳೆಯ ಯಕ್ಷಗಾನ ಪದಗಳನ್ನು ಕೇಳಿದರೆ , ಏರಿದಷ್ಟು ಏರಿಕೊಂಡು ಹೋಗುವ ಇವರ ಸ್ವರ ಮಾಧುರ್ಯ ಅಂತೆ ಸಲೀಸಾಗಿ ಹಾಡುವ ಪದಗಳನ್ನು ಯಕ್ಷಗಾನ ಪ್ರೇಮಿಯನ್ನು ಹುಚ್ಚು ಹಿಡಿಸಿಬಿಡುತ್ತದೆ. ಸುಮಾರು ೧೮-೨೦ ವರ್ಷ ಮೊದಲು ಹೊರಬಂದ ಕರ್ಣಾವಸಾನ ಯಕ್ಷಗಾನ ಧ್ವನಿ ಮುದ್ರಿಕೆಯ ಇವರ ಪದಗಳು ಇಂದಿಗೂ ಕೇಳಿದಷ್ಟು ಕೇಳಿಸುವಂತೆ ಮಾಡುತ್ತವೆ.ಏನು ಸಾರಥಿ... ,ಎಲೆ ಭಾನು ಜಾತ......., ಎಲೆ ಪಾರ್ಥ...ನೀ ಕೇಳು..., ಎನ್ನ ಕೊಂದವ ಕೃಷ್ಣನೂ ಎಂಬ ಈ ಪದಗಳು.ಈಗಲೂ ಸಾಧ್ಯವಿದ್ದರೆ ಕೇಳಿ ನೋಡಿ ಅದ್ಭುತ ಎನ್ನಬಹುದಾದ ಸ್ವರಮಾಧುರ್ಯದ ಪದಗಳು. ಕರ್ಣಾವಸಾನದ ಪದಗಳು ಒಂದು ರೀತಿಯಲ್ಲಿ ಇವರ trumph card ಪದಗಳು.ಇವರ ಹಳೆಯ ಕೆಲವು ಪದಗಳನ್ನು ಕೇಳಿ ಆ ಗುಂಗಿನಿಂದ ಹೊರಬರುವುದು ನಿಜಕ್ಕೂ ತುಂಬಾ ಕಷ್ಟ.

ಇವರ ಶೈಲಿಗೆ ಶರೀರ ಶಕ್ತಿ..(physical fitness) ತುಂಬಾ ಅಗತ್ಯವಿರುವುದರಿಂದ ಕೈಕೊಡುವ ಇವರ ಆರೋಗ್ಯ ನಮ್ಮ ಪಾಲಿಗಾದ ದೊಡ್ಡ ನಷ್ಟ ಎಂದೇ ಹೇಳಬಹುದು . ಹೀಗಿದ್ದರೂ ಅಪಾರ ಅಭಿಮಾನಿಗಳನ್ನು ಹೊಂದಿದ ಇವರ ಪ್ರತಿಬೆ ಸಾಮಾನ್ಯವೇನೂ ಅಲ್ಲ. ಮೊದಲಿನಂತೆ ಸ್ವರವೇರಿಸಿ ಹಾಡುವಲ್ಲಿ ದೈಹಿಕ ಆರೋಗ್ಯ ಕೈಕೊಡುತ್ತದೆ ಎಂದು ಇವರೇ ಪ್ರಾಮಾಣಿಕವಾಗಿ ಹೇಳುವಾಗ ಅಭಿಮಾನಿಗಳ ಹೃದಯ ಭಾರವಗಿಬಿದುತ್ತದೆ. ಅಂತಹ ಚುಂಬಕ ಶಕ್ತಿ ಇವರ ಭಾಗವತಿಕೆಯಲ್ಲಿದೆ. ಹತ್ತು ಹಲವು ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿದ ಇವರ ಸೃಜನ ಶೀಲತೆ ಮತ್ತು ಪ್ರತಿಭೆ ನಿಜಕ್ಕೂ ಅಭಿಮಾನಿಗಳಲ್ಲಿ ಪುಳಕವನ್ನುಂಟುಮಾಡುತ್ತವೆ.