"ಇದು ವಿಮರ್ಶೆಯಲ್ಲದ ಚಿಂತನ"

Sunday, November 28, 2010

ವೇಷ ಕಳಚಿದ ಸಮಯ ಭಾಗ ೬


ಈ ಕಥೆಯಕೊನೆಯ ಭಾಗವಿದು. ಇದರಿಂದ ಮೊದಲ ಭಾಗಗಳ ಲಭ್ಯವಾಗುವ ತಾಣಗಳ ಕೊಂಡಿಯನ್ನು ಕೊಡಲಾಗಿದೆ.
ಭಾಗ ೧    ಭಾಗ ೨  ಭಾಗ ೩  ಭಾಗ ೪   ಭಾಗ ೫



ಇನ್ನು ಮುಂದೆ ಓದಿರಿ......

ಭಾಗ ೬

ವೇಗವೊಂದೇ ಮಂತ್ರವೆಂದು ಪಠಿಸುವಂತಿದ್ದ ಬಸ್ ಡ್ರೈವರ್ ಬಸ್ಸನ್ನು ಬುಸುಗುಟಿಸುತ್ತಾ ಹೆದ್ದಾರಿ ಬದಿಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದಾಗ, ಆ ಎಕ್ಸ್ ಪ್ರೆಸ್ಸ್ ಬಸ್ ಪುನಃ ಹೊರಡುವಲ್ಲಿ ಉದ್ಯುಕ್ತವಾದಂತೆ ಭಟ್ಟರು ಅವಸರವಸರವಾಗಿ ಎದ್ದರು, ಅದು ಬಸ್ ನಿರ್ವಾಹಕನಿಗೆ ನಿಧಾನದಂತೆ ತೋರಿತು. ನಗರದಿಂದ ಬಿಡುವಾಗ ಹೊರಡಲು ಮನಸ್ಸಿಲ್ಲದಂತೆ ನಿಧಾನವಾಗಿ ಹೊರಡುವ ಈ ಬಸ್ಸು, ಅದರ ಹಿಂದಿನ ಬಸ್ ನವರೊಂದಿಗೆ ಜಗಳವಾಡಿಯೊ ಬೈದಾಡಿಯೋ ನಗರ ಬಿಡುವವರು ಮತ್ತೆ ಬೇಕಾದ ಊರಲ್ಲಿ ಪ್ರಯಾಣಿಕರನ್ನು ಇಳಿಸುವಾಗ ಮಾತ್ರ ಇನ್ನಿಲ್ಲದ ಅವಸರ ತೋರಿಸುವುದು ವಿಚಿತ್ರ ಅನ್ನಿಸಿಬಿಡುತ್ತದೆ. ನಿರ್ವಾಹಕನ ಅಸಮಧಾನ ನೋಟ ಗಮನಿಸಿದಂತೆ ಬಸ್ ನಿಂದ ಇಳಿದು ಸುತ್ತಲೂ ನೋಡಿದರು. ಹಲವು ಸಲ ಬರುವ ಪರಿಚಿತ ಸ್ಥಳ. ಸಾಧಾರಣ ನಗರದಂತಿದ್ದ ಬಸ್ ಸ್ಟಾಪ್ ಅದು. ಹೆಗಲಲ್ಲಿದ್ದ ಬ್ಯಾಗ್ ಅನ್ನು ಸರಿಪಡಿಸಿ ಅಲ್ಲಿಂದ ಕವಲು ಹೊಡೆದ ರಸ್ತೆಯ ಕಡೆಗೆ ನೋಡಿದರು. ದೂರದಲ್ಲಿದ್ದ ಇನ್ನೊಂದು ಬಸ್ ಸ್ಟಾಪ್ ನತ್ತ ನೋಡಿ ನಡೆದರು. ಇಂದಿನ ಆಟದ ಸ್ಥಳಕ್ಕೆ ಹೋಗಬೇಕಾದರೆ ಆ ಮೂಲಕ ಹೊರಡುವ ಬಸ್ ಹಿಡಿಯಬೇಕು.



ಬಸ್ ಸ್ಟಾಪ್ ನಲ್ಲಿ ಬಸ್ ಬರುವದಿಕ್ಕನ್ನೇ ನೋಡುತ್ತಿರಬೇಕಾದರೆ ತಮ್ಮ ಭುಜವನ್ನು ಹಿಂದಿನಿಂದ ತಟ್ಟಿದಂತಾಗಿ ತಲೆ ತಿರುಗಿಸಿ ನೋಡಿದರು. ಅದು ಅಲ್ಲೆ ಬಳಿಯಲ್ಲೆ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ತಿಮ್ಮಣ್ಣ ಭಟ್ಟರು. ಪರಿಚಿತ ನಗುವಿನಿಂದ...”ನಮಸ್ಕಾರ..ಸ್ವಾಮಿ. ಇವತ್ತು ನಮ್ಮೊರಲ್ಲೆ ಅಲ್ವ ಆಟ..?”

“ಹೌದು .” ಗೆಲುವಿನ ನಗು ಬೀರಿದರು.

“ಬಸ್ ಗೆ ಇನ್ನೊ ಸ್ವಲ್ಪ ಸಮಯ ಇದೆ. ಬನ್ನಿ ಇಲ್ಲಿ” ಎನ್ನುವ ಆಹ್ವಾನಕ್ಕೆ ಮಣಿದು ಅವರ ಜತೆ ಅಂಗಡಿ ಕಡೆ ನಡೆದರು. ಈ ಕಡೆ ಬಂದರೆ ಇದೇನೂ ಹೊಸತಲ್ಲ ತಿಮ್ಮಣ್ಣ ಭಟ್ಟರ ಅಂಗಡಿ ಕಾಲಯಾಪನೆಗೆ ಖಾಯಂ ಜಾಗ. ಸರ್ವೇಸಾಮಾನ್ಯ ಎಲ್ಲ ಹೆಚ್ಚಿನ ಎಲ್ಲಾ ಕಲಾವಿದರ ಪರಿಚಯ ಇರುವ ತಿಮ್ಮಣ್ಣ ಭಟ್ಟರಿಗೆ ಆಟದ ಕಲಾವಿದರೆಂದರೆ ಗೌರವ ಮಿಶ್ರಿತ ಸಲುಗೆ. ಹಾಗಾಗಿ ಇವರು ಕರೆದಾಗ ಬಂದರೆ ಒಳಗಿದ್ದ ಕುರ್ಚಿಯನ್ನು ಅಂಗಡಿಯ ಹೊರ ಜಗಲಿಯಲ್ಲಿಟ್ಟು ಕೂರಿಸಿ ಹತ್ತಿರದ ಬೊಂಡದವನಿಂದ ಒಂದು ಬೊಂಡ ತರಿಸಿ ಕುಡಿಸಿ ಸತ್ಕರಿಸುವುದು ಒಂದು ವಾಡಿಕೆ. ಮತ್ತೆ ಅದೂ ಇದು ಕ್ಷೇಮ ಸಮಾಚಾರ ಮಾತುಕತೆ.



ಹೊರಜಗುಲಿಯಲ್ಲಿಟ್ಟ ಕುರ್ಚಿಯಲ್ಲಿ ಕುಳಿತಾಗ ಒಂದು ರೀತಿ ಆರಾಮ ಎನಿಸಿತು. ಅಲ್ಪ ಮಟ್ಟಿನ ಬೇಗುದಿ ದೂರವಾದ ಅನುಭವ. ಪುತ್ತೂರಿನ ಆಟದ ದೊಡ್ಡದೊಂದು ಭಿತ್ತಿ ಪತ್ರ ಅಂಗಡಿ ಹೊರಗೆ ನೇತಾಡುತ್ತಿತ್ತು. ತುಸು ಹೊತ್ತಿನಲ್ಲೇ ಮಾಮೂಲಿನಂತೆ ಬೊಂಡ ಬಂತು. ಅದನ್ನು ಕುಡಿದಾಗ ಹಾಯೆನಿಸಿತು. ಅಂಗಡಿಯ ಅಲ್ಪ ಸ್ವಲ್ಪ ವ್ಯಾಪಾರದ ಮಧ್ಯೆ ತಿಮ್ಮಣ್ಣ ಭಟ್ಟರು ಮಾತಿಗೆ ತೊಡಗಿದರು. ಅಲ್ಲಿಗೆ ಬರುವ ಗಿರಾಕಿಗಳು ಕೆಲವೊಮ್ಮೆ ಸೇರುವುದು ಇರುತ್ತಿತ್ತು.



“ನಮ್ಮ ಮನೆ ಆ ಕಡೆ ಇರುವ ಪದ್ಮನಾಭ ಆಗಲೆ ಜೀಪು ತೆಕ್ಕೊಂಡು ಕೆಳಗಿನ ಪೇಟೆಗೆ ಹೋಗಿದ್ದಾನೆ. ಅವನ ಜೀಪಿನಲ್ಲಿ ಆರಾಮದಲ್ಲಿ ಹೋಗಬಹುದು. ಸಾಯಂಕಾಲದ ಈ ಬಸ್ಸುಗಳು ತುಂಬ ರಶ್ ಅಲ್ವಾ? “



ಇದು ಯಾವಾಗಲಿನ ಪರಿಪಾಠ. ಭಟ್ಟರ ಈ ಅಂಗಡಿ ಒಂದು ಸಂವಹನ ತಾಣ. ಆ ಕಡೆಯಿಂದ ಬರುವವರಿಗೆ ಒಂದು ಸಲ ಇಲ್ಲಿ ಮುಖ ತೊರಿಸಿ ಹೋಗುವ ವಾಡಿಕೆ. ತಿಮ್ಮಣ್ಣ ಭಟ್ಟರಿಗೂ ಇದೊಂದು ಜನಸೇವೆಯಂತೆ. ಆ ಕಡೆ ಈ ಕಡೆ ಓಡಾಡುವವರಿಗೆ ಇದು ತಮ್ಮ ಸಾಮಾನು ಸಲಕರಣೆ ಇಡಲು ಕೆಲವೊಮ್ಮೆ ಪ್ರಶಸ್ತ ಜಾಗ. ಮಾಮೂಲಿನಂತೆ ಬಂದ ಬೊಂಡ ಕುಡಿದ ಮೇಲೆ ಮಧ್ಯಾಹ್ನದ ನಂತರ ಇದ್ದ ಉದರ ಹಾಗು ಮಾನಸಿಕ ತಳಮಳ ಕೊಂಚ ಕಡಿಮೆಯಾಯಿತು.

ಯಾರೋ ಅಂಗಡಿಗೆ ಬಂದ ಗಿರಾಕಿಯೊಬ್ಬ ತಿಮ್ಮಣ್ಣನವರಲ್ಲಿ ಮೆಲು ದನಿಯಲ್ಲಿ ತುಳುವಿನಲ್ಲಿ ಭಟ್ಟರೆಡೆಗೆ ಸನ್ನೆಮಾಡಿ ಕೇಳಿದ “ಇಂಬೆರ್ ಆಟೊಡುಪ್ಪುನಾರ್ ಅತ್ತಾ?” ಎಷ್ಟೇ ಮೆಲುದನಿಯಲ್ಲಿ ಕೇಳಿದರೂ ಭಟ್ಟರ ಕಣ್ಣು ಅವನ ಮಾತಿನ ಹಾವಭಾವ ನೋಡಿಯೇ ಕೇಳಿದ ಪ್ರಶ್ನೆಯನ್ನು ಊಹಿಸಿತು. ಗುಂಪಿನಲ್ಲಿ ಬೇರೆಯಾಗಿ ಗುರುತಿಸಲ್ಪಡುವ ಅನುಭವ ಇಂದೇನಲ್ಲ. ಅದು ಹಲವು ಸಲದ ಅನುಭವ. ಜನ ಪ್ರವಾಹದಲ್ಲಿ ಬೇರೆಯಾಗಿ ನಿಲ್ಲುವ ಗುಣ ಬಹುಶಃ ಯಕ್ಷಗಾನ ಕಲಾವಿದ ರೂಡಿಸಿಕೊಂಡು ಬರಬೇಕೊ ಏನೋ?



ತಿಮ್ಮಣ್ಣ ಭಟ್ಟರಿಗೆ ಅಲ್ಲಿ ಪರಿಚಯಕ್ಕೆ ಕೊರತೆಇಲ್ಲ ಸ್ವಲ್ಪ ಹೊತ್ತಿನಲ್ಲೆ ಯಾರೊ ಒಬ್ಬ ಪರಿಚಿತರ ಬಂದ ಕಾರಿನಲ್ಲಿ ಭಟ್ಟರನ್ನು ಹತ್ತಿ “ಸರಿ ಕಾಣುವಾ” ನಗೆ ಬೀರಿ ಕಳಿಸಿದಾಗ ಬದಲಾದ ಪ್ರಸಂಗದಂತೆ ಕಾರಿನಲ್ಲಿ ಬೇರೆಯೆ ಮಾತುಕತೆ ಆರಂಭಗೊಂಡಿತು. ಎಲ್ಲ ಕಡೆಯಲ್ಲೂ ಒಂದು ಸಾಮಾನ್ಯ ವಿಷಯ ಪ್ರಸ್ತಾಪಕ್ಕೆ ಬರುವುದುಂಟು. ಇಂದಿನ ಯಕ್ಷಗಾನ ಮತ್ತು ಅದು ಬದಲಾದ ರೀತಿ. ಇದು ಕೇಳಿ ಕೇಳಿ ಕೆಲವೊಮ್ಮೆ ವೈರಾಗ್ಯ ಬರಿಸುವಷ್ಟರ ಮಟ್ಟಿಗೆ ಮುಟ್ಟುವುದು.ಮೊದಲಿನಂತೆ ಇದನ್ನು ಗಂಬೀರವಾಗಿ ಪರಿಗಣಿಸುವ ಹಾಗಿರಲಿಲ್ಲ. ಇಂತಹ ಸಂವಾದದಿಂದ ಯಾವ ಲಾಭವೂ ಇಲ್ಲ ಎಂದು ಭಾವಿಸಿದ್ದರು. ಪಾಯಸಕ್ಕೆ ಒಗ್ಗರಣೆ ರುಚಿ ನೋಡುವ ಮನೋಭಾವ ಇರುವಾಗ ಇಂದಿನ ಅಭಿರುಚಿಯನ್ನು ಬದಲಿಸಲು ಸಾಧ್ಯವೇ?



ಊರಿಂದ ಸ್ವಲ್ಪ ದೂರದಲ್ಲೆ ಬಯಲಲ್ಲಿ ಅಂದಿನ ಆಟ. ದೂರದಲ್ಲೆ ಯಕ್ಷಗಾನ ಡೇರೆ ಕಾಣುತ್ತಿತ್ತು. ನಸುಗತ್ತಲೆ ಗಾಢವಾಗುತ್ತ ಹೋಗುತ್ತಿತ್ತು. ಸುತ್ತ ಮುತ್ತ ಅಂಗಡಿ ಸಂತೆ ಅದೇ ಬೀಡಾ ಬೀಡಿ ಗುಟ್ಕಾದ ಮಾಲೆ ಎಲ್ಲವೂ ಮಾಮುಲು. ಕೇವಲ ಆಟದಲ್ಲಿ ಮಾತ್ರ ಬದಲಾವಣೆಯಲ್ಲ ಅಟದ ಬಯಲಲ್ಲಿ ಸೇರುವ ಈ ಸಂತೆಯೂ ಮೊದಲಿನಂತೆ ಕಲಾತ್ಮಕವಾಗಿದೆಯೆ? ಅಂದಿನ ಮಂದ ಬೆಳಕಿನಲ್ಲಿ ಮರದ ಬೆಂಚಿನಲ್ಲಿ ಕುಳಿತಾಗ ಗಾಜಿನ ಲೋಟದಲ್ಲಿ ತಂದಿಡುವ ಬಿಸಿ ಬಿಸಿ ತಾಜಾ ಚಹದ ರುಚಿ.. ಇಂದು ಯವಾಗಲೋ ಮಾಡಿದ ಚಹವನ್ನು ಫ್ಲಾಸ್ಕ್ ನಲ್ಲಿ ತುಂಬಿಸಿ , ಆ ಹಳಸಿದ ಚಹವನ್ನು ಸಣ್ಣ ಪ್ಲಾಸ್ಟಿಕ್ ಲೋಟದಲ್ಲಿ ಹೊಯಿದು ಕೊಡುವ ರುಚಿಯಲ್ಲಿ ಇದೆಯೆ? ಇಂದೆಲ್ಲವು ತಾಂತ್ರಿಕ.



ಜೋಬಿನಲ್ಲಿದ್ದ ಮೊಬೈಲು ಕಂಪಿಸಿದಾಗ ಯೋಚನಾ ಲಹರಿಯಿಂದ ಹೊರಬಂದ ಬಟ್ಟರು ಅದಾಗಲೇ ಚೌಕಿಯನ್ನು ಪ್ರವೇಶಿಸಿಯಾಗಿತ್ತು. ಮೈಕದಲ್ಲಿ ಯಾವುದೋ ಭಕ್ತಿ ಗೀತೆ ಕರ್ಕಶವಾದಂತೆನಿಸಿ, ಮೊಬೈಲ್ ನ್ನು ಕೈಯ್ಯಲ್ಲಿ ಹಿಡಿದು ನೋಡುತ್ತ ಚೌಕಿಯಿಂದ ಅನತಿ ದೂರಕ್ಕೆ ಭಟ್ಟರು ಬಂದು ಬಿಟ್ಟರು.



ಮುದ್ದಾಗಿ ಬರೆದ ಮಗನ ಹೆಸರು ಮೊಬೈಲ್ ಪರದೆಯಲ್ಲಿ ಬಂದಿತ್ತು. ಗಂಭೀರವಾಗಿ ಕರೆಯನ್ನು ಸ್ವೀಕರಿಸಿ “ಹೂಂ..” ಎಂದು ಗಂಭೀರವಾಗಿ ಹೂಂಗುಟ್ಟಿದರು. ಹರುಕು ಪಂಚೆ ತೆಗೆದು ಅದನ್ನು ಹೊಲಿಯಲು ಸೂಜಿ ನೂಲು ಹಿಡಿದು ಎಲ್ಲಿ ಹರುಕು ಇದೆ ಎಂದು ಹುಡುಕಿದಂತಾಯಿತು.ಮುಳ್ಳಿನ ಪೊದೆಯಲ್ಲಿ ಬಿದ್ದ ಬಟ್ಟೆ ತೆಗೆದು ಅಂಟಿಕೊಂಡ ಮುಳ್ಳನ್ನು ಒಂದೊಂದಾಗಿ ತೆಗೆವ ಪ್ರಯತ್ನ. ಎಷ್ಟು ಪ್ರಯತ್ನಿಸಿದರೂ ಅವನಿಗೇಕೆ ಬೇಜಾರು ಮಾಡಬೇಕೆಂದು ಇವರು ಅಪ್ಪನಿಗೇಕೆ ಸುಮ್ಮನೆ ನೋವು ಎಂದು ಅವನು ಹೀಗೆ ಮನಸ್ಸಲ್ಲಿದ್ದ ಹಲವು ಭಾವನೆಗಳು ಮನದಲ್ಲೇ ಸುಪ್ತ.



“ಅಪ್ಪಾ...” ಎಂದಿನ ಗಾಂಭೀರ್ಯ ಮಗನ ಧ್ವನಿಯಲ್ಲಿ ಗುರುತಿಸಲಿಲ್ಲ. ಒಂದು ವಿಧದ ತಣ್ಣಗಿನ ಅನುಭವ ಭಾಸವಾಯಿತು. ತಾನು ಅಪ್ಪನಾದ ಮೇಲೆ ಅಪ್ಪನೆಂದರೆ ಏನು ಎಂದು ತಿಳಿದುಕೊಳ್ಳುವ ತವಕವೇ? ಸಂಕೋಚ ದುಮ್ಮಾನ ರಹಿತ ಧ್ವನಿಗೆ ತನ್ನದೆಲ್ಲವನ್ನು ಒಂದು ಕ್ಷಣ ಮರೆತರು. ಇದೇ ಅಲ್ಲವೇ ಯಾವುದೇ ಹೆತ್ತವರು ತಮ್ಮ ಮಕ್ಕಳಿಂದ ಬಯಸುವುದು.ಕರಗಿ ಹೋಗುವುದು. ಇಲ್ಲಿ ಪ್ರದರ್ಶನದ ಸಂಪತ್ತು ವರ್ಚಸ್ಸು ನಿಜವಾದ ಸಂವಹನದಲ್ಲಿ ಗೌಣವಾಗಿಬಿಡುತ್ತದೆ. “ಅಪ್ಪಾ..” ಬೇರೆನೂ ಬೇಡ ಇದನ್ನೇ ಹತ್ತೂಸಲ ಸಾಲದು ಮತ್ತೂ ಮತ್ತೂ ಕೇಳುವ ಚಪಲ ಏಕೆ?ನಿಜವಾದ ದೇಹಾರೋಗ್ಯವು ಹೃದಯದ ಇಂತಹ ಹಿತವಾದ ಬಡಿತದಿಂದ ತುಂಬಿಬರುವುದು. ಕೈಯ್ಯಲ್ಲಿ ಹಿಡಿದ ಮೊಬೈಲ್ ಕಂಪಿಸಿತು, ಕಣ್ಣಂಚಿನ ನೀರು ಇನ್ನು ಮೊಬೈಲ್ ನೊಳಗೆ ಹೋದರೆ...ಮುಖ ತಿರುಗಿಸಿ ಶಲ್ಯದಿಂದ ಕಣ್ಣಂಚು ಸವರಿದರು.ಭಾರವಾದ ಹೃದಯ ತನ್ನೆಲ್ಲ ಭಾರವನ್ನು ಕಾಲಮೇಲೆ ಹಾಕಿದಂತೆ ಭಾಸವಾಯಿತು. ನರಗಳೆ ಎದ್ದು ಕಾಣುವ ಕೈ ಕಂಪಿಸುವ ಬೆರಳು ಹಿಡಿದ ಮೋಬೈಲನ್ನು ಮತ್ತು ಹಿಡಿತ ಬಿಗಿಗೊಳಿಸಿತು. ಈ ಮಾತು ಈ ಧ್ವನಿ ನುಸುಳಿ ಹೋಗದಿರಲಿ. ಬಹುಶಃ ತಮ್ಮ ಮನಸ್ಸು ಹಲವು ನೋವನುಭವಿಸಿ ಕರಗುವ ಹಂತಕ್ಕೆ ಬಂತೆ. ಹಲವು ಸಮಯ ಕಳೆಯಿಗುತು ಮಗನ ಜತೆ ಮಾತನಾಡದೆ. ಬಿಗುಮಾನದ ಬಂಧನ ಸಡಿಲವಾಯಿತು. ಮಗನ ಮಾತು ಮುಂದುವರಿಯಿತು. ಅಲ್ಲ ಇವರ ಮೌನ ಅದನ್ನು ಮುಂದುವರೆಸಿತು.

“ ಅಪ್ಪ ನಿಮ್ಮಂತೆ ನಾನು ಅಪ್ಪನಾದೆ. ಅಪ್ಪನಾದೆ ಈಗ ಮಗನಾಗಿ ಕಂಡೆ. ನಿಮ್ಮದರಲ್ಲಿ ನನ್ನ ಕಂಡು ನಾನೇನು ಎಂಬ ಅರಿವಾಗಿದೆ.” ತಾಳ ಮದ್ದಲೆಯ ಸಂಭಾಷಣೆಯಂತೆ ಭಾಸವಾಯಿತು.

“ಅಪ್ಪಾ ಇಂದು ನಿಜವಾಗಿಯೂ ನಿಮ್ಮನ್ನು ನೋಡುವ ಬಯಕೆಯಾಗಿದೆ. ನಿಮ್ಮನ್ನು ಒಂಟಿಯಾಗಿಸುವ ಬಯಕೆ ಇಲ್ಲ. ನಿಮ್ಮನ್ನ ನೋಡ್ತೇನೆ ಎಂದು ಭಾವಿಸಿ ನಿರಾಶೆಯಾಗಿದೆ. ಇಂದು ನಿಲ್ಲದೆ ಏಕಪ್ಪ ಹೋದಿರಿ? ನಾನು ಅಷ್ಟೂ ಬೇಡವಾದೆನೆ? ನಾಳೆ ನನ್ನ ಈ ಮಗನಿಗು ನಾನು ಹೀಗಾದರೆ? ನಿಮ್ಮಂತೆ ಸಹಿಸುವ ಶಕ್ತಿ ಎನಗುಂಟೇ? ತನ್ನಿರವೇನು ಈಗ ಅರಿವಾಗಿದೆ. ನಿಮ್ಮ ಮಮತೆ ಪ್ರೀತಿಯ ಅರಿವು ಈವಾಗ ಅಗಿದೆ. ನೋಡಬೇಕು. ಅಪರಾಧವೆಲ್ಲವೂ ಪರಿಮಾರ್ಜನಗೊಳ್ಳಲಿ. ಬಲವಂತ ಬಂಧನದಿಂದ ಮನಸ್ಸಿನ ಹಿಡಿದಿಟ್ಟ ಭಾವನೆಗಳೆಲ್ಲವೂ ಬಂಧಮುಕ್ತವಾಗಬೇಕು. ದ್ವೇಷ ಅಸಮಾಧಾನ ಇದ್ದಷ್ಟು ದಿನ ಮನಸ್ಸು ಮುದ್ದೆ ಮಾಡಿದ ಕಾಗದದಂತೆ ಎಲ್ಲವನ್ನು ಹಿಡಿದಿಟ್ಟಿತ್ತು. ಪುಣ್ಯ ಆ ಮುದ್ದೆ ಕಾಗದ ನೀರಿಗೆ ಬೀಳುವ ಮೊದಲೆ ಕೈಗೆ ತೆಗೆದು ಬಿಡಿಸುವ ಆಶೆಯಾಗಿದೆ. ಎಲ್ಲಿದ್ದೀರಾ?”





ಜಗತ್ತೇ ಹೀಗೆಯೆ? ಹೊಸಚಿಗುರೆಲೆಯ ಕಂಡು ಹಣ್ಣಾದ ಎಲೆ ತನ್ನಿರವನ್ನು ಅರಿಯಿತೆ? ಬರುವ ಚಿಗುರಿಗೆ ತನ್ನಿರವ ಬಿಡುವಾಸೆಯೆ?

ಏನೆಂದು ಹೇಳುವುದು. “ ನಾಳೆ ಬೆಳಗ್ಗೆ ಬರ್ತೆನೆ. ಚಿನ್ಮಯ” ಇಷ್ಟೇ ಹೇಳಿ ಮಾತು ಮುಗಿಸುವ ಆತುರ ತೋರಿದರು. ಇನ್ನು ಹೆಚ್ಚು ಹೊತ್ತು ಮಾತಾಡಿದರೆ ಭಾವನೆಗಳು ನಿಯಂತ್ರಿಸುವುದು ಕಷ್ಟವಾಗಬಹುದು. ಇದನ್ನು ನೋಡಿ ಸಹವರ್ತಿಗಳು ಏನೇನೋ ಊಹನೆ ಕಥೆ ಕಟ್ಟುವುದು. ಎಲ್ಲ ಮರೆತವರಂತೆ ಅದಷ್ಟು ಸ್ಥಿತ ಪ್ರಜ್ಞತೆ ಜಾರಿಕೊಂಡು ಮೊಬೈಲ್ ಜೋಬೊಳಗೆ ಸೇರಿಸಿ ಚೌಕಿಯತ್ತ ನಡೆದರು.



ಚೌಕಿಯಲ್ಲಿ ಅದಾಗಲೇ ಸಂಗೀತಗಾರನ ಗಜ ಮುಖದವಗೆ .ರಾಗದೊಂದಿಗೆ ಚೌಕಿ ಪೂಜೆ ಆರಂಭವಾಗಿತ್ತು. ಆಟ ಆಡಿಸುವ ಕುಟುಂಬದವರು ಮಿತ್ರರು ಎಲ್ಲ ಚೌಕಿಯಲ್ಲಿ ನೆರೆದಿದ್ದರು. ತಮ್ಮಂತ ಹಿರಿಯ ಕಲಾವಿದ ವೇಶವಿಲ್ಲದೇ ಚೌಕಿಗೆ ಹೊಕ್ಕಿದರೂ ಕೆಲವೊಮ್ಮೆ ರಂಗಸ್ಥಳ ಪ್ರವೇಶ ಮಾಡಿದ ಅನುಭವ ಆಗುತ್ತದೆ. ಎಲ್ಲರ ಗಮನ ರಂಗಸ್ಥಳದಲ್ಲಿ ಸೆಳೆದ ಹಾಗೆ ಇಲ್ಲೂ ಅದೇ ಅನುಭವ.ಆ ಊರಿನ ಹಿರಿಯ ನಿವೃತ್ತ ಕಲಾವಿದರೊಬ್ಬರು ಚೌಕಿಯೊಳಗೆ ಇದ್ದರು ಇವರನ್ನು ಕಂಡವರೆ ಕುಶಲೋಪಹರಿ ವಿಚಾರಿಸಿದರು.



ಇಂದು ಎರಡನೇ ಪ್ರಸಂಗದ ಜಾಂಬವತಿ ಕಲ್ಯಾಣದ ಜಾಂಬವನ ವೇಶ. ಇದೇ ಪ್ರಸಂಗದಲ್ಲಿ ಇನ್ನೋಬ್ಬನೂ ಜಾಂಬವನ ವೇಶ ಹಾಕಿ ಎರಡನೆ ವೇಶವಾಗಿ ಭಟ್ಟರ ಪ್ರವೇಶ. ಕೇಸರಿಯೊಂದಿಗಿನ ಯುದ್ದ ಆನಂತರ ಶ್ಯಮಂತಕ ಮಣಿ ಕೈವಶ ಅಲ್ಲಿವರೆಗೆ ಮೊದಲ ಕಲಾವಿದ ಅಭಿನಯಿಸಿ, ಪಾಂಚಜನ್ಯ ಮೊಳಗಿದಲ್ಲಿಂದ ಭಟ್ಟರ ಪ್ರವೇಶ.



ಇನ್ನೇನು ಕೆಲವೇ ಘಳಿಗೆ, ಭಟ್ಟರು ಇಂದು ನಿರಾಳವಾಗಿದ್ದರು. ಮಗನ ಜತೆ ಸಂಭಾಷಣೆಯ ಕಾರಣ ಮನಸ್ಸು ಹೆಚ್ಚು ಪ್ರಫುಲ್ಲಿತವಾಗಿತ್ತು. ಸಾಂಪ್ರದಾಯಿಕ ಕಿರೀಟವೇಶವಾಗಿ ಜಾಂಬವಂತ ತಯಾರಾದ. ಕಿರೀಟ ಧರಿಸಿ ಒಂದಿಷ್ಟು ನೀರು ಕುಡಿದು, ಎಲೆ ಅಡಿಕೆ ವಾಡಿಕೆಯಂತೆ ಬಾಯಿಗೆ ಜಗಿಯುತ್ತ, ರಂಗಸ್ಥಳ ತುಸು ದೂರವಿದ್ದುದರಿಂದ ಗೆಜ್ಜೆ ರಿಂಗಣಿಸುತ್ತ ನಿಧಾನವಾಗಿ ಅತ್ತ ನಡೆದರು. ರಂಗ ಸ್ಥಳದ ಹಿಂದೆ ಇರಿಸಿದ ಬೆಂಚಿನಲ್ಲಿ ನಿಧಾನವಾಗಿ ಕುಳಿತರು. ರಂಗದಲ್ಲಿ ಜಾಂಬವತಿ ಪದ... ಭಾಗವತರು ರಾಗದಲ್ಲಿ ಹಾಡುತ್ತಿದ್ದರು. “ ಜೋ ಜೊ. ಜೊ ಸುಕುಮಾರ....ತಂದೆಯಾಗಿಹ ಜಾಂಬವಂತಗೆ ಸರಿಯೆ.....” ಯಾಕೊ ಚಿನ್ಮಯನ ನೆನಪು ಒತ್ತಿ ಮರುಕಳಿಸಿ ಬಿಟ್ಟಿತು. ಆ ನೆನಪಿನ್ನೂ ಮಧುರವಾಗಿದೆಯಲ್ಲ. ಪುಟ್ಟ ಮಗುವನ್ನು ಲಲ್ಲೆಗರೆಯುವ ಘಳಿಗೆ. ಅಳುತ್ತ ಆಡುತ್ತ ಎಷ್ಟೊಂದು ಬಾರಿ ನನ್ನ ಮಡಿಲಲ್ಲಿ ಮಲಗಿದ್ದ. ಎಂತಹ ಸಂತೃಪ್ತಿಯ ದಿನಗಳವು.? ತನ್ನ ಹೆಗಲ ಮೇಲೆ ತಲೆಯನ್ನಿಟ್ಟು ನಿದ್ದೆಗೆ ಜಾರಿದ ಮಗುವಿನ ತಲೆಯ ಹಿಂಬದಿಯಿಂದ ಪೃಷ್ಠದ ವರೆಗೆ ಇದೇ ಕೈಯಿಂದ ಅದೆಷ್ಟು ಬಾರಿ ಮಮತೆಯಿಂದ ಕೈಯಾಡಿಸಿಲ್ಲ.? ನಿದ್ದೆಯಲ್ಲಿದ್ದಾಗ ಅದೆಷ್ಟು ಬಾರಿ ತಲೆ ನೇವರಿಸಿ ಮುದ್ದಿಸಲಿಲ್ಲ? ಅವನ ಮೇಲೆ ವೈಷಮ್ಯವೇ? ಯಾಕಾಗಿ? ತನ್ನದು ಮೊಂಡುತನವೆ? ಇರುವ ಈ ಎರಡು ದಿನದ ಬದುಕಲ್ಲಿ ಒತ್ತಿನಲ್ಲಿರುವವರಲ್ಲಿ ವೈಷಮ್ಯ ವಿದ್ದು ಸಾಧಿಸುವುದೇನು? ಎನೋ ಸ್ವಭಾವದೋಷ ಎಲ್ಲವು ನನ್ನ ಹಾದಿಗೆ ಬರಬೇಕೆಂದರೆ.. ತೀರ ಕ್ಷುಲ್ಲಕವೆಂದು ತೋರಿತು. ಏನೇ ಅಸಮಧಾನವಿದ್ದರು ವಿಶಾಲಮನೋಭಾವದಿಂದ ಸ್ವೀಕರಿಸಿ ಪರಿಹರಿಸಿಕೊಳ್ಳಬಹುದಾಗಿತ್ತು. ವೃಥಾ ಕಾರಣದಿಂದ ಬದುಕಿನ ಕೆಲವು ದಿನಗಳನ್ನು ಮನಸ್ಸಮಾಧಾನವಿಲ್ಲದೆ ಕಳೆದೆ ಎಂದನಿಸತೊಡಗಿತು. ಎಲ್ಲವೂ ಯಾವುದೋ ಒಂದು ಪ್ರೇರಣೆ. ಇಂದು ಇದ್ದ ಮನೋಭಾವ ಬದುಕಿನಲ್ಲಿ ಸ್ಥಾಯಿಯಾಗಿ ಉಳಿಯುವುದೇ ಇಲ್ಲ. ಇಂದು ತೋರಿದ ವರ್ತನೆ ಮುಂದೊಂದು ಘಳಿಗೆ ಹಾಸ್ಯಾಸ್ಪದವಾಗ್ ಕಾಣಬಹುದು. ದೀರ್ಘ ಬದುಕಿನಲ್ಲಿ ಅನುಭವ ಪಡೆದೆ ಬದುಕು ಮುಗಿಸಿಬಿಡುತ್ತೇವೆ. ನಿಡಿದಾದ ನಿಟ್ಟುಸಿರು ಬಿಟ್ಟರು.



“ ಅರೆರೆ ಪಿತನೇ ಕೆಟ್ಟೆ” ಎಂದು ಜಾಂಬವತಿ ರೋದಿಸತೊಡಗಿದಳು. ರಂಗಸ್ಥಳ ಅಂಚಿಗೆ ಸರಿದ ಭಟ್ಟರು ಮುಂದಿನ ಸರದಿಯ ಪದಕ್ಕೆ ಕಾದು ನಿಂತರು. ..ಅಬ್ಬರದ ಚೆಂಡೆಯೊಂದಿಗೆ ಜಾಂಬವಂತನ ಪ್ರವೇಶ.. ಸಭೆ ಕರತಾಡನ ತುಂಬ ಹೊತ್ತು ಉರಿಸಿದ ಮಾಲೆ ಪಟಾಕಿಯಂತೆ ಶಭ್ಡಿಸುತ್ತ ಇತ್ತು. .. “ ಆರೋ ಎನ್ನಯ ಗುಹೆಯಾ.... ಭಾಗವತರ ಪದಕ್ಕೆ ಅವೇಶ ಬಂದ ವಾನರನ ಅಪರಾವತಾರದಂತೆ ಭಟ್ಟರು ಕುಣಿದರು. ಸಭೆ ಮತ್ತೊಮ್ಮೆ ಕರತಾಡನ ದೊಂದಿಗೆ ಹುಚ್ಚೆದ್ದಿತು.



ಕೃಷ್ಣನೊಂದಿಗಿನ ಸಮರದಲ್ಲಿ ಬಸವಳಿದು ಕುಸಿದು ಕುಳಿತ ಜಾಂಬವ. ವೇಶದೊಳಗಿನ ಭಟ್ಟರು ಬಸವಳಿದಿದ್ದರೂ ಉತ್ಸಾಹ ಸುಮನಿರಿಸಲಿಲ್ಲ. ಬಂದ ಶ್ರೀ ಕೃಷ್ಣ ಭಗವಂತ ರಾಮನಾಗಿ ಕಂಡಾಗ ಕುಳಿತ ಭಟ್ಟರು ಭಾವುಕರಾದರು. “ ರಾಮ ಕೃಷ್ಣ.. ಹರೆ ಹರೆ..ಅಪರಾಧವೆಸಗಿದೆ ಭಗವಂತ..ಎಲ್ಲವು ನಿನ್ನ ಎಣಿಕೆಯಂತೆ ನಾವೆಲ್ಲ ಬರಿ ನಿಮಿತ್ತ ಮಾತ್ರ. ರಾಮನಲ್ಲದೇ ಯಾರು ಬೇಡವೆಂದು ಈ ವಿಪಿನದೊಳು ಏಕಾಂಗಿಯಾಗಿದ್ದೆ. ಎಂದಿಗೆ ನಿನ್ನ ದರ್ಶನವೊ ಎಂದು ಕಾದಿದ್ದೆ. ಇಂದು ಈ ಪಾಮರ ಬಲ್ಲೂಕನಿಗೊಲಿದೆಯ ಪರಮಾತ್ಮ. ನಾವೆಲ್ಲ ಸಂಸ್ಕಾರ ರಹಿತರು ಸ್ವಾಮಿ. ನಶ್ವರ ಜನ್ಮವನ್ನು ಇದುವೇ ಸ್ಥಾಯಿ ಎಂದು ತಿಳಿದ ಹುಂಬರು. ಬಂದೆ ನಿಂದೆ ನಿನ್ನ ದರ್ಶನದಿಂದ ಈ ಆತ್ಮ ಪಾವನವಾಯಿತು. ಇನ್ನು ಈ ಜನ್ಮ ವ್ಯರ್ಥವಾಗದು ಸ್ವಾಮಿ. ನಿನ್ನ ಧ್ಯಾನ ಅತ್ಮೊನ್ನತಿ ಒಂದೆ. ....” ನಿರರ್ಗಳ ಅರ್ಥಗಾರಿಕೆಯ ರಸಧಾರೆ ಹರಿಯಿತು. ಭಾವುಕರಲ್ಲಿ ಭಾವುಕರಾದರು ಭಟ್ಟರು. ಮಗಳು ಜಾಂಬವತಿಯನ್ನು ಶ್ರೀ ಕೃಷ್ಣನಿಗಿತ್ತು ಧನ್ಯನಾದ ಜಾಂಬವ ಹರೆ ರಾಮ ಹರೆ ಕೃಷ್ಣನೆಂದ.



ರಂಗಸ್ಥಳದಿಂದ ನಿರ್ಗಮಿಸುತ್ತ ಚೌಕಿಯೆಡೆಗೆ ಹೊಸಹುರುಪಿನಲ್ಲಿ ಬಂದರು ಭಟ್ಟರು. ದೇಹ ಬೆವರಿ ಬೆಂಡಾಗಿ ಬಸವಳಿದಿತ್ತು. ಚೌಕಿಗೆ ಬಂದವರೆ ಒಂದೊಂದಾಗಿ ವೇಶವನ್ನು ಕಳಚುತ್ತಾ ಹೋದರು. ಸಹಾಯಕ ಆಳು ಅನಿಸುರಿಸುತ್ತಾ ಹೋದಂತೆ ಜಾಂಬವ ಕರಗಿ ಹೋದ. ಎಲ್ಲ ವೇಶವೆಲ್ಲ ಕಳಚಿದಾಗ ಮೈಗೆ ಒಸರಿದ ಬೆವರಿಗೆ ಹತ್ತಿರವಿದ್ದ ಬೀಸಣಿಗೆಯಿಂದ ಗಾಳಿ ಹಾಕತೊಡಗಿದರು. ಆಳು ನೀರ ತಂಬಿಗೆಯನ್ನು ತಂದಿತ್ತ ಗಟ ಗಟನೆ ನೀರು ಕುಡಿದ ಭಟ್ಟರು ಚೌಕಿಯ ಇನ್ನೋಂದು ತೆರೆದ ಬದಿ ನೋಡುತ್ತಾರೆ ಸ್ತಭ್ಧವಾಗಿಬಿಟ್ಟರು. ಅಲ್ಲಿ ಚಿನ್ಮಯ ನಿಂತಿದ್ದ.!!!



ಒಂದು ಕ್ಷಣ ಅಷ್ಟೇ. ಹತ್ತಿರ ಸರಿದು ಹೋದ ಭಟ್ಟರು ಮಗನ ಕೈಹಿಡಿದು ಚೌಕಿಯ ಹೊರಗೆ ಇನ್ನೊಂದು ಬದಿಗೆ ಬಂದರು. ಇನ್ನು ಚಿನ್ಮಯ ತಡೆಯದಾದ ಅಪ್ಪನ ಸಣಕಲು ಶರೀರವನ್ನು “ ಅಪ್ಪಾ .....”ಎನ್ನುತ್ತ ತಬ್ಬಿಹಿಡಿದ. ಹೊರಗಿನಿಂದ ಕಾಣುವ ಬಡಕಲು ಎದೆಗೆ ತಲೆಗೊಟ್ಟ. ಆ ಎದೆಯ ವೈಶಾಲ್ಯವನ್ನು ಅಂದಾಜಿಸುವದಕ್ಕೆ ತೊಡಗಿದ. ಎಂತಹ ವಿಪರೀತ. ಕ್ಷುಲ್ಲಕ ಹಿತಾಸಕ್ತಿಗೆ ವೈಶಮ್ಯ ತಳೆದು ನಮ್ಮೊಳಗೆ ಅಂತರ ಹೆಚ್ಚಿಸಿ ಬದುಕನ್ನು ವಿಷಮವನ್ನಾಗಿಸುತ್ತೇವೆ.



ಎದೆಗೊತ್ತಿದ್ದ ಮಗನ ಶಿರವನ್ನು ನೇವರಿಸಿ ಕರಗಳಿಂದಲೇ ಸಾಂತ್ವಾನ ಹೇಳಿದರು. “ಚಿನ್ಮಯ ನನ್ನ ಬದುಕು ಇದೇ. ಈ ಆಟವಿಲ್ಲದೆ ನನ್ನಾಟವಿಲ್ಲ. ಇಷ್ಟು ದಿನ ನನ್ನ ಮೈಯಲ್ಲಿ ರಕ್ತಸಂಚಲನೆಗೆ ನಿಮಿತ್ತವಾದ ಈ ಆಟವನ್ನು ಬಿಟ್ಟು ಹೇಗೆ ದಿನ ಕಳೆಯಲಿ.?ಇರುವಷ್ಟು ದಿನ ರಂಗಸ್ಥಳದಲ್ಲಿ ಇರುವಾಶೆಯಲ್ಲ, ತೆವಳುವ ಬಯಕೆ ಇಟ್ಟುಕೊಂಡು ಇಲ್ಲಿವರೆಗೆ ಬಂದೆ.ನನಗಾಗಿಯೇ ಬದುಕಿದೆ. ನಿಮಗಾಗಿ ದುಡಿದೆ. ಇದನ್ನು ಬಿಟ್ಟು ನನ್ನ ದಿನವನ್ನು ನಾನು ಹೇಗೆ ರೂಪಿಸಬಲ್ಲೆನೋ ಅರಿಯೆ. ನಿನ್ನೊಂದಿಗೆ ನಾನಿರಬೇಕೋ ನನ್ನೊಂದಿಗೆ ನೀನಿರಬೇಕೊ ಎಲ್ಲವೂ ಸಮಷ್ಟಿಯಲ್ಲಿ ಒಂದೆ ತೆರನಾಗಿಯೆ ಇದೆ.ನಮ್ಮೊಳಗಿನ ಬದುಕಲ್ಲಿ ಲಾಭ ನಷ್ಟ, ಸೋಲು ಗೆಲುವಿನ ಅಳತೆಯೇಕೆ ಮಗನೇ?ಏನೋ ಇದನ್ನು ಬಿಟ್ಟ ಬದುಕನ್ನು ಊಹಿಸದಾದೆ. ಇರಲಿ..ನೋಡಿದೆಯಲ್ಲ ಸುತ್ತಲೂ ಇರುಳು. ಈ ಇರುಳೇ ನಮ್ಮಂತಹ ಕಲಾವಿದನಿಗೆ ಹಗಲಾಗಿದೆ. ಸೂರ್ಯ ಅಸ್ತಮಿಸುವಾಗಲೆ ಇಲ್ಲಿ ಬೆಳಕಿನ ಉದಯ ಎಂತಹ ವಿಚಿತ್ರ ಬದುಕು. ಆದರೂ ನಿನ್ನ ಮನಸ್ಸಿನ ಹಿತಕ್ಕೆ ಒತ್ತಿ ನಡೆಯಬಲ್ಲೆ.”



“ಅಪ್ಪ.. ಬೇಡಪ್ಪ ಅಂತಹ ಮಾತುಗಳು ಯಾವುದೂ ಅಗತ್ಯ ಇದೆ ಎಂದು ನನಗನಿಸುವುದಿಲ್ಲ.ನಾನು ಅಪ್ಪನಾದಗ ಅಪ್ಪನ ತುಮುಲ ಏನೆಂದು ಅರಿವಾಯಿತು. ಈ ಕೌಟುಂಬಿಕ ಜೀವನದಲ್ಲಿ ಪರ ಹಿತಕ್ಕಾಗಿ ತನ್ನ ತನವನ್ನು ಪ್ರತಿಯೊಬ್ಬರೂ ಧಾರೆ ಎರೆದರೆ ಅಸಮಾಧಾನ ಎಲ್ಲಿದೆ ಹೇಳಿ? ಇಕ್ಕಟ್ಟು ನಿಮಗೂ ಬೇಡ ನನಗೂ ಬೇಡ. ನಿಮ್ಮ ಬದುಕನ್ನು ನಿಮ್ಮ ರೀತಿಯಲ್ಲೆ ಕ್ರಮಿಸಿ. ನನಗೆ ಅದೇ ಅಪ್ಪ ಸಾಕು. ನಿಮ್ಮ ಮನಸ್ಸಿಗೆ ನೋವುಂಟುಮಾಡಿ ಯಾವ ಹಿತವೂ ನನಗೆ ಬೇಡ. ಆಟದ ವೇಶ ನೀವು ಕಳಚಿ ನಿಂತಿದ್ದೀರಿ. ಬದುಕಿನಲ್ಲಿ ನಿಜವೇಶ ಕಳಚಿ ನಾನು ನಿಂತಿದ್ದೇನೆ”



ಭಟ್ಟರಿಗೆ ನಿಜಕ್ಕು ಭಾವವೇಶ ಈಗಲೇ ಬಂದದ್ದು. ರಾಮನೋ ರಾವಣನೋ ಎರಡೂ ಒಂದೇ ಚೌಕಿಯಿಂದ ಬರುವ ವೇಶಗಳು. ರಂಗದಲ್ಲಿ ಬೇರೆ ಬೇರೆಯಾಗಿ ಗೋಚರವಾದರು ಕೊನೆಗೆ ಚೌಕಿಯಲ್ಲಿ ಪುನಃ ಒಂದಾಗಿಬಿಡುತ್ತವೆ.



“ಚಿನ್ಮಯ, ಇನ್ನು ಹೇಳುವುದು ಹಲವಿದ್ದರೂ ನಿನಗೆ ಹೇಳುವ ಅಗತ್ಯವಿಲ್ಲ. ನನ್ನ ಮನಸ್ಸರಿತು ನನ್ನ ಆತ್ಮದ ಬಳಿಗೇ ಬಂದೆ. ಮಗನ ಉಜ್ವಲ ಬದುಕು ಕೇವಲ ವಿದ್ಯೆ ಮತ್ತು ಸಂಪತ್ತಿನಿಂದ ಬರುವುದಿಲ್ಲ ಹಿರಿಯರ ಮನದಿರವ ಅರಿವ ಗೌರವಿಸುವ ಸಂಸ್ಕಾರವು ಇಂದಿನ ಜೀವನ ಕ್ರಮದಲ್ಲಿ ಅತ್ಯವಶ್ಯ ಆದರೆ ಯಾವ ಅಪ್ಪ ಅಮ್ಮನೂ ಹಿರಿಯರು ಈ ಬಗ್ಗೆ ಚಿಂತಿಸುವುದೇ ಇಲ್ಲ. ಹಾಗಾಗಿ ಲೋಕದಲ್ಲಿ ಸಂಸ್ಕಾರದ ಅಪಕರ್ಷವನ್ನು ಕಾಣುತ್ತೇವೆ. ಇರಲಿ ಇನ್ನು ಹೇಳದೆಯೇ ಅರಿಯಬಲ್ಲೆ ನೀನು. ಇರಲಿ ಮನೆಗೆ ಬರ್ತೆನೆ ಮಾತಡುವ. ಏನು ಬೇಕೋ ? ಹೇಗೆ ಬೇಕೊ ಮಾಡೋಣ. ದುಃಖಿಸಬೇಡ ನೀವೆಲ್ಲ ದುಃಖಿಸಿ ಕಣ್ಣೀರಿಡುವದನ್ನು ನೋಡುವ ಚೈತನ್ಯ ನನ್ನಲ್ಲಿ ಇಲ್ಲ, ಇರು ನಾನು ಎಲ್ಲ ತೆಗೆದು ಬಂದೆ. ಎನ್ನುತ್ತ ಮತ್ತೊಮ್ಮೆ ಮಗನ ಶಿರವನ್ನು ಬಲವಾಗಿ ಎದೆಗೊತ್ತಿ ಚೌಕಿಯತ್ತ ನಿಧಾನವಾಗಿ ನಡೆದರು.



ಕತ್ತಲಲ್ಲಿ ಕರಗಿ ಹೋಗುವ ಅಪ್ಪನ್ನನ್ನು ನೋಡುತ್ತ ಚಿನ್ಮಯ ನಿಂತುಕೊಂಡ. ನಿಧಾನವಾಗಿ ಸೊಂಟಕ್ಕೆ ಕೈಕೊಟ್ಟು ಉತ್ಸಾಹದಿಂದ ಭಾರವದ ಹೆಜ್ಜೆಯಿಡುತ್ತ ಅಪ್ಪಚೌಕಿಯೆಡೆಗೆ ಸರಿದು ಹೋದರು. ಕಲಾವಿದನಿಗೆ ಚೌಕಿಯೆಂದರೆ ಮನೆಯಿದ್ದಂತೆ. ವೇಶವಾಗಿಯೂ ವೇಶವಿಲ್ಲದೆಯೂ ತೊರಬಲ್ಲ ಜಾಗ. ಅದರಿಂದ ಅಪ್ಪನನ್ನು ಸೆಳೆವ ಯತ್ನ ಮಾಡಿದೆನಲ್ಲ. ಎಂತಹ ತಂದೆಗೆ ನೋವನ್ನು ಕೊಟ್ಟೆ. ಸಹಜವಾಗಿ ಬಿಗುವಿಲ್ಲದೆ ಬದುಕಬಹುದಿತ್ತು. ಅದು ಅರಿವಿಗೆ ಈಗ ಬಂತು. ಚಿನ್ಮಯ ಹಾಗೇ ನಿಂತು ಅಪ್ಪ ಹೋದೆಡೇ ನೋಡುತ್ತಲೇ ಇದ್ದ.





ಶುಭಂ



Monday, November 8, 2010

ಪ್ರಶಸ್ತಿ ವಿಜೇತ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ


ಕಳೆದ ಭಾನುವಾರ ಹಲವು ಯಕ್ಷಗಾನದ ಕಲಾವಿದರು ಪ್ರಶಸ್ತಿ ಪಡೆವ ಸಂಭ್ರಮದಲ್ಲಿದ್ದರು. ಹಲವು ಪತ್ರಿಕೆಯ ಮುಖಪುಟಗಳಲ್ಲೇ ಹೆಸರು ಮತ್ತು ಚಿತ್ರದೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ವಿವರ ಪ್ರಕಟವಾಗಿತ್ತು. ಕೆಲವರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಭಾಜನರಾದರೆ ಇನ್ನು ಕೆಲವರು ಜಿಲ್ಲಾಮಟ್ಟದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡರು. ಯಕ್ಷಗಾನಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಈ ಬಾರಿ ಆಯ್ಕೆ ಮಾಡಿದ ವ್ಯಕ್ತಿಗಳಲ್ಲಿ ನನ್ನ ಗಮನ ಸೆಳೆದ ವ್ಯಕ್ತಿ ಎಂದರೆ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ.ಸುಮಾರು ಎಪ್ಪತ್ತರ ದಶಕದಲ್ಲಿ ನನ್ನ ಬಾಲ್ಯದ ಸಮಯ. ಮಂಗಳೂರು ಪರಿಸರದಲ್ಲಿ ಆಗುತ್ತಿದ್ದ ಕಟೀಲು ಮೇಳಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ಒಂದು ಮುಖ ಶ್ರೀ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರು. ಸುರತ್ಕಲ್ ನ ಈ ಹಾಸ್ಯಗಾರರು ಅಂದಿನ ನಮ್ಮ ಬಾಲಕರಿಗೆ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು. ತನ್ನ ಅದ್ಭುತ ಹಾಸ್ಯದಿಂದ ನಗಿಸುತ್ತಿದ್ದರಿಂದಲೋ ಏನೋ ರಂಗದಲ್ಲಿ ಇವರ ಮುಖ ಕಂಡೊಡನೆ ಮಕ್ಕಳು ನಾವು ಉತ್ಸುಕರಾಗುತ್ತಿದ್ದೆವು. ನೆಲ್ಲಿಕಟ್ಟೆ ಹಾಸ್ಯಗಾರರು ಸರಳ ಹಾಸ್ಯದಿಂದ ಪ್ರಸಿದ್ದರಾದವರು. ಬಲಿಪ್ಪರ ಸಾರಥ್ಯದಲ್ಲಿ ನಡೆಯುತ್ತಿದ್ದ ಕಟೀಲು ಮೇಳದಲ್ಲಿ ಹಾಸ್ಯಗಾರರಾಗಿ ಹತ್ತು ಹಲವು ಪಾತ್ರಗಳನ್ನು ಒಂದೇ ಇರುಳಲ್ಲಿ ಮಾಡುತ್ತಿದ್ದ ಇವರ ಪ್ರತಿಭೆ ಇಂದು ಯಾವ ಕಲಾವಿದನಲ್ಲೂ ಕಾಣುವುದು ಅಸಾಧ್ಯ.

ಅಂದು ಕಟೀಲು ಮೇಳದ ಆಟ ನಡೆಯುತ್ತಿದ್ದ ರಂಗಸ್ಥಳಕ್ಕೂ ಚೌಕಿಗೂ ಸುಮಾರು ದೂರವಿರುತ್ತಿತ್ತು. ಚೌಕಿಯಿಂದ ರಂಗಸ್ಥಳಕ್ಕೆ ಪದೇ ಪದೇ ಓಡಾಡುವುದು ಕಷ್ಟವಾಗುತ್ತಿದ್ದುದರಿಂದ, ಸಾಂದರ್ಭಿಕವಾಗಿ ಹಲವು ವೇಶವನ್ನು ಮಾಡುವ ಅನಿವಾರ್ಯ ಪಾತ್ರಧಾರಿಯಾಗಿ ಹಾಸ್ಯಗಾರ ತನ್ನ ಸ್ಥಾನವನ್ನು ನಿರ್ವಹಿಸಬೇಕಾಗುತ್ತಿತ್ತು. ದೇವಲೋಕದ ದ್ವಾರಪಾಲಕನಾದ ಮರುಕ್ಷಣವೇ ನಾರದಮುನಿಯ ಪಾತ್ರವೋ ವೃದ್ದ ಬ್ರಾಹ್ಮಣನ ಪಾತ್ರವೋ ಮಾಡಿ ಪ್ರಸಂಗ ನಡೆಗೆ ಸಹಕಾರಿಯಾಗಬೇಕಾಗಿತ್ತು.ಬೆಳಗಿನವರೆಗೆ ನಿರ್ವಹಿಸುವ ವೇಶಗಳ ಪರಿಕರಳನ್ನು ಅದಷ್ಟು ರಂಗಸ್ಥಳದ ಬಳಿಯಲ್ಲೇ ವ್ಯವಸ್ಥೆ ಗೊಳಿಸಿ, ದೂರದ ಚೌಕಿಗೆ ಹೋಗದೆ ರಂಗಸ್ಥಳದ ಬಳಿಯಲ್ಲೇ  ಕ್ಷಣದೊಳಗೆ ಬಗೆ ಬಗೆಯ ಪಾತ್ರವಾಗುವ ಇವರ ಪ್ರತಿಬೆ ಹಲವುಸಲ ಕಣ್ಣಾರೆ ಕಂಡವ ನಾನು. ನಾರದ ಕ್ಷಣಾರ್ಧದಲ್ಲಿ ದೇವದೂತನಾಗುವುದೋ, ವೃಧ್ಧ ವಿಪ್ರ ಗಡ್ಡ ಬಿಟ್ಟ ಸನ್ಯಾಸಿಯಾಗುವುದೊ, ಈ ಪರಿವರ್ತನೆಗೆ ಸೀಮೆಇಲ್ಲ.

ಇಂದಿನ ಕಾಲ ಮಿತಿ ಪ್ರದರ್ಶನದಲ್ಲಿ ಒಂದೋ ಎರಡೋ ಪಾತ್ರಕ್ಕೆ ಮಾತ್ರ ಸೀಮಿತವಾಗುವ ಸಮಯದಲ್ಲಿರುವ  ಕೆಲವು ಘಳಿಗೆಯಲ್ಲಿ ಕೆಲವೇ ಪಾತ್ರ ನಿರ್ವಹಿಸುವ ಹಾಸ್ಯ ಕಲಾವಿದರಿಗೆ ಇವರ ಹಲವು ಪಾತ್ರಗಳನ್ನು ಒಂದೇ ಇರುಳಲ್ಲಿ ಮಾಡಿಬಿಡುವ ಅಂದಿನ ದುಡಿಮೆ  ಅತ್ಯಧ್ಭುತವಾಗಬಲ್ಲುದು.ಪ್ರತೀ ಪಾತ್ರದ ದೃಷ್ಟಿಕೋನ ಒಂದೊಂದು ಬಗೆಯದು.  ಪೂರ್ವ ರಂಗದ ಆಹೂಹು ದಕ್ಕಿತ್ತು ... ಎಂದು ಎಲ್ಲಾ ದೇವರನ್ನು ಪ್ರಾರ್ಥಿಸುವಲ್ಲಿಂದ ತೊಡಗಿ ಮುಂಜಾವಿನವರೆಗೆ ಎಷ್ಟೊಂದು ಬಗೆ ವೇಶಗಳು? ವೈವಿಧ್ಯಮಯ ಪಾತ್ರಗಳು. ಅದು ಹಾಸ್ಯ ಎಂದು ನೇರ ಹೇಳಿಬಿಡುವ ಹಾಗಿಲ್ಲ. ನವರಸಗಳನ್ನು ಪೂರ್ಣವಾಗಿ ಬಿಂಬಿಸಬಲ್ಲ ಪಾತ್ರಗಳು. ಇದನ್ನು ನಿರ್ವಹಿಸುವ ಇವರಂತಹವರ ಕಲಾಸಾಮರ್ಥ್ಯವನ್ನು ಒಂದು ಬಾರಿ ಯೋಚಿಸಿ. ಇಂದು ಸಿನಿಮಾದಲ್ಲಿ ಈ ಬಗೆಯ ಪಾತ್ರ ನಿರ್ವಹಿಸುವ ಕಲಾವಿದರಿದ್ದಾರೆಯೆ? ಇದ್ದರೆ ಭಹುಶಃ ಅವರಿಗೆ ಪದ್ಮಭೂಷಣ ಸಿಗುವಲ್ಲಿ ಹಲವರ ಅಹವಾಲು ಸಲ್ಲುತ್ತಿತ್ತು. ಇಂತಹ ತಾರತಮ್ಯದಲ್ಲಿ ಇವರಿಗೆ ಜಿಲ್ಲಾರಾಜ್ಯೋತ್ಸವ ಮನ್ನಣೆ ಒಲಿಯಿತಲ್ಲ ಅದು ಎಲ್ಲದಕ್ಕಿಂತಲೂ ಶ್ರೇಷ್ಠ. ಇವರ ನೈಪುಣ್ಯವನ್ನು ಕಂಡವರು ನೀಡುವ ಮನ್ನಣೆಯಲ್ಲವೆ?

ಶ್ರೀ ನೆಲ್ಲಿಕಟ್ಟೆ ಹಾಸ್ಯಗಾರರು ಅಂದು ಕಟೀಲು ಮೇಳದ ಚಿರಪರಿಚಿತ ಹಾಸ್ಯಗಾರರು. ಮಂಗಳೂರು, ದೇರೆಬೈಲು, ಉರ್ವಸ್ಟೋರ್ ಮುಂತಾದ ಪರಿಸರಗಳಲ್ಲಿ ಅಂದು ಇವರ ಹಾಸ್ಯವನ್ನು ಕಂಡವರು ಇವರನ್ನು ಮರೆಯಲು ಸಾಧ್ಯವಿಲ್ಲ. ವ್ಯವಸಾಯಿ ಮೇಳಗಳಲ್ಲಿ ಜನಪ್ರಿಯ ಹಾಸ್ಯಗಾರರಾದ ವಿಟ್ಲ ಜೋಷಿ, ಮಿಜಾರು ಇಂಥವರ ಜನಪ್ರಿಯತೆಯಲ್ಲೂ ಹರಕೆ ಬಯಲಾಟಗಳಲ್ಲಿ ತನ್ನದೇ ಸ್ಠಾನದಿಂದ ಗುರುತಿಸಲ್ಪಟ್ಟವರು ಇವರು. ದ್ವಂದ್ವಾರ್ಥ ವಿಲ್ಲದ ಸರಳ ಹಾಸ್ಯ ಅಬಾಲ ವೃದ್ದರಾದಿ ಎಲ್ಲರು ಅಸ್ವಾದಿಸಬಹುದಾದ ಈ ಹಾಸ್ಯ ಇಂದು ಬದಲಾಣೆಯ ಗಾಳಿಯಲ್ಲಿ ಪಡೆದುಕೊಂಡ ಮಜಲನ್ನು ಸ್ವತಃ ಇವರೇ ಕಂಡರೆ ಬೆಚ್ಚಿಬೀಳಬಹುದು. ಜನಮಾನಸದಿಂದ ಅಥವಾ ರಂಗದಿಂದ ಮರೆಯಾಗುತ್ತಿರುವ ಇಂತಹ ಕಲಾವಿದರನ್ನು ಸ್ಮೃತಿ ಪರದೆ ಮೇಲೆ ತರಿಸುವಂತೆ ಸನ್ಮಾನಿಸಿದ ಮಹನೀಯರೂ ಅಭಿನಂದನಾರ್ಹರು.




Wednesday, November 3, 2010

ಪ್ರಶಸ್ತಿಗೆ ಬಂತು ಮೌಲ್ಯ

ಮೊನ್ನೆ ದಿನಾಂಕ  ನವೆಂಬರ್ ಒಂದರಂದು ಮಂಗಳೂರಿಂದ ಬೆಂಗಳೂರಿಗೆ ಬರುವಾಗ, ರಾತ್ರಿ ಪುತ್ತೂರಿಗೆ ತಲುಪುತ್ತಿದ್ದಂತೆ ಬೆಂಗಳೂರಿಂದ ಬಂದ ಕರೆಗೆ ಉತ್ತರಿಸಿ ಬಲಿಪ್ಪರೊಂದಿಗೆ ಮಾತನಾಡಿ ಮುಗಿಸಿದಾಗ ಒಂದು ದೊಡ್ಡ ನಿಟ್ಟುಸಿರು ಬಂದು ಮನಸ್ಸು ಭಾವ ಪರವಶವಾಗಿಬಿಟ್ಟಿತು. ಆಗ ತಾನೇ ಬಲಿಪ್ಪರು ಸನ್ಮಾನಿತರಾಗಿ ಹೊರಬಂದು ಅತ್ಯುತ್ಸಾಹದಲ್ಲಿ ಮಾತಾಡಿದರು. ಸಹಜವಾಗಿ ಯಕ್ಷಗಾನದ ವಿಚಾರ ಬಂದರೆ ಬಲಿಪ್ಪರ ಉತ್ಸಾಹ 
ಪ್ರಶಸ್ತಿಫಲಕದೊಂದಿಗೆ ಶ್ರೀ ಬಲಿಪ ನಾರಾಯಣ ಭಾಗವತರು
ಎಲ್ಲರಿಗೂ ತಿಳಿದ ವಿಚಾರ. ಅವರ ಸಮರ್ಪಣ ಭಾವ ತೊಡಗಿಸಿಕೊಳ್ಳುವ ರೀತಿ ಎಲ್ಲವೂ ವಿಶಿಷ್ಟ. ಆ ವೈಶಿಷ್ಟ್ಯದ ಮೌಲ್ಯಗಳಿಗೆ ಅಂಗೀಕಾರದ ಸರಕಾರಿ ಮುದ್ರೆ ಬಿದ್ದಂತೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಬಂದು ಬಿಟ್ಟಿತು. ಬಲಿಪ್ಪರ ಸಂತೋಷ ಕೇವಲ ಪೋನಿನಲ್ಲಿ ಧ್ವನಿ ಮೂಲಕ ಅನುಭವಿಸುವ, ಕಾಣುವ ಯೋಗ ಮಾತ್ರವೇ ನನಗೆ ಇದ್ದುದು. ನಾನಲ್ಲಿ ದೂರದ ಊರಿನಲ್ಲಿದ್ದೆ. ನಮ್ಮ ಕರಾಡ ಭಾಷೆಯಲ್ಲಿ ದಣಿವರಿಯದೆ ಮಾತಡಿದ ಬಲಿಪ್ಪರ ಧ್ವನಿ ಈಗಲೂ ಕೇಳುತ್ತಿದೆಏನೋ ಎಂಬ ಭ್ರಮೆ ಇನ್ನೂ ಬಿಟ್ಟಿಲ್ಲ.

ಊರಿನ ಕಲಾವಿದ ವರ್ಗದಲ್ಲಿ ಸಂಪೂರ್ಣ ಯಕ್ಷಗಾನ  ಕ್ಷೇತ್ರದಲ್ಲಿ ಯಾರಿಗೂ ಮಾತ್ಸರ್ಯ ವಿಲ್ಲದೆ ಎಲ್ಲರ ಅಭಿಪ್ರಾಯದಲ್ಲಿ ಸಹಮತವಿತ್ತು. ಈ ಪ್ರಶಸ್ತಿ ಬಲಿಪ್ಪರಿ ತುಂಬ ತಡವಾಗಿ ಬಂದಿದೆ. ಮತ್ತು ಇವರು ಎಂದೋ ಇದಕ್ಕೆ ಅರ್ಹವ್ಯಕ್ತಿಯಾಗಿ ಬಿಟ್ಟಿದ್ದರು. ಮತ್ತೊಂದು ಸೋಜಿಗವೆಂದರೆ ಬಲಿಪ್ಪರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ತೀರಾ ಅನಿರೀಕ್ಷಿತ. ಮನೆಯಲ್ಲಿ ಆರಾಮ ಆಸನದಲ್ಲಿ ಕುಳಿತು ಸಾಯಂಕಾಲ ಟಿ. ವಿ. ವಾರ್ತೆ ನೋಡುತ್ತಿದ್ದವರಿಗೆ ತಮ್ಮ ಹೆಸರನ್ನು ಅಲ್ಲಿ ಕಂಡು ಅಚ್ಚರಿಯಾಯಿತು. ಬಹುಶಃ ಈ ಅನುಭವ ಕೆಲವೇ ವ್ಯಕ್ತಿಗಳಿಗೆ ಅಗುವುದಕ್ಕೆ ಸಾಧ್ಯ. ಎಂದೂ ಪ್ರಶಸ್ತಿಯ ಹಿಂದೆ ಹೋಗದ ಬಲಿಪ್ಪರಿಗೆ ಸ್ವತಃ ಅವರ ಆಯ್ಕೆ ಅವರಿಗೇ ಅಚ್ಚರಿಯಾದದ್ದರಲ್ಲಿ ವಿಶೇಷವೇನೂ ಇಲ್ಲ.ಪ್ರಶಸ್ತಿಗೆ ಅರ್ಜಿ ಹಾಕಿ ಅದರ ಹಿಂದೆ ಪುಸಲಾವಣೆಗೆ ಮಾರ್ಗ ಹುಡುಕುವ ಪ್ರವೃತ್ತಿ ಬಲಿಪ್ಪರಿಗೆ ಕನಸಲ್ಲು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಬಗೆಯ ಪ್ರಶಸ್ತಿಯಲ್ಲಿ ಅವರಿಗೆ ಔದಾಸಿನ್ಯ, ಸರಕಾರೀ ಅದೇಶದ ಬಗ್ಗೆ ಏನೊಂದು ಅರಿವಿರದ ಮುಗ್ಧ ಬಲಿಪ್ಪರಿಗೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯದಾಗ ಅವರ ಅಭಿಮಾನಿಗಳ ಉತ್ಸಾಹದ ಸಹಕಾರ ಮಾತ್ರ ಇಲ್ಲಿ ಸ್ಮರಣಾರ್ಹ. ಊರಿನ ಪಯಣದಲ್ಲಿದ್ದ ನನಗೆ ಕರೆ ಬಂದು ಅದರ ವ್ಯವಸ್ಥೆಗೆ ಹಲವಾರು ಕಡೆ ಕರೆ ಮಾಡುವ ಕೆಲಸ ನನ್ನದಾಯಿತು. ಹೆಚ್ಚಿನ ಎಲ್ಲ ಮಿತ್ರರು ಊರಲ್ಲಿದ್ದುದರಿಂದ ಬೆಂಗಳೂರಲ್ಲಿ ವ್ಯವಸ್ಥೆ ಮಾಡುವುದಕ್ಕೆ ಸ್ವಲ್ಪ ಹೆಣಗಾಡಬೇಕಾಯಿತು. ಉಳಕೊಳ್ಳುವ ವ್ಯವಸ್ಥೆ ಯಿಂದ ಸರಕಾರಿ ಪಾಸು ಕೊಳ್ಳುವ ಮುಂತಾದ ವ್ಯವಸ್ಥೆಗಳಿಗೆ ಅವರ ಅಭಿಮಾನಿವೃಂದ ನೀಡಿದ ಸಹಾಯ ಹಸ್ತ ನಾನು ಸ್ಮರಿಸಲೇಬೇಕು. ಎಲ್ಲ ಕಾರ್ಯಕ್ರಮ ನಿರೀಕ್ಷೆಯಂತೆ ಸಂಪನ್ನವಾದಾಗ ಬಲಿಪ್ಪರೊಂದಿಗಿನ  ಉತ್ಸಾಹದ ಸಂಭಾಷಣೆ ನನ್ನನ್ನು ನಿರಾಳ ಮನಸ್ಸಿನವನನ್ನಾಗಿ ಮಾಡಿತು.
ರಾಜ್ಯಪ್ರಶಸ್ತಿಪತ್ರ ಹಾಗು ಸ್ವರ್ಣಪದಕ


ಮೊದಲದಿನ ಮೂಡಬಿದ್ರೆ ಆಳ್ವಾಸ್ ನುಡಿಸಿರಿ ಸಮಾರಂಭದಲ್ಲಿ ತಡ ಸಾಯಂಕಾಲದವರೆಗೂ ಸನ್ಮಾನ ಸ್ವೀಕರಿಸಿ ಅಲ್ಲಿಂದ ಬೆಳ್ಳಾರೆ ಸಮೀಪದ ಕಲ್ಮಡ್ಕದ ಕಾರ್ಯಕ್ರಮದಲ್ಲಿ ಭಾಗವಹಿಸಿ.ಅಲ್ಲಿನ ಜನತೆ ಅದ್ಭುತ ಕರತಾಡನದಿಂದ ಸಮಾರಂಭಕ್ಕೆ ಸ್ವಾಗತಿಸಿದ್ದು ಎಲ್ಲರು ಬಲಿಪ್ಪರಿಗೆ ಸಂದ ಪ್ರಶಸ್ತಿಯನ್ನು ಸಂಭ್ರಮಿಸಿದ್ದು ವಿಶೇಷ. ಯಾರಿಗೂ ನೋವುಂಟು ಮಾಡದ ಬಲಿಪ್ಪರು ಕಲ್ಮಡ್ಕದಿಂದ ಒಪ್ಪಿಕೊಂಡ ಯಕ್ಷಗಾನ ಬಯಲಾಟದ ಭಾಗವತಿಕೆಯನ್ನು ಸಂಘಟಕರ ಕೇಳಿಕೆಯಂತೆ ಬಿಟ್ಟು  ಬೆಂಗಳೂರಿಗೆ ಬಂದು ಇಲ್ಲಿ ಪ್ರಶಸ್ತಿ ಸ್ವೀಕರಿಸುವುದೆಂದರೆ ಬಲಿಪ್ಪರು.  ಮೂಡಬಿದ್ರೆ , ಕಲ್ಮಡ್ಕ, ಹೀಗೆ ಹಲವು ಸಮಾರಂಭದಲ್ಲಿ ಅಭಿಮಾನದ ಅಭಿನಂದನೆ ಸ್ವೀಕರಿಸಿ  ಅಂತೇ ಹಲವೆಡೆ ಒಂದೇ ದಿನದ ಅವಧಿಯಲ್ಲಿ ಸನ್ಮಾನಿತರಾದ ಬಲಿಪ್ಪರ ಸಾಧನೆ ಅಮೋಘವಲ್ಲವೆ?
ಈ ಸಲದ ರಾಜ್ಯೋತ್ಸದಲ್ಲಿ ಹಲವಾರು ಅರ್ಹರು ಪ್ರಶಸ್ತಿಗೆ ಆರ್ಹರಾದದ್ದು ವಿಶೇಷವಾಗಿದೆ. ಇದರಲ್ಲಿ ಶ್ರೀ ಕೊಡಕ್ಕಲ್ಲು ಗೋಪಲಕೃಷ್ಣ ಹಾಸ್ಯಗಾರರದ್ದು ಸೂಕ್ತ ಅಯ್ಕೆ. ಕಡು ಬಡತನದಲ್ಲಿ ದುರ್ಭರ ಜೇವನ ನಡಸುವ ಇವರಿಗೆ ಈ ಇಳಿ ವಯಸ್ಸಿನಲ್ಲಿ ಇದು ಸ್ವಲ್ಪ ತುಸು ಸಹಕಾರಿಯಾಗಿ ಬದುಕನ್ನು ಅಧರಿಸೀತು. ನಿಜಕ್ಕೂ ಇವರ ಮಟ್ಟಿಗೆ ಸಕಾಲಿಕ ಪ್ರಶಸ್ತಿ. ಹಾಗೆಯೆ ಬಡಗಿನ  ನೆಬ್ಬೂರು ನಾರಯಣ ಭಾಗವತರು, ಇವರಿಗೆ ಎಂದೋ ಬರಬೇಕಾದ ಪ್ರಶಸ್ತಿ ಇಂದು ಬಂದಿದೆ. ಬಡಗಿನಲ್ಲಿ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ತನ್ನದೇ ಸ್ಥಾನ ಮಾನದಿಂದ ಗುರುತಿಸಲ್ಪಡುವ ಇವರಿಗೆ ಈ ಕೊಡುಗೆ ಸ್ತುತ್ಯರ್ಹ, ಹಾಗೆ ಇನ್ನೊಬ್ಬ ಮಹನೀಯರೆಂದರೆ, ಉಡುಪಿ ಯಕ್ಷಗಾನ ಕೇಂದ್ರದ ಶ್ರೀ ಸಂಜೀವ ಸುವರ್ಣರು. ಇವರ ಯಕ್ಷಗಾನ ಚಟುವಟಿಕೆ, ಸಾಧನೆ ಸರಕಾರ ಈಗಲಾದರು ಗುರುತಿಸಿದ್ದು ಸೂಕ್ತವಾಗಿದೆ. ಇವರ ಮುಂದಿನ ಚಟುವಟಿಕೆಗೆ ಇದು ಅತ್ಯುತ್ತಮ ಚೈತನ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ನಿಸ್ವಾರ್ಥ ಕಲಾಸೇವೆಗೆ ಸಂದ ಗೌರವ. ಈ ಎಲ್ಲ ಮಹನೀಯರಿಗೂ ಹೃದಯತುಂಬಿ ಅಭಿನಂದನೆ ಸಲ್ಲಿಸೋಣ.

ಹೀಗೆ ಈ ಸಲದ ರಾಜ್ಯೋತ್ಸವದಲ್ಲಿ ಸರಿ ಸುಮಾರು ೧೮೦ ಪ್ರಶಸ್ತಿ ವಿಜೇತರಿದ್ದರು ಶೇಕಡವಾರು ಎಷ್ಟು ಜನ ಪ್ರಶಸ್ತಿಗೆ ಅರ್ಹರೋ ಆ ಪಟ್ಟಿ ನೋಡಿದರೆ ಗಾಬರಿಯಾದರೂ ಅದೆಲ್ಲವನ್ನು ಮರೆಸುವಂತೆ ಯಕ್ಷಗಾನದ ಹಲವು ಸಾಧಕರಿಗೆ ಈ ಪ್ರಶಸ್ತಿ ಸಂದು ಈ ಪ್ರಶಸ್ತಿಗೆ ನಿಜ ಮೌಲ್ಯ ಬಂದಂತಾಗಿದೆ.

ಮತ್ತೊಮ್ಮೆ ಶ್ರೀ ಬಲಿಪ್ಪ ನಾರಾಯಣ ಭಾಗವತರಿಗೆ ಮಾತ್ರವಲ್ಲ ಜತೆಗೆ ಶ್ರೀ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರೀ ಕೊಡಕ್ಕಲ್ಲು ಗೋಪಾಲ ಕೃಷ್ಣ ಹಾಸ್ಯಗಾರರಿಗೆ ಮತ್ತು ಶ್ರೀ ಸಂಜೀವ ಸುವರ್ಣರಿಗೆ ಹ್ರಿತ್ಪೂರ್ವಕ ಅಭಿನಂದನೆಗಳು. ಇನ್ನೂ ಹೆಚ್ಚಿನ ಕಲಾ ಸೇವೆಯನ್ನು ಮಾಡುವಲ್ಲಿ ಭಗವಂತನು ಚೈತನ್ಯ ರೂಪವಾಗಿ ಇವರೆಲ್ಲರಿಗೆ ಕರುಣಿಸಲಿ ಎಂಬ ಹಾರೈಕೆಗಳು.


 ಚಿತ್ರಕೃಪೆ: ಶ್ರೀ ವೇಣು ಬರೆಕೆರೆ.



Saturday, October 30, 2010

ಮಿತ್ರನ ವರ್ಗಾವಣೆ


ಅತ್ಮೀಯ  ಮಿತ್ರ ಸುಬ್ಬಣ್ಣ ತುಮಕೂರಿನ ಸಿದ್ದಗಂಗಾ ಕಾಲೇಜಿನಿಂದ ವರ್ಗವಾದರು. ಮೊದಲ ಕೆಲವು ದಿನಗಳು ಗೂಗಲ್ ಟಾಲ್ಕ್ ನಲ್ಲಿ ಸುಬ್ಬಣ್ಣನ ಹೆಸರ ಮುಂದೆ ಇರುವ ಚುಕ್ಕೆ ಹಸುರಾಗಿರದೆ ನಸು ಕಪ್ಪಾಗಿ ಗೊಚರಿಸಿ ಅವರ ಗೈರು ಹಾಜರಿಯನ್ನು ಎತ್ತಿ ತೋರಿಸುತ್ತಿತ್ತು. ಹೌದು ಸುಬ್ಬಣ್ಣ ವರ್ಗಾವಣೆಗೊಂಡರು. ನಮ್ಮ ಮಿತ್ರ ಬಳಗದಲ್ಲಿ ಅತಿ ಮುಖ್ಯ ಬದಲಾವಣೆ ಎಂದರೆ ಸುಬ್ಬಣ್ಣನ ವರ್ಗಾವಣೆ. ನಿತ್ಯವೂ ನಿಗದಿತ ಸಮಯದಲ್ಲಿ ಗೂಗಲ್ ನಲ್ಲಿ ಹರಟುವ ಸುಬ್ಬಣ್ಣ ದೂರದ ಉಜಿರೆ ಧರ್ಮಸ್ಥಳದ ಅಯ್ಯನ ಕೃಪಾ ಛತ್ರದ ಒಳಗೆ ಸೇರಿಕೊಂಡರು, ಅಂದರೆ ಉಜಿರೆ ಕಾಲೇಜ್ ನಲ್ಲಿ ಅಧ್ಯಾಪನವನ್ನು ತೊಡಗಿಸಿಕೊಂಡರು. ವೃತ್ತಿ ರೀತ್ಯಾ ಮಹತ್ತರ ಬದಲಾವಣೆ. ತುಮಕೂರಿನ ಕಾಲೇಜ್ ನಲ್ಲಿ ಐ ಪೋಡ್ ಕಿವಿಗೆ ಇಟ್ಟು ಕೇಳೀದ ಯಕ್ಷಗಾನ ಕೇಳಿ ಸಾಕಾದಾಗ “ಇನ್ನು ಹೊಸತ್ತು ಯಾವುದು ಇದೆ ರಾಜಣ್ಣ ?” ಎಂದು ಕೇಳುವ ಸುಬ್ಬಣ್ಣ,ತುಮಕೂರಿನ ಧೂಳಿನ ರಸ್ತೆಗೆ ವಿದಾಯ ಹೇಳಿ ದೂರದ ಉಜಿರೆಯಲ್ಲಿ ತೊಡಗಿಕೊಂಡರು. ಈಗ ಉಲ್ಲಾಸದ ಲವವಲವಿಕೆಯ ಸುಬ್ಬಣ್ಣನಲ್ಲಿ ನಾನೇ ಕೇಳುವಂತಾಗಿದೆ  “ ಹೊಸತ್ತು ಏನಿದೆ ಸುಬ್ಬಣ್ಣ?”

ಹೌದು, ಈಗ ಊರಲ್ಲಿ ಸುಬ್ಬಣ್ಣ ಏಕಾಂಗಿಯಾಗಿ..(ನಾವು ಮಿತ್ರರು ಇಲ್ಲದೆ) ಯಕ್ಷಗಾನ ಸಪ್ತಾಹ ಆಚರಿಸುತ್ತಿದ್ದಾರೆ. ಐ ಪೋಡ್ ತೆಕ್ಕೋಂಡು , ಬಿಡುವು ಮಾಡಿಕೊಂಡು ಯಕ್ಷಗಾನ ತಾಳ ಮದ್ದಲೆ, ಬಯಲಾಟದಲ್ಲಿ ಚೆನ್ನಾಗಿ ಧ್ವನಿ ಮುದ್ರಿಸಿ ಮತ್ತು ಮತ್ತು ಕೇಳುತ್ತ ಸುಖಿಸುತ್ತಿದ್ದಾರೆ. ನನಗಂತೂ ಇದು ಸ್ವಲ್ಪ ಹೊಟ್ಟೆಕಿಚ್ಚು ತರಿಸುತ್ತದೆ. ಮನೆಯ ಊಟ...ಊರಿನ ಆಟಾ ಆಹಾ ಸುಬ್ಬಣ್ಣನ ಭಾಗ್ಯವೇ.?

 ತಾಳಮದ್ದಲೆಗೆ ಹೋಗಿ ಅದನ್ನು ನೋಡಿ ಕೇಳಿ ಎಂಜಾಯ್ ಮಾಡಿ ಮತ್ತೆ ಕೆಲವುದಿನ ಧ್ವನಿ ಮುದ್ರಿಸಿದ ಮುದ್ರಿಕೆಯನ್ನು ಕೇಳಿ..ಇದೊಂದು ಬಗೆಯ ಅನುಭವ...ನೀವು ಮದುವೆ ಜಂಬರದ ಅಥವಾ ಇನ್ಯಾವುದೋ ಸಮಾರಂಭದ ಊಟ ಗಡದ್ ಹೊಡೆದು ಹೊಟ್ಟೇ ತುಂಬಿಸಿ ಕೊಂಡರೂ, ಕೆಲವೊಮ್ಮೆ ಅಡುಗೇ ಶಾಲೆಗೆ ನುಗ್ಗಿ ಅಡುಗೆ ಭಟ್ಟರಲ್ಲಿ ಕುಶಲ ಸಮಾಚಾರ ಮಾತಾಡುತ್ತ.. ಇವತ್ತು ಸಾರು ಲಾಯಕ್ಕಾಗಿದೆ ಅಂತ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಚಪ್ಪರಿಸುವುದಿಲ್ಲವೇ? ಹಾಗೆ. ಈ ತಾಳ ಮದ್ದಲೆ ಗಾನವೈಭವ ಆಟ ಇವುಗಳ ಧ್ವನಿ ಮುದ್ರಣ ನಂತರ ಪದೇ ಪದೇ ಕೇಳುವುದೆಂದರೆ ಈ ಸಾರು ಲೋಟಕ್ಕೆ ಹಾಕಿ ಕುಡಿದಂತೆ. ಅದರ ಅನುಭವ ಸವಿದವನೇ ಬಲ್ಲ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ ಉಪ್ ಕರಿ ಮೂರು ಮೂರು ಸಲ ಹಾಕಿಸಿ ತಿಂದರು ಮತ್ತೆ ಎಲ್ಲವು ಆದ ಮೇಲೇ ಒಳಗೆ ಹೋಗಿ ಐದು ಬೆರಳು ತುದಿಗೆ ಬಂದಷ್ಟು ಅವಲಕ್ಕಿಯ ಉಪ್ಕರಿಯನ್ನು ಬಾಚಿ ಕೈಗೆ ಹಾಕಿ ತಿನ್ನದೇ ಇದ್ದರೆ ಕೆಲವರಿಗೆ ಸಮಾಧಾನ ಆಗುದಿಲ್ಲ. ಉಪ್ಕರಿಯ ವಿಶೇಷತೆಯೇ ಅದು.

ಹೀಗೆ ಧ್ವನಿಮುದ್ರಿಸಿದ ಯಕ್ಷಗಾನದಲ್ಲಿ ಇತ್ತಿಚೆಗೆ ಪೆರಡಾಲದ ಗಾನ ವೈಭವ ಮತ್ತು ಅಂಗದ ಸಂಧಾನ ತಾಳ ಮದ್ದಲೆ ಹಾಗೂ ಉಜಿರೆಯಲ್ಲಿ ನಡೆದ ಹಲವು ತಾಳ ಮದ್ದಲೆಗಳ ಧ್ವನಿ ಮುದ್ರಣ ಉತ್ತಮ ಯಕ್ಷಗಾನ ಕೂಟವನ್ನು ಸವಿದ ಅನುಭವವನ್ನು ನೀಡುತ್ತಿದೆ. ಪೆರಡಾಲದ ಗಾನವೈಭವ ಕೆಲವೊಂದು ವೈಶಿಷ್ಟ್ಯಪೂರ್ಣ ಪದಗಳನ್ನು ಕೂಡಿತ್ತು. ಸಾಮಾನ್ಯವಾಗಿ ಇತ್ತೀಚೆಗೆ ನಡೆವ ಗಾನ ವೈಭವಗಳಲ್ಲಿ ಪದೆ ಪದೆ ಮರುಕಳಿಸುವ ಪದಗಳು ಒಂದು ವಿಧದ ಏಕತಾನತೆಯಿಂದ ಕೂಡಿರುತ್ತವೆ. ಕೆಲವು ಕಡೆ ಪದಗಳನ್ನು ಆಯ್ಕೆ ಮಾಡುವವರು ಇದರ ಬಗ್ಗೆ ಗಮನಹರಿಸುವಂತಾಗಬೇಕು. ಇದು ಕೇವಲ ಗಾನ ವೈಭವಕ್ಕೆ ಸೀಮಿತವಲ್ಲ ತಾಳಮದ್ದಲೆಯಾಗಲಿ ಯಕ್ಷಗಾನವಾಗಲಿ ಇದರಿಂದ ಹೊರತಲ್ಲ. ಆ ಮಟ್ಟಿಗೆ ಪೆರಡಾಲದ ಗಾನವೈಭವದಲ್ಲಿ ಬಹುವಂಶ ಪದಗಳು ವಿಶೇಷವಾಗಿದ್ದರೆ, ಪಂಚವಟಿ, ಗಧಾಯುದ್ದ , ದಕ್ಷಾಧ್ವರದ ಪದಗಳೂ ಹಲವು ಸಲ ಕೇಳೀದ ಮತ್ತದೇ ರಾಗವಾಗಿಬಿಟ್ಟಿತ್ತು. ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಮಿತಿಗಳಿಲ್ಲದಿರುವುದರಿಂದ ಭಾಗವತರಿಗೆ ಸವಾಲೆನಿಸುವಂತಹ ಪದಗಳನ್ನು ಆಯ್ಕೆ ಮಾಡುವಂತಾಗಬೇಕು. ಇದರಿಂದ ಯಕ್ಷಗಾನ ಹಿಮ್ಮೇಳದ ಬಗ್ಗೆ ಅಧಿಕ ಮಾಹಿತಿ ಸಿಗಬಹುದಲ್ಲವೆ.

 ಪೆರಡಾಲದ ಗಾನವೈಭವದ ಝಲಕ್


ಉಜಿರೆಯಲ್ಲಿ ಜರಗಿದ ತಾಳಮದ್ದಲೆಯಲ್ಲಿ ಎರಡನ್ನು ಮಾತ್ರ ಅಸ್ವಾದಿಸುವ ಭಾಗ್ಯ ಲಭಿಸಿತ್ತು. ಒಂದು ಭೀಷ್ಮ ಪರ್ವ ಇನ್ನೊಂದು ಶಲ್ಯ ಸಾರಥ್ಯ. ಭೀಷ್ಮ ಪರ್ವ ದಲ್ಲಿ  ಯಕ್ಷಗಾನದಲ್ಲಿ ಅದ್ಭುತ ಜತೆಗಾರಿಕೆಯ ಸಂವಹನವನ್ನು ತುಂಬುವ ಹಿಮ್ಮೇಳ ಕಲಾವಿದರಾದ ಅಮ್ಮಣ್ಣಾಯ, ಗೋರೆ ಮತ್ತು ದೇಲಂತ ಮಜಲು ಅವರ ವೈಭವದ ಸಾಥ್ ಕಣ್ಣಾರೆ ತಾಳಮದ್ದಲೆಯನ್ನು ಸವಿದ ಅನುಭವ ನೀಡಿತ್ತು. ಪ್ರತಿಯೊಂದು ಪದವನ್ನು ಹಲವು ಸಲ ಪುನರಾವರ್ತಿಸಿ ಕೇಳುವ ತುಡಿತವನ್ನು ತಡೆ ಹಿಡಿವುದು ತುಂಬ ಕಷ್ಟವಾಗಿತ್ತು. ಅಂತೇ ಇದರಲ್ಲಿ ಭೀಷ್ಮನಾಗಿ ಪ್ರಭಾಕರ ಜೋಷಿ, ಕೃಷ್ಣನಾಗಿ ವಾಸುದೇವ ರಂಗ ಭಟ್ ಉತ್ತಮವಾಗಿ ಮಿಂಚಿದರು. ಅರ್ಜುನನ ಪಾತ್ರ ನಿರ್ವಹಿಸಿದ ವಾದಿರಾಜ ಕಲ್ಲೂರಾಯ ಭರವಸೆಯ ಯುವ ಅರ್ಥಧಾರಿಯಾಗಿ ಗಮನ ಸೆಳೆಯುತ್ತಾರೆ. ಇವರ ಅರ್ಥಗಾರಿಕೆ ಇಂದಿ ಹೊಸ ಚಿಗುರಲ್ಲೂ ಆಶಾಭಾವನೆಯನ್ನು ಮೂಡಿಸುತ್ತದೆ. ಉತ್ತಮ ಹಿತಮಿತವಾದ ಅರ್ಥಗಾರಿಕೆಯ ಅರ್ಜುನ.

ಭೀಷ್ಮ ಪರ್ವ ಉಜಿರೆಯ ಒಂದು ಭಾಗ

ಇನ್ನು ಶಲ್ಯಸಾರಧ್ಯದ ಹಿಮ್ಮೇಳದಲ್ಲಿ ಉಲ್ಲೇಖಿಸಬಹುದಾದ ಅಂಶ ಪದ್ಮನಾಭ ಉಪಾಧ್ಯಾಯರ ಮದ್ದಲೆ ವಾದನ. ಅದ್ಭುತ ಹಸ್ತದ ಈ ಮದ್ದಲೆ ವಾದಕರ ಮದ್ದಲೆ ವಾದನ ಸವಿಯುವುದೇ ಒಂದು ಸೊಗಸು. ಇದರಲ್ಲಿ ಭಾಗವತರಾದ ಕನ್ನಡಿಕಟ್ಟೆ ಯವರ ಭಾಗವತಿಕೆಯಲ್ಲಿ ಉಲ್ಲೇಖಿಸುವ ಅಂಶ ಯಾವುದು ನನ್ನ ಗಮನಕ್ಕೆ ಬಾರಲಿಲ್ಲ ಯುವ ಪ್ರತಿಭಾವಂತ ಭಾಗವರಾದ ಇವರು ತಾಳ ಬದ್ದವಾಗಿ ಹಾಡಿದರೂ ಶ್ರುತಿ ಲಯವನ್ನು ಹಿಡಿದಿಡುವಲ್ಲಿ ವಿಫಲರಾದಂತೆ ಭಾಸವಾಗುತ್ತದೆ. ಆ ಮಟ್ಟಿಗೆ ಇನ್ನು ಸಾಧನೆ ಅಭ್ಯಾಸ ಅತ್ಯವಶ್ಯ ಇದು ಗಮನಕ್ಕೆ ಬರುತ್ತದೆ.   ಅರ್ಥಧಾರಿಗಳಾಗಿ ಹಾಸ್ಯಮತ್ತು ವಿಡಂಬನಾತ್ಮಕವಾಗಿ ಪಾತ್ರ ಚಿತ್ರಣವನ್ನು ನೀಡಿದ ಪ್ರಭಾಕರ ಜೋಷಿಯವರ ಶಲ್ಯ ಮತ್ತು ಸುಣ್ಣಂಬಲರ ಕೌರವ ಅತ್ಯುತ್ತಮ ಸಂವಾದದಿಂದ ಕೂಡಿತ್ತು. ಇಬ್ಬರು ತಮ್ಮ ತಮ್ಮ ಶೈಲಿಯಲ್ಲೇ  ಈ ಪಾತ್ರಗಳಿಗೆ ಜೀವತುಂಬಿದರೆ, ಕರ್ಣನಾಗಿ ಗೋವಿಂದ ಭಟ್ಟರು ಶಲ್ಯ ಕರ್ಣ ಸಂವಾದದಲ್ಲಿ ಮಿಂಚಿದರು.

ಶಲ್ಯ ಸಾರಥ್ಯ ಉಜಿರೆಯ ಒಂದು ಭಾಗ

ಯಾವುದೋ ರೂಪದಲ್ಲಿ ಬಂದ ಧ್ವನಿ ಮುದ್ರಣದ ಕಡತವನ್ನು ಅಲ್ಲಲ್ಲಿ ಧ್ವನಿ ಹೆಚ್ಚಿಸಿ ಯಾ ಕಡಿಮೆ ಗೊಳಿಸಿ ಧೋ ಎಂದು ಸುರಿದ ಮಳೆ ಛಾವಣಿಗೆ ಅಪ್ಪಳಿಸಿ ಉಂಟಾದ ಶಭ್ದದ ನಡುವೆಯೂ ಇದನ್ನು ಒಂದು ರೂಪಕ್ಕೆ ತಂದು ಈ  ತಾಳ ಮದ್ದಲೆಗಳನ್ನು ಅಸ್ವಾದಿಸುವಾಗ, ಇದರ ಕಲಾವಿದರು ಮತ್ತು ಸಂಘಟಕರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಮಾತ್ರವಲ್ಲ ಊರಿಗೆ ಹೋಗಿ ತಾಳ ಮದ್ದಲೆಯನ್ನು ನೋಡುವ ಕೇಳುವ ಅವಕಾಶವಿಲ್ಲದಿರುವಾಗ ಅದನ್ನು ಒದಗಿಸಿದ ಈ ಸುಬ್ಬಣ್ಣನ ವರ್ಗಾವಣೆಯೆ ಕಾರಣವಲ್ಲದೆ ಬೇರೇನು ಅಲ್ಲ. ಸುಬ್ಬಣ್ಣನ ಈ ನಿಷ್ಕಾಮ ಕರ್ಮವನ್ನು ಸ್ಮರಿಸದಿದ್ದರೆ ಹೇಗೆ? 

Monday, October 25, 2010

ಯಕ್ಷಚಿಂತನದ ಅನಾಮಿಕನ ಹೆಗ್ಗಳಿಕೆ

 “ಯಕ್ಷಚಿಂತನ” ಈ ಪುಟ ಬರೆಯಲಾರಂಭಿಸಿ ಸುಮಾರು ೨ ವರ್ಷ ಆಗಿರಬಹುದುದೇನೋ. ಇದು ಕೇವಲ ನನ್ನ ವ್ಯಯಕ್ತಿಕ ಅನಿಸಿಕೆಗಳನ್ನು ಸ್ವತಂತ್ರವಾಗಿ ಬರೆಯಲು ನಾನು ಉಪಯೋಗಿಸಿದ ಮಾಧ್ಯಮ. ಯಾವುದೇ ಜನಪ್ರಿಯತೆಗಳಿಸುವ ಉದ್ದೇಶ ಇಲ್ಲವಾದರೂ ಕೆಲವೊಮ್ಮೆ ಬಯಸದೆ ಅದನ್ನು ಒಪ್ಪಿಕೊಳ್ಳುವ ಹಾಗೆ ಅಗಿದೆ. ಕೇವಲ ಸೀಮಿತ ಮಿತ್ರ ಓದುಗರನ್ನು ಹೊಂದಿರುವ ನನ್ನ ಈ ಪುಟಗಳು ಯಾರ ಗಮನಕ್ಕೆ ಬಂದಿದೆಯೊ ಆ ಬಗ್ಗೆ ಈವರೆಗೆ ನಾನು ಯೋಚಿಸಿಲ್ಲ ಅಥವ ಯೋಚಿಸುವ ಅಗತ್ಯವೂ ಬಂದಿಲ್ಲ. ಸಾರ್ವಜನಿಕ ಪುಟವಲ್ಲವೆ, ಅದಕ್ಕೆ ಪರಿಧಿ ಎನೂ ಇಲ್ಲ.
ಇತ್ತೀಚೆಗೆ ಬರೆದ ಒಂದು ಲೇಖನ ನನ್ನ ಮಟ್ಟಿಗೆ ಅಷ್ಟೇನೂ ಮಹತ್ವ ಅಲ್ಲದ ಲೇಖನ ನನಗರಿವಿಲ್ಲದೆ ಮಹತ್ವವನ್ನು ಪಡೆದ ಬಗೆ ನನಗೆ ತುಂಬ ವಿಚಿತ್ರವೆನಿಸಿತು








.ಸಾಮಾನ್ಯವಾಗಿ ವಿಶೇಷವಾದ ಯಕ್ಷಗಾನ ವಿಷಯಗಳು ಗಮನಕ್ಕೆ ಬಂದಾಗ, ಅದು ಇಂತಹುದೇ ಆಗಬೇಕೆಂಬ ನಿಯಮವೇನೂ ಇಲ್ಲ ಯಕ್ಷಗಾನ ಕಾರ್ಯಕ್ರಮ ಇರಬಹುದು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರಗಳು ಗಮನಕ್ಕೆ ಬಂದಾಗ, ಮನಸ್ಸಿನ ಯೋಚನೆಗಳನ್ನು ತೆರೆದಿಟ್ಟುಕೊಳ್ಳುವ ಅನಿಯಮಿತ ಕ್ರಿಯೆ ಇತ್ತೀಚೆಗೆ ರೂಢಿಯಾಗಿಬಿಟ್ಟಿದೆ. ಹಾಗೆ ಹಲವು ಲೇಖನಗಳು ನನ್ನೆಣಿಕೆಗೆ ತಕ್ಕಂತೆ ಇಲ್ಲಿ ಹಂಚಿಕೊಂಡಿರುತ್ತಿದ್ದೆ. ಇದರ ಯೋಗ್ಯತೆಯೋ, ಗುಣಾವಗುಣಗಳ ಬಗ್ಗೆ, ವ್ಯಾಕರಣ ಛಂದಸ್ಸಿನ ಬಗ್ಗೆಯಾಗಲೀ ನಾನೆಂದು ತಲೆಕೆಡಿಸಿಕೊಂಡಿಲ್ಲ. ನಾನೆ ಹೇಳುವಂತೆ ಇರುವುದಾದರೆ ಇದೆಲ್ಲ ಹುಚ್ಚು ಮನಸ್ಸಿನ ಕಲ್ಪನೆಗಳು. ಹೀಗೆ ಇದರಲ್ಲಿ ಹಲವು ಯಕ್ಷಗಾನದ ಕಾರ್ಯಕ್ರಮದ ಬಗ್ಗೆ ನನ್ನ ಅನಿಸಿಕೆ, ವ್ಯಕ್ತಿ ಚಿತ್ರಣದ ನುಡಿನಮನಗಳು, ಹತ್ತು ಹಲವು ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದೆ. ಅದರಂತೆ ಇತ್ತೀಚೆ ವಿಶೇಷವಾಗಿ ಸಿಕ್ಕಿದ ದೊಂದಿ ಬೆಳಕಿನ ಯಕ್ಷಗಾನದ ವೀಡಿಯೋ ಸಿ.ಡಿ. ಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ನಿಜಕ್ಕಾದರೂ ಇದೆಲ್ಲ ಅಧಿಕಪ್ರಸಂಗ ಎಂದು ಹಲವು ಸಲ ಅನ್ನಿಸಿದ್ದರೂ ನನ್ನ ಮಟ್ಟಿಗೆ ಸೀಮಿತ ಎಂದು ತಿಳಿದಷ್ಟು ಜಾಗರೂಕನಾಗಿ ಬರೆದಿದ್ದೆ. ಮೊದಲೇ ಹೇಳಿದಂತೆ ಅದರ ಗುಣಮಟ್ಟ ಹೇಗೊ, ಅದು ಹಾಗಿರಲಿ. ಇಂತಹ ಲೇಖನವೊಂದು ಹಲವು 
ಮಹನೀಯರ ಗಮನಕ್ಕೆ ನನಗರಿವಿಲ್ಲದೇ ಬಂದುದು ನಾನು ಇಷ್ಟು ಬರೆಯುವುದಕ್ಕೆ ಕಾರಣವಾಯಿತು. 




ಲೇಖನ ಹೇಗೋ ಅದರ ಬಗ್ಗೆ ಅಂತಿರಲಿ. ಆದರೆ ಈ ಲೇಖನವನ್ನು ನನ್ನ ಗಮನಕ್ಕೆ ತಾರದೆ ತಮ್ಮದೇ ಪತ್ರಿಕೆಯಲ್ಲಿ ಯಥಾವತ್ತಾಗಿ “ಯಕ್ಷಚಿಂತನದ ಅನಾಮಿಕ” ಎಂಬ ತಲೆಬರಹದಲ್ಲಿ ಪ್ರಕಟಿಸಿದ್ದು ನನಗೆ ಅತೀವ ಗಾಬರಿಯನ್ನುಂಟು ಮಾಡಿತ್ತು. ನನ್ನ ಅನುಮತಿಯೆಂಬ ದೊಡ್ಡ ಶಬ್ಧವನ್ನು ಹೇಳುವ ಯೋಗ್ಯತೆ ನನಗಿಲ್ಲ ಆದರೂ ನನ್ನ ಲೇಖನ ಪ್ರಕಟಿಸುವ ಒಂದು ಸೂಚನೆಯನ್ನಾದರೂ ಕೊಡಬಹುದಿತ್ತು , ಇದನ್ನು ನನ್ನ ಈ ಪುಟದ ಪ್ರತಿಕ್ರಿಯೆ ಕಾಲಂ ನಲ್ಲಿ ಚಿಕ್ಕದಾಗಿ ಸೂಚಿಸಿದ್ದರೂ ಸಾಕಿತ್ತು. ಕೇವಲ ಅನಾಮಿಕನಾಗಿ ನನ್ನನ್ನು ಚಿತ್ರಿಸಿದ್ದು ನನಗೆ ವಿಚಿತ್ರವೆನಿಸಿದೆ. ನನ್ನ ಬ್ಲಾಗ್ ನ ಪುಟದಲ್ಲಿ ನನ್ನ ಬಗೆಗಿನ ಸಂಕ್ಷಿಪ್ತ ವಿವರವನ್ನು ಉಲ್ಲೇಖಿಸಿದ್ದರು ಅದೆಂತು ಅನಾಮಿಕನಾದೆನೊ? ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ವಿಫಲನಾಗಿದ್ದೇನೆ. ಇದನ್ನು ಅಲ್ಲಿ ಮುದ್ರಿಸಿದ ಔಚಿತ್ಯವೇನೋ  ಅದೂ ನನಗೆ ಸ್ಪಷ್ಟವಾಗಲಿಲ್ಲ, ಯಕ್ಷ ಚಿಂತನ ಆ ಮಟ್ಟಿಗಾದರೂ ಗಮನಾರ್ಹವಾಯಿತಲ್ಲ ಅದೊಂದು ಹೆಗ್ಗಳಿಗೆ ಎಂದು ತಿಳಿಯಲೇ?.
.

ಹೌದು, ಇದು ನನ್ನ ಮಟ್ಟಿಗೆ ಹೆಗ್ಗಳಿಕೆಯ ವಿಚಾರವೇ ಅಗಿದೆ. ನನ್ನ ಅನುಮತಿಯೋ ಅಥವಾ ಗಮನಕ್ಕೆ ತರುವುದೊ ಅದೆಲ್ಲದರ ಬಗ್ಗೆ ಇದನ್ನು ಪ್ರಕಟಿಸಿದವರಿಗೆ ಬಿಟ್ಟದ್ದು. ನಾನಂತು ಈಗ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲೂ ಇಲ್ಲ. ವಿವಾದಗಳಿಗೆ ಒಳಗಾಗುವಷ್ಟು ಮಹನೀಯನು ನಾನಲ್ಲ ಎಂಬ ಪರಿಜ್ಞಾನ ನನಗಿದೆ. ಅದರೂ ಇಷ್ಟೊಂದು ಮಹತ್ವವನ್ನು ನನ್ನ ಯಕ್ಷಚಿಂತನ ಪಡೆಯಿತಲ್ಲ. ಎಲ್ಲವೂ ಓದುಗರ ನಿರ್ಧಾರಕ್ಕೆ ಬಿಟ್ಟುಬಿಡೊಣವಲ್ಲವೆ.


 ಈ ಪತ್ರಿಕೆಯ ಬಗ್ಗೆ ಹೆಚ್ಚೇನು ವಿವರ ನನಗೆ ಲಭ್ಯವಾಗಲಿಲ್ಲ. ಮಿತ್ರರು ಕಳಿಸಿದ ಪುಟವನ್ನಷ್ಟೇ ಇಲ್ಲಿ ಬಳಸಿಕೊಂಡಿದ್ದೇನೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮುಖವಾಣಿ ಪತ್ರಿಕೆಯ ಪುಟಗಳಲ್ಲಿ ಯಕ್ಷಚಿಂತನದ ಚಿಂತನೆಗಳು ಮಹತ್ವ ಪಡೆಯಿತಲ್ಲ. ಇದು ನನ್ನ ಅನುಮತಿಯಾಗಲಿ ನನ್ನ ಗಮನಕ್ಕೆ ತಾರದೆ ಪ್ರಕಟಿಸಿದ್ದರೂ ಅದು ಯಾವಬಗೆಯಲ್ಲೇ ಇರಲಿ ಅದೊಂದು ಹೆಗ್ಗಳಿಕೆ ತಾನೇ? ಆದರೂ ಮನದ ಮೂಲೆಯಲ್ಲಿ ಒಂದು ಮಾತು ನನ್ನಲ್ಲಿ ಹೇಳಿರುತ್ತಿದ್ದರೆ.. ಆ ಮಟ್ಟಿಗೆ ನಾನು ಅನಾಮಿಕನಾಗಿ ಬಿಟ್ಟೆನೆ? ಹಾಗಿದ್ದಲ್ಲಿ ಯಕ್ಷಚಿಂತನದ ಅನಾಮಿಕ ಎಂಬ ವಾಕ್ಯ ಅರ್ಥಪೂರ್ಣವಾಗುತ್ತದೆ. ಆದರೂ ಪ್ರಕಟಿಸಿದವರು ಈ ಯಕ್ಷಚಿಂತನದ ಪುಟಗಳನ್ನು ಸ್ವಲ್ಪ ಕೂಲಂಕೂಷವಾಗಿ ನೋಡಿರುತ್ತಿದ್ದರೆ ನನ್ನ ಬಗೆಗಿನ ವಿವರ ಲಭ್ಯವಾಗುತ್ತಿತ್ತು. ನನ್ನ ವಿಳಾಸ ಕೊಟ್ಟು ಸ್ವವಿವರವನ್ನೆಲ್ಲಾ ಕೊಟ್ಟು ಕರೆ ಮಾಡಿ ವಿಡಿಯೋ ಡಿ. ವಿ.ಡಿ.ಯನ್ನು ತರಿಸಿದ್ದನ್ನು ಲೇಖನದಲ್ಲಿ ಉಲ್ಲೇಖಿಸಿದ್ದರೂ ನಾನು ಅನಾಮಿಕನಾದ ಬಗೆ ಮಾತ್ರ ತುಂಬ ವಿಚಿತ್ರವಲ್ಲವೆ? ಹೀಗಿದ್ದರೂ ಅನಾಮಧೇಯನಾಗಿ ಪತ್ರಿಕಾ ಬಳಗಕ್ಕೆ ಈ ಮೂಲಕ ಕೃತಜ್ಞತೆಗಳು. ನನಗರಿವಿಲ್ಲದೇ ಹೀಗೆ ಲೇಖನ ಪ್ರಕಟಿಸಿದ  ಅನಿವಾರ್ಯತೆ ಯನ್ನು ತಿಳಿವ ಕುತೂಹಲವಿದೆ.  ಸಾಧ್ಯವಾದರೆ ಸಂಬಂದಿಸಿದವರಿಗೆ ಈಗ ಲೇಖನ ಗಮನಕ್ಕೆ ಬಂದಲ್ಲಿ ತಿಳಿಸುವ ಹಾಗಿದ್ದರೆ ತಿಳಿಸಬೇಕಾಗಿ ಭಿನ್ನಹ. 





Sunday, September 26, 2010

ಮರುಳು ಅಲ್ಲವೀ ಹವ್ಯಾಸ.

ಯಕ್ಷಗಾನ ಕೇಳುವ ಹವ್ಯಾಸ ಹಲವು ದಿಶೆಯಲ್ಲಿ ಯಕ್ಷಗಾನ ಸಂಗ್ರಹಕ್ಕೆ ನಿಮಿತ್ತವಾಗಿದೆ. ಅದರಂತೆ ಹಲವು ಮಿತ್ರ ಬಾಂಧವ್ಯವನ್ನು ಹಿರಿದಾಗಿಸಿದೆ. ಇಂದು ಕೇಳಿದ ಯಕ್ಷಗಾನದ ತುಣುಕು ಮರುದಿನ ಈ ಮೇಲ್ ಮೂಲಕ ಈ ಮಿತ್ರ ಬಳಗದಲ್ಲಿ ಹಂಚಿಕೊಳ್ಳುವ ಒಂದು ವಿಚಿತ್ರ ಹವ್ಯಾಸ ರೂಢಿಸಿಕೊಂಡಮೇಲೆ ಹವ್ಯಾಸಕ್ಕೆ ಹೊಸ ರೂಪು ಕೊಟ್ಟ ಅಲ್ಪ ಸಮಾಧಾನ ನನಗಾಗಿದೆ. ಪ್ರಪಂಚದಾದ್ಯಂತ ಮಿತ್ರ ಬಳಗ ಪಸರಿಸುವುದಕ್ಕೆ ಇದು ಬಲು ಮುಖ್ಯ ಕಾರಣವಾಗಿಬಿಟ್ಟಿತು.  ನಿತ್ಯವೂ ತಮ್ಮ ಮೈಲ್ ಪೆಟ್ಟಿಗೆ ತೆರೆಯುವವರಿಗೆ ಇದು  ಒಂದು ರೀತಿ ಮುದಕೊಡುತ್ತ ಬಂದಿದೆ ಅಂತ ನನ್ನ ಭಾವನೆ.


ಕೆಲವು ಸಮಯದ ಮೊದಲು ಎಂದೂ ಸಂಪರ್ಕಿಸದ ಒಬ್ಬರು ಚಾಟ್ ಬೊಕ್ಸ್ ನಲ್ಲಿ “ನಮಸ್ಕಾರ ಹೇಳಿ.  ದಯಮಾಡಿ ಯಕ್ಷಗಾನಗಳನ್ನು ಮೇಲ್ ಮಾಡಬೇಡಿ ಅಂತ ಬೇಡಿಕೊಂಡಾಗ ಒಂದು ಸಲ ಕಕ್ಕಾಬಿಕ್ಕಿಯಾದೆ.ಅದು ಹೇಗೊ ಯಕ್ಷಗಾನ ಬಳಗದಲ್ಲಿ ಅವರ ಮೈಲ್ ವಿಳಾಸ ಸೇರಿಕೊಂಡು ಬಿಟ್ಟಿತ್ತು. ವಿದೇಶದಲ್ಲಿ ಉದ್ಯೋಗಿಯಾಗಿರುವ ಇವರಿಗೆ ಅದು ಹಲವು ರೀತಿ ಕಿರಿ ಕಿರಿಯನ್ನುಂಟು ಮಾಡಿತ್ತು.


ಹೀಗಿದ್ದರು ಹಲವು ಸಹೃದಯ ಮಿತ್ರರ ಬಳಗವನ್ನು ಇದು ಸೃಷ್ಟಿಸಿದೆ. ಅರಬ್ ರಾಷ್ಟ್ರದ ಮಿತ್ರರು ತಮ್ಮ ಮೇಲ್ ವಿಳಾಸಕ್ಕೆ ಬರುವ ಈ ನಿತ್ಯ ಯಕ್ಷಗಾನ ಪದಗಳನ್ನು ಕೇಳಿ ಮುದಗೊಂಡ ಮನಸ್ಸಿಂದಲೇ ಮುದದಿಂದ ತಮ್ಮ ದಿನವನ್ನು ಆರಂಭಿಸುತ್ತಿದ್ದಾರೆ. ಅದೇ ರೀತಿ ಇಲ್ಲಿಂದಲೂ ವೆತ್ಯಸ್ತ ರೀತಿಯ ವಾತಾವರಣದಲ್ಲಿ ನಿತ್ಯ ಬದುಕನ್ನು ಸವೆಸುವ ಯುವ ಮಿತ್ರರೊಬ್ಬರಿಗೆ ನನ್ನ ಈ ತುಣುಕು ಪದಗಳೇ ಚೈತನ್ಯವನ್ನು ನೀಡುತ್ತದೆ. ತಮ್ಮ ಮೊಬೈಲ್ ಗೆ ರವಾನಿಸಿ ಎಕಾಂತದಲ್ಲಿ ರಾತ್ರಿ ನಿದ್ರಿಸುವ ಸಮಯದಲ್ಲಿ ಕೇಳುವುದನ್ನು ಹವ್ಯಾಸ ಮಾಡಿಕೊಂಡಿರುವ ಇವರು ಆ ಸಮಯದಲ್ಲಿ ಕಲಾವಿದರೊಂದಿಗೆ ನನ್ನ ನೆನಪನ್ನು ಮಾಡುತ್ತಿರುವುದು ನನಗೆ ಒಂದು ಧನ್ಯತೆಯನ್ನು ಒದಗಿಸಿದೆ.


ತನ್ನ ಪ್ರತೀ ಹಾಡು ಕಳಿಸಿದಾಗ ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿ ಸಂತಸ ಪಡುವ ಮಿತ್ರರೂ ಇದ್ದಾರೆ. ಮುಂಬೈ , ದೆಹಲಿ, ಅಮೇರಿಕ, ಇಂಗ್ಲಂಡ್ ಎಂದು ಸುತ್ತಾಡುತ್ತ ಇದ್ದರೂ ಇವರ ಪ್ರತಿಕ್ರಿಯೆ ತತ್ ಕ್ಷಣ ಬರುವುದನ್ನು ಕಂಡಾಗ ಅಚ್ಚರಿಯ ಜತೆ ಸಂತಸವೂ ಆಗುತ್ತಿದೆ. ನಾನು ಕಳುಹಿಸಿದ ಪದಗಳನ್ನು ಕೇಳಿ ದಿನದ ಕೆಲಸದಲ್ಲಿ ತೊಡಗುವ ಮಿತ್ರರು ಹಲವರು. “ ಇಂದಿನ ಪದ ಲಾಯಿಕ್ಕಿದ್ದು .” ಎಂದು ಸಣ್ಣ ಪ್ರತಿಕ್ರಿಯೆ ಕೊಟ್ಟರೂ ಮನಸ್ಸಿಗೆ ಸಂತಸ.


ಕೆಲವೊಮ್ಮೆ ನನ್ನ ಬಿಡುವಿಲ್ಲದ ಕೆಲಸದಿಂದಲೋ ಅಥವ ಇನ್ನಾವುದೋ ಕಾರಣದಿಂದ ಯಕ್ಷಗಾನದ ಪದಗಳನ್ನು ಕಳುಹಿಸದಿದ್ದಲ್ಲಿ "ಇಂದು ಪದ ಬೈಂದಿಲ್ಲೆ. ಪದ ಕಳಿಸಿ”


“ಕಳಿಸಿದ ಪದವನ್ನೇ ಪುನಃ ಕಳಿಸಿ ಮಾರಯ್ರೆ. ಅಡ್ಡಿಲ್ಲ” ಅಂತ ಬೇಡಿಕೆ ಸಲ್ಲಿಸುವ ಮಿತ್ರರೂ ಇದ್ದಾರೆ.


ಸಾಮಾನ್ಯವಾಗಿ ಮೊದಲ ದಿನ ಕೇಳಿದ ಯಕ್ಷಗಾನದಲ್ಲಿದ್ದ ಪದದ ತುಣುಕನ್ನು ನಾನು ಮೆಲುಕು ಹಾಕಿ ಮರುದಿನ ಮಿತ್ರ ಬಳಗಕ್ಕೆ ರವಾನೆ ಮಾಡುವುದು ಸಹಜ. ಅದನ್ನು ಎಷ್ಟು ಜನ ಕೇಳ್ತಾರೋ?  ಯಾವಾಗ ಕೇಳ್ತಾರೊ? ಇದನ್ನು ಯಾರು ಹೇಗೆ ಸ್ವೀಕರಿಸುತ್ತಾರೊ? ಈ ಬಗ್ಗೆ ಈವರೆಗೆ ನಾನು  ತಲೆಕೆಡಿಸಿಕೊಂಡಿಲ್ಲ. ನನ್ನ ಗಣಕ ಯಂತ್ರದ ಜ್ಙಾಪಕ ಕೋಶ (ಹಾರ್ಡ್ ಡಿಸ್ಕ್ ಮೆಮೊರಿ)ಯಲ್ಲಿ ಬೆರಳ ತುದಿಯ ಆಣತಿಗೆ ಕಾದು ಕುಳಿತ ಯಕ್ಷಗಾನದ ಸಾಲುಗಳನ್ನು ಕಂಡಾಗ ಹಲವು ಸಲ ಅನ್ನಿಸಿದ್ದಿದೆ  ಸುಮ್ಮನೇ ಮರುಳಲ್ಲವೆ? ಏನಿದೆ ಇದರಲ್ಲಿ? ಕಣ್ಣೀಗೆ ಜಡವಾಗಿ ಗೋಚರಿಸದ ಈ ವಸ್ತುಗಳ ಪಂಕ್ತಿಗಳು,  ಏನಿವೆ ಇದರಲ್ಲಿ? ಅದರೆ ಇದು ಅಮೂಲ್ಯವೆಂದು ಅನ್ನಿಸುವುದು ನನ್ನಲ್ಲಿಗೆ ಬರುವ ನನ್ನಂತೇ ಇರುವ ಮರುಳರನ್ನು (ಸ್ನೇಹದಿಂದ)  ನೋಡುವಾಗ. ಈ ಬಗೆಯಲ್ಲಿ ಚಿತ್ರವಿಚಿತ್ರ ಮರುಳರು ಇದ್ದಾರೆ. ಅದು ನನ್ನ ಗೋಚರಕ್ಕೆ ಬಂದದ್ದು ಮಾತ್ರ ಈ ಸಂಗ್ರಹದಿಂದ.
ನಾನು ಕಳಿಸಿದ ಪದಗಳನ್ನೆಲ್ಲಾ ಸಂಗ್ರಹ ಮಾಡಿ ಅದನ್ನು ಸಿ. ಡಿ. ಗೆ ರವಾನಿಸಿ ಕಾರಿನಲ್ಲಿ ಪ್ರಯಾಣಿಸುವಾಗ ಕೇಳುವ ಹಲವು ಮಿತ್ರರು ಇದ್ದಾರೆ. ಇವರ ಕಂಪ್ಯೂಟರ್ ನಲ್ಲಿ ನಾನು ಕಳಿಸಿದ ಪದಗಳಿಗೆ ಅಂತ ಸ್ಥಳವನ್ನು ಮೀಸಲಿರಿಸಿದ್ದಾರೆ.
ಒಂದು ಸಲ ಊರಿಗೆ ಹೋಗಿದ್ದಾಗ ಅಲ್ಲಿ ಒಬ್ಬರ ಜತೆ ಪ್ರಯಾಣಿಸುತ್ತಿದ್ದೆ. ಯಕ್ಷಗಾನದ ಬಗ್ಗೆ ಮಾತು ಬಂದಾಗ ತಮ್ಮ ಮೊಬೈಲ್ ನಲ್ಲಿದ್ದ ಯಕ್ಷಗಾನ ಪದಗಳನ್ನು ಉತ್ಸಾಹದಿಂದ ಕೇಳಿಸಿದರು. ಆದರೆ ಅದು ನಾನು ಕಳುಹಿಸಿದ ಪದಗಳೇ ಅವು ಎಂದು ಅವರಿಗೆ ಅರಿವಾದಾಗ ಬಹಳ ಆಶ್ಚರ್ಯಗೊಂಡರು. ಯಾರೋ ಅವರ ಮಿತ್ರರೊಬ್ಬರು ಅವರಿಗೆ ಕೊಟ್ಟಿದ್ದರು. ಹೀಗೆ ನನಗೆ ಅರಿವಿಲ್ಲದೆ ಯಕ್ಷಗಾನದ ಕಂಪನ್ನು ಹರಡಿ ಕೃತಾರ್ಥತೆ ನನಗಿದೆ. ಇಂದಿನ  ಎಫ್. ಎಮ್  ರೇಡಿಯೋ ಗಲಾಟೆಯ ಮಧ್ಯೆ ಅಲ್ಪವಾದರು ಯಕ್ಷಗಾನ ಪದಗಳು ಚೆಂಡೆ ಮದ್ದಲೆಯ ನಿನಾದ ಕೇಳಿಸುವಾಗ ನನಗೆ ನಿಜಕ್ಕೂ ಅತ್ಮಾನಂದ ವಾಗುತ್ತದೆ.


ಈ ಯಕ್ಷಗಾನದ ತುಣುಕನ್ನು ರುಚಿ ನೋಡಿ ಬೆಂಗಳೂರಿಗೆ ಬಂದರೆ ನಿಮ್ಮಲ್ಲಿಗೆ ಖಂಡಿತ ಬರಬೇಕು ಎಂದವರು ಮತ್ತು ಹಾಗೆ ಬಂದವರು ಹಲವರು.ಹಾಗೆ ಬಂದವರು ತಮ್ಮವರ ಮನೆಗೆ ಹೋಗದೆ ಅಧಿಕ ಸಮಯವನ್ನು ನನ್ನ ಬಳಿಯೇ ಕಳೆದು  ಕೌಟುಂಬಿಕ ಸಂಭಂಧಿಗಳ ಮುನಿಸಿಗೆ ಕಾರಣರಾದರೂ ತಮ್ಮ ಹುಚ್ಚಿನ ಬಗ್ಗೆ ತಾವೇ ಅಭಿಮಾನ ಪಟ್ಟುಕೊಳ್ಳುವ ಕಲಾಭಿಮಾನಿಗಳನ್ನು ಕಂಡಾಗ ಏನನಿಸಬಹುದು?


ಹತ್ತು ಹಲವು ಮನೋಭಾವ ಇಲ್ಲಿ ಕಂಡಿದ್ದೇನೆ. ನನ್ನಲ್ಲಿ ಬಂದು ಕೆಲವರು ಬಲಿಪ್ಪರದ್ದು ಮಾತ್ರ ಸಾಕು ಎನ್ನುವವರು ಹಲವರಾದರೆ ಇನ್ನು ಕೆಲವರು ಬಲಿಪ್ಪರು ಹೊಳ್ಳರು ಬಿಟ್ಟು ಬಾಕಿ ನೋಡುವ ಅನ್ನುವ ಅಭಿಮಾನಿಗಳೂ ಇದ್ದಾರೆ ಎನ್ನುವಾಗ ವಿಬ್ಭಿನ್ನ ಮನೋಭಾವ ಕಂಡ ಅನುಭವ. ನಾನು ಸಂಗ್ರಹಿಸುವಾಗ ನನ್ನ ಅಭಿಮಾನ ಇಷ್ಟ ಯಾವುದನ್ನು ನೋಡದೆ ಸಾಮಾನ್ಯ ಎಲ್ಲಾ ಕಲಾವಿದರ, ಬಲಿಪ್ಪರಾಗಲಿ, ನಾವಡರಾಗಲಿ ಹೊಳ್ಳ ಪದ್ಯಾಣವೇ ಆಗಲಿ ಯಾವುದೇ ತಾರತಮ್ಯವಿಲ್ಲದೆ ಸಂಗ್ರಹಿಸಿದ್ದು ಕೇವಲ ಯಕ್ಷಗಾನ ಆಸಕ್ತಿಯಿಂದ.  ಎಲ್ಲವನ್ನೂ ತಕ್ಕ ಮಟ್ಟಿಗೆ ಅಚ್ಚು ಕಟ್ಟಾಗಿ ಮನಸ್ಸು ಬೇಕೆಂದು ಬಯಸಿದಾಗ ಸಿಗುವಂತೆ ಜೋಡಿಸಲು ಶ್ರಮವಹಿಸಿದ್ದೇನೆ. ಇದೆಲ್ಲ ಕೇವಲ ಆತ್ಮ ತೃಪ್ತಿಗಾಗಿ ಮಾತ್ರ.


ಅಂದು ಬಾಲ್ಯದ ದಿನಗಳಲ್ಲಿ ಯಕ್ಷಗಾನ ಅಥವಾ ಚೆಂಡೆ ಮದ್ದಳೆ  ಕೇಳಬೇಕೆಂದರೆ ,ಬಯಲಾಟ ತಾಳಮದ್ದಲೆ ಅಲ್ಲದೆ ಬೇರೆಲ್ಲೂ ಕೇಳುವಂತೆ ಇರಲಿಲ್ಲ. ಟೇಪ್ ರೆಕಾರ್ಡರ್ ಮಾತಿರಲಿ ಊರಿಗೆ ಒಂದೊ ಎರಡೋ ರೇಡಿಯೋ ಇರುತ್ತಿದ್ದ ಕಾಲವದಲ್ಲವೆ? ವಾರಕ್ಕೊಂದು ಸಲ ಬರುವ ಬುಧವಾರದ ರಾತ್ರಿ, ಅಂದು ಮಂಗಳೂರು ಆಕಾಶವಾಣಿ ಯಲ್ಲಿ ಬರುವ ಒಂದು ಘಂಟೆಯ ಯಕ್ಷಗಾನಕ್ಕೆ ಕಾತರಿಸಿ ಪರರ ಮನೆಯಲ್ಲಿ ಕೂರುವ ಕಾಲವು ಇತ್ತು. ಯಾರದೋ ಮನೆಯಲ್ಲಿ ಯಾರದೋ ರೇಡಿಯೋದಲ್ಲಿ ಕೇಳುವ ಯಕ್ಷಗಾನದ ಕಾಲವೊಂದು, ಇಂದು ಕೈ ಬರಳ ತುದಿಯ ಒತ್ತುವಿಕೆಗೆ ಗಣಕ ಯಂತ್ರದಲ್ಲಿ ಮೊಳಗುವ ಹಲವು ಯಕ್ಷಗಾನಗಳು, ಚೆಂಡೆ ಮದ್ದಲೆಯ ಲಯವಿನ್ಯಾಸ ಕೇಳುವಾಗ ಆಗುವ ಸಂತೋಷ, ಸಿಗುವ ಮನೋಲ್ಲಾಸ ಹಾಗೇ ಅದನ್ನು ಮಿತ್ರರಲ್ಲಿ ಹಂಚಿಕೊಂಡಾಗ ಸಿಗುವ ಆನಂದ ಎಲ್ಲವೂ ಅಪ್ಯಾಯಮಾನ.




Wednesday, August 4, 2010

ಅಗರಿ ಎಂಬ ಗಾನ ಕೋಗಿಲೆ

ಅಗರಿ ಶ್ರೀನಿವಾಸ ಭಾಗವತರು ಚಿತ್ರ ಕೃಪೆ: ರಾಮ್ ನರೇಶ್ ಮಂಚಿ

ಅಂದು ಶನಿವಾರದ ಒಂದು ದಿನ ಬೆಳಗ್ಗೆ ಕಛೇರಿಗೆ ಹೊರಡುವ ತರಾತುರಿಯಲ್ಲಿದ್ದೆ. ಜೇಬಿನಲ್ಲಿದ್ದ ಮೊಬೈಲ್ ಸಂದೇಶ ಗ್ರಹಿಸಿ ಮೆಲುವಾಗಿ ಕಂಪಿಸಿತು. ಅದನ್ನು ತೆಗೆದು ನೋಡುವಷ್ಟು ಸಮಯವಿಲ್ಲದೆ ಹಾಗೆ ಬಿಟ್ಟು ನಿತ್ಯ ನಿಯಮಿತ ದಿನಚರಿಯತ್ತ ಉದ್ಯುಕ್ತನಾದೆ. ಸ್ವಲ್ಪ ವಿರಾಮ ಸಿಕ್ಕಿ ಯಾರದೋ ಕರೆ ಬಂದಾಗ ಮರೆತು ಹೋದ ಸಂದೇಶ ತೆರೆದು ಓದುವ ಕೆಲಸ ನೆನಪಾಗಿ ಕುತೂಹಲದಿಂದ ನೋಡಿದೆ. ಮಿತ್ರರಾದ ಸುಬ್ಬಣ್ಣ ತುಮಕೂರಿನಿಂದ ಸಂದೇಶ ಕಳಿಸಿದ್ದರು. “ಮಧಾಹ್ನದ ವೇಳೆ ನಿಮ್ಮಲ್ಲಿಗೆ ಬರುತ್ತಿದ್ದೇನೆ.”



ಸುಬ್ಬಣ್ಣ ತುಮಕೂರಿಂದ ನನ್ನನ್ನು ಕಾಣಲು ಬರುವುದೇನು ಹೊಸತಲ್ಲ. ಹಾಗಾಗಿ ಹೆಚ್ಚಿನ ಗಮನ ಆ ಕಡೆಗೆ ಹರಿಸದೆ ಯಥಾವತ್ತಾಗಿ ಕೆಲಸದಲ್ಲಿ ಪ್ರವೃತ್ತನಾದೆ. ಮಧ್ಯಾಹ್ನ ಊಟ ಮಾಡುತ್ತಿರಬೇಕಾದರೆ ಸುಬ್ಬಣ್ಣನ ಕರೆ,

“ ನಾನು ಯಶವಂತಪುರದ ರೈಲು ನಿಲ್ದಾಣದಲ್ಲಿದ್ದೇನೇ.” ಇದು ಸುಬ್ಬಣ್ಣನ ಮಾಮೂಲು ಕ್ರಮ. ಅವರನ್ನು ಕರೆದುಕೊಂಡು ಬರೋಣವೆಂದು, ದ್ವಿಚಕ್ರ ಏರಿ ಯಶವಂತಪುರದತ್ತ ತೆರಳಿದೆ. ಮನೆಯಿಂದ ಐದು ನಿಮಿಷದ ಹಾದಿ. ರೈಲು ನಿಲ್ದಾಣದ ಹತ್ತಿರದ ಬಸ್ ನಿಲ್ದಾಣಕ್ಕೆ ಬರುತ್ತಾ ಸುಬ್ಬಣ್ಣನ ಅರಸುತ್ತ ಕತ್ತು ತಿರುಗಿಸುತ್ತಾ ಕಣ್ಣು ದೂರಕ್ಕೆ ಹಾಯಿಸಿದೆ. ಆ ಜನ ಮತ್ತು ವಾಹನದ ಮಧ್ಯೆ ಹುಡುಕುವುದು ಸ್ವಲ್ಪ ಕಷ್ಟವೇ. ಅದರೂ ದೂರದಲ್ಲೇ ಕಪ್ಪು ಬ್ಯಾಗನ್ನು ಜನಿವಾರ ಮಾಡಿ ಹೆಗಲಿಗೇರಿಸಿಕೊಂಡು ನಿಂತುಕೊಂಡ ವ್ಯಕ್ತಿ ಸುಬ್ಬಣ್ಣ ಆಗಿರಬಹುದು ಎಂದು ಅತ್ತ ಹೋದ ನನ್ನ ಅನುಮಾನ ನಿಜವಾಗಿತ್ತು. ಅತ್ತ ಸರಿದು ಹಸ್ತಲಾಘವ ಇತ್ತು ಅವರನ್ನು ವಾಹನದಲ್ಲಿ ಕೂರಿಸಿ ಕಛೇರಿ ಕಡೆ ಹೊರಟೆ.



ದಾರಿಯಲ್ಲಿ ಬರುತ್ತಿದ್ದಂತೆ ಸುಬ್ಬಣ್ಣ ಹೇಳಿದರು... “ಹಳೆಯ ತಾಳಮದ್ದಲೆ ಕ್ಯಾಸೆಟ ಕೆಲವು ತಂದಿದ್ದೇನೆ. ಎಲ್ಲಿಯೋ ಆದ ತಾಳ ಮದ್ದಲೆಯ ಧ್ವನಿ ಮುದ್ರಣವದು . ಅದನ್ನು MP3 ಮಾಡಿ ಕೊಡಬೇಕು.” ಎಂದಿನಂತೆ ಇದು ಕೂಡ ಮಾಮೂಲು ಮಾತುಗಳು. ಔಪಚಾರಿಕ ಮಾತುಗಳೊಂದಿಗೆ ಇದು ಕೂಡ ಔಪಚಾರಿಕವಾಗಿಬಿಟ್ಟಿದೆ. ಕಛೇರಿಗೆ ಬಂದವರೆ..ಬ್ಯಾಗ್ ಕೆಳಗಿಟ್ಟು ದೊಡ್ಡ ಉಸಿರು ಬಿಟ್ಟು ನಮ್ಮ ತಿರುಗು ಆಸನದಲ್ಲಿ ಮೈಚೆಲ್ಲಿ ಕುಳಿತರು. ಮೇಜಿನ ಮೇಲಿದ್ದ ಬಾಟಲ್ ನಿಂದ ಒಂದಷ್ಟು ನೀರನ್ನು ಗಟ ಗಟ ಕುಡಿದು.. ಬ್ಯಾಗಿನೊಳಗಿಂದ ಒಂದಷ್ಟು ಕ್ಯಾಸೆಟ್ ಮೇಜಿನ ಮೇಲೆ ಹರಡಿ ಒಂದೊಂದಾಗಿ ವಿವರಿಸತೊಡಗಿದರು. ಅವಸರವಸರವಾಗಿ ವಿವರಿಸುತ್ತಿದ್ದ ಅವರ ಅವಸರವನ್ನು ಗಮನಿಸುತ್ತ ಜತೆಗೆ ತಂದ ಕ್ಯಾಸೆಟ ಕೆಲವನ್ನು ಟೇಪ್ ರೆಕಾರ್ಡರ್ ಗೆ ಹಾಕಿ ಒಂದು ಸಲ ಕೇಳಿದೆ. ಇದು ಕೂಡ ಸಾಮಾನ್ಯ ನನ್ನ ಸುಬ್ಬಣ್ಣನ ಬಾಂಧವ್ಯವೇ ಹಾಗೆ. ಎಲ್ಲೇಲ್ಲಿಂದಲೋ ಜೀರ್ಣಾವಸ್ಥೆಯಲ್ಲಿರುವ ತುಂಬ ಹಳೆಯ ಕ್ಯಾಸೆಟ್ ತರುವುದು ಅದನ್ನು ರೂಪಾಂತರಿಸಿ ಕಂಪ್ಯೂಟರ್ ಗೆ ಏರಿಸಿ ನಮ್ಮ ಯಕ್ಷಗಾನ ಸಂಗ್ರಹವನ್ನು ಮತ್ತೂ ಹಿಗ್ಗಿಸುವುದು, ಮತ್ತು ಅದನ್ನು ಕೇಳುವುದು. ಯಕ್ಷಾಗಾನ ಸಂಗ್ರಹವೆಂಬ ಹವ್ಯಾಸತೊಡಗಿದಂದಿನಿಂದ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗುತ್ತ ಹೋಗಿ ಇಂದು ಆ ಯಕ್ಷಗಾನದ ವಿಚಾರ ಸೀಮೆಯನ್ನು ದಾಟಿ ಇನ್ನೂ ಗಾಢವಾಗಿದೆ.

ಅಗರಿ ಶ್ರೀನಿವಾಸ ಭಾಗವತರ ಕೆಲವು ಪದಗಳು


ಈ ಬಾರಿ ತಂದ ಹಲವು ಧ್ವನಿ ಸುರುಳಿಯಲ್ಲಿ ಯಾವುದೋ ಊರಲ್ಲಿ ಆದ ತಾಳಮದ್ದಲೆಯ ಧ್ವನಿ ಮುದ್ರಣದ ಕೆಲವು ಧ್ವನಿ ಸುರುಳಿಗಳಿದ್ದುವು. ಹಿರಿಯ ಭಾಗವತ ಶ್ರೀ ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯ ಧ್ವನಿಸುರುಳಿಯದು. ನಮ್ಮ ಸಂಗ್ರಹದಲ್ಲಿರುವ ಯಕ್ಷಗಾನ ಕಡತಗಳಲ್ಲಿ ಅಗರಿಯವು ತುಂಬಾ ಕಡಿಮೆ. ಅಂದು ಸಮಯದ ಅಭಾವ ಸುಬ್ಬಣ್ಣ ವಾಡಿಕೆಯಂತೆ ತುಸು ಹೊತ್ತು ಹರಟೆ ಹೊಡೆದು ಹೊರಟು ನಿಂತರು. ಅವರನ್ನು ಮೆಜೆಸ್ಟಿಕ್ ಬಸ್ ಹತ್ತಿಸಿ ಬಂದ ನನಗೆ ಮತ್ತೆ ಅನಿವಾರ್ಯ ಹಲವು ಕೆಲಸದ ಮಧ್ಯೆ ಸುಬ್ಬಣ್ಣ ಕೊಟ್ಟ ಧ್ವನಿಸುರುಳಿ ನೋಡುವುದಕ್ಕೆ ಆಗಲಿಲ್ಲ.



ಮರುದಿನ ಆದಿತ್ಯವಾರ. ಸಹಜವಾಗಿ ರಜೆಯ ಒಂದು ಜಡತನ ಇತ್ತು. ನಿಧಾನವಾಗಿ ಸುಬ್ಬಣ್ಣ ಕೊಟ್ಟ ಸುರುಳಿಯನ್ನು ತೆಗೆದು ನೋಡಿದೆ. ಯಾವುದೋ ತುಂಬ ಹಳೆಯದಾದ ಧ್ವನಿಸುರುಳಿ. ತೆಗಿದಿಟ್ಟ ಟೇಪ್ ರೆಕಾರ್ಡರ್ ಕಂಪ್ಯೂಟರ್ಗೆ ಜೋಡಿಸಿ ಕ್ಯಾಸೆಟ್ ಹಾಕಿ ತಿರುಗಿಸುವ ಯತ್ನ ಮಾಡಿದೆ. ಮೊದಲು ಒಂದೆರಡು ಪದ ಕೇಳುವ ತವಕ. ಸ್ಯಾಂಪಲ್ ಹೇಗಿದೆ ನೋಡೋಣ. ಅಗರಿಯ ಕಂಠದ ಇಂಪಾದ ಪದ ಸ್ವಲ್ಪ ಕೇಳಿದ್ದೆ ಕ್ಯಾಸೆಟ್ ನಿಂತು ಬಿಟ್ಟಿತು.



ಇನ್ನು ಇದರ ಶಸ್ತ್ರ ಕ್ರಿಯೆ ಅನಿವಾರ್ಯವೆಂದು, ಕೆಲವು ಸ್ಕ್ರೂ- ಡ್ರೈವರ್ ತೆಗೆದು ಕ್ಯಾಸೆಟ್ ಹೊರ ಕವಚವನ್ನು ತೆಗೆದು ಒಳಗೆ ದಪ್ಪನೆ ಅಂಟಿದ್ದ ಧೂಳನ್ನು ತೆಗೆದು ಅದರ ಒಳಕವಚದ ಪರೆಯನ್ನು ತೆಗೆದು ಸುತ್ತಿಕೊಂಡ ಕರ್ರಗಿನ ಟೇಪ್ ಸ್ವಚ್ಚ ಗೊಳಿಸುವಲ್ಲಿ ತೊಡಗಿದೆ. ತುಂಬ ಹಳೆಯ ಧ್ವನಿಸುರುಳಿ. ನಿಶ್ಚಲವಾಗಿ ಹಲವು ವರ್ಷಗಳೆ ಸಂದಿದ್ದುವು. ಎಲ್ಲ ಸ್ವಚ್ಚ ಗೊಳಿಸಲು ಅರ್ಧತಾಸು ಬೇಕಾಯಿತು. ನಂತರ ಟೇಪ್ ರೆಕಾರ್ಡರ್ ಸ್ವಚ್ಚಗೊಳಿಸಿ ಕ್ಯಾಸೆಟ್ ಹಾಕುವಲ್ಲಿವರೆಗೆ ಒಂದು ಬಗೆಯ ತವಕ. ನಿರಾತಂಕವಾಗಿ ಧ್ವನಿಸುರುಳಿ ಅಗರಿಯ ಧ್ವನಿಯೊಂದಿಗೆ ಸುರುಳಿ ಬಿಚ್ಚಿಕೊಂಡಾಗ ಜತೆಗೆ ಹಳೆಯ ಯಕ್ಷಗಾನ ಬಯಲಾಟದ ನೆನಪಿನ ಸುರುಳಿಯು ಬಿಚ್ಚತೊಡಗುತ್ತದೆ.

ಸುಮಾರು ಒಂದುವರೆ ಘಂಟೆ ಅವಧಿಯ ತಾಳ ಮದ್ದಲೆ ಉತ್ತಮ ಧ್ವನಿ ಮುದ್ರಣ ಅಲ್ಲದಿದ್ದರೂ ಅಗರಿಯ ಕಂಠದ ಆಕರ್ಷಟೆ ಜತೆಗೆ ದಿವಾಣ ರ ಮದ್ದಲೆ ಸವಿಯುವವರಿಗೆ ಇದು ಧಾರಳ ಸಾಕು. ಇಲ್ಲಿ ಪ್ರಸಂಗ ಯಾವುದೋ, ಅರ್ಥಧಾರಿಗಳು ಯಾರೋ.. ಎಲ್ಲವೂ ಗೌಣವಾಗಿಬಿಡುತ್ತದೆ. ಈ ಹಿಮ್ಮೇಳದ ಚುಂಬಕ ಶಕ್ತಿಯೇ ಅದು. ಮಗುವಿನ ಧ್ವನಿಯಂತೆ ತೋರುವ ಕೆಲವು ಪದಗಳು, ಆ ಧ್ವನಿಯೋಂದಿಗೆ ಬೆಂಬತ್ತುವ ಮತ್ತು ನಮ್ಮ ಎದೆಯ ಬಡಿತವನ್ನೇ ನಿಯಂತ್ರಿಸುವಂತೆ ಇರುವ ಮದ್ದಳೆಯ ಗಂಡುಭೀರಿ ಸ್ವರ .



ಕ್ಯಾಸಟ್ ಸಂಪೂರ್ಣವಾಗಿ ಕಂಪ್ಯೂಟರಿಗೆ ವರ್ಗಾಯಿಸಿದೆ. ಇದು ಸುಮಾರು ಎರಡು ಘಂಟೆ ಅವಧಿಯ ಕೆಲಸ. ತುಂಬ ತಾಳ್ಮೆಯಿಂದ ಕಾಯಬೇಕು. ಟೇಪ್ ರೆಕಾರ್ಡರ್ ಎಂಬ ಅಸ್ಥಿಪಂಜರ ಮಾತ್ರವಿರುವ ಪೆಟ್ಟಿಗೆ ಕೇವಲ ಕ್ಯಾಸಟ್ ತಿರುಗಿಸುವುದಕ್ಕೆ ಮಾತ್ರ ಅಣಿಗೊಳಿಸಿದ್ದೆ. ಅದರಲ್ಲಿರುವ ಮಿಕ್ಕೆಲ್ಲ ಭಾಗಗಳು ಯಾವುದು ಉಳಿದಿಲ್ಲ. ನನ್ನ ಸೌಕರ್ಯಕ್ಕೆ ತಕ್ಕಂತೆ ಬದಲಾಯಿಸಿದ್ದೆ. ಆದರು ಅದನ್ನೇ ನೋಡುತ್ತಾ ಕೂರಬೇಕು. ಅದು ಎಲ್ಲಿ ಸುದ್ದಿ ಇಲ್ಲದೆ ನಿಂತು ಬಿಡುವುದೊ.. ಸುರುಳಿಗಳು ಸಿಕ್ಕಿಕೊಂಡು ನಿಂತು ಬಿಟ್ಟರೆ ಮತ್ತೆ ಎಲ್ಲವೂ ವ್ಯರ್ಥ. ಅತ್ಯಂತ ತಾಳ್ಮೆಯ ಕೆಲಸವದು. ಪೂರ್ಣವಾಗಿ ತಿರುಗಿ ಧ್ವನಿಯೆಲ್ಲವೂ ಕಂಪ್ಯೂಟರ್ ನಲ್ಲಿ ದಾಖಲಾಗಿ ಅಲ್ಲಿಂದಲೇ ಆಲಿಸಿದ ಮೇಲೆ ಅದನ್ನು ಒಪ್ಪ ಒರಣ ಮಾಡುವ ಆತುರ. ನಂತರ ಎಲ್ಲವು ಪೂರ್ಣಗೊಂಡ ಕೂಡಲೇ ಅದನ್ನು ಅಲ್ಲಲ್ಲಿ ಮೊಳಗಿಸಿ ಕೇಳುತ್ತಾ ಚಪ್ಪರಿಸುವಾಗ ಅದೊಂದು ಅವರ್ಣನಿಯ ಅನುಭವ. ಇಂತಹ ಹಿರಿಯ ಕಲಾವಿದರು ಎಂದೋ ಹಾಡಿದ ಹಳೆಯಧ್ವನಿಯನ್ನು ಹೊಸದಾಗಿ ಕೇಳುವಾಗ ಎಲ್ಲವನ್ನು ಮರೆತ ಅನುಭವ. ಹೀಗೆ ಯಾವುದೋ ಧ್ವನಿಸುರುಳಿಯನ್ನು ಮೂಲ ರೂಪದಿಂದ ಬದಲಾಯಿಸುವುದು ಕೇವಲ ಯಕ್ಷಗಾನದ ಹಳೆಯ ಪ್ರತಿಗಳನ್ನು ದಾಖಲಿಸುವುದು ಮತ್ತು ಅದನ್ನು ಸುರಕ್ಷಿತವಾಗಿಸುವುದು ಮಾತ್ರ ಉದ್ದೇಶ. ಸಾಧ್ಯವಾದಷ್ಟು ಇದನ್ನು ವ್ಯಾಪಾರಿಕರಣಗೊಳ್ಳದ ಹಾಗೆ ವಿಶ್ವಾಸಿ ಮಿತ್ರರ ಮಧ್ಯೆ ಕೆಲವೇ ಮಂದಿಗಳಲ್ಲಿ ಇದನ್ನು ಹಂಚಿಕೊಳ್ಳುವುದು. ಇದನ್ನು ಕೇವಲ ಹವ್ಯಾಸವಾಗಿ ಮಾತ್ರ ಉಳಿಸಿಕೊಳ್ಳುವ ಉದ್ದೇಶ.



ಅಗರಿಯವರ ಕೆಲವು ತಾಳ ಮದ್ದಲೆಯ ಪದಗಳನ್ನು ಕೇಳಿದಾಗ ಅದರಲ್ಲಿ ಮದ್ದಲೆಗಾರರಾದ ದಿವಾಣ ,ಕುರುಪ್, ಶಿರಂಕಲ್ಲು ಮುಂತಾದವರು ವಿಜ್ರಂಭಿಸಿದ ರೀತಿ ನೋಡಿದರೆ ಮೊದಲಿನ ಹಿಮ್ಮೇಳದವರ ಸೃಜನ ಶೀಲತೆ ನೈಪುಣ್ಯತೆ ಗುರುತಿಸಲು ದೊಡ್ಡ ಪ್ರತಿಭೆ ಎನೂ ಬೇಡ. ಸಾಮಾನ್ಯನೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ನಡೆಗಳು. ಇಂದಿನ ವ್ಯರ್ಥ ಅಲಾಪನೆಯ ಕಸರತ್ತು ಇಲ್ಲ.ಚಾಲು ಕುಣಿತದ ಹುಚ್ಚು ಎಳೆದಾಟವಿಲ್ಲ ಆದರು ಹಿಮ್ಮೇಳ ವೈಭವೀಕೃತ ಗೊಳ್ಳುವ ಬಗೆ ಅಚ್ಚರಿ ಮೂಡುತ್ತದೆ. “ ರಂಗನಾಯಕ ರಾಜೀವ ಲೋಚನ, ಪೋಗಿಬರುವೆನು ಗೋಪ ನಾಗ ವೇಣಿಯರೆ .. ಮುಂತಾದ ಉದಯರಾಗದ ಪದಗಳು ಹಲವು ಅಗರಿಯವರ ಕಂಠದಲ್ಲೇ ಕೇಳುವ ಸುಖ ಬೇರೆ ಅನುಕರಣೆಯ ಧ್ವನಿಯಲ್ಲಿ ಸಿಗಲಾರದು. ಅಗರಿ ಶೈಲಿ ಅನುಕರಣೀಯವಾಗಿ ಸುಲಭ ಎಂದು ಕಂಡರೂ , ಹಲವರು ಇದು ಅಗರಿ ಶೈಲಿ ಎಂದು ಗುರುತಿಸಿಕೊಂಡರೂ ಅಗರಿ ಎಂತಿದ್ದರೂ ಅಗರಿಯೆ.



ಅಗರಿ ಶ್ರೀನಿವಾಸ ಭಾಗವತರ ಪದಗಳನ್ನು ಇಂದಿನ ತಲೆಮಾರಿನವರು ಹೆಚ್ಚು ಕೇಳಿರಲಾರರು. ಕೇಳಿದ ಹಳಬರು ಇಂದಿಗೂ ಮೆಲುಕು ಹಾಕುವ ಅಗರಿಯ ಸ್ವರ ಶೈಲಿಯ ಕಲ್ಪನೆ ಮಾತ್ರ ಈಗ ಸಂಗ್ರಹವಾಗುವ ಪದಗಳಿಂದ ಸಾಧ್ಯ. ಚುರುಕು ನಡೆಯ ಮೊಟಕು ಆಲಾಪನೆಯ ಶೈಲಿ, ಬೆರಳೆಣಿಕೆಯ ಕ್ಷಣಗಳಲ್ಲಿ ಮದ್ದಲೆವಾದಕರಿಗೆ ವಿಪುಲ ಅವಕಾಶ ಒದಗಿಸುವ ಲಯ, ಕೇಳುಗನ ಎದೆಯಲ್ಲಿ ಅಲಾಪನೆಯ ಅಲೆಯ ಕಂಪನವನ್ನುಂಟುಮಾಡುವ ಅಲಾಪನೆ ಎಲ್ಲವೂ ಅಗರಿ ಪದಗಳ ವಿಶೇಶತೆ. ಪ್ರತಿಸಲ ಕೇಳಿದಾಗಲೂ ವಿಭಿನ್ನ ಅನುಭವನ್ನು ನೀಡಬಲ್ಲ ಪದಗಳು ಮತ್ತೂ ಮತ್ತೂ ಮೆಲುಕು ಹಾಕುವಂತೆ ಮಾಡುತ್ತಿವೆ. ಕೇವಲ ಪೂರ್ವಾಗ್ರಹದಿಂದ, ಅಂಧಾಭಿಮಾನದಿಂದ ಇಂತಹ ಪದಗಳನ್ನು ಕೇಳದೆ ಉಳಿಯುವವರು ಖಂಡಿತ ನಾದ ಮಧುರ್ಯ ಸವಿಯುವಲ್ಲಿ ವಂಚಿತರಾದರೆಂದೇ ಹೇಳಬೇಕು.