ಈ ಕಥೆಯಕೊನೆಯ ಭಾಗವಿದು. ಇದರಿಂದ ಮೊದಲ ಭಾಗಗಳ ಲಭ್ಯವಾಗುವ ತಾಣಗಳ ಕೊಂಡಿಯನ್ನು ಕೊಡಲಾಗಿದೆ.
ಭಾಗ ೧ ಭಾಗ ೨ ಭಾಗ ೩ ಭಾಗ ೪ ಭಾಗ ೫
ಇನ್ನು ಮುಂದೆ ಓದಿರಿ......
ಭಾಗ ೬
ವೇಗವೊಂದೇ ಮಂತ್ರವೆಂದು ಪಠಿಸುವಂತಿದ್ದ ಬಸ್ ಡ್ರೈವರ್ ಬಸ್ಸನ್ನು ಬುಸುಗುಟಿಸುತ್ತಾ ಹೆದ್ದಾರಿ ಬದಿಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದಾಗ, ಆ ಎಕ್ಸ್ ಪ್ರೆಸ್ಸ್ ಬಸ್ ಪುನಃ ಹೊರಡುವಲ್ಲಿ ಉದ್ಯುಕ್ತವಾದಂತೆ ಭಟ್ಟರು ಅವಸರವಸರವಾಗಿ ಎದ್ದರು, ಅದು ಬಸ್ ನಿರ್ವಾಹಕನಿಗೆ ನಿಧಾನದಂತೆ ತೋರಿತು. ನಗರದಿಂದ ಬಿಡುವಾಗ ಹೊರಡಲು ಮನಸ್ಸಿಲ್ಲದಂತೆ ನಿಧಾನವಾಗಿ ಹೊರಡುವ ಈ ಬಸ್ಸು, ಅದರ ಹಿಂದಿನ ಬಸ್ ನವರೊಂದಿಗೆ ಜಗಳವಾಡಿಯೊ ಬೈದಾಡಿಯೋ ನಗರ ಬಿಡುವವರು ಮತ್ತೆ ಬೇಕಾದ ಊರಲ್ಲಿ ಪ್ರಯಾಣಿಕರನ್ನು ಇಳಿಸುವಾಗ ಮಾತ್ರ ಇನ್ನಿಲ್ಲದ ಅವಸರ ತೋರಿಸುವುದು ವಿಚಿತ್ರ ಅನ್ನಿಸಿಬಿಡುತ್ತದೆ. ನಿರ್ವಾಹಕನ ಅಸಮಧಾನ ನೋಟ ಗಮನಿಸಿದಂತೆ ಬಸ್ ನಿಂದ ಇಳಿದು ಸುತ್ತಲೂ ನೋಡಿದರು. ಹಲವು ಸಲ ಬರುವ ಪರಿಚಿತ ಸ್ಥಳ. ಸಾಧಾರಣ ನಗರದಂತಿದ್ದ ಬಸ್ ಸ್ಟಾಪ್ ಅದು. ಹೆಗಲಲ್ಲಿದ್ದ ಬ್ಯಾಗ್ ಅನ್ನು ಸರಿಪಡಿಸಿ ಅಲ್ಲಿಂದ ಕವಲು ಹೊಡೆದ ರಸ್ತೆಯ ಕಡೆಗೆ ನೋಡಿದರು. ದೂರದಲ್ಲಿದ್ದ ಇನ್ನೊಂದು ಬಸ್ ಸ್ಟಾಪ್ ನತ್ತ ನೋಡಿ ನಡೆದರು. ಇಂದಿನ ಆಟದ ಸ್ಥಳಕ್ಕೆ ಹೋಗಬೇಕಾದರೆ ಆ ಮೂಲಕ ಹೊರಡುವ ಬಸ್ ಹಿಡಿಯಬೇಕು.
ಬಸ್ ಸ್ಟಾಪ್ ನಲ್ಲಿ ಬಸ್ ಬರುವದಿಕ್ಕನ್ನೇ ನೋಡುತ್ತಿರಬೇಕಾದರೆ ತಮ್ಮ ಭುಜವನ್ನು ಹಿಂದಿನಿಂದ ತಟ್ಟಿದಂತಾಗಿ ತಲೆ ತಿರುಗಿಸಿ ನೋಡಿದರು. ಅದು ಅಲ್ಲೆ ಬಳಿಯಲ್ಲೆ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ತಿಮ್ಮಣ್ಣ ಭಟ್ಟರು. ಪರಿಚಿತ ನಗುವಿನಿಂದ...”ನಮಸ್ಕಾರ..ಸ್ವಾಮಿ. ಇವತ್ತು ನಮ್ಮೊರಲ್ಲೆ ಅಲ್ವ ಆಟ..?”
“ಹೌದು .” ಗೆಲುವಿನ ನಗು ಬೀರಿದರು.
“ಬಸ್ ಗೆ ಇನ್ನೊ ಸ್ವಲ್ಪ ಸಮಯ ಇದೆ. ಬನ್ನಿ ಇಲ್ಲಿ” ಎನ್ನುವ ಆಹ್ವಾನಕ್ಕೆ ಮಣಿದು ಅವರ ಜತೆ ಅಂಗಡಿ ಕಡೆ ನಡೆದರು. ಈ ಕಡೆ ಬಂದರೆ ಇದೇನೂ ಹೊಸತಲ್ಲ ತಿಮ್ಮಣ್ಣ ಭಟ್ಟರ ಅಂಗಡಿ ಕಾಲಯಾಪನೆಗೆ ಖಾಯಂ ಜಾಗ. ಸರ್ವೇಸಾಮಾನ್ಯ ಎಲ್ಲ ಹೆಚ್ಚಿನ ಎಲ್ಲಾ ಕಲಾವಿದರ ಪರಿಚಯ ಇರುವ ತಿಮ್ಮಣ್ಣ ಭಟ್ಟರಿಗೆ ಆಟದ ಕಲಾವಿದರೆಂದರೆ ಗೌರವ ಮಿಶ್ರಿತ ಸಲುಗೆ. ಹಾಗಾಗಿ ಇವರು ಕರೆದಾಗ ಬಂದರೆ ಒಳಗಿದ್ದ ಕುರ್ಚಿಯನ್ನು ಅಂಗಡಿಯ ಹೊರ ಜಗಲಿಯಲ್ಲಿಟ್ಟು ಕೂರಿಸಿ ಹತ್ತಿರದ ಬೊಂಡದವನಿಂದ ಒಂದು ಬೊಂಡ ತರಿಸಿ ಕುಡಿಸಿ ಸತ್ಕರಿಸುವುದು ಒಂದು ವಾಡಿಕೆ. ಮತ್ತೆ ಅದೂ ಇದು ಕ್ಷೇಮ ಸಮಾಚಾರ ಮಾತುಕತೆ.
ಹೊರಜಗುಲಿಯಲ್ಲಿಟ್ಟ ಕುರ್ಚಿಯಲ್ಲಿ ಕುಳಿತಾಗ ಒಂದು ರೀತಿ ಆರಾಮ ಎನಿಸಿತು. ಅಲ್ಪ ಮಟ್ಟಿನ ಬೇಗುದಿ ದೂರವಾದ ಅನುಭವ. ಪುತ್ತೂರಿನ ಆಟದ ದೊಡ್ಡದೊಂದು ಭಿತ್ತಿ ಪತ್ರ ಅಂಗಡಿ ಹೊರಗೆ ನೇತಾಡುತ್ತಿತ್ತು. ತುಸು ಹೊತ್ತಿನಲ್ಲೇ ಮಾಮೂಲಿನಂತೆ ಬೊಂಡ ಬಂತು. ಅದನ್ನು ಕುಡಿದಾಗ ಹಾಯೆನಿಸಿತು. ಅಂಗಡಿಯ ಅಲ್ಪ ಸ್ವಲ್ಪ ವ್ಯಾಪಾರದ ಮಧ್ಯೆ ತಿಮ್ಮಣ್ಣ ಭಟ್ಟರು ಮಾತಿಗೆ ತೊಡಗಿದರು. ಅಲ್ಲಿಗೆ ಬರುವ ಗಿರಾಕಿಗಳು ಕೆಲವೊಮ್ಮೆ ಸೇರುವುದು ಇರುತ್ತಿತ್ತು.
“ನಮ್ಮ ಮನೆ ಆ ಕಡೆ ಇರುವ ಪದ್ಮನಾಭ ಆಗಲೆ ಜೀಪು ತೆಕ್ಕೊಂಡು ಕೆಳಗಿನ ಪೇಟೆಗೆ ಹೋಗಿದ್ದಾನೆ. ಅವನ ಜೀಪಿನಲ್ಲಿ ಆರಾಮದಲ್ಲಿ ಹೋಗಬಹುದು. ಸಾಯಂಕಾಲದ ಈ ಬಸ್ಸುಗಳು ತುಂಬ ರಶ್ ಅಲ್ವಾ? “
ಇದು ಯಾವಾಗಲಿನ ಪರಿಪಾಠ. ಭಟ್ಟರ ಈ ಅಂಗಡಿ ಒಂದು ಸಂವಹನ ತಾಣ. ಆ ಕಡೆಯಿಂದ ಬರುವವರಿಗೆ ಒಂದು ಸಲ ಇಲ್ಲಿ ಮುಖ ತೊರಿಸಿ ಹೋಗುವ ವಾಡಿಕೆ. ತಿಮ್ಮಣ್ಣ ಭಟ್ಟರಿಗೂ ಇದೊಂದು ಜನಸೇವೆಯಂತೆ. ಆ ಕಡೆ ಈ ಕಡೆ ಓಡಾಡುವವರಿಗೆ ಇದು ತಮ್ಮ ಸಾಮಾನು ಸಲಕರಣೆ ಇಡಲು ಕೆಲವೊಮ್ಮೆ ಪ್ರಶಸ್ತ ಜಾಗ. ಮಾಮೂಲಿನಂತೆ ಬಂದ ಬೊಂಡ ಕುಡಿದ ಮೇಲೆ ಮಧ್ಯಾಹ್ನದ ನಂತರ ಇದ್ದ ಉದರ ಹಾಗು ಮಾನಸಿಕ ತಳಮಳ ಕೊಂಚ ಕಡಿಮೆಯಾಯಿತು.
ಯಾರೋ ಅಂಗಡಿಗೆ ಬಂದ ಗಿರಾಕಿಯೊಬ್ಬ ತಿಮ್ಮಣ್ಣನವರಲ್ಲಿ ಮೆಲು ದನಿಯಲ್ಲಿ ತುಳುವಿನಲ್ಲಿ ಭಟ್ಟರೆಡೆಗೆ ಸನ್ನೆಮಾಡಿ ಕೇಳಿದ “ಇಂಬೆರ್ ಆಟೊಡುಪ್ಪುನಾರ್ ಅತ್ತಾ?” ಎಷ್ಟೇ ಮೆಲುದನಿಯಲ್ಲಿ ಕೇಳಿದರೂ ಭಟ್ಟರ ಕಣ್ಣು ಅವನ ಮಾತಿನ ಹಾವಭಾವ ನೋಡಿಯೇ ಕೇಳಿದ ಪ್ರಶ್ನೆಯನ್ನು ಊಹಿಸಿತು. ಗುಂಪಿನಲ್ಲಿ ಬೇರೆಯಾಗಿ ಗುರುತಿಸಲ್ಪಡುವ ಅನುಭವ ಇಂದೇನಲ್ಲ. ಅದು ಹಲವು ಸಲದ ಅನುಭವ. ಜನ ಪ್ರವಾಹದಲ್ಲಿ ಬೇರೆಯಾಗಿ ನಿಲ್ಲುವ ಗುಣ ಬಹುಶಃ ಯಕ್ಷಗಾನ ಕಲಾವಿದ ರೂಡಿಸಿಕೊಂಡು ಬರಬೇಕೊ ಏನೋ?
ತಿಮ್ಮಣ್ಣ ಭಟ್ಟರಿಗೆ ಅಲ್ಲಿ ಪರಿಚಯಕ್ಕೆ ಕೊರತೆಇಲ್ಲ ಸ್ವಲ್ಪ ಹೊತ್ತಿನಲ್ಲೆ ಯಾರೊ ಒಬ್ಬ ಪರಿಚಿತರ ಬಂದ ಕಾರಿನಲ್ಲಿ ಭಟ್ಟರನ್ನು ಹತ್ತಿ “ಸರಿ ಕಾಣುವಾ” ನಗೆ ಬೀರಿ ಕಳಿಸಿದಾಗ ಬದಲಾದ ಪ್ರಸಂಗದಂತೆ ಕಾರಿನಲ್ಲಿ ಬೇರೆಯೆ ಮಾತುಕತೆ ಆರಂಭಗೊಂಡಿತು. ಎಲ್ಲ ಕಡೆಯಲ್ಲೂ ಒಂದು ಸಾಮಾನ್ಯ ವಿಷಯ ಪ್ರಸ್ತಾಪಕ್ಕೆ ಬರುವುದುಂಟು. ಇಂದಿನ ಯಕ್ಷಗಾನ ಮತ್ತು ಅದು ಬದಲಾದ ರೀತಿ. ಇದು ಕೇಳಿ ಕೇಳಿ ಕೆಲವೊಮ್ಮೆ ವೈರಾಗ್ಯ ಬರಿಸುವಷ್ಟರ ಮಟ್ಟಿಗೆ ಮುಟ್ಟುವುದು.ಮೊದಲಿನಂತೆ ಇದನ್ನು ಗಂಬೀರವಾಗಿ ಪರಿಗಣಿಸುವ ಹಾಗಿರಲಿಲ್ಲ. ಇಂತಹ ಸಂವಾದದಿಂದ ಯಾವ ಲಾಭವೂ ಇಲ್ಲ ಎಂದು ಭಾವಿಸಿದ್ದರು. ಪಾಯಸಕ್ಕೆ ಒಗ್ಗರಣೆ ರುಚಿ ನೋಡುವ ಮನೋಭಾವ ಇರುವಾಗ ಇಂದಿನ ಅಭಿರುಚಿಯನ್ನು ಬದಲಿಸಲು ಸಾಧ್ಯವೇ?
ಊರಿಂದ ಸ್ವಲ್ಪ ದೂರದಲ್ಲೆ ಬಯಲಲ್ಲಿ ಅಂದಿನ ಆಟ. ದೂರದಲ್ಲೆ ಯಕ್ಷಗಾನ ಡೇರೆ ಕಾಣುತ್ತಿತ್ತು. ನಸುಗತ್ತಲೆ ಗಾಢವಾಗುತ್ತ ಹೋಗುತ್ತಿತ್ತು. ಸುತ್ತ ಮುತ್ತ ಅಂಗಡಿ ಸಂತೆ ಅದೇ ಬೀಡಾ ಬೀಡಿ ಗುಟ್ಕಾದ ಮಾಲೆ ಎಲ್ಲವೂ ಮಾಮುಲು. ಕೇವಲ ಆಟದಲ್ಲಿ ಮಾತ್ರ ಬದಲಾವಣೆಯಲ್ಲ ಅಟದ ಬಯಲಲ್ಲಿ ಸೇರುವ ಈ ಸಂತೆಯೂ ಮೊದಲಿನಂತೆ ಕಲಾತ್ಮಕವಾಗಿದೆಯೆ? ಅಂದಿನ ಮಂದ ಬೆಳಕಿನಲ್ಲಿ ಮರದ ಬೆಂಚಿನಲ್ಲಿ ಕುಳಿತಾಗ ಗಾಜಿನ ಲೋಟದಲ್ಲಿ ತಂದಿಡುವ ಬಿಸಿ ಬಿಸಿ ತಾಜಾ ಚಹದ ರುಚಿ.. ಇಂದು ಯವಾಗಲೋ ಮಾಡಿದ ಚಹವನ್ನು ಫ್ಲಾಸ್ಕ್ ನಲ್ಲಿ ತುಂಬಿಸಿ , ಆ ಹಳಸಿದ ಚಹವನ್ನು ಸಣ್ಣ ಪ್ಲಾಸ್ಟಿಕ್ ಲೋಟದಲ್ಲಿ ಹೊಯಿದು ಕೊಡುವ ರುಚಿಯಲ್ಲಿ ಇದೆಯೆ? ಇಂದೆಲ್ಲವು ತಾಂತ್ರಿಕ.
ಜೋಬಿನಲ್ಲಿದ್ದ ಮೊಬೈಲು ಕಂಪಿಸಿದಾಗ ಯೋಚನಾ ಲಹರಿಯಿಂದ ಹೊರಬಂದ ಬಟ್ಟರು ಅದಾಗಲೇ ಚೌಕಿಯನ್ನು ಪ್ರವೇಶಿಸಿಯಾಗಿತ್ತು. ಮೈಕದಲ್ಲಿ ಯಾವುದೋ ಭಕ್ತಿ ಗೀತೆ ಕರ್ಕಶವಾದಂತೆನಿಸಿ, ಮೊಬೈಲ್ ನ್ನು ಕೈಯ್ಯಲ್ಲಿ ಹಿಡಿದು ನೋಡುತ್ತ ಚೌಕಿಯಿಂದ ಅನತಿ ದೂರಕ್ಕೆ ಭಟ್ಟರು ಬಂದು ಬಿಟ್ಟರು.
ಮುದ್ದಾಗಿ ಬರೆದ ಮಗನ ಹೆಸರು ಮೊಬೈಲ್ ಪರದೆಯಲ್ಲಿ ಬಂದಿತ್ತು. ಗಂಭೀರವಾಗಿ ಕರೆಯನ್ನು ಸ್ವೀಕರಿಸಿ “ಹೂಂ..” ಎಂದು ಗಂಭೀರವಾಗಿ ಹೂಂಗುಟ್ಟಿದರು. ಹರುಕು ಪಂಚೆ ತೆಗೆದು ಅದನ್ನು ಹೊಲಿಯಲು ಸೂಜಿ ನೂಲು ಹಿಡಿದು ಎಲ್ಲಿ ಹರುಕು ಇದೆ ಎಂದು ಹುಡುಕಿದಂತಾಯಿತು.ಮುಳ್ಳಿನ ಪೊದೆಯಲ್ಲಿ ಬಿದ್ದ ಬಟ್ಟೆ ತೆಗೆದು ಅಂಟಿಕೊಂಡ ಮುಳ್ಳನ್ನು ಒಂದೊಂದಾಗಿ ತೆಗೆವ ಪ್ರಯತ್ನ. ಎಷ್ಟು ಪ್ರಯತ್ನಿಸಿದರೂ ಅವನಿಗೇಕೆ ಬೇಜಾರು ಮಾಡಬೇಕೆಂದು ಇವರು ಅಪ್ಪನಿಗೇಕೆ ಸುಮ್ಮನೆ ನೋವು ಎಂದು ಅವನು ಹೀಗೆ ಮನಸ್ಸಲ್ಲಿದ್ದ ಹಲವು ಭಾವನೆಗಳು ಮನದಲ್ಲೇ ಸುಪ್ತ.
“ಅಪ್ಪಾ...” ಎಂದಿನ ಗಾಂಭೀರ್ಯ ಮಗನ ಧ್ವನಿಯಲ್ಲಿ ಗುರುತಿಸಲಿಲ್ಲ. ಒಂದು ವಿಧದ ತಣ್ಣಗಿನ ಅನುಭವ ಭಾಸವಾಯಿತು. ತಾನು ಅಪ್ಪನಾದ ಮೇಲೆ ಅಪ್ಪನೆಂದರೆ ಏನು ಎಂದು ತಿಳಿದುಕೊಳ್ಳುವ ತವಕವೇ? ಸಂಕೋಚ ದುಮ್ಮಾನ ರಹಿತ ಧ್ವನಿಗೆ ತನ್ನದೆಲ್ಲವನ್ನು ಒಂದು ಕ್ಷಣ ಮರೆತರು. ಇದೇ ಅಲ್ಲವೇ ಯಾವುದೇ ಹೆತ್ತವರು ತಮ್ಮ ಮಕ್ಕಳಿಂದ ಬಯಸುವುದು.ಕರಗಿ ಹೋಗುವುದು. ಇಲ್ಲಿ ಪ್ರದರ್ಶನದ ಸಂಪತ್ತು ವರ್ಚಸ್ಸು ನಿಜವಾದ ಸಂವಹನದಲ್ಲಿ ಗೌಣವಾಗಿಬಿಡುತ್ತದೆ. “ಅಪ್ಪಾ..” ಬೇರೆನೂ ಬೇಡ ಇದನ್ನೇ ಹತ್ತೂಸಲ ಸಾಲದು ಮತ್ತೂ ಮತ್ತೂ ಕೇಳುವ ಚಪಲ ಏಕೆ?ನಿಜವಾದ ದೇಹಾರೋಗ್ಯವು ಹೃದಯದ ಇಂತಹ ಹಿತವಾದ ಬಡಿತದಿಂದ ತುಂಬಿಬರುವುದು. ಕೈಯ್ಯಲ್ಲಿ ಹಿಡಿದ ಮೊಬೈಲ್ ಕಂಪಿಸಿತು, ಕಣ್ಣಂಚಿನ ನೀರು ಇನ್ನು ಮೊಬೈಲ್ ನೊಳಗೆ ಹೋದರೆ...ಮುಖ ತಿರುಗಿಸಿ ಶಲ್ಯದಿಂದ ಕಣ್ಣಂಚು ಸವರಿದರು.ಭಾರವಾದ ಹೃದಯ ತನ್ನೆಲ್ಲ ಭಾರವನ್ನು ಕಾಲಮೇಲೆ ಹಾಕಿದಂತೆ ಭಾಸವಾಯಿತು. ನರಗಳೆ ಎದ್ದು ಕಾಣುವ ಕೈ ಕಂಪಿಸುವ ಬೆರಳು ಹಿಡಿದ ಮೋಬೈಲನ್ನು ಮತ್ತು ಹಿಡಿತ ಬಿಗಿಗೊಳಿಸಿತು. ಈ ಮಾತು ಈ ಧ್ವನಿ ನುಸುಳಿ ಹೋಗದಿರಲಿ. ಬಹುಶಃ ತಮ್ಮ ಮನಸ್ಸು ಹಲವು ನೋವನುಭವಿಸಿ ಕರಗುವ ಹಂತಕ್ಕೆ ಬಂತೆ. ಹಲವು ಸಮಯ ಕಳೆಯಿಗುತು ಮಗನ ಜತೆ ಮಾತನಾಡದೆ. ಬಿಗುಮಾನದ ಬಂಧನ ಸಡಿಲವಾಯಿತು. ಮಗನ ಮಾತು ಮುಂದುವರಿಯಿತು. ಅಲ್ಲ ಇವರ ಮೌನ ಅದನ್ನು ಮುಂದುವರೆಸಿತು.
“ ಅಪ್ಪ ನಿಮ್ಮಂತೆ ನಾನು ಅಪ್ಪನಾದೆ. ಅಪ್ಪನಾದೆ ಈಗ ಮಗನಾಗಿ ಕಂಡೆ. ನಿಮ್ಮದರಲ್ಲಿ ನನ್ನ ಕಂಡು ನಾನೇನು ಎಂಬ ಅರಿವಾಗಿದೆ.” ತಾಳ ಮದ್ದಲೆಯ ಸಂಭಾಷಣೆಯಂತೆ ಭಾಸವಾಯಿತು.
“ಅಪ್ಪಾ ಇಂದು ನಿಜವಾಗಿಯೂ ನಿಮ್ಮನ್ನು ನೋಡುವ ಬಯಕೆಯಾಗಿದೆ. ನಿಮ್ಮನ್ನು ಒಂಟಿಯಾಗಿಸುವ ಬಯಕೆ ಇಲ್ಲ. ನಿಮ್ಮನ್ನ ನೋಡ್ತೇನೆ ಎಂದು ಭಾವಿಸಿ ನಿರಾಶೆಯಾಗಿದೆ. ಇಂದು ನಿಲ್ಲದೆ ಏಕಪ್ಪ ಹೋದಿರಿ? ನಾನು ಅಷ್ಟೂ ಬೇಡವಾದೆನೆ? ನಾಳೆ ನನ್ನ ಈ ಮಗನಿಗು ನಾನು ಹೀಗಾದರೆ? ನಿಮ್ಮಂತೆ ಸಹಿಸುವ ಶಕ್ತಿ ಎನಗುಂಟೇ? ತನ್ನಿರವೇನು ಈಗ ಅರಿವಾಗಿದೆ. ನಿಮ್ಮ ಮಮತೆ ಪ್ರೀತಿಯ ಅರಿವು ಈವಾಗ ಅಗಿದೆ. ನೋಡಬೇಕು. ಅಪರಾಧವೆಲ್ಲವೂ ಪರಿಮಾರ್ಜನಗೊಳ್ಳಲಿ. ಬಲವಂತ ಬಂಧನದಿಂದ ಮನಸ್ಸಿನ ಹಿಡಿದಿಟ್ಟ ಭಾವನೆಗಳೆಲ್ಲವೂ ಬಂಧಮುಕ್ತವಾಗಬೇಕು. ದ್ವೇಷ ಅಸಮಾಧಾನ ಇದ್ದಷ್ಟು ದಿನ ಮನಸ್ಸು ಮುದ್ದೆ ಮಾಡಿದ ಕಾಗದದಂತೆ ಎಲ್ಲವನ್ನು ಹಿಡಿದಿಟ್ಟಿತ್ತು. ಪುಣ್ಯ ಆ ಮುದ್ದೆ ಕಾಗದ ನೀರಿಗೆ ಬೀಳುವ ಮೊದಲೆ ಕೈಗೆ ತೆಗೆದು ಬಿಡಿಸುವ ಆಶೆಯಾಗಿದೆ. ಎಲ್ಲಿದ್ದೀರಾ?”
ಜಗತ್ತೇ ಹೀಗೆಯೆ? ಹೊಸಚಿಗುರೆಲೆಯ ಕಂಡು ಹಣ್ಣಾದ ಎಲೆ ತನ್ನಿರವನ್ನು ಅರಿಯಿತೆ? ಬರುವ ಚಿಗುರಿಗೆ ತನ್ನಿರವ ಬಿಡುವಾಸೆಯೆ?
ಏನೆಂದು ಹೇಳುವುದು. “ ನಾಳೆ ಬೆಳಗ್ಗೆ ಬರ್ತೆನೆ. ಚಿನ್ಮಯ” ಇಷ್ಟೇ ಹೇಳಿ ಮಾತು ಮುಗಿಸುವ ಆತುರ ತೋರಿದರು. ಇನ್ನು ಹೆಚ್ಚು ಹೊತ್ತು ಮಾತಾಡಿದರೆ ಭಾವನೆಗಳು ನಿಯಂತ್ರಿಸುವುದು ಕಷ್ಟವಾಗಬಹುದು. ಇದನ್ನು ನೋಡಿ ಸಹವರ್ತಿಗಳು ಏನೇನೋ ಊಹನೆ ಕಥೆ ಕಟ್ಟುವುದು. ಎಲ್ಲ ಮರೆತವರಂತೆ ಅದಷ್ಟು ಸ್ಥಿತ ಪ್ರಜ್ಞತೆ ಜಾರಿಕೊಂಡು ಮೊಬೈಲ್ ಜೋಬೊಳಗೆ ಸೇರಿಸಿ ಚೌಕಿಯತ್ತ ನಡೆದರು.
ಚೌಕಿಯಲ್ಲಿ ಅದಾಗಲೇ ಸಂಗೀತಗಾರನ ಗಜ ಮುಖದವಗೆ .ರಾಗದೊಂದಿಗೆ ಚೌಕಿ ಪೂಜೆ ಆರಂಭವಾಗಿತ್ತು. ಆಟ ಆಡಿಸುವ ಕುಟುಂಬದವರು ಮಿತ್ರರು ಎಲ್ಲ ಚೌಕಿಯಲ್ಲಿ ನೆರೆದಿದ್ದರು. ತಮ್ಮಂತ ಹಿರಿಯ ಕಲಾವಿದ ವೇಶವಿಲ್ಲದೇ ಚೌಕಿಗೆ ಹೊಕ್ಕಿದರೂ ಕೆಲವೊಮ್ಮೆ ರಂಗಸ್ಥಳ ಪ್ರವೇಶ ಮಾಡಿದ ಅನುಭವ ಆಗುತ್ತದೆ. ಎಲ್ಲರ ಗಮನ ರಂಗಸ್ಥಳದಲ್ಲಿ ಸೆಳೆದ ಹಾಗೆ ಇಲ್ಲೂ ಅದೇ ಅನುಭವ.ಆ ಊರಿನ ಹಿರಿಯ ನಿವೃತ್ತ ಕಲಾವಿದರೊಬ್ಬರು ಚೌಕಿಯೊಳಗೆ ಇದ್ದರು ಇವರನ್ನು ಕಂಡವರೆ ಕುಶಲೋಪಹರಿ ವಿಚಾರಿಸಿದರು.
ಇಂದು ಎರಡನೇ ಪ್ರಸಂಗದ ಜಾಂಬವತಿ ಕಲ್ಯಾಣದ ಜಾಂಬವನ ವೇಶ. ಇದೇ ಪ್ರಸಂಗದಲ್ಲಿ ಇನ್ನೋಬ್ಬನೂ ಜಾಂಬವನ ವೇಶ ಹಾಕಿ ಎರಡನೆ ವೇಶವಾಗಿ ಭಟ್ಟರ ಪ್ರವೇಶ. ಕೇಸರಿಯೊಂದಿಗಿನ ಯುದ್ದ ಆನಂತರ ಶ್ಯಮಂತಕ ಮಣಿ ಕೈವಶ ಅಲ್ಲಿವರೆಗೆ ಮೊದಲ ಕಲಾವಿದ ಅಭಿನಯಿಸಿ, ಪಾಂಚಜನ್ಯ ಮೊಳಗಿದಲ್ಲಿಂದ ಭಟ್ಟರ ಪ್ರವೇಶ.
ಇನ್ನೇನು ಕೆಲವೇ ಘಳಿಗೆ, ಭಟ್ಟರು ಇಂದು ನಿರಾಳವಾಗಿದ್ದರು. ಮಗನ ಜತೆ ಸಂಭಾಷಣೆಯ ಕಾರಣ ಮನಸ್ಸು ಹೆಚ್ಚು ಪ್ರಫುಲ್ಲಿತವಾಗಿತ್ತು. ಸಾಂಪ್ರದಾಯಿಕ ಕಿರೀಟವೇಶವಾಗಿ ಜಾಂಬವಂತ ತಯಾರಾದ. ಕಿರೀಟ ಧರಿಸಿ ಒಂದಿಷ್ಟು ನೀರು ಕುಡಿದು, ಎಲೆ ಅಡಿಕೆ ವಾಡಿಕೆಯಂತೆ ಬಾಯಿಗೆ ಜಗಿಯುತ್ತ, ರಂಗಸ್ಥಳ ತುಸು ದೂರವಿದ್ದುದರಿಂದ ಗೆಜ್ಜೆ ರಿಂಗಣಿಸುತ್ತ ನಿಧಾನವಾಗಿ ಅತ್ತ ನಡೆದರು. ರಂಗ ಸ್ಥಳದ ಹಿಂದೆ ಇರಿಸಿದ ಬೆಂಚಿನಲ್ಲಿ ನಿಧಾನವಾಗಿ ಕುಳಿತರು. ರಂಗದಲ್ಲಿ ಜಾಂಬವತಿ ಪದ... ಭಾಗವತರು ರಾಗದಲ್ಲಿ ಹಾಡುತ್ತಿದ್ದರು. “ ಜೋ ಜೊ. ಜೊ ಸುಕುಮಾರ....ತಂದೆಯಾಗಿಹ ಜಾಂಬವಂತಗೆ ಸರಿಯೆ.....” ಯಾಕೊ ಚಿನ್ಮಯನ ನೆನಪು ಒತ್ತಿ ಮರುಕಳಿಸಿ ಬಿಟ್ಟಿತು. ಆ ನೆನಪಿನ್ನೂ ಮಧುರವಾಗಿದೆಯಲ್ಲ. ಪುಟ್ಟ ಮಗುವನ್ನು ಲಲ್ಲೆಗರೆಯುವ ಘಳಿಗೆ. ಅಳುತ್ತ ಆಡುತ್ತ ಎಷ್ಟೊಂದು ಬಾರಿ ನನ್ನ ಮಡಿಲಲ್ಲಿ ಮಲಗಿದ್ದ. ಎಂತಹ ಸಂತೃಪ್ತಿಯ ದಿನಗಳವು.? ತನ್ನ ಹೆಗಲ ಮೇಲೆ ತಲೆಯನ್ನಿಟ್ಟು ನಿದ್ದೆಗೆ ಜಾರಿದ ಮಗುವಿನ ತಲೆಯ ಹಿಂಬದಿಯಿಂದ ಪೃಷ್ಠದ ವರೆಗೆ ಇದೇ ಕೈಯಿಂದ ಅದೆಷ್ಟು ಬಾರಿ ಮಮತೆಯಿಂದ ಕೈಯಾಡಿಸಿಲ್ಲ.? ನಿದ್ದೆಯಲ್ಲಿದ್ದಾಗ ಅದೆಷ್ಟು ಬಾರಿ ತಲೆ ನೇವರಿಸಿ ಮುದ್ದಿಸಲಿಲ್ಲ? ಅವನ ಮೇಲೆ ವೈಷಮ್ಯವೇ? ಯಾಕಾಗಿ? ತನ್ನದು ಮೊಂಡುತನವೆ? ಇರುವ ಈ ಎರಡು ದಿನದ ಬದುಕಲ್ಲಿ ಒತ್ತಿನಲ್ಲಿರುವವರಲ್ಲಿ ವೈಷಮ್ಯ ವಿದ್ದು ಸಾಧಿಸುವುದೇನು? ಎನೋ ಸ್ವಭಾವದೋಷ ಎಲ್ಲವು ನನ್ನ ಹಾದಿಗೆ ಬರಬೇಕೆಂದರೆ.. ತೀರ ಕ್ಷುಲ್ಲಕವೆಂದು ತೋರಿತು. ಏನೇ ಅಸಮಧಾನವಿದ್ದರು ವಿಶಾಲಮನೋಭಾವದಿಂದ ಸ್ವೀಕರಿಸಿ ಪರಿಹರಿಸಿಕೊಳ್ಳಬಹುದಾಗಿತ್ತು. ವೃಥಾ ಕಾರಣದಿಂದ ಬದುಕಿನ ಕೆಲವು ದಿನಗಳನ್ನು ಮನಸ್ಸಮಾಧಾನವಿಲ್ಲದೆ ಕಳೆದೆ ಎಂದನಿಸತೊಡಗಿತು. ಎಲ್ಲವೂ ಯಾವುದೋ ಒಂದು ಪ್ರೇರಣೆ. ಇಂದು ಇದ್ದ ಮನೋಭಾವ ಬದುಕಿನಲ್ಲಿ ಸ್ಥಾಯಿಯಾಗಿ ಉಳಿಯುವುದೇ ಇಲ್ಲ. ಇಂದು ತೋರಿದ ವರ್ತನೆ ಮುಂದೊಂದು ಘಳಿಗೆ ಹಾಸ್ಯಾಸ್ಪದವಾಗ್ ಕಾಣಬಹುದು. ದೀರ್ಘ ಬದುಕಿನಲ್ಲಿ ಅನುಭವ ಪಡೆದೆ ಬದುಕು ಮುಗಿಸಿಬಿಡುತ್ತೇವೆ. ನಿಡಿದಾದ ನಿಟ್ಟುಸಿರು ಬಿಟ್ಟರು.
“ ಅರೆರೆ ಪಿತನೇ ಕೆಟ್ಟೆ” ಎಂದು ಜಾಂಬವತಿ ರೋದಿಸತೊಡಗಿದಳು. ರಂಗಸ್ಥಳ ಅಂಚಿಗೆ ಸರಿದ ಭಟ್ಟರು ಮುಂದಿನ ಸರದಿಯ ಪದಕ್ಕೆ ಕಾದು ನಿಂತರು. ..ಅಬ್ಬರದ ಚೆಂಡೆಯೊಂದಿಗೆ ಜಾಂಬವಂತನ ಪ್ರವೇಶ.. ಸಭೆ ಕರತಾಡನ ತುಂಬ ಹೊತ್ತು ಉರಿಸಿದ ಮಾಲೆ ಪಟಾಕಿಯಂತೆ ಶಭ್ಡಿಸುತ್ತ ಇತ್ತು. .. “ ಆರೋ ಎನ್ನಯ ಗುಹೆಯಾ.... ಭಾಗವತರ ಪದಕ್ಕೆ ಅವೇಶ ಬಂದ ವಾನರನ ಅಪರಾವತಾರದಂತೆ ಭಟ್ಟರು ಕುಣಿದರು. ಸಭೆ ಮತ್ತೊಮ್ಮೆ ಕರತಾಡನ ದೊಂದಿಗೆ ಹುಚ್ಚೆದ್ದಿತು.
ಕೃಷ್ಣನೊಂದಿಗಿನ ಸಮರದಲ್ಲಿ ಬಸವಳಿದು ಕುಸಿದು ಕುಳಿತ ಜಾಂಬವ. ವೇಶದೊಳಗಿನ ಭಟ್ಟರು ಬಸವಳಿದಿದ್ದರೂ ಉತ್ಸಾಹ ಸುಮನಿರಿಸಲಿಲ್ಲ. ಬಂದ ಶ್ರೀ ಕೃಷ್ಣ ಭಗವಂತ ರಾಮನಾಗಿ ಕಂಡಾಗ ಕುಳಿತ ಭಟ್ಟರು ಭಾವುಕರಾದರು. “ ರಾಮ ಕೃಷ್ಣ.. ಹರೆ ಹರೆ..ಅಪರಾಧವೆಸಗಿದೆ ಭಗವಂತ..ಎಲ್ಲವು ನಿನ್ನ ಎಣಿಕೆಯಂತೆ ನಾವೆಲ್ಲ ಬರಿ ನಿಮಿತ್ತ ಮಾತ್ರ. ರಾಮನಲ್ಲದೇ ಯಾರು ಬೇಡವೆಂದು ಈ ವಿಪಿನದೊಳು ಏಕಾಂಗಿಯಾಗಿದ್ದೆ. ಎಂದಿಗೆ ನಿನ್ನ ದರ್ಶನವೊ ಎಂದು ಕಾದಿದ್ದೆ. ಇಂದು ಈ ಪಾಮರ ಬಲ್ಲೂಕನಿಗೊಲಿದೆಯ ಪರಮಾತ್ಮ. ನಾವೆಲ್ಲ ಸಂಸ್ಕಾರ ರಹಿತರು ಸ್ವಾಮಿ. ನಶ್ವರ ಜನ್ಮವನ್ನು ಇದುವೇ ಸ್ಥಾಯಿ ಎಂದು ತಿಳಿದ ಹುಂಬರು. ಬಂದೆ ನಿಂದೆ ನಿನ್ನ ದರ್ಶನದಿಂದ ಈ ಆತ್ಮ ಪಾವನವಾಯಿತು. ಇನ್ನು ಈ ಜನ್ಮ ವ್ಯರ್ಥವಾಗದು ಸ್ವಾಮಿ. ನಿನ್ನ ಧ್ಯಾನ ಅತ್ಮೊನ್ನತಿ ಒಂದೆ. ....” ನಿರರ್ಗಳ ಅರ್ಥಗಾರಿಕೆಯ ರಸಧಾರೆ ಹರಿಯಿತು. ಭಾವುಕರಲ್ಲಿ ಭಾವುಕರಾದರು ಭಟ್ಟರು. ಮಗಳು ಜಾಂಬವತಿಯನ್ನು ಶ್ರೀ ಕೃಷ್ಣನಿಗಿತ್ತು ಧನ್ಯನಾದ ಜಾಂಬವ ಹರೆ ರಾಮ ಹರೆ ಕೃಷ್ಣನೆಂದ.
ರಂಗಸ್ಥಳದಿಂದ ನಿರ್ಗಮಿಸುತ್ತ ಚೌಕಿಯೆಡೆಗೆ ಹೊಸಹುರುಪಿನಲ್ಲಿ ಬಂದರು ಭಟ್ಟರು. ದೇಹ ಬೆವರಿ ಬೆಂಡಾಗಿ ಬಸವಳಿದಿತ್ತು. ಚೌಕಿಗೆ ಬಂದವರೆ ಒಂದೊಂದಾಗಿ ವೇಶವನ್ನು ಕಳಚುತ್ತಾ ಹೋದರು. ಸಹಾಯಕ ಆಳು ಅನಿಸುರಿಸುತ್ತಾ ಹೋದಂತೆ ಜಾಂಬವ ಕರಗಿ ಹೋದ. ಎಲ್ಲ ವೇಶವೆಲ್ಲ ಕಳಚಿದಾಗ ಮೈಗೆ ಒಸರಿದ ಬೆವರಿಗೆ ಹತ್ತಿರವಿದ್ದ ಬೀಸಣಿಗೆಯಿಂದ ಗಾಳಿ ಹಾಕತೊಡಗಿದರು. ಆಳು ನೀರ ತಂಬಿಗೆಯನ್ನು ತಂದಿತ್ತ ಗಟ ಗಟನೆ ನೀರು ಕುಡಿದ ಭಟ್ಟರು ಚೌಕಿಯ ಇನ್ನೋಂದು ತೆರೆದ ಬದಿ ನೋಡುತ್ತಾರೆ ಸ್ತಭ್ಧವಾಗಿಬಿಟ್ಟರು. ಅಲ್ಲಿ ಚಿನ್ಮಯ ನಿಂತಿದ್ದ.!!!
ಒಂದು ಕ್ಷಣ ಅಷ್ಟೇ. ಹತ್ತಿರ ಸರಿದು ಹೋದ ಭಟ್ಟರು ಮಗನ ಕೈಹಿಡಿದು ಚೌಕಿಯ ಹೊರಗೆ ಇನ್ನೊಂದು ಬದಿಗೆ ಬಂದರು. ಇನ್ನು ಚಿನ್ಮಯ ತಡೆಯದಾದ ಅಪ್ಪನ ಸಣಕಲು ಶರೀರವನ್ನು “ ಅಪ್ಪಾ .....”ಎನ್ನುತ್ತ ತಬ್ಬಿಹಿಡಿದ. ಹೊರಗಿನಿಂದ ಕಾಣುವ ಬಡಕಲು ಎದೆಗೆ ತಲೆಗೊಟ್ಟ. ಆ ಎದೆಯ ವೈಶಾಲ್ಯವನ್ನು ಅಂದಾಜಿಸುವದಕ್ಕೆ ತೊಡಗಿದ. ಎಂತಹ ವಿಪರೀತ. ಕ್ಷುಲ್ಲಕ ಹಿತಾಸಕ್ತಿಗೆ ವೈಶಮ್ಯ ತಳೆದು ನಮ್ಮೊಳಗೆ ಅಂತರ ಹೆಚ್ಚಿಸಿ ಬದುಕನ್ನು ವಿಷಮವನ್ನಾಗಿಸುತ್ತೇವೆ.
ಎದೆಗೊತ್ತಿದ್ದ ಮಗನ ಶಿರವನ್ನು ನೇವರಿಸಿ ಕರಗಳಿಂದಲೇ ಸಾಂತ್ವಾನ ಹೇಳಿದರು. “ಚಿನ್ಮಯ ನನ್ನ ಬದುಕು ಇದೇ. ಈ ಆಟವಿಲ್ಲದೆ ನನ್ನಾಟವಿಲ್ಲ. ಇಷ್ಟು ದಿನ ನನ್ನ ಮೈಯಲ್ಲಿ ರಕ್ತಸಂಚಲನೆಗೆ ನಿಮಿತ್ತವಾದ ಈ ಆಟವನ್ನು ಬಿಟ್ಟು ಹೇಗೆ ದಿನ ಕಳೆಯಲಿ.?ಇರುವಷ್ಟು ದಿನ ರಂಗಸ್ಥಳದಲ್ಲಿ ಇರುವಾಶೆಯಲ್ಲ, ತೆವಳುವ ಬಯಕೆ ಇಟ್ಟುಕೊಂಡು ಇಲ್ಲಿವರೆಗೆ ಬಂದೆ.ನನಗಾಗಿಯೇ ಬದುಕಿದೆ. ನಿಮಗಾಗಿ ದುಡಿದೆ. ಇದನ್ನು ಬಿಟ್ಟು ನನ್ನ ದಿನವನ್ನು ನಾನು ಹೇಗೆ ರೂಪಿಸಬಲ್ಲೆನೋ ಅರಿಯೆ. ನಿನ್ನೊಂದಿಗೆ ನಾನಿರಬೇಕೋ ನನ್ನೊಂದಿಗೆ ನೀನಿರಬೇಕೊ ಎಲ್ಲವೂ ಸಮಷ್ಟಿಯಲ್ಲಿ ಒಂದೆ ತೆರನಾಗಿಯೆ ಇದೆ.ನಮ್ಮೊಳಗಿನ ಬದುಕಲ್ಲಿ ಲಾಭ ನಷ್ಟ, ಸೋಲು ಗೆಲುವಿನ ಅಳತೆಯೇಕೆ ಮಗನೇ?ಏನೋ ಇದನ್ನು ಬಿಟ್ಟ ಬದುಕನ್ನು ಊಹಿಸದಾದೆ. ಇರಲಿ..ನೋಡಿದೆಯಲ್ಲ ಸುತ್ತಲೂ ಇರುಳು. ಈ ಇರುಳೇ ನಮ್ಮಂತಹ ಕಲಾವಿದನಿಗೆ ಹಗಲಾಗಿದೆ. ಸೂರ್ಯ ಅಸ್ತಮಿಸುವಾಗಲೆ ಇಲ್ಲಿ ಬೆಳಕಿನ ಉದಯ ಎಂತಹ ವಿಚಿತ್ರ ಬದುಕು. ಆದರೂ ನಿನ್ನ ಮನಸ್ಸಿನ ಹಿತಕ್ಕೆ ಒತ್ತಿ ನಡೆಯಬಲ್ಲೆ.”
“ಅಪ್ಪ.. ಬೇಡಪ್ಪ ಅಂತಹ ಮಾತುಗಳು ಯಾವುದೂ ಅಗತ್ಯ ಇದೆ ಎಂದು ನನಗನಿಸುವುದಿಲ್ಲ.ನಾನು ಅಪ್ಪನಾದಗ ಅಪ್ಪನ ತುಮುಲ ಏನೆಂದು ಅರಿವಾಯಿತು. ಈ ಕೌಟುಂಬಿಕ ಜೀವನದಲ್ಲಿ ಪರ ಹಿತಕ್ಕಾಗಿ ತನ್ನ ತನವನ್ನು ಪ್ರತಿಯೊಬ್ಬರೂ ಧಾರೆ ಎರೆದರೆ ಅಸಮಾಧಾನ ಎಲ್ಲಿದೆ ಹೇಳಿ? ಇಕ್ಕಟ್ಟು ನಿಮಗೂ ಬೇಡ ನನಗೂ ಬೇಡ. ನಿಮ್ಮ ಬದುಕನ್ನು ನಿಮ್ಮ ರೀತಿಯಲ್ಲೆ ಕ್ರಮಿಸಿ. ನನಗೆ ಅದೇ ಅಪ್ಪ ಸಾಕು. ನಿಮ್ಮ ಮನಸ್ಸಿಗೆ ನೋವುಂಟುಮಾಡಿ ಯಾವ ಹಿತವೂ ನನಗೆ ಬೇಡ. ಆಟದ ವೇಶ ನೀವು ಕಳಚಿ ನಿಂತಿದ್ದೀರಿ. ಬದುಕಿನಲ್ಲಿ ನಿಜವೇಶ ಕಳಚಿ ನಾನು ನಿಂತಿದ್ದೇನೆ”
ಭಟ್ಟರಿಗೆ ನಿಜಕ್ಕು ಭಾವವೇಶ ಈಗಲೇ ಬಂದದ್ದು. ರಾಮನೋ ರಾವಣನೋ ಎರಡೂ ಒಂದೇ ಚೌಕಿಯಿಂದ ಬರುವ ವೇಶಗಳು. ರಂಗದಲ್ಲಿ ಬೇರೆ ಬೇರೆಯಾಗಿ ಗೋಚರವಾದರು ಕೊನೆಗೆ ಚೌಕಿಯಲ್ಲಿ ಪುನಃ ಒಂದಾಗಿಬಿಡುತ್ತವೆ.
“ಚಿನ್ಮಯ, ಇನ್ನು ಹೇಳುವುದು ಹಲವಿದ್ದರೂ ನಿನಗೆ ಹೇಳುವ ಅಗತ್ಯವಿಲ್ಲ. ನನ್ನ ಮನಸ್ಸರಿತು ನನ್ನ ಆತ್ಮದ ಬಳಿಗೇ ಬಂದೆ. ಮಗನ ಉಜ್ವಲ ಬದುಕು ಕೇವಲ ವಿದ್ಯೆ ಮತ್ತು ಸಂಪತ್ತಿನಿಂದ ಬರುವುದಿಲ್ಲ ಹಿರಿಯರ ಮನದಿರವ ಅರಿವ ಗೌರವಿಸುವ ಸಂಸ್ಕಾರವು ಇಂದಿನ ಜೀವನ ಕ್ರಮದಲ್ಲಿ ಅತ್ಯವಶ್ಯ ಆದರೆ ಯಾವ ಅಪ್ಪ ಅಮ್ಮನೂ ಹಿರಿಯರು ಈ ಬಗ್ಗೆ ಚಿಂತಿಸುವುದೇ ಇಲ್ಲ. ಹಾಗಾಗಿ ಲೋಕದಲ್ಲಿ ಸಂಸ್ಕಾರದ ಅಪಕರ್ಷವನ್ನು ಕಾಣುತ್ತೇವೆ. ಇರಲಿ ಇನ್ನು ಹೇಳದೆಯೇ ಅರಿಯಬಲ್ಲೆ ನೀನು. ಇರಲಿ ಮನೆಗೆ ಬರ್ತೆನೆ ಮಾತಡುವ. ಏನು ಬೇಕೋ ? ಹೇಗೆ ಬೇಕೊ ಮಾಡೋಣ. ದುಃಖಿಸಬೇಡ ನೀವೆಲ್ಲ ದುಃಖಿಸಿ ಕಣ್ಣೀರಿಡುವದನ್ನು ನೋಡುವ ಚೈತನ್ಯ ನನ್ನಲ್ಲಿ ಇಲ್ಲ, ಇರು ನಾನು ಎಲ್ಲ ತೆಗೆದು ಬಂದೆ. ಎನ್ನುತ್ತ ಮತ್ತೊಮ್ಮೆ ಮಗನ ಶಿರವನ್ನು ಬಲವಾಗಿ ಎದೆಗೊತ್ತಿ ಚೌಕಿಯತ್ತ ನಿಧಾನವಾಗಿ ನಡೆದರು.
ಕತ್ತಲಲ್ಲಿ ಕರಗಿ ಹೋಗುವ ಅಪ್ಪನ್ನನ್ನು ನೋಡುತ್ತ ಚಿನ್ಮಯ ನಿಂತುಕೊಂಡ. ನಿಧಾನವಾಗಿ ಸೊಂಟಕ್ಕೆ ಕೈಕೊಟ್ಟು ಉತ್ಸಾಹದಿಂದ ಭಾರವದ ಹೆಜ್ಜೆಯಿಡುತ್ತ ಅಪ್ಪಚೌಕಿಯೆಡೆಗೆ ಸರಿದು ಹೋದರು. ಕಲಾವಿದನಿಗೆ ಚೌಕಿಯೆಂದರೆ ಮನೆಯಿದ್ದಂತೆ. ವೇಶವಾಗಿಯೂ ವೇಶವಿಲ್ಲದೆಯೂ ತೊರಬಲ್ಲ ಜಾಗ. ಅದರಿಂದ ಅಪ್ಪನನ್ನು ಸೆಳೆವ ಯತ್ನ ಮಾಡಿದೆನಲ್ಲ. ಎಂತಹ ತಂದೆಗೆ ನೋವನ್ನು ಕೊಟ್ಟೆ. ಸಹಜವಾಗಿ ಬಿಗುವಿಲ್ಲದೆ ಬದುಕಬಹುದಿತ್ತು. ಅದು ಅರಿವಿಗೆ ಈಗ ಬಂತು. ಚಿನ್ಮಯ ಹಾಗೇ ನಿಂತು ಅಪ್ಪ ಹೋದೆಡೇ ನೋಡುತ್ತಲೇ ಇದ್ದ.
ಶುಭಂ