"ಇದು ವಿಮರ್ಶೆಯಲ್ಲದ ಚಿಂತನ"

Saturday, July 30, 2011

ವಾಸ್ತವದ ಜಿಜ್ಞಾಸೆಗಳು



ಮನೆಗೆ ಬಂದ ಯಕ್ಷಗಾನ ಪ್ರೇಮಿಯೊಬ್ಬರು ಕುಶಲವಾಗಿ ಮಾತನಾಡುತ್ತಾ ಕೌತುಕದಿಂದ ಕೇಳಿದರು “ ಇಷ್ಟೆಲ್ಲ ಅಭಿಮಾನ ಇಟ್ಟು ಇಷ್ಟು ಕೆಲಸ ಮಾಡ್ತೀರಿ. ಆದರೂ ನೀವು ಯಕ್ಷಗಾನ ಕಾರ್ಯಕ್ರಮದಲ್ಲಿ ಕಂಡು ಬರುವುದು ಕಡಿಮೆಯೆ ಅಲ್ವ?”
ಅವರ ಮಾತು ಅಲ್ಲಗಳೆಯುವ ಮನಸ್ಸಾಗಲಿಲ್ಲ. ಕೆಲವೊಮ್ಮೆ ಅನ್ನಿಸುತ್ತದೆ. ಹೋಗುವುದಕ್ಕಿಂತಲೂ ಹೋಗದಿರುವುದಕ್ಕೆ ಹೆಚ್ಚು ಕಾರಣಗಳು ಬೇಗನೇ ಸಿಕ್ಕಿಬಿಡುತ್ತವೆ. ಇದಕ್ಕಿಂತಲೂ ಮೊದಲು ಹಲವು ಸಲ ವ್ಯಕ್ತ ಪಡಿಸಿಯೂ ಇದ್ದೇನೆ. ಊರಲ್ಲಿರುವಾಗ ಅಂದಿನ ಕಾಲವೊಂದಿತ್ತು ಚೆಂಡೆ ಪೆಟ್ಟು ಕೇಳಿದಾಕ್ಷಣ ಕಾಲ ಮರೆತು ಹೊರಟು ಬಿಡುವ ಕಾಲ. ಅದು ಏಷ್ಟು ಮತ್ತು ಹೇಗೆ ನೋಡಿದ್ದೇನೆ ಎಂಬುದರ ಬಗ್ಗೆ ಯೋಚಿಸುವುದಕ್ಕಿಂತ ಹಾಗೆ ಒಂದು ಹೋಗುವುದು ಅನಿಯಂತ್ರಿತ ಅಭ್ಯಾಸದಂತೆ. ಹುಲ್ಲು ಕಂಡಾಗ ಹಸು ಸುಮ್ಮನೆಯಾದರು ಬಾಯಿ ಇಕ್ಕಿದಂತೆ. ಆದರೆ ಇತ್ತಿಚೆಗೆ ಬೆಂಗಳೂರಿನ ಸಹಜಗುಣವೆಂಬಂತೆ ಅದರಲ್ಲೂ ಚೌಕಾಶಿ ಮಾಡುವಂತಾಗಿದೆ. ಬಿಡುವಿಲ್ಲದ ಕೆಲಸ ಮೇಲ್ನೋಟಕ್ಕೆ ಅನಿಸಿದರೂ ದಿನವೀಡಿ ನಗರ ಸುತ್ತುವ ನನಗೆ ಕಾರ್ಯಕ್ರಮಕ್ಕಾಗಿ ಹತ್ತಿಪ್ಪತ್ತು ಕಿಲೋಮೀಟರ್ ಟ್ರಾಫಿಕ್ ನಲ್ಲಿ ಸಂಚರಿಸುವುದು ಆಧ್ವಾನವಾಗಿ ಕಾಣುತ್ತದೆ. ಮೇಲ್ನೋಟಕ್ಕೆ ಇದೆಲ್ಲ ಸಹಜವಾಗಿ ಕಂಡರೂ ಮುಖ್ಯವಾಗಿ ಮನಸ್ಸಿಗೊಪ್ಪುವ ಕಾರ್ಯಕ್ರಮದ ಹಪಹಪಿಕೆ ಮಾತ್ರ ತೀರುವುದಿಲ್ಲ. ಕೆಲವೊಮ್ಮೆ ಹೋಗಿ ವಿಷಣ್ಣ ಮನಸ್ಕನಾಗುವುದಕ್ಕಿಂತ ಹೋಗದಿರುವುದೇ ಲೇಸು ಎಂದು ತೋರುವುದೇ ಅಧಿಕ. ಕಾಲ ಕಳೆದಂತೆ ಬದಲಾದ ದಿಶೆಯೆಡೆಗೆ ತೆವಳುವುದಲ್ಲ ಓಡುತ್ತದೆ. ಬದಲಾವಣೆ ಅನಿವಾರ್ಯವೋ ಎಂಬಂತೆ ಬದಾಲಾಯಿಸಿಕೊಂಡು ಆವಿಷ್ಕರಿಸುವತ್ತ ಸಾಗುವಾಗ ಔದಾಸಿನ್ಯ ಅನಿವಾರ್ಯವಾಗಿಬಿಟ್ಟಿದೆ.
ಇತ್ತೀಚೆಗೆ ಜರಗಿದ ಒಂದು ಸಾರ್ವಜನಿಕ ಕಾರ್ಯಕ್ರಮವೊಂದನ್ನು ಕಂಡಾಗ ಈ ಅವಿಷ್ಕಾರಗಳೂ ಅವುಗಳ ಗುರಿಯೂ ಗೊಂದಲಮಯವಾದಂತೆ ಭಾಸವಾಗುತ್ತದೆ. ಸರಕಾರೀ ಕಾರ್ಯಕ್ರಮದಂತಹ ಅದ್ದೂರಿ ಕಾರ್ಯಕ್ರಮ. ದೇಶವಿದೇಶದ ಗಣ್ಯರ ಉಪಸ್ಥಿತಿ. ನಮ್ಮ ಮನೆಯಂಗಳದ ಕಾರ್ಯಕ್ರಮಕ್ಕೆ ಜಾಹೀರಾತಿಗಾದರೂ ಯಕ್ಷಗಾನ ತೋರಿಸಿಬಿಡುವ ಅಭಿಮಾನವೇ ದೊಡ್ಡದು ಎಂದು ಭಾವಿಸಬಿಡೋಣ. ತೆಂಕು ಬಡಗು ಯಕ್ಷಗಾನ ಬಂದ ಅತಿಥಿಗಳಿಗೆ ತೋರಿಸಿ ಯಕ್ಷಗಾನ ಕಲೆಯ ಪರಿಚಯ ಮಾಡಿಸಿ ಕೃತಾರ್ಥರಾಗುವ ಬಗೆ. ದೊಡ್ಡ ವೇದಿಕೆ ವೇದಿಕೆಯ ಮುಕ್ಕಾಲುಭಾಗ ಗಣ್ಯರ ಆಸನ ಮತ್ತು ಅವರ ಚೇಲಾಗಳಿಂದ ಭರ್ತಿ. ಬಂದವರಿಗೆ ಯಕ್ಷಗಾನ ನೋಡುವ ಒಂದು ಕುತೂಹಲ ಉಂಟೋ ಇಲ್ಲವೋ. ಆದರೂ ನಮ್ಮ ಜಿಲ್ಲೆಯ ರಾಜಕಲೆಯಾದ ಯಕ್ಷಗಾನ ಎಂದು ವೇಶಗಳು ಬಂದು ವೇದಿಕೆಯ ಉಳಿದ ಆಯಕಟ್ಟಿನ ಜಾಗದಲ್ಲಿ ಒಂದೆರಡು ಗಿರಕಿ ಸುತ್ತಿ ಮರಳುತ್ತವೆ. ತೆಂಕು ಯಕ್ಷಗಾನವೆಂದರೆ ಕುತ್ತು ಹಾರುವುದು ಮತ್ತು ಬಡಗು ಎಂದರೆ ಮಂಡಿಯೂರಿ ಗಿರಕಿ ಇಲ್ಲಿಗೆ ಯಕ್ಷಗಾನ ಚೆಂಡೆಯ ಅಬ್ಬರದಲ್ಲಿ ಮುಗಿದು ಬಿಡುತ್ತದೆ. ಇದನ್ನು ನೋಡಿದಾಗ ನಿತ್ಯವೂ ಯಕ್ಷಗಾನವೂ ನೋಡುವವನಿಗೂ ಹೊಸದಾಗಿ ಅಂದೇ ನೋಡುವವನಿಗೂ ಯಾವ ಬಗೆಯ ಅನುಭವ ಆಗಬಹುದು. ದೇಶ ವಿದೇಶದ ಗಣ್ಯರಿಗೆ ಯಕ್ಷಗಾನ ತೋರಿಸಿದ್ದು ಮಹತ್ಕಾರ್ಯವಾಗಿಬಿಡುತ್ತದೆ. ವೇದಿಕೆ ಇಳಿದ ಕ್ಷಣವೆ ಆ  ಪುಣ್ಯಾತ್ಮರು ಎಲ್ಲವನ್ನೂ ಮರೆತು ಬಿಡುತ್ತಾರೆ.

ಒಂದು ಸಲ ಮಂಗಳೂರಲ್ಲಿ ಕೆಲಸ ಮಾಡಿದ್ದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಛೇರಿಗೆ ಹೋಗಿದ್ದೆ. ಕುಶಲಮಾತನಾಡುತ್ತ ಇಂತಹ ಕಾರ್ಯಕ್ರಮದಲ್ಲಿ ಯಕ್ಷಗಾನ ನೋಡಿದ ಬಗ್ಗೆ ಹೇಳಿದರು. ಅವರಿಗೆ ನೆನಪಿದ್ದುದು ಬಣ್ಣ ಬಣ್ಣದ ಝಗಝಗಿಸುವ ವೇಶ ಮಾತ್ರ. ಅಲ್ಲಿ ಒಂದೆರಡು ಗಿರಕಿಯನ್ನು ಅದ್ಧೂರಿಯಾಗಿ ನೋಡಿದವರಿಗೆ ಇನ್ನೇನು ತಾನೇ ನೆನಪುಳಿಯಲು ಸಾಧ್ಯ? ಯಕ್ಷಗಾನ ಎಂದರೆ ಅಷ್ಟೇ ಅಲ್ಲ ಎಂದು ನಾನು ಸಾಧ್ಯವಾದಷ್ಟು ವೈವಿಧ್ಯತೆಯನ್ನು ಬಣ್ಣಿಸಿದರು ಅವರೆಷ್ಟು ಅರಿತುಕೊಂಡರೋ ನಾನರಿಯೆ? ರಾಮಾಯಣವಾಗಲಿ ಮಹಾಭಾರತವಾಗಲಿ ಅಥವಾ ಭಾಗವತವಾಗಲಿ ಅದರ ಪಾತ್ರ ವೈವಿಧ್ಯತೆಗಳನ್ನು ಯಕ್ಷಗಾನ ಅಭಿಮಾನಿಗಳು ಅರಿತುಕೊಂಡ ಬಗೆಗಳೆಷ್ಟು?  ನಾಲ್ಕೈದು ಗಂಟೆಗಳ ಅವಧಿಯಲ್ಲಿ ರಂಗವನ್ನು ನಿಯಂತ್ರಿಸಿ ವೈವಿಧ್ಯಮಯವಾಗಿ ಹಾಡುವ ಭಾಗವತನ ನೈಪುಣ್ಯ ಸಾಮಾರ್ಥ್ಯಗಳೇನು? ಒಂದೇ ಪಾತ್ರಕ್ಕೆ ಅವರವರ ದೃಷ್ಟಿಕೋನದಲ್ಲಿ ಚೌಕಟ್ಟಿನ ಒಳಗೆ ವೈವಿಧ್ಯಮಯ ನಾಟ್ಯಾಭಿನಯವನ್ನು ತೋರಿಸಿ ಅದನ್ನು ಅಭಿವ್ಯಕ್ತೀ ಗೊಳಿಸುವ ಯಕ್ಷಗಾನ ಕಲಾವಿದನ ಸಾಮಾರ್ಥ್ಯವೇನು? ಯಾವುದೇ ಚಿತ್ರಕಥೆ ಸಂಭಾಷಣೆಯ ಲಿಖಿತ ರೂಪವಿಲ್ಲದೇ ಬರೀ ಮಾತುಗಾರಿಕೆಯಿಂದಲೇ ಯಕ್ಷಗಾನದ  ಪಾತ್ರಪ್ರಪಂಚ ದರ್ಶನ ಮಾಡಿಸುವ ಕಲಾವಿದನ ಸಾಮಾರ್ಥ್ಯ ಕಡಿಮೇಯೇನು?  ಯಾವುದೇ ಕಲೆಯಾದರೂ ಇಂದು ವೇದಿಕೆ ಮೇಲೆ ಪ್ರದರ್ಶನ ಗೊಳ್ಳುವುದು ಹೆಚ್ಚೆಂದರೆ ಮೂರು ನಾಲ್ಕು ಘಂಟೆಗಳ ಅವಧಿ. ಇರುಳಿಡೀ ವೇದಿಕೆಮೇಲೆ ಬರೀ ಸಂಕೇತ ರೂಪದಲ್ಲೆ ಅದ್ಭುತ ಲೋಕವನ್ನೇ ತೋರಿಸುವ  ಯಕ್ಷಗಾನ ಕಲಾವಿದರ ಸಾಮಾರ್ಥ್ಯ ನಗಣ್ಯವಾಗಿ ಚಿತ್ರಿಸುತ್ತಿದ್ದೇವೋ ಎಂಬ ಅನುಮಾನ ಬರುವುದಿಲ್ಲವೆ?  
ಗಣರಾಜ್ಯೋತ್ಸವ ಅಥವ ಇನ್ನಿತರ ಸಾರ್ವಜನಿಕ ಕಾರ್ಯಕ್ರಮದ ಮೆರವಣಿಗೆಯಲ್ಲಿ, ಅಥವಾ ರಿಯಾಲಿಟಿ ಶೋಗಳಲ್ಲಿ ಸಿನಿಮಾ ಹಾಡುಗಳಲ್ಲಿ ಯಕ್ಷಗಾನದ ವೇಶ ಮತ್ತು ಅಲ್ಪ ಕುಣಿತವನ್ನು ತೋರಿಸಿ ಯಕ್ಷಗಾನ ಎಂದರೆ ಇಷ್ಟೇನೆ ಎಂದು ಬಿಂಬಿಸುವಂತೆ ಮಾಡಿ ತಿಳುವಳಿಕೆಯನ್ನು ಸೀಮಿತಗೊಳಿಸುವ ಪ್ರವೃತ್ತಿಯಿದೆಯಲ್ಲ ಅದು ಒಂದು ರೀತಿಯ ಅಸಡ್ಡೆ ಎನಿಸುದಿಲ್ಲವೆ?
ವೈವಿಧ್ಯಮಯ ಪೌರಾಣಿಕ ಪಾತ್ರಗಳೆಷ್ಟು ಬಗೆ. ಇಂದಿನ ರಾವಣ ಒಂದು ಬಗೆಯಾದರೆ ನಾಳಿನ ಭೀಮ ಇನ್ನೊಂದು ಬಗೆ. ಸುಂದರವಾಗಿ ಕೆತ್ತಿದ ಪಾತ್ರಗಳಾಗಲಿ ಅದನ್ನು ಕಟ್ಟಿ ಬೆಳೆಸುವ ವೈವಿಧ್ಯಮಯ ಹಿಮ್ಮೇಳವನ್ನಾಗಲಿ,ವಿವಿಧರೀತಿಯಲ್ಲಿ ಹಾಡುವ ಭಾಗವತನ ಪ್ರತಿಭೆಯಾಗಲೀ ಎಲ್ಲವನ್ನೂ ಬದಿಗೆ ಸರಿಸಿ ಈ ಸಂಕುಚಿತಗೊಂಡ ಯಕ್ಷಗಾನ ಮುಂದೊಂದು ದಿನ ಅದುವೇ ಸ್ಥಾಯಿಯಾದರೆ ಅಚ್ಚರಿ ಪಡಬೇಕಿಲ್ಲ. ಒಂದು ಕಾರ್ಯಕ್ರಮ ಮಾಡಿ ಸೇರಿದ ಜನ ಸಂಖ್ಯೆಯಿಂದಲೋ ಬಂದು ಸೇರಿದ ಗಣ್ಯರಿಂದಲೋ ಒಟ್ಟು ಸೇರಿದ ಹಣ ದಿಂದಲೋ ಕಾರ್ಯಕ್ರಮದ ಯಶಸ್ಸನ್ನು ತುಲನೆ ಮಾಡಿದಾಗ ನಿಜವಾದ ಪ್ರೇಕ್ಷಕ ಅಪರೂಪಾವಾಗುವುದರಲ್ಲಿ ಸಂಶಯವಿಲ್ಲ.

ಪೂರ್ಣವಾದ ಯಕ್ಷಗಾನ ಮಾಡಿದರೂ ಉತ್ತಮವಾದ ಯಕ್ಷಗಾನದ ಅಂತಃಸತ್ವ ಏನಿದೆಯೋ ಅದನ್ನು ಮರೆಮಾಚಿ ಪ್ರೇಕ್ಷಕನ ದಿಕ್ಕುತಪ್ಪಿಸುವ ಕೆಲಸ ಮಾತ್ರ ಅವ್ಯಾಹತವಾಗಿ ನಡೆದು ಬಂದಿದೆ. ಇಂದು ಮೂಲ ರೂಪದಿಂದ ಭಿನ್ನವಾಗಿ ವಿಕೃತವಾಗಿ ಚಿತ್ರಿಸಿದ ಹಲವು ಪಾತ್ರಗಳು ನಮ್ಮ ಕಣ್ಣ ಮುಂದೆ ಇದೆ.ಅದು ರಕ್ತ ರಾತ್ರಿಯ ಅಶ್ವಥ್ಹಾಮ ಅಗಿರಬಹುದು, ದೇವಿ ಮಹಾತ್ಮೆಯ ರಕ್ತಬೀಜ ಆಗಿರಬಹುದು ಅದರ ಬಗ್ಗೆ ಬರೆಯುತ್ತಾ  ಹೋದರೆ ಅಂತ್ಯವಿಲ್ಲದಾಗಬಹುದು. ನಾವು ಮಿತ್ರರೆಲ್ಲ ಸೇರಿ ಐದು ದಿನ ದೇವಿ ಮಹಾತ್ಮೆಯ ಪ್ರಸಂಗ ಪುಸ್ತಕ ಬಿಡುಗಡೆ ಮಾಡಿದೆವು, ಇದಕ್ಕಾಗಿ ಶ್ರಮವಹಿಸಿದ ಕೈಗಳು ಅದು ಕೈಗಳಲ್ಲ. ಆದರೆ ಆ ಪ್ರಸಂಗ ಕೇವಲ ಮಹಿಷೋತ್ಪತ್ತಿಗೆ ಸೀಮಿತ ವಾದದ್ದು ಮಾತ್ರ ನಮ್ಮ ದಿಕ್ಕು ತಪ್ಪಿದ ಅಭಿರುಚಿಗೆ ಸಂಕೇತವಾಗಿದೆ. ಹಲವು ವೈಶಿಷ್ಟ್ಯ ಪೂರ್ಣ ಪಾತ್ರಗಳು ಮತ್ತು ಸನ್ನಿವೇಶಗಳು  ಆ ಬೃಹತ್ ಪ್ರಸಂಗಗಳಲ್ಲಿವೆ. ಮಹಾಮಾಯೆ ಶ್ರೀದೇವಿಯ ಮಹಿಮೆಯನ್ನು ಹಲವು ರೀತಿಯಲ್ಲಿ ಬಿಂಬಿತವಾಗಿದೆ ಆದರೆ ಆ ಮಹಿಮಾಖ್ಯಾನಗಳು ಎಲ್ಲವನ್ನೂ ಬದಿಗಿರಿಸಿ ಕೇವಲ ಮಹಿಷನೆಂಬ ದುರುಳನ ಕಥೆಯೇ ವೈಭವೀಕರಿಸಲ್ಪಡುತ್ತದೆ.
ಇಂದಿನ ಯಕ್ಷಗಾನ ಕಲಾವಿದರ ಪೌರಾಣಿಕ ಜ್ಞಾನ ತೀವ್ರವಾಗಿ ಕುಸಿಯುತ್ತಿದೆ. ಅದರ ಬಗ್ಗೆ ಆಸಕ್ತಿಯೂ ಕಡಿಮೆಯಾಗಿದೆ ಇದರಿಂದಾಗಿ ಮೊದಲು ಯಾರೋ ಯಾವುದನ್ನೋ ಹೇಳಿದುದನ್ನು  ಯಥಾವತ್ತಾಗಿ ಹೇಳಿ ತಮ್ಮ ಚೌರ್ಯದ ಪಾಂಡಿತ್ಯವನ್ನು ಮೆರೆಸುವ ಅನಿವಾರ್ಯತೆ ಇಂದಿನ ಕಲಾವಿದರಿಗೆ ಬಂದಿದೆ. ಚೌರ್ಯವಾಗಲಿ ನಕಲೀಕರಣವಾಗಲಿ ಇಂದು ಸಹಜವೆಂಬಂತೆ ಆಗಿದೆ. ಬ್ಲಾಗ್ ಲೇಖನಗಳನ್ನು ಕದಿಯುವುದು, ಇತರ ಕೃತಿಗಳನ್ನಾಗಲಿ ಸೃಷ್ಟಿಗಳನ್ನಾಗಲೀ ಕದಿಯುತ್ತಿದ್ದೇನೆ ಅಥವ ನಕಲು ಮಾಡುತ್ತಿದ್ದೇನೆ ಎಂಬುದನ್ನೂ ಸಹ ಹೇಳುತ್ತ ಚೌರ್ಯವನ್ನೂ , ಅಪರಾಧವನ್ನೂ ಪ್ರಾಮಾಣಿಕತೆಯಿಂದ ಒಪ್ಪಿಕೊಂಡಂತೆ ಮಾಡಿ, ತಮ್ಮ ದಾರಿದ್ರ್ಯವನ್ನು ಪ್ರದರ್ಶಿಸುವವರು  ಇರುವಾಗ ಇಲ್ಲಿಯೂ ಅದು ಬಳಕೆಯಾಗುವುದು ಅತಿಶಯವೆನಿಸುವುದಿಲ್ಲ. ಯಾವೂದೋ ತಾಳ ಮದ್ದಲೆಯ ಅಥವಾ ಬಯಲಾಟದ ಅರ್ಥಗಾರಿಕೆಯನ್ನು ಯಥಾವತ್ತಾಗಿ ನಕಲು ಮಾಡುವುದು, ಅದು ಸ್ವ ಸೃಷ್ಟಿ ಎಂಬಂತೆ ಬಿಂಬಿಸುವ ಪ್ರಯತ್ನ ಇದೆಲ್ಲ ಜ್ಞಾನಾರ್ಜನೆಯ ಕೊರತೆಯನ್ನು ತೋರಿಸುತ್ತದೆ. ಹಿಂದಿನ ಶ್ರೇಷ್ಠ ಕಲಾವಿದರು ನಿರೂಪಿಸಿದ ಪಾತ್ರದ ದೃಷ್ಟಿಕೋನವನ್ನು ಅನುಸರಿಸಿ ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆ ಹೊರತು ಅಧ್ಯಯನ ಶೀಲತೆ ಕೊರತೆಯಿಂದ ಅದನ್ನು ನಕಲೀಕರಿಸಬಾರದಲ್ಲ. ಮೊದಲಿನವರು ಯಾವುದೇ ಒಂದು ಜಿಜ್ಞಾಸೆ ಎದುರಾದಾಗ ಅದಕ್ಕಾಗಿ ಶ್ರಮವಹಿಸಿ ಹಲವು ಗ್ರಂಥಗಳಿಂದ ಅಥವ ಇನ್ನಿತರ ಮೂಲಗಳಿಂದ ಆ ಜಿಜ್ಞಾಸೆಗೆ ಪರಿಹಾರವನ್ನು ಕಂಡುಕೊಂಡು ತಮ್ಮ ಜ್ಞಾನವನ್ನು ವೃದ್ಧಿಸುತ್ತ ಯಕ್ಷಗಾನ ಅತ್ಯಂತ ವೈಶಿಷ್ಟ್ಯವೆನಿಸಿದ ಅರ್ಥಗಾರಿಕೆ ಹಾಗು ಪಾತ್ರವೈಭವವನು ಮೆರೆದಿರುತ್ತಾರೆ. ಇಂದು ಆ ಸೃಜನ ಶೀಲತೆ ಮತ್ತು ಅಧ್ಯಯನದ ಕೊರತೆಯಿಂದ ಪಾತ್ರಧಾರಿಗಳಲ್ಲಿ ಭಾಗವತರಲ್ಲಿ ಪೌರಾಣಿಕ ಜ್ಞಾನದ ಕೊರತೆಯಿದೆ ಎಂದು ಅನ್ನಿಸುತ್ತದೆ. ಇಂದು ಅರ್ಥಗಾರಿಕೆಯ ವೈಭವನ್ನು ಸಾಕ್ಷಾತ್ಕಾರಗೊಳಿಸುವ ತಾಳಮದ್ದಲೆಯ ಪ್ರಾಕಾರ ಮೊದಲಿನಂತೆ ವಿಜ್ರಂಭಿಸುವುದಿಲ್ಲ. ಹಾಗಾಗಿ ಮಹನೀಯರು ಹೇಳುವ ಮಾತಿದೆ “ ಶೇಣಿಯ ನಂತರ ತಾಳ ಮದ್ದಲೆಯಲ್ಲಿ ಆಸಕ್ತಿಯೇ ಹೊರಟು ಹೋಗಿದೆ” ಎಂದು. ಹೀಗಾಗಲು ಮುಖ್ಯ ಕಾರಣ ಕಲಾವಿದರ ಪೌರಾಣಿಕ  ಜ್ಞಾನದ ಕೊರತೆಯ ಜತೆಗೆ ಕಲಿಯುವ ಕೊರತೆ. ಒಂದೆರಡು ವೇದಿಕೆ ಏರಿದಾಗಲೇ ತಮ್ಮ ತನವನ್ನು ಹಿರಿದಾಗಿಸಿ ಶಲ್ಯ ತೊಟ್ಟು ಅರ್ಥಧಾರಿಗಳಾಗುವ ಢಾಂಬಿಕತನದ ಪ್ರದರ್ಶನ. ತಾಳಮದ್ದಲೆಯೆಂದರೆ ಮಾತಿಗೆ ಪ್ರತಿ ಮಾತು ಚರ್ಚೆ, ತರ್ಕ ಕುತರ್ಕಗಳೇ ಆಗಿ ಅಭಾಸಗಳು ಸರ್ವೇಸಾಮಾನ್ಯವಾಗುವಾಗ ಜನಪ್ರಿಯತೆಯ ಹಾದಿ ಕವಲು ಹೊಡೆಯುತ್ತದೆ. ಹಾಗೆಂದು ಕಲಾವಿದ ಶ್ರೇಷ್ಠರು ಇಲ್ಲವೆಂದಲ್ಲ. ಆದರೆ ಅದರ ಸಂಖ್ಯೆ ಕ್ಷೀಣಿಸುತ್ತಾ ಇದೆ ಎಂದು ಅನ್ನಿಸುತ್ತದೆ.
ವೈಶಂಪಾಯನದಲ್ಲಿ ಕೌರವ ಜಲಸ್ತಂಭನ ವಿದ್ಯೆಯಿಂದ ಆಡಗಿಕುಳಿತ. ಶರಶಯ್ಯೆಯಲ್ಲಿ ಯೋಗ ಶಕ್ತಿಯಿಂದ ಭೀಷ್ಮರು ಒರಗಿದರು.. ಇದೆಲ್ಲ ಹೋರನೋಟಕ್ಕೆ ಸೂಚ್ಯವಾಗಿ ಹೇಳುವುದಾದರು ಜಲಸ್ತಂಭನವಾಗಲೀ ಯೋಗವಾಗಲಿ ಅದನ್ನು ಅಭ್ಯಸಿಸಿ ಅದು ಎಂದರೆ ಏನು ಎಂಬ ಪೂರ್ಣ ಜ್ಞಾನ ಸಾಧನೆಗೆ ತೊಡಗುವ ಆಸಕ್ತಿಯೇ ಹೊರಟು ಹೋಗಿದೆ. ಕುತೂಹಲದಿಂದ ಹಲವು ವಿದ್ಯೆಗಳನ್ನು ಕಲಿತ ಮಹಾನ್ ಕಲಾವಿದರು ರಂಗದಲ್ಲಿ ತೋರಿಸಿದ ಕೆಲವನ್ನು ಅನುಕರಿಸುತ್ತೇವೆಯೋ ಹೊರತು ಅವರು ಕಲಿತ ವಿದ್ಯೆಯತ್ತ ತಿರುಗಿಕೂಡ ನೋಡುವ ಬುದ್ದಿಯನ್ನು ತೋರಿಸುವುದಿಲ್ಲ. ಹೊಸ ತಲೆಮಾರಿನ ಕೆಲವೇ ಕಲಾವಿದರು ಪ್ರಾಮಾಣಿಕವಾಗಿ ಪಾತ್ರಗಳ ಪರಕಾಯ ಪ್ರವೇಶಕ್ಕೆ ಯತ್ನಿಸುತ್ತಾರೆ.   ಮಿಕ್ಕುಳಿದ ಅಧಿಕವೂ ಹಿಂದೆ ಮಾಡಿದ್ದುದರ ವರದಿ ಮಂಡನೆಯೆ ಆಗಿರುತ್ತದೆ.  ವೈಚಾರಿಕ ವಿಷಯಗಳ ಮಂಡನೆಯಾದರೂ ಅದಕ್ಕೆ ಪ್ರೇಕ್ಷಕ ಸ್ಪಂದಿಸುವ ಭರವಸೆಯೂ ಇಲ್ಲ. ಒಟ್ಟಿನಲ್ಲಿ ಕ್ಷಿಪ್ರ ಹಾದಿಗಳ ಅನುಸರಣೆಯೇ ಆಗಿರುತ್ತದೆ.
ಮೊಬೈಲ್ ಗೆ ಕರೆ ಮಾಡಿದಾಗ ಕರೆ ಮಾಡಿದವನಿಗೆ ನಮ್ಮ ಮನೋಧರ್ಮಕ್ಕೆ ಅನುಸಾರವಾಗಿ ಹಾಡು ಸಂಗೀತವನ್ನು ಕೇಳಿಸಿದಂತೆ ಅದು ನಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ, ಅದೇ ರೀತಿ ನಮ್ಮ ಅಭಿರುಚಿಗಳು ನಮ್ಮ ಮನೋಧರ್ಮಕ್ಕೆ ಹಿಡಿದ ಕನ್ನಡಿ.ಮನೋಧರ್ಮ ವ್ಯಕ್ತಿಗನುಸಾರವಾಗಿ ವೆತ್ಯಸ್ತವಾಗಿದ್ದರೂ ಹತ್ತು ಜನರು ಉಪಯೋಗಿಸುವ ಹಾದಿ ಹತ್ತು ಜನರೂ ಉಪಯೋಗಿಸಲು ಯೋಗ್ಯವಾಗುವಂತೆ ಸುಸ್ತಿಥಿಯಲ್ಲಿ ಮತ್ತು ಹೊಲಸಾಗದಂತೆ ಶುಚಿಯಾಗಿಡುವುದು ಉಪಯೋಗಿಸುವ ಪ್ರತೀಯೊಬ್ಬರ ಕರ್ತವ್ಯ.






Thursday, July 14, 2011

ಯಕ್ಷ ಚಿಂತನ: ಕಲಾಸೇವೆಯ ಭ್ರಾಮಕ ಲೋಕ

ಯಕ್ಷ ಚಿಂತನ: ಕಲಾಸೇವೆಯ ಭ್ರಾಮಕ ಲೋಕ: "ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳೋ, ಪುಸ್ತಕಗ ಅಥವ ಪತ್ರಿಕೆಗಳೋ ಕಾರ್ಯಕ್ರಮ ನಡೆಯುವ ಪರಿಸರದಲ್ಲೇ ಪ್ರದರ್ಶನ ಮತ್ತು ಮಾರ..."

Wednesday, July 13, 2011

ಕಲಾಸೇವೆಯ ಭ್ರಾಮಕ ಲೋಕ

ಯಾವುದೇ ಕಾರ್ಯಕ್ರಮವಾಗಲೀ ಆ ಕಾರ್ಯಕ್ರಮದ ವಿಷಯಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳೋ, ಪುಸ್ತಕಗ ಅಥವ ಪತ್ರಿಕೆಗಳೋ ಕಾರ್ಯಕ್ರಮ ನಡೆಯುವ ಪರಿಸರದಲ್ಲೇ ಪ್ರದರ್ಶನ ಮತ್ತು ಮಾರಾಟ ಮಾಡುವಂತಹುದು ಸರ್ವೇ ಸಾಮಾನ್ಯ. ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಧ್ವನಿ ಮುದ್ರಣಗಳು ಸಂಗೀತ ಕಲಾವಿದರ ವಿಶೇಷ ಮಾಹಿತಿಯನ್ನು ಹೊತ್ತ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿರುತ್ತಾರೆ. ಕೆಲವೊಮ್ಮೆ ಅತ್ಯಮೂಲ್ಯವಾದ ಸಂಗ್ರಾಹ್ಯ ವವಸ್ತುಗಳು ಸಿಗುತ್ತವೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇದರದ್ದೇ ಆದ ಪಾತ್ರ ಅಥವ ಸೇವೆ ಶ್ಲಾಘನೀಯ. ಇದಕ್ಕೆಂದೇ ಬರುವ ಆಸಕ್ತರೂ ಇರುತ್ತಾರೆ. ಈ ಬಗೆಯ ಪ್ರವೃತ್ತಿ ಯಕ್ಷಗಾನ ಕಾರ್ಯಕ್ರಮಗಳಲ್ಲೂ ಕಂಡುಬರುತ್ತದೆ. ಧ್ವನಿ ಮುದ್ರಣ ವಿನ್ಯಾಸದಲ್ಲಿ ಕ್ಯಾಸೆಟ್ ಯುಗ ಕಳೆದು ಸುಲಭ ರೀತಿಯ ಅನುಕೂಲಕರವೂ ಆದ ಸಿ. ಡಿ. ಅಥವಾ ಡಿ.ವಿ.ಡಿ ರೂಪಕ್ಕೆ ಬದಲಾಗಿ ಉಂಟು ಮಾಡಿದ ಕ್ರಾಂತಿ ಸಾಮಾನ್ಯವಾದುದೇನೂ ಅಲ್ಲ.  ಯಾವುದೇ ಕಾರ್ಯಕ್ರಮವಾದರೂ ಈ ದ್ವನಿ ಮುದ್ರಣಗಳ ಮಾರುಕಟ್ಟೆ ಈ ಬಗೆಯಲ್ಲಿ ತೆರೆದುಕೊಂಡ ರೀತಿ ಕೆಲವೊಮ್ಮೆ ಕುತೂಹಲಕರವೂ ಆಶ್ಚರ್ಯಕರವೂ ಆಗಿರುತ್ತದೆ.


ಇಂದು ರವೀಂದ್ರ ಕಲಾಕ್ಷೇತ್ರದಲ್ಲೋ, ಪುರಭವನದಲ್ಲೋ ಯಕ್ಷಗಾನ ಕಾರ್ಯಕ್ರಮವಿದ್ದರೆ ಕನಿಷ್ಠ ಪಕ್ಷ ಒಂದಾದರೂ ಮಾರಾಟ ಮಳಿಗೆ ಇದ್ದು ಬಂದ ಆಸಕ್ತರ ಸೇವೆಯನ್ನು ತನ್ನದೇ ರೀತಿಯಲ್ಲಿ ಮಾಡುವುದು ಶ್ಲಾಘನೀಯವೇ. ಇಲ್ಲವಾದರೆ ಬೆಂಗಳೂರಿನಂತಹ ನಗರದಲ್ಲಿ ಯಕ್ಷಗಾನದ ಬಗೆಗಿನ ಮಾಹಿತಿ ಮುಖ್ಯವಾಗಿ ಸುಲಭದಲ್ಲಿ ಸಿಗುವುದು ಈ ರೂಪದಲ್ಲೇ ಹಲವು ವೀಡಿಯೊಗಳು ಆಡಿಯೊಗಳು ಅವುಗಳ ಜಗತ್ತು ಕೌತುಕಪೂರ್ಣವದರು ಕೆಲವೊಮ್ಮೆ ಏಕತಾನತೆಯಿಂದ ಕೂಡಿರುವುದನ್ನು ಬಲ್ಲವರ ಅಂಬೋಣ.

ಇತ್ತೀಚೆಗೆ ಹಲವು ಭಾಗವತರ ಅಥವಾ ಇನ್ನಿತರ ಕಲಾವಿದರ ವಿಶೇಷಣವನ್ನು ಒಳಗೊಂಡ ಧ್ವನಿಮುದ್ರಣ ಹಲವಾರು ಇರುವುದನ್ನು ಕಾಣಬಹುದು. ಇವುಗಳ ಬಗ್ಗೆ ಕುತೂಹಲದಿಂದ ಗಮನಿಸಿದರೆ ಇದು ಯಾವೂದೋ ಕಾಲದ ಕ್ಯಾಸೆಟ್ ನ ಪದಗಳನ್ನು ತುಂಡು ತುಂಡು ಮಾಡಿ ನಂತರ ಅವುಗಳನ್ನು ಹೊಸೆದು ಆಕರ್ಷಕ ರಕ್ಷಾಕವಚದೊಂದಿಗೆ ಸಿ ಡಿ ಅಥವಾ ಡಿ. ವಿ. ಡಿ ರೂಪದಲ್ಲಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಕೆಲವೆಲ್ಲ ಹೊಸ ನಿರ್ಮಾಣಗಳೂ ವಿಶೇಷವಾಗಿ ನಿರ್ಮಿಸಲ್ಪಟ್ಟಿರುತ್ತವೆ. ಒಂದು ಸಲ ಕಲಾಕ್ಷೇತ್ರದ ಕಾರ್ಯಕ್ರಮಕ್ಕೆ ಹೋಗಿದ್ದವನು ಇದರ ಬಗ್ಗೆ ಕುತೂಹಲದಿಂದ ಗಮನಿಸಿದೆ. ಹೆಸರಾಂತ ಭಾಗವತರ ಅದು ಯಾರೋ ಆಗಿರಬಹುದು ಅವರ ಆಕರ್ಷಕ ಪೋಟೋ ಮುದ್ರಿಸಿ ಸುಂದರವಾಗಿ ವಿನ್ಯಾಸಗೊಳಿಸಿ ಸಿ. ಡಿ. ಯನ್ನು ಮಾರಾಟಕ್ಕೆ ಇಟ್ಟಿದ್ದರು. ಅದಕ್ಕೆ ಆಕರ್ಷಕ ಹೆಸರಿನ ನಾಮಕರಣವೂ ಆಗಿರುತ್ತದೆ. ಆಸಕ್ತಿ ಮೂಡಿ ಅವುಗಳನ್ನು ತೆಗೆದು ನೋಡಿದರೆ ಅಧಿಕವೂ ಹಿಂದೆ ಬಂದ ಕ್ಯಾಸೆಟ್ ನ ಪದಗಳನ್ನು ಪುನಃ ಭಟ್ಟಿ ಇಳಿಸಿ ನಿರ್ಮಿಸಲಾಗಿತ್ತು. ಅದಕ್ಕೆ ಅಪವಾದವೆಂಬಂತೆ ಹೊಸ ನಿರ್ಮಾಣಗಳು ಇಲ್ಲದಿರಲಿಲ್ಲ. ಆದರೆ ಇವುಗಳ ಸಂಖ್ಯೆ ಮಾತ್ರ ತೀರ ಅಲ್ಪ. ಆವಾಗ ಅನ್ನಿಸಿಬಿಟ್ಟದ್ದು ನಮ್ಮಗಳ ಬೌದ್ದಿಕ ದಾರಿದ್ರ್ಯದ ಬಗ್ಗೆ.ಕೆಲವೆಲ್ಲ ಕ್ಯಾಸೆಟ್ ನಿರ್ಮಿಸಿದವರೇ ಪುನಃ ಸಿ.ಡಿ ರೂಪದಲ್ಲಿ ನಿರ್ಮಿಸಿ ಮಾಡುವುದು ಔಚಿತ್ಯಪೂರ್ಣವಾಗಿದ್ದರೂ ಇದರಲ್ಲಿ ವ್ಯಾಪಾರೀ ಬುದ್ದಿಯ ಚಾಣಾಕ್ಷತೆ ಇಲ್ಲದಿಲ್ಲ.

ಹಾಗಾಗಿ ಕುತೂಹಲ ಮೂಡಿ ಒಂದು ಸಿ.ಡಿ. ಯ ಬಗ್ಗೆ ಅದರ ಮುಖ್ಯ ಭಾಗವತ ಕಲಾವಿದರಲ್ಲಿ ಈ ಬಗ್ಗೆ ಕೇಳಿದಾಗ ಬಹಳ ಕಳವಳ ಉಂಟಾಯಿತು. ಅವರ ಆಕರ್ಷಕ ಭಾವಚಿತ್ರವನ್ನು ವಿನ್ಯಾಸಗೊಳಿಸಿ ಅ ದ್ವನಿ ಮುದ್ರಣವನ್ನು ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ತಳ್ಳಿದ್ದರು.  ಅದರ ಬಗ್ಗೆ ಅವರಲ್ಲಿ ವಿಚಾರಿಸಿದೆ, “ ಇವುಗಳಲ್ಲಿ ನಿಮಗೆ ಎನಾದರೂ ಸಿಗುತ್ತಿದೆಯೆ?” ನಸುನಗುತ್ತ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಅವರು ಹೇಳಿದ್ದರು  ಅದು ಪುನಹ ರಚನೆಗೊಂಡು ಮಾರುಕಟ್ಟೆಗೆ ಹಾಕಿದ್ದೇ ಅವರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಸ್ವ ನೈಪುಣ್ಯತೆಯಿಂದ   ನೀಲಾಂಬರಿಯೋ ಸಾವೇರಿಯೋ ಹಾಕಿ ಆಲಾಪಿಸಿದ್ದು, ಹೊರಗೆ ಅವರ ಪೋಟೋವನ್ನೇ ತೋರಿಸಿ ಮಾರಾಟಕ್ಕಿಟ್ಟದ್ದು ಅಲ್ಲೇ ಒಳಗಿದ್ದ ಇವರ ಅರಿವಿಗೆ ಬಂದಿರಲಿಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇದ್ದಿರಲಾರದು. ಅದಕ್ಕೂ ಹಲವು ಕಾರಣಗಳೂ ಇರಬಹುದು.  ಯಾವುದೋ ಕಾಲದಲ್ಲಿ ಮಾಡಿದ ಕ್ಯಾಸೆಟ್ ನ ಬಗ್ಗೆ ಸಂಭಾವನೆ ತೆಗೆದುಕೊಂಡು ನಿರ್ಮಾತೃಗಳು ಋಣಮುಕ್ತರಾಗಿರುತ್ತಾರೆ. ಹಾಗಾಗಿ ಸಭ್ಯತೆಯ ಕಲಾವಿದರೂ ಯಾರು ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದೂ ಇಲ್ಲ. ನಮ್ಮ ಯಕ್ಷಗಾನ ಕಲಾವಿದರು ಯಾರು ಆ ಬಗ್ಗೆ ವ್ಯವಹಾರ ಕುಶಲಿಗರಲ್ಲ. ಯಾವುದೋ  ಬಗೆಯ  ಕಲಾವಿದ ಕೇವಲ ತನ್ನ ಹಕ್ಕುಗಳಿಗಾಗಿ ಹಲವಾರು ಲಕ್ಷಗಳಷ್ಟು ತೆಗೆದುಕೊಂಡು ತೃಪ್ತಿಯಾಗದೆ ಮತ್ತೂ ನ್ಯಾಯಾಲಯದ ಕಟ್ಟೆ ಏರುವ ಪ್ರಮೇಯವನ್ನು ನೋಡುತ್ತೇವೆ. ಆಬಗೆಯಲ್ಲಿ ನೋಡುವಾಗ ಯಕ್ಷಗಾನ ಕಲಾವಿದರು ನಿಜಕ್ಕೂ ಹೃದಯವೈಶಾಲ್ಯರು.  ಸೌಜನ್ಯತೆಗಾಗಿ ಒಂದು ವಾಕ್-ಮೂಲಕ ಅಪ್ಪಣೆಯಲ್ಲ ಭಿನ್ನವಿಸಿಕೊಂಡರೂ ಸಾಕಲ್ಲವೆ? ಸೌಜನ್ಯತೆ ಸೌಹಾರ್ದತೆಗೆ ವಿಶೇಷವಾಗಿ ಗುರುತಿಸಲ್ಪಡುವವರು ನಾವು.  ಇಂದು ಇವುಗಳೆಲ್ಲ ವಾಸ್ತವದಲ್ಲಿ ಅಪರೂಪವಾಗಿಬಿಟ್ಟದ್ದು ಖೇದವನಿಸುವುದಿಲ್ಲವೆ?

    ಕಿಸೆಯಲ್ಲಿ ದುಡ್ಡಿಲ್ಲದಾಗ ಯಕ್ಷಗಾನ ಆಟವಾಡಿಸುವ ಯಕ್ಷಗಾನ ಪ್ರೇಮದಂತೆ  ಈ ಸೇವೆಯೂ ದಿಶೆಯಲ್ಲಿ  ಸಾಗುವುದು ಬಹಳವಾಗಿ ನಿಟ್ಟುಸಿರಿಗೆ ಕಾರಣವಾಗಿಬಿಡುತ್ತದೆ. ಇಂದು ಕಲಾ ಸೇವೆಯ ಮುಖದಲ್ಲಿ ಇದನ್ನು ಧನಾದಾಯದ ಮೂಲವಾಗಿ ಸಿ. ಡಿ. ನಿರ್ಮಿಸುವುದೋ ಇಲ್ಲ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವುದನ್ನು ಕಂಡಾಗ ಎಲ್ಲವೂ ಬಹುಕೃತವೇಶಂನಂತೆ ತೋರಿಬಿಡುತ್ತದೆ.ಇದರ ನಡುವೆ ನಿಸ್ವಾರ್ಥವಾಗಿರುವ ನಿಷ್ಕಾಮ ಕರ್ಮಿಗಳ ಶ್ರಮ ವಿಡಂಬನೆಯ ವಸ್ತುವಾಗಿ ಭ್ರಮಿಸುವಂತಾಗುತ್ತದೆ.  1970-80 ರ ದಶಕದಲ್ಲಿ ಯಕ್ಷಗಾನ ಮೇಳಗಲ ಪರ್ವಕಾಲ. ಹೆಚ್ಚಿನ ಎಲ್ಲಾ ವ್ಯವಸಾಯೀ ಮೇಳಗಳು ವ್ಯಾಪಾರಿ ದೃಷ್ಟಿಯಲ್ಲಿ ಡೇರೆಯ ಒಳಗೆ ನುಸುಳಿಕೊಂಡವು ಮತ್ತು ಅದರಲ್ಲೆ ಚೆನ್ನಾಗಿ ದುಡಿದವು ಎನ್ನಬಹುದು. ಆವಾಗ ಅದು ವಿಮರ್ಷೆಗೆ ಒಳಗಾದರೂ ಗಂಬೀರವಾಗಿ ಪರಿಗಣಿಸಲ್ಪಡಿಲಿಲ್ಲ. ಯಕ್ಷಗಾನಕ್ಕೆ ಸಂಬಂದಿಸಿದಂತೆ ಆಗಿನ ಕಾಲ, ಈಗ ಅದೇ ಅಗಿ ಉಳಿದಿಲ್ಲ. ದುಡ್ಡು ತೆತ್ತು ಬಿಡಿ ಪುಕ್ಕಟೆಯಾದರು ಪ್ರೇಕ್ಷಕರ ಕೊರತೆ ಬಹಳಷ್ಟಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಕೈ ಖಾಲಿಯಾದಾಗ ಹಣಗಳಿಕೆಯ ಸಾಧನವಾಗಿ  ಯಕ್ಷಗಾನ ಕಾರ್ಯಕ್ರಮ ಮಾಡಿದಂತೆ  ಈ ಧ್ವನಿ ಮುದ್ರಣದ ಸಿ. ಡಿ. ಅವಿಷ್ಕಾರವು ವಿಪರೀತದ ಹಂತ ತಲುಪಿದೆ. ಅದು ನಮ್ಮ  ಕಲಾವಿದರ ಗಂಟಲದ್ವನಿಯಾಗಲಿ ಕೈಬಡಿತದ ಶ್ರಮವಾಗಲೀ ಬೆವರು ಸುರಿಸಿದ ಕುಣಿತವಾಗಲಿ.. ಅದನ್ನು ಉಪಯೋಗಿಸಿ ಅದರ ಮೂಲಕ ಬಂದ ಹಣ ಇನ್ನಾವುದೋ ಉದ್ದೇಶಕ್ಕೆ ವಿನಿಯೋಗವಾಗುವುದು ಸರಿಯೇ? ಹೊಟ್ಟೇ ಪಾಡಿಕೆ ಒಬ್ಬ ಬಡ ಕಲಾವಿದ ಇದನ್ನು ಮಾಡಿದರೆ ಸಂದರ್ಭಾನುಸಾರ ಕ್ಷಮಾರ್ಹ ಎಂದೆನಿಸಿದರೂ  ಅದು ಸಾರ್ವತ್ರಿಕವಾಗಬಾರದಲ್ಲ? ಮೊದಲು ನಿರ್ಮಿಸಿದವುಗಳನ್ನೆ ಬೇರೆ ಇನ್ನಾವುದೋ ಹೆಸರಿಟ್ಟು ಒಂದುವಿಧದ ನಕಲಿಯನ್ನೇ ಹೊಸತಾಗಿ ಭ್ರಮಿಸುವಂತೆ ಮಾಡುವ ಉದ್ದೇಶವಾರೂ ಏನು? ಕೇವಲ ವಿತ್ತಾಕರ್ಷಣೆಯಲ್ಲವೆ?  ಯಾವುದೋ ಒಂದು ಕಾಲದಲ್ಲಿ ನಾವೆಲ್ಲ ಮಿತ್ರರು ಆಸಕ್ತರು ಪರಸ್ಪರ ಹಂಚಿಕೊಂಡ ಯಕ್ಷಗಾನ ಪದಗಳು ಸಿ. ಡಿ. ರೂಪದಲ್ಲಿ ಬಂದಾಗ ಮನುಷ್ಯನ ದುರಾಸೆಗೆ ದಿಗಿಲಾಗುತ್ತದೆ. ಮೊದಲೆಲ್ಲ ಯಕ್ಷಗಾನ  ಕ್ಯಾಸೆಟ್ ಹೊರತರಬೇಕಿದ್ದರೆ ಸ್ವಲ್ಪ ಮೂಲಧನ ಹಾಗೂ ಅಪಾರ ಶ್ರಮ ಸಮಯ ವ್ಯಯ ಮಾಡಬೆಕಿತ್ತು. ಕಲಾವಿದರ ಸಾಮಾರ್ಥ್ಯ ಒರೆಗೆ ಹಚ್ಚಿ ಅದನ್ನೆ ಭಂಡವಾಳದಂತೆ ಬಳಸಬೇಕಾಗುತ್ತಿತ್ತು. ಈಗೀಗ ತಂತ್ರಜ್ಞಾನ ಬದಲಾದಂತೆ ಎಲ್ಲವು ಸುಲಭವಾಗಿದೆ. ನಕಲಿ ಮಾಡುವುದಾಗಲಿ ಆ ಮೂಲಕ ಲಜ್ಜೆಯಿಲ್ಲದ ಅಮಾನವೀಯ ಪ್ರವೃತ್ತಿಯನ್ನು ತೋರಿಸುವುದಾಗಲೀ ಒಂದು ರೀತಿಯ ಪತನವನ್ನೇ ಉತ್ಥಾನವೆಂದು ತೋರಿಸುವುದು ನಮ್ಮ ಸಾಂಸ್ಕೃತಿಕ ದಾರಿದ್ರ್ಯದ ಸಂಕೇತ. ಯಾವ ಕಲೆ ನಮ್ಮ ಮನಸ್ಸಿನ ಚೇತನಕ್ಕೆ , ಭಾವಶುದ್ದಿಗೆ ಜ್ಞಾನವೃದ್ದಿಗೆ ಅಥವ ಇನ್ನಾವುದೋ ಸತ್ಕರ್ಮಗಳ ಪ್ರೇರಣೆಗೋ ಕಾರಣವಾದ ಕಲೆ, ಜನನಿಯ ಸ್ಥಾನದಲಿ ಸ್ತನ್ಯ ಪಾನ ಸಮಾನವನ್ನು ಕೊಡಬಲ್ಲ ಕಲೆಯನ್ನು ಕೇವಲ ಕ್ಷುಲ್ಲಕ ಸ್ವಾರ್ಥ ಸಾಧನೆಗೆ ಬಳಸುವುದು ಜನನಿಯನ್ನೆ ಅಡವಿಟ್ಟು ಜೂಜಾಡಿದಂತೆ ಅಲ್ಲವೆ? ಪ್ರತೀಯೊಂದರಲ್ಲೂ ಹಣ ಅಥವಾ ಅದಾಯದ ಮೂಲವನ್ನಾಗಿ ಬಿಂಬಿಸುವುದು ಅಕ್ಷಮ್ಯವೆಂದೇಕೆ ಅನ್ನಿಸುವುದಿಲ್ಲ? ಇಂತಹ ಸ್ವಾರ್ಧಿಗಳ ನಡುವೆ ನಿಜ ಆಸ್ವಾದಕ ಸತ್ವಪರೀಕ್ಷೆಗೆ ಗುರಿಯಾಗುತ್ತ ಪರಿತಪಿಸಬೇಕೆ? ಒಟ್ಟಿನಲ್ಲಿ ಈ ಕಲೆಯನ್ನು ಇವರು ಕಾಣುವ ದೃಷ್ಟಿಕೋನ ಸುಸ್ಪಷ್ಟ ಅದು ಬದಲಾಗಬೇಕಿದೆ.
.



         
          

Monday, July 4, 2011

ಬೆಂಗಳೂರಿನ ಒಂದು ಆಟ !!!!


ಮಳೆಗಾಲ ಬಂತೆಂದರೆ ಬೆಂಗಳೂರಿನಂತಹ ನಗರದಲ್ಲಿ ಊರಿನ ವೃತ್ತಿಪರ ಕಲಾವಿದರ ಯಕ್ಷಗಾನ ಕೂಟಗಳು ನೋಡುವಂತಹ ಅವಕಾಶ ಸಿಕ್ಕಿಬಿಡುತ್ತದೆ. ಅದರಂತೆ ಈ ಭಾನುವಾರದಂದು ಒಂದು ಯಕ್ಷಗಾನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡುವ ಅವಕಾಶವೂ ಒದಗಿಬಂತು. ಊರಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದವರು ಹಾಗು ಇತರ ಅತಿಥಿಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಂಪೂರ್ಣ ಶ್ರೀದೇವಿ ಮಹಾತ್ಮೆ. ಕೆಲವು ಬೆರಳೆಣಿಕೆಯ  ಅಂಶಗಳು ಬಿಟ್ಟರೆ ಬೇರೆ ಹೇಳೀಕೊಳ್ಳುವ ಅಂಶವೇನು ಇಲ್ಲದೇ ಹತ್ತರ ಒಟ್ಟಿಗೆ ಹನ್ನೊಂದಾದ ಕಾರ್ಯಕ್ರಮವಾಗಿತ್ತು ಎಂಬುದು ವಿಷಾದನೀಯ.

ಬಹಳ ಶ್ರಮ ವಹಿಸಿ ಅಯೋಜಕರು ಕಾರ್ಯಕ್ರಮ ರೂಪಿಸಿದ್ದರು. ಅದಕ್ಕಾಗಿ  ಕ್ಕಿರಿದು ತುಂಬಿದ ಪ್ರೇಕ್ಷಕರು ತೆಂಕುತಿಟ್ಟು ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇಲ್ಲ ಎಂಬುದನ್ನು ಹೇಳುವಂತಿತ್ತು. ತೆಂಕುತಿಟ್ಟು ಯಕ್ಷಗಾನಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಏರ್ಪಡುವುದರಿಂದ ಇಂತಹ ಕಾರ್ಯಕ್ರಮಗಳು ಬಹು ಮುಖ್ಯ ಎನಿಸಿಕೊಳ್ಳುತ್ತವೆ. ಆದರೂ ಯಕ್ಷಗಾನ ಪ್ರದರ್ಶನ ಮಾತ್ರ ತುಂಬ ನೀರಸವಾಗಿಯೇ ಇತ್ತು. ಮೊದಲಾಗಿ ಆಯ್ಕೆ ಮಾಡಿದ ಪ್ರಸಂಗ. ಹೆಚ್ಚಾಗಿ ತೆಂಕುತಿಟ್ಟಿನ ವೈಶಿಷ್ಟ್ಯ ಎನ್ನಬಹುದಾದ ಪ್ರಸಂಗಗಳಲ್ಲಿ ಒಂದು ಈ ದೇವಿ ಮಹಾತ್ಮೆ ಪ್ರಸಂಗ. ಇದು ಒಳಾಂಗಣವಾಗಿ,ಹಾಲ್ ನ ಒಳಗೆ ಆಡುವುದಕ್ಕೆ ಅಷ್ಟೊಂದು ಸೂಕ್ತ ಅಂತ ಅನ್ನಿಸುವುದಿಲ್ಲ.  ಸೇರಿದ ಬಹಳಷ್ಟು ಕಲಾವಿದರು ಹವ್ಯಾಸಿಗಳಾಗಿದ್ದುದರಿಂದ ಆ ಮಟ್ಟಿಗೆ ಕಾರ್ಯಕ್ರಮ ತುಂಬ ಶ್ರಮವಹಿಸಿದ್ದುದು ಎದ್ದು ಕಾಣುವ ಅಂಶವಾಗಿತ್ತು. ಹಿಮ್ಮೇಳ ಆರಂಭದಲ್ಲಿ ತೀರ ಕಳಪೆ ಎನ್ನುವಷ್ಟರ ಮಟ್ಟಿಗೆ ವ್ಯಕ್ತವಾಗುತ್ತಿತ್ತು. ಒಟ್ಟು ಶೃತಿಯಲ್ಲಿ ಎಲ್ಲೊ ಸಣ್ಣ ತೊಂದರೆ ಇದ್ದಂತೆ ಅನ್ನಿಸುತ್ತಿತ್ತು. ಮದ್ದಲೆ ಸಾಧಾರಣಕ್ಕಿಂತ ಕೆಳಮಟ್ಟದಲ್ಲಿತ್ತು. ನಿಜಕ್ಕೂ ಹೊಸಮೂಲೆ ಗಣೇಶ್ ಭಟ ಕುಳಿತಲ್ಲಿಂದ ಹಿಮ್ಮೇಳದ ಸ್ವರೂಪ ತಕ್ಕ ಮಟ್ಟಿಗೆ ಬದಲಾಗಿಬಿಟ್ಟರೂ ಮದ್ದಲೆವಾದನ ಮಾತ್ರ ಹೊಂದಿಕೊಳ್ಳಲು ಶ್ರಮವಹಿಸುತ್ತಿತ್ತು.

ಮುಮ್ಮೇಳದಲ್ಲಿ ವಿಷ್ಣು ಹಾಗೂ ಮಧು ಕೈಟಭ ವೇಷಗಳು ಪರವಾಗಿಲ್ಲ ಅನ್ನಿಸಿದರೂ ಒಟ್ಟಿನಲ್ಲ್ಲಿ ನೀರಸವಾಗಿ ಸಾಗಿದ ಪ್ರದರ್ಶನ ಈ ದೇಣಿಗೆ ಸಾಕಾಗಲಿಲ್ಲ.  ಮಧು ಕೈಟಭ ಪ್ರವೇಶ ಡಿಜಿಟಲ್ ಮಾದರಿ ಸ್ಪೆಶಲ್ ಇಫೆಕ್ಟ್ ಕೊಟ್ಟು ಮಾಡಿದ್ದು ಅಷ್ಟೊಂದು ಸೂಕ್ತ ಅನ್ನಿಸಲಿಲ್ಲ. ಹಿಮ್ಮೇಳ ಹಿಂಭಾಗ ಎತ್ತರದ ವೇದಿಕೆ ಅದರ ಹಿಂಭಾಗ ದಿಂಗಂತದ ಆಕಾಶ ಅಲ್ಲಿಂದ ಆರ್ಭಟಿಸುತ್ತ ಇಳಿದು ಬರುವ ಮಧು ಕೈಟಭ ..ಆದರೆ ರಂಗ ಸ್ಥಳಕ್ಕೆ ಪ್ರವೇಶ ಮಾತ್ರ ಅಬ್ಬರಿಸದೇ ಹೊಯಿತು. ಒಟ್ಟಿನಲ್ಲಿ ಯಕ್ಷಗಾನಕ್ಕೆ ಇಂತಹ ಅದ್ದೂರಿಯ ಅಗತ್ಯ ಇದೆಯೆ?

ಹೊಸಮೂಲೆಯ ಆಗಮನದಿಂದ ವೇಗ ಹೆಚ್ಚಿಸಿಕೊಂಡರೂ ಮಾಲಿನಿಯ ಪಾತ್ರ ಆ ವೇಗವನ್ನು ಕುಗ್ಗಿಸಿ ಅನಾವಶ್ಯಕವಾಗಿ  ಹಿಡಿದೆಳೆಯಿತು. ಮಾತ್ರವಲ್ಲ ಮಾಲಿನಿಯ ಪಾತ್ರವೂ ತೀರ ಸಾಮಾನ್ಯವಾಗಿಯೇ ಇತ್ತು. ಒಂದು ಕಾಲದ ಮೇಳದ ಕಲಾವಿದರು ಇವರೇ ಎಂದು ಅನುಮಾನಿಸುವಂತೆ ಅನ್ನಿಸಿತು. ಮಹಿಷಾಸುರನ ಪ್ರವೇಶ ದೊಂದಿ ರಾಳ ರಹಿತವಾಗಿದ್ದರೂ ರಂಗಸ್ಥಳ ಪ್ರವೇಶಕ್ಕೆ ಬರೋಬ್ಬರಿ ಅರ್ಧ ಗಂಟೆ ತೆಗೆದು ಕೊಂಡರು ರಂಗದ ಹೋರಗಿದ್ದ ಸರ್ಕಸ್ ನಷ್ಟು ರಂಗದ ಮೇಲೆ ಇರದೆ ನಿರೀಕ್ಷೆಯನ್ನು ಹುಸಿಯಾಗಿಸಿತು. ಮಹಿಷಾಸುರ ಪ್ರವೇಶಕ್ಕೆ ಅತ್ಯಂತ ಪ್ರತಿಭಾವಂತ ಚೆಂಡೆವಾದಕರು ಮತ್ತು ನಿಡ್ಲೆ ಅಜ್ಜನ ಶಿಷ್ಯರೂ ಆದ ಸುಬ್ರಹ್ಮಣ್ಯ ಶಾಸ್ತ್ರಿ ಚೆಂಡೆ ಹಿಡಿದರೂ ಹಿನ್ನೆಲೆಯಲ್ಲಿ ಕರ್ಕಷವಾಗಿ ಅದಾವುದೋ ಚೆಂಡೆವಾದನವನ್ನು ಮೈಕ್ ಗಳಲ್ಲಿ  ಮೊಳಗಿಸಿ ಒಟ್ಟು ಆಟವನ್ನೇ  ಕುಲಗೆಡಿಸಿಬಿಟ್ಟ ಹಾಗೆ ಅನ್ನಿಸಿತು. ಹಿಮ್ಮೇಳದ ಚೆಂಡೆವಾದನದ ಬಗ್ಗೆ ವಿಶ್ವಾಸ ಕೊರತೆಯಿಂದ ಹೀಗೆ ಮೊಳಗಿಸಿ ಒಂದು ರೀತಿಯಲ್ಲಿ ಅತ್ಯುತ್ತಮ ಕೈಚಳಕವನ್ನು ಆನಂದಿಸುವ ಅವಕಾಶವನ್ನೆ ಇಲ್ಲದಂತೆ ಮಾಡಿದರು. ಕಟೀಲು ಮೇಳದ ಆಟಗಳಲ್ಲು ಇಂತಹ ಒಂದು ಸಂಪ್ರದಾಯ ಇದೆ.ಅದು ಏಕೆ ಬೆಳೆದು ಬಂತೋ ಎಂಬುದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಅಲ್ಲಿ ಚೆಂಡೆಯ ಬದಲು ಬ್ಯಾಂಡ್ ವಾದ್ಯಗಳು ಮೊಳಗಿ ಚೆಂಡೆಯ ವೈಷಿಷ್ಟ್ಯವನ್ನೇ ನುಂಗಿ ಹಾಕಿಬಿಡುತ್ತದೆ. ಯಕ್ಷಗಾನದ ಹಿಮ್ಮೇಳದ ಮೇಲೆ ವಿಶ್ವಾಸದ ಕೊರತೆಯನ್ನು ಇದು ಸಾರುವುದಿಲ್ಲವೇ? ಇದು ಒಂದು ರೀತಿಯಲ್ಲಿ ಶ್ರೀಮಂತ ಕಲೆಯ ಪ್ರತಿಭೆಯನ್ನು ಗೇಲಿ ಮಾಡಿದಂತೆ ಎಂದು ಏಕೆ ಅನ್ನಿಸುವುದಿಲ್ಲ?

ಮಹಿಷಾಸುರ ಅಬ್ಭರದ ಪದವಾದ “ ಧಾರುಣಿಯ ಮೇಲೆ ಕಣ್ಣೀರ ಸುರಿಸುತ್ತಿರಲು...” ಪದಕ್ಕೆ ಹೊಸಮೂಲೆಯ ತಾರಕ ಸ್ವರಕ್ಕೆ ಮಹಿಷಾಸುರನ ಅಬ್ಬರವೇ ಇರಲಿಲ್ಲ..!!! ಪ್ರವೇಶದಲ್ಲಿ ಸೀಟ್ ಮೆಲೆ ಹತ್ತಿ ಏನೆಲ್ಲ ಸರ್ಕಸ್ ತೋರಿಸಿ ಫೊಟೊ ಪೊಸ್ ಕೊಟ್ಟದ್ದು ಅಭಾಸವಾಗಿ ಕಂಡಿತು. ಒಟ್ಟಿನಲ್ಲಿ ಸಭಾ ರಂಜನೆ. ಇನ್ನು ಮುಂದಿನ ಭಾಗ ನೋಡಿ ಸಮಯ ವ್ಯಯ ಮಾಡುವ ಅನಿವಾರ್ಯತೆ ಇರಲಿಲ್ಲ. ಒಟ್ಟಿನಲ್ಲಿ ಒಂದು ನೀರಸ ಯಕ್ಷಗಾನ. ಆದರು ವಿಶೇಷ ಆಸಕ್ತಿ ವಹಿಸಿ ತೆಂಕು ತಿಟ್ಟು ಯಕ್ಷಗಾನವನ್ನು ಶ್ರಮವಹಿಸಿ ಸಂಘಟಿಸಿದ್ದಾರೆ ಅದು ನಿಜಕ್ಕು ಅಭಿನಂದನಾರ್ಹ. 

Wednesday, June 22, 2011

ಅದ್ದೂರಿಯ ಯಕ್ಷಗಾನ



ಆದ್ಢೂರಿ ಅಥವಾ ಆಡಂಬರ ಎಂಬುದು ಒಂದು ಜೀವನ ಶೈಲಿ. ಸಹಜವಾಗಿ ಏನಿದೆಯೋ ಅದಕ್ಕೇ ಅತೀತವಾದ ಪ್ರದರ್ಶನ ಅಥವಾ ಗೋಚರಿಸುವುದು ಎಂದೇ ಅರ್ಥೈಸಬಹುದು.  ನಿತ್ಯ ಬದುಕಿನಿಂದ ವಿಶೇಷವಾಗಿ ಗುರುತಿಸಲ್ಪಡುವ ಬಯಕೆಯೇ ಈ ಅಡಂಬರತನ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆಡಂಬರವನ್ನು ಕಾಣಬಹುದು. ಸಾಗುವ ಒಂದೇ ದೂರವನ್ನು ಅಥವಾ ಸೇರಬೇಕಾದ ಒಂದೇ ಗುರಿಯನ್ನು ವಿಭಿನ್ನ ರೀತಿಯಲ್ಲಿ ಒಂದೇ ಹಾದಿಯನ್ನು ಕ್ರಮಿಸುವುದನ್ನು  ನಿತ್ಯ ಕಾಣಬಹುದು.

ಹಲವು ವರ್ಷಗಳ ಹಿಂದೆ ಮಂಗಳೂರು ನೆಹರೂ ಮೈದಾನಿನಲ್ಲಿ ಒಂದು ಅದ್ಧೂರಿ ಯಕ್ಷಗಾನ ಪ್ರದರ್ಶನ ನೋಡಿದ್ದು ಇನ್ನೂ ನೆನಪಿದೆ. ನೆನಪಿದೆ ಎಂದ ಮಾತ್ರಕ್ಕೆ ಅದು ಸ್ಮರಣೀಯ ಯಕ್ಷಗಾನ ಕಾರ್ಯಕ್ರಮ ಎಂದು ನನಗೆ ಅನ್ನಿಸುವುದಿಲ್ಲ. ಅಥವಾ ಯಕ್ಷಗಾನಕ್ಕೆ ಸಂಬಂಧಿಸಿ ಈಗ  ಯೋಚಿಸಿದರೆ ಅದು ಸ್ಮರಣೀಯ ಅನ್ನಿಸುವುದೇ ಇಲ್ಲ. ಮೂರು ಪ್ರಮುಖ ಡೇರೆ ಮೇಳಗಳ ಯಕ್ಷಗಾನ ಒಂದೇ ವೇದಿಕೆ ಮೇಲೆ ಕೂಡಾಟವಾಗಿ ಪ್ರದರ್ಶನಗೊಂಡಿತ್ತು. ಪ್ರಸಂಗವೂ ಹಾಗೆ ಬಹಳ ವಿಶೇಷ ಎನ್ನಿಸುವಂತಹ ಪ್ರಸಂಗ ಸಂಪೂರ್ಣ ರಾಮಾಯಣ. ತೆಂಕು ತಿಟ್ಟಿನ ಪ್ರಮುಖ ಮೇಳಗಳಾದ ಕರ್ನಾಟಕ ಮೇಳ ಮತ್ತು ಮಧೂರು ಮೇಳ ಹಾಗೂ ಬಡಗು ತಿಟ್ಟಿನ ಪ್ರಮುಖ ಮೇಳವಾದ ಪೆರ್ಡೂರು ಮೇಳ. ದಿನೇಶ ಅಮ್ಮಣ್ಣಾಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರರ ಜುಗಲ್ಬಂದಿ ದ್ವಂದ್ವ ನಾನು ನೋಡಿರುವುದು ಅದೇ ಮೊದಲು. ಹಾಗೇ ಇದರ ವಿಶೇಷಗಳನ್ನು ಉಲ್ಲೇಖಿಸುತ್ತಾ ಹೋದರೆ ಪ್ರಮುಖವಾಗಿ ನನಗೆಗೆ ಕಂಡದ್ದು ಹಲವು.

ಯಕ್ಷಗಾನಕ್ಕೆ ಅಷ್ಟೂ ದೊಡ್ಡ ವೇದಿಕೆ ನಾನು ಕಂಡಿರುವುದು ಅದುವೇ ಪ್ರಥಮ ಅದುವೆ ಕೊನೆ. ನೀಳಕಾಯದವ್ಯಕ್ತಿ ನೇರವಾಗಿ ನಿಂತು ವೇದಿಕೆಯ ಅಡಿಯಲ್ಲಿ ತೂರಬಹುದಾದಷ್ಟು ಎತ್ತರ ಮತ್ತು ಬೃಹತ್ತಾದ ವೇದಿಕೆ. ವೇದಿಕೆಯ ಅಗಲ ವಿಸ್ತೀರ್ಣವೂ ಹಾಗೆ ಅತ್ಯಂತ ವಿಶಾಲವಾದ ವೇದಿಕೆ. ವೇದಿಕೆಯ ಸನಿಹ ಮಧ್ಯಭಾಗದ ಈಸೀಚೆಯರ್ ನಲ್ಲಿ ಕುಳಿತು ನೀವು ಆಟ ನೋಡಿದರೆತಲೆ ಟೀಬಲ್ ಫ್ಯಾನಿನಂತೆ ಒಮ್ಮೆ ಅತ್ತ ಮಗುದೊಮ್ಮೆ ಇತ್ತ ತಿರುಗಲಾರಂಭಿಸುತ್ತದೆ. ಅಷ್ಟೂ ವಿಶಾಲವಾದ ವೇದಿಕೆ. ಮೂರೂ ಮೇಳದ ವೇದಿಕೆಯನ್ನು ಸೂಕ್ತವಾಗಿ ಸಮನ್ವಯಗೊಳಿಸಲಾಗಿತ್ತು. ಅಷ್ಟೂ ದೊಡ್ಡ ವಿಸ್ತಾರವಾದ ನೆಹರೂ ಮೈದಾನವನ್ನು ಬಹುಭಾಗ ಆಕ್ರಮಿಸಿ ದೊಡ್ಡದಾದ ಟೆಂಟ್ ಬೇರೆ ಹಾಕಿದ್ದರು. ಇನ್ನು ಟಿಕೇಟ್ ಬೆಲೆಯೂ ಪ್ರಥಮ ತರಗತಿಗೆ ರೂ. ೨೫೦ ಎಂದು ನನ್ನ ಅನಿಸಿಕೆ. ರಾಜ್ಯ ಮಾರಟ ತೆರಿಗೆ ನೌಕರ ಸಂಘದವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನ ಬೇರೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಪತಿಗಳ ಅನುದಾನವೂ ಬೇರೆ ಇತ್ತು ಎಂದುಕೊಳ್ಳಬಹುದು.

ಆಟ ಪೂರ್ವ ರಂಗದೊಂದಿಗೆ ಶುರುವಾದಾಗ, ಕುಂಬಳೇ ಬೇಡಿಯ ಸಂತೆಯಲ್ಲಿ ಒಂದು ಸುತ್ತು ಹಾಕಿದ ಅನುಭವಾಗಿ ಎಲ್ಲವು ವಿಚಿತ್ರವಾಗಿ ಕಂಡಿತ್ತು. ಕರ್ನಾಟಕ ಮೇಳದ ಲಕ್ಷ್ಮಣ ಶೆಟ್ಟಿ ಅಳಕೆಯವರ ದಶರಥನ ಒಡ್ಡೋಲಗ.... ಅನಂತರ ಬಾಯರು ರಮೆಶ್ ಅವರ ಪರಶುರಾಮ ಇವಿಷ್ಟು ಆರಂಭದಲ್ಲಿ ಬಂದ ಪಾತ್ರದ ನೆನಪು ಮಾತ್ರ ಇನ್ನೂ ಉಳಿದಿದೆ.ಸೀತಾಸ್ವಯಂವರ.,ಪಂಚವಟಿ, ಸೀತಾಪಹಾರ, ವಾಲಿವಧೆ ಕುಂಭಕರ್ಣ ಕಾಳಗ, ಇಂದ್ರಜಿತು ವಧೆ ಕೊನೆಗೆ ರಾವಣ ವಧೆಯೊಂದಿಗೆ ಪ್ರಸಂಗ ಮಂಗಳವಾಗಿಬಿಟ್ಟಿತು.ಪೆರ್ಡೂರು ಮೇಳದ ರಾಮನಾಯಿರಿ ಅವರ ಮಾಯಾ ಶೂರ್ಪನಖಿ ಉತ್ತಮವಾಗಿತ್ತು. ಸೀತಾಪಹಾರದ ರಾವಣ, ಹಾಗೆ ಕೊನೆಯ ಭಾಗದಲ್ಲಿ ಪುಳಿಂಚ ಬಣ್ಣದ ರಾವಣ ಅರುವ ಕೊರಗಪ್ಪ ಇಂದ್ರಜಿತು..ಪಂಚವಟಿಯಲ್ಲಿ ಅಮ್ಮಣ್ಣಾಯ ಧಾರೆಶ್ವರರು ಜತೆಯಾಗಿ ದ್ವಂದ್ವದ ಸ್ಪರ್ಧಾತ್ಮಕ ಹಾಡುಗಾರಿಕೆ  ಹೀಗೆ ಕೆಲವೆಲ್ಲ ಇನ್ನೂ ನೆನಪಿದ್ದರೂ ಅಂದಿನ ಬಯಲಾಟ ಮತ್ರ  ನೆನಪಿರುವುದು ಕೇವಲ  ಆಧ್ಹೂರಿತನಕ್ಕೆ.

ಇನ್ನಿತರ ಹಲವು ಅದ್ದೂರಿಯ ಯಕ್ಷಗಾನಗಳನ್ನು ಕಾಣುವ ಸಂದರ್ಭ ಒದಗಿಬಂದಿದೆ. ದೇವಿಮಹಾತ್ಮೆ ಜೋಡಾಟವಾಗಿ ಮಂಗಳೂರು ಪುರಭವನದಲ್ಲಿ ಕಂಡದ್ದು ಇನ್ನೂ ನೆನಪಿದೆ. ಚಿಪ್ಪಾರು ಪದ್ಯಾಣ-ನಿಡ್ಲೆ ಕುರುಪ್ ಹೀಗೆ ಗುರುಶಿಷ್ಯರ ಜತೆಗಾರಿಕಯ ಚೆಂಡೆ ಪೀಠಿಕೆ ಸುಮಾರು ಒಂದು ಘಂಟೆ ಪ್ರೆಕ್ಷಕರರನ್ನು ಸಮ್ಮೋಹನಗೊಳಿಸಿದತ್ತು ಮಧ್ಯರಾತ್ರಿ ಹೊತ್ತು ಮಂಡೆಚ್ಚ ಕಡತೋಕರ ಜುಗಲ್ಬಂದಿ ಮುಂಜಾನೆ  ಬಲಿಪ್ಪ ಮತ್ತು ಕುಂಡಚ್ಚ ಭಾಗವತರ ಜುಗಲ್ಬಂದಿ ಚಂದ್ರಗ್ರಿರಿಅಂಬು ಮಹಿಷಾಸುರ ಕೊಕ್ಕಡ ಮತ್ತು ಉಪಾಧ್ಯಾಯರ ಮಾಲಿನಿ ಹೀಗೆ ಹಲವು ನೆನಪಿದೆ.  ಹೊರಾಂಗಣ ಮೈದಾನದಲ್ಲಿ ಆಗಬೇಕಾದ ಆಟ ಕೊನೆಘಳಿಗೆಯಲ್ಲಿ ಮಳೆಯಿಂದ ಪುರಭವನದ ಒಳಗೆ ನಡೆಯುವಂತಾಯಿತು. ಹೊರಗೆ ನಡೆಯುತ್ತಿದ್ದರೆ ಇನ್ನಿಷ್ಟು ಅದ್ದೂರಿಯ ಪ್ರದರ್ಶನ ಆಗುತ್ತಿತ್ತೋ ಎನೋ?

ಹಲವು ಅದ್ಧೂರಿಯ ಯಕ್ಷಗಾನ ಕಂಡರೂ ಒಟ್ಟು ಗಮನಿಸಬೇಕಾದ ಅಂಶವೆಂದರೆ ಒಟ್ಟು ಯಕ್ಷಗಾನ ಬಯಲಾಟ ಅದ್ಧೂರಿಯಾಯಿತೇ ಹೊರತು ಮುಖ್ಯವಾದ ಯಕ್ಷಗಾನ ಅದ್ಡೂರಿಯಾದ ಉದಾಹರಣೆ ಬಹಳ ಕಡಿಮೆ. ಮೇಲ್ನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ಹೇಳಿಕೊಳ್ಳುವಂತಹ ಯಕ್ಷಗಾನ ಸವಿಯುವ ಸಂದರ್ಭ ಕೆಲವೆ ಕಲವು ಇರುತ್ತದೆ. ಪ್ರವೇಶದರ ಉಜಿತವಿದ್ದು ಕೇವಲ ಯಕ್ಷಗಾನದ ದೃಷ್ಟಿಯಿಂದ ಆಯೋಜನೆಗೊಂಡರೂ ಪ್ರೇಕ್ಷಕನಿಗೆ ಯಾವುದು ಸವಿಯಬೇಕೋ ಎಂಬ ಗೊಂದಲದಲ್ಲೆ ಕಾರ್ಯಕ್ರಮ ಮುಗಿದು ಹೋಗುತ್ತದೆ. ಆದರು ಮೆಚ್ಚತಕ್ಕ ವಿಚಾರವೆಂದರೆ ಹಲವು ಸಮಯ ಮೊದಲೇ ಕಾರ್ಯಕ್ರಮ ನಿರ್ಣಯಗೊಂಡು ಹಲವು ಹಿರಿಯ ಕಿರಿಯ ಕಲಾವಿದರನ್ನು ಒಂದೆಡೆ ಸೇರಿಸಿ ಪ್ರಸಂಗ ನಿರ್ಣಯವಾಗಿ ಪಾತ್ರ ಹಂಚಿಕೆಮಾಡಿ ಎಲ್ಲವು ಬಹಳ ಸಾಹಸದ ಕೆಲಸವೆ. ಕೇವಲ ಕಲಾವಿದನ ಕಲೆ ಮಾತ್ರ ಪ್ರತಿಭೆಯಲ್ಲ ಇಷ್ಟು ದೊಡ್ಡ ವ್ಯವಸ್ಥೆಯನ್ನು ನಿರ್ವಹಿಸುವುದೂ ಒಂದು ಪ್ರತಿಭೆಯೇ ಸರಿ.

ಒಂದು ಅದ್ಧೂರಿ ಯಕ್ಷಗಾನ ಕಾರ್ಯಕ್ರಮದ ವೆಚ್ಚವನ್ನು ಕೆಲವೋಂದು ಸಲ ಊಹಿಸಲಿಕ್ಕೂ ಅಸಾಧ್ಯವಾದಷ್ಟು ದೊಡ್ಡ ಮೊತ್ತ ಈ ಕಾರ್ಯಕ್ರಮದ ನಿಮಿತ್ತ ವ್ಯಯವಾಗಿದೆ ಎಂದರೆ ಕೆಲವೆಲ್ಲ ಚಿಂತನಗಳು ಹಾಗೇ ಮೂಡುತ್ತವೆ.ಒಂದು ಮೇಳದ ಬಯಲಾಟವನ್ನೇ ಆಡಬಹುದಾದಷ್ಟು ವೆಚ್ಚ ಕೇವಲ ಆಟದ ನೋಟಿಸಿಗೆ ಖರ್ಚಾಗುವುದನ್ನು ನೆನಸುವಾಗ ಈ ಅಧ್ಹೂರಿತನದ ಬಾಹುಳ್ಯವನ್ನು ಊಹಿಸಬಹುದು. ೫೦ ರಿಂದ ನೂರು ಮಂದಿಯ ವರೆಗೆ ಕಲಾವಿದರು ಎಂದರೆ ೪-೫ ಮೇಳದಕಲಾವಿದರು ಒಂದು ರಾತ್ರಿ ಒಂದೇ ವೇದಿಕೆಯಲ್ಲಿ....ಊಹಿಸುವಾಗ ರೋಮಾಂಚನವಾದರೂ ಕೆಲವೆಲ್ಲ ಅರ್ಥ ಹೀನ ಎನ್ನಿಸುವುದಿಲ್ಲವೆ? ದೊಡ್ಡ ದೊಡ್ಡ ಕಲಾವಿದರು ಸಾವಿರಾರು ರೂಪಾಯಿ ಸಂಭಾವನೆ ತೆಗೆದುಕೊಳ್ಳುವಾಗ ಹಲವು ಸಲ ಹೆಮ್ಮೆಪಟ್ಟುಕೊಳ್ಳುವ ವಿಚಾರವಾದರೂ ವಾಸ್ತವದಲ್ಲಿ ಯೋಚಿಸುವಾಗ ಖೇದನೀಯ ವಿಚಾರಗಳು.. ಒಂದು ಮೇಳದ ಇಡೀ ರಾತ್ರಿಯ ಅವಧಿಯ ಆಟಕ್ಕೂ ಹೀಗೆ ಅದ್ಧೂರಿಯಾಗಿಯೋ ಸ್ಪ್ರರ್ಧಾತ್ಮಕವಾಗಿಯೋ ಆಯೊಜನೆಗೊಂಡ ಆಟಕ್ಕೂ ವೆತ್ಯಾಸ ಮತ್ತು ಅಂತರ ಬಹಳವಿದೆ ಅಂತ ನನಗೆ ಅನ್ನಿಸುತ್ತದೆ.

ಮುಖ್ಯವಾಗಿ ಸಮಯದ ಸಮಸ್ಯೆ ಎಲ್ಲ ಪ್ರದರ್ಶನದಲ್ಲೂ ಕಾಣಬಹುದು. ನಿಗದಿ ಪಡಿಸಿದಂತೆ ಪ್ರಸಂಗ ಮುಗಿಯದಿರುವಾಗ ಕೆಲವು ಪದ ಸನ್ನಿವೇಶಗಳನ್ನು ಕಡಿತಗೊಳಿಸಿ ಮಂಗಳ ಹಾಡಿಬಿಡುತ್ತಾರೆ. ಹಲವು ಮುಖ್ಯ ಕಲಾವಿದರಿಗೆ ಪದಗಳನ್ನು ಲೆಕ್ಕ ಮಾಡಿ ಕೊಡುವ ಅನಿವಾರ್ಯತೆ ಬಂದು ಕಲಾವಿದರ ಪೂರ್ಣ ಸಾಮಾರ್ಥ್ಯ ರಂಗದಲ್ಲಿ ಪ್ರದರ್ಶನಗೊಳ್ಳುವುದೇ ಇಲ್ಲ. ಕೊನೆಗೆ ವೇಶ ಹಾಕಿದ್ದಕ್ಕೆ ಹರಕೆ ಸಲ್ಲಿಸಿ ಹೋಗುವ ವಾಡಿಕೆಯೂ ಇಲ್ಲದಿಲ್ಲ. ಸಮಯ ಮೀರಿ ಹೊದಮೇಲೆ ಸಂಚಾಲಕನಾಗಲಿ ಕಲಾವಿದರಾಗಿ ಏನು ಮಾಡುವುದು ಸಾಧ್ಯವೂ ಇಲ್ಲ. ಪ್ರೇಕ್ಷಕನೂ ಯಾವುದನ್ನು ನಿರೀಕ್ಷೆಯಿಟ್ಟು ಬಂದನೋ ಆ ನಿರೀಕ್ಷೆ ಈಡೇರಿದೆಯೋ ಇಲ್ಲವೋ ಎಂಬ ಸಂದಿಗ್ಢದಲ್ಲೇ ಸಮಾಧಾನ ತಾಳಿಕೊಳ್ಳುವ ಅನಿವಾರ್ಯತೆಯಲ್ಲಿ ಕರಗುತ್ತಾನೆ.

ಕರಪತ್ರದಲ್ಲಿ ಅಥವಾ ಜಾಹೀರಾತಿನಲ್ಲಿ ಅದು ಇದು ಎಂದು ಗಿಮಿಕ್ ಮಾಡಿ ಜನ ಸೇರಿಸುವ ವ್ಯಾಪಾರಿ ಮನೋಭಾವಕ್ಕೆ ಪ್ರೇಕ್ಷಕ ಮಾತ್ರವಲ್ಲ ನಿಜ ಅರ್ಥದಲ್ಲಿ ಯಕ್ಷಗಾನ ಎಂಬ ಕಲೆಯು ಬಲಿಪಶುವಾಗುವುದು ಅರಿವಿಗೆ ಬರುವುದೇ ಇಲ್ಲ. ಕೆಲವು ವರ್ಷ ಮೊದಲು ಕಲಾಕ್ಷೇತ್ರದಲ್ಲಿ ತೆಂಕು ಬಡಗು ಪೈಪೋಟಿಯ ಸ್ಪ್ರರ್ಧಾತ್ಮಕ ಯಕ್ಷಗಾನ ಆಯೋಜನೆಗೊಂಡಿತ್ತು. ಕರಪತ್ರದಲ್ಲಿನ ಕಲಾವಿದರ ಪಟ್ಟಿ ನೋಡಿ ಭರ್ಜರಿ ಆಟದ ನಿರೀಕ್ಷೆಯಲ್ಲಿ ಹೋದರೆ ಪ್ರೇಕ್ಷ್ಕರ ಜಗಲ ಗದ್ದಲ ನೋಡಿ ಹೇಸಿಹೋಗೆ ಅರ್ಧದಲ್ಲೇ ವಾಪಾಸು ಬರುವಾಗ ಎರಡು ಘಂಟೆ ರಾತ್ರಿಯವರೆ ಬರಿದೇ ನಿದ್ದೆಗೆಟ್ಟೆನಲ್ಲ ಅನ್ನಿಸಿತ್ತು. ಇಲ್ಲಿ ಸೋತದ್ದು ಯಾವುದು? ಕಲಾವಿದರೇ? ಸಂಘಟಕರೆ? ಇಲ್ಲ ಟಿಕೆಟ್ ತೆಗೆದು ಕುಳಿತ ಪ್ರೇಕ್ಷಕನೆ? ಹಾಲ್ ತುಂಬ ಪ್ರೇಕ್ಷಕ ಸೇರಿದಮೇಲೆ ಸಂಘಟಕರು ಸೋಲುವ ಪ್ರಶ್ನೆಯೇ ಇಲ್ಲ. ಕಲಾವಿದರಿಗೂ ಅಷ್ಟೆ. ಉಚಿತವಾದ ಆದರ ಗೌರವಗಳು ಸಿಕ್ಕಿರುತ್ತದೆ. ಪ್ರೇಕ್ಷಕನಿಗೆ ತಾನು ಎಲ್ಲಿ ಸೋತೆ ಎಂಬುದರ ಅರಿವೇ ಇರುವುದಿಲ್ಲ. ಬದಲಾಗಿ ಸೋತು ಹೋದದ್ದು ಯಕ್ಷಗಾನ ಎಂಬ ಕಲೆ.

ಇದಕ್ಕಿಂತ ಭಿನ್ನವಾಗಿ ಗಮನಿಸಿದರೆ ಎರಡು ಮೂರು ಮುಖ್ಯ ಕಲಾವಿದರಿರುವ ಯಕ್ಷಗಾನವಾಗಲಿ ತಾಳಮದ್ದಲೆಯಾಗಲಿ ಅಲ್ಪ ಸಮಯದಲ್ಲೇ ಅದ್ಭುತವಾಗಿ ಮೂಡಿಬರುತ್ತದೆ. ಕಲಾವಿದರಿಂದಲೂ  ಸಮಯದ ಕಟ್ಟು ಪಾಡು ಇಲ್ಲದೆ ತಮ್ಮ ಪೂರ್ಣ ಸಾಮಾರ್ಥ್ಯ ಹೊರಹೊಮ್ಮಲ್ಪಡುತ್ತದೆ. ಸನ್ನಿವೇಶ ಪದವಿಂಗಡನೆಯ ಸರ್ಕಸ್ಸು ಇರುವುದಿಲ್ಲ, ಕಲಾವಿದರ ಅವಗಣನೆಯೂ ಇರದೆ ಪೂರ್ಣವಾದ ಗಮನ ರಂಗದ ಮೇಲೆಯೇ ಹಾಯಿಸುವ ಹಾಗೇ  ಆಗುತ್ತದೆ. ಮುಖ್ಯವಾಗಿ ಯಕ್ಷಗಾನದ ಪ್ರದರ್ಶನದಲ್ಲಿ ಅಧ್ದೂರಿತನ ತಾನೇ ತಾನಾಗಿ ವೈಭವೀಕರಿಸಲ್ಪಡುತ್ತದೆ. ಯಕ್ಷಗಾನ ವೈಭವೀಕರೀಸುವುದು ಅಂದರೆ. ಅದು ವೇದಿಕೆಯ ಹೊರಗಿನ ಸೌಂದರ್ಯದಲ್ಲಿ ಅಲ್ಲ. ಸರಳವಾದ ರಂಗಸ್ಥಳ , ಉತ್ತಮ ಹೀಮ್ಮೇಳ ಸೂಕ್ತ ಕಲಾವಿದರಗಡಣ ಮತ್ತು ವೇಷಭೂಷಣ ಇವಿಷ್ಟೆ.ಯಕ್ಷಗಾನದಲ್ಲಿ ಬಹುವಂಶವೂ ಸಾಂಕೇತಿಕ. ಎಲ್ಲವೂ ಇಲ್ಲಿ ಪ್ರತಿನಿಧೀಕರಿಸಲ್ಪಡುತ್ತದೆ.  ಈ ಚೌಕಟ್ಟನ್ನು ಮೀರಿ ಅದ್ಧೂರಿತನ ಮೆರೆಯುತ್ತದೆ ಎಂದರೆ ಅದು ವಿಷಾದನೀಯ. ಪ್ರದರ್ಶನದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಸ್ಪ್ರರ್ಧೆ ಅನಿವಾರ್ಯ ಅಂತ ಒಪ್ಪಿಕೊಂಡರು ಸ್ಪರ್ಧೆ ವೈಶಮ್ಯಕ್ಕೆ ಕಾರಣವಾದರೆ? ಎಲ್ಲರೂ ನಿರಾಳವಾಗಿ ಕುಳಿತು ಕಲೆಯ ಅಸ್ವಾದಿಸುವಂತಾಗಬೇಕು. ರಂಗದ ಮೇಲಿನ ಸನ್ನಿವೇಶಕ್ಕೆ ಸಮ್ಮೋಹಿತರಾಗಿ ಉಸಿರು ಕಟ್ಟಬೇಕೆ ಹೊರತು ರಂಗದ ಹೊರಗಿನ ಚಟುವಟಿಕೆ ಅದಕ್ಕೆ ಕಾರಣವಾಗಬಾರದಲ್ಲವೆ? ಸಂಸ್ಕೃತರ ಸುಸಂಸ್ಕೃತರ ಕಲೆ ಸಹಜ ಗುಣದಿಂದಲೇ ವೈಭವೀಕರಿಸಬೇಕು. ಈ ಗುಣ ಯಕ್ಷಗಾನದ ಅಂತರಂಗದಲ್ಲಿ ಸಾಕಷ್ಟು ಇದೆ. ಅದರ ಅರಿವಿದ್ದೂ ಮತ್ತೂ ಅನಾವಶ್ಯಕ ಅದ್ದೂರಿತನಕ್ಕೆ ತೊಡಗುತ್ತೇವೆ ಎಂದರೆ ಅದು ಆ  ಶ್ರೀಮಂತ ಕಲೆಯ ಅಂತರಂಗವನ್ನು ಅರಿಯದೆ  ಅದರ ಸಹಜ ಸಾಮಾರ್ಥ್ಯವನ್ನು  ಅನುಮಾನಿಸಿದಂತೆ ಅಲ್ಲವೆ? ಎಲ್ಲ ಬ್ಯಾನರ್ ಗಳ ರಾಶಿ, ಇನ್ನಿತರ ಅನಗತ್ಯ ವೈಭವದ ಮಧ್ಯೆ ಯಕ್ಷಗಾನ ಎಲ್ಲಿದೆ ಎಂಬುದನ್ನು ಹುಡುಕುವ ಕಾಲ ಬಾರದಿರಲಿ..

Saturday, June 11, 2011

ಇಂದಿನ ಪ್ರಸಂಗ.......... ಪೂರ್ವರಂಗ...!!!



ಇತ್ತೀಚೆಗೆ ಒಂದು ಯಕ್ಷಗಾನ ಜಾಹೀರಾತು ನೋಡಿ ಬದಲಾದ ಕಾಲಗತಿಯ ಬಗ್ಗೆ ಆಶ್ಚರ್ಯವಾಯಿತು.ಅಂದಿನ ಪ್ರಸಂಗದ ಹೆಸರಿನೊಂದಿಗೆ  ವಿಶೇಷವಾಗಿ ಸಂಪೂರ್ಣ ಪೂರ್ವರಂಗ ಎಂದು ಉಲ್ಲೇಖಿಸಿದ್ದರು. ಆಯೋಜಕರ ಸದುದ್ದೇಶ ಪರಂಪರೆಯ ಬಗೆಗಿನ ಕಾಳಜಿ ಶ್ಲಾಘನೀಯ. ಆದರೂ ಇಲ್ಲಿ ಬದಲಾದ ಕಾಲಗತಿಯ ಬಗ್ಗೆ ಒಂದು ಬಾರಿ ಮನ ಯೋಚಿಸಿತು.

ಯಕ್ಷಗಾನದಲ್ಲಿ ಪೂರ್ವರಂಗ ಎಂದರೆ ಅರಿಯದವರು ಕಡಿಮೆ. ಬಾಲ ಗೊಪಾಲ ಕೋಡಂಗಿ ಇತ್ಯಾದಿ ವೇಶಗಳ ಸಂಪ್ರದಾಯಬದ್ದ ಕುಣಿತ. ಯಕ್ಷಗಾನ ಪ್ರಸಂಗ ಆರಂಭಕ್ಕಿಂತ ಮೊದಲು ಇದು ಸಂಪ್ರದಾಯ. ಹೆಚ್ಚಾಗಿ ದೇವಸ್ಥಾನ ಮೇಳಗಳಲ್ಲಿ ಇದೂ ಒಂದು ಹರಕೆಯ ರೂಪದಲ್ಲೋ, ಸಂಪ್ರದಾಯ ರೂಪದಲ್ಲೋ ಆರಾಧನಾ ಕ್ರಿಯೆಯಾಗಿ ಬಳಕೆಯಲ್ಲಿದೆ. ವಿಶೇಷವಾದ ಖಾಸಗಿ ಅಥವಾ ಸಂಘ ಸಂಸ್ಠೆಗಳ ಯಕ್ಷಗಾನ ಕಾರ್ಯಕ್ರಮದಲ್ಲಿ ಇದನ್ನು ಉಪೇಕ್ಷಿಸುವುದು ಮಾಮೂಲು ಸಂಗತಿ. ಆದರೆ ಬದಲಾದ ಕಾಲಗತಿ ಅಂದರೆ ಇದುವೆ. ಮೇಳಗಳಲ್ಲಿ ಇದು ಕುಂಠಿತವಾಗಿ ಈಗ ಖಾಸಗಿಯಾಗಿ ಈ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ.

ಮೊದಲೆಲ್ಲ ನಾವು ಆಟಕ್ಕೆ ಹೋಗುವಾಗ ಈ ಪೂರ್ವ ರಂಗದ ಸಮಯವನ್ನು ತಪ್ಪಿಸಿಯೇ ಹೋಗುತ್ತಿದ್ದೆವು. ಇದೊಂದು ರಗಳೆಯ ಕಾರ್ಯಕ್ರಮದಂತೆ ಭಾಸವಗುತ್ತಿದ್ದದ್ದು ಸುಳ್ಳಲ್ಲ. ಅದರೆ ಅದರ ಮಹತ್ವದ ಅರಿವಾಗುವುದು ಅದರ ಮೌಲ್ಯದ ಅರಿವಾದಾಗಲೇ. ಬದಲಾದ ಕಾಲಗತಿಗೆ ಅದು ಎಂದಲ್ಲ ಎಲ್ಲವೂ ಬದಲಾಗುತ್ತ ಹೋಗುತ್ತಿದೆ. ಮೊದಲೆಲ್ಲ ಮದುವೆ ಅಥವಾ ಇನ್ನಿತರ ಸಮಾರಂಭಕ್ಕೆ ಊಟಕ್ಕೆ ಹೋದರೆ ಭೂರೀ ಭೋಜನವೆಂದರೆ ಅಲ್ಲಿ ಊಟದ ಪ್ರಧಾನ ಭಾಗವೇ ಅನ್ನ. ಅನ್ನ ಸಂತರ್ಪಣೆ ಎನ್ನುವುದೇ ಅದಕ್ಕಲ್ಲವೆ. ಅದನ್ನೆ ನೈವೇದ್ಯ ಎಂದು ಬಡಿಸುವುದು ಪದ್ದತಿ. ಆವಾಗ ಅನ್ನದ ಬಗ್ಗೆ ಪ್ರೀತಿಯೂ ಅಷ್ಟೇ ಗೌರವ ಭಾವನೆಯೂ ಉಂಟಾಗುತ್ತದೆ. ಆದರೆ ಇಂದು  ನೋಡಿ ಅನ್ನ ಬಿಟ್ಟು ಬೇರೆಲ್ಲ ಭಕ್ಷ್ಯಗಳು ಇರುತ್ತವೆ. ಅನ್ನ ಬೇಕಾದರೆ ಕೇಳಿ ಬಡಿಸಿಕೊಂಡರೆ ಒಂದಿಷ್ಟು ತಿನ್ನಬಹುದು. ಅನ್ನವೇ ಇಲ್ಲದಿದ್ದ ಭೋಜನ ಕೂಟ... ಹೇಗಿದೆ ಬದಲಾದ ಕಾಲಗತಿ?  ಮುಂದೊಂದುದಿನ ಬರಬಹುದು ಇಂದಿನ ಊಟಕ್ಕೆ ವಿಶೇಷ ಏನು .... ಬೇಕಾದಷ್ಟು ಅನ್ನ ಮಾಡಿದ್ದರು..!! ಹಾಗಾಗಿ ಯಾವುದನ್ನು ಯಾರನ್ನೂ ಪ್ರಮೇಯ ಮಾಡುವ ಹಾಗಿಲ್ಲ. ಮೂಕ (ಕೆಲವೊಮ್ಮೆ ಮೂರ್ಖ) ಪ್ರೇಕ್ಷಕನಂತೆ ನೋಡುವುದಷ್ಟೇ ಕೆಲಸ. ಇಲ್ಲೂ ಹಾಗೆ ಮುಂದೆ ಓಡಿದ ಕಾಲ ಹಿಂದಕ್ಕೆ ಬರುವುದುಂಟು... ಇಂದಿನ ವಿಶೇಷ ಬಾಳೆ ಏಲೆ ಊಟ..ಅಲ್ಲಿ ಅದು ವಿಶೇಷವಾಗುವಾಗ ಇಲ್ಲಿ ಇದು ವಿಶೇಷ.. ಇಂದು ಪೂರ್ವರಂಗ ಇದೆ.

ಮುಂದೊಂದು ದಿನ ಬರಬಹುದು... ಚಿಕ್ಕದಾದ ಪ್ರಸಂಗ.., ಅಗ್ರಪೂಜೆಯ ಹಾಗಿರುವ ಪ್ರಸಂಗವಿರಿಸಿ ಹೆಸರಿಗೊಸ್ಕರ ಇರಿಸಿ ಇಂದಿನ ಪ್ರಸಂಗ..!!! ಪೂರ್ವರಂಗ...!!! ಈಗೆಲ್ಲ ಪೂರ್ವರಂಗ ಕಥಾಭಾಗದ ಮೊದಲು ಹರಕೆಯೊ ಪೂಜಾವಿಧಾನದಂತೆ ಮೊದಲೇ ನಡೆದುಬಿಡುತ್ತದೆ. ಸಣ್ಣ ಮಕ್ಕಳಷ್ಟೇ ಇದರ ಪ್ರೇಕ್ಷಕ. ಹಿರಿಯರಾರಿಗೂ ಇದು ಗಂಭೀರ ಅನ್ನಿಸುವುದಿಲ್ಲ. ಆದರೂ ಮುಂದೊಂದು ದಿನ,  ಪ್ರಧಾನ ಪ್ರೇಕ್ಷಕ ಬರಬೇಕೆಂದೋ ಗಣ್ಯ ಅತಿಥಿಗಳಿಗಾಗಿಯೋ ಈ ಪೂರ್ವ ರಂಗ ಉತ್ತರ ರಂಗವಾಗಿ ಚಿಕ್ಕದಾದ ಕಥಭಾಗದ ಪ್ರಸಂಗ ಮೊದಲೇ ಆಗಿಬಿಡಬಹುದು.ಕಾಲದ ಮಹಿಮೆಯ ಬಲ್ಲವರಾರು? ಪ್ರಸಂಗಕ್ಕಿಂತ ದೊಡ್ಡದಾಗಿ ಕರಪತ್ರದಲ್ಲಿ ಪೂರ್ವ ರಂಗದ ಹೇಸರೇ ಕಾಣಬಹುದು. ಮಾತ್ರವಲ್ಲ  ಇದರಲ್ಲಿ ಭಾಗವಹಿಸುವ ಪ್ರಧಾನ ಕಲಾವಿದರನ್ನು ಕೂಡ ವಿಶೇಷವೆಂಬಂತೆ ಉಲ್ಲೇಖಿಸಬಹುದಲ್ಲವೆ? ಒಟ್ಟು ಗೊಂದಲವಾಗಿ ಯಾವುದು ಯಕ್ಷಗಾನ ಎಂಬ ಅಯೋಮಯ ಸನ್ನಿವೇಶ ಬರಬಹುದು.          

ಯಾವುದೇ ಪರಿವರ್ತನೆಯಲ್ಲಿ ಒಳಿತು ಕೆಡುಕನ್ನು ಯೋಚಿಸುವುದು ಕ್ರಮ. ಹಾಗೇನೇ ಬದಲಾದ ಕಾಲಕ್ಕೆ ತಕ್ಕಂತೆ ಬದಲಾದ ಕಾಲಮಿತಿ ಯಕ್ಷಗಾನದ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿವೆ. ಇದರ ಬಗ್ಗೆ ಅಭಿಪ್ರಾಯ ಹೇಳುವಾಗ ನನ್ನಲ್ಲೆ ಕೆಲವೊಮ್ಮೆ ಪ್ರಶ್ನಿಸುವುದುಂಟು. ವಾಸ್ತವದಲ್ಲಿ ಕಾಲಮಿತಿ ಯಕ್ಷಗಾನದ ಬಗ್ಗೆ ನನ್ನಲ್ಲೇನು ಸದಭಿಪ್ರಾಯವಿಲ್ಲ. ಹಾಗೆಂದು ಪೂರ್ಣ ಪ್ರಮಾಣದ ಇಡೀ ರಾತ್ರಿಯ ಯಕ್ಷಗಾನ ನಾನು ನೋಡದೆ ಅದೆಷ್ಟು ಸಮಯವಾಗಿಬಿಟ್ಟಿದೆ.ಈ ಕಾಲಮಿತಿ ಎಂಬ ಯಕ್ಷಗಾನ ಪ್ರಾಕಾರ ರೂಪುಗೊಳ್ಳದಿರುತ್ತಿದ್ದರೆ ನಾನು ಯಕ್ಷಗಾನವನ್ನು ಹಗಲು ಕನಸೆಂದು ಮರೆತುಬಿಡುವ ಪ್ರಮೇಯವಿತ್ತು. ಹೀಗಿದ್ದರೂ ಪೂರ್ಣ ರಾತ್ರಿಯ ಯಕ್ಷಗಾನವನ್ನು ನೋಡಬೇಕೆಂಬ ಆಸೆಯಂತು ಇದ್ದೇ ಇದೆ. ಯಕ್ಷಗಾನದ ನಿಜವಾದ ಸೊಗಸಿರುವುದು ಅದರಲ್ಲೇ.. ಕಾಲಮಿತಿ ಏನಿದ್ದರು ಊರಿನ ನೆನಪನ್ನು ಮಾಡಲಷ್ಟೆ ಸಾಧ್ಯ. ಒಳಿತು ಕೆಡುಕು ಏನಿದ್ದರೂ ಮರೆಯಾಗುತ್ತಿರುವ ಪೂರ್ವ ರಂಗ ಹೊಸ ರೂಪದಲ್ಲಿ ಪ್ರತ್ಯಕ್ಷವಾಗುವ ಬಗೆ ಮಾತ್ರ ವಿಶಿಷ್ಟವಾಗಿದೆ.   ಈ ರೀತಿಯಲ್ಲಿ ಪೂರ್ವರಂಗ ಜನಪ್ರಿಯವಾಯಿತೆಂದರೆ ಅದರಲ್ಲಿ ನೈಪುಣ್ಯತೆ ಸಾಧಿಸಿದವರಿಗೆ ಒಮ್ಮಿಂದೊಮ್ಮೆಲೆ ಬೇಡಿಕೆ ಬರಬಹುದು. ಇಲ್ಲ ಬಹುತೇಕ ಮಂದಿಗೆ ಅದರ ಅಧ್ಯಯನ ಅನಿವಾರ್ಯವಾಗಬಹುದು. ಒಂದೆರಡು ಪ್ರದರ್ಶನದಿಂದ ದೇವೆಂದ್ರನ ಬಲ ವೇಶ ಮಾಡುತ್ತಿದ್ದವರು ಬಣ್ಣದ ವೇಶಕ್ಕೊ ಅಥವಾ ಇನ್ನಿತರ ವೇಶಕ್ಕೊ ಭಡ್ತಿಯನ್ನು ಸ್ವಯಂ ಘೋಷಿಸುವವರು ಬಹುಷಃ ಅವರ ಮಟ್ಟಿಗೆ ಹಿಂಭಡ್ತಿಯನ್ನು ಬಯಸಬಹುದೇನೋ? ಮೊದಲಿನ ಹಿರಿಯ ಭಾಗವತರಿಗೆ ಪೂರ್ವ ರಂಗದಲ್ಲಿ   ಹಿಡಿತವೂ ಜ್ಞಾನವೂ ಇರುವುದರಿಂದ ಅವರಿಗೆ ಬೇಡಿಕೆ ಬರಬಹುದೆಂದು ತಿಳಿಯುವ ಹಾಗಿಲ್ಲ. ಯಾಕೆಂದರೆ ಪೂರ್ವ ರಂಗವನ್ನು ಪ್ರದರ್ಶಿಸುವುದು ಅಥವಾ ಪ್ರಾತ್ಯಕ್ಷಿಕೆ ಕಮ್ಮಟವನ್ನು ಏರ್ಪಡಿಸುವುದು ಒಂದು ರೀತಿಯಲ್ಲಿ ಸ್ವಯಂ ಜಾಹೀರಾತಿನ ಮತ್ತು ಪ್ರತಿಷ್ಠೆಯ ಕ್ರಮವೇ ಕಂಡು ಬರುವುದು ಅಧಿಕ. ಅದರ ಬಗ್ಗೆ ಕಾಳಜಿ ಇದ್ದು ಕೇವಲ ಕೆಲವೇ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ, ಮತ್ತು ಅವುಗಳಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನ ಮತ್ತು ತಿಳುವಳಿಕೆಯ ಲಾಭವನ್ನು ಪಡೆಯುವುದನ್ನು ಕಾಣಬಹುದು.  ಮಿಕ್ಕುಳಿದವುಗಳಲ್ಲಿ ಹಿರಿಯ ಕಲಾವಿದರ ಬಗ್ಗೆ ಲಕ್ಷ್ಯವೇ ಇರುವುದಿಲ್ಲ. ಯಾಕೆಂದರೆ ಅದು ಒಟ್ಟು ಒಂದು ಕಾರ್ಯಕ್ರಮ ಎಂಬಲ್ಲಿಗೆ ಸೀಮಿತ. ಹಾಗಾಗಿ ಹಿರಿಯರಾದರೇನು ಯಾರದರೇನು ಒಟ್ಟಿನಲ್ಲಿ ಲೆಕ್ಕ ಭರ್ತಿಯಾಗಬೇಕು,  ಕಾರ್ಯಕ್ರಮ ನಡೆಯಬೇಕು.       

ಈ ರೀತಿ  ಪೂರ್ವ ರಂಗ ಆಯೋಜನೆಗೊಳ್ಳುವುದರಿಂದ ಅದು ಬಹು ಪ್ರಾಮುಖ್ಯತೆಯನ್ನು ಗಳಿಸುತ್ತದೆ. ಈಗಲೂ ಎಲ್ಲಿಯಾದರೂ ಪೂರ್ಣ ಪ್ರಮಾಣದ ಯಕ್ಷಗಾನ ಬಯಲಾಟ ಕಾಣುವ ಅವಕಾಶ ಒದಗಿಬಂದಲ್ಲಿ ಸುಲಭದಲ್ಲಿ ಸಿಕ್ಕರು ನಾವೆಷ್ಟು ಪೂರ್ವರಂಗವನ್ನು ನೋಡುತ್ತೇವೆಯೊ ಅದರ ಬಗ್ಗೆ ಭರವಸೆ ಇಲ್ಲ. ಈಗಲೂ ನೆನಪಿದೆ.. ಸಾಯಂಕಾಲದ ಹೊತ್ತು ಆರಂಭವಾಗುವ ಕಟೀಲು ಮೇಳದ ಆಟಗಳನ್ನು ನೋಡುತ್ತಿದ್ದುದು.ನ್ ನಾವುಗಳು ಬಾಲಕರು  ಬಾಲಗೋಮಾಲ ಕೋಡಂಗಿಗಳು ರಂಗಸ್ಥಳದಿಂದ ದೂರವಿರುವ ಚೌಕಿಗೆ ಚಲಿಸುವಾಗ ಕೇಕೆ ಹಾಕಿಕೊಂಡು ಭಯ ಭಕ್ತಿಯಿಂದ ಹಿಂಬಾಲಿಸುತ್ತಿದ್ದುದು. ಕೋಡಂಗಿಯ ಚಿತ್ರವಿಚಿತ್ರ ಹಾವಭಾವ ಹಾಸ್ಯಕ್ಕೆ ನಗುತ್ತಿದ್ದುದು. ಪೂರ್ವರಂಗಕ್ಕಾಗಿಯೇ ಮೀಸಲಾದ ಕಾರ್ಯಕ್ರಮಗಳಲ್ಲಿ ಇದೆಲ್ಲ ಇರಲಾರದು.


ಹಾಗಾಗಿ ಹೀಗೆ ಪ್ರದರ್ಶನಗೊಳ್ಳುವುದು ಒಂದು ರೀತಿಯಲ್ಲಿ ಸೂಕ್ತವೇ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಇದನ್ನು ನೋಡುವ ಅನಿವಾರ್ಯತೆಯೂ ಬಂದು ಅದರ ಮಹತ್ವದ ಅರಿವು ಆಗಬಹುದು. ಯಕ್ಷಗಾನವೇ ಆಗಲಿ ಪೂರ್ವರಂಗವೇ ಆಗಲಿ ಬೆಂಗಳೂರಿನಂತಹ ನಗರದಲ್ಲಿ ಅಯೋಜಿಸುವಾಗ ಎಷ್ಟು ಶ್ರಮವಹಿಸಬೇಕೋ ಅಷ್ಟೇ ಜಾಗರೂಕರಾಗಿ ಶ್ರಧ್ಡಾಪ್ರವೃತ್ತಿಯಿಂದ ನೆರವೇರಿಸಬೇಕು. ಊರಿನ ಹಳ್ಳಿಯಂತೆ ಇಲ್ಲಿ ನಡೆಸುವುದು ಸಾಧ್ಯವೂ ಇಲ್ಲ. ಊರಿನಲ್ಲಿ ಮಾಡಿ ಉಣ್ಣುವ ತಿಂಡಿಯನ್ನು ಇಲ್ಲಿಯೂ ಊರಿನ ನೆನಪಲ್ಲಿ ಮಾಡಿ ತಿಂದಂತೆ ಅದರ ಛಾಯೆ ಮಾತ್ರವೆ ಸಾಧ್ಯ. ಬೆಂಗಳೂರಿನ ಮಂಗಳೂರು ಸ್ಟೊರ್ಸ್ಗ್ ಗಳಲ್ಲಿ  ಇಲ್ಲೇ ಮಾಡಿದ ತಿಂಡಿ ಪದಾರ್ಥಗಳನ್ನು ಊರಿಂದ ತರಿಸಿದ್ದು ಎಂದು ಮಾರಾಟ ಮಾಡಿದ ಹಾಗೆ.ನಾವು ಮಂಗಳೂರಲ್ಲೇ ಇದ್ದೇವೋ ಎಂಬ ಭ್ರಮೆಯಲ್ಲಿ ಅದನ್ನು ಕೊಂಡು ತಿಂದ ಹಾಗೆ. ಸಹಜ ವಾತಾವರಣದಿಂದ ಬಿನ್ನವಾಗಿ ಕೊಂಡು ಹೋಗಿ ಅದನ್ನು ಸವಿದು ನೋಡುವ ಜಾಯಮಾನ ನಮ್ಮದು. ಊರಿನದ್ದು ಬೆಂಗಳೂರಲ್ಲಿ ..ಬೆಂಗಳೂರಿನದು ಊರಲ್ಲಿ.

 ಪೂರ್ವ ರಂಗವೆಂದರೆ ಪೂರ್ವ ಭಾವಿಯಾಗಿ ನಮ್ಮನ್ನು ಉತ್ತರಾರ್ಧಕ್ಕೆ  ಸಿದ್ದಗೊಳಿಸುವಿಕೆ. ಹಂತ ಹಂತವಾಗಿ ಯಕ್ಷಲೋಕಕ್ಕೆ ಸೆಳೆದು ತೆಗೆದುಕೊಂಡು ಹೋಗುವಂತಹ ಈ ಸಾಂಪ್ರಾದಾಯಿಕ ಕ್ರಮ ಅನಿವಾರ್ಯ ಮತ್ತು ಔಚಿತ್ಯಪೂರ್ಣವೂ ಆಗಿದೆ.  ಕೇವಲ ಪ್ರತಿಷ್ಠೆಗಾಗಿ ಅಥವಾ ಇನ್ನಾವುದೋ ಸ್ವಾರ್ಥಸಾಧನೆಗಾಗಿ ಇದು ಉಪಯೋಗವಾಗದೆ ಕೇವಲ ಯಕ್ಷಗಾನ ಮತ್ತು ಅದರದ್ದೇ ಅಂಗವಾದ ಪೂರ್ವ ರಂಗದ ಮೇಲಿನ ಕಾಳಜಿಯಿಂದ ಅಧ್ಯಯನ ಶೀಲ ಕಾರ್ಯಕ್ರಮಗಳು ಇನ್ನೂ ನಡೆಯಬೇಕು. ಬದಲಾಗುವ ಅಭಿರುಚಿ ಸದುದ್ದೇಶ ಮತ್ತು ಸದ್ಭಾವನೆಯಿಂದ ಹೊರಹೊಮ್ಮಲಿ. . ಕಾಪಟ್ಯ ರಹಿತ ಕಾರ್ಯಗಳಿಗೆ ಯಶಸ್ಸು ಬೆನ್ನ ಹಿಂದೇ ಇರುತ್ತದೆ.




            

Thursday, May 19, 2011

ಬೇಕುಗಳು ಇಲ್ಲ.. ಬೇಡವಾದವುಗಳು ಇಲ್ಲವೇ ಇಲ್ಲ


“ಯಾವಾತನಿಗೆ ಬೇಕುಗಳೇ ಇಲ್ಲವೋ ಆತನಿಗೆ ಬೇಡದವುಗಳೂ ಇಲ್ಲ” ಅಂದರೆ ನಿಂದನೆ ಮತ್ತು ಅಭಿನಂದನೆ ಎರಡು ಸಮಾನವಾಗಿ ಇರುತ್ತದೆ. ಮಾನಸಿಕವಾಗಿ ಇದು ಸ್ಥಿರತೆಯನ್ನು ತೋರಿಸುತ್ತದೆ.ಮೇಲಿನ ಮಾತುಗಳು ಇತ್ತೀಚೆಗಿನ ಕೆಲವು ಸಂದರ್ಭಗಳಲ್ಲಿ ಬಹುವಾಗಿ ನನ್ನನ್ನು ಕಾಡಿತ್ತು.

ಮಿತ್ರರೊಬ್ಬರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಧಿಕವಾಗಿ ಎಲ್ಲರೂ ಅಪರಿಚಿತರೇ  ಅಥವಾ ಹೊಸ ಪರಿಚಿತರು ಎಂದರೆ ಸರಿ. ಹಾಗಾಗಿ ಎಕಾಂಗಿಯಾಗಿಯೆ ಕುಳಿತಿದ್ದೆ. ಆವಾಗ ನನ್ನ ಪರಿಚಯ ಹಿಡಿದು ವ್ಯಕ್ತಿಯೊಬ್ಬರು ಬಂದರು “ ರಾಜ್ ರವರೆ ನಾನು....” ತಮ್ಮ ಪರಿಚಯ ಮಾಡಿಕೊಂಡರು. ಯಾರೆ ಆಗಲಿ ಮಾತು ತೊಡಗಿಸಿದರೆ ನಾನು ಸುಮ್ಮಗೆ ಕುಳಿತಿರುವನಲ್ಲ. ಅಪರಿಚಿತರೇ ಆಗಲಿ ಪರಿಚಿತರಂತೆ ಮಾತು ತೊಡಗಿಸುವುದು ನನ್ನ ಸ್ವಭಾವ. ಎಲ್ಲರಲ್ಲು ಸ್ನೇಹ ಸೌಹಾರ್ದವನ್ನು ಬಯಸುವವನಿಗೆ ಇದರಲ್ಲಿ ಯಾರಾದರೇನು ಎಂಬ ಭಾವ.

ನನ್ನ ಹೆಸರು ಹಿಡಿದು ಕರೆದರಲ್ಲ. ಒಂದು ರೀತಿಯ ಆತ್ಮೀಯತೆ ಆವಾಗಲೇ ಸ್ಪುರಿಸಿತ್ತು.ಇದು ಸಹಜವೂ ಅಲ್ಲವೇ. ಯಾರನ್ನೆ ಆಗಲಿ ಅವನ ವ್ಯಕ್ತಿತ್ವ ಮೂಲ ಸಂಕೇತವಾದ ಹೆಸರನ್ನು ಹಿಡಿದು ಕರೆದಾಗ ಗೌರವ ಬಾರದೆ ಇದ್ದೀತೆ? ಇದು ಯಾರದೇ ವ್ಯಕ್ತಿತ್ವಕ್ಕೆ ನಾವು ಮೊದಲು ಕೊಡುವ ಮನ್ನಣೆ. ಮಾತು ಮುಂದುವರಿಸುತ್ತಾ ಹೇಳಿಕೊಂಡರು.  ಅದು ನಮ್ಮ ಬೆಂಗಳೂರು ಯಕ್ಷಗಾನ ಕಾರ್ಯಕ್ರಮದ ಬಗ್ಗೆಯಾಗಿತ್ತು.  ನಮಗಂತೂ ಹಳೆಯದಾಗಿ ಬಿಟ್ಟ ಸವಿ ನೆನಪಿನ ಮರುಕಳಿಕೆಯಾಗಿತ್ತು. ಬೇಡ ಬೇಡವೆಂದು ನಾನು ಬಯಸಿದರೂ ಅದೇಕೋ ನನ್ನನ್ನು ಕಂಡಾಗ ಇಂದಿಗೂ ಸಹಜವಾಗಿ ಅದೇ ಪುನರಾವರ್ತನೆಯಾಗುತ್ತದೆ.ಬಹುಶಃ ಇನ್ನೊಂದು ಚಿಗುರು ಮೊಳೆಯದೆ ಇದು    ಮರೆಯಾಗದೇನೋ?  ಬಹಳ ಒಳ್ಳೆಯದಾಗಿತ್ತು. ಇತ್ತೀಚೆಗೆ ಅಂತಹ ಕಾರ್ಯಕ್ರಮ ನೋಡುವುದೇ ವಿರಳ ಇತ್ಯಾದಿ ಇತ್ಯಾದಿ  ಸಹಜವಾಗಿರುವ ಮಾತುಗಳು. ಕೆಲವೊಮ್ಮೆ ನನಗಾಗಿ ಮಾತುಗಳನ್ನು ಆಡುತ್ತಿರುವರೋ ಎಂದು ಮುಜುಗರ ಕೂಡ ಅನುಭವಿಸಿದ್ದಿದೆ.

ಹಾಗಾಗಿ ಈ  ಕಾರ್ಯಕ್ರಮದ ಬಗ್ಗೆ ಹೊಗಳಿ ಮಾತಾಡಿದಾಗ ಸ್ಠಿತಪ್ರಜ್ಞತೆಯನ್ನು ಕಾಪಾಡುವ ಬಯಕೆಯಾಗುತ್ತದೆ. ನಿಜಕ್ಕಾದರೆ ನಮ್ಮ ಬಳಗದಲ್ಲಿ ಯಾರೂ ಈ ಹೊಗಳಿಕೆಯನ್ನು ಖಂಡಿತ ಬಯಸಿಲ್ಲ. ಆದರೆ ಹೊಗಳಿಕೆ ಬಂದಾಗ ಮನೋಭಾವಕ್ಕನುಸರಿಸಿ ಖುಶಿ ಪಟ್ಟಿದ್ದೇವೆ. ನನ್ನ ಮಟ್ಟಿಗೆ ಹೇಳುವುದಾದರೆ ಮೇಲಿನ ವಾಕ್ಯ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ. ಯಾಕೆಂದರೆ ನಾನು ಯಾವುದನ್ನೂ ಹೆಚ್ಚಾಗಿ ಬಯಸಿದವನಲ್ಲ. ನನ್ನ ಅಥವ ನಮ್ಮ ಕಾರ್ಯದ ಬಗ್ಗೆ ನಮಗೆ ಮಾತ್ರ ಗೌರವ ಎಂಬ ಭಾವ ನಾವು ಮೊದಲು ತಳೆದದ್ದು. ನಮ್ಮ ಚಿಂತನೆಗಳಾಗಲಿ ಯೋಜನೆಗಳಾಗಲಿ ಯಾರದೇ ಮೇಲೆ ಹೇರುವ ಅಥವ ಅದನ್ನು ಅವರು ಹಿಂಬಾಲಿಸುವ ಅನಿವಾರ್ಯತೆಯನ್ನು ನಾವು ತಂದಿಡಲೇ ಇಲ್ಲ. ಕೇವಲ ನಮ್ಮ ದೃಷ್ಟಿಕೋನದ ಕಾರ್ಯಕ್ರಮ ಮಾತ್ರವೇ ನಮ್ಮ ಧ್ಯೇಯವಾಗಿತ್ತು. ಹಾಗಾಗಿ ನಾನಂತು ನಮ್ಮ ಕಾರ್ಯಕ್ರಮ ಹೇಗಾಗಿದೆ ಎಂದು ಯಾರಲ್ಲೂ ಕೇಳುವ ಗೋಜಿಗೆ ನಾನು ಹೋಗಲೇ ಇಲ್ಲ. ಇಂದಿಗೂ ಯಾರಲ್ಲೂ ನನಗೆ ಕೇಳುವ ಬಯಕೆಯೂ ಇಲ್ಲ. ನಮ್ಮ ಮನೆಯಲ್ಲಿ ಊಟ ಮಾಡಿದ ನಾವು ಇನ್ನೊಬ್ಬರಿಂದ ನಮ್ಮ ಅಡುಗೆಯ ಬಗ್ಗೆ ಕೇಳಿದಂತೆ ಅನ್ನಿಸಿಬಿಡುತ್ತದೆ. ಮೊದಲೊಮ್ಮೇ ಹೇಳಿದ್ದೆ ನಮ್ಮ ಮನೆ ಅಂಗಳದಲ್ಲಿ ಮಾಡುವಂತೆ  ಎಂದು..ಹಾಗಾಗಿ ಬಹು ನಿರೀಕ್ಷೆ ಏನು ಇಲ್ಲದೆ ಅತ್ಯಂತ ಅನಿರೀಕ್ಷಿತವನ್ನೇ ಈ ಕಾರ್ಯಕ್ರಮ ತಂದಿತ್ತು ಮಾತ್ರವಲ್ಲ ತರುತ್ತಾ ಇದೆ.

ಇದನ್ನೇ ಹೇಳುತ್ತ ಹೋದರೆ  ಅದು ಅತಿಯಾಗಿ ಬಿಡುವ ಭಯವೂ ಇದೆ. ಇದರ ಬಗ್ಗೆ ನಾವು ಹೇಳಿಕೊಳ್ಳುವುದೂ ಅತಿಯಾಗಿದೆ ಎನೋ ಹಲವು ಸಲ ಅನ್ನಿಸಿದ್ದಿದೆ. ಒಂದು ಕಾರ್ಯಕ್ರಮ ಮಾಡಿ ಅದನ್ನೆ ಹೇಳುತ್ತಾ ಇದ್ದಾರೆ. ಒಂದು ಹತ್ತು ಆಟ ಮಾಡಿ ನೋಡಲಿ ಆಗ ಅದರ ಕಷ್ಟ  ಗೊತ್ತಾಗುತ್ತದೆ. ಹೀಗೂ ಪ್ರತಿಕ್ರಿಯೆ ಬಂದದ್ದು ಇದೆ. ಆದರು ಒಂದು ಮಾತು ಇಲ್ಲು ಅನ್ವಯವಾಗುವುದು ಅಂದರೆ, ನಾನಾಗಲಿ ನಮ್ಮ ಬಳಗವಾಗ್ಲಿ  ಕಷ್ಟದ ಅರಿವಾಗಬೇಕೆಂದು ಕಾರ್ಯಕ್ರಮ ಮಾಡಿದ್ದಲ್ಲ. ಅಥವಾ ಯಾವೂದೋ ಸ್ಪರ್ಧೆಗಾಗಿ ಮಾಡಿ ಇದಕ್ಕೆ ಸಿಗುವ ಅಂಕಗಳ ಬಗ್ಗೆಯೂ ನಿರೀಕ್ಷೆ ಇರಿಸಲಿಲ್ಲ. ಹಾಗಿರುವಾಗ ಕಷ್ಟ ದ ಅರಿವಾಗುವ ಪ್ರಮೇಯವೆಲ್ಲಿ ಬಂತು. ಇದು ಅತ್ಯಂತ ಸಹಜ ಕಾರ್ಯಕ್ರಮ ಅಷ್ಟೆ. ಹಲವು ಸಲ ಹೇಳಿದ್ದಿದೆ ಯಾವುದೇ ಅತಿಯಾದ ನಿರೀಕ್ಷೆ ಇಲ್ಲ ಎಂದು. ಯಾರನ್ನೇ ಆಗಲಿ ಮೆಚ್ಚಿಸುವುದಕ್ಕಾಗಿ ಮಾಡಿದ್ದಲ್ಲ. ಮೆಚ್ಚಿದ್ದಾರೆ ಎಂದರೆ ನಮ್ಮ ಮನೋಭಾವಕ್ಕೆ ಸರಿಯಾದ ಸ್ಪಂದನೆ ಉಂಟು ಎಂದು ಅರ್ಥವಲ್ಲವೆ.? ಈ ಸ್ಪಂದನವನ್ನೂ ನಾವು ನಿರೀಕ್ಷಿಸಲಿಲ್ಲ. ಇದರ ಬಗ್ಗೆ ಕಟುವಾದ ವಿಮರ್ಶೆ ಇದ್ದರೂ ನಮ್ಮ ಮಟ್ಟಿಗೆ ನಾವು ಸಿದ್ದವಾಗಿ ಸ್ಥಿತಪ್ರಜ್ಞರಾಗಿಯೆ ಇದ್ದೆವು. ನಾವು ಸ್ಪರ್ಧಿಗಳು ಅಲ್ಲವಾದರೂ ನಮ್ಮನ್ನು ಸ್ಪರ್ಧಿಗಳಾಗಿ ಕಂಡರೆ,ಆ ಮೂಲಕ ನಮ್ಮ ಸೋಲು ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದರೆ ಏನು ಮಾಡಬಹುದು. ಪ್ರತಿಯೊಂದನ್ನು ಸದ್ಭಾವನೆಯಿಂದ ಸ್ನೇಹದಿಂದ ಕಂಡಾಗ ಸೋಲು ಗೆಲುವಿನ ಪ್ರಶ್ನೆಯೇ ಇಲ್ಲ. ಸ್ಪರ್ಧೆಯ ಮನೋಭಾವದಿಂದ ಹೆಜ್ಜೆ ಇರಿಸಿದಾಗ, ಎಲ್ಲಿ ಸೋಲಬಹುದೋ ಎಂಬ ಆತಂಕದಿಂದ ಪ್ರತಿಯೊಂದು ಹೆಜ್ಜೆಯೂ ಉದ್ವೇಗ ಭರಿತವಾಗುತ್ತದೆ. ಇದೆಲ್ಲ ಬಹಳ ಸೂಕ್ಷ್ಮವಾದ ವಿಚಾರಗಳು ಅರ್ಥವಾಗುವವರಿಗೆ ಅರ್ಥವಾಗುತ್ತದೆ. ಹಾಗಾಗಿ ವೇದಾಂತದ ಮಾತು ನೆನಾಪಾಗುವುದು ಬೇಕುಗಳು ಇಲ್ಲದವನಿಗೆ ಬೇಡವಾದವುಗಳು ಯಾವುದೂ ಇಲ್ಲ.

ಇಷ್ಟೆಲ್ಲಾ ಇದ್ದರೂ ಇನ್ನೂ ಒಂದು ಮಾತು ಅತಿ ಮುಖ್ಯವಾದದ್ದು ಎಂದರೆ  ಸ್ಪರ್ಧಿಯಲ್ಲದವನನ್ನು ಸ್ಪರ್ಧಾಕಣದಲ್ಲಿ ನಿಲ್ಲಿಸಿ ನೋಡು, ಇಲ್ಲಿ ಇಂತಹ ವಾತಾವಾರಣ ಇದೆ ಎಂದೆಲ್ಲ ಭಯಭೀತನನ್ನಾಗಿಸುವುದು. ಇದಕ್ಕೆಲ್ಲ ಕಾರಣ ಮಾನಸಿಕ ಕ್ಲೇಶ. ಜಗತ್ತನ್ನು ನಾವು ನೋಡುವ ದೃಷ್ಟಿಕೋನವನ್ನು ಅನುಸರಿಸಿಕೊಂಡು ಇದೆ. ಹಾಗಾಗಿ, ಅದು ಕೇವಲ ನನ್ನ ಅಂತರಂಗದ ಮಾತು.. ಒಳಾಂತರ್ಯದಿಂದ  ಹೇಳುವುದಾದರೆ ನನಗೆ ಇನ್ನೊಂದು ಕಾರ್ಯಕ್ರಮ ಮಾಡುವ ಬಯಕೆಯೇ ಇಲ್ಲ. ಪ್ರತೀಯೊಬ್ಬರ ನಿರೀಕ್ಷೆ ಮಾತ್ರ ಇದಕ್ಕೆ ವಿಪರೀತವಾಗಿ ಇದೆ. ಆದರೂ ನನ್ನ ಮನಸ್ಸು ಹೇಳುವುದಿದನ್ನೇ ಸವಿದ ಸ್ವಾದದ ರುಚಿ ಆರದಿರಲಿ ಎಂದು.