ಒಂದು ಸಲ ಕೆಲವು ಮಿತ್ರರೆಲ್ಲ ಸೇರಿ ವಾಹನವೊಂದರಲ್ಲಿ ದೇಶ
ಸಂಚರಿಸುತ್ತಾ ಕಾಡುಹಾದಿಯಲ್ಲಿ ಹೋಗುತ್ತಿದ್ದರು.
ಎಲ್ಲೋ ಒಂದು ಕಡೆ ಹಾದಿ ತಪ್ಪಿ ಎತ್ತೆತ್ತಲೋ ಹೋಗುತ್ತಿದ್ದಂತೆ ವಾಹನವೂ ಕೆಟ್ಟು ನಿಂತು
ತಾವೆಲ್ಲೆದ್ದೇವೆ ಎಂಬ ಪರಿವೆಯೇ ಇಲ್ಲವಾಗಿಬಿಟ್ಟಿತು. ಗೊಂದಲ ಗಾಬರಿಯಿಂದ ಎಲ್ಲರೂ ವಾಹನದಿಂದ ಇಳಿದು ಆಕಡೆ ಈ ಕಡೆ ಸುತ್ತಾಡಿದರೂ
ಎನೂ ತೋಚದಾಯಿತು. ಬಹಳ ಹೊತ್ತಿನವರೆಗೂ ಯಾವುದೇ ವಾಹನವಾಗಲೀ ಮನುಷ್ಯರಾಗಲಿ ಅತ್ತ ಸುಳಿಯಲಿಲ್ಲ.
ತುಂಬಾ ಹೊತ್ತಿನ ನಂತರ ಯಾವುದೋ ಮನುಷ್ಯ ಪ್ರಾಣಿಯಂತಿದ್ದ ವ್ಯಕ್ತಿಯೊಂದು ದೂರದ ಕಾಡ ಹಾದಿಯಲ್ಲಿ
ಸೌದೆಯ ಹೊರೆಯನ್ನು ಹೊತ್ತುಕೊಂಡು ಹೋಗುವುದನ್ನು ಕಂಡು ಪರಮಾತ್ಮನ ದರ್ಶನವಾದಂತೆ ಎಲ್ಲರು ಅತ್ತ
ದೌಡಾಯಿಸಿದರು. ಹತ್ತಿರ ಊರುಕೇರಿ ಇದ್ದು ಗ್ಯಾರೆಜ್ ಎನಾದರೂ ಸಿಗುವುದೇ ಎಂಬುದನ್ನು ವಿಚಾರಿಸ
ಹತ್ತಿದರು. ಅಲ್ಲಿ ಕಂಡ ವ್ಯಕ್ತಿ ಯಾವುದೋ ಅದಿವಾಸಿ. ದೇಶದ ಯಾವುದೋ ಒಂದು ಪ್ರದೇಶವಾದ ಅಲ್ಲಿನ ಆ
ಆದಿವಾಸಿ ಮನುಷ್ಯ ಏನು ಮಾತನಾಡುತ್ತಾನೆ ಎಂದು ಯಾರಿಗೂ ತಿಳಿಯದೇ ಹೋಯಿತು. ಪ್ರಯಾಣಿಕರಲ್ಲಿ
ಹಲವಾರು ಭಾಷೆ ಬಲ್ಲ ಪ್ರತೀಯೊಬ್ಬರೂ ತಿಳಿದ ಎಲ್ಲಾ ಭಾಷೆ ಪ್ರಯೋಗಿಸಿ ನೋಡಿದರೂ
ಪ್ರಯೋಜನವಾಗಲಿಲ್ಲ.ಆತ ಏನು ಹೇಳುತ್ತಿದ್ದ ಅಥವ ಇವರು ಹೇಳುವುದು ಅವನಿಗೆ
ಮನವರಿಕೆಯಾಗುತ್ತಿದೆಯೇ? ಇಲ್ಲವೇ? ಒಂದೂ
ತಿಳಿಯದೆ ಆಯೋಮಯವಾದಂತಹ ಪರಿಸ್ಥಿತಿ. ಕೊನೆಯಲ್ಲಿ ಬಂದ ಪ್ರಯಾಣಿಕರಲ್ಲಿ ಒಬ್ಬಾತ ಮೌನವಾಗಿಯೇ
ಇದ್ದ. ಆತ ಸುಮ್ಮನಿರುವುದಕ್ಕೆ ಕಾರಣವೆಂದರೆ ಆತ ಬಾಯಿಬಾರದ ಮೂಕನಾಗಿದ್ದ. ಹಾಗಾಗಿ ಅಷ್ಟೂ
ಹೊತ್ತು ಉಳಿದವರ ಪ್ರಯತ್ನವನ್ನು ನೋಡುತ್ತಿದ್ದವನು, ತನಗೆ ಆಡಲು ತಿಳಿದ ಒಂದೇ ಭಾಷೆಯಾದ ಆಂಗಿಕ
ಭಾಷೆಯ ಮೂಲಕ ತನ್ನ ಪ್ರಯತ್ನವನ್ನು ಆರಂಭಿಸಿದ. ಯಾವುದೇ ಭಾಷೆ ಮತ್ತು ಅದರ ವ್ಯಾಕರಣಕ್ಕೆ ಅತೀತವಾದ ಭಾಷೆಯಾದ ಈ ಆಂಗಿಕ ಭಾಷೆ ಸ್ವಲ್ಪ
ಮಟ್ಟಿಗೆ ಆದಿವಾಸಿಯೊಂದಿಗೆ ಸಂಹವನ ಸಾಧಿಸುವಲ್ಲಿ ಯಶಸ್ವಿಯಾಯಿತು. ಮನುಷ್ಯ ಮನುಷ್ಯ ನಡುವಿನ ಭಾವನೆಗಳನ್ನು
ಅರ್ಥ ಮಾಡುವಲ್ಲಿ ಈ ಭಾಷೆ ಅಥವ ಅದರ ಪರಿಶುದ್ದತೆ ಎಲ್ಲ ಗೌಣವಾಗಿಬಿಡುತ್ತದೆ. ಇದು ಪರಿಪೂರ್ಣ
ಮಾರ್ಗವಲ್ಲದೇ ಇದ್ದರೂ ಸಂದರ್ಭೋಚಿತವಾಗಿ ಭಾವನೆಗಳು ಅರ್ಥವಾದರೆ ಸಾಕು. ಭಾಷೆ ವ್ಯಾಕರಣ
ಶಬ್ದಾರ್ಥಗಳು ಮನುಷ್ಯ ನಿರ್ಮಿತವಾಗಿ ಈ ಭಾವನೆಗಳಿಗೆ ಒಂದು ಶಿಸ್ತು ಮತ್ತು ಚೌಕಟ್ಟನ್ನು
ನಿರ್ಮಿಸುತ್ತವೆಯಾದರೂ ಭಾವನೆಗಳು ಪರಿಶುದ್ದವಾಗಿದ್ದಾಗ ಮಾತ್ರವೇ ಅದಕ್ಕೆಬೆಲೆ ಬರುವುದು.
ಆದೇ ಭಾವನೆಗಳು ಮನುಷ್ಯನ ಸೃಷ್ಟಿ ಯಾಗುವುದಿಲ್ಲ.
.
ಮಿತ್ರರೊಬ್ಬರು
ಕರೆ ಮಾಡಿ ನನ್ನ ಬ್ಲಾಗ್ ಪುಟಗಳ ಬಗ್ಗೆ ಅಭಿಪ್ರಾಯವನ್ನು ಹೇಳುತ್ತ.. “ಸ್ವಲ್ಪ ವ್ಯಾಕರಣ ಮತ್ತು ಶಬ್ದಾರ್ಥ ಪ್ರಯೋಗಗಳ
ಲೋಪದೋಷಗಳನ್ನು ಸರಿಪಡಿಸಿಕೊಂಡರೆ ನಿಮ್ಮ ಲೇಖನ ಅತ್ಯುತ್ತಮ” ಅವರ ಮಾತಿನ ಮೊದಲಾರ್ಧ ಅತ್ಯಂತ ಸತ್ಯವಾದರೂ
ಉತ್ತರಾರ್ಧದಲ್ಲಿ ಅತ್ಯುತ್ತಮ ಎಂಬುದನ್ನು ಸತ್ಯವೆಂದು ನಾನು ಹೇಳಿಕೊಂಡರೆ ಅದು ಆತ್ಮ
ಪ್ರಶಂಸೆಯಾಗುತ್ತದೆ. ನಾನು ಕೆಲವೊಂದು ಲೋಪದೋಷಗಳ
ಬಗ್ಗೆ ಗಂಭೀರನಾಗಿಲ್ಲ. ಒಟ್ಟು ಭಾವನೆಗಳು ವ್ಯಕ್ತವಾಗಬೇಕು. ಅರ್ಥೈಸುವ ಮನಸ್ಸು ವಿಶ್ವಾಸದಿಂದ
ಅದನ್ನು ಯಥಾರೀತಿ ಅರ್ಥೈಸಿಕೊಳ್ಳುತ್ತದೆ. ಇದಕ್ಕೆ ವಿಮರ್ಶೆ ಎಂಬ ಅರ್ಹತೆ ಉಂಟು ಎಂದು ಯಾವತ್ತೂ
ಅನಿಸುವುದಿಲ್ಲ. ಯಾವುದೇ ವಿಷಯದ ಅರ್ಹತೆ ಮತ್ತು ಮೌಲ್ಯವು
ಅದು ಹೇಗೆ ಗ್ರಾಹ್ಯವಾಗುತ್ತದೆ ಎಂಬುದನ್ನು
ಅವಲಂಬಿಸಿದೆ. ಹಾಗಾಗಿ ಇದನ್ನು ಕೇವಲ ಪ್ರತಿಕ್ರಿಯೆ ಎಂದು ಪರಿಗಣಿಸಿದಾಗ ಸರಿಯೋ ತಪ್ಪೂ
ನಿರ್ಣಯಿಸುವ ಅಗತ್ಯವಿಲ್ಲ ಎಂದನಿಸುತ್ತದೆ. ಪ್ರತಿಕ್ರಿಯೆ ಎಂಬುದು ಬಹಳ ಖಾಸಗೀ ಮತ್ತು
ವೈಯಕ್ತಿವಾಗಿರುತ್ತದೆ. ಹಾಗಾಗಿ ಅದಕ್ಕೆ ಪರಿಮಿತಿಗಳಿರುವುದಿಲ್ಲ. ಹಾಗಾಗಿ ಈ ಚೌಕಟ್ಟಿನೊಳಗ ನಿಂತುಕೊಂಡು ಎಲ್ಲದರಂತೆ ಇದೂ ಒಂದು ಪ್ರತಿಕ್ರಿಯೆ.
ಮಿತ್ತನಡ್ಕದ ಆರಂಭದ ಭಸ್ಮಾಸುರನ ಅಬ್ಭರದ

ಯಕ್ಷಗಾನ ಯಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡಿ ನಂತರ ವಾಸ್ತವತೆಗೆ ಮರಳಿದರೂ ಆ ಗುಂಗಿನ ಪ್ರಭಾವ ಅತ್ಯಂತ ಗಾಢವಾಗಿತ್ತು. ಈಬಾರಿ ಅತ್ಯಂತ ಭಾವನಾತ್ಮಕ ಸನ್ನಿವೇಶಗಳೇ ಕಾರ್ಯಕ್ರಮದಲ್ಲಿ ನಿರ್ಣಯಾತ್ಮಕವೆನಿಸಿತು. ಕೊನೆಯ ಪ್ರಸಂಗದ ಕೊನೆಯ ಚರಣದ ಕರ್ಣ ಭಾವನಾಲೋಕಕ್ಕೆ ಕೊಂಡೊಯ್ದರೆ ಮನ ಕಲಕುವ ಭಾವಾಭಿನಯದಿಂದ ಸುಭದ್ರೆಯಾಗಿ ಶಶಿಕಾಂತ ಶೆಟ್ಟಿ ಕೃಷ್ಣಾರ್ಜುನ ಕಾಳಗದ ಪ್ರಸಂಗದಲ್ಲಿ ಮತ್ತೊಮ್ಮೆ ಮಿಂಚಿದರು. ಈ ಪ್ರಸಂಗದಲ್ಲಿ ತಮ್ಮ ಎಂದಿನ ಶೈಲಿಯಂತೆ ಪುತ್ತಿಗೆ ರಘುರಾಮ ಹೊಳ್ಳರು ನಿಧಾನವಾಗಿ ಸ್ವರ ಏರಿಸುತ್ತ ಸಾಗಿದರು ಕೆಲವೊಂದು ಪದಗಳು ಸ್ಮರಣೀಯವನ್ನಾಗಿ ಹಾಡಿದರು. ಇವರಿಗೆ ಹಿಮ್ಮೇಳದಲ್ಲಿ ಮದ್ದಲೆಯಲ್ಲಿ ಆಡೂರು ಗಣೇಶ್ ಹಾಗೂ ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ದೇಲಂತ ಮಜಲು ಸಹಕರಿಸಿದ್ದರು. ಇದರಲ್ಲಿ “ಕೆಟ್ಟು ನೆಂಟರ ಸೇರುವುದು ಕಷ್ಟ ......” "ಕಂದಿದಾದನ ಕಾಂತಿಯಿಂದ...” “ಹೋಯಿತು ಹೊತ್ತು ನೋಡು ಭಾವಯ್ಯ....” ಮುಂತಾದ ಪದಗಳು ಉತ್ತಮವಾಗಿ ಮೂಡಿ ಬಂತು.
ಮಹಾಭಾರತದ ಆಹವಕ್ಕೆ ಪ್ರಾಯೋಗಿಕವಾಗಿ
ಪಾಂಡವರನ್ನು ಸಿದ್ದಪಡಿಸಿ ಪರೀಕ್ಷಿಸುವ ಶ್ರೀ ಕೃಷ್ಣನಾಗಿ ಪ್ರತಿಭಾವಂತ ದೀಪಕ್ ಪೇಜಾವರ ಮತ್ತು
ಅರ್ಜುನನಾಗಿ ಪ್ರತಿಭಾವಂತ ಯುವ ಕಲಾವಿದರಾದ
ಜಯಪ್ರಕಾಶ್ ಪೆರ್ಮುದೆ ಸ್ಪರ್ಧಾತ್ಮಕ ನಿರ್ವಹಣೆಯನ್ನು ತೋರಿದರು. ವೇಷಗಾರಿಕೆ ನಾಟ್ಯ
ಅರ್ಥಗಾರಿಗೆ ಹೀಗೆ ಪ್ರತಿಯೊಂದರಲ್ಲು ಹೊಂದಾಣಿಕೆಯ ನಿರ್ವಣೆ ತೋರಿದ್ದು ಒಟ್ಟಿನಲ್ಲಿ ಪ್ರಸಂಗ
ಅದ್ಭುತವಾಗಿ ಮೂಡಿಬರುವುದಕ್ಕೆ ಸಹಕರಿಸಿತು. ಒಂದು ಯಕ್ಷಗಾನದ ಮಾದರೀ ಶ್ರೀಕೃಷ್ಣನ ವೇಷವನ್ನು
ರಂಗದಲ್ಲಿ ದೀಪಕ್ ರವರು ತಂದರು. ಇದೇ ಪ್ರಸಂಗದ ಭಾವನಾತ್ಮಕ ಸನ್ನಿವೇಶವೊಂದರಲ್ಲಿ ರುಕ್ಮಿಣಿಯ
ಚುಚ್ಚು ನುಡಿಗಳಿಗೆ ನೊಂದ ಸುಭದ್ರೆಯಾಗಿ ಶಶಿಕಾಂತ್ ರ ತನ್ಮಯತೆ ಕಣ್ಣೀರ ರೂಪದಲ್ಲಿ
ದರ್ಶನವಾಯಿತು. ಅತ್ಯಂತ ಗಂಭೀರ ಸನ್ನಿವೇಶವನ್ನು ಅಷ್ಟೇ ಉತ್ತಮವಾಗಿ ಸಾದರ ಪಡಿಸಿದ್ದ
ಯುವಕಲಾವಿದರ ಪ್ರತಿಭೆ ಶ್ಲಾಘನೀಯ. “ಕೆಟ್ಟು ನೆಂಟರ ಸೇರುವುದು ಕಷ್ಟ ......” ಎಂಬ ಪದ ಸನ್ನಿವೇಶ
ಆಟ ಮುಗಿದ ಮೇಲೂ ಮನ ಕಲುಕುವಂತೆ ಇದ್ದರೆ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಸಮಷ್ಟಿಯಲ್ಲಿ ಎಲ್ಲವನ್ನು ಪರಿಗಣಿಸಿದರೆ
ಕೃಷ್ಣಾರ್ಜುನ ಕಾಳಗ ಕೂಟದ ಅತ್ಯುತ್ತಮ ಪ್ರಸಂಗ ಎನ್ನಬಹುದು.
ಕೆಲವು ಪದಗಳು ಇಲ್ಲಿವೆ...
ಕಾರ್ತವೀರ್ಯಾರ್ಜುನ ಪ್ರಸಂಗ ಪದಗಳು ಭಾಗವತರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ
ಕೃಷ್ಣಾರ್ಜುನ ಕಾಳಗ ಪ್ರಸಂಗ ಪದಗಳು ಭಾಗವತರು ಪುತ್ತಿಗೆ ರಘುರಾಮ ಹೊಳ್ಳ
ಕರ್ಣಾರ್ಜುನ ಪ್ರಸಂಗ ಪದಗಳು ಭಾಗವತರು ಪದ್ಯಾಣ ಗಣಪತಿ ಭಟ್
ಮೊದಲ ಪ್ರಸಂಗದ ಪ್ರವಾಹದಲ್ಲಿ ಮಿಂದು ಈಜಾಡಿದ ನಂತರ ದಣಿವಾರಿಸಿದ ಅನುಭವ. ಆಮೇಲಿನ ಕಾರ್ತವೀರ್ಯ ಹಾಗೂ ಭಾರ್ಗವ ಪ್ರಸಂಗಗಳು ಬಿಡುವಿನ ಪ್ರಸಂಗವೆಂಬಂತೆ ಭಾಸವಾಗಿದ್ದು ನೋವಿನ ಸಂಗತಿಯಾಯಿತು. ಪ್ರಸಿದ್ದ ಕಲಾವಿದರ ವೈಯಕ್ತಿಕವಾದ ಉತ್ತಮ ನಿರ್ವಹಣೆಯ ದೇಣೀಗೆಯ ಹೊರತಾಗಿಯೂ ಪ್ರಸಂಗ ತಣ್ಣನೆಯಲ್ಲೇ ಮುಗಿಯಿತು.ಇದರಲ್ಲೀ ಯಾವುದೂ ಕಳಪೆಯೆಂದು ಗುರುತಿಸುವ ಹಾಗಿಲ್ಲ ಎಲ್ಲವೂ ತಕ್ಕ ಮಟ್ಟಿಗೆ ಪ್ರಸಂಗಕ್ಕೆ ಅನುವಾಗಿಯೇ ಇತ್ತು. ಆದರೂ ನಿರೀಕ್ಷೆಯ ಕಾರ್ತವೀರ್ಯಾರ್ಜುನ ನೆನಪಿನ ಬುತ್ತಿಗೆ ಆಹಾರವಾಗಲೇ ಇಲ್ಲ. ತಮ್ಮ ದಢೂತಿ ದೇಹದ ಲೆಕ್ಕವೇ ಇಲ್ಲವೆಂಬಂತೆ ರಂಗಸ್ಥಳ ಕಂಪಿಸುವಂತೆ ಮಾಡಿದ ನಿಡ್ಲೆ ಗೋವಿಂದ ಭಟ್ ರ ಜಮದಗ್ನಿ ಮಹರ್ಷಿ ಅತ್ಯುತ್ತಮವಾಗಿತ್ತು. ಮೊದಲ ಕಾರ್ತವೀರ್ಯಾರ್ಜುನದಲ್ಲಿ ಹಿಮ್ಮೇಳಕ್ಕೆ ಹಳೆಯ ಹುಲಿಗಳು ಮತ್ತೊಮ್ಮೆ ರಂಗಸ್ಥಳವನ್ನೇರಿದ್ದರು. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಜತೆಗೆ ಮದ್ದಲೆಯಲ್ಲಿ ಉಪಾಧ್ಯಾಯರು ಮತ್ತು ಮಾಂಬಾಡಿ ಗುರುಗಳು ಹಲವು ಸಮಯದಿಂದ ನಂತರ ಚೆಂಡೆ ಹೆಗಲಿಗೇರಿಸಿಕೊಂಡರು. ಶಾಸ್ತ್ರಿಗಳ ಕೆಲವು ಪದಗಳು ಸುಶ್ರಾವ್ಯವಾಗಿ ಮೂಡಿಬಂದಿತ್ತು. ಸೂರಿಕುಮೇರಿ ಗೋವಿಂದಣ್ಣನ ಕಾರ್ತವೀರ್ಯ ಕೊನೆಯ ಸನ್ನಿವೇಶದಲ್ಲಿ ಚುರುಕಾದದ್ದು ಬಿಟ್ಟರೆ ಮತ್ತೆ ವಿಶೇಷವೇನು ಗುರುತಿಸಲಾಗಲಿಲ್ಲ. ಭಾರ್ಗವನಾಗಿ ಪುಂಡುವೇಶಧಾರಿ ಶಶಿಧರ್ ಕುಲಾಲ್ ಕನ್ಯಾನ ಉತ್ತಮ ಎನ್ನಬಹುದಾದ ನಿರ್ವಹಣೆ ತೋರಿದರು. ಎರಡನೇ ಕಾರ್ತವೀರ್ಯನಾಗಿ ಸುಬ್ರಾಯ ಹೊಳ್ಳ ಸ್ವತಹ ಉತ್ತಮ ನಿರ್ವಹಣೆ ತೋರಿದರೂ ಒಟ್ಟು ಪ್ರಸಂಗ ವೇಗವನ್ನು ಪಡೆದುಕೊಳ್ಳಲಿಲ್ಲ. ರವಿಶಂಕರ ವಳಕುಂಜರ ಜತೆಗಿನ ಇವರ ಹಾಸ್ಯ ಸನ್ನಿವೇಶ ಕೂಟದ ಹಾಸ್ಯ ಸನ್ನಿವೇಶವಾಗಿ ಹೊರಹೊಮ್ಮಿತು. ವಳಕುಂಜರ ಪ್ರತಿಭೆಯು ಬಹಳ ಆಕರ್ಷಣೀಯ. ಯಾವುದೇ ಭಾವ ವಿಕಾರವಿಲ್ಲದೆ ತಮ್ಮ ಮಿಂಚಿನ ಸಂಭಾಷಣೆಯಿಂದ ಮತ್ತು ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. ಮತ್ತೋರ್ವ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಕೆಲವು ಸೌಮ್ಯ ಪದಗಳನ್ನು ಮಧುರವಾಗಿ ಹರಿಯಬಿಟ್ಟರೂ ಏರಿ ಪದಗಳಲ್ಲಿ ದುರ್ಬಲವಾಗಿ ಕಂಡುಬಂದು, ಕೊನೆಯ ಕ್ಷಣಗಳಲ್ಲಿ ಹೊಳ್ಳರ ಕಾರ್ತವೀರ್ಯ ಕಳೆಗಟ್ಟಲಿಲ್ಲ.
.
.
ಯಕ್ಷಗಾನ ಸಂಘಟಕರಿಗೆ ಔಪಚಾರಿಕವೆಂಬಂತೆ
ಧನ್ಯವಾದ ಸೂಚಿಸುವುದು ಸೌಜನ್ಯತೆಯ ಸಂಕೇತ. ಆದರೆ ನಮ್ಮ ಮನಸ್ಸನ್ನು ಅರಿತಿರುವ ತೆಂಕಬೈಲು
ಪ್ರಸನ್ನ ಬಳಗಕ್ಕೆ ಈ ಔಪಚಾರಿಕತೆಯ ಅಗತ್ಯವಿಲ್ಲ. ಮುಂದೆಯೂ ಇಂತಹ ಕೂಟಗಳು ನಡೆದು ಅದನ್ನು ಹೋಗಿ ನೋಡುವ
ಅವಕಾಶ ಪ್ರಾಪ್ತಿಸಲಿ ಎಂಬ ಹೆಬ್ಬಯಕೆಯೊಂದನ್ನು ಹುಟ್ಟು ಹಾಕಿದೆ ಎನ್ನಬಹುದು. ಇಲ್ಲಿನ
ಯಕ್ಷೋತ್ಸವ ಕಲಾಭಿಮಾನಿಗಳಲ್ಲಿ ಬಹುವಾದ
ನಿರೀಕ್ಷೆಯನ್ನು ತುಂಬಿಸುವಂತೆ ತೊಡಗಿ ಯಶಸ್ವಿಯಾಗಿ ನಡೆಯಿತು.ಸೂಕ್ತ ಪ್ರಸಂಗ ನಿರ್ಣಯ ಪಾತ್ರ
ಹಂಚಿಕೆ ಉತ್ತಮ ಆಯೋಜನೆ ಎಲ್ಲವೂ ಯಶಸ್ಸಿನ ಕಾರಣಗಳು. ಒಂದು ಕಾರ್ಯಕ್ರಮ ಯಶಸ್ಸನ್ನು ಗಳಿಸಿದರೆ
ಮುಂದೆ ಅದು ಹಲವುನಿರೀಕ್ಷೆಗಳನ್ನು ಹುಟ್ಟುಹಾಕುವುದರೊಂದಿಗೆ ಹಲವು ಜವಾಬ್ದಾರಿಗಳನ್ನು ಹೊರಿಸುತ್ತದೆ. ಮಿತ್ತನಡ್ಕ ಆಟ
ಎಂದರೆ ಮುಂದೆ ಹಲವು ನಿರೀಕ್ಷೆಗಳನ್ನು ಈಡೇರಿಸುವಂತಹ ಒಂದು ಜವಾಬ್ದಾರಿಯನ್ನು ಹುಟ್ಟುಹಾಕಿದೆ.
ಇದನ್ನು ಒಂದು ಪಂಥಾಹ್ವನವಾಗಿ ಪಡೆದುಕೊಂಡಾರೆಂದು ಮಿತ್ರರೆಲ್ಲರ ಬಯಕೆ.


