ನನ್ನ ಕುಂದಾಪುರದ ಸಂಬಂಧೀ ಮಿತ್ರರೊಬ್ಬರು ಪುತ್ತೂರಿನ ಬಳಿ ಒಂದು ಬ್ರಾಹ್ಮಣರ ಮದುವೆಗೆ ಹೋಗಿದ್ದರು. ಇದು ಬಹಳ ಹಳೆಯ ಕಥೆ. ಹೋದವರು ನನಗೆ ಸಿಕ್ಕಿದಾಗ ಹೇಳಿದರು ನಿಮ್ಮ ಕಡೆ ಸಂಪ್ರದಾಯಗಳು ರೀತಿ ರಿವಾಜುಗಳು ಹಲವಾರು ಇನ್ನೂ ಹಾಗೆ ಉಳಿದಿವೆ. ಅವರ ಅಭಿಪ್ರಾಯದ ಗಂಭೀರತೆ ನನಗೆ ಆಗ ಅರಿವಾಗಲಿಲ್ಲ. ಆದರೆ ಕುಂದಾಪುರದ ಬಳಿಯ ಒಂದು ಮದುವೆಗೆ ಹೋಗಿದ್ದೆ. ಆಗ ಅವರು ಹೇಳಿದ ಮಾತು ಬಹಳ ಸತ್ಯ ಅಂತ ಕಂಡಿತು. ನಾನು ಮದುವೆಗೆ ಹೋಗುವಾಗ ಮಧ್ಯಾಹ್ನ ಹತ್ತಿರದ ವೇಳೆಯಾಗಿತ್ತು. ಇನ್ನೇನು ಊಟ ಆರಂಭವಾಗುವುದರಲ್ಲಿತ್ತು. ಸಾಕಷ್ಟು ಸಂಖ್ಯೆಯ ಜನರೂ ಇದ್ದರು. ಸಾಮಾನ್ಯವಾಗಿ ನಮ್ಮಗಳ ಮದುವೆ ಮನೆಯಲ್ಲಿ ಮೊದಲು ಬ್ರಾಹ್ಮಣರಿಗೆ ಒಂದು ಬದಿಯಲ್ಲಿ ಹಸ್ತೋದಕ ಕೊಡುವ ಕ್ರಮ ಇರುತ್ತದೆ. ಅದೊಂದು ಸಂಪ್ರದಾಯ. ಆದರೆ ಅಲ್ಲಿ ಅದು ಕಂಡು ಬಾರದೆ ಅಲ್ಲಿನ ಹಿರಿಯರು ಹತ್ತಿರ ಬಂದಾಗ ...ಹಸ್ತೋದಕ ಆಯ್ತಾ ಅಂತ ಸುಮ್ಮನೇ ಕೇಳಿದಾಗ ಅವರಿಗೆ ಒಂದಷ್ಟು ಪೆಚ್ಚಾಯಿತು. ನಾನು ಕೇಳಿದ್ದು ಅಧಿಕ ಪ್ರಸಂಗ ಅಂತ ನನಗನ್ನಿಸಿತು. ಕೇಳುವ ಅವಶ್ಯಕತೆಯೇ ಇರಲಿಲ್ಲ. ಆದರೂ..ಸಾಮಾನ್ಯವಾಗಿ ನಾನು ಇಂತಹ ಮದುವೆಗೆ ಅದೂ ಊರಲ್ಲಿ ನೆಲದಲ್ಲಿ ಕುಳಿತು ಸಂಪ್ರದಾಯದಂತೆ ಸಾವಧಾನವಾಗಿ ಊಟ ಮಾಡುವುದಕ್ಕೆ ಬಯಸುವವ. ಹಾಗಾಗಿ ಸುಮ್ಮನೇ ಕೇಳಿಬಿಟ್ಟೆ. ಅವರಿಗೆ ಏನನ್ನಿಸಿತೋ ಅಂತ ಆಮೇಲೆ ಕೇಳಬಾರದಿತ್ತು ಅಂತ ಅನಿಸಿತು. ಆದರೆ ಅವರು ಅದನ್ನೇನೂ ಗಂಭೀರವಾಗಿಸದೇ ನನ್ನನ್ನು ಮದುವೆ ಮನೆಯವರ ಬಳಿಗೆ ಕರೆದು ಕೊಂಡು ಹೋಗಿ ಹಸ್ತೋದಕಕ್ಕೆ ವ್ಯವಸ್ಥೆ ಮಾಡಿದರು. ಅಷ್ಟಾಗಿ ಅಲ್ಲಿ ಹಾಗೆ ಕುಳಿತುಕೊಳ್ಳುವುದಕ್ಕೆ ಯಾವ ಬ್ರಾಹ್ಮಣರೂ ಬರಲಿಲ್ಲ. ಕೊನೆಗೆ ಅಡುಗೆಯ ಭಟ್ಟರ ಜತೆಗೆ ಪರಿಚಾರಕರಾಗಿದ್ದ ಒಬ್ಬರನ್ನು ಕರೆದು ನನಗೆ ಮತ್ತು ಅವರಿಗೆ ನೆಲದಲ್ಲಿ ಮಣೆ ಹಾಕಿ ಬಾಳೆ ಎಲೆ ಹಾಕಿ ಊಟಕ್ಕೆ ಸಿದ್ದತೆ ಮಾಡಿ ...ಇಬ್ಬರಿಗೆ ಹಸ್ತೋದಕ ಕೊಟ್ಟು ಊಟ ಬಡಿಸಿದರು. ದಾನವಾಗಿ ವಸ್ತ್ರ ವನ್ನೂ ಕೊಟ್ಟು ಜತೆಗೆ ದಕ್ಷಿಣೆಯನ್ನು ಕೈಗೆ ಇಟ್ಟರು. ಕೊನೆಗೆ ಒಬ್ಬರು ಹೇಳಿದರು ಇಲ್ಲೆಲ್ಲ...ಇದೆಲ್ಲ ಕಾಣೆಯಾಗಿದೆ ಅಂತ ಒಬ್ಬರು ಹೇಳಿದರು.
ಈ ಘಟನೆ ಹೀಗೆ ಮತ್ತೊಮ್ಮೆ ನೆನಪಿಗೆ ಬಂತು, ಎಂದರೆ ಇದೇ ಬಗೆಯ ಮಾತು ಬಹಳ ಹಿಂದೆ ಯಕ್ಷಗಾನದ ಬಗ್ಗೆ ಮಿತ್ರರೊಬ್ಬರು ಹೇಳಿದರು ನೀವೆಲ್ಲ ಸ್ವಲ್ಪ ಭಾಗ್ಯವಂತರು, ನಿಮ್ಮ ತೆಂಕಣ ಭಾಗದಲ್ಲಿ ಯಕ್ಷಗಾನ ಅದರಲ್ಲೂ ತೆಂಕು ತಿಟ್ಟು ಇನ್ನೂ ಹಲವಾರು ಸಂಪ್ರದಾಯಗಳನ್ನು ಹಾಗೆ ಉಳಿಸಿಕೊಂಡಿದೆ. ಹೆಚ್ಚು ಅವಿಷ್ಕಾರ ಅಗಲಿಲ್ಲ. ಅವಿಷ್ಕಾರ ಎನ್ನುವುದಕಿಂತ ಹಾಳಾಗಲಿಲ್ಲ ಎಂದರೆ ಸರಿ. ಇದೆಲ್ಲ ಅವರ ವೈಯಕ್ತಿ ಅಭಿಪ್ರಾಯವಾಗಿತ್ತು. ಯಾಕೆಂದರೆ ಊರು ಬಿಟ್ಟನಂತರ ಯಕ್ಷಗಾನ ನೋಡುವುದು ಅಪರೂಪ ಅದರಲ್ಲೂ ಬಡಗು ತಿಟ್ಟು ಅದೂ ಮೇಳದ ಆಟಗಳನ್ನು ನೋಡುವ ಅವಕಾಶವೇ ಸಿಗಲಿಲ್ಲ. ಹಾಗಾಗಿ ಅವರ ಮಾತಿಗೆ ಸ್ವ ಅಭಿಪ್ರಾಯ ಹೇಳುವುದಕ್ಕೆ ಇರಲಿಲ್ಲ. ಇದೇ ರೀತಿ ಬಡಗಿನ ಹಿರಿಯ ಕಲಾವಿದರೊಬ್ಬರು ಕೂಡ ನನ್ನಲ್ಲಿ ಹೇಳಿದ್ದರು. ಈಗಲೂ ಇದರ ಬಗ್ಗೆ ನನ್ನ ಪ್ರತಿಕ್ರಿಯೆ ಶೂನ್ಯ. ಆದರೆ ಇತ್ತೀಚೆಗೆ ಉಯಾಲೆ ಭಗ್ನದ ವಿವಾದ ಕಣ್ಣೆದುರು ಬಂದಾಗ ಈ ಎಲ್ಲ ವಿಷಯಗಳು ನೆನಪಿಗೆ ಬಂದವು.
ಉಯ್ಯಾಲೆ ಕುಸಿದ ಘಟನೆ ನಿಜಕ್ಕೂ ಖೇದನೀಯ ಘಟನೆ. ಅದರ ನಂತರ ಘಟನೆಯನ್ನು ಆಕ್ಷೇಪಿಸಿ ಹಲವಾರು ಕಲಾವಿದರು ಪ್ರೇಕ್ಷಕರೂ ತಮ್ಮ ತಮ್ಮ ಪರಿಧಿಯಲ್ಲಿ ತಮ್ಮ ದೃಷ್ಟಿಕೋನದಲ್ಲಿ ಪ್ರತಿಕ್ರಿಯೆ ಆಕ್ಷೇಪ ಸಹಜವಾಗಿ ಕೊಡುತ್ತಾ ಹೋದರು. ಆಕ್ಷೇಪಗಳಲ್ಲಿ ಹಲವರು ಯಕ್ಷಗಾನ ಅವಿಷ್ಕಾರಗಳಿಂದ ಕೆಟ್ಟು ಹೋಗಿದೆ. ಹಳೆಯ ಸಂಪ್ರದಾಯದ ಪರಂಪರೆಯ ಬಗ್ಗೆ ಯಾರಿಗೂ ಗೌರವ ವಿಲ್ಲ. ಹೀಗೆ ಈ ಅಭಿಪ್ರಾಯಗಳನ್ನು ಹೇಳಿ ಪರಿಶುದ್ದ ಯಕ್ಷಗಾನ ಕಾಣೆಯಾಗಿದೆ. ಯಕ್ಷಗಾನದಲ್ಲಿ ಆಭಾಸಗಳು ಹೆಚ್ಚಾಗಿದೆ ಅವುಗಳನ್ನೆಲ್ಲ ಕೈ ಬಿಡಬೇಕು ಹೀಗೆ ಯಕ್ಷಗಾನದ ಪರಂಪರೆ ಉಳಿಯಬೇಕು ಎನ್ನುವಂತಹ ಮಾತುಗಳು ಕೇಳಿ ಬಂದವು. ನಿಜಕ್ಕೂ ಇದು ಗೌರವದ ಪ್ರತಿಕ್ರೆಯೆಗಳು ಎನ್ನುವುದರಲ್ಲಿ ಸಂದೇಹವಿಲ್ಲ.
ಆದರೆ ಹೀಗೆ ಈಗಿನ ಯಕ್ಷಗಾನದಲ್ಲಿ ಆಭಾಸಗಳನ್ನು ಕಳೆದರೆ ಮೊದಲಿಗೆ ದೇವಿ ಮಹಾತ್ಮೆ ಪ್ರಸಂಗವನ್ನೇ ದೂರ ಇಡಬೇಕಾದ ಪರಿಸ್ಥಿತಿ ಬರಬಹುದು. ಯಾಕೆಂದರೆ ಈ ಪ್ರಸಂಗ ಯಕ್ಷಗಾನದಿಂದ ದೂರಾಗಿ ಬಹಳ ವರ್ಷಗಳೇ ಕಳೆದು ಹೋಗಿದೆ. ಈಗ ಈ ಪ್ರಸಂಗದಲ್ಲಿ ಯಾವುದಾದರೂ ಯಕ್ಷಗಾನದ ಅಂಶ ಇದೆ ಎಂದನ್ನಿಸುವುದಿಲ್ಲ. ಇನ್ನು ಬಿಡಬೇಕಾಗಿರುವುದು ಏನು ಅಂತ ಆಶ್ಚರ್ಯವಾಗದೇ ಇರುವುದಿಲ್ಲ. ಮೊದಲಿಗೆ ಈ ಪ್ರಸಂಗದಲ್ಲಿ ಯಾವ ಯಕ್ಷಗಾನದ ಗುಣ ಇದೆ ಅಂತ ಅಚ್ಚರಿಯಾಗುತ್ತದೆ. ಕೇವಲ ಭಕ್ತಿ ಪ್ರಧಾನವಾಗಿ ಮಾತ್ರ ಇದನ್ನು ಕಾಣುವಾಗ ಇದು ಕೇವಲ ಹರಕೆಗೆ ಸೀಮಿತವಾಗುತ್ತದೆ. ನನ್ನ ಅಜ್ಜ ಹೇಳುತ್ತಿದ್ದರು ದೇವಿ ಮಹಾತ್ಮೆ ಪ್ರಸಂಗದ ಆಟಕ್ಕೆ ಹೋಗುವುದು ಒಂದೇ ಭೂತಕೋಲಕ್ಕೆ ಹೋಗುವುದು ಒಂದೇ... ಅವರು ವಿಡಂಬನೆಗಾಗಿ ಹೇಳಿದರೂ ಸಹ ಅದು ವಾಸ್ತವದ ಸತ್ಯ. ನಿಜಕ್ಕೂ ಏನಿದೆ ಈ ಪ್ರಸಂಗದಲ್ಲಿ? ಆರಂಭದಿಂದ ಅಂತ್ಯದವರೆಗೂ ಬರೀ ಗದ್ದಲವಲ್ಲದೇ ಬೇರೆ ಏನೂ ಇಲ್ಲ. ಸರಿಯಾಗಿ ಕುಣಿಯದಿದ್ದರೂ, ಮಾತನಾಡಲೂ ತಿಳಿಯದಿದ್ದರೂ ಈ ಪ್ರಸಂಗದಲ್ಲಿ ವೇಷ ಮಾಡಬಹುದು. ಆಟ ರೈಸುವುದಕ್ಕೆ ಚೆಂಡೆ ಮದ್ದಲೆ ಬೇಕೆಂದೇನು ಇಲ್ಲ...ಬ್ಯಾಂಡ್ ವಾದ್ಯ ಘರ್ನಾಲು ಇರುವಾಗ ಹೇಗೋ ಒಬ್ಬರು ಇದ್ದರೂ, ದೇವಿಯ ಮಹಿಮೆಯೋ ಏನೋ ಈ ಪ್ರಸಂಗಕ್ಕೆ ಯಾವ ಬಾಧಕವೂ ಬರುವುದಿಲ್ಲ. ಹಾಗಾಗಿ ಯಕ್ಷಗಾನಕ್ಕೆ ಸಂಬಂಧಿಸಿ ಬದಲಾವಣೆ ತಂದರೆ ಈ ಹರಕೆಗಾಗಿ ಅಡುವ ದೇವಿ ಮಹಾತ್ಮೆ ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ದೂರವಿಡಬೇಕಾಗಿ ಬರಬಹುದು. ಹೀಗೆ ಯಕ್ಷಗಾನದಿಂದ ದೂರಾಗಿ ಕೇವಲ ಸರ್ಕಸ್ ಮತ್ರ ಆಗಿರುವಾಗ ಈ ಬಗೆಯ ಅವಗಢಗಳು ಸಹಜ. ಅದು ಇಂದು ನಿನ್ನೆಯದಲ್ಲ ...ಇಂತಹದ್ದು ಎಷ್ಟೋ ಆಗಿರುತ್ತದೆ. ಆದಾಗ ಒಂದು ಸಲ ವಿವಾದವಾಗಿ ಆನಂತರ ಮರೆತು ಹೋದರೂ ಯಾವಾಗಲಾದರೂ ಒಮ್ಮೆ ಸ್ವಾರಸ್ಯದ ವಿಷಯಕ್ಕೆ ಈ ಘಟನೆ ವಸ್ತುವಾಗುತ್ತದೆ.
ಉಯ್ಯಾಲೆ ಭಗ್ನವಾದಾಗ ಯಕ್ಷಗಾನಕ್ಕೆ ಅವಮಾನ ಅಂತ ಕೂಗು ಎಬ್ಬಿಸಿದವರೇ ಅಧಿಕ. ಯಕ್ಷಗಾನವೇ ಇಲ್ಲದ ಮೇಲೆ ಅಲ್ಲಿ ಯಕ್ಷಗಾನದ ಹೆಸರಿಗೆ ಅವಮಾನ ಮೆತ್ತಿಸುವುದು ಸರಿಯಲ್ಲ. ಒಂದು ದೈವಾರಾಧನೆ, ಮತ್ತುನಂಬಿಕೆಗೆ ಅವಮಾನವಾಯಿತು ಸತ್ಯ. ಯಕ್ಷಗಾನದ ಬಗ್ಗೆ ಈ ಕಾಳಜಿ ಇದ್ದರೆ ಈ ಪ್ರತಿಕ್ರಿಯಿಸಿದವರು ಮತ್ತೊಮ್ಮೆ ಯೋಚಿಸುವುದು ಉತ್ತಮ...ಈ ಘಟನೆ ಬಿಟ್ಟು ಬೇರೆ ಎಷ್ಟು ಉತ್ತಮ ಅಂಶಗಳು ಉಳಿದುಕೊಂಡಿದೆ? ಅದಕ್ಕೆ ಎಷ್ಟು ನಾವು ಜವಾಬ್ದಾರರಾಗಿದ್ದೇವೆ. ಹಿಮ್ಮೇಳದಿಂದ ತೊಡಗಿ ಮುಮ್ಮೆಳದವರೆಗೂ ಅವಿಷ್ಕಾರಗಳಿಗೆ ಯಾರು ಹೇಗೆಲ್ಲ ದೇಣಿಗೆ ಸಲ್ಲಿಸಿದ್ದಾರೆ ಎಂದು ಯೋಚಿಸಬೇಕು. ಪರಂಪರೆ ಯಕ್ಷಗಾನ ...ಎಂದು ಹುಯಿಲೆಬ್ಬಿಸುವ ಮೊದಲು ಇದರ ಪರಿಚಯ ಎಷ್ಟರ ಮಟ್ಟಿಗೆ ಇದೆ. ಪರಿಚಯ ಇದ್ದವರಿಗೆ ಯಾವ ರೀತಿಯ ಗೌರವ ಸಲ್ಲಿಕೆಯಾಗುತ್ತದೆ...ಹೀಗೆ ಯೋಚಿಸಬೇಕಾದ ವಿಷಯಗಳು ಸಾಕಷ್ಟು ಇದೆ. ಇಲ್ಲವಾದರೆ ... ಈ ಘಟನೆಯ ಬಗ್ಗೆ ಗಂಭೀರವಾಗುವ ಅವಕಾಶವೂ ಇರುವುದಿಲ್ಲ ಅರ್ಹತೆಯೂ ಇರುವುದಿಲ್ಲ. ನನಗೆ ಮಾತ್ರ ಉಯಾಲೆಯಿಂದ ಕುಸಿದ ಕಲಾವಿದನ ಬಗ್ಗೆ ಅನುಕಂಪವಾಗುತ್ತದೆ. ತುಂಬಿದ ಸಭೆಯಲ್ಲಿ ಆದ ಘಟನೆ, ದೇಹಕ್ಕೆ ಮನಸ್ಸಿಗೆ ಆದ ಪರಿಣಾಮ ಹೇಗಿರಬಹುದು? ಈತನಿಗೆ ಅಲ್ಲೇ ಶಿಕ್ಷೆ ಸಿಕ್ಕಿದೆ ಅಂತ ಅಂದುಕೊಂಡರೂ ಕೇವಲ ಶಿಕ್ಷೆ ಈ ಒಬ್ಬನಿಗೆ ಸಿಕ್ಕಿದ್ದರಲ್ಲಿ ಎಲ್ಲವೂ ಸರಿಯಾಗಬಹುದೇ ....ಯೋಚಿಸಿದರೆ ಖಂಡಿತ ಇಲ್ಲ. ಈ ಒಂದು ಘಟನೆಗೆ ಕೇವಲ ಈತ ಮಾತ್ರ ಕಾರಣ ಅಲ್ಲ. ಈತ ಕೇವಲ ನಿಮಿತ್ತ ಮಾತ್ರ. ಹಾಗಾಗಿ ಇದರ ಬಗ್ಗೆ ಹೇಳುವುದಕ್ಕೆ ಹಲವಿದ್ದರೂ ಹೇಳದೇ ಮೌನವಾಗಬೇಕು. ಎಲ್ಲ ಅವಕಾಶಗಳು ಕಳೆದು ಹೋಗಿದೆ ಎಂದರೆ ಸೂಕ್ತ.
ಇದು ಕೇವಲ ನನ್ನ ಅಭಿಪ್ರಾಯ. ಇದಕ್ಕೆ ಆಕ್ಷೇಪಗಳು ಇದ್ದರೂ ಇರಬಹುದು. ಆದರೆ ಆ ಬಗ್ಗೆ ನಾನಂತೂ ಗಂಭೀರವಾಗುವವನಲ್ಲ.

