"ಇದು ವಿಮರ್ಶೆಯಲ್ಲದ ಚಿಂತನ"

Thursday, November 20, 2025

ಯಕ್ಷ ವಟವೃಕ್ಷ



ಮೊನ್ನೆ ಹಳೆಯ ಮಿತ್ರರೊಬ್ಬರು ಸಿಕ್ಕಿದರು. ಯಕ್ಷಗಾನದ ಬಗ್ಗೆ ಮಾತನಾಡುತ್ತಾ ಈಗ ಯಕ್ಷಗಾನದ ಚಟುವಟಿಕೆ ಕಡಿಮೆಯಾಗಿದೆ ಅಂತ ಕೇಳಿದರು. ವಾಸ್ತವದಲ್ಲಿ ಹೇಗೆ ಇರಲಿ ನಾನು ಚರ್ಚೆ ಬೇಡ ಅಂತ ಪುರುಸೊತ್ತಿಲ್ಲ ಅಂತ ಮಾತು ಜಾರಿಸಿಬಿಡುತ್ತೇನೆ. ಆದರೆ ಅವರು ಹಾಗೆ ಜಾರಿಸುವ ಉತ್ತರಕ್ಕೆ ಕೇಳಿರಲಿಲ್ಲ. ಆಗ ನಾನು ಹೇಳಿದೆ. ಸಮಯ ಬಹಳ ಅಮೂಲ್ಯವಾಗಿ ಹೋಗಿದೆ. ಹಾಗಾಗಿ ಎಲ್ಲ ಕಡಿಮೆಯಾಗಿದೆ. 


ಅಭಿರುಚಿಗಳು ಕಾಲಕ್ಕೆ ತಕ್ಕಂತೆ ಬದಲಾಗಿಬಿಡುತ್ತವೆ. ಶೈಶವಾವಸ್ಥೆಯಲ್ಲಿ ಬಯಸಿದ್ದು ಯೌವನಕ್ಕೆ ಬೇಡ. ಯೌವನದಲ್ಲಿದ್ದದ್ದು ವೃದ್ದಾಪ್ಯದಲ್ಲಿ ಅರ್ಥಹೀನವಾಗುತ್ತದೆ. ಆದರೂ ಯಕ್ಷಗಾನ ಇದಕ್ಕೆ ಪರಿಮಿತಿಗೊಳಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿ ಬದಲಾಗದ ಅಭಿರುಚಿ ಎಂದಿದ್ದರೆ ಅದು ಯಕ್ಷಗಾನ ಮಾತ್ರ. ಮೊದಲೆಲ್ಲ ಕನ್ನಡ ಚಲನಚಿತ್ರಗಳನ್ನೇ ನೋಡುತ್ತಿದ್ದೆ. ಕ್ರಮೇಣ ಹಿಂದಿ ಸಿನಿಮಾ ಆನಂತರ ಇಂಗ್ಲೀಷ್ ಸಿನಿಮಾ ಮಂಗಳೂರಿನ ಚಿತ್ರಾ ಟಾಕೀಸಿನಲ್ಲಿ ಇಂಗ್ಲೀಷ್ ಸಿನಿಮಾ ನೋಡುವ ಹುಚ್ಚು ಎಷ್ಟಿತ್ತೆಂದರೆ ಅದೂ ರಾತ್ರಿಯ ಎರಡನೆ ಪ್ರದರ್ಶನ ಮುಗಿಸಿ ನಡುರಾತ್ರಿ ಹನ್ನೆರಡರ ಹೊತ್ತಿಗೆ ನಿರ್ಮಾನುಷ ರಸ್ತೆಯಲ್ಲಿ ಸೈಕಲ್ ತುಳಿದು ಬರುತ್ತಿದ್ದೆ. ಅದೊಂದು ಆಸಕ್ತಿ. ಆನಂತರ ಅದೂ ಬದಲಾಗಿ ಮಲಯಾಳಂ ಸಿನಿಮಾದತ್ತ ಆಕರ್ಷಿತನಾಗಿ , ಅದರ ನೈಜತೆಗೆ ಹೆಚ್ಚು ಮಾರು ಹೋಗಿ ಈಗ ಅದೇ ಅಭಿರುಚಿಯಾಗಿ ಬೆಳೆದಿದೆ. ಆದರೆ ಯಕ್ಷಗಾನ...ಹಾಗೆ ಆಗಲಿಲ್ಲ. ಪೂಜ್ಯ ಭಾಗವತೋತ್ತಮ ದಿವಗಂತ ಬಲಿಪ ನಾರಾಯಣ ಭಾಗವತರ ಪದದಂತೆ . ಅದು ಬದಲಾಗಲೇ ಇಲ್ಲ. ಬಹುಶಃ ಬದಲಾಗಬೇಕಿತ್ತು. ಅದೇಕೋ ಅದು ಹಾಗೆ ಉಳಿದು ಕೊಂಡಿತ್ತು. ಹಾಗಾಗಿ ನಾನು ಮಿತ್ರರಿಗೆ ಹೇಳಿದೆ ಈಗ ಯಕ್ಷಗಾನ ಈಗ ವಿಶಾಲವಾಗಿ ಬೆಳೆದಿದೆ. ಎಷ್ಟು ಬೆಳೆದಿದೆ ಎಂದರೆ ಬೆಂಗಳೂರಿನ ಗ್ರಾಮಾಂತರದ ದೊಡ್ಡ ಆಲದ ಮರದಂತೆ. ನೋಡಲು ಎರಡು ಕಣ್ಣು ಸಾಕಾಗುವುದಿಲ್ಲ.  ವಿಪರ್ಯಾಸವೆಂದರೆ ದೊಡ್ಡಾಲದ ಮರ ನೋಡಿದವರಿಗೆ ಅರಿವಾಗಬಹುದು. ಆ ಮರದ ಮೂಲ ಮರ ಎಂದೋ ಸತ್ತು ಹೋಗಿದೆ. ಅದರ ಬಿಳಲುಗಳು ನೆಲಕ್ಕೆ ಊರಿ ಈಗ ಅದೇ ದೊಡ್ಡ ಮರದಂತಹ ಭ್ರಮೆಯನ್ನು ಹುಟ್ಟಿಸುತ್ತದೆ.  ಹೆಚ್ಚು ಕಡಿಮೆ ಯಕ್ಷಗಾನವೂ ಅದೇ ರೀತಿ. 

ಮೊದಲಿನ ಹಾಗೆ ಅಲ್ಲ. ಈಗ ಯಕ್ಷಗಾನ ಬಹಳ ವಿಶಾಲವಾಗಿದೆ. ಮೊದಲು ಒಂದೆರಡು ಮೇಳಗಳು(ಡೇರೆ ಮೇಳ ಅಲ್ಲ) ಅದರಲ್ಲಿ ಒಂದಿಷ್ಟು ಕಲಾವಿದರು. ಈಗ ಐದು ಆರು ಮೇಳಗಳು ಒಂದೇ ಕಡೆಯಿಂದ ಹೊರಡುತ್ತಿವೆ. ಪ್ರತೀ ಊರಲ್ಲಿಯೂ ಹಲವಾರು ಸಂಘಗಳು ಇವೆ.  ಮೊದಲು ಕೇವಲ ಪುರುಷರಿಗೆ ಮಾತ್ರ ಸೀಮಿತ ಅಂತ ಇದ್ದದ್ದು ಈಗ ಮಹಿಳೆಯರೂ ಸಮ ಸಮ ಎನ್ನಿಸುವಷ್ಟರ ಮಟ್ಟಿಗೆ ಇದೆ. ಮೊದಲು ನಮ್ಮ ಕರಾವಳಿ ಬಿಟ್ಟು ಇದರ ಬಗ್ಗೆ ತಿಳಿದವರು ಕಡಿಮೆ. ಈಗ ಸೀನಿಮಾ ಟೀವಿ ಯೊಳಗೂ ಯಕ್ಷಗಾನ ಹೊಕ್ಕು ದೀಂಗಿಣ ಹಾಕುತ್ತವೆ. ವೆತ್ಯಾಸ ಇಷ್ಟೆ....ಮೊದಲು ಯಕ್ಷಗಾನಕ್ಕಾಗಿ ಕಲಾವಿದರು ಇದ್ದರು. ಈಗ ಕಲಾವಿದರಿಗಾಗಿ ಯಕ್ಷಗಾನ. ಹಲವಾರು ಭಾಗವತರು ಇದ್ದಾರೆ, ಆದರೆ ಚೆನ್ನಾಗಿ ಹಾಡುತ್ತಾರೆ. ಜನಪ್ರಿಯತೆ ಎಲ್ಲವೂ ಇದೆ. ಆದರೆ...ನನಗೋ ನಿಮಗೋ ಅಥವಾ ಇನ್ನಾರಿಗಾದರೋ ಹಾಡು ಅಂತ ಹೇಳಿದರೆ ಹಾಡುತ್ತಾರೆ. ಅಂದರೆ ಪ್ರೇಕ್ಷಕನಿಗೆ ಹೇಗೆ ಬೇಕೋ ಹಾಗೆ. ಅಥವಾ ಎದುರು ಕುಣಿಯುವ ವೇಷದಾರಿಗೂ ಬೇಕಾದಂತೆ ಆತ ಹೇಳಿದಂತೆ ಹಾಡುತ್ತಾರೆ. ಆಕ್ಷೇಪ ಎನೂ ಅಲ್ಲ. ಆದರೆ ತೀರ ಗಂಭೀರವಾಗಿ ಯೋಚಿಸುವಾಗ ಯಕ್ಷಗಾನಕ್ಕಾಗಿ ಹಾಡುವವರು ಎಷ್ಟು ಜನ ಇರಬಹುದು?  ಮೊನ್ನೆ ವಿದ್ವಾಂಸ ರಾಘವ ನಂಬಿಯಾರರ ಲೇಖನ ಓದುವಾಗ ಈ ಭಾವನೆ ಬಂದು ಬಿಟ್ಟಿತು.  ಅವರ ಕಾಳಜಿಯನ್ನು ಹತ್ತಿರದಿಂದ ಬಲ್ಲೆ. ವೈಯಕ್ತಿಕವಾಗಿ ಅವರ ಸಂಪರ್ಕದಲ್ಲಿ ಅದನ್ನು ತಿಳಿದಿದ್ದೇನೆ. 

ನಾನು ಒಂದು ಸಲ ಬಲಿಪ್ಪರಲ್ಲಿ ಹೀಗೆ ಮಾತನಾಡುವಾಗ ಕೇಳಿದ್ದೆ, ನೀವು ಕಲಾವಿದರು ಹೇಳಿ ಯಾವುದಾದರು ಪದ ವೆತ್ಯಾಸ ಮಾಡಿದ್ದು ಉಂಟೋ ಅಂತ. ಅಂದರೆ ಒಂದು ಪದ ಹೀಗೆ ಹಾಡಬೇಕು ಅಂತ ಒಬ್ಬರು ಹೇಳಿದರೆ ಹಾಗೆ.,  ಅವರು ಹೇಳಿದರು ಹಾಗೆ ಹೇಳಿದರೆ ಅದು ಯಕ್ಷಗಾನ ಹೇಗಾದೀತು? ತಾತ್ಪರ್ಯ ಇಷ್ಟೆ ಕೇವಲ ಯಕ್ಷಗಾನಕ್ಕಾಗಿ ಹಾಡುವಾಗ ಉಳಿದೆಲ್ಲವೂ ಗೌಣವಾಗಿಬಿಡುತ್ತದೆ. ಸಂಗೀತಗಾರ ಮೈದುಂಬಿ ಹಾಡುವಾಗ ಆತನಿಗೆ ಬೇರೆಯಾವುದೂ ಕಾಣುವುದಿಲ್ಲವಂತೆ ಹಾಗೆ. ಆ ಬಗೆಯಲ್ಲಿ ನೋಡುವಾಗ ಬಲಿಪ್ಪರು ಯಾರೋ ಚಪ್ಪಾಳೆ ಹೊಡೆಯುತ್ತಾರೆ, ಅಥವಾ  ಆ ಪದ ಬೇಡ ಅದು ಹೀಗೆ ಹಾಡಿ ಅಂತ ವೇಷಧಾರಿ ಹೇಳಿದ ಹಾಗೆ ಬಲಿಪ್ಪರು ಹಾಡಲೇ ಇಲ್ಲ. ಬಲಿಪ್ಪರು ಅಂತ ಅಲ್ಲ ಅಗರಿ ಮುಂತಾದ ಹಳೆ ತಲೆಮಾರಿನವರು ಎಂದಿಗೂ ತಮ್ಮ ನಿಲುವನ್ನು ಬದಲಿಸಿಲ್ಲ. ಅವರಿಗೆ ಯಕ್ಷಗಾನ ವೈಯಕ್ತಿಕ ಆಗಲಿಲ್ಲ.  ಬಲಿಪ್ಪರು ಹಾಗೆ ಅವರು ಎಂದಿಗೂ ಯಾರನ್ನೋ ಮೆಚ್ಚಿಸುವುದಕ್ಕೆ, ಯಾರೋ ಹೇಳಿದ್ದಕ್ಕೆ ರಂಗದಲ್ಲಿ ಪದ ಹೇಳಿದ್ದು ಇರಲಾರದು. ಎಲ್ಲೋ ಗಾನ ವೈಭವದಲ್ಲಿ ಹಾಡಿರಬಹುದು. ಗಾನ ವೈಭವ ಅದು ಅಧಿಕೃತ ಯಕ್ಷಗಾನವೇ ಅಲ್ಲ. ಬಲಿಪ್ಪರಿಗೂ ಗಾನವೈಭವದಲ್ಲಿ ಹಾಡು ಜೋಡಿಸುವಾಗ ಒಂದು ಸಲ ಕೇಳಿದೆ ಈ ಪದ ಈ ರಾಗದಲ್ಲಿ ಹಾಡಬಹುದೇ ಅಂತ. ಶಾಂತ ಸ್ವಭಾವದ ಬಲಿಪ್ಪರೂ ರೇಗಿ ಬಿಟ್ಟರು...ಯಕ್ಷಗಾನ ಪದ ಇರುವುದು ರಾಗದಲ್ಲಿ ಹಾಡುವುದಕ್ಕೆ ಅಲ್ಲ.  ನನ್ನ ಅಜ್ಞಾನಕ್ಕೆ ಅವರು ತೋರಿಸಿದ ರೀತಿ ಅದು. ಹಾಗಾಗಿಯೆ ನಾನು ಹೇಳುವುದು ಬಾಲ್ಯದಿಂದ ಇಂದಿನ ವರೆಗೂ ಯಕ್ಷಗಾನದ ಅಭಿರುಚಿ ಬದಲಾಗಿಲ್ಲ. ಈಗ ಯಕ್ಷಗಾನ ಸುಶ್ರಾವ್ಯ ರಾಗ ಸಂಗೀತಮಯವಾಗಿದೆ.  ಮೊದಲು ಲಘು ಸಂಗೀತ , ಸಿನಿಮಾ ಹಾಡು ಕೇಳುವ ನನ್ನ ಸಂಗೀತ ಪ್ರೀತಿ ಈಗ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಎನ್ನುವಂತೆ ಬದಲಾಗಿದೆ. ಆದರೆ ಯಕ್ಷಗಾನ ಬದಲಾಗದೇ ಇದ್ದದ್ದು ಯಕ್ಷಗಾನದಿಂದ ದೂರ ಉಳಿಯುವಂತೆ ಮಾಡಿದೆ. 

ಬಲಿಪ ಮತ್ತು ಅಗರಿ ಶೈಲಿ ನಾನು ಈಗಲಂತೂ ನನ್ನ ಸಂಗ್ರಹದಿಂದ ಕೆದಕಿ ಕೆದಕಿ ಕೊನೆಗೆ ಕೈ ಹಾಕುವುದು ಈ ಶೈಲಿಗೆ ಮಾತ್ರ. ಅದೇಕೋ ಸಂಗೀತ ಮಯ ಹಾಡುಗಾರಿಕಯಲ್ಲಿ ಆ ಪಕ್ವತೆಯನ್ನು ಗುರುತಿಸುವುದಕ್ಕೆ ನನ್ನ ಮನಸ್ಸು ಒಪ್ಪುವುದೇ ಇಲ್ಲ. ಹಲವರಿಗೆ ಇದು ಆಕ್ಷೇಪ ಅನ್ನಿಸಬಹುದು. ಆದರೂ ನನ್ನ ಅಭಿರುಚಿ ನನ್ನ ಸ್ವಂತ ಆಸ್ತಿ. ಮೊನ್ನೆ ಹೀಗೆ ಬಲಿಪ್ಪಜ್ಜನ ಯಕ್ಷ ಬದುಕಿನ ಅತ್ಯಂತ ಹಳೆಯ ಪದ ಮತ್ತು ಅರ್ಧ ಶತಮಾನದ ನಂತರದ ಅವರ ಪದ ಕೇಳಿದೆ, ಎಲ್ಲೋ ಕಂಠದ ವಯಸ್ಸಿನ ವೆತ್ಯಾಸ ವಷ್ಟೇ ಇತ್ತು. ಆ ಪದಗಳು ಶಿಲಾ ಮೂರ್ತಿಯಂತೆ ಯಾವ ವರ್ಷಧಾರೆಗೂ ಅದು ಬದಲಾಗಿಲ್ಲ.ಹಾಗೇ ಇತ್ತು. ಈಗ ಯಕ್ಷಗಾನ ಹಾಗಿಲ್ಲ. ಸಣ್ಣ ತುಂತುರು ಮಳೆಗೂ ಅದು ಬದಲಾಗಿ ಹೋಗಿದೆ ಮಾತ್ರವಲ್ಲ ಹೋಗುತ್ತಾ ಇದೆ. ಗಟ್ಟಿಯಾಗಿ ಬೇರು ಬಿಟ್ಟ ಅಲದ ಮರ ಕೂಡ ವಯಸ್ಸಾದ ನಂತರ ಮಗುಚಿ ಬೀಳುತ್ತದೆ. ಅದರ ಪಳೆಯುಳಿಕೆಗಳೂ ಅದರ ಅಸ್ತಿತ್ವವನ್ನು ಅಷ್ಟೋ ಇಷ್ಟೋ ಹೇಳಬಹುದು. ಆದರೆ ಮೇಲೆ ಹೇಳಿದ ದೊಡ್ಡ ಆಲದ ಮರದಂತೆ ಯಕ್ಷಗಾನ ಪಳೆಯುಳಿಕೆಯನ್ನೂ ಉಳಿಸಿದೆ ಅಂತ ಅನಿಸುವುದಿಲ್ಲ. 

ಈಗ ವಸ್ತು ನಿಷ್ಠ ಅಭಿಪ್ರಾಯಗಳೂ ಸಹ ಬೆಲೆ ಬಾಳುವ ವಸ್ತುಗಳಾಗಿ ಅಭಾವವನ್ನು ಉಂಟು ಮಾಡಿದೆ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ. ಮೊನ್ನೆ ಸಾಮಾಜಿಕ ತಾಣದಲ್ಲಿ ಒಂದು ವೀಡಿಯೋ ನೋಡಿದೆ. ಯಾವುದೋ ಸಿನಿಮಾ ಥಿಯೇಟರ್ ಹೊರಗೆ ಒಬ್ಬ ವ್ಯಕ್ತಿ ಸಿನಿಮಾ ಚೆನ್ನಾಗಿಲ್ಲ. ನಟನೆ ಚೆನ್ನಾಗಿಲ್ಲ ಅಂತ ಹೇಳಿದ. ಅಲ್ಲಿದ್ದ ಅಂಧ ಅಭಿಮಾನಿಗಳು ಆತನನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡರು. ಈಗೀಗ ಈ ಅಭಿಮಾನಿಗಳೂ ಅಭಿಮಾನಕ್ಕೆ ವೇತನ ಪಡೆಯುತ್ತಾರೆ. ಹಾಗಾಗಿ ಸಂಬಳಕ್ಕೆ ಒಂದಷ್ಟು ದುಡಿಮೆ ಸಲ್ಲಿಸಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸವಾಲೆಸೆದು ಬಿಡುತ್ತಾರೆ. ದುಡ್ಡುಕೊಟ್ಟು ಅಮೂಲ್ಯ ಸಮಯವನ್ನು ಉಪಯೋಗಿಸಿ ಸಿನಿಮಾ ನೋಡಿ ಅಭಿಪ್ರಾಯ ಹೇಳಿದರೆ ಆ ಹಕ್ಕು ಉಂಟು ಅಂತ ಯಾರೂ ಯೋಚಿಸುವುದಿಲ್ಲ. ತಮ್ಮ ಹಕ್ಕು ಪ್ರತಿಪಾದನೆಯಲ್ಲಿ ಉಳಿದವರ ನಿಜವಾದ ಹಕ್ಕನ್ನು ಧ್ವಂಸ ಮಾಡಿಬಿಡುತ್ತಾರೆ. ಅನ್ನದ ಹಕ್ಕು, ಬದುಕಿನ ಹಕ್ಕಿನ ನಡುವೆ ಸಾರ್ವತ್ರಿಕ ಹಕ್ಕು ಎಂದೋ ಕಳೆದು ಹೋಗಿದೆ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೋ ಕಳೆದು ಹೋಗಿದೆ. ಈಗ ಆಕ್ಷೇಪ ಅಥವಾ ಅನಿಸಿಕೆ ಹೇಳಬೇಕೆಂಬ ತೆವಲು ಇದ್ದರೆ  ತೆರೆಯ ಹಿಂದೆ ಆ ನಟ ಎಲ್ಲಿದ್ದಾನೋ ಹೇಗಿದ್ದಾನೋ ಅಂತ ಹುಡುಕಿ ಆತನ ಕಿವಿಯಲ್ಲಿ ಯಾರಿಗೂ ಕೇಳದಂತೆ ರಹಸ್ಯವಾಗಿ ಹೇಳಬಹುದು. ಅದೂ ಆತನಿಗೆ ಕೇಳುವ ವ್ಯವಧಾನ ಇದ್ದರೆ. ಹಾಗಾಗಿ ಈಗ ಇದು ಒಳ್ಳೆಯದುಂಟು  ಅಂತ ಹೇಳುವುದಕ್ಕಷ್ಟೇ ಅಭಿಪ್ರಾಯ ಸೀಮಿತಗೊಳ್ಳುತ್ತದೆ. ಹಾಗೆ ಹೇಳುವುದಕ್ಕೆ ಯಾವ ಪುರಾವೆಯನ್ನು ಒದಗಿಸಬೇಕಿಲ್ಲ. ಅದರಿಂದ ಯಾರಿಗೂ ಘಾಸಿಯೂ ಆಗುವುದಿಲ್ಲ. ಅದಕ್ಕೆ ಒಂದಷ್ಟು ಆತ್ಮವೆಂಚನೆ ಖರ್ಚು ಮಾಡಿದರೆ ಸಾಕು. ಅದರೂ  ಒಳ್ಳೆಯದುಂಟು ಅಂತ ಹೇಳದಿದ್ದರೆ ಅದು ಒಳ್ಳೆಯದಿಲ್ಲ...ಎಂಬ ಪರೋಕ್ಷ ಸಂದೇಶ ಅರ್ಥವಾಗುವರಿಗಷ್ಟೇ ಅರ್ಥವಾದೀತು. ಹಾಗಾಗಿ ಒಳ್ಳೆಯದಿಲ್ಲ ಅಂತ ಎಂಬ ಪದ, ಶಬ್ದ ಕೋಶದಲ್ಲಿದ್ದರೂ ಅದನ್ನು ಹೆಕ್ಕಿ ತೆಗೆವ ಸಾಹಸ ಮಾಡಬಾರದು. 

ಈಗ ಹರಕೆಯ ಮೇಳಗಳೂ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅದು ಎಷ್ಟಿದ್ದರೂ ಹರಕೆಯ ಮೇಳಗಳು. ಒಂದಿಷ್ಟು ಅದೇ ಆಸರೆ ಅಂತ ಹೇಳುವುದಕ್ಕಷ್ಟೆ ಸಾಧ್ಯ. ಸರಕಾರಿ ಬಸ್ಸುಗಳು ಸಮಯಕ್ಕೆ ಬಂದರೆ ಅದೇ ಭಾಗ್ಯ ಎನ್ನುವ ಹಾಗೆ. ಹೇಳುವುದಕ್ಕೆ ಒಂದು ಸಮಯ ಅಂತ ಇರುತ್ತದೆ. ಯಕ್ಷಗಾನಕ್ಕೆ ಮಾತ್ರ ಹಾಡುವ ಆಡುವ ಕಲಾವಿದರು ಎಷ್ಟಿದ್ದಾರೆ ಅಂತ ಯೋಚಿಸುವ ಹಾಗೆ ಆಗುತ್ತದೆ. ಯಾಕೆಂದರೆ ಬಲಿಪ್ಪರ ಭಾಗವತಿಕೆಯನ್ನು ಸುಮಾರು ಐವತ್ತು ವರ್ಷದಷ್ಟುಅನುಭವಿಸಿದ್ದೇನೆ. ಅವರು ಎಂದಿಗೂ ವೈಯಕ್ತಿಕವಾಗಿ ಹಾಡಲಿಲ್ಲ. ಯಾರಿಗೋ ಬೇಕಾಗಿ ಪದ ಹೇಳಿದ ನೆನಪಿಲ್ಲ. ಕೇವಲ ಯಕ್ಷಗಾನಕ್ಕೆ ಮಾತ್ರ ಅವರ ಪದ. ಈಗ ಹೇಳಿ ಎಷ್ಟು ಜನ ಯಕ್ಷಗಾನಕ್ಕೆ ಮಾತ್ರ ಪದ ಹೇಳುತ್ತಾರೆ.? 

Friday, March 21, 2025

ಭಗ್ನಾವಶೇಷ

                 ನನ್ನ ಕುಂದಾಪುರದ  ಸಂಬಂಧೀ  ಮಿತ್ರರೊಬ್ಬರು  ಪುತ್ತೂರಿನ ಬಳಿ ಒಂದು  ಬ್ರಾಹ್ಮಣರ ಮದುವೆಗೆ ಹೋಗಿದ್ದರು. ಇದು ಬಹಳ ಹಳೆಯ ಕಥೆ.  ಹೋದವರು ನನಗೆ ಸಿಕ್ಕಿದಾಗ ಹೇಳಿದರು ನಿಮ್ಮ ಕಡೆ ಸಂಪ್ರದಾಯಗಳು ರೀತಿ ರಿವಾಜುಗಳು ಹಲವಾರು ಇನ್ನೂ ಹಾಗೆ ಉಳಿದಿವೆ.  ಅವರ ಅಭಿಪ್ರಾಯದ ಗಂಭೀರತೆ ನನಗೆ ಆಗ ಅರಿವಾಗಲಿಲ್ಲ. ಆದರೆ ಕುಂದಾಪುರದ ಬಳಿಯ  ಒಂದು  ಮದುವೆಗೆ ಹೋಗಿದ್ದೆ. ಆಗ  ಅವರು ಹೇಳಿದ ಮಾತು ಬಹಳ ಸತ್ಯ ಅಂತ ಕಂಡಿತು.  ನಾನು  ಮದುವೆಗೆ ಹೋಗುವಾಗ  ಮಧ್ಯಾಹ್ನ ಹತ್ತಿರದ ವೇಳೆಯಾಗಿತ್ತು. ಇನ್ನೇನು ಊಟ ಆರಂಭವಾಗುವುದರಲ್ಲಿತ್ತು. ಸಾಕಷ್ಟು ಸಂಖ್ಯೆಯ ಜನರೂ ಇದ್ದರು. ಸಾಮಾನ್ಯವಾಗಿ ನಮ್ಮಗಳ  ಮದುವೆ ಮನೆಯಲ್ಲಿ  ಮೊದಲು ಬ್ರಾಹ್ಮಣರಿಗೆ ಒಂದು ಬದಿಯಲ್ಲಿ ಹಸ್ತೋದಕ ಕೊಡುವ ಕ್ರಮ ಇರುತ್ತದೆ. ಅದೊಂದು ಸಂಪ್ರದಾಯ. ಆದರೆ ಅಲ್ಲಿ ಅದು ಕಂಡು ಬಾರದೆ ಅಲ್ಲಿನ ಹಿರಿಯರು ಹತ್ತಿರ ಬಂದಾಗ ...ಹಸ್ತೋದಕ ಆಯ್ತಾ  ಅಂತ ಸುಮ್ಮನೇ ಕೇಳಿದಾಗ ಅವರಿಗೆ ಒಂದಷ್ಟು ಪೆಚ್ಚಾಯಿತು. ನಾನು ಕೇಳಿದ್ದು ಅಧಿಕ ಪ್ರಸಂಗ ಅಂತ ನನಗನ್ನಿಸಿತು. ಕೇಳುವ ಅವಶ್ಯಕತೆಯೇ ಇರಲಿಲ್ಲ. ಆದರೂ..ಸಾಮಾನ್ಯವಾಗಿ ನಾನು ಇಂತಹ ಮದುವೆಗೆ ಅದೂ ಊರಲ್ಲಿ ನೆಲದಲ್ಲಿ ಕುಳಿತು ಸಂಪ್ರದಾಯದಂತೆ ಸಾವಧಾನವಾಗಿ ಊಟ ಮಾಡುವುದಕ್ಕೆ ಬಯಸುವವ. ಹಾಗಾಗಿ ಸುಮ್ಮನೇ ಕೇಳಿಬಿಟ್ಟೆ. ಅವರಿಗೆ ಏನನ್ನಿಸಿತೋ ಅಂತ ಆಮೇಲೆ ಕೇಳಬಾರದಿತ್ತು ಅಂತ ಅನಿಸಿತು. ಆದರೆ ಅವರು ಅದನ್ನೇನೂ ಗಂಭೀರವಾಗಿಸದೇ ನನ್ನನ್ನು ಮದುವೆ ಮನೆಯವರ ಬಳಿಗೆ ಕರೆದು ಕೊಂಡು ಹೋಗಿ ಹಸ್ತೋದಕಕ್ಕೆ ವ್ಯವಸ್ಥೆ ಮಾಡಿದರು. ಅಷ್ಟಾಗಿ ಅಲ್ಲಿ ಹಾಗೆ ಕುಳಿತುಕೊಳ್ಳುವುದಕ್ಕೆ ಯಾವ ಬ್ರಾಹ್ಮಣರೂ ಬರಲಿಲ್ಲ. ಕೊನೆಗೆ ಅಡುಗೆಯ ಭಟ್ಟರ ಜತೆಗೆ ಪರಿಚಾರಕರಾಗಿದ್ದ ಒಬ್ಬರನ್ನು ಕರೆದು ನನಗೆ ಮತ್ತು ಅವರಿಗೆ ನೆಲದಲ್ಲಿ ಮಣೆ ಹಾಕಿ ಬಾಳೆ ಎಲೆ ಹಾಕಿ ಊಟಕ್ಕೆ ಸಿದ್ದತೆ ಮಾಡಿ ...ಇಬ್ಬರಿಗೆ ಹಸ್ತೋದಕ ಕೊಟ್ಟು ಊಟ ಬಡಿಸಿದರು. ದಾನವಾಗಿ ವಸ್ತ್ರ ವನ್ನೂ ಕೊಟ್ಟು ಜತೆಗೆ ದಕ್ಷಿಣೆಯನ್ನು ಕೈಗೆ ಇಟ್ಟರು.  ಕೊನೆಗೆ ಒಬ್ಬರು ಹೇಳಿದರು ಇಲ್ಲೆಲ್ಲ...ಇದೆಲ್ಲ ಕಾಣೆಯಾಗಿದೆ ಅಂತ ಒಬ್ಬರು ಹೇಳಿದರು. 

ಈ ಘಟನೆ ಹೀಗೆ ಮತ್ತೊಮ್ಮೆ ನೆನಪಿಗೆ ಬಂತು,  ಎಂದರೆ ಇದೇ ಬಗೆಯ ಮಾತು ಬಹಳ ಹಿಂದೆ ಯಕ್ಷಗಾನದ ಬಗ್ಗೆ ಮಿತ್ರರೊಬ್ಬರು ಹೇಳಿದರು ನೀವೆಲ್ಲ ಸ್ವಲ್ಪ ಭಾಗ್ಯವಂತರು, ನಿಮ್ಮ ತೆಂಕಣ ಭಾಗದಲ್ಲಿ ಯಕ್ಷಗಾನ ಅದರಲ್ಲೂ ತೆಂಕು ತಿಟ್ಟು ಇನ್ನೂ ಹಲವಾರು ಸಂಪ್ರದಾಯಗಳನ್ನು ಹಾಗೆ ಉಳಿಸಿಕೊಂಡಿದೆ. ಹೆಚ್ಚು ಅವಿಷ್ಕಾರ ಅಗಲಿಲ್ಲ.  ಅವಿಷ್ಕಾರ ಎನ್ನುವುದಕಿಂತ ಹಾಳಾಗಲಿಲ್ಲ ಎಂದರೆ ಸರಿ. ಇದೆಲ್ಲ ಅವರ ವೈಯಕ್ತಿ ಅಭಿಪ್ರಾಯವಾಗಿತ್ತು. ಯಾಕೆಂದರೆ ಊರು ಬಿಟ್ಟನಂತರ ಯಕ್ಷಗಾನ ನೋಡುವುದು ಅಪರೂಪ ಅದರಲ್ಲೂ ಬಡಗು ತಿಟ್ಟು ಅದೂ ಮೇಳದ ಆಟಗಳನ್ನು ನೋಡುವ ಅವಕಾಶವೇ ಸಿಗಲಿಲ್ಲ. ಹಾಗಾಗಿ ಅವರ ಮಾತಿಗೆ ಸ್ವ ಅಭಿಪ್ರಾಯ ಹೇಳುವುದಕ್ಕೆ ಇರಲಿಲ್ಲ. ಇದೇ ರೀತಿ ಬಡಗಿನ ಹಿರಿಯ ಕಲಾವಿದರೊಬ್ಬರು ಕೂಡ ನನ್ನಲ್ಲಿ ಹೇಳಿದ್ದರು. ಈಗಲೂ ಇದರ ಬಗ್ಗೆ ನನ್ನ ಪ್ರತಿಕ್ರಿಯೆ ಶೂನ್ಯ. ಆದರೆ ಇತ್ತೀಚೆಗೆ ಉಯಾಲೆ ಭಗ್ನದ ವಿವಾದ ಕಣ್ಣೆದುರು ಬಂದಾಗ ಈ ಎಲ್ಲ ವಿಷಯಗಳು ನೆನಪಿಗೆ ಬಂದವು. 

ಉಯ್ಯಾಲೆ ಕುಸಿದ ಘಟನೆ ನಿಜಕ್ಕೂ ಖೇದನೀಯ ಘಟನೆ. ಅದರ ನಂತರ ಘಟನೆಯನ್ನು ಆಕ್ಷೇಪಿಸಿ ಹಲವಾರು ಕಲಾವಿದರು ಪ್ರೇಕ್ಷಕರೂ ತಮ್ಮ ತಮ್ಮ ಪರಿಧಿಯಲ್ಲಿ ತಮ್ಮ ದೃಷ್ಟಿಕೋನದಲ್ಲಿ ಪ್ರತಿಕ್ರಿಯೆ ಆಕ್ಷೇಪ ಸಹಜವಾಗಿ ಕೊಡುತ್ತಾ ಹೋದರು. ಆಕ್ಷೇಪಗಳಲ್ಲಿ ಹಲವರು ಯಕ್ಷಗಾನ ಅವಿಷ್ಕಾರಗಳಿಂದ ಕೆಟ್ಟು ಹೋಗಿದೆ. ಹಳೆಯ ಸಂಪ್ರದಾಯದ ಪರಂಪರೆಯ ಬಗ್ಗೆ ಯಾರಿಗೂ ಗೌರವ ವಿಲ್ಲ. ಹೀಗೆ ಈ ಅಭಿಪ್ರಾಯಗಳನ್ನು ಹೇಳಿ ಪರಿಶುದ್ದ ಯಕ್ಷಗಾನ ಕಾಣೆಯಾಗಿದೆ. ಯಕ್ಷಗಾನದಲ್ಲಿ ಆಭಾಸಗಳು ಹೆಚ್ಚಾಗಿದೆ ಅವುಗಳನ್ನೆಲ್ಲ ಕೈ ಬಿಡಬೇಕು ಹೀಗೆ ಯಕ್ಷಗಾನದ ಪರಂಪರೆ ಉಳಿಯಬೇಕು ಎನ್ನುವಂತಹ ಮಾತುಗಳು ಕೇಳಿ ಬಂದವು. ನಿಜಕ್ಕೂ ಇದು ಗೌರವದ ಪ್ರತಿಕ್ರೆಯೆಗಳು ಎನ್ನುವುದರಲ್ಲಿ ಸಂದೇಹವಿಲ್ಲ. 

ಆದರೆ ಹೀಗೆ ಈಗಿನ ಯಕ್ಷಗಾನದಲ್ಲಿ ಆಭಾಸಗಳನ್ನು ಕಳೆದರೆ ಮೊದಲಿಗೆ ದೇವಿ ಮಹಾತ್ಮೆ ಪ್ರಸಂಗವನ್ನೇ ದೂರ ಇಡಬೇಕಾದ ಪರಿಸ್ಥಿತಿ ಬರಬಹುದು. ಯಾಕೆಂದರೆ ಈ ಪ್ರಸಂಗ ಯಕ್ಷಗಾನದಿಂದ ದೂರಾಗಿ ಬಹಳ ವರ್ಷಗಳೇ ಕಳೆದು ಹೋಗಿದೆ. ಈಗ ಈ ಪ್ರಸಂಗದಲ್ಲಿ ಯಾವುದಾದರೂ ಯಕ್ಷಗಾನದ ಅಂಶ ಇದೆ ಎಂದನ್ನಿಸುವುದಿಲ್ಲ. ಇನ್ನು ಬಿಡಬೇಕಾಗಿರುವುದು ಏನು ಅಂತ ಆಶ್ಚರ್ಯವಾಗದೇ ಇರುವುದಿಲ್ಲ. ಮೊದಲಿಗೆ ಈ ಪ್ರಸಂಗದಲ್ಲಿ ಯಾವ ಯಕ್ಷಗಾನದ ಗುಣ ಇದೆ ಅಂತ ಅಚ್ಚರಿಯಾಗುತ್ತದೆ. ಕೇವಲ ಭಕ್ತಿ ಪ್ರಧಾನವಾಗಿ ಮಾತ್ರ ಇದನ್ನು ಕಾಣುವಾಗ ಇದು ಕೇವಲ ಹರಕೆಗೆ ಸೀಮಿತವಾಗುತ್ತದೆ. ನನ್ನ ಅಜ್ಜ ಹೇಳುತ್ತಿದ್ದರು ದೇವಿ ಮಹಾತ್ಮೆ  ಪ್ರಸಂಗದ ಆಟಕ್ಕೆ ಹೋಗುವುದು ಒಂದೇ ಭೂತಕೋಲಕ್ಕೆ ಹೋಗುವುದು ಒಂದೇ... ಅವರು ವಿಡಂಬನೆಗಾಗಿ ಹೇಳಿದರೂ ಸಹ ಅದು ವಾಸ್ತವದ ಸತ್ಯ. ನಿಜಕ್ಕೂ ಏನಿದೆ ಈ ಪ್ರಸಂಗದಲ್ಲಿ? ಆರಂಭದಿಂದ ಅಂತ್ಯದವರೆಗೂ ಬರೀ ಗದ್ದಲವಲ್ಲದೇ ಬೇರೆ ಏನೂ ಇಲ್ಲ. ಸರಿಯಾಗಿ ಕುಣಿಯದಿದ್ದರೂ, ಮಾತನಾಡಲೂ ತಿಳಿಯದಿದ್ದರೂ ಈ ಪ್ರಸಂಗದಲ್ಲಿ ವೇಷ ಮಾಡಬಹುದು. ಆಟ ರೈಸುವುದಕ್ಕೆ ಚೆಂಡೆ ಮದ್ದಲೆ ಬೇಕೆಂದೇನು ಇಲ್ಲ...ಬ್ಯಾಂಡ್ ವಾದ್ಯ ಘರ್ನಾಲು ಇರುವಾಗ ಹೇಗೋ ಒಬ್ಬರು ಇದ್ದರೂ, ದೇವಿಯ ಮಹಿಮೆಯೋ ಏನೋ ಈ ಪ್ರಸಂಗಕ್ಕೆ ಯಾವ ಬಾಧಕವೂ ಬರುವುದಿಲ್ಲ. ಹಾಗಾಗಿ ಯಕ್ಷಗಾನಕ್ಕೆ ಸಂಬಂಧಿಸಿ ಬದಲಾವಣೆ ತಂದರೆ ಈ ಹರಕೆಗಾಗಿ ಅಡುವ ದೇವಿ ಮಹಾತ್ಮೆ ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ದೂರವಿಡಬೇಕಾಗಿ ಬರಬಹುದು.  ಹೀಗೆ ಯಕ್ಷಗಾನದಿಂದ ದೂರಾಗಿ ಕೇವಲ ಸರ್ಕಸ್ ಮತ್ರ ಆಗಿರುವಾಗ ಈ ಬಗೆಯ ಅವಗಢಗಳು ಸಹಜ. ಅದು ಇಂದು ನಿನ್ನೆಯದಲ್ಲ ...ಇಂತಹದ್ದು ಎಷ್ಟೋ ಆಗಿರುತ್ತದೆ. ಆದಾಗ ಒಂದು ಸಲ ವಿವಾದವಾಗಿ ಆನಂತರ ಮರೆತು ಹೋದರೂ ಯಾವಾಗಲಾದರೂ ಒಮ್ಮೆ ಸ್ವಾರಸ್ಯದ ವಿಷಯಕ್ಕೆ ಈ ಘಟನೆ ವಸ್ತುವಾಗುತ್ತದೆ. 

ಉಯ್ಯಾಲೆ ಭಗ್ನವಾದಾಗ ಯಕ್ಷಗಾನಕ್ಕೆ ಅವಮಾನ ಅಂತ ಕೂಗು ಎಬ್ಬಿಸಿದವರೇ ಅಧಿಕ. ಯಕ್ಷಗಾನವೇ ಇಲ್ಲದ ಮೇಲೆ ಅಲ್ಲಿ ಯಕ್ಷಗಾನದ ಹೆಸರಿಗೆ ಅವಮಾನ ಮೆತ್ತಿಸುವುದು ಸರಿಯಲ್ಲ. ಒಂದು ದೈವಾರಾಧನೆ, ಮತ್ತುನಂಬಿಕೆಗೆ ಅವಮಾನವಾಯಿತು ಸತ್ಯ. ಯಕ್ಷಗಾನದ ಬಗ್ಗೆ ಈ ಕಾಳಜಿ ಇದ್ದರೆ ಈ ಪ್ರತಿಕ್ರಿಯಿಸಿದವರು ಮತ್ತೊಮ್ಮೆ ಯೋಚಿಸುವುದು ಉತ್ತಮ...ಈ ಘಟನೆ ಬಿಟ್ಟು ಬೇರೆ ಎಷ್ಟು ಉತ್ತಮ ಅಂಶಗಳು ಉಳಿದುಕೊಂಡಿದೆ? ಅದಕ್ಕೆ ಎಷ್ಟು ನಾವು ಜವಾಬ್ದಾರರಾಗಿದ್ದೇವೆ. ಹಿಮ್ಮೇಳದಿಂದ ತೊಡಗಿ ಮುಮ್ಮೆಳದವರೆಗೂ ಅವಿಷ್ಕಾರಗಳಿಗೆ ಯಾರು ಹೇಗೆಲ್ಲ ದೇಣಿಗೆ ಸಲ್ಲಿಸಿದ್ದಾರೆ ಎಂದು ಯೋಚಿಸಬೇಕು. ಪರಂಪರೆ ಯಕ್ಷಗಾನ ...ಎಂದು ಹುಯಿಲೆಬ್ಬಿಸುವ ಮೊದಲು ಇದರ ಪರಿಚಯ ಎಷ್ಟರ ಮಟ್ಟಿಗೆ ಇದೆ. ಪರಿಚಯ ಇದ್ದವರಿಗೆ ಯಾವ ರೀತಿಯ ಗೌರವ ಸಲ್ಲಿಕೆಯಾಗುತ್ತದೆ...ಹೀಗೆ ಯೋಚಿಸಬೇಕಾದ ವಿಷಯಗಳು ಸಾಕಷ್ಟು ಇದೆ. ಇಲ್ಲವಾದರೆ ... ಈ ಘಟನೆಯ ಬಗ್ಗೆ ಗಂಭೀರವಾಗುವ ಅವಕಾಶವೂ ಇರುವುದಿಲ್ಲ ಅರ್ಹತೆಯೂ ಇರುವುದಿಲ್ಲ. ನನಗೆ ಮಾತ್ರ ಉಯಾಲೆಯಿಂದ ಕುಸಿದ ಕಲಾವಿದನ ಬಗ್ಗೆ ಅನುಕಂಪವಾಗುತ್ತದೆ. ತುಂಬಿದ ಸಭೆಯಲ್ಲಿ ಆದ ಘಟನೆ, ದೇಹಕ್ಕೆ ಮನಸ್ಸಿಗೆ ಆದ ಪರಿಣಾಮ ಹೇಗಿರಬಹುದು? ಈತನಿಗೆ ಅಲ್ಲೇ ಶಿಕ್ಷೆ ಸಿಕ್ಕಿದೆ ಅಂತ ಅಂದುಕೊಂಡರೂ ಕೇವಲ ಶಿಕ್ಷೆ ಈ ಒಬ್ಬನಿಗೆ ಸಿಕ್ಕಿದ್ದರಲ್ಲಿ ಎಲ್ಲವೂ ಸರಿಯಾಗಬಹುದೇ ....ಯೋಚಿಸಿದರೆ ಖಂಡಿತ ಇಲ್ಲ. ಈ ಒಂದು ಘಟನೆಗೆ ಕೇವಲ ಈತ ಮಾತ್ರ ಕಾರಣ ಅಲ್ಲ. ಈತ ಕೇವಲ ನಿಮಿತ್ತ ಮಾತ್ರ. ಹಾಗಾಗಿ ಇದರ ಬಗ್ಗೆ ಹೇಳುವುದಕ್ಕೆ ಹಲವಿದ್ದರೂ ಹೇಳದೇ ಮೌನವಾಗಬೇಕು. ಎಲ್ಲ ಅವಕಾಶಗಳು ಕಳೆದು ಹೋಗಿದೆ ಎಂದರೆ ಸೂಕ್ತ. 

ಇದು ಕೇವಲ ನನ್ನ ಅಭಿಪ್ರಾಯ. ಇದಕ್ಕೆ ಆಕ್ಷೇಪಗಳು ಇದ್ದರೂ ಇರಬಹುದು. ಆದರೆ ಆ ಬಗ್ಗೆ ನಾನಂತೂ ಗಂಭೀರವಾಗುವವನಲ್ಲ. 

Saturday, January 25, 2025

ಅನಾವಶ್ಯಕ ವಿಷಯಗಳು

   

   ಬದಲಾವಣೆ ಎಂಬುದು ಜಗದ ನಿಯಮ. ಆದರೆ ಅದರ ಪರಿಣಾಮದ ಫಲಾಫಲಗಳ ಬಗ್ಗೆ ಯೋಚಿಸುವಾಗ , ಇಲ್ಲಿ ಭಿನ್ನಾಭಿಪ್ರಾಯ ತೋರಿ ಬರುವಾಗ ಅದು ವಿವಾದವಾಗುತ್ತದೆ. ಬದಲಾವಣೆ ಬೇಕೋ ಬೇಡವೋ ಅದಕ್ಕೆ ಅದು ಕಾಯುವುದೇ ಇಲ್ಲ. ಅದು ಸಂಭವಿಸಿಬಿಡುತ್ತದೆ. ವಿವಾದಕ್ಕೆ ಸಂಬಂಧಿಸಿ ಅದು ನಿಲ್ಲುವುದಿಲ್ಲ. 

    ಯಕ್ಷಗಾನದಲ್ಲಿ ಸಿನಿಮಾ ನಟನಟಿಯರು ಬರುವುದು ಹೊಸತೇನಲ್ಲ. ಅವರು ಅಂತ ಅಲ್ಲ...ಅನ್ಯರೂ ಬರುತ್ತಾರೆ. ವಿಪರ್ಯಾಸವೆಂದರೆ ಅದು ಸುದ್ದಿಯಾಗುವುದಿಲ್ಲ. ನಟನಟಿಯರು ಬಂದಾಗ ಯಾಕೆ ಸುದ್ದಿಯಾಗುತ್ತದೆ? ಯಾಕೆಂದರೆ ಅದು ಸಂಭವಿಸುವುದು ಸುದ್ದಿಗಾಗಿ. ಹಾಗಾಗಿ ಅದಕ್ಕೆ ಉದಾಸೀನವೇ ಸೂಕ್ತ ಪರಿಹಾರ. 

     ಹಿಂದೆ ಹಲವು ನಟನಟಿಯರು ಬಂದಿದ್ದಾರೆ. ಅವಶ್ಯಕತೆ ಇದೆಯೋ ಇಲ್ಲವೊ ಆದರೆ ಬಂದಾಗ ಬಿಳಿಯಾನೆಯ ನೆನಪಾಗುತ್ತದೆ.  ಕರಿಯಾನೆಯೇ ನೋಡಿದವರಿಗೆ ಬಿಳಿಯಾನೆ ಎನ್ನುವಾಗ ಒಂದಷ್ಟು ವಿಶೇಷವಾಗುತ್ತದೆ. ವಿಡಂಬನೆ ಎಂದರೆ ಕರಿಯಾನೆಯನ್ನೇ ಬಿಳಿಯಾನೆ ಅಂತ ಹೇಳುವಾಗ ಮೂರ್ಖತನದ ಅನುಮಾನ ಮಾತ್ರ ಉಂಟಾಗುತ್ತದೆ.

    ಅನೆಗೆ ಸಲ್ಲುವ ಮಹತ್ವದಲ್ಲಿ ನಿತ್ಯ ಇರುವುದಕ್ಕೆ ಬೆಲೆ ಕಡಿಮೆಯಾಗಿ ಅಥವಾ ಇಲ್ಲದಾಗುವುದು ಆತಂಕದ ವಿಷಯವಾಗುತ್ತದೆ.  ಆಗ ಇದು ಬೇಕಾ ಬೇಡವಾ ಅಂತ ಚರ್ಚೆಯಾಗುತ್ತದೆ. 

   ಹಿಂದೆ ಮಲಯಾಳಂ ಸಿನಿಮಾ ಒಂದರಲ್ಲಿ ಆಗಿನ ಪ್ರಸಿದ್ದ ನಟಿ ಶ್ರೀದೇವಿ ನಟಿಸುವುದು ಸುದ್ದಿಯಾಗಿತ್ತು. ಸುದ್ದಿ ಮಾತ್ರವಲ್ಲ ಅದು ಚರ್ಚೆಗೂ ಕಾರಣವಾಗಿತ್ತು. ಕಾರಣ ಇಷ್ಟೇ, ಮಲಯಾಳಂ ಸಿನಿಮ ಹೆಚ್ಚಾಗಿ ಕಡಿಮೆ ಬಜೆಟ್ ನ ಸಿನಿಮಾಗಳು. ಆಗ ಒಂದು ಸಿನಿಮಾದ ಒಟ್ಟು ಖರ್ಚಿಗಿಂತ ಆಧಿಕ ಈ ನಟಿಯ ಸಂಭಾವನೆಯಾದರೆ ಅಲ್ಲಿ ನಿತ್ಯ ವಾಡಿಕೆಯ ನಟಿಯರಿಗೆ ಹೇಗಾಗಬೇಡ? ಹಾಗಾಗಿ ಈ ಆಡಂಬರದಲ್ಲಿ ಲೆಕ್ಕ ಕಳೆದುಕೊಳ್ಳುವವರು ಸಾಮನ್ಯರು. ಪಾಪ ಅವರ ಪಾಡು ತಮ್ಮ ಮಟ್ಟ ಮೇಲಾಯಿತೋ ಇಲ್ಲ ಮೇಲಿನವರದ್ದು ಕೆಳಗಾಯಿತೋ ಎಂಬ ಜಿಜ್ಜಾಸೆಯಲ್ಲಿ ಉಳಿದುಬಿಡುತ್ತಾರೆ. ಆಗ ಇದೆಲ್ಲ ಅವಶ್ಯಕತೆ ಉಂಟಾ ಅಂತ ಚರ್ಚೆಯಾಗುವುದು ಸ್ವಾಭಾವಿಕ. 

    ಒಬ್ಬ ಸಿನಿಮಾದವರನ್ನು ಕರೆಯುವ ಬದಲಾಗಿ ಅದೇ ಹಣದಲ್ಲಿ ಇಲ್ಲಿಯ ಮಟ್ಟಿಗೆ ಒಂದು ಮೇಳದ ಹಿರಿಯ ಉತ್ತಮ ಅಗ್ರ ಪಂಕ್ತಿಯ ಕಲಾವಿದರನ್ನು ಹಾಕಿದರೆ ಉತ್ತಮವಲ್ಲವೇ? ಕೆಲವೊಮ್ಮೆ ಹಾಗೇ ಹೂವಿಗಿಂತಲೂ ಹೂವಿನ ಬುಟ್ಟಿಗೆ ಹೆಚ್ಚು ಬೆಲೆ ತೆರಬೇಕಾಗುತ್ತದೆ. 
ಹಲವು ಸಲ ಬೆಂಗಳೂರಿಂದ ಮಂಗಳೂರಿಗೆ ಇರುವ ರೈಲಿನ ಟಿಕೇಟ್ ಬೆಲೆಗಿಂತಲೂ ರೈಲು ಇಳಿದು ಮನೆಗೆ ಹೋಗುವ ಆಟೊದ ಬಾಡಿಗೆ ಹೆಚ್ಚಾಗಿರುತ್ತದೆ.

        ಬದಲಾವಣೆ ಬೇಕು. ಆದರೆ ಅದು ಅವಶ್ಯಕತೆಯನ್ನು ಮೀರಬಾರದು, ಮಾತ್ರವಲ್ಲ ಅದು ಸೂಕ್ತವಾಗಿ ಎಲ್ಲದಕ್ಕೂ ಗೌರವವನ್ನು ತರಬೇಕು. ಮೂಲ ಯಕ್ಷಗಾನಕ್ಕೇ ಏನು ಪ್ರಯೋಜನ ಅಂತ ಕೇಳಿದರೆ ಏನುಂಟು? ಏನೂ ಇಲ್ಲ. ಬಂದವರಿಗೆ ತಂದವರಿಗೆ ಒಂದು ಹೆಗ್ಗಳಿಕೆ ಒಂದಷ್ಟು ಸ್ವಾರ್ಥ ಬಿಟ್ಟು ಮತ್ತೆ ಯಾವ ಪುರುಷಾರ್ಥವೂ ಇರುವುದಿಲ್ಲ.ಇದು ಯಕ್ಷಗಾನಕ್ಕೂ ಏನೂ ಹೊಸತಲ್ಲ. ಈ ಚರ್ಚೆ ವಿವಾದವೂ ಹೊಸತಲ್ಲ. ಸಂಭವ ನಿರಂತರ. ಹಾಗಾಗಿ ಇದು ನಿಸ್ಸಾರ ವಿಷಯವಾಗುತ್ತದೆ.


Sunday, September 29, 2024

ಅರುವತ್ತರ ವಿಶ್ವವ್ಯಾಪಿ ವಿಶ್ವಣ್ಣ

         ಅರುವತ್ತು ಎಂದರೆ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ. ಲೆಕ್ಕದಲ್ಲಿ ಹೇಳುವಾಗ ಐವತ್ತರ ನಂತರ ಮತ್ತು ಹತ್ತು. ಐವತ್ತು ಬದುಕಿನ ಅರ್ಧವನ್ನು ಹೇಳಿದರೆ ಅರುವತ್ತು ಮತ್ತೆ ಉತ್ತರಾರ್ಧವನ್ನು ಹೇಳುತ್ತದೆ. ಅದುವರೆಗೆ ಮನುಷ್ಯ ತನಗಾಗಿ ಬದುಕಿದರೆ ಆನಂತರದ ಬದುಕು ಅವನದ್ದಾಗಿರುವುದಿಲ್ಲ. ಬದುಕಿನ ಬಹಳಷ್ಟು ಅಂಶ ಪರಾಧೀನವಾಗಿಬಿಡುತ್ತದೆ. ದೇಹ ಮನಸ್ಸು ಚಿಂತನೆ ಎಲ್ಲವೂ ಪರಾಧೀನ. ಮತ್ತೊಬ್ಬರಿಗೆ ಅದು ಮೀಸಲು. ಯಕ್ಷಗಾನದ ಓರ್ವ ಮೇಧಾವಿ  ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮಟ್ಟಿಗೆ ಹೇಳುವುದಾದರೆ ಇದು ಐವತ್ತರಿಂದ ನಂತರ ಅಂತ ಹೇಳುವುದಕ್ಕೆ ಬರುವುದಿಲ್ಲ. ಯಕ್ಷಗಾನದ ಕಲೆಗಾಗಿ ತನ್ನದೆಲ್ಲವನ್ನೂ ಮೀಸಲೆಂಬಂತೆ ಬೆಳೆದು ನಿಂತವರು. 


ಒಂದು ಸಲ ಕೃಷ್ಣ ಸಂಧಾನದ ವಿದುರನ ಪಾತ್ರದ ಅರ್ಥವನ್ನು ಕೇಳುತ್ತಿದ್ದಂತೆ ನಾನು ಭಕ್ತಿ ಪರವಶನಾಗಿ ಹೋಗಿದ್ದೆ. ಮೃಣ್ಮಯನಾದ ಮನುಷ್ಯ ಮಾತ್ರದವನು ಚಿನ್ಮಯ ಸ್ವರೂಪವನ್ನು ಕಾಣುವ ಪಾತ್ರವದು. ಮಂದವಾಗಿ ತೊಡಗುವ ಸುಣ್ಣಂಬಳ ಅರ್ಥಗಾರಿಕೆ ಅದು ಗಂಭೀರವಾಗಿ ಮನಸ್ಸಿನಾಳಕ್ಕೆ ಇಳಿದು ಬಿಟ್ಟು ಮನಸ್ಸು ಲೌಕಿಕ ಬದುಕಿನಿಂದ ಅಲೌಕಿಕತೆಗೆ ಜಾರಿಬಿಟ್ಟಿತು. 

ಸಾಮಾನ್ಯವಾಗಿ ತಾಳಮದ್ದಲೆಯ ಅರ್ಥಗಾರಿಕೆ ಅದು ಸಂಪೂರ್ಣ ವಿಷಯಾಧಾರಿತವಾಗುತ್ತದೆ. ಪಾತ್ರ ಮಾತ್ರವಲ್ಲದೇ ಅಲ್ಲಿ ಪ್ರಸ್ತುತವಾಗುವ ವಿಷಯಗಳು ಸಂಘರ್ಷಗಳು ಆ ಪಾತ್ರದ ವ್ಯಕ್ತಿ ಚಿತ್ರಣವನ್ನು ನೀಡುತ್ತವೆ. ಅದು ಪರಿಪೂರ್ಣ ಕಥೆಯಾಗಬೇಕೆಂದೇನೂ ಇಲ್ಲ. ಆ ಪಾತ್ರಕ್ಕೆ ಮಾತ್ರ ಸೀಮಿತ. ಸುಣ್ಣಂಬಳ ಅರ್ಥಗಾರಿಕೆ ಈ ಚೌಕಟ್ಟಿನಲ್ಲೇ ವ್ಯಕ್ತವಾಗುವುದು ಯಕ್ಷಗಾನದ ವ್ಯಾಪ್ತಿಯನ್ನು ತಿಳಿಸಿಬಿಡುತದೆ. ಪುರಾಣದಲ್ಲಿ ಹೇಗೆ ಇರಲಿ, ಯಕ್ಷಗಾನದಲ್ಲಿ ಅದು ಹೀಗೆ.  ಯಕ್ಷಗಾನದ ಶಿಸ್ತುಬದ್ದ ಪರಿಮಿತಿಯಲ್ಲೇ ಇವರ ಅರ್ಥಗಾರಿಕೆ ಮೆರೆಯುವ ಪರಿ ಅದು. ಅವರ ಅರ್ಥಗಾರಿಕೆಯ ಯಾವ ಸಂದರ್ಭದಲ್ಲೂ ಅವರು ವಿಚಲಿತರಾಗದೇ ಸಲೀಸಾಗಿ ಅರ್ಥಗಾರಿಕೆಯನ್ನು ತೋರಿಸಿಕೊಡುತ್ತಾರೆ. ಅರ್ಥಗಾರಿಕೆ ಇಷ್ಟು ಸರಳವೇ ಅಂತ ಹಲವು ಸಲ ಅನಿಸಿಬಿಡುತ್ತದೆ. ಆದರೆ ಅದು ಪ್ರಖ್ಯಾತ ಗಾಯಕ ಹಾಡುವಾಗ ನಾವು ಜತೆಗೆ ಹಾಡಿದಂತೆ...ಗಾಯಕನ ಗಾಯನ ನಿಂತೊಡನೆ ನಮ್ಮದು ಏನೂ ಅಲ್ಲದ ಶೂನ್ಯತೆ ಆವರಿಸಿಬಿಡುತ್ತದೆ. ಅದು ಅಷ್ಟು ಸರಳವಲ್ಲ ಎಂದು ಅರಿವಾಗುತ್ತದೆ. ಯಾಕೆಂದರೆ ಇವರ ಅರ್ಥಗಾರಿಕೆಯ ಶೈಲಿ ಸುಲಭ ಅಂತ ಕಂಡರೂ ಅಲ್ಲಿ ಬರುವ ವಿಷಯಗಳು ಚಿಂತನೆಗಳು ಅದು ಮಂಡನೆಯಾಗುವ ರೀತಿ ಎಲ್ಲವೂ ಬಹಳ ಕಠಿಣ. ಸುಲಭವಾಗಿ ಸರಳವಾಗಿ ಅರ್ಥವಾಗುವ ವಿಚಾರಗಳು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರ ಸರಳ. ಒಬ್ಬ ಉತ್ತಮ ಅಧ್ಯಾಪಕ ಕಠಿಣವಾದ ಪಾಠವನ್ನು ಸರಳವಾಗಿ ಅರ್ಥೈಸುವಂತೆ. 

ನಮ್ಮ ಕಾಲಯುಗದಲ್ಲಿ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಒಂದು ಸೆಳೆತವಿತ್ತು. ಅದೊಂದು ವಿಚಿತ್ರ ಆಕರ್ಷಣೆ. ಯಾಕೆಂದರೆ ಆಗ ಇದ್ದ ಅರ್ಥಧಾರಿಗಳು. ಸಾಮಗ ಶೇಣಿ ಪೆರ್ಲ ಹೀಗೆ ಒಬ್ಬೊಬ್ಬರದೂ ಒಂದೊಂದು ವಿಧ. ಈ ವೈವಿಧ್ಯತೆಯೇ ಸೆಳೆತ.  ಈ ಎಲ್ಲಾ ಸೆಳೆತವನ್ನೂ ಉತ್ತಮವಾಗಿ ಸಮರ್ಥವಾಗಿ ಮೈಗೂಡಿಸಿಕೊಂಡವರು ಸುಣ್ಣಂಬಳರು. ಅವರ ಹಾಗೋ ಇವರ ಹಾಗೋ ಅಂತ ಅನುಮಾನ ಬಂದರೂ ಇದು ಅದಲ್ಲ ಇದೊಂದು ಬೇರೆ ಸಮನ್ವಯದ ಅರ್ಥಗಾರಿಕೆ, ಇದು ಸುಣ್ಣಂಬಳರ ಶೈಲಿ ಅಂತ ಅನ್ನಿಸುತ್ತದೆ. ಸಾಮಾನ್ಯವಾಗಿ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಧಾಳಿ ಪ್ರತಿಧಾಳಿ ಕಾಲೆಳೆಯುವುದು, ದಮನ ಮಾಡುವುದು ಎಲ್ಲವೂ ಇರುತ್ತದೆ. ಅದು ಪಾತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಆದರೆ ಸುಣ್ಣಂಬಳರು ಆಕ್ರಮಣವಿಲ್ಲ, ಧಾಳಿ ಪ್ರತಿಧಾಳಿಯ ಬಗ್ಗೆ ಯೋಚಿಸುವುದಿಲ್ಲ. ಮತ್ತೊಬ್ಬರನ್ನು ಸೋಲಿಸಲೇ ಬೇಕೆಂಬ ಛಲವೂ ಇರುವುದಿಲ್ಲ. ಆದರೂ ಇವರದ್ದು ಒಂದು ರೀತಿಯ ಗೆಲುವಿನ ಹಾದಿ. ಯಾಕೆಂದರೆ ಅದು ಯಕ್ಷಗಾನದ ಚೌಕಟ್ಟನ್ನೂ ಪಾತ್ರದ ಸಂದರ್ಭದ ಔಚಿತ್ಯವನ್ನು ಎಂದೂ ಮೀರದ ಶಿಸ್ತು ಬದ್ದ ಅರ್ಥಗಾರಿಕೆ.  ಮತ್ತೊಬ್ಬರನ್ನು ಸೋಲಿಸುವ ಪ್ರಯತ್ನ ಎಲ್ಲಿಯೂ ಇರುವುದಿಲ್ಲ. ತಾನು ಸೋಲುವುದಿಲ್ಲ ಎಂಬುದರ ಪ್ರತಿಪಾದನೆ ಮಾತ್ರ ಅಲ್ಲಿರುತ್ತದೆ. ಮತ್ತೊಬ್ಬರನ್ನು ಸೋಲಿಸಿ ಗೆಲ್ಲುವುದಕ್ಕಿಂತಲೂ ತಾನು ಸೋಲದೆ ಇರುವುದು ದೊಡ್ಡಗುಣ. ಮುಂದೆ ಹೋಗುವವನ್ನು ಹಿಂದೆ ಹಾಕುವ ಧಾವಂತ ಇದ್ದರೆ ಹೇಗೇ ಆಗಲಿ ಆತ ಹಿಂದೆ ಬಿದ್ದರೆ ಸಾಕು ಎಂಬ ಹವಣಿಕೆ ಇರುತ್ತದೆ. ನಾವು ಮುಂದೆ ಹೋಗುವುದಕ್ಕಿಂತಲೂ ಆತನ ಹಾದಿಗೆ ತಡೆ ಒಡ್ಡಿದರೆ ಸಾಕು.  ಹಾಗಾಗಿ ಇವರ ಅರ್ಥಗಾರಿಕೆ ಅದು ನಿಂತಲ್ಲಿಯೇ ನಿಲ್ಲುವುದಿಲ್ಲ.

ಹಲವರಿಗೆ ಹಲವು ವಿಧದಲ್ಲಿ ಸುಣ್ಣಂಬಳರು ಇಷ್ಟವಾಗಿಬಿಡುತ್ತಾರೆ. ರಂಗ ವೇರಿದರೆ ಎಲ್ಲೀಯೂ ಶಿಸ್ತನ್ನು ಮೀರುವುದಿಲ್ಲ. ತೀರಾ ಲೌಕಿಕ ಮಟ್ಟಕ್ಕೆ ಇಳಿಯುವುದಿಲ್ಲ. ಪಾತ್ರದ ಔಚಿತ್ಯ ಮೀರಿದ ಸಂದರ್ಭಗಳೇ ಸಿಗುವುದಿಲ್ಲ. ತಾಳ ಮದ್ದಲೆ ಇವರು ನೆಟ್ಟಗೆ ಕುಳಿತು ಬಿಡುತ್ತಾರೆ. ಆ ಒಂದು ಭಂಗಿ ಸಾಕು ಎದುರಿಗಿದ್ದವರನ್ನು ಎಚ್ಚರಿಸಿಬಿಡುತ್ತದೆ. ರಸಿಕತನದ ಪಾತ್ರವರಲಿ, ಹಾಸ್ಯವಿರಲಿ, ಎಲ್ಲವನ್ನೂ ಮೀರಿದ ಅತಿಗಂಭೀರವಿರಲಿ, ರುದ್ರ ಕ್ರೌರ್ಯ ಏನೂ ಇರಲಿ ಎಲ್ಲವನ್ನೂ ಏಕಪ್ರಕಾರವಾಗಿ ಬಿತ್ತರಿಸುವ ಇವರ ಅರ್ಥಗಾರಿಕೆಯ ಪ್ರತಿಕ್ಷಣವೂ ಅನುಭವಿಸುವುದಕ್ಕೆ ಉದ್ಯುಕ್ತವಾದಂತೆ ನಮ್ಮನ್ನು ಎಲ್ಲೂ ಬಿಟ್ಟುಕೊಡುವುದಿಲ್ಲ. ನನಗೆ ಇವರ ಗಂಭೀರ ಭಾವನಾತ್ಮಕ ಅರ್ಥಗಾರಿಕೆ ಬಹಳ ಇಷ್ಟವಾಗುತ್ತದೆ. ಅತ್ಯಂತ ದುಃಖಮಯ ಸನ್ನಿವೇಷದಲ್ಲಿ, ಕರ್ಣ, ಮಯೂರ ಧ್ವಜ, ವಿದುರ, ಹರಿಶ್ಚಂದ್ರ ಇಂತಹ ಪಾತ್ರಗಳು ಮನಸ್ಸಿನ ಭಾರವನ್ನು ಅಧಿಕವಾಗಿಸುತ್ತದೆ. ಅವರ ಅರ್ಥಗಾರಿಕೆಯ ಶೈಲಿಯಲ್ಲೂ ಅದ್ಭುತ ಆಕರ್ಷಣೆ ಇದೆ.  ಯಕ್ಷಗಾನದ ದಂತ ಕಥೆ ಶ್ರೀ ಶೇಣಿಯವರ ಅರ್ಥಗಾರಿಕೆ ಕೇಳುವಾಗ, ಅಲ್ಲಿರುವ ಸ್ವರಭಾರ, ಏರಿಳಿತ ಬಹಳ ಆಕರ್ಷಕವಾಗಿರುತ್ತದೆ. ಬಹುಶಃ ಶೇಣಿಯವರ ಅರ್ಥಗಾರಿಕೆ ಇಷ್ಟವಾಗುವುದು ಆ ಸ್ವರ ಭಾರಕ್ಕೆ, ಜತೆಗೆ ಅಲ್ಲಿರುವ ವಿಚಾರಗಳಿಗೆ. ಶೇಣಿಯವರ ಆಸ್ತಿ ಎಂದರೆ ಆ ಸ್ವರ ಭಾರ. ವಿಷಯಗಳು ಹೇಗೆ ಇರಲಿ ಅದು ಮನಸ್ಸಿಗೆ ನಾಟಿಕೊಳ್ಳುವುದು ಆ ಶೈಲಿಯಿಂದ. ಬಹುಶಃ ಈ ಎಲ್ಲ ಗುಣಗಳು ಆ ಸ್ವರಭಾರ ಸುಣ್ಣಂಬಳರ ಅರ್ಥಗಾರಿಕೆಯಲ್ಲಿ ಯೆಥೇಚ್ಚವಾಗಿದೆ. ಎರುವ ಇಳಿಯುವ ಮನಸ್ಸಿಗೆ ನಾಟಿಕೊಳ್ಳುವ ಅವರ ಸ್ವರಭಾರ ಒಂದು ಆಸ್ತಿಯಾದರೆ, ಇನ್ನೊಂದು ಅರ್ಥಗಾರಿಕೆಯಲ್ಲಿ ಇವರು ಉಪಯೋಗಿಸುವ ಶಬ್ದಗಳು.  ಅಲ್ಲಿಗೆ ಹಾಗೆ ಹೇಳಿದರೆ ಸರಿ...ಯಾವುದೋ ಒಂದು ಶಬ್ದದ ಬದಲು ಈ ಶಬ್ದವನ್ನು ಉಪಯೋಗಿಸಿದರೆ ಹೇಗೆ ಎಂದು ನಾವು ಕಲ್ಪಿಸಿದರೂ..ಇಲ್ಲ ಅದಕ್ಕೆ ಅದುವೇ ಸರಿ , ಅವರು ಉಪಯೋಗಿಸುವ ಶಬ್ದಗಳಿಗೆ ಪರ್ಯಾಯ ಯಾವ ಶಬ್ದವೂ ಹೊಂದಿಕೊಳ್ಳದೆ ಅವರ ಪ್ರಯೋಗಕ್ಕೆ ಮಾರು ಹೋಗಲೇ ಬೇಕು.  ಅಯಾಚಿತವಾಗಿ ಅದನ್ನು ಇವರು ಹೇಗೆ ಉಪಯೋಗಿಸುತ್ತಾರೆ ಎಂದು ಅಚ್ಚರಿಯಾಗುತ್ತದೆ. ಬರೆದಿಟ್ಟ ಸಂಭಾಷಣೆಯಂತೆ, ಸುಂದರ ಕಾವ್ಯದಂತೆ ಆ ಶಬ್ದಗಳನ್ನು ಬದಲಿಸಿಬಿಡುವುದು ಕಷ್ಟವಾಗುತ್ತದೆ. 

ಸಾಮಾನ್ಯವಾಗಿ ಒಬ್ಬ ಕಲಾವಿದ ಪ್ರಸಿದ್ಧಿಗೆ ಬರುವಾಗ ಅವರಂತೆ ಇವರು ಅಂತ ಉತ್ತರದಾಯಿತ್ವವನ್ನು ನಾವೇ ಹೇರಿ ಬಿಟ್ಟು ಉತ್ತರಾಧಿಕಾರಿಯನ್ನಾಗಿ ಮಾಡಿಸುತ್ತೇವೆ. ಎಲ್ಲೋ ಆರಂಭವಾದ ರೇಖೆ ಅಲ್ಲಿಂದ ಮತ್ತೆ ಮುಂದುವರೆಸಿದ ಹಾಗೆ ಇವರನ್ನು ಶೇಣಿಯವರಿಗೆ ಹೋಲಿಸಿದ್ದು ಇದೆ. ಆದರೆ ಒಬ್ಬೊರನ್ನು ಒಬ್ಬರಿಗೆ ಹೋಲಿಸುವುದಕ್ಕಿಂತಲೂ ಅವರ ವೈಶಿಷ್ಟ್ಯವನ್ನು ಗಮನಿಸಬೇಕು. ಇವರ ಅರ್ಥಗಾರಿಕೆ ಎಲ್ಲಿಂದಲೋ ಆರಂಭವಾದ ರೇಖೆಯಲ್ಲ. ಆ ರೇಖೆಯನ್ನು ಇವರೇ ಎಳೆದು ತಂದಿದ್ದಾರೆ. ಇನ್ನು ಯಾರು ಇದನ್ನು ಮುಂದೆ ಎಳೆಯುತ್ತಾರೋ ಗೊತ್ತಿಲ್ಲ. ಆದರೆ ಅದನ್ನು ಎಳೆಯುವುದು ಅನುಸರಿಸುವುದು ಅಷ್ಟು ಸುಲಭವಲ್ಲ. ಅದು ಸುಣ್ಣಂಬಳವಿಶ್ವೇಶ್ವರ ಭಟ್ಟರ ವೈಶಿಷ್ಟ್ಯತೆ. 

ಬದುಕಿನ ಆರಂಭದಲ್ಲಿ ಒಂದು ಪ್ರಶ್ನೆ ಏಳುತ್ತದೆ. ಆರು ಹತ್ತುವರು ಈ ಬದುಕೆಂಬ ಪರ್ವತವನ್ನು. ಆರು ಹತ್ತುವ ಪ್ರಶ್ನೆಗೆ ಅರುವತ್ತು ಆಗುವಾಗ ಉತ್ತರ ಸಿಗುತ್ತದೆ.  ಶ್ರೀಯುತರಿಗೆ ಅರುವತ್ತರ ಸಂಭ್ರಮದ ಶುಭ ಹಾರೈಕೆಗಳು. ವಿಶ್ವೇಶ್ವರ ಭಟ್ಟರು ವಿಶ್ವವ್ಯಾಪಿಯಾಗಲಿ. 


Tuesday, May 28, 2024

ಬದಲಾವಣೆಯ ಪಾಠ

  ಇಪ್ಪತ್ತು  ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಸಿನಿಮಾಕ್ಕೆ  ಹೋಗಬೇಕೆಂದರೆ ಎರಡು ವಾರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅದಕ್ಕೆ ಸಮಯ ಹೊಂದಿಸಿ ಕೆಲಸದ ಒತ್ತಡ ಎಲ್ಲ ಮುಗಿಸಿ ಮನೆ ಮಂದಿಯ ಎಲ್ಲರ ಸಮಯ ಹೊಂದಿಸಿ ಒಂದು ಸಿನಿಮಾಕ್ಕೆ ಕುಟುಂಬ ಸಹಿತ ಹೋಗುವುದು, ಬರುವಾಗ ಹೋಟೆಲಿಗೆ ಹೋಗಿ ಮಸಾಲೆ ದೋಸೆ ತಿಂದು ಮನೆಗೆ ಬರುವುವುದೆಂದರೆ ಅದೊಂದು ಸಂಭ್ರಮ. ಆನಂತರ ಒಂದೆರಡುವಾರ ನೋಡಿದ ಸಿನಿಮಾದ ಪರಿಣಾಮ ಹಾಗೇ ಇದ್ದುಬಿಡುತ್ತಿತ್ತು. ಸಿನಿಮಾದ ಕುರಿತು ಚರ್ಚೆ.   ಹೀಗೆ ಒಂದು ಸಿನಿಮಾ ವೀಕ್ಷಣೆ ಎಂದರೆ ಅದೊಂದು ಸಂಭವ...  ಆದರೆ ಈಗ?   ಹಾಗಿತ್ತು ಎಂದು ಈಗಿನ ಮಕ್ಕಳಿಗೆ ಹೇಳಿದರೆ ಅಚ್ಚರಿ ಮಾತ್ರವಲ್ಲ, ನಮ್ಮದು ಮೂರ್ಖತನವಾಗಿಬಿಡುತ್ತದೆ. ಸಿನಿಮಾದ ಬಗ್ಗೆ ಹಾಗೆ ಸಂಭವಿಸುವುದಕ್ಕೆ ಏನುಂಟು?

ಇನ್ನು ನಮ್ಮೂರಲ್ಲಿನ ಯಕ್ಷಗಾನ ಬಯಲಾಟದ ವಿಷಯ ಇನ್ನಷ್ಟು ರೋಚಕ. ಸಿನಿಮಾದಂತೆ ಒಂದು ಹೊತ್ತಿನ ಕಾರ್ಯಕ್ರಮವಲ್ಲ. ರಾತ್ರಿ ಯಿಂದ ಬೆಳಗಿನ ತನಕದ ಒಂದು ಬಿಡು ಬೀಸಿನ ಕಾರ್ಯಕ್ರಮ.  ಒಂದೆರಡು ತಿಂಗಳ ಮೊದಲೆ  ಊರ ಹೋಟೆಲ್ ಅಂಗಡಿಗಳ ಬಾಗಿಲಿಗೆ ಆಟದ ನೋಟೀಸು ಅಂಟಿಸಿಬಿಡುತ್ತಾರೆ. ಆಗಲೇ ದಿನ ಲೆಕ್ಕ ಹಾಕಿ ಆಟಕ್ಕೆ ಹೋಗುವ ಕಾರ್ಯಕ್ರಮದ ರೂಪು ರೇಷೆ ಸಿದ್ದವಾಗುತ್ತದೆ. ಹಣವಿಲ್ಲದವರೇ ಹೆಚ್ಚಿರುವುದರಿಂದ ಖರ್ಚು ಹಿಡಿದಿಟ್ಟು ಹಣ ಉಳಿಸುವುದಕ್ಕೆ ತೊಡಗುತ್ತೇವೆ. ಚಿಲ್ಲರೆ ಖರ್ಚಾದರೂ ಹಾಗೆ ಕೂಡಿಡುವುದು ಒಂದು ಸಂಭ್ರಮ. ಯಕ್ಷಗಾನದ ಹುಚ್ಚು....ಸಿನಿಮಾದ ಹುಚ್ಚಿಗಿಂತಲೂ ದೊಡ್ಡ ಹುಚ್ಚು. ಅದು ದೀರ್ಘ ಅವಧಿಯ ನಶೆ. 

ಆಗಿನ ಯಕ್ಷಗಾನ ಬಯಲಾಟಗಳು ಹಾಗಿತ್ತೋ ಅಲ್ಲ ಮನುಷ್ಯರಿಗೆ ಸಿಗುವ ಮನರಂಜನೆ ಸೀಮಿತವಾಗಿತ್ತೋ ಅಂತ ಹೇಳುವುದು ಕಷ್ಟವಾದರೂ....ಆಗಿನ ಯಕ್ಷಗಾನ ಬಯಲಾಟದ ಉತ್ಕೃಷ್ಟತೆಯನ್ನು ತಳ್ಳಿಹಾಕುವ ಹಾಗಿಲ್ಲ. ಒಂದಿಷ್ಟು ಕಣ್ಣೆವೆ ಮುಚ್ಚಿದರೂ ಎಲ್ಲಿ ಆಟದ ಅನುಭವ ಕಳೆದು ಹೋಗುತ್ತದೋ ಎಂಬ ಆತಂಕದಲ್ಲಿ ನಿದ್ದೆಯನ್ನು ಕಟ್ಟಿ ಕುಳಿತು ಮರುದಿನಕ್ಕೆ ನಿದ್ದೆಯನ್ನು ಕೂಡಿಸಿಟ್ಟು ,  ಮರುದಿನ ಅದನ್ನು ದಿನವಿಡಿ ವ್ಯಯಿಸುವ ಮಜವೇ ಬೇರೆ. 

ಕ್ರಮೇಣ... ಈಗ ಬಾರದ ನಿದ್ದೆ ಬಂದು ಬಿಡುತ್ತದೆ. ಇಲ್ಲದ ಕೆಲಸ ನೆನಪಾಗಿಬಿಡುತ್ತದೆ. ಅಂತೂ ಯಕ್ಷಗಾನ ಅಲ್ಲವಾ ಅಂತ ಹೋದರೂ..... ಬುಡವನ್ನೂ  ನೋಡುವುದಿಲ್ಲ ತುದಿಯೂ ನೋಡುವುದಿಲ್ಲ...ಸಿಕ್ಕಿದ ಸ್ನೇಹಿತರೊಂದಿಗೆ ಪಟ್ಟಾಂಗ ಹೊಡೆದು ಹೊರಗೆ ಸಿಕ್ಕಿದ ಚಟ್ಟಂಬಡೆ ಚಹ ಸವಿಯುವುದರಲ್ಲೇ ಅರ್ಧ ಆಟ ಕಳೆದುಬಿಡುತ್ತದೆ. 



ಕಾಲಕ್ಷೇಪಕ್ಕೆ ಅಂದರೆ ಸಮಯ ಕಳೆಯಲು ಮನರಂಜನೆ ಅಂತಾದರೂ  ಮೊದಲು ಸಮಯಾವಕಾಶ ಮಾಡಿಕೊಂಡು ಆಟಕ್ಕೆ ಮತ್ತೆ ಸಿನಿಮಾ ನೋಡಲು ಹೋಗುವುದಿತ್ತು. ಈಗ ಸಮಯ ಇದ್ದರೂ ಹೋಗುವ ಮನಸ್ಸಾಗುವುದಿಲ್ಲ ಕಾರಣಗಳು ಹಲವಿರಬಹುದು. ಕೈಯ ಬೆರಳ ತುದಿಯಲ್ಲೇ ಬೇಕಾದಷ್ಟು ಮನರಂಜನೆಯ ವೈವಿಧ್ಯಮಯ ಅಭಿರುಚಿಗಳಿರುತ್ತವೆ ಎಂಬುದು ಒಂದಾದರೆ ಈಗ ಮೊದಲಿನ ಉತ್ಕೃಷ್ಟತೆ ಇಲ್ಲ ಎಂಬುದು ಅಷ್ಟೇ ಮುಖ್ಯವಾಗುತ್ತದೆ. 


ಪರಿವರ್ತನೆ ಜಗದ ನಿಯಮ. ಇದು ಜಗತ್ತು ಪರಿವರ್ತಿಸುತ್ತಿದೆಯೋ ಇಲ್ಲ ಮನುಷ್ಯ ಸ್ವತಃ ಪರಿವರ್ತಿಸುತ್ತಿದ್ದಾನೊ ಇಲ್ಲಾ ಇದು ಪ್ರಕೃತಿಯ ಸಹಜ ಧರ್ಮವೋ ಜಿಜ್ಞಾಸೆ ಜಿಜ್ಞಾಸೆಯಾಗಿಯೇ ಉಳಿದಿದೆ. ಇದರ ಪರಿಣಾಮವೋ ಎನೋ ನಾವು ನಮ್ಮ ಜನಾಂಗ ಅಂದರೆ ಈಗ ನಲ್ವತ್ತರಿಂದ  ಮೇಲಿನ ವಯೋಮಾನದವರು ಅಗಾಧವಾದ ಬದಲಾವಣೆಯನ್ನು ಪರಿವರ್ತನೆಯನ್ನ ಪ್ರತ್ಯಕ್ಷವಾಗಿ  ಕಂಡು ಹೋಗಿದ್ದೇವೆ. ಜಗತ್ತು ಬದಲಾದಂತೆ ಅದಕ್ಕೆ ಹೊಂದಿಕೊಂಡು ಹಲವಾರು ಬದಲಾವಣೆಗಳಾಗಿವೆ. ಮೊದಲು ಪತ್ರ ಬರೆದು ಪ್ರತಿಕ್ರಿಯೆಗೆ ತಿಂಗಳವರೆಗೆ ಕಾಯುತ್ತಿದ್ದವರು ಇಂದು ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. ಈ ಬದಲಾವಣೆ ಮನರಂಜನೆ ಮತ್ತು ಹವ್ಯಾಸಗಳಲ್ಲಿಯೂ ತನ್ನ ಪ್ರಭಾವವನ್ನು ಬೀರಿ ಜನರ ಅಭಿರುಚಿಯನ್ನೇ ಬದಲಾಯಿಸಿದೆ. ಮೊದಲು ಆಟದಲ್ಲಿ ವೇಷ ಹಾಕಿ ದಿನ ಕಳೆದು ಅದು ಪತ್ರಿಕೆಯಲ್ಲಿ ಬಂದು , ಆ ಪತ್ರಿಕೆ ಕಲಾವಿದನ ಕೈಗೆ ಸಿಗುವಾಗ, ಅಥವಾ ಯಾರೋ ಹೇಳುವಾಗ ಆತನಿಗೆ ಮಾಡಿದ ಪಾತ್ರವನ್ನು ನೆನಪಿಸುವ ಅಗತ್ಯ ಇರುತ್ತಿತ್ತು. ಈಗ ಹಾಗಿಲ್ಲ. ಪಾತ್ರ ಮಾಡಿ ವೇದಿಕೆಯಿಂದ ಕೆಳಗಿಳಿಯಬೇಕಾದರೆ ಅದಕ್ಕೆ ಪ್ರತಿಕ್ರಿಯೆ ಸಿಕ್ಕಿಬಿಡುತ್ತದೆ. 


ಸಿನಿಮಾ ವೀಕ್ಷಣೆ ಇರಲಿ ಟಿ ವಿ ವೀಕ್ಷಣೆ ಇರಲಿ ಈಗ ಬಹಳ ಸಂಕೀರ್ಣವಾಗಿದೆ. ಮನೆಯಲ್ಲೇ ಟೀವಿ ಹಾಕಿ ಕೇಬಲ್ ಸಿಕ್ಕಿಸಿ  ವಿದ್ಯುತ್ ಇದ್ರೆ ಮಾತ್ರ ನೋಡುವ ಕಾಲ ಕಳೆದಾಗಿದೆ. ಎಲ್ಲಿ ಬೇಕೆಂದರಲ್ಲಿ ಇವುಗಳನ್ನೆಲ್ಲ ನೋಡುವ ಅವಕಾಶಗಳಿವೆ. ಇದರಿಂದ ಈಗ ಉತ್ಕೃಷ್ಟತೆ ಎಂಬುದು ಅಷ್ಟು ಸುಲಭ ಸಾಧ್ಯವಾಗುವುದಿಲ್ಲ. ಕಲಾವಿದರೂ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಈ ಎಚ್ಚರಿಕೆಯ ಘಂಟೆ ಬಹಳ ಹಿಂದೆಯೇ ಮೊಳಗಿತ್ತು, ಆದರೆ ಸಿನಿಮಾರಂಗ ಅದರಲ್ಲೂ ಕನ್ನಡ ಸಿನಿಮಾರಂಗವಾಗಲೀ ,ನಮ್ಮ  ಯಕ್ಷಗಾನ ರಂಗವಾಗಲೀ  ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.  ಈಗ ನೋಡಬಹುದು, ಹಲವು ಸಿನಿಮಾ ಮಂದಿರಗಳು ಮುಚ್ಚುತ್ತಿವೆ. ಮೊದಲಿನಂತೆ ಸಿನಿಮಾಗಳು ತಯಾರಾಗುವುದಿಲ್ಲ. ವ್ಯಾಪಾರವನ್ನೇ ಗುರಿಯಾಗಿಸಿಕೊಂಡ ನಿರ್ಮಾಪಕರು ಇದಕ್ಕೆ ಭಂಡವಾಳ ಹೂಡುವುದಕ್ಕೆ, ಅಥವಾ ಸಾಲ ಕೊಡುವವರು ಸಾಲ ಕೊಡುವುದಕ್ಕೆ ಹಿಂಜರಿಯುತ್ತಾರೆ. ಕಾರಣ ಇಷ್ಟೆ ಉತ್ಕೃಷ್ಟತೆಯ ಕೊರತೆ. ಉತ್ತಮ ಸಿನಿಮಾಗಳು ಇಲ್ಲ. ದೊಡ್ಡ ದೊಡ್ಡ ತಾರಾಮೌಲ್ಯ ಇದ್ದ ತಾರೆಗಳ ಹೆಸರೆ ಮರೆತು ಹೋಗುವಷ್ಟು ಅವರ ಸಿನಿಮಾ ವಿರಳವಾಗಿ ಹೋಗಿದೆ. ಸಿನಿಮಾಮಂದಿರದ  ಮುಂದೆ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವುದು ಅಪರೂಪವಾಗಿದೆ. ಜನರಿಗೆ ಪ್ರಜ್ಞೆ  ಬಂದಿದೆ. ಬೇರೆ ಭಾಷೆಯ ವೈವಿಧ್ಯ ಮಯ ಸಿನಿಮಾಗಳು ಭಾಷೆ ತಿಳಿಯದೇ ಇದ್ದರೂ ನೋಡುವ ಅವಕಾಶಗಳಿವೆ. ಹಾಗಾಗಿ ಈ ಎಚ್ಚರಿಕೆಯ ಘಂಟೆಯ ಸದ್ದನ್ನು ಮೊದಲು ಕೇಳಿಸಿಕೊಳ್ಳಲಿಲ್ಲ. ಈಗ ಅದು ಕಠೋರವಾಗಿ ಅನುಭವಕ್ಕೆ ಬಂದಿದೆ. ಕೋವಿಡ್ ಸಮಯದಲ್ಲಿ ಸಿನಿಮಾರಂಗ ಮುಚ್ಚಲ್ಪಟ್ಟಾಗ  ಸಿನಿಮಾ ತಂತ್ರಜ್ಞರು ಕಲಾವಿದರು ಹೊಟ್ಟೆ ಪಾಡು ಎಂದು ಹುಯಿಲಿಟ್ಟದ್ದನ್ನು ಕಂಡಿರಬಹುದು. ಆದರೆ ಈಗ ಕೋವಿಡ್ ಅಲ್ಲದೇ ಇದ್ದರೂ ಹೊಟ್ಟೆಪಾಡಿನ ಬಗ್ಗೆ ಮಾತನಾಡುವ ಧೈರ್ಯ ಯಾವ ಕಲಾವಿದನಿಗೂ ಇಲ್ಲ. ಯಾಕೆಂದರೆ ಕಲೆಗೆ ಮಾಡಿದ ಅಪಚಾರ ಅದನ್ನು ಅನುಭವಿಸುವ ಹಂತ ಬಂದಿದೆ. ಆಗ ಹೊಟ್ಟೆ ಪಾಡು ಏನು ಮಾಡೋಣ ಅಂತ  ಕಲಾರಂಗವನ್ನು ಭಿಕ್ಷಾ ಪಾತ್ರೆ ಮಾಡಿಕೊಂಡವರು ಈಗ ಅಕ್ಷರಶಃ ಭಿಕ್ಷಾ ಪಾತ್ರೆಯನ್ನು ಕೈಗೆ ಎತ್ತಿಕೊಳ್ಳುವ ಸ್ಥಿತಿ ಬಂದಿದೆ. ಸಿನಿಮಾ ರಂಗ ಮುಚ್ಚುಕುರಿತು ಚಿಂತನೆ ನಡೆದಿದೆ. 


ಯಕ್ಷಗಾನವೂ ಸಿನಿಮಾ ಕ್ಕಿಂತ ಏನೂ ಭಿನ್ನವಾಗಿಲ್ಲ. ಹೊಟ್ಟೆ ಪಾಡು ಅಂತ ಎಲ್ಲವನ್ನೂ ರಾಜಿ ಮಾಡಿಕೊಂಡು ಅಪಸವ್ಯಗಳನ್ನೇ ಸವ್ಯಗಳಾಗಿಸಿ ಕಲೆ ಭಿಕ್ಷೆಯನ್ನು ಕೊಡುತ್ತಿದೆ ಎಂಬುದನ್ನೇ ಮರೆತು ವರ್ತಿಸಿದವರು ಈಗ ಪಾಠ ಕಲಿಯುತ್ತಿದ್ದಾರೋ ಇಲ್ಲವೋ ಅಂತೂ ಆ ಹಂತಕ್ಕೆ ಬಂದು ತಲುಪಿದ್ದಾರೆ.  ಹೇಗಿತ್ತು ಯಕ್ಷಗಾನ ಅಂತ ಕೇಳಿದರೆ ಪಾಪ ಹೊಟ್ಟೆ ಪಾಡು....ಎಂದು ಪ್ರೇಕ್ಷಕ ಸುಮ್ಮನಾಗಿಬಿಡುತ್ತಾನೆ.  ಮೊದಲು ಬಸ್ ಸ್ಟಾಂಡ್ ನಲ್ಲಿ ಬಸ್ ನಲ್ಲಿ ಹೋಗಿ ಕುಳಿತಾಗ  ಭಿಕ್ಷುಕರು ಯಾವುದೋ ಹಾಡನ್ನು ವಿಕಾರವಾಗಿ ಹಾಡುತ್ತಾ ಕೈ ಒಡ್ಡುತ್ತಿದ್ದರು. ಈಗಲೂ ಇರಬಹುದು. ಅವರ ಹಾಡಿಗೆ ವ್ಯಾಕರಣ ಇಲ್ಲ, ಆ ಸಂಗೀತಕ್ಕೆ ಶ್ರುತಿಯೂ ಬೇಡ ತಾಳವೂ ಬೇಡ. ಹಾಗೆಲ್ಲ ಇದ್ದರೂ ಯಾರೂ ಅದನ್ನು ವಿಚಾರಿಸುವುದೂ ಇಲ್ಲ, ಹತ್ತಿರ ಬಂದು ಹಾಡು ಹೇಳಿದರೆ ಅದನ್ನು ಕೇಳಿಸುವ ಮನಸ್ಸೂ ಇರುವುದಿಲ್ಲ. ಹಾಗೇ ಭಿಕ್ಷೆ ಹಾಕಿ ಬಿಡುತ್ತಿದ್ದರು.  ಇಷ್ಟಾದರೂ  ನಾನು ಗಂಟಲು ಹರಿದು ಚಿಲ್ಲರೆ ಸಂಪಾದಿಸಿದ್ದೇನೆ  ಎಂದು  ಭಿಕ್ಷುಕ ತಿಳಿಯುತ್ತಿದ್ದ.  ಭಿಕ್ಷುಕನಿಗೆ ಯಾವ ಪರಿಮಿತಿಯೂ ಇಲ್ಲ. ಆದರೆ ನಾಗರೀಕ ಸಮಾಜದಲ್ಲಿ ಎಲ್ಲ ಪರಿಮಿತಿಗಳು ಇದ್ದರೂ ಸಹ ಕಲಾವಿದ  ಹೊಟ್ಟೆ ಪಾಡಿಗೆ ಅಂತ ಕಲೆಯನ್ನು ಭಿಕ್ಷುಕನಿಗಿಂತಲೂ ದೊಡ್ಡ ಭಿಕ್ಷಾಪಾತ್ರೆಯನ್ನಾಗಿ  ಮಾಡಿಬಿಟ್ಟ.  ಇದನ್ನು ಒಪ್ಪಿಕೊಳ್ಳುವುದಕ್ಕೆ ಆತ್ಮಾಭಿಮಾನ ಎದುರಾಗಬಹುದು. ಆದರೆ ವಾಸ್ತವ ಹಾಗೇ ಇದೆ. ಮೊದಲು ಕಲಾವಿದ ಔದಾಸಿನ್ಯ ಮೆರೆದರೆ ಈಗ ಸರದಿ ಪ್ರೇಕ್ಷಕನದ್ದು. ಯಾಕೆಂದರೆ ಪ್ರೇಕ್ಷಕನಿಗೆ ಹಲವಾರು ಅವಕಾಶಗಳಿದ್ದರೆ...ಕಲಾವಿದನಿಗೆ ಇದ್ದ ಒಂದು ಅವಕಾಶವೂ ಮುಚ್ಚುವ ಹಂತ ತಲುಪಿದೆ. 


ಮೊದಲು ಆಟದ ಟಿಕೇಟ್ ಯಾವುದೋ ಹೋಟೇಲಲ್ಲಿ ಇಟ್ಟರೂ ಖರ್ಚಾಗಿ ಹೋಗುತ್ತಿತ್ತು.  ಆಟದ ನೋಟೀಸು ಹಿಡಿದು ಬಂದರೆ ಕೆಲವು ಕಡೆ ಅದಕ್ಕೊಂದು ಗೌರವ ಇರುತ್ತಿತ್ತು. ನೋಟೀಸನ್ನು ಸಾದ್ಯಂತವಾಗಿ ಓದಿ ಅದರ ಬಗ್ಗೆ ಚರ್ಚಿಸುತ್ತಿದ್ದರು.   ಹಾಗೆ ದುಡ್ದುಕೊಟ್ಟರೂ ಕಾರ್ಯಕ್ರಮಕ್ಕೆ ತಪ್ಪದೇ ಹೋಗಿಬಿಡುತ್ತಿದ್ದರು.  ಈಗ ಯಾರೋ ಒಬ್ಬ ನೋಟೀಸು ಹಿಡಿದು ವಂತಿಗೆಗೆ ಬರುತ್ತಾನೆ ಎಂದರೆ ಕಣ್ಣು ತಪ್ಪಿಸಿಕೊಳ್ಳುತ್ತಾರೆ. ಒಂದು ವೇಳೆ ಕೈಗೆ ನೋಟಿಸೂ ಕೊಟ್ಟರೂ ಅದನ್ನು ಓದದೇ   ಕೈಗೆ ಒಂದಷ್ಟು ದುಡ್ಡು ಎಸೆದು ಸುಮ್ಮನಿದ್ದು ಬಿಡುತ್ತಾರೆ. ನೋಟಿಸು ಕೊಟ್ಟಾಗ ನಮಗೆ ಬರುವುದಕ್ಕೆ ಸಮಯ ಇಲ್ಲಾ ಕಾರ್ಯಕ್ರಮ ಒಳ್ಳೆದಾಗಲೀ ಎಂದು ಮುಖ ಸ್ತುತಿಗೆ ಹೇಳಿ ಬಂದದ್ದಕ್ಕೆ ಭಿಕ್ಷೆ ಕೊಟ್ಟು ಕಳುಹಿಸಿಬಿಡುತ್ತಾರೆ. 


ಕಲಾವಿದರು ಸಭೆಯನ್ನು ಪ್ರೇಕ್ಷಕನನ್ನು ಆಳುವ ಕಾಲವಿತ್ತು. ಈಗ ಆ ಅಧಿಕಾರ ದಂಡ ಪ್ರೇಕ್ಷಕನ ಕೈಯಲ್ಲಿದೆ. ವಾಸ್ತವದಲ್ಲಿ ಅದು ಹಾಗೆಯೇ ಇರಬೇಕು. ಆದರೆ ಅದು ಕಲೆಯ ಮೌಲ್ಯವನ್ನು ಹೊಂದಿಕೊಂಡು ಆಗಿರಬೇಕು. ಯೋಚಿಸಬೇಕು ಕ್ರಿಕೇಟ್ ನಲ್ಲಿ ಯಾವಾಗಲೂ ಬ್ಯಾಟ್ಸ್ ಮನ್ ಹೆಚ್ಚು ಮುಂದೆ ಇರುತ್ತಾನೆ, ಬೌಲರ್ ಯಾವಾಗಲು ಒಂದಷ್ಟು ಹಿಂದೆ. ಆದರೆ ಯೋಚಿಸಿದರೆ, ಬ್ಯಾಟ್ಸ್ ಮನ್ ಗೆ  ಒಂದೇ ಬಾಲ್ ಸಾಕು ಔಟ್ ಆಗಿ ಪಂದ್ಯದಿಂದ ಹೊರಬೀಳಲು. ಅದೇ ಸಮಯ ಬೌಲರ್ ಗೆ ಕಡಿಮೆ ಎಂದರೆ ಆರು ಬಾಲ್ ಗಳ ಅವಕಾಶಗಳಿರುತ್ತವೆ. ಬ್ಯಾಟ್ಸ್ ಮನ್ ಒಂದೇ ಬಾಲ್ ಗೆ ಹೊರನಡೆದರೆ ಕೊನೆಯಲ್ಲಿ ಬರುವುದು ಬೌಲರ್. ಹೀಗೆ ಅವಗಣಿಸಲ್ಪಟ್ಟದ್ದು ಮುನ್ನೆಲೆಗೆ ಬಂದೇ ಬರುತ್ತದೆ. ಅದನ್ನೇ ಸಮಯ ಎನ್ನುವುದು. ಅದನ್ನೆ ಬದಲಾವಣೆ ಎನ್ನುವುದು. ಒಂದಿಷ್ಟಾದರೂ ತಾವು ಮಾಡುವ ವೃತ್ತಿಗೆ ವೃತ್ತಿ ಧರ್ಮ, ತಮಗೆ ಅನ್ನ ಹಾಕಿದ ಕೈಗೆ ಕೃತಜ್ಞತೆಯ ಭಾವ ಇರುತ್ತಿದ್ದರೆ, ಈಗ ಹೀಗಾಗುತ್ತಿತ್ತೊ ಇಲ್ಲವೋ  ಆದರೆ ನಾವು ಪ್ರಾಮಾಣಿಕವಾಗಿ ನ್ಯಾಯ ಸಲ್ಲಿಸಿದ್ದೇವೆ ಎಂಬ ಆತ್ಮ ತೃಪ್ತಿಯಾದರೂ ಸ್ವಂತವಾಗಿ ಇರುತ್ತಿತ್ತು. ಈಗ ಅದಕ್ಕೂ ಪಶ್ಚಾತ್ತಾಪ ಹಂತವೂ ಸ್ವಯಂಕೃತ ಅಪರಾಧದಿಂದ ಕಳೆದು ಹೋಗಿದೆ. 



Thursday, November 30, 2023

ವಿಷಾದೋಕ್ತಿ

ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ ಸಂದರ್ಭ ಬಂತು. ಕಾರಣ ಆದಿನದ ಪ್ರಸಂಗ ಬೇಡರಕಣ್ಣಪ್ಪ. ಅವರ ಜತೆ ಆತ್ಮೀಯ ಸಲುಗೆ ಇತ್ತು. ಅವರಲ್ಲಿ  ನಿಮಗೆ ಬೇರೆ ಪ್ರಸಂಗ ಸಿಗಲಿಲ್ಲವಾ ಎಂದು ಕೇಳಿದೆ. ಅವರು ನಗುತ್ತಾ ಹೇಳಿದರು ಇವರು ಕೊಡುವ ಎರಡು ಸಾವಿರಕ್ಕೆ ನಾನು ತಡ್ಪೆ (ಗೆರಸೆ) ಕಿರೀಟ ತರುವುದಕ್ಕೆ ಸಾಧ್ಯವಾ ಮಾರಾಯ? ಅವರು ಹೇಳಿರುವುದು ವಾಸ್ತವ. ಕಡಿಮೆ ಖರ್ಚಿನಲ್ಲಿ ಅಂತ ಆಗುವಾಗ ಎಲ್ಲದರಲ್ಲೂ ಒಂದಷ್ಟು ಹೊಂದಾಣಿಕೆಯಾಗುತ್ತದೆ. ಯಕ್ಷಗಾನ ಆಗ ಕೇವಲ ಯಕ್ಷಗಾನವಾಗುವುದಿಲ್ಲ. ಅದು ಏನೆಲ್ಲವಾಗಿ ಬದಲಾಗಿ ಪರಿಸ್ಥಿತಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ. ಯಕ್ಷಗಾನ ಏನಿಲ್ಲದೆಯೂ ಆಗಿಬಿಡುತ್ತದೆ. ಇದು ಹಾಸ್ಯ ವಿಡಂಬನೆಗೆ ಹೇಳುವುದಾದರೂ ಯಕ್ಷಗಾನಕ್ಕೆ ಸಂಬಂಧಿಸಿ ಇದು ವಿಷಾದ ಭಾವನೆಯನ್ನು ತಳೆಯುವಂತೆ ಮಾಡುತ್ತದೆ. 

ಯಕ್ಷಗಾನ ಅದೆಷ್ಟು ಮಧುರವಾದ ಶಬ್ಧ? ಹೆಸರಿನಲ್ಲೇ ಅದರ ಮಾರ್ದವತೆ ಅನುಭವಕ್ಕೆ ಬರುವ ರೀತಿ ಬಹುಶಃ ಯಾವ ಕಲೆಯ ಹೆಸರಲ್ಲಿಯೂ ಕಂಡುವರುವುದಿಲ್ಲ. ಆ ಮಾರ್ದವತೆಯ‌ ಮಿಡಿತ ಅದರಲ್ಲಿ ಸೇರಿಕೊಂಡ ರೀತಿ ಅದರ ಸುಸಂಸ್ಕೃತ ಗುಣಗಳಿಂದ.  ಈ ಗುಣಗಳು ನಮ್ಮ ಕಣ್ಣಳತೆಯ ಅವಧಿಯಲ್ಲಿ ಆಗಿ ಹೋದ ಆವಿಷ್ಕಾರ. ಈಗ ಅದು ನಮ್ಮ ಕಣ್ಣೆದುರಿಗೇ ಕುಸಿಯುತ್ತಿರುವ ಅನುಭವ. ಯಕ್ಷಗಾನವನ್ನು ಉಸಿರಾಗಿ ಕಂಡ ಹಿರಿಯರ ಅನಿಸಿಕೆ ಇದು. ಯಾಕೆಂದರೆ ಇದೆಲ್ಲದಕ್ಕೂ ಸಾಕ್ಷಿಯಾಗಿ ನಿಂತವರು. ಈಗ ಇದು ಬೇಡ ಎಂದು ದೂರ ಉಳಿದರೂ ಅದು ಯಾವುದೋ ರೂಪದಲ್ಲಿ ಮೈಮೇಲೆ ‌ಬಿದ್ದಂತಾಗುತ್ತದೆ. ಕೊಡವಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಹಾಯಕತೆ.

ಬಾಲ್ಯದಿಂದಲೇ ಕಲೆ ಎಂದರೆ ಅದು ಯಕ್ಷಗಾನ ಎಂಬಂತೆ ಸರ್ವವ್ಯಾಪಿಯಾಗಿ ಮನಸ್ಸಿನಲ್ಲಿ ಅಚ್ಚೊತ್ತಿರುವುದಕ್ಕೆ ಅದನ್ನು ಸರಳವಾಗಿ ಆಸ್ವಾದಿಸುವುದಕ್ಕೆ ಇದು ಅತಿ ಸೂಕ್ತವಾಗಿತ್ತು.ಕಠಿಣವಾದ ಜ್ಞಾನದ ಅರಿವಿನ ಅವಶ್ಯಕತೆ ಇಲ್ಲದ ಪಾಮರನೂ ಪಂಡಿತನೂ ಏಕರೀತಿಯಲ್ಲಿ ಅನುಭವಿಸ ಬಲ್ಲ ಗುಣ ಆ ಸೆಳೆತ ಅತಿಶಯವೇನೂ ಅಲ್ಲ. ಆದರೆ ಅದೇ ವ್ಯಾಪಕತೆ ಅದಕ್ಕೆ ಈಗ ಮುಳುವಾಗಿ ಪರಿಣಮಿಸಿದೆ.  ಯಕ್ಷಗಾನದ flexibility ಅದಕ್ಕೆ ಏನೂ ಸೇರಿಸಬಲ್ಲ ಆವಿಷ್ಕಾರವನ್ನು ತಂದಿದೆ.

        ನನಗೆ ಯಕ್ಷಗಾನದ ಸರಳತೆ ಅರ್ಥವಿಸಿದ ಒಂದು ಬಗೆಯಾದರೆ ಅದರಲ್ಲಿನ ವಿಷಯ ಮೌಲ್ಯ ಅರಿವಾದ ನಂತರ ಅದು ಹವ್ಯಾಸವಾಯಿತು.‌ ಬರಿದೇ ಓರ್ವ ಸಾಮಾನ್ಯ ಪ್ರೇಕ್ಷಕನಿಗೂ ತುಂಬಿ ಕೊಡಬಲ್ಲ ಜ್ಞಾನ ಸಂಪತ್ತು ಇಲ್ಲಿ ಸಿಗುವಾಗ ಇದು ಕೇವಲ ಕಲೆ ಹವ್ಯಾಸಕ್ಕೆ ಸೀಮಿತವಾಗಲಿಲ್ಲ. ಇದು ಅಧ್ಯಯನವಾಯಿತು.

        ಈಗ ನಮ್ಮ ಅರಿವು ಹೆಚ್ಚಾಯಿತೋ ಇಲ್ಲ ಭ್ರಮಾಧೀನರಾದೆವೋ ಸಂದೇಹ ಪಡುವಂತಾಗಿದೆ. ಯಕ್ಷಗಾನದ ಮೌಲ್ಯ ಕುಸಿಯುವಾಗ ಇನ್ನು ಇದರಲ್ಲಿ ಏನು ಉಳಿದಿದೆ ಎಂಬ ನಿರಾಸಕ್ತಿಯಲ್ಲಿ ಭ್ರಮೆ ಕಳಚಿಬಿಡುತ್ತದೆ. ಕಲ್ಪವೃಕ್ಷದ ಟೊಂಗೆ ಕಳೆದು ಕೇವಲ ಕಂಬವಾದಂತೆ ಯಕ್ಷಗಾನ ನಿರ್ವಾಣವಾಗಿ  ಇನ್ನು ಎನಿಲ್ಲ ಎಂಬ ಅಸಹಾಯಕತೆಯಲ್ಲಿ ಅಂಗಲಾಚುತ್ತದೆ. ಇನ್ನೂ ಏನಾದರೂ ಇದೆ ಎಂದು ಹೇಳಿದರೆ ಅದು ಕಸಿದು ತೇಗುವ ಮನೋಭಾವವಾಗುತ್ತದೆ. ಯಾಕೆಂದರೆ ಈಗಿನ ಮನೋವೃತ್ತಿ ಅದೇ ಬಗೆಯಲ್ಲಿದೆ.

        ದಶಕಗಳ ಹಿಂದೆ ಅಂದರೆ ಬಾಲ್ಯದಲ್ಲಿ ಕಾಣುತ್ತಿದ್ದ ಯಕ್ಷಗಾನ ಕ್ರಮೇಣ ಹಾದಿ ಪಲ್ಲಟಗೊಂಡಂತೆ ಸಂಗೀತ ಅಳವಡಿಕೆಯಾಯಿತು.  ಯಕ್ಷಗಾನದ ಕುಣಿತ ಅದು ಪರಿವರ್ತಿತ ನೃತ್ಯವಾಗಿ ಬದಲಾಗಿ ಯಕ್ಷಗಾನ ಕೇವಲ ಹೊರಾವರಣದಲ್ಲಿ ಉಳಿದು  ಅದರ ಒಳಗೆ ಇನ್ನೇನೋ ನುಸುಳುವುದಕ್ಕೆ ತೊಡಗಿತು.‌ ಆದರೆ ಏನೋ ಕಳೆದು ಹೋದ ಅನುಭವ.‌

        ಸಂಗೀತ ಯಕ್ಷಗಾನ ಕಲೆಯ ಆಸ್ವಾದನೆಯ ಹವ್ಯಾಸವಾದರೆ ಬೆವಣಿಗೆ ಒಂದು ರೀತಿಯ ಖಾಸಗೀ ಹವ್ಯಾಸ. ‌ಸಂಗೀತ ಹೀಗೆ ಕಿ‌ವಿಯಿಂದ ಹಾದು ಹೋದರೆ ಅದು ಗಾಢವಾದದ್ದು‌ ಮಿತ್ರ  ಸಿತ್ಲ ರಂಗನಾಥರ ಸಹವಾಸದಿಂದ, ಅದರಲ್ಲೂ ಶಾಸ್ತ್ರೀಯ ಸಂಗೀತ ಹೇಗೆ ಆಸ್ವಾದಿಸಬೇಕು ಎಂಬುದು ಇವರ ಸಹವಾಸದಲ್ಲಿ ಅರಿವಾಯಿತು. ರಾಗ ತಾಳ ಲಯದ ಬಗ್ಗೆ ಅದ್ಭುತ ಎನಿಸುವ ಮಾಹಿತಿ ಇವರಲ್ಲಿದೆ.

ಇಲ್ಲಿಂದ ನಂತರ  ಸಂಗೀತಾಸಕ್ತಿ ಹೊಸರೂಪ ತಳೆದರೆ, ಯಕ್ಷಗಾನ ಅದು ರಕ್ತಗತವಾಗಿ ಬಂದಂತೆ ಸಹಜ ಪ್ರೇಕ್ಷಕನಾದರೂ ಯಕ್ಷಗಾನ ಹೇಗೆ ಆಸ್ವಾದಿಸಬೇಕು ಅದು ಏನು ಎಂದು ಸ್ಥೂಲವಾಗಿ ಅರಿವು ಒದಗಿ ಬಂದದ್ದು ವಿದ್ವಾಂಸ  ಡಾ ಶ್ರೀ ರಾಘವ ನಂಬಿಯಾರರ ಸಂಪರ್ಕದಿಂದ. ಅದನ್ನು ಹೇಗೆ ಕಾಣಬೇಕು ಹೇಗೆ ಅನುಭವಿಸಬೇಕು ಎಂದು ಅರಿವಿಗೆ ಬಂತು. ಅದುವೆರೆಗೆ ಯಕ್ಷಗಾನದಲ್ಲಿ ಏನೋ ಕಳೆದುಕೊಂಡಿದ್ದೇವೆ ಎಂದು ಅನುಭವ ವೇದ್ಯವಾದರೂ ಅದು ಏನು ಎಂದು ತೋರಿಸಿಕೊಟ್ಟವರು ಇವರು.

        ಗುರು...ಜ್ಞಾನವನ್ನು ಎಲ್ಲಿದೆ ಎಂದು ತೋರಿಸಿದಂತೆ ಏನು ಕಳೆದು ಕೊಂಡಿದ್ದೇವೆ ಎಂದು ತೋರಿಸಿ ಕೊಡುವುದು ಸಹ ಗುರು ಸದೃಶ ಪ್ರಚೋದನೆಯಾಗುತ್ತದೆ. ಇದು ಪರಿಪೂರ್ಣವಲ್ಲ ಎಂಬುದು ಖಾತರಿಯಾಗುವಾಗ ನಂತರ ಅಲ್ಲಿ ಆಸಕ್ತಿ ಸಹಜವಾಗಿ ಇಳಿಮುಖವಾಗಿಬಿಡುತ್ತದೆ. 

ಯಕ್ಷಗಾನದಲ್ಲಿ ನನಗೆ ಇಷ್ಟವಾದವು ಎರಡು ಅಂಗ. ಒಂದು ಹಿಮ್ಮೇಳ, ಇನ್ನೊಂದು ಅರ್ಥಗಾರಿಕೆ.ಅದರಲ್ಲಿ ಅರ್ಥಗಾರಿಕೆ ಆಕರ್ಷಣೆಯನ್ನು ಕಳೆದುಕೊಂಡರೆ ಇನ್ನೊಂದು ಸಂಗೀತಮಯವಾಗಿ ಸತ್ವ ಹೀನವಾಗಿದೆ. ಸಂಗೀತ ಇಲ್ಲಿ ಅಸ್ವಾದಿಸುವುದಕ್ಕಿಂತ ಪರಿಶುದ್ಧ ಸಂಗೀತವನ್ನು ಮೂಲದಲ್ಲೇ ಅನುಭವಿಸಬಹುದು. 

        ಭಗ್ನ ವಾದದ್ದು ಹೇಗೆ ಆರಾಧನೆಗೆ ಅರ್ಹವಲ್ಲವೋ,ಹಾಗೇ ಒಡೆದ ಕನ್ನಡಿಯಲ್ಲಿ ಮುಖಬಿಂಬ ನೋಡಬಾರದು. ಹಾಗಾಗಿ ಅಪೂರ್ಣ ಎಂದು ಅರಿವಾದಾಗ ಮನಸ್ಸಿನ ಅತೃಪ್ತಿ ವೈರಾಗ್ಯ ರೂಪ ತಳೆದು ಬಿಡುತ್ತದೆ.  ಭಗ್ನವಾದದ್ದನ್ನು ಉಪಯೋಗಿಸುವುದೆಂದರೆ ಅದು ದಾರಿದ್ರ್ಯದ ಸಂಕೇತ. ಈಗಂತೂ ಅನಿವಾರ್ಯತೆ ಇಲ್ಲ. ಮುಂದೆ ಪರಿಪೂರ್ಣತೆಯಲ್ಲಿ ಅನುಭವಿಸುವ ಆಶಯ ಮಾತ್ರ ಸದ್ಯಕ್ಕೆ ಉಳಿದಿದೆ. ಈಗ ಯಕ್ಷಗಾನ ಪ್ರೇಕ್ಷಕನ ಮಟ್ಟಿಗೆ ಅನಿವಾರ್ಯ ಸಂಗತಿಯಲ್ಲ ಎಂಬುದು ಸತ್ಯ.   ಯಕ್ಷಗಾನ ಈಗ ವಿಷಾದ ದರ್ಶನವಾಗುತ್ತದೆ. 


Monday, November 13, 2023

ಹೀಗೊಂದು ನಿಟ್ಟುಸಿರು


    
    ಬಲಿಪ್ಪರ ಬಗ್ಗೆ ಹೇಳುವುದಕ್ಕೆ ನಾವುಗಳು ಎಷ್ಟು ಅರ್ಹರೋ ಎಂದು ಪ್ರತಿ ಸಲವೂ ಅನಿಸುತ್ತದೆ. ಆದರೆ ಅವರ ಮೇಲಿಟ್ಟ ಅಭಿಮಾನ ಹಕ್ಕು ಸ್ಥಾಪಿಸಿಬಿಡುತ್ತದೆ. ಹಲವು ನೆನಪುಗಳನ್ನು ಕಟ್ಟಿಕೊಟ್ಟ ಮಹಾವ್ಯಕ್ತಿತ್ವ. ಎಂಭತ್ತು ವರ್ಷವಾದರೂ ಅವರು ಮಗುವಿನಂತೆ ಜಗತ್ತನ್ನು ದಿಗ್ಭ್ರಮೆಯಿಂದ ನೋಡುತ್ತಿದ್ದರು.  ನಮ್ಮ ಮನೆಗೆ ಬಂದಿದ್ದರು. ಆಗ ಸಣ್ಣ ಮಕ್ಕಳಂತೆ ಡಿಸ್ಕವರ್ ಚಾನಲ್ ಹಾಕಿಸಿ ನೋಡುತ್ತಿದ್ದರು. ಕಾರ್ಟೂನು ಕೂಡ ನೋಡುತ್ತಿದ್ದರು. ಜತೆಗೆ ಆಗ ಪುಟ್ಟಮಕ್ಕಳಾಗಿದ್ದ ನನ್ನ ತಮ್ಮನ ಮಕ್ಕಳು ಇರುತ್ತಿದ್ದರು. ಅವರಲ್ಲಿ ಅವರು ಮಾತನಾಡುವುದನ್ನು ಕೇಳಬೇಕು. ಗೊಗ್ಗರು ಧ್ವನಿಯಲ್ಲಿ, ಅದು ಯಾಕೆ ಹಾಗೆ ಇದು ಯಾಕೆ ಹೀಗೆ ....ಮಕ್ಕಳೂ ನಗುತ್ತಾ ಅವರೊಂದಿಗೆ ಬೆರೆತದ್ದು ಛೇ ವಯೋ ವೃದ್ಧ ಹೀಗೆಯೂ ಬೆರೆಯಬಹುದೇ. ವೃದ್ದರಾಗುವಾಗ ಒಂದು ಅಹಂಭಾವ ಇರುತ್ತದೆ. ಯಾಕೆಂದರೆ ನಾನೇ ಅದಕ್ಕೆ ಸಾಕ್ಷಿ. ಅದರೆ ಅದೊಂದು ಇಲ್ಲದ ವ್ಯಕ್ತಿತ್ವ. 

        ಯೋಗಾಭ್ಯಾಸದಲ್ಲಿ ಒಂದು ವಿಷಯ ತಿಳಿದು ಬರುತ್ತದೆ. ಯೋಗಿಯಾದವನು ಯಾರನ್ನೂ ವಿರೋಧಿಸುವುದಿಲ್ಲ. ಮಾತ್ರವಲ್ಲ ಯೋಗಿನ್ನು ಕಂಡರೆ ಯಾರೂ ಭಯ ಪಡುವುದೂ ಇಲ್ಲ. ಬಲಿಪ್ಪರು ಈ ವರ್ಗಕ್ಕೆ ಸೇರಿದವರು. ಹಾಗಾಗಿಯೇ ಅವರು ಅಷ್ಟು ಮುಗ್ಧರಾಗಿ ಸಾಧುವಾಗಿ ಬದುಕುವುದಕ್ಕೆ ಸಾಧ್ಯವಾಯಿತು. 

        ನಮ್ಮ ಮನೆಗೆ ಬಂದವರಿಗೆ ಒಂದು ಕೋಟು ಚಳಿಗೆ ಧರಿಸುವುದಕ್ಕೆ ಕೊಳ್ಳುವ ಮನಸ್ಸಾಯಿತು. ಸರಿ ನಾನು ಕಾರಿನಲ್ಲಿ ಮಲ್ಲೇಶ್ವರಂ ಕರೆದುಕೊಂಡು ಹೋದೆ.  ಒಂದು ಖಾದೀ ಭವನದ  ಅಂಗಡಿಯಲ್ಲಿ ಅವರೇ ಹೋಗಿ ಖರೀದಿಸಿದರು. ಅದನ್ನು ಆನಂತರ ಪ್ರತೀ ಕಾರ್ಯಕ್ರಮಗಳಲ್ಲಿ ಹೊರಗೆ ಹೋದಾಗ ಧರಿಸುವುದನ್ನು ಕಂಡಿರಬಹುದು. ಅದು ನನ್ನೆದುರೇ ಖರೀದಿಸಿದ ಕೋಟು. ಹಾಗೆ ಖರೀದಿಸಿ ಹೊರಬರುವಾಗ ನನಗೂ ಏನಾದರೂ ಬೇಕಾ ಎಂದು ಕೇಳಿದ್ದರು. ....ಹಾಗೆ ಬರಬೇಕಾದರೆ  ಚೆಡ್ವಾಂಕ ಕೆಶೆಲ್ಲಿ ಕಂಕಣ್ಣುನ್ನ. ಕರಾಡಭಾಷೆಯಲ್ಲೇ ನಾವು ಮಾತನಾಡುತ್ತಿದ್ದದ್ದು. ಮಕ್ಕಳಿಗೆ ಏನಾದರು ತೆಗೆದುಕೊಳ್ಳಬೇಕು. ಹೌದು ಅವರ ಮನೆ ಎಂದರೆ ಸಣ್ಣ ಶಾಲೆ ಇದ್ದ ಹಾಗೆ ಮೊಮ್ಮಕ್ಕಳು. ಸರಿ ಒಂದು ಬೇಕರಿ ಎದುರು ಕಾರ್ ನಿಲ್ಲಿಸಿದೆ ಅವರ ಮಗನೂ ಇದ್ದರು. ಬಹುಶಃ ಶಶಿ ಆಗಿರಬೇಕು. ಒಂದು ದೊಡ್ಡ ತೊಟ್ಟೆ...ಐದು ಕಿಲೋ ಅಕ್ಕಿ ಹಿಡಿಯುವಂತಹ ದೊಡ್ಡ ತೊಟ್ಟೆ ಅದರಲ್ಲಿ ತುಂಬ ಬಿಸ್ಕತ್ತು ಸಿಹಿತಿಂಡಿ ಏನೇನೋ...ಅವರ ಮೊಮ್ಮಕ್ಕಳಿಗೆ ಹೀಗೊಂದು ಅಜ್ಜ ಸಿಕ್ಕಿದ್ದಾರಲ್ಲ ಎಂಬ ಭಾವನೆ.  ಸರಿ ಮನೆಯಲ್ಲಿ ರಾತ್ರಿ ಊಟ ಮಾಡಿ ಅವರು ಹೊರಡುವಾಗ ಕೊಂಡು ತಂದ ಅಷ್ಟೂ ತಿಂಡಿಯ ತೊಟ್ಟೆ ನಮ್ಮ ಪುಟ್ಟ ಮಕಳ ಕೈಯಲ್ಲಿಟ್ಟು ನಿನಗೆ ಆಯ್ತಾ ಎಂದು ಹೇಳುವಾಗ ದಿಗ್ಭ್ರಮೆ ಗೊಂಡವನು ನಾನು. ಅದೇ ಮಗಳು ಈಗ ಕಾಲೇಜು ಹುಡುಗಿ. ಮೊನ್ನೆ ಬಲಿಪ್ಪರು ಅಗಲಿದಾಗ ನಾನು ಉತ್ತರ ಭಾರತ ಪ್ರವಾಸದಲ್ಲಿ ಅಲಹಾಬಾದ್ನ ಪ್ರಯಾಗದಲ್ಲಿದ್ದೆ. ಆದಿನ ರಾತ್ರಿ ಫೇಸ್ ಬುಕ್ ಅಲ್ಲ ಟಿವಿಯಲ್ಲಿ ಬಲಿಪ್ಪರ ನಿಧನದ ಸುದ್ದಿ ನೋಡಿ ಮುಂಜಾನೆ ಐದು ಘಂಟೆ ಮಗಳು ಫೋನ್ ಮಾಡಿದ್ದಳು. ದೊಡ್ಡಪ್ಪಾ ನಿಮಗೆ ತುಂಬ ನೋವಾಗಿರಬೇಕಲ್ಲ. ನನಗೆ ಕಣ್ಣೀರು ಬರ್ತ ಉಂಟು. ನಾನು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಎಲ್ಲಿಯ ನಮ್ಮ ಹೆಣ್ಣುಮಗಳು? ಎಲ್ಲಿಯ ಬಲಿಪ್ಪಜ್ಜ?  ಮರುದಿನ ವಾರಣಾಶಿ ತಲುಪಿದ್ದೆ. ಇಲ್ಲಿಂದ ಕಾಶಿ ಯಾತ್ರೆ ಹೊರಡುವಾಗ ನಮಗೆ ಶ್ರೀಂಗೇರಿ ಜಗದ್ಗುರುಗಳು ಒಂದು ಆಶೀರ್ವಚನ ಸಂದೇಶ ಕಳುಹಿಸಿದ್ದರು. ಪಿತೃಗಳಿಗೆ ತರ್ಪಣ ಬಿಡಲು ಅಸಾಧ್ಯವಾಗಿದ್ದವರು, ಗಂಗೆಯಲ್ಲಿ ಮುಳುಗಿ ಮೂರು ಸಲ ಅವರನ್ನು ಸ್ಮರಿಸಿ ತರ್ಪಣ ಬಿಡಿ. ಅದು ಧಾರಾಳವಾಗಿ ಸಾಕಾಗುತ್ತದೆ. ಪಿತೃ ಆತ್ಮಕ್ಕೆ ಶಾಂತಿ ಲಭ್ಯವಾಗುತ್ತದೆ. ನಾನು ನನ್ನ ಅಪ್ಪನಿಗೆ ತರ್ಪಣ ಬಿಟ್ಟು ನಂತರ ಬಲಿಪ್ಪರನ್ನು ಸ್ಮರಿಸಿ ಅವರಿಗೂ ತರ್ಪಣ ಬಿಟ್ಟು ಬಿಟ್ಟೆ. 

        ನಾವು ನಮ್ಮ ಬಗ್ಗೆ ಹಲವು ದೂರುಗಳನ್ನು ನಿಂದನೆಯನ್ನು ಕೇಳಿರಬಹುದು. ಅಥವಾ ಇನ್ನೇಲ್ಲೋ ಯಾರೋ ನಮ್ಮ ಬಗ್ಗೆ ನಿಂದನೆ ಹೇಳಿರಬಹುದು. ಬೈದಿರಬಹುದು. ಆದರೆ ಯಾರಾದರೂ ಬಲಿಪ್ಪರ ಬಗ್ಗೆ ವೈಯಕ್ತಿಕವಾಗಿ ನಿಂದನೆಯ ಮಾತು ಹೇಳಿದ ಉದಾಹರಣೆ ಸಿಗಲಾರದು. ಇದೊಂದು ಸಂಗತಿ ಸಾಕು ಅವರ ವ್ಯಕ್ತಿತ್ವಕ್ಕೆ. 

        ಅವರ ಬಗ್ಗೆ ಹೇಳುವಾಗ ನಮ್ಮ ಬೆಂಗಳೂರಿನ ಸನ್ಮಾನ ಕಾರ್ಯಕ್ರಮ  ನಮ್ಮ ಮಟ್ಟಿಗೆ ಅದು ದೊಡ್ಡದು ನಮ್ಮ ಎಲ್ಲ ಮಿತ್ರರಿಗೂ ಅದು ಗೊತ್ತಿದೆ. ಅವರ ಮೇಲಿನ ಗೌರವ ಅಭಿಮಾನಕ್ಕೆ ಅವರು ಸಹಿ ಹಾಕಿ ಅಂಗೀಕಾರ ಒತ್ತಿದ್ದರು. ಯಾಕೆಂದರೆ ನಾವು ಮರೆಯದಿರುವುದು ಬಿಡಿ, ಆದರೆ ಅವರೆಂದೂ ಮರೆಯಲಿಲ್ಲ, ಅದು ನಾನು ಅವರನ್ನು ಭೇಟಿಯಾಗುವಾಗಲೆಲ್ಲ ಅವರ ಕಣ್ಣು ಸಾರಿ ಹೇಳುತ್ತಿತ್ತು. ಒಂದು ಸಣ್ಣ ಸೇವೆಗೂ ಕೃತಜ್ಞತೆ ಸಲ್ಲಿಸುವ ದೊಡ್ಡ ಹೃದಯ ಅವರದು. 

        ಒಂದೆರಡು ಸಲ ಅವರ ಮನೆಗೆ ಹೋಗಿದ್ದೆ. ಅದು ಭಾಗವತರ ಮನೆ ಎಂದು ಅನಿಸಲಿಲ್ಲ. ನಮ್ಮ ಅತ್ಮೀಯ ಬಂಧುವೊಬ್ಬರ ಮನೆ ಅಂತ ಅನಿಸಿತ್ತು. ಪಾಯಸದ ಊಟ ಅಕ್ಕರೆಯಲ್ಲಿ ಹಾಕಿ, ಅವರ ಜತೆ ಕುಳಿತು ತಾಂಬೂಲ ಸವಿದ ನೆನಪು, ಹೋಗಲಿ ಹೊರಡುವಾಗ ಮನೆಯಲ್ಲೇ ಆದ ಎರಡು ಸೌತೆ ಮತ್ತೇನೋ ತರಕಾರಿ ತಂದು ಕೈಗೆ ಇತ್ತರು. ಅಲ್ಲಿ ಕ್ರಯ ಕೊಡ್ಬೇಡ್ವೋ ತೆಕ್ಕೊಂಡು ಹೋಗು.... ಆ ತರಕಾರಿ ತಿಂದು ಎಲ್ಲಿ ಹೋಯಿತೋ...ಆದರೆ ಆ ನೆನಪು ಇಂದಿಗೂ ತರಕಾರಿಯಂತೆ ಹಸಿರಾಗಿ ಇದೆ. 

        ಬಲಿಪ್ಪಜ್ಜ ಕುಳಿತಲ್ಲಿ ನಿಂತಲ್ಲಿ .....ಯಕ್ಷಗಾನದ ಜಪ ಮಾಡುವವರು. ಅವರಿದ್ದಲ್ಲಿ ಯಕ್ಷಗಾನದ ತನು ಗಂಧ ಹರಡದೇ ಇರುವುದಕ್ಕೆ ಸಾಧ್ಯವಿಲ್ಲ. ಅವರ ಅಸ್ತಿತ್ವದಲ್ಲಿ ಪರಂಪರೆಯ  ಶಕ್ತಿ ಇದೆ. ಅವರ ಅಗಲಿಕೆ ಯಕ್ಷಗಾನದಲ್ಲಿ ಒಂದು ಶೂನ್ಯವನ್ನು ಸುತ್ತಿದೆ ಸತ್ಯ. ಇಂದು ಆ ಶೂನ್ಯತೆಯ ಅರಿವಿನ ಪ್ರಜ್ಞೆ ಉಂಟಾಗಿ ಜಾಗೃತವಾಗಬೇಕು. ಅದು ಅವರಿಗೆ ಸಲ್ಲಿಸುವ ದೊಡ್ಡ ಗೌರವ. ಅವರೂ ದೂರಾದರೂ....ನನಗೂ ಈಗ ಯಕ್ಷಗಾನಕ್ಕೆ ಹತ್ತಿರವಾಗುವುದಕ್ಕೆ ಯಾವ ಕಾರಣವೂ ಸಿಗುತ್ತಿಲ್ಲ. ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರವಿಷ್ಟೆ....ಮನಸ್ಸು ಬಲಿಪ್ಪರನ್ನು ಮತ್ತಷ್ಟು ನೆನಪಿಸುತ್ತದೆ. ಆ ಶೂನ್ಯ ಅದು ಶೂನ್ಯವಾಗಿ ಮತ್ತಷ್ಟು ವ್ಯಾಪಿಸಿದ ಅನುಭವವಾಗುತ್ತದೆ.