
ಇಂತಹ ಶೇಣಿ ಬಗ್ಗೆ ನಾನು ಹೊಗಳುವುದಕ್ಕೂಅರ್ಹನಲ್ಲದವನು. ಸೂರ್ಯನನ್ನು ನೋಡಿ ಸೂರ್ಯ ಕಿರಣವನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವೇ? ಶೇಣಿಯವರ ಮಾತುಗಾರಿಕೆಗೆ ಮನ ಸೋಲದ ಯಕ್ಷಗಾನ ಪ್ರೇಕ್ಷಕನನ್ನು ಹುಡುಕುವುದು ಕಷ್ಟ. ಇಂದಿನ ತಲೆಮಾರಿಗೆ ಅವರು ಕೇವಲ ದಂತ ಕಥೆಯಾದವರು. ನಾನು ಬಾಲಕನಾಗಿದ್ದಾಗ ಅವರ ಅರ್ಥಗಾರಿಕೆಗೆ ಮನಸೋತಿದ್ದೆ. ಅದು ಅವರ ಮಾತುಗಳನ್ನು ಅರ್ಥವಿಸಿಕೊಂಡು ಅಂತ ಹೇಳಲಾರೆ ಏನೂ ಅರ್ಥವಾಗದ ಪಾಮರನಂತಹ ನನ್ನ ಶೈಶವ ತಲೆಗೆ ಅವರ ಮಾತಿನ ಆಳ ಅರ್ಥವಾಗಿದೆ ಅಂತ ಹೇಳಿದರೆ ಅದು ಹಾಸ್ಯಾಸ್ಪದವಾದೀತು. ಹೀಗಿದ್ದರೂ ಬಾಲ್ಯದಲ್ಲೇ ಶೇಣಿ ಅರ್ಥ ಅಂದರೆ ಒಂದು ಸೆಳೆತವಿರುತ್ತಿತ್ತು. ಆವಾಗ ತಾಳಮದ್ದಳೆಯಲ್ಲಿ ನೋಡುವ ಅವಕಾಶ ಮಾತ್ರ ನನಗೆ ಸಿಗುತ್ತಿತ್ತು. ಆವಾಗ ಕೇವಲ ಚೆಂಡೆಯ ಸದ್ದೋ ಅಥವಾ ಇನ್ನಿತರ ಆಕರ್ಷಣೆಗಳೇ ನನ್ನನ್ನು ಇಂತಹ ತಾಳಮದ್ದಲೆಗೆ ಹಿರಿಯರೊಂದಿಗೆ ಹೋಗುವಂತೆ ಪ್ರೆರೆಪಿಸುತ್ತಿದ್ದವು. ಆದರೆ ಬರು ಬರುತ್ತಾ ಶೇಣಿಯವರ ಅರ್ಥಗಾರಿಕೆಯನ್ನು ಹಿರಿಯರು ಚರ್ಚಿಸುವಾಗ ನನ್ನ ಕಿವಿ ನಿಮಿರತೊಡಗಿತು. ಹೌದೇ ? ಇಷ್ಟೊಂದು ಗಹನವಾಗಿರುವುದೇ ?ಯಕ್ಷಗಾನ ಬಯಲಾಟಗಳು ನನ್ನ ಬಾಲ್ಯದಲ್ಲಿ ತನಗೆ ತೀರ ವಿರಳ ಅಂತಾಳೆ ಹೇಳಬಹುದು. ಶೇಣಿಯಂತಹ ಕಲಾವಿದರು ಟೆಂಟ್ ಮೆಳದಲ್ಲೇ ವ್ಯವಸಾಯಿ ಕಲಾವಿದರಾಗಿರುತ್ತಿದ್ದರಿಂದ, ಬರೀ ಕಟೀಲು ಮೇಳದ ಬಯಲಾಟಗಳನ್ನೇ ನೋಡುತ್ತಿದ್ದ ನನಗೆ ಶೇಣಿಯವರನ್ನು ವೇಷದಲ್ಲಿ ಆವಾಗ ನೋಡಿದ್ದು ಕಡಿಮೆ. ತಾಳ ಮದ್ದಲೆಯಾದರೆ ನಮಗೆ ಸುಲಭದಲ್ಲಿ ಖರ್ಚಿಲ್ಲದೆ ಸಿಗುವ ಮನರಂಜನೆಯಾಗಿತ್ತು.
ಬಾಲ್ಯದಲ್ಲಿ ಅವರ ಅರ್ಥ ಅರ್ಥೈಸಿಕೊಳ್ಳಲು ಕಷ್ಟವಾದರೂ ಆ ಸ್ವರದ ಏರಿಲಿತವೋ ಧ್ವನಿಯ ಆಕರ್ಷಣೆಯೋ ಅಂತೂ ಶೇಣಿ ತಾಳಮದ್ದಲೆ ಎಂದರೆ ಆವಾಗಿಂದ ಒಂದು ಸೆಳೆತ ಅದು ಇನ್ನು ಇದೆ. ಮಾತಿನಂತೆ ಅವರ ಧ್ವನಿ ಅದರ ಏರಿಳಿತ ಸ್ವತಹ ಸಂಗೀತ ವಿದ್ವಾಂಸರಾಗಿದ್ದುದರಿಂದಲೋ ತಿಳಿಯದು ಅವರ ಕಂಠದ ಏರಿಳಿತ ಹಿಡಿತ ಮಿಡಿತಗಳು ಬಹುಶಃ ಇನ್ನು ಯಾವ ಕಲಾವಿದನಿಗೂ ಒಲಿಯದ ವಿದ್ಯೆ. ಈಗಿನ ಅರ್ಥಧಾರಿಗಳಲ್ಲಿ ಹಲವರು ಇವರ ನೆರಳಳನ್ನು ಹಿಂಬಾಲಿಸಿದ್ದರು ಅವರ ವಿಶೇಷತೆ ಯಾರಿಗೂ ಒಲಿಯದೆ ಇದ್ದದ್ದು ಮಾತ್ರ ಶಾರದೆ ಒಲಿಯುವಾಗ ಕಂಜೂಸಿಯಾಗಿಬಿಡುತ್ತಾಳೆ ಎಂದು ಅನ್ನಿಸಿ ಹೋಗುತ್ತದೆ. ಎರಡು ಮೂರು ವರ್ಷಗಳಿಂದ ಈಚೆಗೆ ಶ್ರೀ ಸುಣ್ಣಬಂಲ ವಿಶ್ವೇಶ್ವರ ಭಟ್ ಇವರನ್ನು ಹಲವು ಗುಣಗಳಲ್ಲಿ ಹೋಲುತ್ತಾರೆ. ಇಬ್ಬರ ಪ್ರತಿಭೆಗಳೂ ತುಂಬಾ ವೆತ್ಯಾಸ ಮತ್ತು ಹೋಲಿಕೆಗೆ ಅಸಾಧುವಾದದ್ದು ಎನ್ನುವುದಾದರೂ ಶೇಣಿಯವರ ಹಲವು ಗುಣಗಳನ್ನು ಇವರ ಅರ್ಥದಲ್ಲಿ ಗುರುತಿಸಿದ್ದೇನೆ. ಬಹುಶಃ ಇದು ನನ್ನ ಭಾವನೆ ಸರಿ ಅಂತ ನನಗೆ ಮಾತ್ರ ತೋರುವುದೋ ತಿಳಿಯದು. ಶೇಣಿಯವರ ಅರ್ಥಗಾರಿಕೆಯಲ್ಲಿ ಕಂಡು ಬರುವ ಒಂದು ಅಚ್ಚುಗಟ್ಟು, ಮಾತುಗಳನ್ನು ಪೋಣಿಸುವ ಮತ್ತು ಮಾತಿನ ಗೋಪುರವನ್ನು ನಿರ್ಮಿಸುವ ಚಾಕಚಕ್ಯತೆ ಮತ್ತು ಸ್ವರಗಳ ಏರಿಳಿತ ತಕ್ಕ ಮಟ್ಟಿಗೆ ಅವರಲ್ಲಿ ಗುರುತಿಸಿದ್ದೇನೆ. ನಾವುಗಳು ಅಚ್ಚರಿ ಪಡುವಂತೆ ಶಬ್ದ ಸಂಗ್ರಹಗಳಲ್ಲಿ ತುಂಬಾ ಹೋಲಿಕೆ ಕಂಡು ಬಂದಿದೆ. ಆದರೂ ಶೇಣಿ ಅಜ್ಜ ಯಾರಿಗೂ ಹೋಲಿಕೆ ಮಾಡಿ ತುಲನೆ ಮಾಡಿ ಬರೆಯುವಂತ ಕಲಾವಿದರಲ್ಲ .
ಶೇಣಿಯವರ ಹಲವು ಮಾತಿನ ಮಂಟಪವನ್ನು ಕಣ್ಣಾರೆ ಕಂಡು ಆಸ್ವಾದಿಸಿದ ದಿನಗಳಿವೆ. ಅದರ ಕುರುಹಾಗಿ ಇಂದು ದಿನದಲ್ಲಿ ಒಂದು ಬಾರಿಯಾದರೂ ಅಂತಹ ಮಹಾನ್ ಕಲಾವಿದರ ಧ್ವನಿಯನ್ನು ಕೇಳದಿದ್ದರೆ, ಪರವೂರಲ್ಲಿದ್ದು ನಮ್ಮ ಮನೆಯ ಸದಸ್ಯರ ಧ್ವನಿ ಆಲಿಸದಿದ್ದರೆ ಹೇಗಾಗಬಹುದು ಅದೇ ಅನುಭವ ಆಗುತ್ತದೆ. ಹೀಗೆ ಅದೆಷ್ಟು ಮನೆಯ ಮನದ ಅವಿಭಾಜ್ಯ ಅಂಗವಾಗಿ , ತನ್ನ ಜೀವಿತದಲ್ಲೂ ಅದರ ನಂತರವೂ ನಿತ್ಯ ನೆನಪಿನ ಆತ್ಮವಾಗಿ ಉಳಿದಿದ್ದಾರೆ? ಯಕ್ಷಗಾನದ ಕಲೆಯ ಪರಿಚಯ ಮತ್ತು ಅದರ ಹವ್ಯಾಸ ಬೆಳೆಸಿಕೊಂಡವ ನಿಜಕ್ಕೂ ಭಾಗ್ಯವಂತ. ಹಲವು ವರ್ಷ ತಪಸ್ಸಾಚರಿಸಿ ದೇವರನ್ನು ಪ್ರತ್ಯಕ್ಷಿಕರಿಸಿಕೊಂಡವ ಪರರನು ನೋಡಿ ಹೇಳಬಹುದು ತಾನೆಷ್ಟು ಧನ್ಯ, ಭಗವಂತನನ್ನು ಕಣ್ಣಾರೆ ಕಂಡೆ, ತಪಸ್ಸನ್ನು ಗೈದೆ ಪುಣ್ಯ ಫಲವನ್ನು ಉಂಡೆ. ಉಳಿದ ಮಂದಿಗೆ ಈ ಭಾಗ್ಯ ಉಂಟೆ ? ಅಂತೆಯೇ ಯಕ್ಷಗಾನವನ್ನು ಸವಿದು ಬಲ್ಲ ನಾವು ಗರ್ವ ಪಡಬಹುದು. ಯಕ್ಷಗಾನವ ಸವಿದೆ ಶೇಣಿಯನು ಕಂಡೆ , ಮಾತಿನ ಮಂಟಪ ಹೊಕ್ಕೆ , ಮನಕೆ ಭೂರಿ ಭೋಜನವ ಉಂಡೆ ಯಕ್ಷಗಾನವನರಿಯದ ಮಂದಿಗಿದೆಯೇ ಈ ಪುಣ್ಯ ಫಲ.






.jpg)



