"ಇದು ವಿಮರ್ಶೆಯಲ್ಲದ ಚಿಂತನ"

Thursday, October 15, 2009

ಅಮ್ಮಣ್ಣಾಯ ಎಂಬ ತಣ್ಣನೆಯ ಭಾಗವತ

ಎರಡು ವರ್ಷದ ಮೊದಲ ಒಂದು ದಿನ, ಎಡನೀರು ಮೇಳದ ಆಟ ಗಿರಿನಗರದ ಗಣಪತಿ ದೇವಾಲಯದ ಬಳಿ. ಪ್ರಸಂಗ ವೀರಮಣಿ ಕಾಳಗ ಮತ್ತು ರಕ್ತ ರಾತ್ರಿ . ಬೆಂಗಳೂರಿಗೆ ಬಂದಮೇಲೆ ಎಡನೀರು ಮೇಳದ ಹಲವು ಆಟ ನೋಡಿದ್ದರೂ ಈ ಆಟ ಮಾತ್ರ ಅಚ್ಚಳಿಯದ ನೆನಪನ್ನು ಛಾಪು ಮೂಡಿಸಿದೆ. ಅಂದು ಅಮ್ಮಣ್ಣಾಯರು ಭಾಗವತರಾಗಿ ಕುಳಿತಕೂಡಲೇ ಯಕ್ಷಗಾನದ ಲಯವೇ ಬದಲಾಗಿಬಿಟ್ಟಿತು.ಅಮ್ಮಣ್ಣಾಯಾರ ಭಾಗವತಿಕೆ ವೀರ ರಸದ ಪ್ರಸಂಗಗಳಿಗೆ ಹೊಂದುವುದಿಲ್ಲ ಎಂಬ ಸಣ್ಣ ಭಾವನೆ ಮನಸ್ಸಿನ ಮೂಲೆಯಲ್ಲಿತ್ತು.




ಅದು ಮೊದಲು ತುಳು ಪ್ರಸಂಗಗಳನ್ನೇ ಅಧಿಕವಾಗಿ ನೋಡಿದ ಪರಿಣಾಮವೋ ಏನೋ.? ವೀರಮಣಿ ಕಾಳಗ ಮತ್ತು ರಕ್ತ ರಾತ್ರಿಯಂತಹ ಪ್ರಸಂಗ ಅಮ್ಮಣ್ಣಾಯರ ಸೂತ್ರಧಾರಿಕೆಯಲ್ಲಿ ಹೇಗೆ ಪ್ರದರ್ಶನಗೊಳ್ಳಬಹುದು ? ಎಂಬ ಕುತೂಹಲ ಇದ್ದೆ ಇತ್ತು. ಆ ಕುತೂಹಲ ಒಂದು ಸುಂದರ ಆಟ ನೋಡುವಲ್ಲಿ ತಣಿಯಿತು.
ನಾನು ನೋಡಿದ ಅತ್ಯದ್ಭುತ ಹಿಮ್ಮೇಳದ ಜತೆಗಾರಿಕೆಯಲ್ಲಿ ಇದ್ದೂ ಒಂದು ಎಂದನಿಸಿತು. ಅಮ್ಮಣ್ಣಾಯರೊಂದಿಗೆ ಪ್ರಭಾಕರ ಗೋರೆ, ಚೆಂಡೆಯೊಂದಿಗೆ ಯುವ ಪ್ರತಿಭಾವಂತ ನಿಡ್ಲೆ ಅಜ್ಜನ ಪಟ್ಟ ಶಿಷ್ಯ ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಜತೆಗೂಡಿ ಮರೆಯದ ಹಿಮ್ಮೇಳದ ರಸಾಸ್ವಾದನೆಯನ್ನು ಅಂದು ಉಣಬಡಿಸಿದರು. ಹೊಂದಾಣಿಕೆಯ ಹಿಮ್ಮೇಳ ಇದ್ದರೆ ಯಕ್ಷಗಾನ ಹೇಗೆ ಕಳೆ ಕಟ್ಟುತ್ತದೆ ಎಂಬುದಕ್ಕೆ ಇದು ಸಾಕ್ಷಿಯದಂತೆನಿಸಿತು.
ಅಮ್ಮಣ್ಣಾಯಾರ ಭಾಗವತಿಕೆಯ ಇಂಪಾದ ಸ್ವರದ ಪ್ರಭಾವ ಅದು ಸವಿಯುವಾಗಲೇ ಅನುಭವವೇದ್ಯವಾಗುವುದು. ಮಾಧುರ್ಯ ತುಂಬಿದ ಕಂಠ ಸೌಮ್ಯತೆಯ ಅನುಭವ ತಂದರೂ ಗಡಸುತನದ ಛಾಯೆಯಲ್ಲೇ ಮಾರ್ದನಿಸುತ್ತದೆ. ಯಕ್ಷಗಾನಕ್ಕೆ ಒಪ್ಪುವ ಆ ಗಡಸು ಸ್ವರ ಇತ್ತೀಚಿಗೆ ತುಂಬಾ ಪಳಗಿದಂತೆ ಅನುಭವದ ಸೆಲೆಯನ್ನು ತೋರಿಸುತ್ತದೆ. ಸುಲಭವಾಗಿ ಯಕ್ಷಗಾನ ಭಾಗವತಿಕೆಯನ್ನು ಆಸ್ವಾದಿಸಬಹುದಾದ ಭಾಗವತಿಕೆ ಇವರದ್ದು. ರಂಗದ ಮೇಲೆ ಬಂದ ಮೇಲೆ ಶಿಸ್ತಿನ ಸಿಪ್ಹಾಯಿಯಂತೆ ತಣ್ಣಗೆ ಪಾತ್ರಧಾರಿಯನ್ನೇ ಗಮನಿಸುತ್ತಾ ಆತನ ಹಿನ್ನೆಲೆಯ ಅಭಿನಯದಲ್ಲೇ ಮುನ್ನೆಲೆಯನ್ನು ಸಮರ್ಥವಾಗಿ ನಿರ್ವಹಿಸುವ ಚಾಣಾಕ್ಷತೆ. ಅನಗತ್ಯ ಹರಟೆ ಹೊಡೆಯದ ಪ್ರದರ್ಶನದಲ್ಲೇ ತಲ್ಲೀನನಾಗುವ ಇವರ ಕಲೆಯ ಮೇಲಿನ ಅರ್ಪಣಾ ಭಾವ, ಶಿಸ್ತು ಇಂದಿನ ಯುವ ಕಲಾವಿದರಿಗೆ ಅನುಕರಣೀಯ. ಹೆಗಲ ಉತ್ತರೀಯದ ನೂಲಿನ ಎಳೆ ಕೂಡ ಅಲುಗದಂತೆ ಆರಂಭದಿಂದ ಕೊನೆಯವರೆಗೂ ಸ್ತಿತಪ್ರಜ್ಞರಾಗಿ ಪ್ರೇಕ್ಷಕರೊಂದಿಗೆ ಸ್ವರದಿಂದ ಒಂದಾಗಿ ಬೆರೆಯುತ್ತಾರೆ. ಇಂಪಾದ ಗಾನ ಮಾಧುರ್ಯದ ಹೊನಲನ್ನು ಯಕ್ಷಗಾನ ರೀತಿಯಲ್ಲಿ ಸವಿಯಬೇಕಾದರೆ ಇವರ ಭಾಗವತಿಕೆ ಹೆಚ್ಚು ಸೂಕ್ತವೆನಿಸುತ್ತದೆ. ಒಂದೊಮ್ಮೆ ಭೋರ್ಗರೆವ ಹೊಳೆಯಂತೆ ಧುಮ್ಮಿಕ್ಕಿದರೆ ಮರುಕ್ಷಣ ಮಂದಗಾಮಿನಿಯಂತೆ ಶಾಂತವಾಗಿ ಪ್ರವಹಿಸುತ್ತದೆ.

ದಿವಂಗತ ದಾಮೋದರ ಮಂಡೆಚ್ಚ ಭಾಗವತರ ಪ್ರಭಾವ ಹೆಚ್ಚಾಗಿ ಕಂಡು ಬಂದರೂ ದಿವಂಗತ ಕಾಳಿಂಗ ನಾವಡರ ಶೈಲಿಯನ್ನು ಇವರಷ್ಟು ಸಮರ್ಥವಾಗಿ ಕರಗತ ಯಾರೂ ಮಾಡಿಲ್ಲ ಇದು ನನ್ನ ಭಾವನೆ.ಆರಂಭದಲ್ಲಿ ತಣ್ಣಗೆ ನಿಧಾನವಾಗಿ ಆರಂಭವಾಗುವ ಇವರ ಭಾಗವತಿಕೆ ಮತ್ತೆ ರಾಗ ಸುಧೆಯಲ್ಲಿ ಪ್ರೇಕ್ಷಕರನ್ನು ಮುಳುಗಿಸಿ ಆ ರಾಗದ ಗುಂಗು ಯಕ್ಷಗಾನ ಮುಗಿದು ದಿನಕಳೆದರೂ ಹಾಗೇ ಮಧುರ ಅನುಭವದ ಸಿಂಚನವನ್ನು ಕೊಡುತ್ತದೆ.


ಇವರಿಗೆ ಹಲವರು ಹಿಮ್ಮೇಳಕ್ಕೆ ಸಹಕಾರಿ ಯಾಗಿದ್ದರೂ ಇವರ ಇತ್ತೀಚೆಗಿನ ಜತೆಗಾರಿಕೆ ಮಾಂತ್ರಿಕ ಹಸ್ತದ ಮದ್ದಲೆಗಾರ ಪ್ರಭಾಕರ ಗೋರೆ ಹಾಗು ದೇಲಂತ ಮಜಲು ಸುಬ್ರಹ್ಮಣ್ಯ ಭಟ್. ಈ ತ್ರೀ ಮೂರ್ತಿಗಳು ಜತೆಗೂಡಿದರೆ ಅದ್ಭುತ ಹಿಮ್ಮೇಳದ ಅನುಭವವನ್ನು ಖಂಡಿತವಾಗಿ ಸವಿಯಬಹುದು. ನನ್ನ ಅಂಬೋಣದಂತೆ ಗೋರೆಯವರ ಮದ್ದಲೆ ವಾದನ ಇವರ ಭಾಗವತಿಕೆಗೆ ಹೆಚ್ಚು ಒಪ್ಪುತ್ತದೆ. ಇವರ ಪ್ರತಿಯೊಂದು ಪದಕ್ಕೂ ಗೊರೆಯವರು ಮಾನಸಿಕ ಭಾಷೆಯಲ್ಲಿ ಹತ್ತಿರವಾಗುತ್ತಾರೆ. ಪದವನ್ನು ಹಿಂಬಾಲಿಸುವ ರೀತಿ, ಆ ಪದವನ್ನು ಸ್ವತಹ ಆಲಿಸಿ ಅದರಲ್ಲಿ ತಲ್ಲೀನನಾಗಿ ಬಾರಿಸುವ ಅವರ ವಾದನ ಶೈಲಿ ಆ ಶರೀರ ಭಾಷೆ ನೋಡುಗರಿಗೆ ಅದೊಂದು ಚಿತೊಹಾರಿ ಅನುಭವ. ಗೋರೆ ಎಂಬ ಈ ಅದ್ಭುತ ಕೈಚಳಕದ ಮದ್ದಲೆ ವಾದಕ, ಯಕ್ಷಗಾನದ ಮದ್ದಲೆ ವಾದನದಲ್ಲಿ, ಯಕ್ಷಗಾನ ಲಯಕ್ಕೆ ಒಪ್ಪುವಂತೆ ತಬಲಾ ವಾದನವನ್ನೂ ಆವಿಷ್ಕರಿಸಿದವರು. ಆ ಮೂಲಕ ಹಿಮ್ಮೇಳಕ್ಕೆ ಮಾಂತ್ರಿಕ ಸ್ಪರ್ಶವನ್ನು ನೀಡಿ ಯಾವುದೇ ಭಾಗವತರ ಭಾಗವತಿಕೆಯ ಯಶಸ್ಸಿಗೆ ದೇಣಿಗೆ ನೀಡುವಲ್ಲಿ ಸಮರ್ಥರಾದವರು. ಇವರೊಂದಿಗೆ ಹಿಮ್ಮೇಳಕ್ಕೆ ಜತೆಯಾದರೆ ಯಕ್ಷಗಾನ ರಸಿಕರಿಗೆ ಮತ್ತೆ ಬೇರೆ ಔತಣ ಬೇಡ.
ಅಮ್ಮಣ್ಣಾಯರೊಂದಿಗಿನ ಗೋರೆ ಯಕ್ಷಗಾನ ಲೋಕ ಇತ್ತೀಚಿಗೆ ಕಂಡ ಅದ್ಭುತ ಜೋಡಿ. ಇದರೊಂದಿಗೆ ದೇಲಂತ ಮಜಲು ಅವರ ಚೆಂಡೆ ಇದ್ದರೆ ಅದು ಇನ್ನೊದು ಮಜಲನ್ನು ತೆರೆದು ತೋರಿಸಿದಂತೆ. ಇವರು ಸೌಮ್ಯ ಪದಗಳಿಗೆ ಮಾತ್ರ ಸೀಮಿತ ಎಂಬ ಎಣಿಕೆಯನ್ನು ಇವರು ಹಲವು ಸಲ ತಮ್ಮ ರಂಗದ ಮೇಲಿನ ಕಸುಬಿನಿಂದಲೇ ತಪ್ಪೆಂದು ಸಾಧಿಸಿ ತೋರಿಸಿದ್ದಾರೆ. ಪ್ರಸಂಗ ಎಳ್ಳು ಎಡವದೇ ಒಂದೇ ರೀತಿ ಸಾಗುವುದು ಇವರ ಭಾಗವತಿಕೆಯಲ್ಲಿ ನಾನು ಕಂಡುಕೊಂಡ ಮುಖ್ಯ ಲಕ್ಷಣ. ಸೀತಾ ಪರಿತ್ಯಾಗ.. ಅಥವಾ ಮಾನಿಷಾದ ಎಂಬ ಯಶಸ್ವಿ ಪ್ರಸಂಗ ಇವರಂತೆ ಆಡಿಸುವವರು ಯಾರೂ ಇರರಲಾರರು.

ಹೊಗಳಿಕೆಗೆ ಉಬ್ಬದ ತೆಗಳಿಕೆಗೆ ಸ್ಥಿತಪ್ರಜ್ಞತೆ ತೋರುವ ಇವರು ತನ್ನ ಭಾಗವತಿಕೆಯ ಮಧುರ ಕಂಠದಿಂದಲೇ ಮಾತಾಡುವ ಮೌನಿ ಇವರು.ಯಕ್ಷಗಾನ ಲೋಕದಲ್ಲಿ ಇನ್ನೂ ರಸಿಕರನ್ನು ರಂಜಿಸಿ, ಆ ಮೂಲಕ ಅದ್ಭುತ ಕಲೆ ಯಕ್ಷಗಾನಕ್ಕೆ ಇವರ ಸೇವೆಯು ಲಭ್ಯವಾಗುವ ವಿಪುಲ ಅವಕಾಶಗಳು ಇನ್ನೂ ಭಗವಂತನು ಅನುಗ್ರಹಿಸಲಿ .ಇದು ಅಮ್ಮಣ್ಣಾಯ ಸ್ವರ ರಸಿಕರ ಹರಕೆ.

Thursday, October 1, 2009

ಯಕ್ಷ ಲೋಕದ ಕಡತೋಕ


ಸುಮಾರು ೩೦ ವರ್ಷಗಳ ಹಿಂದಿನ ಒಂದು ಮಧ್ಯಾಹ್ನದ ಸಮಯ ಮನೆಯಿಂದ ಕೊಟ್ಟ ಹಣ್ಣು ಕ್ಕಾಯಿ ಚೀಲವನ್ನು ತೆಗೆದುಕೊಂಡು ಪೈವಳಿಕೆಯ ನನ್ನ ಮನೆಯಿಂದ ಶಂಕರ್ ವಿಟ್ಟಲ್ ಬಸ್ಸು ಹಿಡಿದು ಬಾಯರು ಪದವಿಗೆ ಬಂದಿಳಿದೆ. ಚಿಕ್ಕ ಬಾಲಕ ನಾನು. ಆ ಒಂದು ಚೀಲವೇ ತುಂಬಾ ಭಾರವಾದಂತೆ ಎನಿಸಿತು. ಬಾಯರು ಇಳಿದು ಬಾಯರು ಸೊಸೈಟಿ ಬಳಿಗೆ ಹೋಗಬೇಕು. ಮಧ್ಯಾಹ್ನದ ಉರಿಬಿಸಿಲು, ಬಾಯಾರು ಪದವಿಂದ ಸೊಸಾಯಿಟಿ ಬಳಿಗೆ ಅಂದು ಬಸ್ಸು ಹೋಗುತ್ತಿರಲಿಲ್ಲ. ಬರೀ ಮಣ್ಣಿನ ಕಚ್ಚ ರಸ್ತೆ ಯಲ್ಲೇ ನಡೆದುಕೊಂಡು ಹೋಗಬೇಕು. ಬಸ್ಸು ನಿಲ್ಲುವ ಬಲ ಬದಿಯಲ್ಲೇ ಒಂದು ಗೋಳಿಮರದ ಕಟ್ಟೆಯೊಂದು ಇತ್ತು.ಅದರ ಬಳಿಯಲ್ಲೇ ಕರ್ರಗಿನ ಪಾದೆಯಮೇಲೆ ಒಂದು ಅಡ್ಡರಸ್ತೆ ಅದರಲ್ಲೇ ಹೆಚ್ಚಾಗಿ ನಡೆದುಕೊಂಡು ಹೋಗಬೇಕು. ಬಿಸಿಯಾದ ಪಾದೆ, ಬರಿಗಾಲಿನಲ್ಲಿ ( ಆವಾಗ ಚಪ್ಪಲಿ ಹಾಕುವ ಶ್ರೀಮಂತಿಗೆ ಇರಲಿಲ್ಲ ) ನಡೆದು ಈಗ ಕ್ಯಾಮ್ಕೋ ಇರುವ ಒಳಚ್ಚಾಲು (ಮುಳಿ ಹುಲ್ಲು ಬೆಳೆಯುತ್ತಿದ್ದ ವಿಶಾಲ ಮೈದಾನು) ದಾಟಿ ಮುಂದೆ ಹೋಗಬೇಕು. ಆ ಕಾಲದಲ್ಲಿ ಅಲ್ಲಿ ಒಂದು ಸಣ್ಣ ಕಟ್ಟಡ ಮಾತ್ರವೇ ಇತ್ತು ಕ್ಯಾಮ್ಪ್ಕೋ ಇನ್ನೂ ಬಂದಿರಲಿಲ್ಲ. ನಿತ್ಯವಾದರೆ ನಿರ್ಜನ ಪ್ರದೇಶ. ಆದರೆ ಅಂದು ಅಲ್ಲೇ ಕಳಗಿನ ಇನ್ನೊಂದು ಬಯಲಿನಂತಹ ಒಳಚ್ಚಾಲು ಇತ್ತು. ಅಲ್ಲಿ ಧರ್ಮಸ್ಥಳ ಮೇಳದ ಆಟ..!!!

ಟೆಂಟ್ ಆಟವನ್ನು ಬಹುಶಃ ನನ್ನ ಜೀವಮಾನದಲ್ಲೇ ನಾನು ನೋಡುವುದು. ನನ್ನ ಕಣ್ಣಿಂದ ನೋಡಲು ಆಸಾಧ್ಯವದಷ್ಟು ಸಾಮಾನುಗಳು ಅದಾಗಲೇ ಬಂದು ಬಿದ್ದಿದ್ದವು. ಕೆಲವು ಮಂದಿ ಟೆಂಟ್ ಕಟ್ಟುವ ಕೆಲಸದಲ್ಲಿ ಮಗ್ನರಾಗಿದ್ದರು. ಬೆರಗು ಕಣ್ಣಿಂದ ಅದನ್ನು ನೋಡುತ್ತಾ ಮುಂದೆ ಹೋದೆ.ಮನೆಯಿಂದಲೇ ಹೇಳಿದ್ದರು ಚೌಕಿ ಎಲ್ಲಿದೆ ಎಂದು .ಆವಾಗ ಬಾಯಾರು ಸೊಸೈಟಿ ಒಂದೆರಡು ಕಟ್ಟಡ ಮಾತ್ರವಿದ್ದ ಪುಟ್ಟ ಬಜಾರು. ಅಲ್ಲೇ ಸೊಸಾಯಿಟಿ ಕಾಂಪೌಂಡ್ . ಅದರಲ್ಲಿ ಸುಣ್ಣ ಬಳಿದ ಉದ್ದನೆ ಒಂದು ದೊಡ್ಡ ಕಟ್ಟಡ. ಅದರಲ್ಲಿ ಅಂದಿನ ಧರ್ಮಸ್ಥಳ ಮೇಳದ ಕಲಾವಿದರ ವಿಶ್ರಾಂತಿ ಗೃಹ ಹಾಗು ಚೌಕಿ. ಒಂದು ಕೊನೆಯಲ್ಲಿ ಮೇಳದ ದೇವರನ್ನು ಇಟ್ಟಿದ್ದರು. ಕಾಂಪೌಂಡ್ ಗೇಟ್ ಬಳಿಯಲ್ಲೇ ಇದ್ದ ಬಾವಿ ಕಟ್ಟೆಯಲ್ಲಿ ಕೆಲವು ಕಲಾವಿದರು ಉದ್ದ ಕೂದಲು ಬಿಟ್ಟು ಚೌಕುಳಿಯ ದೊಡ್ಡ ಅಂಡರ್ವೇರ್ ತೊಟ್ಟು ಕೊಡದಿಂದ ಬುಸು ಬುಸು ನೀರು ಬಿಡುತ್ತಾ ಸ್ನಾನ ಮಾಡುತ್ತಿದ್ದರು. ನಾನು ಹಣ್ಣುಕ್ಕಾಯಿ ಚೀಲದೊಂದಿಗೆ ನಿಧಾನ ಒಳ ಹೋದೆ. ಒಳಗೆ ಚೌಕಿ ಮಹಾಗಣಪತಿ ದೇವರ ಪೂಜೆ ನಡೆಯುವುದರಲ್ಲಿತ್ತು. ಹಲವು ಜನ ಸೇರಿದ್ದರು. ಸ್ವಲ್ಪ ಹೊತ್ತಿನಲ್ಲೇ ಮಂಗಳಾರತಿಗೆ ಎಲ್ಲರೂ ಬಂದು ಸೇರಿದರು. ಜತೆಗೆ ಉದ್ದನೆಯ ನೀಳಕಾಯದ ಚಿಪ್ಪಾರು ಬಲ್ಲಾಳರು ಚೆಂಡೆಯೊಂದಿಗೆ ಬಂದರು ಅವರೇನೂ ಅಪರಿಚಿತರಲ್ಲ. ಆದರೆ ಅವರ ಜತೆಗೆ ಕುಬ್ಜ ಕಾಯದ ಭಾಗವತರು ಬಂದರು. ತಮ್ಮ ಕಂಚಿನಂತೆ ಮೊಳಗುವ ಕಂಠದಿಂದ "ಗಜಮುಖದವಗೆ ಗಣಪಗೆ " ಎಂದು ಪದ ಹೇಳಲು ಸುರು ಮಾಡಿದರು. ಅವರೇ ಕಡತೋಕ ಮಂಜುನಾಥ ಭಾಗವತರು. ತೆಂಕು-ಬಡಗು ಎರಡರಲ್ಲೂ ಸಮನ್ವಯವಾಗಿ ಯುಗಪ್ರವರ್ತಕರೆನಿಸಿ ಕೊಂಡ ಅಸಾಮಾನ್ಯ ಕಲಾವಿದರಾದ ಇವರನ್ನು ನಾನು ಅಂದೇ ಮೊದಲು ನೋಡುತ್ತಿರುವುದು. ಇಂದಿಗೂ ಕಡತೋಕರನ್ನು ನೆನಸಿಕೊಂಡರೆ ಮೊದಲು ನೆನಪಿಗೆ ಬರುವುದು ಈ ಸನ್ನಿವೇಶ. ಇಂದು ಅವರ ಕಂಚಿನ ಕಂಠದ ಧ್ವನಿಸುರುಳಿ ಬಿಚ್ಚಿಕೊಂಡಾಗ ಯಾವುದೊ ಲೋಕಕ್ಕೆ ಸೆಳೆಯುವ ಸುಳಿಗೆ ಸಿಕ್ಕಿಕೊಳ್ಳುತ್ತೇವೆ. ತುಂಬಾ ಸರಳವಾದ ಭಾಗವತಿಕೆಯಂತೆ ಭಾಸವಾಗುವ ಇವರ ಭಾಗವತಿಕೆ ಬಾಲ್ಯದಲ್ಲೇ ಹಲವು ಸಲ ಧರ್ಮಸ್ಥಳ ಮೇಳದ ಆಟದಲ್ಲಿ ಸವಿದಿದ್ದೇನೆ. ಏಳವೆಯಲ್ಲೂ ಅವರ ಭಾಗವತಿಕೆ ಸವಿಯುವಂಥ ಈಗಿನ ಪಕ್ವ ಜ್ಞಾನ ಇಲ್ಲವಾದರೂ ಅವರ ಸ್ವರವನ್ನು ಸವಿಯುವಂಥ ಭಾಗ್ಯ ನನ್ನದು. ಯಕ್ಷಗಾನದ ದಂತಕಥೆಗಳ ನಿರ್ಮಾತೃಗಳ ಕಲಾಶ್ರೀಮಂತಿಕೆಯ ಸೊಬಗನ್ನು ಸವಿದಿದ್ದೇನೆ ಎಂಬುದು ನನ್ನ ಮಟ್ಟಿಗೆ ಹೆಮ್ಮೆ ಎಂದೇ ತಿಳಿದುಕೊಂಡವ.

ನನ್ನ ಮಿತ್ರರೊಬ್ಬರು ಇತ್ತೀಚಿಗೆ ನೀಡಿದ ಅವರ ಆತ್ಮ ಕಥಾ ಪುಸ್ತಕ "ಯಕ್ಷವನ ವಿಹಾರ" ಕೈಗೆ ಸಿಕ್ಕಿದಾಗ ಮೇಲೆ ಹೇಳಿದ ಮೂವತ್ತು ವರ್ಷದ ಹಿಂದಿನ ಘಟನೆ ಪುನಃ ನೆನಪಾಯಿತು.ಹಿರಿಯ ಕಲಾವಿದರ ಆತ್ಮ ಕಥೆ ಅದು ಕೇವಲ ಆತ್ಮ ಕಥೆಯಾಗುವುದಿಲ್ಲ ಚರಿತ್ರೆ ಯೂ ಆಗುತ್ತದೆ . ನಾವು ಕಂಡು ಕೇಳರಿಯದ ಅನುಭವಗಳನ್ನು ಓದುವಾಗ ಯಾವುದೊ ಅವ್ಯಕ್ತ ಅನುಭವಕ್ಕೆ ಒಳಗಾಗುತ್ತೇವೆ. ಪ್ರತಿಯೊಬ್ಬ ಹಿರಿಯ ಕಲಾವಿದರೂ ಇಂತಹ ಆತ್ಮ ಕಥೆ ಬರೆಯುವಲ್ಲಿ ಮನಸ್ಸು ಮಾಡಿದರೆ ಯಕ್ಷಗಾನ ಚರಿತ್ರೆಯ ಪುನರಾವಲೋಕನವಾಗಿಬಿಡುತ್ತದೆ. ನಾವು ಕಂಡು ಕೇಳರಿಯದ ಅನುಭವದ ತುಸು ದರ್ಶನವಾಗಿಬಿದುತ್ತದೆ. ಕಡತೋಕರ ಯಕ್ಷಲೋಕದ ಯಕ್ಷವನ ವಿಹಾರ ಇದು ಕೇವಲ ಆತ್ಮ ಕಥೆಯಲ್ಲ ಯಕ್ಷ ಚರಿತ್ರೆ. ಬಹುಷಃ ಹೆಚ್ಚಿನ ಎಲ್ಲ ಕಲಾವಿದರೂ ಜೀವನವನ್ನೇ ಕಲೆಯ ಜತೆ ಸಮನ್ವಯಗೊಳಿಸಿ ತೀರ ಬಡತನದಲ್ಲೂ ಈ ಶ್ರೀಮಂತ ಕಲೆಯನ್ನು ಇನ್ನೂ ಶ್ರೀಮಂತಗೊಳಿಸಿದವರು. ಒಂದೊಂದೇ ಶಿಲೆಯನ್ನು ಕೆತ್ತಿ ಒಪ್ಪಗೊಳಿಸಿ ಇಂದು ಯಕ್ಷಗಾನ ವೆಂಬ ಭವ್ಯ ಅರಮನೆಯನ್ನು ಕಟ್ಟಿಬೆಳೆಸಿದ ಇಂತಹ ಮಹಾನ್ ಕಲಾವಿದರ ಜೀವನ ಚಿನ್ನವನ್ನು ಒರೆಗೆ ಹಚ್ಚಿ ಪುತ್ತಳಿಯನ್ನು ನಿರ್ಮಿಸಿದಂತೆ.

ಭಾಗವತಿಕೆಯನ್ನು ತಂದೆಯಿಂದಲೇ ಬಳುವಳಿ ಎಂಬಂತೆ ಪಡೆದ ಇವರ ಕಲಾಜೀವನ ಎಲ್ಲ ಕಲಾವಿದರಂತೆ ಬಾಲ್ಯದ ಕಷ್ಟದ ಬದುಕು ಹಾಗೂ ಮೊದಲಿಗೆ ಉತ್ತರ ಕರ್ನಾಟಕದ ಅಂದಿನ ಯಕ್ಷಗಾನ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಈ ಆತ್ಮ ಕಥೆ ಯಲ್ಲಿ ಅಲ್ಲಲ್ಲಿ ಬರುವ ಹಿರಿಯ ಕಲಾವಿದರು ವ್ಯಕ್ತಿಗಳು ನಮಗೆ ಅರಿವಿಲ್ಲವಾದರೂ ಸಮರ್ಥ ವ್ಯಕ್ತಿ ಚಿತ್ರಣದ ಮೂಲಕ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಯಕ್ಷಗಾನ ಲೋಕಕ್ಕೆ ಇವರ ಪ್ರವೇಶ, ಯಕ್ಷಗಾನದ ದಂತ ಕಥೆಯಾಗಿ ಹೋದ ಶ್ರೀ ಕೆರೆಮನೆ ಶಿವರಾಮ ಹೆಗ್ಗಡೆಯವರ ಪ್ರಭಾವಕ್ಕೆ ಒಳಗಾಗಿ ವೇಷಗಾರನಾಗಬೇಕೆಂಬ ಇವರ ಒತ್ತಾಸೆ ಅವರ ಆಗ್ರಹದಂತೆ ಭಾಗವತರಾಗಿ ಮುಂದುವರಿಕೆ , ಯಕ್ಷಗಾನದ ಮೊದಲ ಪತ್ರಿಕೆಯನ್ನು ಹೊರತಂದ ಸಂದರ್ಭ ಮತ್ತು ಅದರ ಬೆಳವಣಿಗೆ ಹೀಗೆ ಇದರಲ್ಲಿ ಬರುವ ಹಲವು ಘಟನೆಗಳು, ಬಾಲ್ಯದ ಜೀವನ ರೀತಿ, ಎಲ್ಲವೂ ಓದುಗರನ್ನು ತನ್ನ ಜೀವನ ಯಾನದಲ್ಲಿ ಕಡತೋಕರು ನಮ್ಮನ್ನು ಜತೆಗೆ ಕರೆದು ಕೊಂಡುಹೋಗ್ತಾರೆ. ಯಕ್ಷಗಾನ ನಡೆದು ಕೊಂಡು ಬಂದ ರೀತಿ ಅದರ ಅಂಗವಾಗಿ ತಾವು ಬೆಳೆದು ಬಂದ ರೀತಿ ಹಿರಿಯ ಕಲಾವಿದರ ಆಶಿರ್ವಾದ ಸಹಕಾರ ಮುಂತಾದುವನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.

ಬಡಗು ತಿಟ್ಟುವಿನಿಂದ ತೆಂಕು ತಿಟ್ಟುವಿಗೆ ಬಂದ ರೀತಿ, ತೆಂಕು ತಿಟ್ಟುವಿನ ಗುರು ಮಾಂಬಾಡಿ ನಾರಾಯಣ ಭಟ್ಟರ ಬಗ್ಗೆ ಮತ್ತೆ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾಗಿ ಮೆರೆದಾಡಿದ ಬಗೆ, ಒಂದೊಂದೇ ಮಜಲುಗಳ ಸವಿವರಣೆಯನ್ನು ನೀಡುತ್ತಾ ಆತ್ಮ ಕಥೆ ಅಂತರಾಳವನ್ನು ಅನಾವರಣಗೊಲಿಸುತ್ತ ಸಾಗುತ್ತದೆ. ಯಕ್ಷಗಾನದ ಹಿರಿಯ ಕುರಿಯ ವಿಠಲ ಶಾಸ್ತ್ರಿಗಳ ಸಹಕಾರ ಮತ್ತು ನಿರ್ದೇಶನವನ್ನು ಮನಸಾ ಸ್ಮರಿಸುತ್ತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನಿಡ್ಲೆ ನರಸಿಂಹ ಭಟ್ಟರ ಜತೆಗಿನ ಕಲಾ ಜೀವನವನ್ನು ಈ ಇಳಿ ವಯಸ್ಸಿನಲ್ಲೂ ಮರೆಯದೆ ನೆನಪಿಗೆ ತರುತ್ತ ಅವರ ಸಹಕಾರವನ್ನು ಹೃದಯದಿಂದ ಸ್ಮರಿಸುತ್ತಾರೆ. ತೆಂಕು ತಿಟ್ಟುವಿನಲ್ಲಿ ಅಗ್ರಮಾನ್ಯ ಭಾಗವತರಾಗಿ ಮೆರೆದಾಡುವುದಕ್ಕೆ ಇವರ ಸಹಕಾರ ಇಲ್ಲವಾಗಿರುತ್ತಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂಬ ಮನದಾಳದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ಬಲ್ಲಾಳರೊಂದಿಗಿನ ಇವರ ಭಾಗವತಿಕೆ ಹೊಸ ಹೊಸ ತಂತ್ರಗಳು ಹೊಸ ಆವಿಷ್ಕಾರಗಳು ಯಕ್ಷ ಲೋಕ ಎಂದಿಗೂ ಮರೆಯದು. ಇವರ ಆತ್ಮ ಕಥೆಯನ್ನು ಓದುತ್ತ ಓದುತ್ತ ಅಂದಿನ ಧರ್ಮ ಸ್ಥಳ ಮೇಳದ ವೈಭವನ್ನು ಪುನಃ ಕಣ್ಮುಂದೆ ನಿಲ್ಲಿಸಿದಂತೆ ಭಾಸವಾಯಿತು. ಮಹಾನ್ ಕಲಾವಿದರು ಇವರ ಭಾಗವತಿಕೆಯಲ್ಲಿ ಕುಣಿದಾಡಿದ ಪರಿ ಮರೆಯಲು ಸಾಧ್ಯವೇ.?

ಆತ್ಮ ಕಥೆಯಲ್ಲಿ ತಮ್ಮನ್ನು ಸಾಧ್ಯವಷ್ಟು ತೆರೆದು ತೋರಿಸಿದ್ದಾರೆ. ಪ್ರಥಮದಿಂದಲೇ ಪ್ರಾಮಾಣಿಕತೆಗೆ ಒಟ್ಟು ಕೊಟ್ಟಂತೆ ಒಂದೊಂದೇ ಮಜಲುಗಳನ್ನು ತೋರಿಸುತ್ತಾ ಆತ್ಮ ಕಥೆ ತೆರೆಯುತ್ತ ಸಾಗುತ್ತದೆ. ಯಕ್ಷಗಾನಕ್ಕೆ ಸಂಭಂಧ ಪಟ್ಟ ಪತ್ರಿಕೆ ಮೊದಲಾಗಿ ಹೊರತಂದ ಬಗೆ ಇಂದಿಗೂ ಅದು ಸಾಗುವ ಬಗೆ ಅದನ್ನು ವ್ಯಕ್ತ ಪಡಿಸುವಾಗ ಅವರ ಉತ್ಸಾಹ ನಿಜಕ್ಕೂ ಶ್ಲಾಘನೀಯವಾಗುತ್ತದೆ. ಬಹುಶಃ ಅಂದಿನ ಯಾವುದೇ ಯಕ್ಷಗಾನಾಭಿಮಾನಿಯೂ ಇವರ ಮತ್ತು ದಿ.ಕಾಳಿಂಗ ನಾವಡರ ದ್ವಂದ್ವ ಹಾಡುಗಾರಿಕೆಯನ್ನು ಮರೆಯಲಾರರು. ಹೀಗೆ ಹಲವು ಕಲಾವಿದರನ್ನು ಒಂದೊಂದಾಗಿ ಸ್ಮರಿಸುತ್ತ ಪ್ರತಿಯೊಬ್ಬರಿಗೂ ಆತ್ಮಿಯವಾಗುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಬಹುಶಃ ಧರ್ಮಸ್ಥಳ ಮೇಳದ ಯಾವುದೇ ಕಲಾವಿದನೂ ಹೆಗ್ಗಡೆಯವರ ಕೊಡುಗೆಯನ್ನು ಮರೆಯಲಾರ. ಇವರ ಬದುಕಿನಲ್ಲೂ ಅವರು ಆಧಾರವಾದ ಬಗೆ ಅದನ್ನು ಹೇಳಿಕೊಳ್ಳುವಾಗ ಅವರ ಭಾವುಕತನ ವ್ಯಕ್ತವಾಗುವ ರೀತಿ ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಯಕ್ಷಗಾನ ಕಲಾವಿದನಾಗಿ ಆ ಕಾಲದಲ್ಲಿ ಸ್ವಂತವಾಗಿ ಮನೆ ಕಟ್ಟಿ ಅದಕ್ಕಾಗಿ ಹೆಗ್ಗಡೆಯವರ ಸಹಾಯ ಹಸ್ತ, ಪ್ರತಿಯೊಂದರಲ್ಲೂ ಅವರ ವ್ಯಕ್ತಿತ್ವದ ಗಾಢವಾದ ದರ್ಶನ ಮಾಡಿಸಿಬಿಡುತ್ತಾರೆ.

ಗುರು ಶಿಷ್ಯ ಪರಂಪರೆಯ ಬಗ್ಗೆ ಅಷ್ಟೇನೂ ವಿಶ್ವಾಸ ಇವರು ವ್ಯಕ್ತ ಪಡಿಸುವುದಿಲ್ಲ. ಹಾಗಾಗಿ ಇವರ ಉತ್ತರಾಧಿಕಾರಿಯಾಗಿ ಇವರ ಪರಂಪರೆಯ ಮುಂದುವರಿಕೆಗೆ ಸಮರ್ಥರನ್ನು ಗುರುತಿಸುವುದು ಕಷ್ಟ ಅದನ್ನೂ ಸ್ಪಷ್ಟವಾಗಿಯೇ ನಿರೂಪಿಸಿದ್ದಾರೆ." ಕಲಾವಿದನೊಬ್ಬ ತನ್ನ ಪ್ರತಿಭಾ ಪ್ರದರ್ಶನವನ್ನು ಮಾಡುತ್ತಾ ಅದರಿಂದಲೇ ಜನಪ್ರಿಯತೆಯನ್ನು ಗಳಿಸಿ, ಗಳಿಸಿದ ಜನಪ್ರಿಯತೆಯಿಂದ ಮತ್ತೆ ಹಣಗಳಿಸುತ್ತಾ ಬದುಕುವುದರಿಂದ ಕಲಾಕ್ಷೇತ್ರಕ್ಕೆ ಆಗುವ ಪ್ರಯೋಜನವೇನು? ಕ್ಷೇತ್ರಕ್ಕೆ ಸೇವೆ ಸಲ್ಲಿಸಿದರೆ ಮಾತ್ರ ಅದು ಕೊಡುಗೆ ಎನಿಸುತ್ತದೆ." ಕಡತೋಕರ ಒಳ ಮನಸ್ಸು ಹೀಗೆ ಹಲವು ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ.

ಯಕ್ಷವನದಲ್ಲಿ ಒಂದುಸಲ ವಿಹರಿಸಿದಮೇಲೆ ಕಡತೋಕರು ನಿಮ್ಮಲ್ಲಿ ನಿಮ್ಮವರಾಗಿಬಿಡುತ್ತಾರೆ. ಯಕ್ಷಗಾನದ ತೆಂಕು ಬಡಗುವಿನಲ್ಲಿ ತನ್ನ ಕಂಚಿನ ಕಂಠದಿಂದ, ತನ್ನ ವಿಶಿಷ್ಟ ಲಯದಿಂದ, ಅದ್ಭುತ ಸ್ವರ ಸಾಮಾರ್ಥ್ಯದಿಂದ ಒಂದು ಕ್ರಾಂತಿಯನ್ನೇ ಉಂಟುಮಾಡಿದ ಕಲಾವಿದರೊಬ್ಬರ ಆತ್ಮಕಥೆ ಸಮಗ್ರ ಯಕ್ಷಗಾನಕ್ಕೆ ಒಂದು ಕೊಡುಗೆ. ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಹೇಳುವಷ್ಟು ಬರೆಯುವಷ್ಟು ಅರ್ಹತೆಯಾಗಲಿ ತಿಳುವಳಿಕೆಯಾಗಲಿ ನನ್ನಲ್ಲಿ ಇಲ್ಲ ಆದರೂ ಅವ್ಯಕ್ತವಾಗುವ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ನನ್ನದು. ಕಲಾ ಮಾತೆಯ ಸುಪುತ್ರರೆನಿಸಿದ ಈ ಮಹಾ ಕಲಾವಿದನ ಬದುಕು ಇನ್ನೊಬ್ಬರಿಗೆ ಮಾದರಿಯಾಗಲಿ, ಜೀವನ ಶಾಂತಿ ನೆಮ್ಮದಿ ಸಂತ್ರಿಪ್ತಿ ಸಮ್ರಿದ್ದಿಯಿಂದ ತುಂಬಿರಲಿ ಎಂದು ಮನಸಾ ಹಾರೈಸೋಣ.



" ಯಕ್ಷಗಾನಂ ಗೆಲ್ಗೆ. "






Sunday, August 30, 2009

ಬಾಲ್ಯದ ಆಟದ ಸ್ವಾರಸ್ಯಕರ ಘಟನೆಗಳು....


ಬಾಲ್ಯ ಎಂದರೆ ಅದೊಂದು ಅನಿರ್ವಚನಿಯ ಕಾಲ. ಮುಂದೇನೂ ಎಂಬ ಚಿಂತನೆಯನ್ನು ಹಚ್ಚಿಕೊಳ್ಳದ ಕಾಲ. ಬಾಲ್ಯದಲ್ಲಿ ಯಕ್ಷಗಾನ ಬಯಲಾಟ ಎಂದಾಗ ಕೇವಲ ಬಯಲಾಟ ಮಾತ್ರವಲ್ಲ ಆಟದ ಹೊರಗಿನ ಕೆಲವು ಆಟಗಳು ಸ್ವಾರಸ್ಯಕರ ಘಟನೆಗಳು ಈಗ ನೆನಪಿಸಿಕೊಳ್ಳುವಾಗ ಅಹಾ ಬಾಲ್ಯವೆಷ್ಟು ಸುಂದರ ಅನ್ನಿಸಿಬಿಡುತ್ತದೆ. ಹೆಚ್ಚಾಗಿ ಪೋಕರಿ ಅನ್ನಿಸಿಕೊಂಡ ಹುಡುಗರೊಂದಿಗೆ ಆಟಕ್ಕೆ ಹೋಗುವುದೆಂದರೆ ಅದೊಂದು ವಿಶಿಷ್ಟ ಅನುಭವವನ್ನು ಕೊಡುತ್ತಿತ್ತು. ನನಗೂ ಬಾಲ್ಯದಲ್ಲಿ ಹಲವು ಹುಡುಗುಬುದ್ದಿಯ ಸ್ನೇಹಿತರಿದ್ದರು. ಕೆಲವರ ಚೇಷ್ಟೆ ಆ ಚೇಷ್ಟೆಯೊಂದಿಗೆ ನಾನು ಸಹ ಒಂದು ಅಂಗ ಆಗುವಾಗ ನಾನು ಅನುಭವಿಸಿದ ಮನರಂಜನೆ (ಕೆಲವೆಲ್ಲ ತುಂಬಾ ಅತಿರೇಕ ಅಂತ ಈಗ ಅನ್ನಿಸುತ್ತದೆ.) ಯ ಅನುಭವ, ಆ ಸುಂದರ ಬಾಲ್ಯ ಅದೆಷ್ಟು ಸುಂದರ? ಅನ್ನಿಸಿಬಿಡುತ್ತದೆ. ಸಹವಾಸ ದೋಷವೋ ಅಥವಾ ಬಾಲಿಶ ಮನೋವಿಕಾರವೋ ಗೊತ್ತಿಲ್ಲ ಅಲ್ಪಸ್ವಲ್ಪ ಪೋಕರಿತನ ನನ್ನಲ್ಲೂ ಅಡಗಿತ್ತು.

ಒಂದು ಸಲ ನಮ್ಮ ಬಾಯರು ಸೊಸೈಟಿ ಬಳಿಯ ಆಟ.. ಆವಾಗಿನ ಆಟ ಎಂದರೆ ನಾವು ಒಂದು ತಿಂಗಳು ಮೊದಲು ಕ್ಯಾಲೆಂಡರ್ ನಲ್ಲಿ ಗುರುತು ಮಾಡಿ ದಿನ ಲೆಕ್ಕ ಹಾಕುವ , ಅದಕ್ಕಾಗಿಯೇ ದುಡ್ಡು ಒಟ್ಟು ಮಾಡಿ ಕಾಯುವ ಕಾಲ. ಡೇರೆ ಮೇಳದ ಆಟ ಎಂದರೆ ಕೇವಲ ನಮಗೆ ಸಾಧ್ಯವಾಗುತ್ತಿದ್ದುದು ಎಂಟಾಣೆಗೆ ಲಭ್ಯವಾಗುವ ನೆಲ ಕ್ಲಾಸು ಮಾತ್ರ. ಅದರೂ ಅದರಲ್ಲಿರುವ ಮಜಾ ಈಗ ಹುಡುಕಿದರೂ ಸಿಗದು. ಹಾಗೆ ಬಾಯರು ಆಟಕ್ಕೆ ಕೆಲವು ಸಹವಾಸಿಗಳೊಂದಿಗೆ ನಾನು ಹೋದೆ.

ಆಟ ಆಗುತ್ತಿದ್ದಂತೆ ಕೆಲವರೆಲ್ಲ ಬಹಿರ್ದೆಶೆಗೆ ಹೋಗುವುದು ಸಾಮನ್ಯ. ಹಾಗೆ ಉಚ್ಚೆ ಹೊಯಿದು ..ಖಾರ ಹಚ್ಚಿದ ಕಡಲೆ.. ಮಸಾಲೆ ಕಡ್ಲೆ ಈಗ ನೆನಸಿದರೆ ಬಾಯಿಯಲ್ಲಿ ನೀರಾಡುತ್ತದೆ, ಹಾಗೆ ಖಾರ ಚರ್ಮ್ಬುರಿ ..ಇದೆಲ್ಲ ಕಟ್ಟಿಕೊಂಡು ಒಳಬಂದು ತಿನ್ನುವುದು ರೂಢಿ. ಹೀಗೆ ಆದಿನ ನಾನು ನನ್ನ ಜತೆಗಿನ ಪೋಕರಿ ಪಟಾಲಂ ಎದ್ದು ನಿಧಾನಕ್ಕೆ ಟೆಂಟಿನ ಗೇಟ್ ಕೀಪರ್ ಕೊಟ್ಟ ಟಿಕೆಟ್ ತುಂಡನ್ನು ತೆಗೆದುಕೊಂಡು ಹೊರ ನಡೆದೆವು. ವಾಪಸು ಬರುವಾಗ ನಮ್ಮೊಂದಿಗೆ ಇದ್ದ ಪುಣ್ಯಾತ್ಮನಿಗೆ ವಿಚಿತ್ರವೊಂದು ಕಂಡಿತು. !!!! ಒಬ್ಬಾತ ನೆಲದಲ್ಲಿ ಟೆಕೆಟ್ ತೆಗೆದು ತೀರಾ ಹಿಂದೆ ನೆಲದಲ್ಲಿ ಮಲಗಿ ನಿದ್ದೆ ಹೋಗಿದ್ದ. ನಿದ್ದೆ ಮಾಡುತ್ತಿದ್ದ ಪರಿ ಮಾತ್ರ ತುಂಬಾ ವಿಚಿತ್ರವಾಗಿತ್ತು. ಆತನ ಎರಡೂ ಕಾಲುಗಳು ಟೆಂಟಿನ ಹೊರ ಬಂದು ದೇಹದ ಅರ್ಧ ಬಾಗ ಟೆಂಟಿನ ಒಳಗೆ ಇತ್ತು.. ಮೊದಲೇ ಕಳ್ಳು ಕುಡಿದ ಮಂಗನಂತೆ ಇದ್ದ ಮಿತ್ರರಿಗೆ ಒಂದು ಚೇಷ್ಟೆ ಮಾಡುವ ಮನಸ್ಸಾಯಿತು. ಇಬ್ಬರೂ ಸೇರಿ ಮಲಗಿದಾತನ ಎರಡೂ ಕಾಲು ಹಿಡಿವಾಗ ನಂಗೆ ಮುಂದೆ ಆಗಬಹುದಾದ ಚೇಷ್ಟೆಯ ಅರಿವಾಗಿ ನಾನು ಹೆದರಿ ದೂರ ಓಡಿ ಹೋಗಿ ದೂರದಿಂದಲೇ ಗಮನಿಸುವವನಾದೆ. ಈ ಮಹಾ ಪೋಕರಿಗಳು ಮಲಗಿದಾತನ ಎರಡೂ ಕಾಲು ಹಿಡಿದು ಆತನ ಪೂರ್ಣ ದೇಹವನ್ನು ಹೊರಗೆ ಎಳೆದು ಹಾಕಿ ಒಂದೇ ಒಂದು ಓಟ ಅಲ್ಲಿಂದ ಓಡಿದ ಪರಿ ಅದೆಂತು ಬಣ್ಣಿಸಲಿ? ಅಲ್ಲೇ ಇದ್ದ ನಾನು ನಗಲೂ ಆಗದೆ ನಗು ತಡೆಯಲೂ ಆಗದೆ ನಿಂತು ನೋಡುತ್ತಾ ಇದ್ದೆ. ಆ ವ್ಯಕ್ತಿ ನಿದ್ದೆ ಬಿಟ್ಟು ಎಚ್ಚರವಾಗಿ ಕಣ್ಣು ಹೊಸಕಿ ನೋಡ್ತಾನೆ ಇವರು ದೂರ ಕಣ್ಮರೆಯಾಗಿ ಹೋಗಿದ್ದರು..!!! ಈತ ಪೂರ್ಣವಾಗಿ ಟೆಂಟಿನ ಹೊರಗಡೆ ಬಿದ್ದಿದ್ದ..!!! ಎದ್ದು ಪುನಃ ಒಳ ಹೋಗಲು ಗೇಟ್ ಹತ್ತಿರ ಬಂದ್ರೆ ಗೇಟ್ ಕೀಪರ್ ಟಿಕೆಟ್ ಇಲ್ಲದ ಈತನನ್ನು ಬಿಡುವುದಕ್ಕೆ ತಕರಾರು ಮಾಡಿದ. ಈ ಘಟನೆ ನಂಗೆ ಈಗಲೂ ನೆನಸಿ ನಗು ಬರುವುದಿದೆ. ಮತ್ತು ಆ ಚೇಷ್ಟೆಗೆ ಬಲಿಯಾದ ಆವ್ಯಕ್ತಿ ಯಾರೋ ಅವನಬಗ್ಗೆ ಈಗಲೂ ಅಯ್ಯೋ ಪಾಪ ಅನ್ನಿಸುವುದಿದೆ . ಏನಿದ್ದರೂ ಇದು ಮನರಂಜನೆಯಾದರೂ ನಿಜಕ್ಕೂ ನಾವು ಎಸಗಿದ ಪ್ರಮಾದದ ಅರಿವು ಈವಾಗ ಆಗುತ್ತಿದೆ.

ಆವಾಗ ಆಟಕ್ಕೆ ಹೋದರೆ ಹಲವು ತಂಟೆ ಮಾದುವುದರಲ್ಲ ನಮ್ಮ ಅರ್ಧ ಮನರಂಜನೆ ಆಗುತ್ತಿತ್ತು. ನೆಲದಲ್ಲಿ ಕುಳಿತವರು ಕೆಲವರು ಚಳಿಗೆ ಟೆಂಟಿನ ತರ್ಪಾಲಿಗೆ ಬೆನ್ನು ಒತ್ತಿ ಕೂರುತ್ತಿದ್ದರು. ನಾವು ಹೊರಗಿಂದ ಹೋಗಿ ಅಂಥವರ ಬೆನ್ನಿಗೆ ಟೆಂಟ್ ಹೊರಗಿಂದ ಜೋರಾಗಿ ಗುದ್ದುತ್ತಿದ್ದೆವು.ಇದೊಂದು ವಿಚಿತ್ರ ಹವ್ಯಾಸವಗಿದ್ದು ಕೆಲವುಸಲ ಸಿಕ್ಕಿಬಿಳುವುದರಲ್ಲಿ ಸ್ವಲ್ಪದಿಂದಲೇ ಬಚಾವು ಆದ ಘಟನೆಗಳು ಎಷ್ಟೋ.

ನಾನು ಮಂಗಳೂರಲ್ಲಿ ಇದ್ದ ಸಮಯ. ಉರ್ವಸ್ಟೋರು ನಾವು ಆಟ ನೋಡುವ ಪ್ರಧಾನ ಕೇಂದ್ರ. ಹೆಚ್ಚಾಗಿ ಕಟೀಲು ಮೇಳದ ಬಯಲಾಟ ಇಲ್ಲೇ ನೋಡಿದ್ದು. ನೆಲದಲ್ಲಿ ಕೂತು ಮೈಯೆಲ್ಲಾ ಧೂಳು ಮೆತ್ತಿಕೊಂಡು ಮರುದಿನ ಬೆಳಗ್ಗೆ ಮನೆಗೆ ಹೋದಾಗ ಹೊಲದಲ್ಲಿ ಕೆಲಸ ಮಾಡಿದಂತೆ ನಮ್ಮ ಅವಸ್ಥೆ ಯಾಗುತ್ತಿತ್ತು. ಹಾಗೆ ಒಂದು ದಿನ ನೆಲದಲ್ಲಿ ಕುಳಿತು ಆಟ ನೋಡುವಾಗ ನಮ್ಮ ಕೈ ಸುಮ್ಮನಿರಬೇಕೆ.. ನಮ್ಮೆದುರು ನಿದ್ದೆ ಹೋದವರಿಗೆ ಕೀಟಲೆ ಕೊಡುವ ಒಂದು ಮೋಜು. ಕಡಲೆ ಕಟ್ಟಿ ತಂದ ಕಾಗದ ವನ್ನು ಗುಂಡೇ ಮಾಡಿ ಮುಂದೆ ಮಲಗಿದವನ ಚಡ್ಡಿಗೆ ಉದ್ದ ದಾರ ಮಾಡಿ ಕಟ್ಟಿ ಸಂತಸ ಪಡುತ್ತಿದ್ದೆವು. ಒಂದು ಸಲ ನಮ್ಮ ಹಿಂದೆ ಇದ್ದ ಮುದುಕನೊಬ್ಬ ಬೇಡ ಬೇಡ ಅಂತ ಸಾರಿ ಹೇಳಿದರೂ ಅವನಿಗೆ ಗೊತ್ತಾಗದೆ ಎದುರಿಗೆ ಮಲಗಿದವನ ಚಡ್ಡಿಗೆ ಕಟ್ಟಿಯೇ ಬಿಟ್ಟೆವು. ಬೆಳಗ್ಗೆ ನಾವು ಆಟ ಬಿಟ್ಟು ಹೋಗುವಾಗ ನಮ್ಮೊಂದಿಗಿದ್ದ ಹುಡುಗನೊಬ್ಬನ ಬಟ್ಟೆಗೆ ಆ ಮುದುಕ ತಿಳಿಯದಂತೆ ತಾಂಬೂಲ ಲೇಪಿಸಿ ಬಿಟ್ಟಿದ್ದ..!!!

ಒಂದು ಸಲ ನಮ್ಮೂರಿನ ಬಳಿಯ ಊರು ಸರಿ ನೆನಪಿಲ್ಲ ಆದರೆ ಅತ್ಯಂತ ಸ್ವಾರಸ್ಯಕರ ಘಟನೆ. ಬಯಲಾಟ ಊರ ಪರವೂರ ಕಲಾವಿದರ ಸಮ್ಮಿಲನದಿಂದ ನಡೆಯುತ್ತಾ ಇತ್ತು. ಹತ್ತಿರದ ಯಾರೋ ಮನೆಯ ಅಂಗಳವೇ ಅಂದಿನ ಚೌಕಿ. ಸಾಧಾರಣ ಜನ ಜಾತ್ರೆಯೇ ನೆರೆದಿತ್ತು. ಉತ್ಕಟವಾಗಿ ಪ್ರೇಕ್ಷಕರು ಯಕ್ಷಗಾನದಲ್ಲಿ ತಲ್ಲೀನ ವಾಗಿದ್ದ ಸಮಯ ಸಭೆಯ ಒಂದು ಮೂಲೆಯಿಂದ ಹುಡುಗನೊಬ್ಬ ಕಿಟಾರನೆ ಕಿರಿಚಿದ. ನಾವು ಕುಳಿತಲ್ಲಿಂದ ಕೆಲವೇ ಅಡಿಗಳ ದೂರದಲ್ಲಿ ಕಿರುಚಿವಿಕೆ ಒಂದೇ ಸಲಕ್ಕೆ ಉದ್ವೇಗವನ್ನು ಉಂಟು ಮಾಡಿತು. ಸಭೆಯಲ್ಲಿ ಗುಜು ಗುಜು.. " ಎಂಚಿನ ದನಾಂಡ್? " ಎಂಬ ಉದ್ಗಾರ ಬೇರೆ.. ಹುಡುಗ ಕಿರುಚುತ್ತ ಎದ್ದು ಲಾಗ ಹಾಕಿದ . ಆ ಬಾಲಕನ ಬಳಿ ಇದ್ದ ವ್ಯಕ್ತಿ , ಸಣ್ಣ ಹಾವೊಂದು ಬಾಲಕ ಕುಳಿತಲ್ಲಿಂದ ಓಡಿದ್ದನ್ನು ನೋಡಿ. "ಉಚ್ಚು ... ಮಾರಾಯರೇ..ಮುಜಲಿಯೇ ಅದುಪ್ಪು " ಆ ಸಣ್ಣ ಹಾವು ಜೀವ ಭಯದಿಂದ ಸರಿಯುತ್ತ ಹತ್ತಿರವೆ ನೆಲದಲ್ಲಿ ಮಲಗಿದ್ದ ವ್ಯಕಿಯ ಪಂಚೆಯೊಳಗೆ ನುಗ್ಗಬೇಕೆ.? ಅಷ್ಟಾದರೂ ಆ ವ್ಯಕ್ತಿ ಜೋರಾಗಿ ನಿದ್ದೆಯಲ್ಲೇ ಇದ್ದ .. !!! ಕೊನೆಗೆ ಒಬ್ಬ ಆತನನ್ನು ಎಬ್ಬಿಸಿ ನಿಲ್ಲಿಸಿ " ಉಚ್ಚು ಪೋಗ್ಗುದುಂಡು ಮಾರಾಯರೇ..!!!" ಅಂತ ಒಬ್ಬ ಬೊಬ್ಬಿಟ್ಟ.. ಆ ವ್ಯಕ್ತಿ ಅರ್ಧ ನಿದ್ದೆಯಲ್ಲೇ ತಡಬಡಾಯಿಸಿ ಪುಂಡು ವೇಷ ದಿಗಿನ ಹಾಕಿದ್ದು ಇನ್ನೂ ನೆನಪಿದೆ.
ಹೀಗೆ ಹಲವು ಘಟನೆಗಳು ಮರೆಯದ ನೆನಪಿನ ಬೀಜವನ್ನು ಮನದಾಳದಲ್ಲಿ ಬಿತ್ತಿವೆ.



Saturday, August 29, 2009

ವಾಮನ ಮೂರ್ತಿ

ಶ್ರೀ ರಾಮಾ ಕರಕಂಜದಂಗುಲಿಯೋಳಿಟ್ಟ ಮುದ್ರೆಯಂ ನೋಡುತಂ ರಾಮಾ.....
ನಾರೀಜಾನಕಿ ಸೋಕಿಸುತ ಅದನಂ ಕಂಗಳ್ಕೆ
ತಾಂ ಒತ್ತುತಂ ರಾಮಾ...ರಾಮಾ..
ಹೇರಾಕೃತಿ ಶೋಕ ಬಿಂದು ಜಲಗಳ್ ಸರ್ವಾಂಗಮಂ ಲೇಪಿಸಲ್ ರಾಮಾ.. ರಾಮಾ. ....
ಚೂಡಾಮಣಿ ಪ್ರಸಂಗದ ಈ ಪದ ಕೇಳಿರಬಹುದು. ಆದರೆ ಇತ್ತೀಚಿಗೆ ತನ್ನ ಮಧುರ ಕಂಠದಿಂದ ಅಮೋಘವಾಗಿ ಹಾಡಿ ಅದರ ಝೇಂಕಾರವನ್ನು ಮನದಲ್ಲಿ ತುಂಬಿಸಿದ ಭಾಗವತ ಪುತ್ತಿಗೆ ರಘುರಾಮ ಹೊಳ್ಳರ ಈ ಪದ ಕೇಳುತ್ತಿದ್ದರೆ, ಅಶೋಕವನದ ಸೀತೆ ರಾಮನಿತ್ತ ಮುದ್ರೆಯನ್ನು ಭಾವ ಪರವಶಳಾಗಿ ನೋಡುತ್ತಿದ್ದ ದೃಶ್ಯ ಮನಸಲ್ಲಿ ಮೂಡಿದರೆ ಅತಿಶಯವಲ್ಲ. ಯಕ್ಷಗಾನ ಎಂದರೆ ಅದು , ಇಲ್ಲಿ ನೈಜ ಅಭಿನಯವೆಂಬ ರೂಪವೇ ಬೇರೆ. ಸೀತೆಯ ಭಾವನೆಗಳು ಹೇಗಿರಬೇಕು ಆ ಪಾತ್ರಧಾರಿಯ ಅಭಿನಯ ಆವೇಶ ಎಲ್ಲಿವರೆಗೆ ಮುಟ್ಟಿಸಬೇಕು ಇದೆಲ್ಲದರ ಗತಿಯನ್ನು ತನ್ನ ಹಾಡಿನ ಶೈಲಿಯಿಂದ ತೋರಿಸಬಲ್ಲ ಈ ಪ್ರತಿಭಾವಂತ ಮೂರ್ತಿ ಯಕ್ಷಗಾನ ಲೋಕ ಕಂಡ ಅದ್ಭುತ ಪ್ರತಿಭೆ. ಇವರ ಗಡಸು ಸ್ವರದ ಏರಿಳಿತ, ಮನಸ್ಸಿನಲ್ಲಿ ಅಚ್ಚಳಿಯದ ಅಲೆಯ ಸಂಚಲನವನ್ನುಂಟುಮಾಡುತ್ತದೆ. ತೆಂಕು ಬಡಗು ಎರಡೂ ಕಡೆ ಅಪಾರ ಜನಪ್ರಿಯತೆಯನ್ನು ಗಳಿಸಿದ ಈ ವಾಮನ ಮೂರ್ತಿ ಇಂದು ಯಕ್ಷಗಾನ ಪ್ರಪಂಚದ ಅತಿ ಜನ್ಯಪ್ರಿಯ ವ್ಯಕ್ತಿ.
ರಘುರಾಮ ಹೊಳ್ಳರ ಹೆಸರು ಕೇಳಿದರೆ ಇಂದು ಹುಚ್ಚೆದ್ದು ಕುಣಿವ ಅಭಿಮಾನಿಗಳನ್ನು ಕಂಡಾಗ ಅದು ಉತ್ಪ್ರೇಕ್ಷೆ ಅನ್ನಿಸುವುದಿಲ್ಲ. ಸತ್ವಯುತ ಅಧಿಕಾರಯುತ ಭಾಗವತಿಕೆ ಅವರದ್ದು. ಹಲವು ವರ್ಷಗಳ ಮೊದಲು ಕದ್ರಿ ಮೇಳದ ಭಾಗವತರಾಗಿ ಕಂಡ ಹೊಳ್ಳರಿಗಿಂತ ಈಗಿನ ಅನುಭವದಿಂದ ಮಾಗಿದ ಹೊಳ್ಳರು ಇಷ್ಟವಾಗುತ್ತಾರೆ. ಯಕ್ಷಗಾನ ಕಂಡ ಅತಿ ಜನಪ್ರಿಯ ಭಾಗವತರಲ್ಲಿ ಇವರೂ ಗುರುತಿಸಲ್ಪಡುತ್ತಾರೆ. ತಮ್ಮದೇ ಆದ ಹಲವು ವಿಶೇಷ ಅರ್ಹತೆಯಿಂದ ಇಂದು ಬಹು ಬೇಡಿಕೆಯ ಕಲಾವಿದರಾಗಿರುವುದು ನೋಡಿದಾಗ ಅವರ ಅಭಿಮಾನಿಗಳಿಗೆ ಹೆಮ್ಮೆ ಎನಿಸುವುದು. ಗಧಾಯುದ್ದ , ಪಂಚವಟಿ, ಕುಮಾರವಿಜಯ, ರಾವಣ ವಧೆಯ
ಪದಗಳನ್ನು ಇವರು ಹಾಡುವುದು ಕೇಳುವಾಗ ಮೈಮನ ಅದರಲ್ಲಿಯೇ ತಲ್ಲೀನವಾಗಿಬಿಡುವುದು. ವರ್ಷದ ಮೊದಲು ತಾಳ ಮದ್ದಲೆಯೊಂದರಲ್ಲಿ ಹಾಡಿದ ರಾವಣ ವಧೆಯ ಹಲವು ಪದಗಳು ಇಂದಿಗೂ ಕೇಳಿದಷ್ಟು ಮತ್ತೂ ಕೇಳಬೇಕೆನ್ನುವ ತುಡಿತವನ್ನುಂಟು ಮಾಡುತ್ತದೆ. ಸಲೀಸಾಗಿ ಸ್ವರ ಎತ್ತಿ ಹಾಡುವಾಗ ಏರಿದ ಸ್ವರ ಏರುತ್ತ ಹೋಗಿ ಅದು ಎಲ್ಲಿಯತನಕ ಏರಿಸುತ್ತಾರೋ ಎಂದು ಕೇಳುಗನ ಊಹನೆಗೆ ನಿಲುಕಷ್ಟು ಏರಿಸಿಬಿಡುತ್ತಾರೆ. ಬಹುಶಃ ಇವರೂ ಸಹ ಊಹಿಸುತ್ತಾರೋ ಇಲ್ಲವೊ ಎಂಬ ಅನುಮಾನ ನನಗೆ ಹಲವು ಸಲ ಮೂಡಿದೆ. ಕಂಠಕ್ಕೆ ಸಿಗದ ಸ್ವರವನ್ನು ಛಲದಿಂದ ಎಳೆದು ಹಾಡುವಂತ ಪ್ರವೃತ್ತಿ ಕೆಲವೊಮ್ಮೆ ತುಂಬಾ ಇಷ್ಟವಾಗಿಬಿಡುತ್ತದೆ. ಸಮರ್ಥ ಹಿಮ್ಮೇಳವಾದಕರು ಸಿಕ್ಕಿದರೆ ಯಕ್ಷಲೋಕದ ಸಾಕ್ಷಾತ್ಕಾರವನ್ನು ಮಾಡಿತೋರಿಸಬಲ್ಲರು.ಯುವ ಪ್ರತಿಭೆಯ ಮದ್ದಲೆಗಾರ ಪದ್ಮನಾಭ ಉಪಾಧ್ಯಾಯರು ಇವರಿಗೆ ಈಗ ಸಮರ್ಥ ಮದ್ದಲೆಗಾರ ಅಂತ ಗುರುತಿಸಿಕೊಂಡವರು. ಇವರಿಬ್ಬರ ಜತೆಗಿನ ಪದಗಳನ್ನು ಆಲಿಸುವುದೇ ಒಂದು ಸೊಗಸು. ವೇಷಧಾರಿ ಯಾರೇ ಆಗಲಿ ಅವರ ಮನೋಭಾವಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಇವರಂಥ ಭಾಗವತರು ದುರ್ಲಭ. ಮಾತುಗಾರಿಕೆಯೋ ಕುಣಿತವೋ ಭಾವಾಭಿನಯವೋ ಯಾವುದೇ ಅದರೂ ಕಲಾವಿದನ ಪರಿಪೂರ್ಣ ಪ್ರತಿಭೆಯನ್ನು ಹೊರಗೆಳೆಯುವುದರಲ್ಲಿ ಇವರು ತುಂಬಾ ಚಾಣಾಕ್ಷರು. ಕಲಾವಿದನ ನಾಡಿಮಿಡಿತವನ್ನು ಬೇಗನೆ ಗುರುತಿಸುವ ಇವರಂತಹ ಭಾಗವತ ಸದ್ಯ ಇನ್ನೊಬ್ಬನಿಲ್ಲ. ಇದಕ್ಕೆ ಮೂಲ ಕಾರಣ ಪ್ರತಿಭೆಯನ್ನು ಇವರು ಗುರುತಿಸುವುದು ಮತ್ತು ಅದಕ್ಕೆ ಮನ್ನಣೆ ಕೊಡುವಗುಣ. ಹಿರಿಯ ಕಲಾವಿದರಿಂದ ಇವರು ಗೌರವದಿಂದ ಕೇಳಿ ಕಲಿತು ಅದನ್ನು ಸ್ವಂತ ಶೈಲಿಯಲ್ಲೇ ಅಳವಡಿಸಿಕೂಳ್ಳುವ ಗುಣ ಇಂದು ಇವರನ್ನು ಈಮಟ್ಟಕ್ಕೆ ಏರಿಸಿದೆ ಎಂದೇ ನನ್ನ ಅಭಿಮತ. ಹಿರಿಯ ಭಾಗವತ ಬಲಿಪ್ಪರೊಂದಿಗೆ ಇವರ ದ್ವಂದ್ವ ಕೇಳುವುದೇ ಒಂದು ಸೊಗಸು. ಅದೇ ಮಾತನ್ನು ಸ್ವತಹ ಬಲಿಪ್ಪರೆ ಹೇಳುವುದುಂಟು. ಅವರ ಉಚ್ಚ ಸ್ಥಾಯಿ ಶ್ರುತಿಗೆ ಸರಿಯಾಗಿ ಹೊಂದುವ ಭಾಗವತ ಈಗ ಇರುವುದು ಇವರು ಮಾತ್ರ. ಹಾಗಾಗಿ ಅವರು ಇವರೊಂದಿಗಿನ ದ್ವಂದ್ವ ಹಾಡುಗಾರಿಕೆ ಅವರೂ ಇಷ್ಟ ಪಡುತ್ತಾರೆ.
ಕಲಾವಿದ ಯಾರೇ ಅಗಲಿ, ಆತನ ಮಾತುಗರಿಕೆಯೋ ಕುಣಿತವೋ ಭಾವಾಭಿನಯವೋ ಅಥವಾ ಹಾಸ್ಯಪ್ರಜ್ಞೆ ಯೋ ಯಾವುದೇ ಆಗಲಿ ಅದಕ್ಕೆ ತಕ್ಕ ಸಮಯಾವಕಾಶವನ್ನು ರಂಗದಲ್ಲಿ ಒದಗಿಸುತ್ತಾರೆ. ಯಾವುದೇ ಸ್ಥಾಯಿಯಲ್ಲೂ ರಾಗ ತಾಳ ಶುದ್ದಿಯ ಜತೆಗೆ ಸ್ಪಷ್ಟ ಉಚ್ಚಾರ ಇವರ ಗುಣ. ಯಾವುದೇ ಪದವಾದರೂ ಇದರ ಅಂತರಾರ್ಥವನ್ನು ಪಾಮರನೂ ಗುರುತಿಸುವಷ್ಟು ಸ್ಪಷ್ಟ ಉಚ್ಚಾರ. ಮೊದಲ ಒಂದೆರಡು ಪದವನ್ನು ಸ್ಪಷ್ಟವಾಗಿ ಹೇಳಿ ಆನಂತರ ಅತಿ ಮುಖ್ಯ ಪದಗಳ ಮೇಲೆ ಮಾತ್ರ ಗಮನಕೊಟ್ಟು ಹಾಡುವ..ಏರುಶ್ರುತಿಯನ್ನು ಕಾಯ್ದುಕೊಳ್ಳುವುದಕ್ಕೆ ಶಬ್ದವನ್ನು ನುಂಗುವ ಭಾಗಾತಿಕೆ ಇವರ ಶೈಲಿಯಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಅಷ್ಟು ಕರಾರುವಾಕ್ ಉಚ್ಚಾರಕ್ಕೆ ಇವರು ಗಮನ ಕೊಡುತ್ತಾರೆ.
ಕಡತೋಕ ಶೈಲಿಯ ಉತ್ತರಾಧಿಕಾರಿಯಂತೆ ಗೋಚರಿಸುವ ಇವರು ಇವರದ್ದೇ ಶೈಲಿಯನ್ನು ತೋರುವುದರಲ್ಲಿ ಹಿಂದೆ ಬೀಳುವುದಿಲ್ಲ. ತೆಂಕು ಬಡಗು ಹೀಗೆ ಎರಡೂ ಕಡೆ ಭಾಗವತಿಕೆ ಮಾಡಬಲ್ಲ ಸಾಮರ್ಥ್ಯ ಇವರಲ್ಲಿದೆ. ಅಲ್ಲದೆ ಯಕ್ಷಗಾನದಲ್ಲಿ ಉತ್ತಮ ಸೃಜನ ಶೀಲತೆಯನ್ನು ಹುಟ್ಟುಹಾಕಿದವರು.ಹಿಂದಿ ಭಾಷೆಯನ್ನು ಯಕ್ಷಗಾನಕ್ಕೆ ಅಳವಡಿಸಿ ಅತ್ಯಂತ ಸಮರ್ಥವಾಗಿ ಭಾಗವತಿಕೆ ಮಾಡಿದ ಕೀರ್ತಿ ಇವರಿಗೆ ಸಲ್ಲುವುದು. ಇವರು ಕನ್ನಡ ,ತುಳು, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಯಶಸ್ವಿಯಾಗಿ ಭಾಗವತಿಕೆ ಮಾಡಿದ್ದಾರೆ. ಭಗವದ್ಗೀತೆಯ ಸಂಸ್ಕೃತ ಶ್ಲೋಕವನ್ನೆ ಆಧರಿಸಿದ ಒಂದು ಪ್ರಸಂಗದ ಪದಗಳನ್ನು ಅಷ್ಟೇ ಸುಂದರವಾಗಿ ಇವರು ಹಾಡಿದ್ದಾರೆ. ಹೀಗೆ ಯಕ್ಷಗಾನದ ಎಲ್ಲ ಅಂಗಗಳೂ ಇವರಿಗೆ ಕರತಲಾಮಕ. ತಾಳಮದ್ದಳೆಯಲಿ ಅರ್ಥಗಾರಿಕೆಯನ್ನು ಸಮರ್ಥವಾಗಿ ಹೇಳಬಲ್ಲ ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವಇಷ್ಟೆಲ್ಲಾ ಹಲವು ಪ್ರತಿಭೆಗಳು ಇವರಲ್ಲಿದ್ದರೂ ತಮ್ಮ ಸ್ವ ಪ್ರತಿಭೆಯ ಬಗ್ಗೆ ಒಂದು ವಿಧದ ಔದಾಸಿನ್ಯ ಇವರಲ್ಲಿದೆ ಅಂತ ನನ್ನ ಭಾವನೆ. ಬಹುಶಃ ತಮ್ಮ ಪ್ರತಿಭೆಯ ಬಗ್ಗೆ ಹೆಮ್ಮೆ ಪಡದ ಗುಣ ಅದಾಗಿರಬಹುದು.ಇಂದು ಯಾವುದೇ ಯಕ್ಷಗಾನ ಆಟ ಕೂಟಗಳಲ್ಲಿ ತನ್ನ ಅಂಗ ಮತ್ತು ಹಕ್ಕನ್ನು ತನ್ನ ಸ್ವಂತ ಪ್ರತಿಭೆಯಿಂದಲೇ ಸೆಳೆದು ಕೊಳ್ಳುವ ಇವರು ಒಬ್ಬ ಅಭಿಜಾತ ಕಲಾವಿದ ಎಂದೇ ಗುರುತಿಸಲ್ಪಡುತ್ತಾರೆ. ಯಕ್ಷಗಾನ ಸರ್ವಾಂಗೀಣ ಜ್ಞಾನವನ್ನು ಹೊಂದಿದ್ದರೂ ಅದರ ಹಸಿವನ್ನು ಇನ್ನೂ ವ್ಯಕ್ತ ಪಡಿಸುವ ಇವರ ವಿನಮ್ರತೆ ನಿಜಕ್ಕೂ ಶ್ರೇಷ್ಠ.
ಸದ್ಯ ಧರ್ಮಸ್ಥಳ ಮೇಳದ ಪ್ರಧಾನ ಅಂಗವಾಗಿರುವ ಈ ವಾಮನ ಕಾಯ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥವಾಗಿದ್ದರೆವಾಮನ ರೂಪದ ತ್ರಿವಿಕ್ರಮ ಅವತಾರ ಇನ್ನು ಯಕ್ಷಗಾನ ಅಭಿಮಾನಿಗಳನ್ನು ರಂಜಿಸುತ್ತ ಭಾಗವತ ರೂಪಕ್ಕೆ ಸಾಕಾರವಾಗ್ಳಲಿ ಎಂದೇ ಹಾರೈಕೆ

Saturday, August 22, 2009

ಯಕ್ಷಗಾನಂ ಗೆಲ್ಗೆ



ಯಕ್ಷಗಾನ ಹವ್ಯಾಸ ತುಂಬಾ ಸೂಕ್ಷ್ಮವಾದ ಹವ್ಯಾಸ. ಅದರ ಹುಚ್ಚು ಹಿಡಿಸಿಕೊಂಡವ ಒಂದು ಸಲವಾದರೂ ಮನೆಯವರಿಂದ ಬೈಗಳು ತಿನ್ನದೇ ಇರಲಾರ.ಯಾಕೆಂದರೆ ಅದರ ರೀತಿ ಅದೇ ಆಗಿರುತ್ತದೆ. ಅದರೂ ಆ ಬೈಗುಳಗಳೂ ಒಂದು ತರಹ ಹೊಗಳಿಕೆಯಾಗಿ ಸ್ವೀಕರಿಸುವ ಕಲೆಯ ಮೇಲಿನ ಅಭಿಮಾನ ಅತಿ ಚೋದ್ಯ.ಈಗೀಗ ಇದರ ಹವ್ಯಾಸ ಬೆಳೆಸಿಕೊಳ್ಳುವುದು ಅದೇ ಆಗಿಬಿಟ್ಟಿದೆ. ಯಾಕೆಂದರೆ ಯಕ್ಷಗಾನ ಒಂದು ಪಕ್ಕಾ ಹವ್ಯಾಸಿ ಕಲೆ. ಇದು ಎಂದಿಗೂ commercial art ಆಗಲೇ ಇಲ್ಲ. ವೃತ್ತಿ ಪರ ಕಲಾವಿದರು ಇರಬಹುದು ಮೇಳಗಳು ಇರಬಹುದು ಆದರೆ ಈ ಮಟ್ಟಿಗೆ ಬೇರೆ ಕಲಾಪ್ರಾಕಾರವನ್ನು ಹೋಲಿಸಿದರೆ ಯಕ್ಷಗಾನ ಪಕ್ಕಾ ಹವ್ಯಾಸಿ ಕಲೆ. ಸದ್ಯ ವರ್ತಮಾನದಲ್ಲಿ ಇದು ಹೆಚ್ಚು ಅರ್ಥ ಪೂರ್ಣ ಅಂತ ನನ್ನ ಅನಿಸಿಕೆ. ಇಲ್ಲಿ ಒಂದು ಗಲ್ಲಾಪೆಟ್ಟಿಗೆ ಯಶಸ್ವಿ ಕಲಾವಿದನನ್ನು ಮಾನದಂಡದ ಕೆಳಗೆ ನಿಲ್ಲಿಸುವುದು ಅಷ್ಟೊಂದು ಸಮಂಜಸ ಅಲ್ಲ. ಯಾಕೆಂದರೆ ಯಾವುದೇ ಕಲಾವಿದನಾಗಲಿ ಇದರಿಂದ ಸಿರಿವಂತ ಅಂತ ಅದ ಉದಾಹರಣೆ ಇದೆಯೇ?

ಮೊದಲು ಎಷ್ಟೊಂದು ವ್ಯವಸಾಯಿ ಮೇಳಗಳು ಟೆಂಟು ಕೊಡವಿ ಮಳೆಗಾಲ ಮುಗಿದೊಡನೆ ಪಾಂಡವಾಶ್ವಮೇಧ ಸೇವೆ ಮಾಡಿ, , ದಿಗ್ವಿಜಯಕ್ಕೆ ಹೊರಡುತ್ತಿದ್ದವು.ಈಗ ಹೆಚ್ಚಿನ ಮೇಳಗಳು ಹವ್ಯಾಸಿಗಳಂತೆ ಸೇವೆ ಆಟಕ್ಕೆ ಸೀಮಿತವಾಗಿದೆ.ವ್ಯವಸಾಯಿಗಳು ಹವ್ಯಾಸಿಗಳಾಗಿ ಮಾರ್ಪಾಡು ಹೊಂದುವ ಕಾಲವಿದು. ಆದುದರಿಂದಲೇ ಇಂದು ಹವ್ಯಾಸಿಗಳಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ವ್ಯವಸಾಯಿಗಳಿಗೆ ಆದರೆ ಒಂದು ಮಿತಿ ಅಥವಾ ಒಂದು ನಿಯಂತ್ರಣ ಇರುತ್ತದೆ. ಮನಸ್ಸಿಗೆ ವಿರುದ್ಧವಾಗಿಯೋ ಕಲೆಯಲ್ಲಿ ತೊಡಗಿಗೊಳ್ಳುವ ಅನಿವಾರ್ಯತೆ ಇದೆ. ಏಕೆಂದರೆ ಅದುವೇ ಕಲಾವಿದನ ಜೀವನ. ಆತನನ್ನು ಅವಲಂಬಿಸಿದವರಿಗೆ ಜೀವನಾಧಾರ ಅವನ ಕಾಲ್ಗೆಜ್ಜೆಯ ಸದ್ದೇ ಆಗಿರುತ್ತದೆ. ಹಾಗಾಗಿ ಹಲವು ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ಅನಿವಾರ್ಯತೆ ಇರುವಾಗ, ಹವ್ಯಾಸಿಗಳಿಗೆ ಕೇವಲ ಇದು ಹವ್ಯಾಸ, ಹಾಗಿರುವಾಗಲೇ ಕಲೆಯ ಬಗ್ಗೆ ಹೇಳುವಾಗ ಹವ್ಯಾಸಿಗಳಿಗೆ ಇರುವ ಅಥವಾ ಇರಬೇಕಾದ ಜವಾಬ್ದಾರಿ ಅಧಿಕ ಅಲ್ಲವೇ? ಬಹುಶ ಈಗಿನ ಕಾಲಮಾನಕ್ಕೆ ಅನುಸರಿಸಿ ಹವ್ಯಾಸಿಗಳೇ ಕಲೆಯ ಜೀವನಾಡಿ ಎನ್ನಬಹುದು. ಹವ್ಯಾಸಿಗಳಿಗೆ ಇದು ಕೇವಲ ಹವ್ಯಾಸ ಆದುದರಿಂದ ಅವರಿಂದ ಹೆಚ್ಚು ಅರ್ಥಪೂರ್ಣ ನಿರ್ವಹಣೆಯನ್ನು ಕಲಾಕ್ಷೇತ್ರ ನಿರೀಕ್ಷಿಸುತ್ತದೆ.

ಕೆಲವು ದಿನಗಳ ಮೊದಲು ಮಿತ್ರರೊಬ್ಬರು ಕೇರಳದ ಹವ್ಯಾಸಿ ಕಲಾವಿದರ ಕಥಕ್ಕಳಿ ನೋಡಿ ಆ ಅನುಭವವನ್ನು ನನ್ನಲ್ಲಿ ಹಂಚಿಕೊಂಡಿದ್ದರು. ಆದಿನದ ಕಥಕ್ಕಳಿ ಕಾರ್ಯಕ್ರಮದ ಶಿಸ್ತು ಮತ್ತು ಕಥಕ್ಕಳಿಯ ಬಗ್ಗೆ ತಿಳಿಯದೆ ಇರುವವನ್ನು ಕೂಡ ಆ ಪರಿಧಿಯೊಳಗೆ ತರುವ ಪರಿಸರ ನಿರ್ಮಾಣ ಇವು ಪ್ರಧಾನವಾಗಿ ಮೊದಲ ಅಂಶ. ವೇದಿಕೆಯ ಹಿನ್ನೆಲೆ. ವೇದಿಕೆಯ ಪರಿಕರಗಳು. ಮತ್ತು ಸಭಾಂಗಣದ ವ್ಯವಸ್ಥೆ ಎಲ್ಲವೂ ಅದಕ್ಕೆ ಅನುಯೋಜ್ಯವಾಗಿ ನಡೆದುಕೊಂಡು ಬಂದಂತೆ ಇತ್ತು. ಆದುದರಿಂದ ಕಾರ್ಯಕ್ರಮ ಆರಂಭವಾಗುವ ಮೊದಲೇ ಅದರಬಗ್ಗೆ ಪ್ರಭಾವಿತರಾಗಿ ಬಿಡುತ್ತೇವೆ.ಇಂತಹ ವಾತವರಣ ಕಲೆಯ ತವರೂರಲ್ಲಿ ಉಂಟುಮಾಡುವ ಅವಶ್ಯಕತೆ ಇಲ್ಲ. ಅಲ್ಲಿ ಅದು ಸ್ವನಿರ್ಮಿತ. ಇದು ಕೇವಲ ಒಂದು ಉದಾಹರಣೆ ಮಾತ್ರ.. ಇದೆ ರೀತಿ ಯಕ್ಷಗಾನದಲ್ಲಿ ಸಾಧ್ಯವಿಲ್ಲವೇ. ಯಾವುದನ್ನು ಅನುಕರಿಸುತ್ತೆವೋ ಅದು ಪೂರ್ಣವಾಗಿ ದಾರಿ ತಪ್ಪಿದಂತೆ ಅನ್ನಿಸಿಬಿಡುತ್ತದೆ. ಕೆಲವೊಮ್ಮೆ ಇದೆಲ್ಲ ಆಭಾಸಗಳಿಗೆ ಎಡೆಮಾಡಿಕೊಡುತ್ತವೆ. ಕೆಲವು ಕಡೆ ಹಿಮ್ಮೆಳದವರು ಕೂರುವ ವ್ಯವಸ್ಥೆಯೇ ಸರಿಯಿರದೆ ಏನೋ ಒಂದು ಹರಕೆ ಸಲ್ಲಿಸಿದಂತೆ ಇರುವುದು. ಯಕ್ಷಗಾನ ಪಾತ್ರಗಳು ಮುಖ್ಯವಾಗಿ ಕೂರುವ ಆಸನ ಸಿಂಹಾಸನ ಯಾವುದೊ ಒಂದು ಪ್ಲಾಸ್ಟಿಕ್ ಕುರ್ಚಿ ಇಟ್ಟಿರುತ್ತಾರೆ ವೇಷಧಾರಿ ಅದರಲ್ಲಿ ಕೂರಬೇಕಾದರೆ ಭಯ ಪಟ್ಟೇ ಕೂರುವಂತ ಸ್ಥಿತಿ. ಕೆಲವೊಮ್ಮೆ ಕುಳಿತನೆಂದರೆ ಆಸನ ಅವನ ಸಹಿತ ಎದ್ದು ಬಂದು ಬಿಡುತ್ತವೆ.ಇಲ್ಲಿ ಅಷ್ಟಾದರೂ ಸಿಗುವುದಲ್ಲ ಎಂದು ತೃಪ್ತಿ ಪಟ್ಟುಕೊಳ್ಳುವ ಸಂಭವವೇ ಅಧಿಕ. ಇದೆಲ್ಲ ಕೆಲವೊಮ್ಮೆ ತೀರ ಅಭಾಸಗಳಿಗೆ ಎಡೆ ಮಾಡಿಕೊಡುತ್ತವೆ. ಯಕ್ಷಗಾನ ಬೆಳೆದು ಬಂದ ಪರಿಸರದಲ್ಲಿ ಒಂದು ಆಟ ನೋಡಿದವನಿಗೆ ಏನೂ ಅನ್ನಿಸದೇ ಇರಬಹುದು ಆದರೆ ಹೊಸತಾಗಿ ಯಕ್ಷಗಾನ ನೋಡುವವ ಪೂರ್ಣವಾಗಿ ವಿಮುಖನಾಗುವ ಸ್ಥಿತಿ.. ಕೇವಲ ಬಣ್ಣ ಬಣ್ಣದ ಝಗ ಮಘಿಸುವ ವೇಷ ಭೂಷಣದಿಂದ ಚೆಂಡೆಯ ಸದ್ದಿನಿಂದ ಸೆಳೆದಿಡಲು ಸಾಧ್ಯವೇ? ಇದ್ದರೂ ಅದು ಕೇವಲ ತಾತ್ಕಾಲಿಕ ಆಗುವ ಸಂಭವವೇ ಹೆಚ್ಚು.

ಎಲ್ಲವನ್ನು ಹೊಂದಿಸಿಕೊಳ್ಳುವಾಗ ಸಂಘಟಕ ಸುಸ್ತಾಗಿಬಿಡುತ್ತಾನೆ. ಇಷ್ಟಾದರೂ ವ್ಯವಸ್ಥೆಯಾಯಿತಲ್ಲ ಎಂಬ ತೃಪ್ತಿಯಿಂದ ಕಾರ್ಯಕ್ರಮ ಹೇಗೋ ಮುಂದುವರಿಯುತ್ತದೆ. ಕಲಾವಿದರೂ ಅಂತೆ ಹಲವು ಸಮಸ್ಯೆಗಳನ್ನು ಎದುರಿಸಿಯೇ ಸಿದ್ದರಾಗುವ ಅನಿವಾರ್ಯತೆ. ಬಿಡುವಿಲ್ಲದ ವೃತ್ತಿ ಚಟುವಟಿಕೆಯಿಂದ ದೈಹಿಕವಾಗಿಯೂ ಸುಸ್ತಾಗಿರುತ್ತಾರೆ. ಹಾಗಾಗಿ ಎಷ್ಟು ಸಾಧ್ಯವಾಯಿತೋ ಅಷ್ಟು ಎಂಬಲ್ಲಿಗೆ ತೃಪ್ತಿಪಡುವ ಅನಿವಾರ್ಯತೆ ಇರುವುದು ಕೂಡ ಸಹಜ.

ಈ ಯಕ್ಷಗಾನ ತೀರ ಅಪರಿಚಿತವಾಗಿರುವ ಒಂದು ಸ್ಥಳದಲ್ಲಿ ತೆಂಕು ಹವ್ಯಾಸಿಗಳ ಒಂದು ಪ್ರದರ್ಶನದಲ್ಲಿ ಚೌಕಿ ಪೂಜೆಯಾಗಿ ಪೀಠಿಕೆ ಆರಂಭಿಸಲು ಹಿಮ್ಮೇಳದವರು ವೇದಿಕೆಯೇರಿ ಭಾಗವತರು ಮದ್ದಲೆಯವರು ಕುಳಿತು ಚೆಂಡೆಯವರು ನಿಂತು ಪೀಠಿಕೆ ಆರಂಭಿಸಿದರು. ಆವಾಗ ಅಲ್ಲೇ ಇದ್ದ ಒಬ್ಬ ಕುರ್ಚಿಯೊಂದನ್ನು ತಂದು ಚೆಂಡೆಯವರನ್ನು " ಯಾಕೆ ಸಾರ್ ನಿಂತೇ ಇದ್ದೀರಾ..ಕುಳಿತುಕೊಳ್ಳಿ ಸಾರ್ " ಎಂದು ಕೂರುವುದಕ್ಕೆ ಒತ್ತಾಯ ಮಾಡಿದ್ದೂ ನಂಗೆ ಇನ್ನೂ ನೆನಪಿದೆ. ಪಾಪ ಅವನಿಗೇನು ಗೊತ್ತು ಚೆಂಡೆಯವರು ನಿಂತೇ ಬಾರಿಸುವುದು ಅಂತ. ಹೀಗೆ ಅತಿ ವ್ಯತಿರಿಕ್ತ ಪರಿಸರದಲ್ಲಿ ಯಕ್ಷಗಾನ ಪ್ರದರ್ಶನ ಅತಿ ದೊಡ್ಡ ಸವಾಲಿನ ಕೆಲಸ. ಮತ್ತು ಅಷ್ಟೇ ಜಾಗರೂಕರಾಗಿರಬೇಕಾದ ಸಮಯವೂ ಹೌದು. ಈಗಿನ ಕಾಲದಲ್ಲಿ ಯಾವುದೇ ಒಂದು ವಿಷಯ ಪ್ರಸ್ತುತ ಪಡಿಸುವುದಿದ್ದರೆ ಅದಕ್ಕೆ ತಕ್ಕುದಾದ ವಾತವರಣವನ್ನು ಮೊದಲೇ ನಿರ್ಮಿಸುವುದು ಅನಿವಾರ್ಯ. ಅಂತೆ ಕಲೆಯಬಗ್ಗೆ ಏನೊಂದೂ ತಿಳಿಯದಲ್ಲಿ ಮೊದಲೇ ಅದರಬಗ್ಗೆ ಗೌರವ ಬರುವಂತೆ ಪರಿಸರ ನಿರ್ಮಾಣ ಅತಿ ಅಗತ್ಯ. ಏನೋ ಒಂದು ಹರಕೆ ಸಂದಾಯ ಮಾಡಿ ಯಕ್ಷಗಾನ ಸೇವೆ ಮಾಡಿದೆವು ಎಂದು ಧನ್ಯರಾಗುವ ಬದಲು ಮಾಡಿದ ಕಾರ್ಯಕ್ರಮ ಹೇಗಾಯಿತು ಎಂದು ವಿಮರ್ಶೆ ಮಾಡಿಕೊಳ್ಳುವುದು ಒಳಿತಲ್ಲವೇ. ರಾತ್ರಿ ಯಿಂದ ಬೆಳಗಿನ ಜಾವದ ವರೆಗೆ ನಡೆಯುವ ಯಕ್ಷಗಾನ ಪ್ರದರ್ಶನಕ್ಕೂ ಈ ಕಾಲಮಿತಿಯ ಯಕ್ಷಗಾನಕ್ಕೂ ಹಲವು ಭಿನ್ನವಾದ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪ್ರವೇಶವಾಗುವಾಗ ಸರಿ ಸುಮಾರು ನಡು ರಾತ್ರಿ ಕಳೆದು ೧-೨ ಗಂಟೆಯಾಗುತ್ತದೆ ಆವಾಗ ಸಾಮಾನ್ಯವಾಗಿ ಪ್ರೇಕ್ಷಕ ನಿದ್ದೆಗೆ ಶರಣಾಗುವ ಹೊತ್ತು ಹಾಗೆಂದು ಬಡಿದೆಬ್ಬಿಸುವಂತೆ ಮಹಿಷನ ಪ್ರವೇಶ ಆದರೆಯೇ ಆಟಕ್ಕೆ ಒಂದು ಸೊಗಸು.ಸಭೆಯಲ್ಲಿ ಕಲರವ ಉಂಟು ಮಾಡಿ ಮಹಿಷ ಪ್ರವೇಶ ಸಾಧಾರಣ ಒಂದು ಸಂಪ್ರದಾಯ. ಕಾಲಮಿತಿಯಲ್ಲಿ ಅಂತಹ ಭಾಗವನ್ನು ಆದಷ್ಟು ಮೊಟಕು ಗೊಳಿಸುವುದು ಒಳ್ಳೆಯದಲ್ಲವೇ? ಪ್ರೇಕ್ಷಕರೊಂದಿಗೆ ಅನಗತ್ಯ ವಿನೋದವಾಡಿ..ಒಂದು ರೀತಿ ಕಬ್ಬಡ್ಡಿಯಾಡಿ ಕೊಂಡು ವ್ಯರ್ಥ ರಂಜನೆಯನ್ನುಂಟು ಮಾಡಿಕೊಳ್ಳುವುದು ತೀರ ಹಾಸ್ಯಾಸ್ಪದವಾಗಿ ಕೆಲವೊಮ್ಮೆ ಕಂಡು ಬರುವುದು. ತಾತ್ಕಾಲಿಕ ಮನರಂಜನೆಯಾದರೂ ಒಟ್ಟು ಶಿಸ್ತಿನಿಂದ ಅದು ದೂರವಾಗುವ ಸಂಭವವೇ ಹೆಚ್ಚು. ಪ್ರೇಕ್ಷಕರು ಏನು ಬಯಸುತ್ತಾರೋ ಅದನ್ನು ಕೊಡುವಂತಾಗಬಾರದು. ಪರ್ಯಾಯವಾಗಿ ಕಲೆಯ ಅಂತರಂಗದ ತಿರುಳೇನಿದೆ ಅದರ ದರ್ಶನ ಮಾಡಿಸಬೇಕು.

ಇವುಗಳೆಲ್ಲ ಹವ್ಯಾಸಿಗಳಿಂದ ಖಂಡಿತ ಸಾಧ್ಯವಿದೆ. ಯಾಕೆಂದರೆ ಇದೇನೂ ಅವರಿಗೆ ಉದ್ಯೋಗವಲ್ಲ.. ಇದರಿಂದ ಬರುವ ಆದಾಯಕ್ಕೆ ಕಾಯುವ ಕೈಗಳಿಲ್ಲ. ಸಂಬಳ ಕೊಡುವ ಮೇಳದ ಯಜಮಾನನ ನಿಬಂಧನೆ ಕಟ್ಟುಪಾಡುಗಳಿಲ್ಲ. ಹೊಸತನ್ನೇ ಆವಿಷ್ಕರಿಸಬೇಕೆನ್ನುವ ತುಡಿತವಿರಿಸಿಕೊಳ್ಳಬೇಕಾಗಿಲ್ಲ.

Wednesday, August 19, 2009

ಮೈಸೂರು ನಗರಿಯ ಯಕ್ಷಗಾನ



ನಿರೀಕ್ಷೆಯನ್ನು ಎಂದೂ ಹುಸಿಯಾಗಿಸದೆ ಬಯಸಿದುದಕ್ಕಿಂತ ಅಧಿಕವಾಗಿ ಕಲೆಯ ಹಸಿವನ್ನು ನೀಗಿಸುವ ಕಲಾವಿದ ಬ್ರಹ್ಮ ಬಲಿಪ್ಪರ ಆಗಮನ, ಅದೂ ನೆರೆಯ ನಗರಿ ಮೈಸೂರಿಗೆ...!!! ಈ ಸುದ್ದಿಯೇ ನಮ್ಮಲ್ಲೆಲ್ಲ ಸಂಚಲನೆಯನ್ನು ಉಂಟುಮಾಡಿತ್ತು.ಬೆಂಗಳೂರಲ್ಲಿದ್ದುಕೊಂಡು ಆ ಮಹಾ ಕಲಾತಪಸ್ವಿಯ ತಪಸ್ಸಿನ ಮಹಿಮೆಯ ಬಿಂದುಗಾತ್ರದ ದರ್ಶನವಾದರೂ ಅದು ಮಹಾಭಾಗ್ಯ ಅಂತ ತಿಳಿದುಕೊಂಡವರಿಗೆ ಇದು ಒಂದು ಸುಯೋಗವೇ.ಯಾವುದೇ ಆಡಂಬರದ ಪ್ರಚಾರ ಬಯಸದ ಸರಳತೆಯ ಪ್ರತೀಕ ಸದ್ದಿಲ್ಲದೆ ಮೈಸೂರಿಗೆ ಬರುತ್ತಾರೆಂದರೆ..?

ಹೌದು ಕಳೆದ ಆಗಸ್ಟು 15 ರಿಂದ ಬಲಿಪ್ಪರು ಮೂರುದಿನಗಳ ಕಾಲ ಮೈಸೂರಿನ ಪುಣ್ಯವಂತ ಕಲಾಭಿಮಾನಿಗಳ ಮನಸ್ಸು ತಣಿಸಿದರು.ಅವರ ಕಿಂಚಿತ್ ಕಲಾಪ್ರೋಕ್ಷಣೆ ಯಿಂದ ಮಿಂದವನು ನಾನು. ಬಲಿಪ್ಪರ ಪದ ಸಿಂಚನ ಸೋಕಿಸುವ ಸದವಕಾಶದಿಂದ ವಂಚಿತನಾಗಲು ಸಾಧ್ಯವೇ? ಅಂತೇ ಅಂದು ಶನಿವಾರ ನಿಗದಿಯಂತೆ ಮೈಸೂರಿಗೆ ಧಾವಿಸಿದೆ. ಅದಕ್ಕೆ ಸಮಾನ ಮನಸ್ಕ ಸಂಗಾತಿಗಳು ಜತೆಯಾದರು.


ಯಾವುದೇ ವ್ಯಕ್ತಿಯಾಗಲಿ, ಸಂಘ ಸಂಸ್ಥೆಯಾಗಲಿ ಬಲಿಪ್ಪರ ಕಾರ್ಯಕ್ರಮ ಹಮ್ಮಿಕೊಂಡರೆ, ಅದು ಕೇವಲ ಕಾರ್ಯಕ್ರಮವಾಗುವುದಿಲ್ಲ. ಅದರಿಂದ ಆ ಮಹಾವ್ಯಕ್ತಿಗೆವಿಶೇಷವೇನೂ ಆಗುವದಿಲ್ಲ. ಬದಲಾಗಿ ಸಂಭಂಧಿಸಿದ ಕರ್ತೃವಿನ ಧ್ಯೇಯವೇ ಸ್ತುತ್ಯರ್ಹವಾಗುವುದು. ಮಾತ್ರವಲ್ಲ ಈ ಅವಕಾಶ ಲಭಿಸಿದರೆ ಆ ವ್ಯಕ್ತಿ ಸಂಸ್ಥೆಯ ಯೋಗ್ಯತೆ ಹಿರಿಮೆ ಗರಿಮೆಗಳೂ ಅಧಿಕವಾಗುವುದು. ಬಲಿಪ್ಪರ ಯಕ್ಷಗಾನ ಯಾವುದೇ ಯಕ್ಷಗಾನ ಅಭಿಮಾನಿಗಳಿಗೆ ಹೊಸತಲ್ಲ. ನನಗಂತೂ ಅದೆಷ್ಟೋ ಯಕ್ಷಗಾನ ಬಯಲಾಟ , ತಾಳಮದ್ದಲೆ ಕಂಡು ಪುಳಕಿತಗೊಂಡ ಘಳಿಗೆ ಇನ್ನೂ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅದು ತಾಯಿ ಪ್ರೀತಿಯಿಂದ ಬಡಿಸಿದ ಕೈತುತ್ತಿಗೆ ಸಮಾನ.ಅದರ ರುಚಿಯ ಸೊಗಡನ್ನು ಪುನಃ ಸವಿಯುವ ಒಂದು ಸುಂದರ ಅವಕಾಶ.

ಬಲಿಪ್ಪರ ಯಕ್ಷಗಾನ ಎಂದರೆ ಅದು ಹೇಗಿರಬೇಕೋ ಹಾಗೆ. ಅದರಲ್ಲಿ ಯಾವುದೇ ವೆತ್ಯಾಸವಿಲ್ಲ. ತುಂಬಿದ ಸಭಾ ಪ್ರೇಕ್ಷಕರನ್ನು ಅವಲಂಬಿಸಿ ಇಲ್ಲ. ಅದು ನಿತ್ಯ ಪ್ರವಹಿಸುವ ಮಂದಾಕಿನಿಯಂತೆ ನಿತ್ಯ ನೂತನ. ಮುತ್ತುರತ್ನ ಚಿನ್ನ ಹೊಳೆಯುತ್ತದೆ ಅದಕ್ಕೆ ಹೋಲಿಕೆ ಬೇಕೇ.? ಅವನ್ನು ಆಸ್ವಾದಿಸಿಉವ ಮನಸ್ಸು ಬೇಕು ಅಷ್ಟೇ.ಅಂದು ನಾವು ಮೊದಲು ಹೊಕ್ಕಿದ್ದೆ ಚೌಕಿಗೆ.ಅದಾಗಲೇ ಕಲಾವಿದರು ತಮ್ಮ ಕಾಯಕದಲ್ಲಿ ತೊಡಗಿದ್ದರು. ನುರಿತ ಹಲವು ಹಿರಿಯ ಕಿರಿಯ ಕಲಾವಿದರ ಗಡಣ ನಿಡ್ಲೆ ಗೋವಿಂದಣ್ಣನ ಸಾರಥ್ಯದಲ್ಲಿ ಬಲಿಪ್ಪರ ತಾಳಕ್ಕೆ ಕುಣಿಯಲು ಸಿದ್ಧವಾಗಿತ್ತು. ಅದರಲ್ಲೂ ಪ್ರಮುಖ ಕಲಾವಿದ ಸುಬ್ರಾಯ ಹೊಳ್ಳ ರಂತೂ ಈ ಕಲಾ ಬ್ರಹ್ಮನ ಸಾನ್ನಿಧ್ಯದಿಂದ ರೋಮಾಂಚಿತರಾದಂತೆ ಕಂಡಿತು. ಅತಿ ಹಿರಿಯ ಕಲಾವಿದರು ಈ ಮಹಾ ಕಲಾತಪಸ್ವಿಗೆ ತೊಟ್ಟ ವೇಷದಲ್ಲೇ ಸಾಷ್ಟಾಂಗ ನಮಸ್ಕಾರ ಹಾಕಿ ರಂಗವೇರುವುದನ್ನು ಕಂಡಾಗ ಬೆರಗಾಗುವ ಸರದಿ ನನ್ನದು. ಅದನ್ನು ನೋಡುವ ಅಪೂರ್ವ ಘಳಿಗೆ ನನ್ನದು.

ನಿರ್ವಿಕಲ್ಪ ಭಾವದಿಂದ ಕಲಾವಿದರನ್ನು ಹರಸಿ ಕಳುಹಿಸುವ ಬಲಿಪ್ಪರು ವರ್ತಮಾನ ಕಾಲದ ಯಕ್ಷಗಾನದಲ್ಲಿ ಅತೀ ಮೇರು ವ್ಯಕ್ತಿ ಎಂಬುದು ಸರ್ವ ವಿದಿತ. ಇಂದಿನ ಹಲವು ಹಿರಿಯ ಕಲಾವಿದರು ಅವರ ಗರಡಿಯಲ್ಲೇ ಪಳಗಿದವರು. ಪಟ್ಟಿ ಮಾಡುತ್ತ ಹೊರಟರೆ ಅದಕ್ಕೆ ಅಂತ್ಯವಿಲ್ಲ. ಕಲಾವಿದರಿಗೆ ಕಲಾ ಗುರುಗಳು ಆರಂಭದಲ್ಲಿ ಯಾರೋ ಇರಬಹುದು... ಆರಂಭಿಕ ಪದಗತಿಯ ಉಪದೇಶ ಮಾಡಿರಬಹುದು ಆದರೆ ಬಲಿಪ್ಪರೆಂಬ ವಿಶ್ವ ವಿದ್ಯಾಲಯದಲ್ಲಿ ಸ್ನಾತಕರಾದರೆ ಅದು ಕಲಾವಿದನ ಭಾಗ್ಯ. ಪೌರಾಣಿಕ ಪ್ರಸಂಗ ನಡೆಯನ್ನು ಬಲಿಪ್ಪರಷ್ಟು ಕಲಾವಿದರಿಗೆ ಬೋಧಿಸಿದ ವ್ಯಕ್ತಿ ಬೇರೊಬ್ಬರಿಲ್ಲ. ಇಂದು ಹಲವು ಕಲಾವಿದರು ಯಕ್ಷಗಾನದಲ್ಲಿ ನೆಲೆಯೂರಿದ್ದರೆ ಅದಕ್ಕೆ ಬಲಿಪ್ಪರ ಸಮರ್ಥ ಉಪದೇಶವೇ ಕಾರಣ. ಯಾರೊಬ್ಬ ಕಲಾವಿದನು ಇದನ್ನು ಅಲ್ಲಗಳೆಯಲಾರ. ಇಂದು ಕೂಡ ಅತೀ ಸಣ್ಣವರಿಗೂ ಅಷ್ಟೇ ತಾಳ್ಮೆ ಹಾಗು ಶ್ರದ್ದೆಯಿಂದ ಹೇಳಿಕೊಡುವ ಅವರ ಗುಣ ಅದು ನಿಸ್ವಾರ್ಥಿಯಾಗಿ ಉಪದೇಶ ಮಾಡುವುದನ್ನು ನೋಡಿದರೆ ಬಲಿಪ್ಪ ಎಂಬ ಮಾಹವ್ಯಕ್ತಿಯ ಕಾಲದ ಜೀವಿಗಳು ನಾವಲ್ಲವೇ ಎಂದು ಹೆಮ್ಮೆ ಪಟ್ಟುಕೊಳ್ಳಬೇಕು.

ಚೌಕಿಯ ವಾತಾವರಣ ತುಂಬಾ ಉಲ್ಲಸಿತವಾಗಿತ್ತು. ಯಾವಾಗಲೂ ಪ್ರದರ್ಶನದಲ್ಲಿ ಚೌಕಿಯ ವಾತಾವರಣ ತುಂಬಾ ಪ್ರಭಾವ ಬೀರುತ್ತದೆ ಎಂದು ನನ್ನ ಅನಿಸಿಕೆ. ಯಕ್ಷಗಾನದಂತಹ ಕೂಡು ಕಲೆಗೆ ಇದು ತುಂಬಾ ಅವಶ್ಯ ಕೂಡ. ಅಲ್ಲಿನ ಶಿಸ್ತು ಆತ್ಮೀಯತೆ ಮತ್ತು ಅನಗತ್ಯ ವಾಸನಾರಹಿತ ವಾತಾವರಣ ಕಂಡಾಗ ಮನಸ್ಸು ಹೇಳಿತು ಖಂಡಿತ ಇವತ್ತು ಆಟ ರೈಸುತ್ತದೆ. ಸಾಮಾನ್ಯವಾಗಿ ಇಂತಹ ಕಡೆ ಇರುವ ಗುಟ್ಕ, ಧೂಮ ಪಾನ ಹಾಗು ಇನ್ನಿತರ ಅನಪೇಕ್ಷಿತ ವಾಸನೆಗಳು ಇಲ್ಲದಿರುವುದು ಮತ್ತೆ ಗಮನಕ್ಕೆ ಬಂತು.


ಶಿಸ್ತು ಬದ್ದ ಪ್ರದರ್ಶನ, ಹಿಮ್ಮೇಳದಲ್ಲಿ ಎಲ್ಲರೂ ಕೆಂಪು ಪೇಟದೊಂದಿಗೆ ಗೆ ವೇದಿಕೆ ಏರಿದ್ದು ತುಂಬಾ ಸಂತಸ ತಂದಿತು. ಹೆಚ್ಚಾಗಿ ಇತ್ತೀಚಿಗೆ ಇದು ತೀವ್ರ ಕಡೆಗಣನೆಗೆ ಒಳಗಾದ ಕ್ರಮ. ಬಹುಷಃ ಬಲಿಪ್ಪರು ಯಕ್ಷಗಾನ ಬಯಲಾಟದಲ್ಲಿ ಪೇಟ ಧರಿಸದೆ ಬಂದದ್ದು ನಾನು ನೋಡಿಯೇ ಇಲ್ಲ. ಇದೊಂದು ವೇದಿಕೆಯ ಕಡೆಗೆ ಗೌರವವನ್ನು ಕೊಡುವಂತಹ ಕ್ರಮ.ಅಂದಿನ ಪ್ರಸಂಗ ರೇವತಿ ಕಲ್ಯಾಣ. ಬಹುಶಃ ಒಂದು ಅಪೂರ್ವ ಪ್ರಸಂಗ. ಮತ್ತು ಅಷ್ಟೇ ಕಷ್ಟಕರ ಮತ್ತು ಕಲಾವಿದರಿಗೆ ಸವಾಲೊಡ್ಡುವ ಪ್ರಸಂಗ. ಅದನ್ನು ಅಷ್ಟೇ ಸಲೀಸಾಗಿ ಅಂದು ಪ್ರದರ್ಶಿಸಲಾಯಿತು.

ರೈವತ ಮಹಾರಾಜನಾಗಿ ಕುಂಬ್ಳೆ ಶ್ರೀಧರ, ರೇವತಿಯಾಗಿ ಕೆದಿಲ ಜಯರಾಮ , ಹಂಸ ಡಿಬಿಕರಾಗಿ ನಿಡ್ಲೆ ಗೋವಿಂದ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು ಮುತುವರ್ಜಿ ಮೆರೆದರು. ಬ್ರಹ್ಮದತ್ತನ ಬಣ್ಣದ ವೇಷದಲ್ಲಿ ಶಿರ್ವಪ್ರಸಾದ್ ಭಟ್ ಉತ್ತಮ ಎನ್ನಬಹುದಾಂತ ಪ್ರದರ್ಶನ ನೀಡಿದರು. ಕೃಷ್ಣನಾಗಿ ಜಯಪ್ರಕಾಶ ಪೆರ್ಮುದೆ ಅಂತೂ ತುಂಬಾ ಗಮನ ಸೆಳೆದರು. ಯಕ್ಷಗಾನೀಯ ಕೃಷ್ಣ ವೇಷ ತುಂಬಾ ಆಕರ್ಷಕವಾಗಿತ್ತು. ಬಲರಾಮನಾಗಿ ಸದಾಶಿವ ಕುಲಾಲ್ ಪಗಡಿ ಧರಿಸಿ ಗಧಾಧಾರಿಯಾಗಿ ಬಂದದ್ದು ವಿಚಿತ್ರವಾಗಿತ್ತು. ಮಹೇಶ ಮಣಿಯಾಣಿಯಂತೂ ಹಲವು ಪಾತ್ರಗಳಲ್ಲಿ ಸಮರ್ಥವಾಗಿ ಜೀವ ತಳೆದು ಮಿಂಚಿದರು.


ಹಿಮ್ಮೇಳದಲ್ಲಿ ಗೋರೆ ಮತ್ತು ನಿಡ್ಲೆ ಅಜ್ಜನ ಪಟ್ಟ ಶಿಷ್ಯ ದೇಲಂತ ಮಜಲು ಅದ್ಭುತವಾದ ಹಿಮ್ಮೇಳ ಪ್ರದರ್ಶಿಸಿದರು. ಎಂದಿನಂತೆ ತೆಂಕು ತಿಟ್ಟಿನ ಆಗ್ರಾ ಪಂಕ್ತಿಯ ಹಿಮ್ಮೇಳ ಇವರದ್ದು. ಬಲಿಪ್ಪರ ಸಾಂಪ್ರದಾಯಿಕ ಹಾಡುಗಳಿಗೆ ಉತ್ತಮ ಜತೆಯನ್ನು ನಿರೀಕ್ಷೆಯಂತೆ ನೀಡಿದರು. ಧ್ವನಿವರ್ಧಕ ವ್ಯವಸ್ಥೆ ಮಾತ್ರ ಯಕ್ಷಗಾನಕ್ಕೆ ಹೊಂದುವಂತೆ ಇರಲಿಲ್ಲ. ಮೊದಲಿಗೆ ಭಾಗವತಿಕೆಗೆ ರಾಮಕ್ರಷ್ಣ ಮಯ್ಯ ಸಿರಿಬಾಗಿಲು ಕುಳಿತು ನಂತರ ಪ್ರಸಾದ ಬಲಿಪ್ಪರಿಗೆ ಬಾಗಿಲು ತೆರೆದರು. ಕೊನೆಯಲ್ಲಿ ಬಲಿಪ ನಾರಯಾಣ ಭಾಗವತರು ನಿರೀಕ್ಷೆಯಂತೆ ಸೇರಿದ್ದ ಪ್ರೇಕ್ಷಕರ ಮನಸ್ಸನ್ನು ತಣಿಸಿದರು.

ಇಂತಹ ಒಂದು ಅಪೂರ್ವ ಯಕ್ಷಗಾನವನ್ನು ಮೈಸೂರಿನ ಕೆ ಎಂ ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದರು. ಯಕ್ಷಗಾನದ ಬಗ್ಗೆ ತೀರ ಅಪರಿಚಿತರಾದ ಮಹಾವ್ಯಕ್ತಿಯೋಬ್ಬರು ಈ ಅದ್ಭುತ ಕಾರ್ಯಕ್ರಮ ಆಯೋಜಿಸುವಲ್ಲಿ ಬೆನ್ನೆಲುಬಾಗಿ ಕಾರ್ಯ ಪ್ರವ್ರಿತ್ತರಾಗಿ ಯಕ್ಷಗಾನವೇ ಬೇಕು ಅದೂ ಬಲಿಪ್ಪರು ಬರಬೇಕು ಎಂಬ ಧ್ಯೇಯದಿಂದ ಉತ್ತಮವಾಗಿ ದುಡಿದರು.ನಾವೆಲ್ಲಾ ಅವರಿಗೆ ಆಭಾರಿಗಳು.ಒಂದು ಉತ್ತಮ ಯಕ್ಷಗಾನ ಕಂಡು ಮನಸ್ಸು ಸಂತ್ರಿಪ್ತಿಯಿಂದ ತುಂಬಿ ಬಂತು. ಅತಿ ಭಾರವಾದ ಮನಸ್ಸನ್ನು ಹೊತ್ತು ಕೊಂಡು ಇನ್ನು ಮುಂದೆ ಇಂತಹ ಯಕ್ಷಗಾನ ಎಂದು ಕಂಡೆನೋ ಎಂದು ಚಿಂತಿಸುತ್ತ ಸರಿ ಸುಮಾರು ನಡುವಿರುಳು ಅಲ್ಲಿಂದ ನಿರ್ಗಮಿಸಿದೆವು.

Sunday, August 9, 2009

ಮಾತನಾಡುವವು ಚೆಂಡೆ ಮದ್ದಲೆಗಳು



ಮಾತನಾಡುವವು ಚೆಂಡೆ ಮದ್ದಲೆಗಳು.
ಕಾದು ಕುಳಿತಿವೆ ಶ್ರುತಿ ಸೇರಲು.
ಸಡಿಲ ನರಗಳು ಬಿಗಿಯಲು ಮೈಕೊಡವಲು
ಹುಡುಕುತಿವೆ ಎಲ್ಲಿ ಹೋಯಿತು ಪಳಗಿದ ಕೈಗಳು.

ಆರು ಬಂದರೋ ಆರು ಹೋದರೋ ಕಳಚಿ ನೋಡದೆ ದಿರಿಸನು
ನಸುಕಿನಾಟವ ಮುಗಿಸಿ ತೊಡಿಸಿದರೀ ದಿರಿಸನು
ಶ್ರುತಿಯ ತಿದ್ದಲು ಬಡಿದು ನೋಡಲು
ಎಲ್ಲಿ ಹೋದವು ಕೈಗಳು ಕಾದಿವೆ ಚೆಂಡೆ ಮದ್ದಲೆಗಳು.

ಸಮಯ ಮೀರಿತೇ ಕತ್ತಲಾಯಿತೆ ಚೌಕಿ ದೇವರು ಬಂದರೆ
ಶ್ವೇತ ವಸನವ ಧರಿಸಿ ಕೆಂಪು ಪಗಡಿಯನೇರಿಸಿ
ಬಂದರೇ ಕೈ ಚಳಕ ತೋರಲು ಇಂದಿನಾಟವ ತೊಡಗಲು
ಮೌನ ದೀಕ್ಷೆಯ ಮುರಿಯಲು ಕಾಯುತಿವೆ ಚೆಂಡೆ ಮದ್ದಲೆಗಳು

ಬಂದು ನಿಂತರು ಕೈ ಚಳಕ ತೋರಲು
ನಿಟ್ಟುಸಿರ ಬಿಟ್ಟವು ಧರಿಸಿದುಡುಗೆಯ ತೆಗೆಯಲು
ನರನಾಡಿಗಳನೆಳೆದೆಳೆದು ಬಿಗಿಯುತ ಬೆರಳನಾಡಿಸೆ
ಮೌನ ಮುರಿದವು ಕಾಯುತಿಹ ಚೆಂಡೆ ಮದ್ದಲೆಗಳು.


ತಕ್ ತಕ್ ಟಕ್ ಟಕ್ ಧೀಂ ಎನುತ ಬಡಿದು
ಚಲ್ಲಣವ ಬಿಗಿದಂತೆ ಬಿಗಿ ದಾರವನು ಹಿಡಿದೆಳೆದು
ಶ್ರುತಿಸೇರೆ ಮಾರ್ದನಿಯ ಬೆಸೆಯುತಲಿ ಒಡೆಯನಾಣತಿಗೆ
ಪುಳಕಗೊಂಡವು ಕಾಯುತಿಹ ಚೆಂಡೆ ಮದ್ದಲೆಗಳು.