"ಇದು ವಿಮರ್ಶೆಯಲ್ಲದ ಚಿಂತನ"

Thursday, May 19, 2011

ಬೇಕುಗಳು ಇಲ್ಲ.. ಬೇಡವಾದವುಗಳು ಇಲ್ಲವೇ ಇಲ್ಲ


“ಯಾವಾತನಿಗೆ ಬೇಕುಗಳೇ ಇಲ್ಲವೋ ಆತನಿಗೆ ಬೇಡದವುಗಳೂ ಇಲ್ಲ” ಅಂದರೆ ನಿಂದನೆ ಮತ್ತು ಅಭಿನಂದನೆ ಎರಡು ಸಮಾನವಾಗಿ ಇರುತ್ತದೆ. ಮಾನಸಿಕವಾಗಿ ಇದು ಸ್ಥಿರತೆಯನ್ನು ತೋರಿಸುತ್ತದೆ.ಮೇಲಿನ ಮಾತುಗಳು ಇತ್ತೀಚೆಗಿನ ಕೆಲವು ಸಂದರ್ಭಗಳಲ್ಲಿ ಬಹುವಾಗಿ ನನ್ನನ್ನು ಕಾಡಿತ್ತು.

ಮಿತ್ರರೊಬ್ಬರ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಧಿಕವಾಗಿ ಎಲ್ಲರೂ ಅಪರಿಚಿತರೇ  ಅಥವಾ ಹೊಸ ಪರಿಚಿತರು ಎಂದರೆ ಸರಿ. ಹಾಗಾಗಿ ಎಕಾಂಗಿಯಾಗಿಯೆ ಕುಳಿತಿದ್ದೆ. ಆವಾಗ ನನ್ನ ಪರಿಚಯ ಹಿಡಿದು ವ್ಯಕ್ತಿಯೊಬ್ಬರು ಬಂದರು “ ರಾಜ್ ರವರೆ ನಾನು....” ತಮ್ಮ ಪರಿಚಯ ಮಾಡಿಕೊಂಡರು. ಯಾರೆ ಆಗಲಿ ಮಾತು ತೊಡಗಿಸಿದರೆ ನಾನು ಸುಮ್ಮಗೆ ಕುಳಿತಿರುವನಲ್ಲ. ಅಪರಿಚಿತರೇ ಆಗಲಿ ಪರಿಚಿತರಂತೆ ಮಾತು ತೊಡಗಿಸುವುದು ನನ್ನ ಸ್ವಭಾವ. ಎಲ್ಲರಲ್ಲು ಸ್ನೇಹ ಸೌಹಾರ್ದವನ್ನು ಬಯಸುವವನಿಗೆ ಇದರಲ್ಲಿ ಯಾರಾದರೇನು ಎಂಬ ಭಾವ.

ನನ್ನ ಹೆಸರು ಹಿಡಿದು ಕರೆದರಲ್ಲ. ಒಂದು ರೀತಿಯ ಆತ್ಮೀಯತೆ ಆವಾಗಲೇ ಸ್ಪುರಿಸಿತ್ತು.ಇದು ಸಹಜವೂ ಅಲ್ಲವೇ. ಯಾರನ್ನೆ ಆಗಲಿ ಅವನ ವ್ಯಕ್ತಿತ್ವ ಮೂಲ ಸಂಕೇತವಾದ ಹೆಸರನ್ನು ಹಿಡಿದು ಕರೆದಾಗ ಗೌರವ ಬಾರದೆ ಇದ್ದೀತೆ? ಇದು ಯಾರದೇ ವ್ಯಕ್ತಿತ್ವಕ್ಕೆ ನಾವು ಮೊದಲು ಕೊಡುವ ಮನ್ನಣೆ. ಮಾತು ಮುಂದುವರಿಸುತ್ತಾ ಹೇಳಿಕೊಂಡರು.  ಅದು ನಮ್ಮ ಬೆಂಗಳೂರು ಯಕ್ಷಗಾನ ಕಾರ್ಯಕ್ರಮದ ಬಗ್ಗೆಯಾಗಿತ್ತು.  ನಮಗಂತೂ ಹಳೆಯದಾಗಿ ಬಿಟ್ಟ ಸವಿ ನೆನಪಿನ ಮರುಕಳಿಕೆಯಾಗಿತ್ತು. ಬೇಡ ಬೇಡವೆಂದು ನಾನು ಬಯಸಿದರೂ ಅದೇಕೋ ನನ್ನನ್ನು ಕಂಡಾಗ ಇಂದಿಗೂ ಸಹಜವಾಗಿ ಅದೇ ಪುನರಾವರ್ತನೆಯಾಗುತ್ತದೆ.ಬಹುಶಃ ಇನ್ನೊಂದು ಚಿಗುರು ಮೊಳೆಯದೆ ಇದು    ಮರೆಯಾಗದೇನೋ?  ಬಹಳ ಒಳ್ಳೆಯದಾಗಿತ್ತು. ಇತ್ತೀಚೆಗೆ ಅಂತಹ ಕಾರ್ಯಕ್ರಮ ನೋಡುವುದೇ ವಿರಳ ಇತ್ಯಾದಿ ಇತ್ಯಾದಿ  ಸಹಜವಾಗಿರುವ ಮಾತುಗಳು. ಕೆಲವೊಮ್ಮೆ ನನಗಾಗಿ ಮಾತುಗಳನ್ನು ಆಡುತ್ತಿರುವರೋ ಎಂದು ಮುಜುಗರ ಕೂಡ ಅನುಭವಿಸಿದ್ದಿದೆ.

ಹಾಗಾಗಿ ಈ  ಕಾರ್ಯಕ್ರಮದ ಬಗ್ಗೆ ಹೊಗಳಿ ಮಾತಾಡಿದಾಗ ಸ್ಠಿತಪ್ರಜ್ಞತೆಯನ್ನು ಕಾಪಾಡುವ ಬಯಕೆಯಾಗುತ್ತದೆ. ನಿಜಕ್ಕಾದರೆ ನಮ್ಮ ಬಳಗದಲ್ಲಿ ಯಾರೂ ಈ ಹೊಗಳಿಕೆಯನ್ನು ಖಂಡಿತ ಬಯಸಿಲ್ಲ. ಆದರೆ ಹೊಗಳಿಕೆ ಬಂದಾಗ ಮನೋಭಾವಕ್ಕನುಸರಿಸಿ ಖುಶಿ ಪಟ್ಟಿದ್ದೇವೆ. ನನ್ನ ಮಟ್ಟಿಗೆ ಹೇಳುವುದಾದರೆ ಮೇಲಿನ ವಾಕ್ಯ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ. ಯಾಕೆಂದರೆ ನಾನು ಯಾವುದನ್ನೂ ಹೆಚ್ಚಾಗಿ ಬಯಸಿದವನಲ್ಲ. ನನ್ನ ಅಥವ ನಮ್ಮ ಕಾರ್ಯದ ಬಗ್ಗೆ ನಮಗೆ ಮಾತ್ರ ಗೌರವ ಎಂಬ ಭಾವ ನಾವು ಮೊದಲು ತಳೆದದ್ದು. ನಮ್ಮ ಚಿಂತನೆಗಳಾಗಲಿ ಯೋಜನೆಗಳಾಗಲಿ ಯಾರದೇ ಮೇಲೆ ಹೇರುವ ಅಥವ ಅದನ್ನು ಅವರು ಹಿಂಬಾಲಿಸುವ ಅನಿವಾರ್ಯತೆಯನ್ನು ನಾವು ತಂದಿಡಲೇ ಇಲ್ಲ. ಕೇವಲ ನಮ್ಮ ದೃಷ್ಟಿಕೋನದ ಕಾರ್ಯಕ್ರಮ ಮಾತ್ರವೇ ನಮ್ಮ ಧ್ಯೇಯವಾಗಿತ್ತು. ಹಾಗಾಗಿ ನಾನಂತು ನಮ್ಮ ಕಾರ್ಯಕ್ರಮ ಹೇಗಾಗಿದೆ ಎಂದು ಯಾರಲ್ಲೂ ಕೇಳುವ ಗೋಜಿಗೆ ನಾನು ಹೋಗಲೇ ಇಲ್ಲ. ಇಂದಿಗೂ ಯಾರಲ್ಲೂ ನನಗೆ ಕೇಳುವ ಬಯಕೆಯೂ ಇಲ್ಲ. ನಮ್ಮ ಮನೆಯಲ್ಲಿ ಊಟ ಮಾಡಿದ ನಾವು ಇನ್ನೊಬ್ಬರಿಂದ ನಮ್ಮ ಅಡುಗೆಯ ಬಗ್ಗೆ ಕೇಳಿದಂತೆ ಅನ್ನಿಸಿಬಿಡುತ್ತದೆ. ಮೊದಲೊಮ್ಮೇ ಹೇಳಿದ್ದೆ ನಮ್ಮ ಮನೆ ಅಂಗಳದಲ್ಲಿ ಮಾಡುವಂತೆ  ಎಂದು..ಹಾಗಾಗಿ ಬಹು ನಿರೀಕ್ಷೆ ಏನು ಇಲ್ಲದೆ ಅತ್ಯಂತ ಅನಿರೀಕ್ಷಿತವನ್ನೇ ಈ ಕಾರ್ಯಕ್ರಮ ತಂದಿತ್ತು ಮಾತ್ರವಲ್ಲ ತರುತ್ತಾ ಇದೆ.

ಇದನ್ನೇ ಹೇಳುತ್ತ ಹೋದರೆ  ಅದು ಅತಿಯಾಗಿ ಬಿಡುವ ಭಯವೂ ಇದೆ. ಇದರ ಬಗ್ಗೆ ನಾವು ಹೇಳಿಕೊಳ್ಳುವುದೂ ಅತಿಯಾಗಿದೆ ಎನೋ ಹಲವು ಸಲ ಅನ್ನಿಸಿದ್ದಿದೆ. ಒಂದು ಕಾರ್ಯಕ್ರಮ ಮಾಡಿ ಅದನ್ನೆ ಹೇಳುತ್ತಾ ಇದ್ದಾರೆ. ಒಂದು ಹತ್ತು ಆಟ ಮಾಡಿ ನೋಡಲಿ ಆಗ ಅದರ ಕಷ್ಟ  ಗೊತ್ತಾಗುತ್ತದೆ. ಹೀಗೂ ಪ್ರತಿಕ್ರಿಯೆ ಬಂದದ್ದು ಇದೆ. ಆದರು ಒಂದು ಮಾತು ಇಲ್ಲು ಅನ್ವಯವಾಗುವುದು ಅಂದರೆ, ನಾನಾಗಲಿ ನಮ್ಮ ಬಳಗವಾಗ್ಲಿ  ಕಷ್ಟದ ಅರಿವಾಗಬೇಕೆಂದು ಕಾರ್ಯಕ್ರಮ ಮಾಡಿದ್ದಲ್ಲ. ಅಥವಾ ಯಾವೂದೋ ಸ್ಪರ್ಧೆಗಾಗಿ ಮಾಡಿ ಇದಕ್ಕೆ ಸಿಗುವ ಅಂಕಗಳ ಬಗ್ಗೆಯೂ ನಿರೀಕ್ಷೆ ಇರಿಸಲಿಲ್ಲ. ಹಾಗಿರುವಾಗ ಕಷ್ಟ ದ ಅರಿವಾಗುವ ಪ್ರಮೇಯವೆಲ್ಲಿ ಬಂತು. ಇದು ಅತ್ಯಂತ ಸಹಜ ಕಾರ್ಯಕ್ರಮ ಅಷ್ಟೆ. ಹಲವು ಸಲ ಹೇಳಿದ್ದಿದೆ ಯಾವುದೇ ಅತಿಯಾದ ನಿರೀಕ್ಷೆ ಇಲ್ಲ ಎಂದು. ಯಾರನ್ನೇ ಆಗಲಿ ಮೆಚ್ಚಿಸುವುದಕ್ಕಾಗಿ ಮಾಡಿದ್ದಲ್ಲ. ಮೆಚ್ಚಿದ್ದಾರೆ ಎಂದರೆ ನಮ್ಮ ಮನೋಭಾವಕ್ಕೆ ಸರಿಯಾದ ಸ್ಪಂದನೆ ಉಂಟು ಎಂದು ಅರ್ಥವಲ್ಲವೆ.? ಈ ಸ್ಪಂದನವನ್ನೂ ನಾವು ನಿರೀಕ್ಷಿಸಲಿಲ್ಲ. ಇದರ ಬಗ್ಗೆ ಕಟುವಾದ ವಿಮರ್ಶೆ ಇದ್ದರೂ ನಮ್ಮ ಮಟ್ಟಿಗೆ ನಾವು ಸಿದ್ದವಾಗಿ ಸ್ಥಿತಪ್ರಜ್ಞರಾಗಿಯೆ ಇದ್ದೆವು. ನಾವು ಸ್ಪರ್ಧಿಗಳು ಅಲ್ಲವಾದರೂ ನಮ್ಮನ್ನು ಸ್ಪರ್ಧಿಗಳಾಗಿ ಕಂಡರೆ,ಆ ಮೂಲಕ ನಮ್ಮ ಸೋಲು ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದರೆ ಏನು ಮಾಡಬಹುದು. ಪ್ರತಿಯೊಂದನ್ನು ಸದ್ಭಾವನೆಯಿಂದ ಸ್ನೇಹದಿಂದ ಕಂಡಾಗ ಸೋಲು ಗೆಲುವಿನ ಪ್ರಶ್ನೆಯೇ ಇಲ್ಲ. ಸ್ಪರ್ಧೆಯ ಮನೋಭಾವದಿಂದ ಹೆಜ್ಜೆ ಇರಿಸಿದಾಗ, ಎಲ್ಲಿ ಸೋಲಬಹುದೋ ಎಂಬ ಆತಂಕದಿಂದ ಪ್ರತಿಯೊಂದು ಹೆಜ್ಜೆಯೂ ಉದ್ವೇಗ ಭರಿತವಾಗುತ್ತದೆ. ಇದೆಲ್ಲ ಬಹಳ ಸೂಕ್ಷ್ಮವಾದ ವಿಚಾರಗಳು ಅರ್ಥವಾಗುವವರಿಗೆ ಅರ್ಥವಾಗುತ್ತದೆ. ಹಾಗಾಗಿ ವೇದಾಂತದ ಮಾತು ನೆನಾಪಾಗುವುದು ಬೇಕುಗಳು ಇಲ್ಲದವನಿಗೆ ಬೇಡವಾದವುಗಳು ಯಾವುದೂ ಇಲ್ಲ.

ಇಷ್ಟೆಲ್ಲಾ ಇದ್ದರೂ ಇನ್ನೂ ಒಂದು ಮಾತು ಅತಿ ಮುಖ್ಯವಾದದ್ದು ಎಂದರೆ  ಸ್ಪರ್ಧಿಯಲ್ಲದವನನ್ನು ಸ್ಪರ್ಧಾಕಣದಲ್ಲಿ ನಿಲ್ಲಿಸಿ ನೋಡು, ಇಲ್ಲಿ ಇಂತಹ ವಾತಾವಾರಣ ಇದೆ ಎಂದೆಲ್ಲ ಭಯಭೀತನನ್ನಾಗಿಸುವುದು. ಇದಕ್ಕೆಲ್ಲ ಕಾರಣ ಮಾನಸಿಕ ಕ್ಲೇಶ. ಜಗತ್ತನ್ನು ನಾವು ನೋಡುವ ದೃಷ್ಟಿಕೋನವನ್ನು ಅನುಸರಿಸಿಕೊಂಡು ಇದೆ. ಹಾಗಾಗಿ, ಅದು ಕೇವಲ ನನ್ನ ಅಂತರಂಗದ ಮಾತು.. ಒಳಾಂತರ್ಯದಿಂದ  ಹೇಳುವುದಾದರೆ ನನಗೆ ಇನ್ನೊಂದು ಕಾರ್ಯಕ್ರಮ ಮಾಡುವ ಬಯಕೆಯೇ ಇಲ್ಲ. ಪ್ರತೀಯೊಬ್ಬರ ನಿರೀಕ್ಷೆ ಮಾತ್ರ ಇದಕ್ಕೆ ವಿಪರೀತವಾಗಿ ಇದೆ. ಆದರೂ ನನ್ನ ಮನಸ್ಸು ಹೇಳುವುದಿದನ್ನೇ ಸವಿದ ಸ್ವಾದದ ರುಚಿ ಆರದಿರಲಿ ಎಂದು.

Tuesday, May 10, 2011

ಮತ್ತೊಂದು ಶೂನ್ಯತೆ



ಯಕ್ಷಗಾನದಲ್ಲಿ ಮತ್ತೊಂದು ಶೂನ್ಯತೆ ಸೃಷ್ಟಿಯಾಗಿದೆ. ಹಿರಿಯ ಕಲಾವಿದ ಮದ್ದಲೆವಾದನಕ್ಕೆ ಮಾಂತ್ರಿಕ ಸ್ಪರ್ಶ ನೀಡಿದ ಅಪ್ರತಿಮ ಸಭ್ಯ ಕಲಾವಿದನೊಬ್ಬನ ಯುಗವೆಂದೇ ಹೇಳಬಹುದು ಅದು ಸದ್ದಿಲ್ಲದೇ ಅಂತ್ಯವಾಗಿದೆ. ಮದ್ದಲೆಯ ಇಕ್ಕೆಲಗಳಲ್ಲಿ ಕೈ ಬೆರಳು ನರ್ತಿಸುತ್ತಿದ್ದರೆ ಮದ್ದಲೆಯ ಲಯವಿನ್ಯಾಸದ ವಿರಾಟ್ ರೂಪವನ್ನೆ ತೆರೆದಿಡುತ್ತಿದ್ದ ಶ್ರೀ ಪ್ರಭಾಕರ ಗೋರೆ ಅನೀರೀಕ್ಷಿತ ದುರ್ಘಟನೆಯಲ್ಲಿ ಅಷ್ಟೇ ಅನಿರೀಕ್ಷಿತವಾಗಿ ನಮ್ಮನ್ನಗಲಿದರು. ಚರಮ ವಾರ್ತೆಯನ್ನು ನಂಬುವುದು ಅರಗಿಸುವುದು ಸಾಧ್ಯವಿಲ್ಲದಾಯಿತು.



ಮೊನ್ನೆಯ ದಿನ ವಾಹನ ದುರಂತದ ವಾರ್ತೆ ಪತ್ರಿಕೆಯಲ್ಲಿ ಓದಿದಾಗ, ಶಿವನೇ ಎಂದು ಮನ ಹಲವು ಬಾರಿ ಕೂಗಿ ಹೇಳಿದರೂ ಆಗುವುದು ಆಗಿಯೇಬಿಟ್ಟಿತು. ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ವಿಭಾಗದಲ್ಲಿ ಎರಡು ದಿನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಕೊನೆಗೊಮ್ಮೆ ಇಹಲೋಕ ಬಿಟ್ಟ ಮದ್ದಲೆಯ ಮಾಂತ್ರಿಕ ಆ ಗೋರೆ ಇನ್ನು ಬರೀ ನೆನಪಾಗಿ ಸ್ಮರಣೆಯ ಗೋರಿಯನ್ನೇ ಸೇರಿಕೊಂಡುಬಿಟ್ಟರಲ್ಲ? ಛೇ ಹೀಗಾಗಬಾರದಿತ್ತು ಅಂತ ಎಷ್ಟು ಸಲ ಅಂದು ಕೊಂಡರು ಎದುರಾದ ಕಹಿ ಸತ್ಯ ಮಾಸದ ದುರಂತವನ್ನೇ ತಂದಿಟ್ಟು ಬಿಟ್ಟಿತು. ಭಾಗವತ ಅಮ್ಮಣ್ಣಾಯರು ಬಿಕ್ಕಿ ಬಿಕ್ಕಿ ಅತ್ತರಂತೆ. ಒಟ್ಟಿನಲ್ಲಿದ್ದ ಮೇಳದ ಕಲಾವಿದರು ಗರಬಡಿದು ಚೇತನವನ್ನೇ ಕಳೆದು ಕೊಂಡುಬಿಟ್ಟರು. ಸಮಸ್ತ ಯಕ್ಷಗಾನ ಸಾರಸ್ವತ ಲೋಕವೇ ಒಂದು ಸಲ ಕಂಪಿಸಿದಂತೆ ಅನ್ನಿಸಿತು.



ಬಹಳ ಹಿಂದೆ ಕರ್ನಾಟಕ ಮೇಳದ ಹಿಮ್ಮೇಳದ ಪಟ್ಟಿಯಲ್ಲಿ ಪ್ರಭಾಕರ ಗೋರೆ ಎಂಬ ಹೆಸರು ಸೇರಿಕೊಂಡಾಗ ಈ ಕಲಾವಿದನ ನೈಪುಣ್ಯತೆ ಬಹುಷಃ ಎಷ್ಟು ಜನರಿಗೆ ಅರಿವಿತ್ತೋ ಅರಿಯದು. ಆದರೆ ಯಾವಾಗ ಅಮ್ಮಣ್ಣಾಯ ಮತ್ತು ದೇಲಂತ ಮಜಲು ಜತೆಯಾದರೋ ಅಂದಿನಿಂದ ಇಂದಿನವರೆಗೆ ಯಕ್ಷಗಾನ ಹಿಮ್ಮೇಳ ಹೊಸತನದ ಹಾದಿಯನ್ನು ಅದರದ್ದೇ ಪಾರಂಪರಿಕ ರೀತಿಯಲ್ಲಿ ಜನರ ಮುಂದೆ ತೆರೆದಿಟ್ಟಿತು.ಈ ಮೂರು ಜನರ ಸೌಮ್ಯತೆಯ ಮಾನಸಿಕ ಸ್ವಭಾವವೇ ಪರಸ್ಪರ ಹೋಂದಾಣಿಕೆಯ ಹಿಮ್ಮೇಳವನ್ನು ವೈಭವೀಕರಿಸಿತು. ಮೂವ್ವರಲ್ಲಿಯು ಸಾಮ್ಯತೆಯ ಒಂದು ಗುಣ ಎಂದರೆ ಅಸಾಧಾರಣ ಪ್ರತಿಬೆಯ ಜತೆಗೆ ಸೌಮ್ಯತೆ. ಸೌಮ್ಯ ಪದಗಳಿಗೆ ಅಮ್ಮಣ್ಣಾಯರು ಹೊಸತನ ತುಂಬಿದರೆ, ಅಬ್ಬರದ ಚೆಂಡೆಯಲ್ಲಿ ಮೃದುತ್ವದ ನಾದದಲ್ಲೆ ಸೌಮ್ಯತೆಯನ್ನು ದರ್ಶಿಸುವ ದೇಲಂತ ಮಜಲು ಇವರಿಬ್ಬರಿಗೆ ಮದ್ದಲೆಯಲ್ಲಿ ಹೊಸತನದ ಚಾಪುಗಳೊಂದಿ ನುಡಿತ ಬಡಿತಗಳೊಂದಿಗೆ ಜತೆಯಾದವರು ಶ್ರೀ ಪ್ರಭಾಕರ ಗೋರೆ. ಎಂತಹ ವೈವಿಧ್ಯಮಯ ಶೈಲಿಯ ಲೋಕವದು. ಅ ಅಧ್ಭುತ ಶೈಲಿ ಇನ್ನು ಬರೀ ನೆನಪೆಂದರೆ ಪರಮಾತ್ಮ !!! ಹೇಗೆ ನಂಬಲಿ?!!!


ಎಡನೀರು ಮೇಳದ ರಂಗಸ್ಥಳದ ಬಲಭಾಗದಲ್ಲಿ ಭಾಗವತರಿಗೆ ಅಭಿಮುಖವಾಗಿ, ಮೇಜಿನ ಅಂಚಿಗೆ ಕುಳಿತು ಮುಂಭಾಗದಲ್ಲಿದ್ದ ಮದ್ದಳೆಯ ಎರಡೂ ಮುಖಗಳಲ್ಲಿ ತನ್ನ ಹತ್ತೂ ಬೆರಳನ್ನು ನೇವರಿಸುತ್ತಾ ...(ಬಡಿದಂತೆ ಅನ್ನಿಸುವುದೇ ಇಲ್ಲ..!!!) ಭಾಗವತರ ಭಾವ ಭಂಗಿಯನ್ನು ನಗು ಮುಖದಲ್ಲೇ ಗಮನಿಸುತ್ತ , ತನ್ಮಯರಾಗಿ ಪ್ರತೀಯೊಂದನ್ನೂ ಆಸ್ವಾದಿಸುತ್ತ ಕುಳಿತಿರುವ ಗೋರೆಯ ಭಂಗಿಯನ್ನು ಮರೆಯುವುದೆಂತು? ಭಾಗವತರು ಕೊಟ್ಟ ಬಿಡ್ತಿಗೆಯಲ್ಲಿ ತನ್ನ ಮದ್ದಲೆಯ ಝೇಂಕಾರವನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ತುಂಬಿ ಕೊಡುತ್ತಿದ್ದ ಆ ಅನನ್ಯ ಮದ್ದಲೆಯವಾದನವನ್ನು ಪ್ರತ್ಯಕ್ಷ ಸವಿಯುವುದು ಎಂದರೆ ಇನ್ನು ಸಾಧ್ಯವಿಲ್ಲದಾಯಿತೇ? ಹೇಗೆ ಮರೆಯಲಿ ಆ ನಾದಮಯ ಲೋಕ.? ಇಷ್ಟು ಬೇಗ ಶೂನ್ಯತೆಯ ಸುರುಳಿ ಕಣ್ಮರೆಯಾಗಿಬಿಟ್ಟರಲ್ಲ? ಹೇಗೆ ಮರೆಯಲಿ? ನಮಗೂ ಬಿಕ್ಕಿ ಬಿಕ್ಕಿ ಅಳುವ ಮನಸ್ಸಾಗುತ್ತಿದೆ.



ಇಲ್ಲಿ ಅನಾಥವಾದುದು ಯಾವುದು? ಗೋರೆ ಮೃದು ಸ್ಪರ್ಶಕ್ಕೆ ತೆನ್ನೆರಡು ಮುಖವನ್ನು ತೆರೆದಿಟ್ಟು ಸಂವಾದಿಸುವ, ನಿರ್ಜೀವವಾಗಿದ್ದು ಜೀವತಳೆವ ಮದ್ದಲೆಯೇ? ಜೀವ ಭಾವವನ್ನು ಗಾನದಲ್ಲಿ ತುಂಬಿ ತನ್ಮಯರಾಗುತ್ತಿದ್ದ ಭಾಗವತ ಅಮ್ಮಣ್ಣಾಯರೆ? ಮದ್ದಲೆಯ ನುಡಿತಗಳಿಗೆ ತಮ್ಮ ಹಾವಭಾವದ ಹೆಚ್ಜೆ ಗುರುತುಗಳನ್ನು ನೀಡಲು ಪ್ರಯತ್ನಿಸುವ ಮುಮ್ಮೇಳದ ಕಲಾವಿದರೆ? ಇದೆಲ್ಲವನ್ನೂ ತನ್ನ ಸಾಮಾರ್ಥ್ಯಗಳಿಗನುಸಾರವಾಗಿ ಮನಸಾರೆ ಹೀರಿಕೊಂಡು ಆನಂದಿಸುವ ಕಲಾಭಿಮಾನಿಗಳೆ? ಎಲ್ಲವೂ ಆನಾಥವಾಗಿ ಶೂನ್ಯತೆಯನ್ನು ಅರಗಿಸಿಕೊಳ್ಳುವ ಅನಿವಾರ್ಯತೆಯಲ್ಲಿವೆ.



ಕಲೆಯೆಂದರೆ ನಿಂತ ನೀರಲ್ಲ. ಹರಿಯುತ್ತ ಹೊಸತನದ ಚಿಗುರಿಗೆ ಸ್ಪಂದಿಸುತ್ತ ಸಹಜ ಹಸಿರನ್ನು ಸೂಸುತ್ತ ಇರುತ್ತದೆ. ಇಂದು ಇದ್ದುದು ಶಾಶ್ವತವಲ್ಲ. ಆದರೂ ಒಂದು ಸಲ ಊಹಿಸಿ ಯಕ್ಷಗಾನದಲ್ಲಿ ಒಂದೋಂದೇ ಶೂನ್ಯತೆಯ ಸುರುಳಿ ಸುತ್ತುತ್ತಾ ಇರುತ್ತದೆ. ಇದನ್ನು ನೆನೆದು ಗಾಬರಿಯಾಗುತ್ತದೆ.ಶೇಣಿ ಬಿಟ್ಟು ಹೋದ ಶೂನ್ಯತೆ ಚಿಪ್ಪಾರು ಬಲ್ಲಾಳರು ಬಿಟ್ಟ ಶೂನ್ಯತೆ ಹೀಗೆ ಹತ್ತು ಹಲವು ಮಹನೀಯರು ಬಿಟ್ಟ ಶೂನ್ಯತೆ ನಮ್ಮೆದುರು ದೊಡ್ಡ ಶೂನ್ಯವಾಗಿ ನಿಂತಿರುವಾಗ ಇದೀಗ ಗೋರೆಯವರು ಸುತ್ತಿದ ಶೂನ್ಯತೆ, ಒಂದು ರೀತಿಯ ಶೂನ್ಯತೆಯ ಆವರಣವೇ ಅಗಿಬಿಟ್ಟಿದೆ. ಇದನ್ನು ತುಂಬಲಾರದ ಅಸಮರ್ಥತೆ ದೊಡ್ದ ಕಟು ಸತ್ಯ ನಮ್ಮನ್ನಣಕಿಸುತ್ತಿದೆ.

ಗೋರೆಯ ಶೈಲಿ ಇನ್ನು ಕಾಣುವುದಕ್ಕಿಲ್ಲ ಇದಂತು ಕಟು ಸತ್ಯ. ಅವರ ಶಿಷ್ಯವರ್ಗ ಇದೇಯೊ ಇಲ್ಲವೋ ಅರಿಯದು ಯಾವುದಿದ್ದರು ಆದ ನಷ್ಟ ತುಂಬಿಸುವುದು ಅಸಾಧ್ಯ. ಗೋರೆ ಬಿಟ್ಟ ಶೂನ್ಯತೆಯನ್ನು ತುಂಬುವರು ಬರುತ್ತಾರೋ ಇಲ್ಲವೊ ಕಾಲವೇ ಉತ್ತರೀಸೀತು. ಆದರು ನಾವು ಕಂಡ ಗೋರೆ ಮಾತ್ರ ಖಂಡಿತ ಬರಲಾರದ ಲೋಕ್ಕೆ ಹೋಗಿದ್ದಾರೆ ಇದನ್ನು ಅರಗಿಸುವುದು ಕಷ್ಟ. ನಮ್ಮಲ್ಲಿ ಅಮ್ಮಣ್ಣಾಯರಂತೆ ಬಿಕ್ಕಿ ಬಿಕ್ಕಿ ಅಳುವ ಅಭಿಮಾನಿಗಳೂ ಇದ್ದಾರೆ. ಎಲ್ಲರಿಗೂ ಅಗಲಿದ ಗೋರೆಯ ನೆನಪಿನ ನೋವನ್ನು ಆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.ಯಕ್ಷಗಾನದಲ್ಲಿ ಮತ್ತೊಂದು ಶೂನ್ಯವೆಳೆದಿದೆ. ಭಾರವಾದ ಮನಸ್ಸಿನೊಂದಿಗೆ ಅಗಲಿದ ಆತ್ಮಕ್ಕೆ ಶಾಂತಿಯನ್ನು ಬೇಡುವ.











Friday, May 6, 2011

ಮುದನೀಡಿದ ಮುದ್ದಣನ ಗೇಯ ಸೌಂದರ್ಯ

ಮುದ್ದಣ ಗೇಯ ಸೌಂದರ್ಯ ಎಂಬ ಧನಿ ಮುದ್ರಣ




ಯಕ್ಷಗಾನ ಪ್ರಸಂಗ ಸಾಹಿತ್ಯದ ವರಕವಿ ನಂದಳಿಕೆ ನಾರ್ಣಪ್ಪಯ್ಯನವರ ಸ್ಮರಣಾರ್ಥ ಮುದ್ದಣ ಪ್ರಕಾಶನ ನಂದಳಿಕೆ ಇತ್ತೀಚೆಗೆ ಹೊರತಂದಿರುವ “ಮುದ್ದಣ ಗೇಯ ಸೌಂದರ್ಯ” ಎಂಬ ಯಕ್ಷಗಾನ ಪದಗಳ ಧ್ವನಿ ಮುದ್ರಣ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ. ಗಾಯನಕ್ಕೆ ಸುಗಮವಾಗಿ ಸುಲಭವಾದ ಸರಳವಾದ ಛಂದಸ್ಸು ಉಳ್ಳ ಕಾವ್ಯವನ್ನು ಗೇಯ ಸೌಂದರ್ಯದ ಕಾವ್ಯಗಳು ಎಂದು ಕರೆಸಲ್ಪಡುತ್ತವೆ. ಸುಮಾರು ನೂರ ಎಪ್ಪತ್ತಮೂರು ಯಕ್ಷಗಾನ ಪದಗಳ ಧ್ವನಿ ಮುದ್ರಣವಿದು. ಯಕ್ಷಗಾನದಲ್ಲಿ ಹಲವು ಧ್ವನಿ ಮುದ್ರಣಗಳು ಬಂದಿರಬಹುದು. ಆದರೆ ಮುದ್ದಣನ ಸ್ಮರಣೆಯಲ್ಲಿ ತಂದ ಈ ಪದಸಮೂಹ ಮಾತ್ರ ಮರೆಯದಂತಹ ಸ್ಮರಣೆಯನ್ನು ಅರ್ಥಪೂರ್ಣವಾಗಿ ನೆರವೇರಿಸಿಬಿಟ್ಟಿದೆ. ಅನಾವಶ್ಯಕ ಆಡಂಬರವಿಲ್ಲದ ಈ ಮಹತ್ಕಾರ್ಯ ಯಕ್ಷಗಾನದ ನಿಜಕಂಪನ್ನು ಹರಡಿಸುತ್ತ ನಿಜ ಅರ್ಥದಲ್ಲಿ ಕಲೆಯ ನಿಜ ಆಡಂಬರವನ್ನು ತೆರೆದಿಟ್ಟಿದೆ. ವರಕವಿಯ ಅತ್ಯಂತ ಜನಜನಿತವಾದ ಪ್ರಸಂಗಗಳಾದ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣದ ಯಕ್ಷಗಾನ ಪದಗಳನ್ನು ಒಳಗೊಂಡು ಮನಸ್ಸು ತುಂಬುವಷ್ಟು ಅಧ್ಭುತ ರಸದೌತಣವನ್ನು ಉಣಬಡಿಸಿದೆ.

ಎರಡು ಪ್ರಸಂಗದ ಹೆಚ್ಚಿನ ಎಲ್ಲಾ ಪದಗಳನ್ನು ಇಲ್ಲಿ ಅಳವಡಿಸಿದ್ದಾರೆ. ಹಿರಿಯ ಭಾಗವತರುಗಳಾದ ತೆಂಕು ತಿಟ್ಟು ಹಾಗು ಯಕ್ಷಗಾನದ ರುವಾರಿಗಳೆಂದು ಕರೆಸಲ್ಪಡುವ ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ತಮ್ಮ ಜೀವಿತಾವಧಿಯ ಉತ್ತಮ ಹಾಡುಗಾರಿಕೆಯನ್ನು ಇದರಲ್ಲಿ ಮೂಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಹಾಗೆ ನೋಡಿದರೆ ವರಕವಿ ಮುದ್ದಣನ ಸ್ಮರಣೆಯಲ್ಲಿ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣದ ಪದಗಳನ್ನೊಳಗೊಂಡ ಸಿ. ಡಿ ಬರುತ್ತಿದೆ ಎಂದು ಸುದ್ದಿ ಕೇಳಿದಾಗಲೇ ಭಾಗವತರು ಯಾರೆಂದು. ಊಹಿಸಿಬಿಡಬಹುದು. ವರ್ತಮಾನ ಕಾಲದಲ್ಲಿ ಈ ಪ್ರಸಂಗಗಳ ಪದಗಳನ್ನು ಹಾಡಬಲ್ಲ ಭಾಗವತರೆಂದರೆ ಇವರಿಬ್ಬರೇ ಎಂದರೆ ಅತಿಶಯವೆನ್ನಿಸದು. ಯಾಕೆಂದರೆ ಮುದ್ದಣ್ಣನ ಪದಗಳು ಅದರ ಮೂಲ ರಾಗ ತಾಳ ಲಯದಲ್ಲೆ ಹಾಡಬೇಕಾದಂತಹ ವೈಶಿಷ್ಟ್ಯದಿಂದ ಕೂಡಿದೆ. ರಾಗ ತಾಳದಲ್ಲಿ ಸರ್ಕಸ್ಸು ಮಾಡುವ ಭಾಗವತರಿಗೆ ಇದು ಸಾಧ್ಯವಿಲ್ಲ ಎಂಬ ಪ್ರತೀತಿ ಇದೆ. ಪ್ರಕೃತ ಹೆಸರಾಂತ ಭಾಗವತರೊಬ್ಬರು ಇದರ ಬಗ್ಗೆ “ ಅಷ್ಟು ಕಷ್ಟ ಪಟ್ಟು ಅದನ್ನು ಹಾಡುವುದು ಏಕೆ?” ಎಂದು ಅಸಮಧಾನ ತೋರಿದ್ದಾರೆ ಎಂದರೆ ಇದರ ಮಹತ್ವ ಅರಿವಾಗಬಹುದು. . ಹಾಗಾಗಿ ಅದರ ಮೂಲ ಛಂದೋಬದ್ದವಾಗಿ ಅದನ್ನು ಹಾಡಬೇಕಾದರೆ ಮುಖ್ಯವಾಗಿ ಭಾಗವತರ ತಾಳ ಗಟ್ಟಿಯಿರಬೇಕು. ಶ್ರುತಿಯಲ್ಲಿ ಹಿಡಿತವಿರಬೇಕು. ಉಚ್ಚಾರದಲ್ಲಿ ಶ್ರದ್ದೆಯಿರಬೇಕು. ಹಾಗಿದ್ದಲ್ಲಿ ಮಾತ್ರ ಇದು ಗೇಯ ಸೌಂದರ್ಯವಾಗಬಲ್ಲುದು. ಸಾಮಾನ್ಯವಾಗಿ ಯಾವ ಹೆಸರಾಂತ ಭಾಗವತರು ಸಹ ಇದನ್ನು ಹಾಡುವಲ್ಲಿ ಯಾ ಈ ಪ್ರಸಂಗವನ್ನು ಆಡಿಸುವಲ್ಲಿ ಆಸಕ್ತಿ ವಹಿಸುವುದಿಲ್ಲ. ಸದ್ಯದ ಮಟ್ಟಿಗೆ ಆ ಸಾಮಾರ್ಥ್ಯ ಇರುವುದು ಬಲಿಪ್ಪ ಮತ್ತು ಹೊಳ್ಳರಿಗೆ ಮಾತ್ರ ಸಾಧ್ಯ. ಈ ಸಿ. ಡಿ ಯ ಪದಗಳನ್ನು ಕೇಳುವಾಗ ಇದು ಮೊದಲಾಗಿ ಅರಿವಿಗ ಬರುತ್ತದೆ. ಹಾಗಾಗಿ ಇವರ ಆಯ್ಕೆಯನ್ನು ಸೂಕ್ತವಾಗಿ ಮಾಡಿದ್ದರೆಂದೆ ನನ್ನ ಅನಿಸಿಕೆ.

ಇದರ ಹಿಮ್ಮೇಳದಲ್ಲಿ ಸಮರ್ಥ ಮದ್ದಲೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಹಾಗು ಚೆಂಡೆಯಲ್ಲಿ ಶ್ರೀ ಪದ್ಮನಾಭ ಉಪಾಧ್ಯಾಯ ಹಿರಿಯಡ್ಕ ಅತ್ಯುತ್ತಮವಾಗಿ ಸಹಕರಿಸಿದ್ದಾರೆ.

ಬಹಳ ಹಿಂದೆ ಯಕ್ಷಧ್ವನಿ ಎಂಬ ಧ್ವನಿ ಸುರುಳಿ ಅಂತೇ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣ ಎಂಬ ಎರಡು ಧ್ವನಿ ಸುರುಳಿಯನ್ನು ಹೊರತಂದ ಅದೇ ಜಾಡಿನಲ್ಲಿ ಈ ಮುದ್ರಣ ಬಿಡುಗಡೆಯಾದರೂ ಅತ್ಯಂತ ಹೊಸತನ ಮತ್ತು ವೈಶಿಷ್ಟ್ಯದಿಂದ ಈ ಧ್ವನಿ ಮುದ್ರಣದ ಸಿ. ಡಿ ಯನ್ನು ನಿರ್ಮಿಸಿ ಬಿಡುಗಡೆ ಮಾಡಿದುದು ಪ್ರಶಂಸನೀಯ ಕಾರ್ಯ.

ಇದರಲ್ಲಿ ಆಯ್ಕೆ ಮಾಡಿ ಹಾಡಿದ ಎಲ್ಲಾ ಪದಗಳು ಸಹ ಅತ್ಯುತ್ತಮವಾಗಿ ಮೂಡಿ ಬಂದಿ ಪ್ರತಿಯೊಂದು ಕೂಡ ತನ್ನದೇ ವೈಶಿಷ್ಟ್ಯದಿಂದ ಕೂಡಿದ್ದು ಕಲಾವಿದರ ಸಾಮಾರ್ಥ್ಯವನ್ನು ಸೂಕ್ತವಾಗಿ ಬಿಂಬಿಸುತ್ತದೆ. ಸಾಮಾನ್ಯವಾಗಿ ಆಡುವ ಪ್ರಸಂಗದಲ್ಲಿ ವಾಡಿಕೆಯಂತೆ ಹಾಡದ ಪದಗಳನ್ನು ಕೂಡ ಇದರಲ್ಲಿ ಅಳವಡಿಸಿದ್ದು ಒಂದು ವಿಶೇಷ. ಅಪರೂಪದ ಪದಗಳನ್ನು ಕೇಳುವ ಹಂಬಲ ಇರುವವರಿಗೆ ಇದು ವರದಾನವಾಗಬಲ್ಲುದು. ಇದರಲ್ಲಿ ನನಗಂತು ಯಾವ ಪದಕ್ಕೆ ಹೆಚ್ಚು ಅಂಕ ಕೊಡಬಹುದು ಎಂದು ನಿರ್ಣಯಿಸುವುದಕ್ಕೆ ಆಗಲಿಲ್ಲ. ಆದಿಯಿಂದ ಅಂತ್ಯದವರೆ ನಾನ್ ಸ್ಟಾಪ್ ಎಕ್ಸ್ ಪ್ರೆಸ್ಸ್ ನ ಹಾಗೆ ಅದ್ಭುತವಾಗಿ ಕೇಳಿಸಿಕೊಂಡು ಯಕ್ಷಗಾನದ ಲೋಕದಲ್ಲಿ ನಮ್ಮನ್ನು ವಿಹರಿಸುವಂತೆ ಮಾಡುತ್ತದೆ. ಕುಮಾರ ವಿಜಯದ

“ ಮಣಿಮಯ ಪೀಠದಿ ಮುನಿಯನೇರಿಸಿ ಪದ್ಮ..”

“ಶ್ರೀಕರ ಶತಮಖನುತ...”

“ ಅಕಟಕಟೇನ್ಭವ...”

“ಬಿಸಜ ಮುಖಿ ಶಚಿನಮಿಸಿ ಕಾಂತನ ಕಂಡೆರಗಿ......... ಏನಿದು ದುಗುಡಪ್ರಿಯ ”

“ ಮಾತನಾಡೊ ಮಮ ಪ್ರಾಣನಾಥ...”

“ಆನಂದ ಮುಖಿ ಸುಂದರಾಂಗಿ ಮಂದಗಾಮಿನಿ...........”

“ಬಾಲನೇನಾದ.. ..ಕಾಂತ...”

“ನೋಡಿರೋ ದಿಗಂಬರ ದುರ್ಜಟೆಯನು...”

“ಏನನುಸಿರಲಿ ಕಾರ್ಯ...”

“ಕುಂದರದನೆ ..... ಪೂರ್ಣೇಂದುವದನೆ”

“ಪಾಲಿಸು ಪರಮೇಶ್ವರ...”

“ಮಡದಿಯಾಡಿದ ಮಾತ ಕೇಳಿ.......”

“ಮುಕ್ತಿದಾಯಕ ಸುಬ್ರಹ್ಮಣ್ಯ.....”

“ಧನುಜ ಪದ್ಬಾಖ್ಯನಿಗೆ....”

“ಪೊರಟುದಾ ದಿಬ್ಬಣವು......ರಜತಗಿರಿಗೆ..”

ನಂತರ ಎರಡನೇಭಾಗವಾದ ರತ್ನಾವತಿ ಕಲ್ಯಾಣ ಪ್ರಸಂಗ ಪದಗಳಲ್ಲಿ ಬಲಿಪ್ಪ ಹೊಳ್ಳರ ದ್ವಂದ್ವ ದ ಎಂದಿನ ಸೊಬಗಿನಂತೆ.. ಸೊಕ್ಕಿದ ಗೂಳಿ ...ಹೊಲದಲ್ಲಿ ರಭಸವಾಗಿ ಬುಸುಗುಡುತ್ತ ನುಗ್ಗಿದಂತೆ ಅಬ್ಬರದಿಂದಲೇ ಆರಂಭವಾಗುತ್ತದೆ.

“ಕೇಳಮ್ಮ ತನುವಿನೊಳೂ...”

“ಜೋ ಜೋ ವಾರಿಜಗಂಧಿ ಸುಶೀಲೇ....”



“ಅಮ್ಮಯ್ಯ ಬಿಡುದುಗುಡ...”

“ನಾರಿ ಮಣೀ ಕೇಳ್...”

“ಚದುರೆ ಚಂಬಕ ಸೂನಾಸೆ ಮದಿರೆ ನಯನೆ ಮಂದಹಾಸೆ...”

“ಏನನುಸಿರಲಿ ಮಾನಿನಿಯ ಚೆಲುವಾನನದ ಪರಿಗೆ...”

“ಅಮಮಾ ಏನ್ ಬೆಡಗು ಗಾರ್ತಿಯ ಕನ್ನೆ ................”


ಯಕ್ಷಗಾನದ ಪರಂಪರೆಯ ಹಾಡುಗಾರಿಕೆಯ ರಸದೌತಣವನ್ನು ಸುಮಾರು ನಾಲ್ಕುವರೆ ತಾಸು ಸವಿಯುವಂತೆ ಮಾಡುವ ಈ ಗೇಯಸೌಂದರ್ಯ ಅತ್ಯುತ್ತಮ ಧ್ವನಿ ಮುದ್ರಣ. ಇದರ ಪ್ರತಿಯೊಂದು ವಿಭಾಗದಲ್ಲು ಸೂಕ್ಷ್ಮಾತಿ ಸೂಕ್ಷ್ಮ ಸಂಗತಿಗಳಲ್ಲಿ ಗಮನ ಹರಿಸಿ ನಿರ್ಮಿಸಿರುವುದು ಗಮನಾರ್ಹ. ಕೇವಲ ಚೆಂಡೆ ಮದ್ದಲೆಯ ಮತ್ತು ಭಾಗವತರ ಶ್ರುತಿ ಮಾತ್ರವಲ್ಲದೆ ಜಾಗಟೆಯ ಶ್ರುತಿಯೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವುದನ್ನು ಇಲ್ಲಿ ಕಾಣಬಹುದು. ಸಾಮಾನ್ಯವಾಗಿ ಇಂತಹ ಸಿ ಡಿ ಗಳಲ್ಲಿ ನಿರೂಪಕರ ನಿರೂಪಣೆಯೆ ಕೆಲವೊಮ್ಮೆ ಉಪಹರಟೆಯಾಗುವುದುಂಟು. ಇಲ್ಲಿ ಯಾವ ನಿರೂಪಣೆಯೂ ಇಲ್ಲದೆ, ಯಕ್ಷಗಾನದ ಪದ ಮತ್ತು ಹಿಮ್ಮೇಳ ಮಾತ್ರವೇ ತುಂಬಿಕೊಂಡು ಕೇಳುಗನಿಗೆ ಒಂದು ಸಲ ತೊಡಗಿಸಿದರೆ ನಿಲ್ಲಿಸಲು ಆಸಾಧ್ಯವಾಗುವಂತೆ ಮಾಡುತ್ತದೆ.



ಯಕ್ಷಗಾನ ಕಲಾಸಕ್ತರಿಗೆ ಇದು ಸಂಗ್ರಹಕಾರಕ ವಸ್ತುವಾದರೆ. ಯಕ್ಷಗಾನ ಕಲಿಯಬಲ್ಲವರಿಗೆ ,ಯಕ್ಷಗಾನ ಭಾಗವತಿಕೆಯನ್ನು ಕಲಿಯುವ ಅಥವ ಅಭ್ಯಸಿಸುವ ಆಸಕ್ತರಿಗೆ ಇದು ಕಲಿಕಾ ಸಾಧನವಾಗಬಲ್ಲುದು. ಯಕ್ಷಗಾನದ ಸರ್ವ ಪಾರಂಗತರೂ ಅನ್ನಿಸಿಕೊಳ್ಳುವವರೂ ಇದನ್ನು ಗಮನವಿಟ್ಟು ಆಲಿಸಿದಲ್ಲಿ ತಮ್ಮ ಅರಿವಿನಲ್ಲಿ ಇಲ್ಲದ್ದು ಇನ್ನೂ ಎಷ್ಟಿದೆಯೊ ಎಂಬ ಸಾಮಾನ್ಯ ಜ್ಞಾನವನ್ನಾದರೂ ಪಡೆದು ಕೊಳ್ಳಬಹುದು. ಅನಾವಶ್ಯಕ ಗಿಮಿಕ್ ಮಾಡಿ ಯಕ್ಷಗಾನ ಎಂದರೆ ಇದುವೇ ಎಂದು ಹೊಸಬರನ್ನು ಹೊಲಬು ತಪ್ಪಿಸುವಂತೆ ಮಾಡುವವರು ಆವಶ್ಯಕವಾಗಿ ಇದನ್ನು ಕೇಳುವುದು ಒಳ್ಳೆದು.



ಮುದ್ದಣ್ಣ ಗೇಯ ಸೌಂದರ್ಯವೆಂದು ಯಕ್ಷಗಾನದ ಸೌಂದರ್ಯ ಎಂಬುದರಲ್ಲಿ ಎರಡು ಮಾತಿಲ್ಲ.










Tuesday, April 26, 2011

ಬರೆಕೆರೆಯ ರಾಮಾಲಿಂಗನ


.


ಯಕ್ಷಗಾನ ಸವಿಯುವ ಅವಕಾಶ ಇತ್ತೀಚೆಗೆ ಅತ್ಯಂತ ಕ್ಷೀಣವಾಗಿರುವಾಗ ಉತ್ತಮ ಕಾರ್ಯಕ್ರಮವೊಂದು ಸವಿಯುವ ಅವಕಾಶ ಒದಗಿಬಂತು. ಇದು ತೆಂಗು ಕಂಗಿನ ತಂಪಾದ ಪರಿಸರದ ಹಳ್ಳಿಯ ಮನೆಯೊಂದರ ಅಂಗಳದಲ್ಲಿ ಎಂಬುದು ಮತ್ತೋಂದು ಉಲ್ಲೇಖನೀಯ ಅಂಶ. ರುಚಿಯಾದ ಹಳ್ಳಿಯ ಉಪಚಾರದೊಂದಿಗಿನ ಪುಷ್ಕಳ ಭೋಜನದೊಂದಿಗೆ ಯಕ್ಷಗಾನ ಕಾರ್ಯಕ್ರಮ ಸವಿಯುವುದು ನನ್ನಂತಹವರಿಗೆ ಅಪರೂಪದ ಅನುಭವ.

ಅತ್ಮೀಯ ಮಿತ್ರರಾದ ಕೇಶವಣ್ಣನ ಸ್ನೇಹದ ಆಮಂತ್ರಣ ಬಹಳ ಸಮಯ ಮೊದಲೇ ಬಂದಿತ್ತು. ಬಹುಶಃ ನಮ್ಮ ಬೆಂಗಳೂರಿನ ಅಭಿಮಾನಿಗಳ ಕಾರ್ಯಕ್ರಮ ನಿಗದಿಯಾಗುವ ಮೊದಲೆ ತಮ್ಮ ಮನೆಯ ಕಾರ್ಯಕ್ರಮದ ಬಗ್ಗೆ ಕೇಶವಣ್ಣ ಯೋಜನೆಯನ್ನು ರೂಪಿಸುತ್ತ ನಮ್ಮಲ್ಲಿ ಅದನ್ನು ಹಂಚಿಕೊಂಡು ನಮ್ಮ ಮನಸ್ಸಲ್ಲಿ ಪುಳಕವನ್ನು ಹೆಚ್ಚಿಸುವ ಪ್ರಯತ್ನಮಾಡುತ್ತಿದ್ದರು. ಬಳಿಯಲ್ಲಿದ್ದ ಸಂಪಿಗೆ ಮರದ ಕಂಪಿನಂತೆ ನಮ್ಮದೇ ಕಾರ್ಯಕ್ರಮ ಗಾಢವಾಗಿ ಮನಸ್ಸನ್ನು ಪಸರಿಸಿದ್ದುದರಿಂದ ಆ ಕಡೆಗೆ ಗಮನ ಹರಿಸುವುದಾಗಲಿಲ್ಲ. ಕಳೆದಬಾರಿಯ ಮನೆಯ ಗಾನವೈಭವ ಕಾರ್ಯಕ್ರಮವನ್ನು ವಂಚಿಸಿಕೊಂಡ ನಾನು ಈ ಸಲ ಮಾತ್ರ ತಪ್ಪಿಸಿಕೊಳ್ಳುವ ಅನಿವಾರ್ಯತೆ ಬಂದೊದಗದೆ ಇದ್ದುದು ನನ್ನ ಭಾಗ್ಯ.

ಸಹೋದರನ ಮದುವೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವಿದು. ಹಿರಿಯ ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ ರವರ ನೇತೃತ್ವದಲ್ಲಿ ಇದರ ರೂಪುರೇಷೆಯನ್ನು ಸಿದ್ದಪಡಿಸಲಾಗಿತ್ತು. ಮದುವೆಯಂತಹ ಶುಭಸಮಾರಂಭದಲ್ಲಿ ಅದೂ ಸಹೋದರನ ಮದುವೆ ಎಂದಾದಾಗ ಅತ್ಯಂತ ಸೂಕ್ತವಾದ ಪ್ರಸಂಗ ಪಾದುಕಾಪ್ರದಾನವನ್ನು ಯಕ್ಷಗಾನ ತಾಳಮದ್ದಲೆಗೆ ಆಯ್ಕೆ ಮಾಡಿದ್ದರು.ರಾಮಾಯಣದ ಅತ್ಯಂತ ಭಾವಪೂರ್ಣ ಪ್ರಸಂಗಗಳಲ್ಲಿ ಒಂದಾದ, ಸಾಹೋದರ್ಯದ ಆಳ ಅಗಲದ ವಿಸ್ತಾರವನ್ನು ಮನಸ್ಸಿಗೆ ತೋರಿಸಿಕೊಡುವ ವಿಶಿಷ್ಟ ಪ್ರಸಂಗವಿದು.ಸಾಹೋದರ್ಯ ಎಂಬುದು ಜನ್ಮದಿಂದ ಬರುವಂತಹುದು. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಉನ್ನತವಾದ ಸ್ಥಾನವಿದೆ. ರಾಮನ ಅದರ್ಶಮಯ ವ್ಯಕ್ತಿತ್ವದಲ್ಲಿ ಸಾಹೋದರ್ಯಕ್ಕೆ ವಿಶಿಷ್ಟಮಯ ಸ್ಥಾನವಿದೆ. ಹಾಗಾಗಿ ಈ ಪ್ರಸಂಗ ಬರೆಕೆರೆ ಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ತೋರುತ್ತದೆ. ಮಾತ್ರವಲ್ಲ ಅದಕ್ಕೆ ಸೂಕ್ತವಾಗಿ ಹಿರಿಯ ಅರ್ಥಧಾರಿಗಳಾದ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯ, ಶ್ರೀ ಉಮಾಕಾಂತ ಭಟ್ ಭಾಗವಹಿಸುವಿಕೆ ನಿಗದಿಯಾಗಿರುವುದರಿಂದ ಇದಕ್ಕೆ ಅನುಸಾರವಾಗಿಯೂ ಭಾವಪೂರ್ಣ ಸನ್ನಿವೇಶವನ್ನು ಒಳಗೊಂಡ ಈ ಪ್ರಸಂಗವನ್ನು ಆಯ್ಕೆ ಮಾಡಿದ್ದರು.

ಕಾರ್ಯಕ್ರಮದ ರೂಪುರೇಶೆ ಮೇಲ್ನೋಟಕ್ಕೆ ಗಮನಿಸಿದಾಗ ಹಲವು ನಿರೀಕ್ಷೆಗಳು ಮನೆ ಮಾಡಿದ್ದುವು. ಹಲವು ಸಮಯದಿಂದ ನಂತರ ಹಿರಿಯ ಕಲಾವಿದರ ಅರ್ಥಗಾರಿಕೆ ಸವಿಯುವುದು,ಭಾವಪೂರ್ಣ ಪದ ಸನ್ನಿವೇಶಗಳಿಂದ ಕೂಡಿದ ಭರತಾಗಮನ ಅಥವಾ ಪಾದುಕಾ ಪ್ರದಾನ ಪ್ರಸಂಗ ದರ್ಶನ ಹೀಗೆ. ಹಲವು ನಿರೀಕ್ಷೆಗಳಿಗನುಸಾರವಾಗಿ ಭಾವಪೂರ್ಣ ಸನ್ನಿವೇಶಕ್ಕೆ ಭಾವಪೂರ್ಣವಾಗಿ ಮನಸ್ಸು ಸಜ್ಜಾಗಿತ್ತು. ಭಾವಪೂರ್ಣ ಪದ ಅರ್ಥಗಾರಿಕೆಯ ನಿರೀಕ್ಷೆಯಿದ್ದುದರಿಂದ ಹೃದಯ ಭಾರವಾಗುವ ನೀರೀಕ್ಷೆಯು ಜತೆಗೆ ಇದ್ದುದರಿಂದ ಅದಕ್ಕಾಗಿ ಆದಷ್ಟು ಮನಸ್ಸು ಹೃದಯವನ್ನು ಹಗುರವಾಗಿಸಿ ಎಲ್ಲ ದುಗುಡ ದುಮ್ಮಾನಗಳನ್ನು ದೂರವಿರಿಸಿ ಈ ಭಾವುಕ ಸನ್ನಿವೇಶವನ್ನು ಕಾಣುವುದಕ್ಕೆ ಬಹುಶಃ ಎಲ್ಲರ ಮನಸ್ಸು ಸಿದ್ದಗೊಂಡಿತ್ತು. ಪಕ್ವವಾದ ಹಣ್ಣು ಅದುಮಿದಾಗ ರಸ ಚಿಮ್ಮಿಸಿದಂತೆ ಅದ್ಭುತ ರಸಾನುಭವಕ್ಕೆ ವೇದಿಕೆಯೊಂದು ನಿರ್ಮಾಣವಾಗಿದ್ದು ಅದು ಪ್ರತ್ಯಕ್ಷವಾಗಿ ನಿಜವಾಗಿಬಿಟ್ಟಿತು.ಅಂದು ಉಮಾಕಾಂತರ ವಿದ್ವತ್ ಕಾಂತ ಎಲ್ಲರನ್ನು ಆಕರ್ಶಿಸಿತು



ಪಾದುಕಪ್ರದಾನದಲ್ಲಿ ಭರತ ಹಾಗು ಶ್ರೀರಾಮನ ಪಾತ್ರಗಳು ಅತ್ಯಂತ ಪ್ರಮುಖವಾದವು. ಇವುಗಳಲ್ಲಿ ಭರತನ ಪಾತ್ರ ಉಡುವೇಕೋಡಿಯವರು ನಿರ್ವಹಿಸಿದರೆ, ಶ್ರೀರಾಮನ ಪಾತ್ರ ಉಮಾಕಾಂತರವರು ನಿರ್ವಹಿಸಿದರು.ಯಕ್ಷಗಾನದಲ್ಲೇ ಆಗಲಿ ಅಥವ ಸಮಗ್ರ ಪುರಾಣಗಳಲ್ಲೇ ಆಗಲಿ ಶ್ರೀರಾಮನ ವ್ಯಕ್ತಿತ್ವದಂತಹ ತೂಕವುಳ್ಳ ಪಾತ್ರ ಇನ್ನೊಂದಿಲ್ಲ. ಅದರ್ಶ ಪುರುಷ,ಪುರುಷೋತ್ತಮನ ಪಾತ್ರವನ್ನು ಯಾವುದರಲ್ಲೆ ಆಗಲಿ ನಿರ್ವಹಿಸುವುದು ಅತಿ ದೊಡ್ಡ ಸವಾಲಿನ ಕೆಲಸ. ಘನಗಂಭೀರ ವ್ಯಕ್ತಿತ್ವದ ರಾಮನ ಪಾತ್ರ ನಿರ್ವಹಿಸುವಾಗ ಬಯಲಾಟದಲ್ಲಿ ಆದರೆ ಗಿರಿಕಿ ಕುಣಿಯುವಾಗ ಕುತ್ತು ಹಾರಬಾರದೆನ್ನುವ


ನಿಯಮವಿದೆಯಂತೆ. ಇದು ಎಷ್ಟುಜನರಿಗೆ ಅರಿವಿದೆಯೋ ದೇವರೇ ಬಲ್ಲ. ಅಷ್ಟು ಉನ್ನತ ವ್ಯಕ್ತಿತ್ವದ ಪಾತ್ರ ಶ್ರೀರಾಮನದು. ಶ್ರೀರಾಮನ ಸಂಪೂರ್ಣವ್ಯಕ್ತಿತ್ವವೇ ಆದರ್ಶಮಯ. ಪ್ರತಿಹೆಜ್ಜೆ ಪ್ರತಿ ಮಾತು ಎಲ್ಲವೂ ಅನುಕರಣೀಯವಾಗುವ ಪಾತ್ರವೊಂದಿದ್ದರೆ ಅದು ಶ್ರೀರಾಮನದು. ಮಾತಿನಿಂದ ಕೃತಿಯಿಂದ ಉನ್ನತ ಅದರ್ಶಮಯವಾದ ರಾಮನ ಪಾತ್ರವನ್ನು ನಿರ್ವಹಿಸುವಾಗ ರಾಮನ ವ್ಯಕ್ತಿತ್ವದ ಹಿರಿತನದ ಅರಿವಿರಬೇಕು.ಇಂತಹ ಜವಾಬ್ದಾರಿಯುತ ಪಾತ್ರವನ್ನು ವಿದ್ವಾನ್ ಉಮಾಕಾಂತ್ ಭಟ್ ನಿರ್ವಹಿಸುತ್ತಾರೆ ಎಂದ ಮೇಲೆ ಕೇಳಬೇಕೆ ಮೊದಲು ಹೇಳಿದಂತೆ ನಾವು ಹೃದಯ ಮನಸ್ಸು ಖಾಲಿ ಮಾಡಿ ಹಗುರವಾಗಿಸಿ ವಿದ್ವತ್ಪೂರ್ಣ ಮಾತುಗಳ ಮೂಲಕ ಅದನ್ನು ತುಂಬಿಸುವುದಕ್ಕೆ ಮತ್ತು ಅಲ್ಲಿ ರಾಮನ ವ್ಯಕ್ತಿತ್ವದ ಮುದ್ರೆಯನ್ನು ಒತ್ತಿಡುವುದಕ್ಕೆ ಸಿದ್ದವಾಗಿರಬೇಕು. ಕರುಣಾಮಯಿ ಶ್ರೀರಾಮ, ಭಾವಸದೃಶ ಶ್ರೀರಾಮ. ಅಂದು ಅದ್ಭುತವಾಗಿ ಅನಾವರಣಗೊಂಡ ಪಾತ್ರವಿದು.

ರಾಮ ಮತ್ತು ಗುಹನ ಸನ್ನಿವೇಶದಿಂದ ಆರಂಭಗೊಂಡ ಕಥಾಭಾಗದಲ್ಲಿ ಗುಹನಾಗಿ ಮಿತ್ರ ಮುಳಿಯ ರಘುರಾಮಣ್ಣ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ಸೂರ್ಯ ಅಸ್ತಮಿಸುವಾಗ ಕಳೆದ ಆ ಒಂದು ದಿನದ ಬಗ್ಗೆ ನಿಟ್ಟುಸಿರು ಬಿಡುತ್ತಾ, ಉತ್ತರದ ಅಯೋಧ್ಯೆಯಿಂದ ವನವಾಸದೀಕ್ಷಾಬದ್ದನಾಗಿ ಬಂದ ಶ್ರೀರಾಮನ ದರ್ಶನವಾದಾಗ , ಪಡುವಣದಲ್ಲಿ ಮುಳುಗಿದ ಸೂರ್ಯ ಉತ್ತರದಿಂದ ಉದಿಸಿದನೇ ಎಂದು ಉದ್ವೇಗಭರಿತನಾಗುವ ಗುಹನ ಪಾತ್ರ ತಕ್ಕ ಮಟ್ಟಿಗೆ ಉತ್ತಮವಾಗಿತ್ತು. ಉಮಾಕಾಂತರೊಂದಿಗಿನ ಸಂವಾದದಿಂದ ಸಹಜವಾಗಿ ರಘುರಾಮಣ್ಣ ಉದ್ವೇಗಭರಿತರಾಗಿದ್ದರು...!!

ಶ್ರೀರಾಮ ಸೀತಾ ಲಕ್ಷ್ಮಣರೊಂದಿಗೆ ಗಂಗಾನದಿಯನ್ನು ದಾಟುವ ಮಹತ್ತರ ಭಾವುಕ ಸನ್ನಿವೇಶವನ್ನು ಭಾವ ಪರವಶರಾಗಿ ಉಮಾಕಾಂತ ಭಟ್ಟರು ಮಾತಿನಲ್ಲೆ ತೋರಿಸಿಕೊಟ್ಟಲ್ಲಿಂದ ಹೃದಯ ತುಂಬುವುದಕ್ಕಾರಂಭಿಸಿತು.



ಸರ್ಪಂಗಳ ಈಶ್ವರ ಭಟ್ ರವರ ಲಕ್ಷ್ಮಣನ ಪಾತ್ರ ಸಮಯೋಚಿತವಾಗಿದ್ದು ಸರಳ ಹಾಗು ಅರ್ಥಗರ್ಭಿತ ಮೊನಚಾದಮಾತುಗಳಿಂದ ವಿಜ್ರಂಭಿಸಿತು. ನಂತರದ ಬಹು ನಿರೀಕ್ಷೆಯ ಸನ್ನಿವೇಶವೇ ರಾಮ ಭರತರ ಸಮಾಗಮ. ಯಕ್ಷಗಾನದ ವೈಶಿಶ್ಟ್ಯ ದರ್ಶನವೇ ಇಂತಹ ಪೌರಾಣಿಕ ಕಥಾನಕಗಳಲ್ಲಿದೆ. ಆಲ್ಲಿ ಸೇರಿದ್ದ ಅಷ್ಟೂ ಮಂದಿಗೆ ರಾಮ ಭರತರ ಪಾತ್ರವಾಗಲಿ , ಪಾದುಕಾ ಪ್ರದಾನದ ಕಥೆಯಾಗಲಿ ತಿಳಿಯದುದೇನಲ್ಲ. ಹಾಗಿದ್ದರೂ ಅತಿಯಾದ ನಿರೀಕ್ಷೆ ಇರಬೇಕಾದರೆ. ಮಾತಿನಲ್ಲೇ ಚಿತ್ರಕೂಟದ ಚಿತ್ರವನ್ನು ಬಿಡಿಸಿತೋರಬಲ್ಲ ಸಮರ್ಥ ಕಲಾವಿದರು ಇರಬೇಕಾದರೆ ಯಕ್ಷಗಾನವೆಂಬ ಕಲಾಮಾತೆ ಪುಣ್ಯಗರ್ಭೆಯೂ ಹಿರಣ್ಯು ಗರ್ಭೆಯು ಎಂಬುದರಲ್ಲಿ ಸಂಶಯವಿಲ್ಲ. ಎಂತೆಂತಹ ವಿದ್ವನ್ಮಣಿಗಳು ಈ ಮಾತಿನ ಪ್ರಪಂಚದಲ್ಲಿ ತಮ್ಮ ವಿದ್ವತ್ ಪೂರ್ಣ ಮಾತುಗಳಿಂದ ಸಂಚಲನ ಉಂಟುಮಾಡುತ್ತಾರೆ.ಆಶ್ಚರ್ಯವಾಗುವುದಿಲ್ಲವೇ?

ಭರತನನ್ನು ಕಂಡರಾಮ ಪದ್ಯಾಣರ ಬಂದೆಯ ಇನವಂಶವಾರಿಧಿ ಚಂದ್ರ... ಎಂಬ ಭಾವಾನಾತ್ಮಕ ಪದಕ್ಕೆ ನೆರೆದ ಜನಸಮೂಹ ತಮಗರಿವಿಲ್ಲದೇ ಮೌನವಾಯಿತು. ಎಂತಹ ಪದಗಳು ಇವುಗಳು. ರಾಮಾಲಿಂಗನವನ್ನು ಬಯಸಿದ ಭರತ ತನ್ನ ಪರಿವಾರವನ್ನು ಬಿಟ್ಟು ಓಡೋಡಿ ಬರುವ ಸನ್ನಿವೇಶ, ಬಂದು ರಾಮಾಲಿಂಗನದ ಬಿಗಿದಪ್ಪುಗೆಯಲ್ಲಿ ರಾಮನ ಬೆನ್ನನ್ನು ಕಂಬನಿಯಿಂದ ತೋಯಿಸುವ ಸನ್ನಿವೇಶವನ್ನು ಹಿರಿಯ ಕಲಾವಿದರು ಮಾತಿನಲ್ಲೇ ತೋರಿಸಿದಾಗ ರಾಮನ ಬೆನ್ನಿಗೆ ಬದಲಾಗಿ ನೆರೆದ ಮಂದಿಯ ಕಣ್ಣಿವೆಗಳೇ ತೊಯ್ದು ಹೋದವು. ಇದಲ್ಲವೆ ತಾಳಮದ್ದಲೆ? ಇದಲ್ಲವೇ ಯಕ್ಷಗಾನ? ನಾವೇಷ್ಟು ಭಾಗ್ಯವಂತರು ಎಂಬ ಅರಿವಾಗುವುದು ಇದನ್ನು ಸವಿಯುವಾಗ.

ಉದಯೋನ್ಮುಖ ಪ್ರತಿಭಾವಂತ ಪದ್ಮನಾಭ ಉಪಾಧ್ಯಾಯರ ಮದ್ದಲೆವಾದನವನ್ನು ಯಾವರೀತಿ ಉಲ್ಲೇಖಿಸಿದರೂ ಕಡಿಮೆಯೇ. ಸುತ್ತ ಮುತ್ತ ಹಬ್ಬಿದ ತೆಂಗು ಕಂಗಿನ ತೋಟದ ಮಧ್ಯೆ ಈ ಮದ್ದಲೆ ವಾದನ ಮಾರ್ದನಿಸುವುದನ್ನು ಹೊರಗೆ ಹೋಗಿ ಕೇಳಿದೆ. ಎಂತಹ ಅವರ್ಣನೀಯ ಅನುಭವವದು.



ಉತ್ತಮ ತಾಳ ಮದ್ದಲೆ ಅದೂ ಮಿತ್ರ ಬರೆಕೆರೆ ಕೇಶವಣ್ಣನ ಮನೆಯಲ್ಲಿ ಸವಿಯುವಾಗ ನಮ್ಮಲ್ಲಿ ಅದರ ಮೌಲ್ಯ ಇನ್ನೂ ಅಧಿಕವಾಗಿಬಿಡುತ್ತದೆ. ಉಮಾಕಾಂತರ ರಾಮನ ಪಾತ್ರದ ಮೂಲಕ ಹರಿದ ವಾಕ್ಪ್ರವಾಹಕ್ಕೆ ಸಿಕ್ಕಿ, ರಾಮನ ಅದರ್ಶಮಯ ವ್ಯಕ್ತಿತ್ವದ ಮುದ್ರೆಯನ್ನು ಹೃದಯದಲ್ಲಿ ಮೂಡಿಸಿ, ಅದನ್ನು ಭದ್ರವಾಗಿ ಕೈಯಿಂದ ಹಿಡಿದು, ಮೃದುವಾಗಿ ಸವರಿ, ಉತ್ತಮ ರಸಾನುಭವಕ್ಕೆ ಅವಕಾಶ ಮಾಡಿಕೊಟ್ಟ ಬರೆಕೆರೆ ಕುಟುಂಬಕ್ಕೆ ಮನಸಾ ಕೃತಜ್ಞತೆಯನ್ನು ಅರ್ಪಿಸುವ ಮನಸ್ಸಾಯಿತು.







Sunday, April 17, 2011

ನಡುವಿರುಳಗಾನ


ಯಕ್ಷಗಾನ ಎಂದರೆ ವೀರರಸವೇ ಪ್ರಾಧಾನ್ಯ . ಅಬ್ಬರದ ಚೆಂಡೆ ಸದ್ದು ಇಲ್ಲವಾದರೆ ಆಟ ರೈಸುದಿಲ್ಲ ಎಂದು ಹಲವರ ಅಭಿಪ್ರಾಯವಿದೆ. ಪೂರ್ಣಪ್ರಮಾಣದ ಆಟದಲ್ಲಿ ಇರುಳಿಂದ ಮುಂಜಾವಿನವರೆಗೆ ಇರುವ ವಿವಿದ ಜಾವಗಳಲ್ಲಿ ಇಂತಹುದೇ ಸನ್ನಿವೇಶ ಇರಬೇಕು. ತಡರಾತ್ರಿ ಹನ್ನೆರಡು ಗಂಟೆಯಿಂದ ನಾಲ್ಕು ಗಂಟೆ ಅವಧಿಯ ಆಟ ಎಲ್ಲದಕ್ಕಿಂತಲೂ ಪ್ರಾಧ್ಯಾನ್ಯವಿರುವ ಭಾಗ. ಹಾಗಿದ್ದರೂ ಇಲ್ಲಿ ಅಬ್ಬರದ ಚೆಂಡೆಯ ಬಳಕೆ ತುಂಬ ಕಡಿಮೆ ಎಂದು ಹೇಳಬಹುದು. ಸಾಮಾನ್ಯಾವಾಗಿ ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುವ ರಸಿಕರ ಅಭಿರುಚಿಯಂತೆ ಆಟ ನಡೆಯುತ್ತದೆ.ಅಥವಾ ಮುಂದಿನ ಸಾಲಿನ ಪ್ರೇಕ್ಷಕನು ಇದಕ್ಕೆ ಸಿದ್ದವಾಗಿರುತ್ತಾನೆ. ಪ್ರಧಾನ ಭಾಗವತ ಹಾಗೆ ಪ್ರಧಾನ ವೇಶಧಾರಿ ಹೀಗೆ ಮೇಳದ ಪ್ರಧಾನ ಕಲಾವಿದರು ಹೆಚ್ಚಾಗಿ ರಂಗವೇರುವ ಸನ್ನಿವೇಶಗಳು. ಇಂತಹ ಸನ್ನಿವೇಶಕ್ಕಾಗಿ ಪ್ರೇಕ್ಷಕ ತುದಿಗಾಲಲ್ಲಿ ಕಾದಿರುತ್ತಾನೆ. ಹಣಕೊಟ್ಟು ಖರೀದಿಸಿದ ಟಿಕೇಟಿನ ಮೌಲ್ಯದ ಸದ್ವಿನಿಯೋಗಕ್ಕಾಗಿ ಕಾದಿರುತ್ತಾನೆ. ಮೊದಲೆಲ್ಲ ಇಂತಹ ಸನ್ನಿವೇಶ ಕಳೆದೊಡನೆ ಆಟದವರು ಟೆಂಟ್ ಬಿಚ್ಚಲು ತೊಡಗುತ್ತಿದ್ದರು. ಚೆಂಡೆ ಪೆಟ್ಟಿನಿಂದ ಅಬ್ಬರಿಸುವ ಪ್ರಸಂಗ ಈ ಸಮಯಕ್ಕೆ ಬಂದಾಗ ಮಂದ್ರವಾಗಿಬಿಡುತ್ತವೆ. ಪ್ರೇಕ್ಷಕರ ನಡುವಿನ ಕಲರವ ಕಡಿಮೆಯಾಗಿಬಿಡುತ್ತದೆ. ಒಂದು ರೀತಿಯ ನಿದ್ದೆಯ ಮಂಪರಿಗೆ ಪ್ರೇಕ್ಷಕ ಹತ್ತಿರವಾಗುವಾಗ, ಮನಸ್ಸನ್ನು ಭಾವನೆಯ ತೊಟ್ಟಿಲಲ್ಲಿಟ್ಟು ತೂಗುವ ಕೆಲಸ ಕಲಾವಿದನದ್ದಾಗಿಬಿಡುತ್ತದೆ. ಚೆಂಡೆ ವಾದಕ ಚೆಂಡೆ ಬದಿಗಿರಿಸಿ ಚಹಾ ಅಥವಾ ತಾಂಬೂಲ ಸವಿದು ಮದ್ಲೆಗಾರನಾಗುವ ಸಮಯ. ಭಾಗವತ ತನ್ನ ರಾಗ ತಾಳಗಳ ಜಾಣ್ಮೆಯನ್ನು ಪ್ರದರ್ಶಿಸವ ಸಮಯ.ಇಂತಹ ಅತಿಪ್ರಾಮುಖ್ಯ ಸನ್ನಿವೇಶದಲ್ಲಿ ಚೆಂಡೆ ಗೌಣವಾಗಿದ್ದರೂ ಸಹ ಯಕ್ಷಗಾನ ಎಂದರೆ ಚೆಂಡೆಯ ಸದ್ದು ನೆನಪಿಗೆ ಬರುವುದು ಮಾತ್ರ ವಿಚಿತ್ರವಲ್ಲವೆ?

ಹಲವು ಪ್ರಸಂಗಗಳು ವಿಶಿಷ್ಟ ಸನ್ನಿವೇಶವನ್ನೆ ಹೆಣೆದು ಶ್ರುತಿಬರಿಸಿ ಇಂತಹ ಜಾವಕ್ಕೆ ಕಾದಿರುತ್ತವೆ. ಹೆಸರು ಮಾತ್ರದಲ್ಲೇ ರೌದ್ರತೆಯನ್ನು ಮೆರೆಯುವ ಗಧಾಯುದ್ದ, ವಾಲಿಸುಗ್ರೀವ ಕಾಳಗ ಅಥವಾ ಕೃಷ್ಣಾರ್ಜುನ ಕಾಳಗ ಮುಂತಾದ ಪ್ರಸಂಗಗಳು ತಮ್ಮ ಭಾವಾನತ್ಮಕ ಸನ್ನಿವೇಶಗಳನ್ನು ಇಂತಹವೇಳೆಯಲ್ಲಿ ಹೊಂದಿಕೊಂಡಿರುತ್ತದೆ.



ಕಳೆದ ವರ್ಷ ಎಡನೀರು ಮೇಳದವರ ಒಂದು ಆಟ ಉದಾಹರಿಸುವುದು ಹೆಚ್ಚು ಸೂಕ್ತ ಅನ್ನಿಸುತ್ತದೆ. ಬೆಂಗಳೂರಿನ ರಂಗ ಮಂದಿರದಲ್ಲಿ ಪ್ರದರ್ಶಿತವಾದ ಅಂದಿನ ಪಾಂಚ ಜನ್ಯ ಪ್ರಸಂಗ. ಹೆಸರು ಕೇಳಿ ಮನಸ್ಸಿನಲ್ಲೇ ಊಹಿಸಿ ಲೆಕ್ಖಾಚಾರ ಹಾಕಬಹುದು. ಕೃಷ್ಣನ ವೇಶ, ಪಂಚಜನನೆಂಬ ಅಸುರನ ವೇಶ. ಆದರೆ ಊಹನೆಗೆ ಮೀರಿ ಅಂದಿನ ಆಟದಲ್ಲಿ ಮಿಂಚಿದ್ದು ಬೇರೆಯದೆ ಪಾತ್ರಗಳು. ಸಾಮಾನ್ಯವಾಗಿ ಗೌಣವಾಗುತ್ತಿದ್ದ ಸನ್ನಿವೇಶವನ್ನು ಅಮ್ಮಣ್ಣಾಯರು ಸೊಗಸಾಗಿ ಹೆಣೆದರು. ಸಾಂದೀಪನಿ ಮಹರ್ಶಿಯ ಪಾತ್ರ ಅಂದು ಬಹಳವಾಗಿ ಮತ್ತು ಯಶಸ್ವಿಯಾಗಿ ವೈಭವೀಕರಿಸಲಾಯಿತು. ಆ ಸನ್ನಿವೇಶದ ಸೌಮ್ಯ ಪದಗಳು ಕಲಾವಿದನ ಅಭಿನಯ ಸಾಮಾರ್ಥ್ಯವನ್ನು ಒರೆಗೆ ಹಚ್ಚಿ ಹುದುಗಿದ್ದ ಕಲೆಯನ್ನು ಹೊರ ಹೊಮ್ಮಿಸಿತು. ಸೇರಿದ ಪ್ರತೀ ಯೊಬ್ಬ ಪ್ರೇಕ್ಶಕನ ಕಣ್ಣು ತೇವವಾಗಿದ್ದರೆ ಅದು ಪೂರ್ಣವಾಗಿಯೂ ಯಕ್ಷಗಾನದೊಳಗಣ ಸತ್ಯದರ್ಶನ ಮಾತ್ರವಲ್ಲ ಸತ್ವ ದರ್ಶನವೂ ಆಗಿರುತ್ತದೆ. ಚೆಂಡೆಯ ಸದ್ದು ನಿಶ್ಯಬ್ಧವಾದ ಸನ್ನಿವೇಶಗಳು. ಇಂತಹುದೇ ಸನ್ನಿವೇಶಗಳು ಪೂರ್ಣರಾತ್ರಿಯ ಅವಧಿಯ ಆಟಗಳಲ್ಲಿ ನಿರ್ದಿಷ್ಟ ವೇಳೆಗೆ ಹೊಂದಿಕೊಂಡು ಭಾವನಾ ಲೋಕಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಪೌರಾಣಿಕ ಪಾತ್ರಗಳೇ ಆಗಿದ್ದರೂ ಅವುಗಳು ಭಾವನಾ ಪ್ರಪಂಚಕ್ಕೆ ಸ್ಪಂದಿಸುವ ರೀತಿ ಹಾಗಿರುತ್ತದೆ. ಸಮರ್ಥ ಭಾಗವತ ಹೊಂದಿಕೆಯ ಹಿಮ್ಮೇಳದೊಂದಿಗೆ ಮುಮ್ಮೇಳದ ಸಮರ್ಥ ಕಲಾವಿದರ ಅಂತಃಸತ್ವವನ್ನು ಇಂತಹ ವೇಳೆಯಲ್ಲೇ ಹೊರಗೆಳೆಯ ಬಲ್ಲ. ಯಕ್ಷಗಾನ ಅಬ್ಬರದ ಚೆಂಡೆಯ ಸದ್ದು ಎಂದು ಊಹಿಸುವವರಿಗೆ ಇದು ತೀರ ವ್ಯತಿರಿಕ್ತವಾಗಿರುವಂತೆ ಭಾಸವಾಗುತ್ತದೆ.ಪ್ರಸಂಗ ಸನ್ನಿವೇಶಗಳಿಗೆ ಅದರದ್ದೆ ಅದ ಶಾಸ್ತ್ರೀಯ ಕ್ರಮಗಳು ಯಕ್ಷಗಾನದಲ್ಲಿ ಸರ್ವಗುಣವೂ ಅಡಕವಾಗಿದೆ ಎಂಬುದನ್ನು ತೋರಿಸುತ್ತದೆ.



ಆದರು ಇತ್ತೀಚೆಗೆ ಪ್ರಸಂಗ ನಿರ್ಣಯಿಸುವಾಗ ಈ ಕ್ರಮಗಳ ಬಗ್ಗೆ ಗಮನ ಕಡಿಮೆಯಾಯಿತೆಂದೆ ಅನಿಸುತ್ತದೆ. ಕಲಾವಿದರ ಸಾಮಾರ್ಥ್ಯವನ್ನು ಗಮನಿಸದೆ ಒಟ್ಟು ಅವೈಜ್ಞಾನಿಕವಾಗಿ ಪ್ರಸಂಗ ನಿರ್ಣಯಿಸುವ ಹಾಗಿರುತ್ತದೆ. ಸಮಯಕ್ಕೆ ಹೊಂದಿಕೊಂಡು ಸನ್ನಿವೇಶಗಳು ಬಂದರೆ ಅಪಸ್ವರವಾಗುವುದಿಲ್ಲ.ಶೃಂಗಾರ ಕರುಣ ವೀರ ಮುಂತಾದ ರಸಗಳ ಸನ್ನಿವೇಶಗಳು ಸಮಯವನ್ನು ಹೊಂದಿಕೊಂಡು ಯಕ್ಷಗಾನದಲ್ಲಿ ಬರುತ್ತದೆ ಎಂದು ನನ್ನ ಅನಿಸಿಕೆ. ನಡು ರಾತ್ರಿಯ ಶಾಂತವಾದ ಮೌನದ ನಡುವೆ ಗಂಭೀರ ಸನ್ನಿವೇಶಗಳು , ಪ್ರಮುಖ ಕಲಾವಿದರಿಗೆ ಮೀಸಲಾಗಿರಿಸುವುದರಿಂದ ಅದಕ್ಕೆಂದೇ ಇರುವ ಪ್ರೇಕ್ಷಕವರ್ಗವಿರುತ್ತದೆ. ಅಮ್ಮಣ್ಣಾಯರಂತಹ ಭಾಗವತರು ಇಂತಹ ಸಮಯದಲ್ಲಿ ಪೂರ್ಣಪ್ರಮಾಣದಲ್ಲಿ ವಿಜ್ರಂಭಿಸಿಬಿಡುತ್ತಾರೆ.ತಮ್ಮ ಸೌಮ್ಯಪದಗಳು ಮೊಳಗಿದಾಗ ನಿಜಕ್ಕೂ ಯಕ್ಷದ ಸಂಚಾರ ಆದಂತೆ ಭಾಸವಾಗುತ್ತ, ಪ್ರೇಕ್ಷಕ ಸಮ್ಮೋಹನಾಸ್ತ್ರದ ಗುರಿಯಾಗಿ ಬಿಡುತ್ತಾನೆ. ಸಮಯಕ್ಕೆ ತಕ್ಕ ಸನ್ನಿವೇಶದ ಸೃಷ್ಟಿ ಬಹುಶಃ ಯಕ್ಷಗಾನದಂತಹ ಸಮಷ್ಟೀ ಕಲೆಯಲ್ಲಿ ಮಾತ್ರ ಕಾಣಬಹುದೇನೋ? ಆದರು ಯಕ್ಷಗಾನವೆಂದರೆ ಚೆಂಡೆಯ ಸದ್ದು ಮೊದಲಿಗೆ ಸ್ಮೃತಿಪಟಲದಲ್ಲಿ ಬರುವುದು ವಿಚಿತ್ರವಲ್ಲವೆ? ಇಂತಹ ವೈವಿಧ್ಯಮಯ ವೈಶಿಷ್ಟ್ಯಗಳೇ ಯಕ್ಷಗಾನದ ನಿಜವಾದ ಸೆಳೆತಕ್ಕೆ ಕಾರಣ.



Thursday, March 31, 2011

ಸಂಪನ್ನ ವ್ಯಕ್ತಿಗಳು




ಜನಪ ಮತ್ಸ್ಯೇಶ್ವರನ ...ಎಂಬ ಅಂದಿನ ಒಡ್ಡೋಲಗದ ಪದಕ್ಕೆ ಕೀಚಕನೆಂಬ ದುರುಳನ ಪಾತ್ರದ ವ್ಯಕ್ತಿ ಚಿತ್ರಣವನ್ನು ಹದವಾಗಿ ಕಟ್ಟುತ್ತಾ ಕೀಚಕನನ್ನು ತೆರೆದಿಡುತ್ತಾ ಸಾಗಿದ ಸೂರಿಕುಮೇರಿ ಗೋವಿಂದ ಭಟ್ಟರ ಆ ದುರುಳ ಕೀಚಕನ ಪಾತ್ರ ಮೂಡಿಬಂದ ಬಗೆ ಯನ್ನು ಈ ಮೊದಲು ಹೇಳಿದ್ದೆ. ಪಾತ್ರ ಯಾವುದಾದರೂ ಕ್ಷಣದೊಳಗೆ ತಿಳಿಸಿದರೂ ಸಾಕು ಲೀಲಾಜಾಲವಾಗಿ ಆ ಪಾತ್ರವನ್ನು ಉತ್ತಮ ತಳಪಾಯದಲ್ಲಿ ಕಟ್ಟುವ ಸಮರ್ಥರು ಶ್ರೀ ಗೋವಿಂದ ಭಟ್ಟರು.ಕೀಚಕನೆಂಬ ವಿಲಕ್ಷಣ ದುಷ್ಟ ಪಾತ್ರವೊಂದಕ್ಕೆ ಪರಕಾಯ ಪ್ರವೇಶ ಮಾಡುವುದು ಅಷ್ಟು ಸುಲಭವಲ್ಲ. ಅತ್ಯಂತ ಸೌಮ್ಯ ವ್ಯಕ್ತಿತ್ವದವರೊಬ್ಬರು ಈ ಪಾತ್ರ ನಿರ್ವಹಣೆಯಲ್ಲಿ ಎಲ್ಲಿಯೂ ಆ ಸಹಜ ಸೌಮ್ಯತೆ ನುಸುಳದಂತೆ ಎಚ್ಚರ ವಹಿಸಿ ಕ್ರೌರ್ಯ ತುಂಬಿದ ಪಾತ್ರವನ್ನು ಯಶಸ್ವಿಯಾಗಿ ಬಿಂಬಿಸುವುದು ಗೋವಿಂದ ಭಟ್ಟರಂಥವರಿಗೆ ಮಾತ್ರ ಸಾಧ್ಯ. ಅಂದಿನ ಕೀಚಕನನ್ನು ಲೀಲಾಜಾಲವಾಗಿ ಕೇವಲ ಮಾತುಗಾರಿಕೆಯಿಂದಲೇ ನಿರ್ವಹಿಸಿದ ರೀತಿ ಅದ್ಭುತ. ಯಕ್ಷಗಾನದ ವೈಶಿಷ್ಟ್ಯದ ಸಂಕೇತವಾಗಿ ಸೂರಿಕುಮೇರಿಯನ್ನು ಸೂಚಿಸಲೇಬೇಕು.ವೈಯಕ್ತಿಕವಾಗಿ ಮಾತಾಡಿದಾಗ ಎಷ್ಟೊಂದು ಸೌಮ್ಯವಾಗಿ ಕಂಡುಬಂದ ವ್ಯಕಿಯೇ ಇದು? ಅಚ್ಚರಿಯಾಗದೆ ಇರದು.

ಇತ್ತೀಚೆಗೆ ಹಿಂದೂ ಆಂಗ್ಲ ಪತ್ರಿಕೆಯಲ್ಲಿ ಅವರ ಆತ್ಮ ಕಥೆಯ ಚಿತ್ರಣವನ್ನು ತೋರಿಸಿದ ಪುಸ್ತಕವಾದ ಯಕ್ಷೋಪಾಸನೆಯ ಬಗ್ಗೆ ಲೇಖನವೊಂದು ಬಂದಾಗ, ಅದನ್ನು ಓದಿ, ಈ ಧೀಮಂತ ವ್ಯಕ್ತಿತ್ವದ ಕ್ರಿಯಾಶೀಲತೆಯ ದ್ಯೋತಕವೆಂಬಂತಿರುವ ಭಟ್ಟರ ಬಗ್ಗೆ , ಅವರು ಸ್ಥಾಪಿಸಿದ ಅವರ ಮಾದರೀ ವ್ಯಕ್ತಿತ್ವದ ಬಗ್ಗೆ ಅಭಿಮಾನ ಉಕ್ಕುತ್ತದೆ. ಮಾತಿಗೆ ತೊಡಗಿದರೆ ಅವ್ಯಕ್ತವಾದ ಆಕರ್ಷಣೆಯನ್ನು ತಮ್ಮ ನಡೆ ನುಡಿಯ ವ್ಯಕ್ತಿತ್ವದಿಂದ ಉಂಟುಮಾಡುತ್ತಾರೆ. ಆವಾಗ ಉಂಟಾದ ಮಾನಸ್ಸಿನ ಭಾವನೆಯ ಸ್ಪಂದನವನ್ನು ಒಂದು ಸಲ ತೆರೆದಿಟ್ಟರೆ ಹೇಗೆ?



ಇಂದು ಗೋವಿಂದಣ್ಣನನ್ನು ಅರಿಯದ ಯಕ್ಷಗಾನ ಅಭಿಮಾನಿಗಳು ಇಲ್ಲವೇ ಇಲ್ಲ. ಅವರ ಮೊನಚಾದ ಸ್ವರಭಾರದ ವೈಶಿಷ್ಟ್ಯದ ಗೋವಿಂದಣ್ಣ ಸಹಜವಾಗಿ ಮಾತಾಡುವಾಗ ಬಹಳ ಸೌಮ್ಯತೆ ಅವರ ಧ್ವನಿಯಲ್ಲಿ ಹೊರ ಹೊಮ್ಮುತ್ತದೆ. ಶ್ವೇತ ವರ್ಣದ ಶ್ವೇತ ಮನಸ್ಸಿನ ಗೋವಿಂದಣ್ಣ ಅಕ್ಕರೆಯಿಂದ ಮಾತಾಡಿಸಿದರೆ ಸಮೀಪದ ಬಂಧುವೆಂಬ ಭಾವ ಸ್ಪುರಿಸಿದರೆ ಚಕಿತರಾಗಬೇಕಿಲ್ಲ. ಮೊನ್ನೆಯೂ ಅಷ್ಟೇ... ವೇಣೂರಿನ ಮನೆಯಂಗಳದ ತಾಳ ಮದ್ದಲೆ ಕಾರ್ಯಕ್ರಮದಲ್ಲಿ ಅವರನ್ನು ಬೇಟಿಯಾದೆ. ಕಂಡಾಗ ದೂರದಿಂದಲೇ ಅದೇ ಮುಗುಳು ನಗೆಯ ಸ್ವಾಗತ. ಬಳಿಗೆ ಹೋದರೆ ನಮಗೆ ಮಾತ್ರ ಕೇಳಿಸುವ ಸೌಮ್ಯ ಸಂಭಾಷಣೆ. ರಂಗದ ಮೇಲೆ ಬಡಿದೆಬ್ಭಿಸುವ ಮೊನಚಾದ ಸ್ವರಭಾರದ ಮಾತುಗಳು ಇವರದೇ ಎಂಬ ಅನುಮಾನ ಪ್ರತೀ ಬಾರಿ ಮಾತಾಡಿಸಿದಾಗ ಆಗುವುದುಂಟು. ಅಂದು ಕೂಡ ಘರ್ಜಿಸಿದ ಕೀಚಕನ ಪಾತ್ರ ಗೋವಿಂದಣ್ಣ ಎಂತಹ ಸರ್ವಾಂಗೀಣ ಕಲಾವಿದ ಎಂಬುದನ್ನು ಶ್ರುತಪಡಿಸಿತ್ತು.


ಆದರೂ ಒಂದಿದೆ. ಸರ್ವಾಂಗೀಣ ಕಲಾವಿದರು ಈ ಯಕ್ಷಗಾನದಲ್ಲಿ ಹಲವರಿರಬಹುದು. ಆದರೆ ಗೋವಿಂದಣ್ಣನ ಹಾಗೆ ವೈಯಕ್ತಿಕವಾಗಿಯೂ ಶುಭ್ರ ನಡೆಯವರು ತೀರಾ ವಿರಳ. ಹೇಳಿ ಕೇಳಿ ಯಕ್ಷಗಾನ ಕಲಾವಿದರ ವೈಯಕ್ತಿಕ ಬದುಕು ತುಂಬ ದುರ್ಭರದ ನಡುವೆಯೂ ತೀರ ಕೆಳಮಟ್ಟದಲ್ಲಿರುತ್ತದೆ. ತಾನು ಸರ್ವಾಂಗೀಣ ಕಲಾವಿದ ಎಂದು ದುರಹಂಕಾರದಿಂದ ನಡೆಯುವ ಯುವ ಕಲಾವಿದರು ವೈಯಕ್ತಿಕವಾದ ಇವರ ಈ ಶುಭ್ರ ನಡೆಯನ್ನು ಅನುಕರಿಸುವಂತಾಗಬೇಕು. ಯಾವುದೇ ದುರ್ವ್ಯಸನವಿಲ್ಲದ ಕಲಾವಿದರಾದ ಇವರ ಜೀವನ ಆದರ್ಶವಾಗಬೇಕು.


ತಾಳ ಮದ್ದಲೆಯ ನಡುವೆ ಬಿಡುವಿನಲ್ಲಿ ಹೊರಗೆ ತಾಂಬೂಲ ಸಿದ್ದ ಪಡಿಸುತ್ತ ಎಲೆಗೆ ಸುಣ್ಣ ಬಳಿಯುತ್ತಿದ್ದವರನ್ನು ಕಂಡು ಹತ್ತಿರ ಹೋದೆ. ಆವರೆಗೆ ವಿರಳವಾಗಿ ಮಾತನಾಡಲು ಅವಕಾಶ ಸಿಕ್ಕಿರಲಿಲ್ಲ. ನಾನು ಹೋದೊಡನೆ ತಾಂಬೂಲ ತಟ್ಟೆಯನ್ನು ನನ್ನತ್ತ ತಳ್ಳಿದರು. ನಾನು ಅಷ್ಟೆ , ಎಲೆ ಅಡಿಕೆ ಚಟ ಇಲ್ಲದಿದ್ದರೂ ಇಂತಹ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಊರಿನ ಎಲೆ ಅಡಿಕೆ ರುಚಿ ಸವಿಯುವ ಆನಂದವೇ ಬೇರೆ. ನಿಧಾನವಾಗಿ ಎಲೆಗೆ ಸುಣ್ಣ ಹಚ್ಚುತ್ತಾ ಸಹಜವಾದ ಮಾತುಗಳು. ಆತ್ಮಿಯತೆಯ ಮಾತುಗಳು, ಹೃದಯದ ಬಡಿತದೊಂದಿಗೆ ಹೃದಯ ಭಾವನೆಯ ಶ್ರುತಿಯನ್ನು ಪರೀಕ್ಷಿಸುತ್ತದೆ. ಅಷ್ಟೊಂದು ಮಧುರ ಮಾತುಗಳು. “ ಅಮ್ಮ ಹೇಗಿದ್ದಾರೆ .. ?” ಮುಂತಾದ ನಿತ್ಯ ಮಾತುಗಳಲ್ಲಿ ಕೂಡ ಯಕ್ಷಗಾನದ ಪ್ರಸಂಗಗಳಂತೆ ನಿತ್ಯ ನೂತನ ಹೊರ ಹೊಮ್ಮುತ್ತದೆ. ಕೆಲವು ಯಕ್ಷಗಾನ ಪ್ರಸಂಗಗಳು ರಂಗದ ಮೇಲೆ ಹಳೆಯದಾಗಲು ಸಾಧ್ಯವೇ ಇಲ್ಲ. ಆದಿನಕ್ಕೆ ಅದು ಹೊಸ ಪ್ರಸಂಗ!!! ಹಾಗೆ ಇವರ ಮಾತುಗಳು.


ನಮ್ಮ ಯಕ್ಷಗಾನದ ಮಿತ್ರ ಬಳಗದಲ್ಲಿ ಜಿ. ಬಿ. ( G.B.) ಎಂದು ಕರೆಸಲ್ಪಡುವ ಇವರ ಮೇಲಿನ ಅಭಿಮಾನದ ಬಗ್ಗೆ ಎರಡು ಮಾತಿಲ್ಲ. ಯಕ್ಷಗಾನದ ಸಹಜ ಅಭಿಮಾನ ಹೇಗೋ ಹಾಗೇ ಈ ಗೋವಿಂದಣ್ಣನ ಮೇಲಿನ ಅಭಿಮಾನ. (ಆದರೂ ಇಲ್ಲಿ ತೀರ ಅಪ್ರಸ್ತುತವಾದ ಮಾತು ಹೇಳ ಬಯಸುತ್ತೇನೆ. ನಮ್ಮೊಳಗೆ G.B. ಎಂಬ ಎರಡು ಸಂಕೇತಾಕ್ಷರದ ಕಿರು ಹೆಸರು ಎಷ್ಟು ಗೌರವಾನ್ವಿತವೋ ಅಷ್ಟೇ ವಿರೋಧಾಭಾಸದ ಪದ ಅದರ ವಿಲೋಮ B.G.ಎಂಬುದು. ಒಂದು ಪರ್ವತವಾದರೆ ಇನ್ನೊಂದು ಪ್ರಪಾತದಿಂದಲೂ ಕೇಳಗೆ ಏನಾದರು ಇದ್ದರೆ ಅದು. ಹಾಗಾಗಿ ಅತಿ ಜಾಗರೂಕತೆಯಿಂದ ನಾವು ನಮ್ಮೋಳಗೆ G.B. ಎಂಬ ಪದ ಉಚ್ಚಾರವಾಗುತ್ತದೆ. ಇದು ಇಲ್ಲಿ ತೀರಾ ಅಪ್ರಸ್ತುತ.)



ಅಂದಿನ ಕಾರ್ಯಕ್ರಮದ ಬಗ್ಗೆ ಮೊದಲೇ ಹೇಳಿದ್ದೆನಲ್ಲ. ಅತ್ಯುತ್ತಮ ಸಮ್ಮಿಲನದ ಹದವಾದ ಮಿಶ್ರಣದ ಕಾರ್ಯಕ್ರಮ. ಪ್ರಥಮವಾಗಿ ಮೂರು ಜನ ರಾಜ್ಯ ಪ್ರಶಸ್ತಿ ವಿಜೇತರು...ಬಲಿಪ ಕೋಳ್ಯೂರು ಸೂರಿಕುಮೇರಿ ಎಲ್ಲ ಒಂದೇ ವೇದಿಕೆಯನ್ನು ಹಂಚಿಕೊಂಡ ಅತಿ ವಿಶಿಷ್ಟ ಕಾರ್ಯಕ್ರಮ. ಬಲಿಪ್ಪರನ್ನು ಸಲುಗೆಯಿಂದ ಛೇಡಿಸುತ್ತಾ .. ಅವರ ಶ್ರುತಿಯನ್ನು ಪರೋಕ್ಷವಾಗಿ ಏರಿಸುತ್ತಾ ಕೆಣಕುತ್ತ ಸಾಗಿದ ಗೋವಿಂದಣ್ನನ ಕೀಚಕ ಪಾತ್ರವನ್ನು ಮುಗಿಸಿ ನೇಪಥ್ಯಕ್ಕೆ ಸರಿದ ಗೋವಿಂದಣ್ಣ ನನ್ನನ್ನು ಇರುವಂತೆ ಸನ್ನೆ ಮಾಡಿದರು. ಯಾಕೆಂದರೆ ನಾನಾಗಲೇ ಹೊರಟು ನಿಂತಿದ್ದೆ. ಕೋಳ್ಯೂರು ಮತ್ತು ಬಲಿಪ್ಪ ರ ಅರ್ಥ ಪದ ಎಂಬ ದ್ವಂದ್ವ ಕಾರ್ಯಕ್ರಮ ಸಮಯವನ್ನು ಸ್ವಲ್ಪ ಹೆಚ್ಚಿಗೆ ತೆಗೆದು ಕೊಂಡದ್ದು ಮೊದಲು ನಮಗೆ ಅರಿವಾಗಲೆ ಇಲ್ಲ. ಹೊರಗೆಲ್ಲ ಕತ್ತಲು ಹಬ್ಬಿದಾಗಲೇ ತಿಳಿದದ್ದು ಸಮಯ ಮೀರಿ ಹೋಗಿದೆ ಎಂದು.



ತರಾತುರಿಯಲ್ಲಿ ಎಲ್ಲರಿಗೂ ಶುಭವಿದಾಯವನ್ನು ತಿಳಿಸಿ ಹೊರಡುವವನಿದ್ದೆ. ಅತೀವ ಕುತೂಹಲ ಕೆರಳಿದ್ದು ಈ ಗೋವಿಂದಣ್ಣನ ಸನ್ನೆಯಿಂದ. ಏಕೆ ನಿಲ್ಲುವಂತೆ ಹೇಳಿದರು? ಕುತೂಹಲ ಹೆಚ್ಚು ವೇಳೆ ಕಾಯ್ದಿಡುವಷ್ಟು ವೇಳೆಯೇ ಇಲ್ಲ. ಮನೆಯೊಳಗಿಂದ ಕೈ ಚೀಲದೊಂದಿಗೆ ಬಂದ ಗೋವಿಂದಣ್ಣ ಸ್ವಲ್ಪ ದೂರ ಕರೆದು ಕೊಂಡು ಹೋಗಿ ಚೀಲದಿಂದ ಪುಸ್ತಕವೊಂದನ್ನು ತೆಗೆದು ಕೈಗಿರಿಸಿದರು. ಅವರ ಶಿಷ್ಯರಲ್ಲಿ ಒಬ್ಬರಾದ ಶ್ರೀ ತಾರಾನಾಥ ಬಲ್ಯಾಯ ಇವರು ಬರೆದ ಕಬ್ಬಿನ ಕೋಲು ಎಂಬ ಪುಸ್ತಕವಾಗಿತ್ತು. ಸರಿಯಾಗಿ ಅದನ್ನು ಗಮನಿಸುವುದಕ್ಕೂ ವೇಳೆ ಇಲ್ಲದ ಸಮಯ. ಪುಸ್ತಕದ ಮೌಲ್ಯವನ್ನು ಅವರ ಕೈಗಿರಿಸಿ ಪುಸ್ತಕವನ್ನು ನನ್ನ ಕೈಚೀಲಕ್ಕೆ ಸೇರಿಸಿ ಗೋವಿಂದಣ್ಣನಿಗೆ ನಮಸ್ಕಾರ ಬರುತ್ತೇನೆ ಎನ್ನುವಾಗ .ಯೋಚಿಸಿದರೆ ಇದರಲ್ಲಿ ಸ್ವಾರ್ಥ ಗುರುತಿಸುವುದು ಕಷ್ಟವಾಗುತ್ತದೆ. ಕೇವಲ ಚಲನಶೀಲ ವ್ಯಕ್ತಿತ್ವದ ಭಾವ ಗೋಚರಿಸಿ,  ಅಬ್ಬಾ ಈ ವಯಸ್ಸಿನಲ್ಲೂ ಇವರ ಚಲನ ಶೀಲ ಮನಸ್ಸಿನ ಕ್ರಿಯಾಶಕ್ತಿ ಯನ್ನು ನೆನೆಸಿಕೊಂಡೆ. ರಂಗದಿಂದ ಬೇರೆಯದೇ ಆದ ಇವರ ಚಟುವಟಿಕೆಗಳನ್ನು ನೋಡಿದಾಗ ಅಶ್ಚರ್ಯವಾಗುತ್ತದೆ. ಇಂತಹ ಕ್ರಿಯಾತ್ಮಕ ಪ್ರವೃತ್ತಿ ಇನ್ನೂ ಮುಂದುವರಿಯುವ ಸಂಕೇತವಾಗಿ ಗೋವಿಂದಣ್ಣ ಕೃತಿಯೊಂದನ್ನು ಬರೆಯುತ್ತಿದ್ದಾರಂತೆ “ ಯಕ್ಷಗಾನ ನಾಟ್ಯ ಶಾಸ್ತ್ರ” . ಈ ಗ್ರಂಥ ಅಪೂರ್ವವೆನಿಸುವ ಸರ್ವಗುಣಗಳನ್ನು ಹೊಂದಿರಬಹುದು. ಯಾಕೆಂದರೆ ಯಕ್ಷಗಾನದಲ್ಲಿ ಭರತನಾಟ್ಯವನ್ನು ಅತ್ಯಂತ ಮಾರ್ಮಿಕವಾಗಿಯೂ ಉಪಯುಕ್ತವಾಗಿಯೂ ಬಳಕೆಗೆ ತಂದವರು ಗೋವಿಂದಣ್ಣ. ಹಾಗಾಗಿ ಹಲವು ನಿರೀಕ್ಷೆಗಳು ಈ ಕೃತಿಯ ಬಗ್ಗೆ ಇರುವುದು ಸಹಜವೇ ಅಗಿದೆ.



ಹಾಗಾಗಿ ಗೋವಿಂದಣ್ಣ ಇಂದು ಕೇವಲ ಯಕ್ಷಗಾನದ ಪಾತ್ರವಾಗಿ ನಮ್ಮ ಮುಂದೆ ಇಲ್ಲ್ಲ ಸಮಗ್ರ ವ್ಯಕ್ತಿ ಜೀವನದ ಸಂಕೇತವಾಗಿದ್ದಾರೆ ಎಂದೇ ಅನ್ನಿಸುತ್ತದೆ. ಯಕ್ಷಗಾನವಾಗಲಿ ಅಥವಾ ವೈಯಕ್ತಿಕವಾಗಲಿ ಇಂತಹ ಸಂಪನ್ನ ವ್ಯಕ್ತಿಗಳು ಅತೀ ವಿರಳ



Thursday, March 24, 2011

ದ್ವಂದ್ವಗಳು



ವೈವಿಧ್ಯಮಯ ಜೀವನ ಶೈಲಿಯ ಬದುಕು ಸಹಜವಾಗಿರುವಾಗ ಎಲ್ಲದರಲ್ಲೂ ವೈವಿಧ್ಯವನ್ನು ಕಾಣುವುದು ಸಹ ಸಹಜವಾಗಿರುತ್ತದೆ.ವಿಭಿನ್ನ ಅಭಿರುಚಿಗಳ ಮನೋಭಾವ ಈ ವೈವಿಧ್ಯಕ್ಕೆ ಆಕರವಾಗಿ ಪರಿಣಮಿಸುತ್ತದೆ. ಒಟ್ಟು ವ್ಯವಸ್ಥೆಗೆ ಅದು ಪೂರಕವೋ ಮಾರಕವೋ ಆ ಚಿಂತನೆ ಒತ್ತಟ್ಟಿಗಿಟ್ಟು ಅಭಿರುಚಿಯ ಬೆನ್ನು ಹತ್ತಿದಾಗ ಜಗತ್ತಿನ ವೈವಿಧ್ಯತೆಯ ಅರಿವಾಗುತ್ತದೆ. ನಾವು ಉಣ್ಣುವುದರಲ್ಲಿ ಧರಿಸುವುದರಲ್ಲಿ ನಡೆಯುವ ಹಾದಿಯಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಎಲ್ಲವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅವಿಷ್ಕಾರಗೊಳ್ಳುತ್ತಾ ಒಂದು ಪರಿಷ್ಕಾರಕ್ಕೆ ಒಳಗಾಗುತ್ತೇವೆ. ಬಾಯಾರಿಕೆಗೆ ಬರೀ ನೀರು ಎಂಬುದು ಪರಿಶುದ್ದ ಶಾಸ್ತ್ರೀಯ ಕ್ರಮವಾದರೆ, ಅದೇ ನೀರಿಗೆ ತಮ್ಮ ಅಭಿರುಚಿಗೆ ಹೊಂದಿಕೊಂಡು ಮಿಶ್ರ ಮಾಡಿ ಅಥವಾ ರೂಪಾಂತರಿಸಿ ಸೇವಿಸುವ ವಿಧಾನವನ್ನು ರೂಪಿಸಿಕೊಂಡಲ್ಲಿ ಅದು ಒಂದು ಅವಿಷ್ಕಾರ ಎಂದುಕೊಳ್ಳಬಹುದು. ಆದರೂ ಶಾಸ್ತ್ರೀಯವಾದದ್ದು ಅದು ಸಹಜವಾಗಿ ಅಳಿಸಿ ಹೋಗದೆ ಕೆಲವೊಂದು ಸಲ ತನ್ನ ಅಸ್ತಿತ್ವವನ್ನು ಸಾರುತ್ತಾ ಅದರ ಅನಿವಾರ್ಯತೆ ಮತ್ತು ಮೌಲ್ಯವನ್ನು ತೋರಿಸಿಕೊಡುತ್ತದೆ.

ಒಂದಾಗಿ ಇಲ್ಲದೆ ಇರುವುದೇ ದ್ವಂದ್ವ. ಕಲಾಪ್ರಾಕಾರಗಳಲ್ಲಿ ಅಭಿರುಚಿಗೆ ಅನುಸಾರವಾಗಿ ಬಳಕೆಗೆ ಆವಿಷ್ಕಾರಗಳು ಹಲವಾರು ಬಗೆ. ಇದು ಪೂರಕವಾಗಿಯೋ ಮಾರಕವಾಗಿಯೋ, ಅದರ ಸಾಧಕ ಬಾಧಕಗಳು ಏನೇ ಇರಲಿ ರಂಜನೆಯ ದೃಷ್ಟಿಯಲ್ಲಿ ಕಲೆಯ ಬೆಳವಣಿಗೆಯಲ್ಲಿ ಅಥವಾ ರೂಪಾಂತರಗಳಲ್ಲಿ ಇದು ಪ್ರಧಾನ ಪಾತ್ರವಹಿಸಿದೆ. ಒಂದೇ ಏಕತಾನತೆಯ ಕ್ರಮಗಳಿಂದ ಹೊರಬಂದು ಬದಲಾವಣೆಯ ದಿಶೆಯಲ್ಲಿ ಹಲವು ಪ್ರಯೋಗಗಳಿಗೆ ಒಳಗಾಗಿದೆ ಮಾತ್ರವಲ್ಲ ಒಳಗಾಗುತ್ತಲು ಇದೆ. ಭಿನ್ನ ರೂಪಗಳನ್ನು ಒಟ್ಟಾಗಿ ಸವಿಯುವ ಮನೋಭಾವದಿಂದ  ಕಲಾಪ್ರಾಕಾರಗಳು ಹಲವು ಪ್ರಯೋಗಳಿಗೆ ತನ್ನನ್ನು ಒಡ್ಡಿಕೊಂಡು ಹತ್ತು ಹಲವು ಕವಲುಗಳಾಗಿ ಬೆಳೆದು ನಿಂತುದನ್ನು ಬೆರಗಿನಿಂದ ಅವುಗಳ ರೂಪಗಳನ್ನು ಅವಲೋಕಿಸಿದರೆ ಕಲೆ ಎಂಬುದರ ವಿಸ್ತ್ರತ ಪ್ರಪಂಚದ ವೈವಿಧ್ಯತೆಯನ್ನೇ ಒಂದು ವಿಷಯವನ್ನಾಗಿ ಅಧ್ಯಯನ ಮಾಡಬಹುದು ಎಂದೆನಿಸುತ್ತದೆ.


ಯಕ್ಷಗಾನ ಕಲೆಯೂ ಸಹ ಈ ಅವಿಷ್ಕಾರಗಳಿಗೆ ಒಳಗಾಗಿ ರಂಜನೆಯ ದೃಷ್ಟಿಯಿಂದಲೋ ಕ್ರಿಯಾತ್ಮಕ ದೃಷ್ಟಿಗೋ ಸಾಕಷ್ಟು ಪ್ರಯೊಗಕ್ಕೆ ಒಳಗಗಾಗಿದೆ. ಬಯಲಾಟದಲ್ಲಿ ಜೋಡಾಟ, ಕೂಡಾಟ  ಹೀಗೆ ಸ್ಪರ್ಧಾತ್ಮಕ ಜಗತ್ತನ್ನು ಸಾಧ್ಯವಾದಷ್ಟು ಅನಾವರಣ ಗೊಳಿಸುವ ಪ್ರಯತ್ನ ಸಾಕಷ್ಟು ಬಾರಿ ಅಗಿದೆ. ಮಾತ್ರವಲ್ಲ ಅದು ತನ್ನದೇ ಆದ ಜನಪ್ರಿಯತೆಯನ್ನು ಗಳಿಸಿದೆ. ಹೊಸ ಹೊಸ ನವೀನ ಕ್ರಮಗಳು ಯಥೇಚ್ಛವಾಗಿ ಬಳಕೆಯಾಗುವಾಗ ಹಿಮ್ಮೇಳದಲ್ಲಿ ಸುಲಭವಾಗಿ ಪ್ರಯೋಗಕ್ಕೆ ಬಂದಂತಹುದು ಈ ದ್ವಂದ್ವಗಳಾಗಿರಬಹುದು.  .ಯಕ್ಷಗಾನದಲ್ಲಿ ಮೊದಲ ಕಲಾವಿದರಾಗಿ ಅಥವಾ ಮುಖ್ಯ ಸೂತ್ರಧಾರನಾಗಿ ಭಾಗವತನೇ ಆದರೂ ಇಂದು ಭಾಗವತನ ಶ್ರಮವನ್ನು ಕಡಿಮೆ ಮಾಡುವಲ್ಲಿ ಅಥವಾ ಭಾಗವತನ ಕಾರ್ಯವ್ಯಾಪ್ತಿಯನ್ನು ಕಡಿಮೆಗೊಳಿಸುವಲ್ಲಿ ಈ ದ್ವಂದ್ವಗಳು ಪ್ರಧಾನ ಪಾತ್ರವಹಿಸಿದೆ. ಅದರ ಗುಣಾವಗುಣಗಳು ಏನೇ ಇರಲಿ ಇಂದು ಈ ದ್ವಂದ್ವ ಕಲಾಪ್ರದರ್ಶನಗಳು ಜನಪ್ರಿಯತೆಗೆ ಮಾತ್ರವಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅದರ ಅಸ್ತಿತ್ವದ ಅನಿವಾರ್ಯತೆಯನ್ನು ತೋರಿಸಿಕೊಟ್ಟಿದೆ.






[   
                                   ಇತ್ತೀಚಿಗಿನ ಅತ್ಯಂತ ಜನಪ್ರಿಯ ಜೋಡಿ ಹೊಸ ತಲೆಮಾರಿನೊಂದಿಗೆ ಹಳೆ ತಲೆ.    ]

ಈ ದ್ವಂದ್ವಗಳ ಜಗತ್ತನ್ನು ಹೊಕ್ಕರೆ ಅದ್ಭುತ ಅನುಭವಾಗಬಲ್ಲುದು. ಇದರಲ್ಲೆ ವರ್ಗೀಕರಿಸಲು ಅಸಾಧ್ಯವಾದಷ್ಟು ವೈವಿಧ್ಯತೆಗಳು ಪ್ರಯೋಗಕ್ಕೆ ಬಂದಿವೆ , ಮಾತ್ರವಲ್ಲ ಪ್ರಯೋಗವಾಗುತ್ತಲೂ ಇವೆ. ಅದರೂ ದ್ವಂದ್ವಗಳು ಮಾತ್ರ ಇರುವ ಗಾನವೈಭವದಂತಹ ರಂಜನೆಯ ಕಾರ್ಯಕ್ರಮಗಳು ಇಂದು ಬಹಳ ಜನಪ್ರಿಯವಾಗಿವೆ. ವಿಭಿನ್ನ ಗುಣ ಸ್ವಭಾವ ಕಲಾ ಸಾಮಾರ್ಥ್ಯವನ್ನು ಹೊಂದಿರುವ ಕಲಾವಿದರು ಒಂದೇ ವೇಳೆಯಲ್ಲಿ ಒಂದೇ ವೇದಿಕೆಯಲ್ಲಿ ತಮ್ಮ ನೈಪುಣ್ಯತೆಯನ್ನು ಒರೆಗೆ ಹಚ್ಚುತ್ತಾರೆ. ಮಾತ್ರವಲ್ಲ ವಿವಿಧ ಜತೆಗಾರಿಕೆಯ ಪ್ರಯೋಗ ಇಲ್ಲಿ ಸುಲಭದಲ್ಲಿ ನೆರವೇಸಲ್ಪಡುತ್ತದೆ.

ದ್ವಂದ್ವ ಪ್ರಯೋಗಗಳು ಹಿಮ್ಮೇಳದ ಭಾಗವತಿಕೆಯಲ್ಲಿ ಪ್ರಯೋಗಿಸಲ್ಪಡುವುದೇ ಹೆಚ್ಚು. ದ್ವಂದ್ವ ಎಂಬ ಪದ ಯಕ್ಷಗಾನದಲ್ಲಿ ಬಳಕೆಗೆ ಬಂದುದು ಕೂಡ ದ್ವಂದ್ವ ಎಂದರೆ ಇಬ್ಬರ ಭಾಗವತಿಕೆ ಎಂದೇ ಅರ್ಥ.ದ್ವಂದ್ವ ಹಾಡುಗಾರಿಕೆ ಯಕ್ಷಗಾನ ಬಯಲಾಟಗಳಲ್ಲಿ ಇವೆಯಾದರೂ ತಾಳಮದ್ದಲೆಗೆ ಹೊಂದಿಕೊಂಡಷ್ಟು ಬಯಲಾಟಗಳಿಗೆ ಸೂಕ್ತವೆನಿಸುವುದಿಲ್ಲ. ವಿಮರ್ಶಕರೊಬ್ಬರ ಅಭಿಪ್ರಾಯದಂತೆ ಯಕ್ಷಗಾನದಲ್ಲಿ ಎರಡು ಭಾಗವತರು ತಮ್ಮ ನಾದ ವೈಭವವನ್ನು ಪ್ರದರ್ಶಿಸಿದರೆ ಅದು ಯಕ್ಷಗಾನ ಭಾಗವತಿಕೆಯ ಬದಲಾಗಿ ಯಕ್ಷಗಾನ ರಸಮಂಜರಿ(ಆರ್ಕೆಸ್ಟ್ರಾ) ಆಗುವುದಲ್ಲದೆ ಅಲ್ಲಿ ಅಭಿನಯಿಸುವ ಕಲಾವಿದ ಅಥವಾ ವೇಷಧಾರಿ ಪ್ರೇಕ್ಷಕನಾಗಿ ಬದಲಾಗುತ್ತಾನೆ.ಹಾಗಾಗಿ ತಾಳ ಮದ್ದಲೆಯಲ್ಲಿ ರಂಜನೆಯ ದೃಷ್ಟಿಯಿಂದ ಕೆಲವೊಮ್ಮೆ ಯಶಸ್ವಿಯಾಗುತ್ತದೆ.
   

ದ್ವಂದ್ವ ಜತೆಗಾರಿಕೆಯಲ್ಲೂ ಹಲವು ಹೊಸತನದ ಪ್ರಯೋಗಗಳಾಗಿವೆ. ಭಾಗವತರ ಶೈಲಿಗೆ ಅನುಸಾರವಾಗಿ ಹಲವು ವಿಧದ ದ್ವಂದ್ವ ಪ್ರಯೋಗಗಳಾಗಿವೆ. ಇತ್ತೀಚೆಗೆ ಅತ್ಯಂತ ಯಶಸ್ವೀ ದ್ವಂದ್ವ ಅಂದರೆ ಬಲಿಪ್ಪ ಮತ್ತು ಹೊಳ್ಳರದ್ದು. ಒಬ್ಬರು ಪರಂಪರೆಯ ಸೇನಾನಿ ಇನ್ನೊಬ್ಬರು ಸಮನ್ವಯದ ಹರಿಕಾರ. ಇಬ್ಬರದೂ ಏರು ಶ್ರುತಿ. ಒಬ್ಬರನ್ನು ಒಬ್ಬರು ಅನುಸರಿಸುವ ಹೊಂದಾಣಿಕೆ ಇಲ್ಲಿ ಎಲ್ಲವನ್ನೂ ಕಾಣಬಹುದು. ಇಬ್ಬರು ಸ್ವರ ಏರಿಸಿ ಹಾಡಲು ತೋಡಗಿದರೆ ಕೊಬ್ಬಿದ ಗೂಳಿ ಬುಸುಗುಟ್ಟುತ್ತಾ ನುಗ್ಗಿದ ಹಾಗೆ. ರುದ್ರಗಂಭೀರದ ಸಮುದ್ರ ಘರ್ಜನೆ ಮೊಳಗಿದ ಹಾಗೆ ಕೇಳುತ್ತಿರುವ ಪ್ರೇಕ್ಷಕ ಆ ಶ್ರುತಿಗೆ ತನ್ನ ಧ್ವನಿಯನ್ನು ಸೇರಿಸ ಹೋಗಿ  ರೋಮ ನೆಟ್ಟಗಾಗಿ  ಲೋಕದ ಇರವನ್ನೇ ಮರೆತ ಅನುಭವ.ಇದು ಒಂದು ಬಗೆಯುದಾದರೆ . ಪದ್ಯಾಣ ಮತ್ತು ಹೊಳ್ಳ ಸಂಪ್ರದಾಯದ ಚೌಕಟ್ಟಿನಲ್ಲೇ ರಾಗದಾಲಪನೆಯನ್ನು ಮೊಳಗಿಸಿ ಕೇಳುಗನ ಮನಸ್ಸಿಗೆ ಲಗ್ಗೆಯಿಕ್ಕುವ ಪ್ರಯತ್ನ ಆ ದ್ವಂದ್ವ ರಾಗ ವೈಭವ ಕೇಳಿದಾಗ ಮನಸ್ಸಿನ ಎಲ್ಲ ಭಾವನೆ ಒಮ್ಮಿಂದೊಮ್ಮೆಲೇ ನಿಯಂತ್ರಣವಿಲ್ಲದೆ ಹರಿದ ಹಾಗೆ. ಇನ್ನು ತೆಂಕಬೈಲು ಶಾಸ್ತ್ರಿಗಳು ಕೆಲವೊಮ್ಮೆ  ದ್ವಂದ್ವದೊಳಗೆ ಸಿಲುಕಿ ತಲ್ಲೀನರಾಗಿ ರಾಗ ಆಲಾಪಿಸಿದರೆ ಮುಂಜಾವ ಆಗುತ್ತಿದ್ದಂತೆ ಮಿನುಗುತ್ತಿದ್ದ ತಾರೆಗಳು ಸೂರ್ಯೋದಯವಾಗುತ್ತಿದ್ದಂತೆ ಹೇಗೆ ಆ ಪ್ರಭೆಗೆ ಮಾಯವಾಗುತ್ತಿದೆಯೋ ಹಾಗೆ ಆ ರಾಗದ ಆಲಾಪನೆಗೆ ಮತ್ತೆ ಎಲ್ಲವೂ ಕೇಳದ ಅನುಭವ.ಎಲ್ಲರ ರಾಗವೈಭವಕ್ಕೆ ಹುಚ್ಚೆದ್ದು ಕುಣಿದ ಕೇಳುಗನ ಮನಸ್ಸನ್ನು ತಣಿಸಿ ರಮಿಸಿ ಮುದ್ದಿಸಿ ಮಲಗಿಸಿದ ಹಾಗೆ.ಇವರದೆಲ್ಲ ಒಂದು ಬಗೆಯಾದರೆ ಅಮ್ಮಣ್ಣಾಯರ ಶೈಲಿ ಎಲ್ಲದಕ್ಕಿಂತಲೂ ತೀರ ಭಿನ್ನ. ಯಾರ ಯಾವ ಪ್ರೇರಣೆಗೂ ನಿಲುಕದೆ ತಣ್ಣನೆ ತನ್ನದೇ ಶೈಲಿಯಲ್ಲಿ ಶಹಭಾಸ್ ಗಿಟ್ಟಿಸುವ ಪರಿ ಎಲ್ಲವೂ ಅಮೋಘ


.[ 
ಜನಪ್ರಿಯತೆ ಗಳಿಸಿದ ಇನ್ನೊಂದು ಜತೆಗಾರಿಕೆ ಪದ್ಯಾಣ - ಹೊಳ್ಳ         ]



ಹೀಗೆ ಗಾನ ವೈಭವದಂತಹ ಕಾರ್ಯಕ್ರಮಗಳಲ್ಲು ಹಲವು ವಿಶೇಷತೆಯನ್ನು ಗುರುತಿಸಬಹುದು.ಇದರಲ್ಲೂ ಕೆಲವೊಮ್ಮೆ ತಮಟೆ, ಡೋಲು, ಕೊಳಲು, ಕೋಲು ಇವುಗಳನ್ನು ಸೇರಿಸಿ ಬದಲಾಣೆಯನ್ನು ತೋರಿಸಿದರು ಯಕ್ಷಗಾನದ ಹಾಡುಗಾರಿಕೆ ಇವುಗಳು ಸ್ವಲ್ಪವೂ ಒಗ್ಗಿಕೊಳ್ಳದೆ ಶುದ್ದವಾದ ನೀರಿನ ಹರಿವಿನಲ್ಲಿ ರಾಡಿಯಾದ ನೀರು ಬದಿಯಲ್ಲೇ ಬೇರೆಯಾಗಿ ಹೋಗುವಂತೆ ಭಾಸವಾಗುತ್ತದೆ. ಶುದ್ದ ಶಾಸ್ತ್ರೀಯ ಸಂಗೀತಕ್ಕೂ ಯಕ್ಷಗಾನದ ರಾಗಗಳಿಗೂ ಬಹಳ ವೆತ್ಯಾಸವಿದ್ದರೂ ಅದನ್ನು ಗಮನದಲ್ಲಿ ಇಡದೆ ಇಂತಹ ಪ್ರಯೋಗಗಳು ಅಸಹಜ ಎಂದೆನಿಸುತ್ತದೆ. ಒಂದು ಕ್ಷಣದಲ್ಲಿ ಬಿದ್ದ ಚಪ್ಪಾಳೆಯನ್ನೇ  ಅಂಗೀಕಾರ ಎಂದು ಭಾವಿಸಿಬಿಡುವ ಪ್ರಮೇಯ ಒದಗಿ ಬಂದಿದೆ.


 [  
ತೆಂಕಬೈಲು ಅಮ್ಮಣ್ಣಾಯ ಪುತ್ತಿಗೆಯವರ ದ್ವಂದ್ವ ರಸಿಕರ ಹೃದಯಕ್ಕೆ ಲಗ್ಗೆ ಇಡುವ ಪರಿ            ]


 ಎನೇ ಅದರು ಕೆಲವೊಂದು ಸಲ ದ್ವಂದ್ವ ಹಾಡುಗಾರಿಗೆ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ.ವಿಭಿನ್ನ ಮಾದರಿಯ  ದ್ವಂದ್ವ ಹಾಡುಗಾರಿಕೆಯನ್ನು ಸಂಗ್ರಹದಿಂದ ಕೇಳಿದಾಗ ಅಗುವ ಆನಂದವೇ ಬೇರೆ. ಹೀಗೆ ಒಂದು ಸಲ ಇವುಗಳೆನ್ನೆಲ್ಲ ಅವಲೋಕಿಸಿದಾಗ ಇಂತಹ ಚಿಂತನೆಗಳಿಗೆ ಕಾರಣವಾಗಿಬಿಡುತ್ತದೆ.


ಆದರೂ ವಿಭಿನ್ನ ಚಿಂತನಾ ಶೀಲ ಇರುವ ಇಬ್ಬರು ಭಾಗವತರು ಒಂದು ಪ್ರಸಂಗವನ್ನು ಒಟ್ಟಾಗಿ ಮುಂದುವರೆಸುವಲ್ಲಿ ಬಹಳವಾದ ಹೊಂದಾಣಿಕೆ ಅಗತ್ಯ. ಮಾತ್ರವಲ್ಲ ಕಾರ್ಯಕ್ರಮದ ಯಶಸ್ಸಿಗೂ ಇದು ಅನಿವಾರ್ಯ. ಅದರೂ ಯಕ್ಷಗಾನದಂತಹ ಕಲೆಯಲ್ಲಿ ಈ ದ್ವಂದ್ವಗಳು ಹೊಂದಿಕೆಯೆ ಅಗದೆ ಮೂಲ ರೂಪವನ್ನೆ ಕೆಡಿಸಿಬಿಡುತ್ತದೆ. 











[
ಪುತ್ತಿಗೆ ಅಮ್ಮಣ್ಣಾಯರ ದ್ವಂದ್ವ ಒಂದು ಧುಮ್ಮಿಕ್ಕುವ ಜಲಪಾತ ಇನ್ನೊಂದು ಮಂದಗಾಮಿನಿ  ]



ದ್ವಂದ್ವ ಬೇಕೆ ಬೇಡವೆ ಎಂದು ಪ್ರತಿಪಾದಿಸುವಲ್ಲಿ ಮನಸ್ಸಿನೊಳಗೆ ದ್ವಂದ್ವ ಯೋಚನೆ ಉಂಟಾದರೆ ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಅದನ್ನು ಅನುಭವಿಸುವಾಗ ಉಂಟಾಗುವ ಅನಿರ್ವಚನೀಯ ಆ ಅನುಭವವೇ ಇದಕ್ಕೆ ಕಾರಣ. ಚರ್ಚೆ ಸಂವಾದ ಅಭಿಪ್ರಾಯಗಳು ಏನೇ ಇರಲಿ. ಪರಂಪರೆಯ ಹಾದಿ ಬಿಟ್ಟು ಯಕ್ಷಗಾನ ಹಿಮ್ಮೇಳ ಈ ದ್ವಂದ್ವ ಪ್ರಪಂಚಕ್ಕೆ ತೆರೆದು ಕೊಂಡಲ್ಲಿ ನಮ್ಮಂತಹ ಕೇಳುಗರ ಮನಸ್ಸನ್ನು ತಣಿಸುವಲ್ಲಿ ಇದು ತುಂಬ ಸಹಾಯ ಮಾಡಿದೆ. ದೂರದ ಊರಿಗೆ ಹೋಗಿ ಯಕ್ಷಗಾನ ನೋಡುವುದಾಗಲಿ ಶ್ರಮವಹಿಸಬೇಕಾದ ಸನ್ನಿವೇಶದಲ್ಲಿ,  ಯಕ್ಷಗಾನ ಹಿಮ್ಮೇಳದ ವೈಭವದಲ್ಲಿನ ಇಂತಹ ದ್ವಂದ್ವ ಕಾರ್ಯಕ್ರಮಗಳ ಧ್ವನಿ ಮುದ್ರಣವನ್ನು ಇಲ್ಲಿ ದೂರದಲ್ಲಿ ಕೇಳಿಸಿಕೊಂಡು ಇರುಳನ್ನು ಹಗಲು ಹಗಲನ್ನು ಇರುಳು ಮಾಡಿಕೊಳ್ಳುವ ನಮ್ಮ ಹಾಗಿನ ಕಲಾಸಕ್ತರಿಗೆ ಸದುಪಯೋಗವಾಗಿದೆ ಎಂದು ಹೇಳಬಹುದು.  ಬೇಕಾದಲ್ಲಿ ಇಲ್ಲಿ ಕೊಟ್ಟ ಯಕ್ಷಗಾನ ಪದಗಳನ್ನು ಆಲಿಸಲು ಸಾಧ್ಯವಾದರೆ ಆಲಿಸಿ ನೋಡಿ ಇದರಲ್ಲಿ ಯಾವುದು ಉತ್ತಮ ಎಂದು ಉಲ್ಲೇಖಿಸುವುದಕ್ಕೆ ಅಸಾಧ್ಯ. ಯಕ್ಷಗಾನ ವೈಭವದ ಸೊಗಸು ಇರುವುದೇ ಅಲ್ಲಿ. ಅಲ್ಲವೆ?  ಇವುಗಳನ್ನು ಕೇಳಿದಾಗ ಏನನಿಸುತ್ತದೆ?