ಆದ್ಢೂರಿ ಅಥವಾ ಆಡಂಬರ ಎಂಬುದು ಒಂದು ಜೀವನ ಶೈಲಿ. ಸಹಜವಾಗಿ ಏನಿದೆಯೋ ಅದಕ್ಕೇ ಅತೀತವಾದ ಪ್ರದರ್ಶನ ಅಥವಾ ಗೋಚರಿಸುವುದು ಎಂದೇ ಅರ್ಥೈಸಬಹುದು. ನಿತ್ಯ ಬದುಕಿನಿಂದ ವಿಶೇಷವಾಗಿ ಗುರುತಿಸಲ್ಪಡುವ ಬಯಕೆಯೇ ಈ ಅಡಂಬರತನ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆಡಂಬರವನ್ನು ಕಾಣಬಹುದು. ಸಾಗುವ ಒಂದೇ ದೂರವನ್ನು ಅಥವಾ ಸೇರಬೇಕಾದ ಒಂದೇ ಗುರಿಯನ್ನು ವಿಭಿನ್ನ ರೀತಿಯಲ್ಲಿ ಒಂದೇ ಹಾದಿಯನ್ನು ಕ್ರಮಿಸುವುದನ್ನು ನಿತ್ಯ ಕಾಣಬಹುದು.
ಹಲವು ವರ್ಷಗಳ ಹಿಂದೆ ಮಂಗಳೂರು ನೆಹರೂ ಮೈದಾನಿನಲ್ಲಿ ಒಂದು ಅದ್ಧೂರಿ ಯಕ್ಷಗಾನ ಪ್ರದರ್ಶನ ನೋಡಿದ್ದು ಇನ್ನೂ ನೆನಪಿದೆ. ನೆನಪಿದೆ ಎಂದ ಮಾತ್ರಕ್ಕೆ ಅದು ಸ್ಮರಣೀಯ ಯಕ್ಷಗಾನ ಕಾರ್ಯಕ್ರಮ ಎಂದು ನನಗೆ ಅನ್ನಿಸುವುದಿಲ್ಲ. ಅಥವಾ ಯಕ್ಷಗಾನಕ್ಕೆ ಸಂಬಂಧಿಸಿ ಈಗ ಯೋಚಿಸಿದರೆ ಅದು ಸ್ಮರಣೀಯ ಅನ್ನಿಸುವುದೇ ಇಲ್ಲ. ಮೂರು ಪ್ರಮುಖ ಡೇರೆ ಮೇಳಗಳ ಯಕ್ಷಗಾನ ಒಂದೇ ವೇದಿಕೆ ಮೇಲೆ ಕೂಡಾಟವಾಗಿ ಪ್ರದರ್ಶನಗೊಂಡಿತ್ತು. ಪ್ರಸಂಗವೂ ಹಾಗೆ ಬಹಳ ವಿಶೇಷ ಎನ್ನಿಸುವಂತಹ ಪ್ರಸಂಗ ಸಂಪೂರ್ಣ ರಾಮಾಯಣ. ತೆಂಕು ತಿಟ್ಟಿನ ಪ್ರಮುಖ ಮೇಳಗಳಾದ ಕರ್ನಾಟಕ ಮೇಳ ಮತ್ತು ಮಧೂರು ಮೇಳ ಹಾಗೂ ಬಡಗು ತಿಟ್ಟಿನ ಪ್ರಮುಖ ಮೇಳವಾದ ಪೆರ್ಡೂರು ಮೇಳ. ದಿನೇಶ ಅಮ್ಮಣ್ಣಾಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರರ ಜುಗಲ್ಬಂದಿ ದ್ವಂದ್ವ ನಾನು ನೋಡಿರುವುದು ಅದೇ ಮೊದಲು. ಹಾಗೇ ಇದರ ವಿಶೇಷಗಳನ್ನು ಉಲ್ಲೇಖಿಸುತ್ತಾ ಹೋದರೆ ಪ್ರಮುಖವಾಗಿ ನನಗೆಗೆ ಕಂಡದ್ದು ಹಲವು.
ಯಕ್ಷಗಾನಕ್ಕೆ ಅಷ್ಟೂ ದೊಡ್ಡ ವೇದಿಕೆ ನಾನು ಕಂಡಿರುವುದು ಅದುವೇ ಪ್ರಥಮ ಅದುವೆ ಕೊನೆ. ನೀಳಕಾಯದವ್ಯಕ್ತಿ ನೇರವಾಗಿ ನಿಂತು ವೇದಿಕೆಯ ಅಡಿಯಲ್ಲಿ ತೂರಬಹುದಾದಷ್ಟು ಎತ್ತರ ಮತ್ತು ಬೃಹತ್ತಾದ ವೇದಿಕೆ. ವೇದಿಕೆಯ ಅಗಲ ವಿಸ್ತೀರ್ಣವೂ ಹಾಗೆ ಅತ್ಯಂತ ವಿಶಾಲವಾದ ವೇದಿಕೆ. ವೇದಿಕೆಯ ಸನಿಹ ಮಧ್ಯಭಾಗದ ಈಸೀಚೆಯರ್ ನಲ್ಲಿ ಕುಳಿತು ನೀವು ಆಟ ನೋಡಿದರೆತಲೆ ಟೀಬಲ್ ಫ್ಯಾನಿನಂತೆ ಒಮ್ಮೆ ಅತ್ತ ಮಗುದೊಮ್ಮೆ ಇತ್ತ ತಿರುಗಲಾರಂಭಿಸುತ್ತದೆ. ಅಷ್ಟೂ ವಿಶಾಲವಾದ ವೇದಿಕೆ. ಮೂರೂ ಮೇಳದ ವೇದಿಕೆಯನ್ನು ಸೂಕ್ತವಾಗಿ ಸಮನ್ವಯಗೊಳಿಸಲಾಗಿತ್ತು. ಅಷ್ಟೂ ದೊಡ್ಡ ವಿಸ್ತಾರವಾದ ನೆಹರೂ ಮೈದಾನವನ್ನು ಬಹುಭಾಗ ಆಕ್ರಮಿಸಿ ದೊಡ್ಡದಾದ ಟೆಂಟ್ ಬೇರೆ ಹಾಕಿದ್ದರು. ಇನ್ನು ಟಿಕೇಟ್ ಬೆಲೆಯೂ ಪ್ರಥಮ ತರಗತಿಗೆ ರೂ. ೨೫೦ ಎಂದು ನನ್ನ ಅನಿಸಿಕೆ. ರಾಜ್ಯ ಮಾರಟ ತೆರಿಗೆ ನೌಕರ ಸಂಘದವರು ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನ ಬೇರೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮ ಪತಿಗಳ ಅನುದಾನವೂ ಬೇರೆ ಇತ್ತು ಎಂದುಕೊಳ್ಳಬಹುದು.
ಆಟ ಪೂರ್ವ ರಂಗದೊಂದಿಗೆ ಶುರುವಾದಾಗ, ಕುಂಬಳೇ ಬೇಡಿಯ ಸಂತೆಯಲ್ಲಿ ಒಂದು ಸುತ್ತು ಹಾಕಿದ ಅನುಭವಾಗಿ ಎಲ್ಲವು ವಿಚಿತ್ರವಾಗಿ ಕಂಡಿತ್ತು. ಕರ್ನಾಟಕ ಮೇಳದ ಲಕ್ಷ್ಮಣ ಶೆಟ್ಟಿ ಅಳಕೆಯವರ ದಶರಥನ ಒಡ್ಡೋಲಗ.... ಅನಂತರ ಬಾಯರು ರಮೆಶ್ ಅವರ ಪರಶುರಾಮ ಇವಿಷ್ಟು ಆರಂಭದಲ್ಲಿ ಬಂದ ಪಾತ್ರದ ನೆನಪು ಮಾತ್ರ ಇನ್ನೂ ಉಳಿದಿದೆ.ಸೀತಾಸ್ವಯಂವರ.,ಪಂಚವಟಿ, ಸೀತಾಪಹಾರ, ವಾಲಿವಧೆ ಕುಂಭಕರ್ಣ ಕಾಳಗ, ಇಂದ್ರಜಿತು ವಧೆ ಕೊನೆಗೆ ರಾವಣ ವಧೆಯೊಂದಿಗೆ ಪ್ರಸಂಗ ಮಂಗಳವಾಗಿಬಿಟ್ಟಿತು.ಪೆರ್ಡೂರು ಮೇಳದ ರಾಮನಾಯಿರಿ ಅವರ ಮಾಯಾ ಶೂರ್ಪನಖಿ ಉತ್ತಮವಾಗಿತ್ತು. ಸೀತಾಪಹಾರದ ರಾವಣ, ಹಾಗೆ ಕೊನೆಯ ಭಾಗದಲ್ಲಿ ಪುಳಿಂಚ ಬಣ್ಣದ ರಾವಣ ಅರುವ ಕೊರಗಪ್ಪ ಇಂದ್ರಜಿತು..ಪಂಚವಟಿಯಲ್ಲಿ ಅಮ್ಮಣ್ಣಾಯ ಧಾರೆಶ್ವರರು ಜತೆಯಾಗಿ ದ್ವಂದ್ವದ ಸ್ಪರ್ಧಾತ್ಮಕ ಹಾಡುಗಾರಿಕೆ ಹೀಗೆ ಕೆಲವೆಲ್ಲ ಇನ್ನೂ ನೆನಪಿದ್ದರೂ ಅಂದಿನ ಬಯಲಾಟ ಮತ್ರ ನೆನಪಿರುವುದು ಕೇವಲ ಆಧ್ಹೂರಿತನಕ್ಕೆ.
ಇನ್ನಿತರ ಹಲವು ಅದ್ದೂರಿಯ ಯಕ್ಷಗಾನಗಳನ್ನು ಕಾಣುವ ಸಂದರ್ಭ ಒದಗಿಬಂದಿದೆ. ದೇವಿಮಹಾತ್ಮೆ ಜೋಡಾಟವಾಗಿ ಮಂಗಳೂರು ಪುರಭವನದಲ್ಲಿ ಕಂಡದ್ದು ಇನ್ನೂ ನೆನಪಿದೆ. ಚಿಪ್ಪಾರು ಪದ್ಯಾಣ-ನಿಡ್ಲೆ ಕುರುಪ್ ಹೀಗೆ ಗುರುಶಿಷ್ಯರ ಜತೆಗಾರಿಕಯ ಚೆಂಡೆ ಪೀಠಿಕೆ ಸುಮಾರು ಒಂದು ಘಂಟೆ ಪ್ರೆಕ್ಷಕರರನ್ನು ಸಮ್ಮೋಹನಗೊಳಿಸಿದತ್ತು ಮಧ್ಯರಾತ್ರಿ ಹೊತ್ತು ಮಂಡೆಚ್ಚ ಕಡತೋಕರ ಜುಗಲ್ಬಂದಿ ಮುಂಜಾನೆ ಬಲಿಪ್ಪ ಮತ್ತು ಕುಂಡಚ್ಚ ಭಾಗವತರ ಜುಗಲ್ಬಂದಿ ಚಂದ್ರಗ್ರಿರಿಅಂಬು ಮಹಿಷಾಸುರ ಕೊಕ್ಕಡ ಮತ್ತು ಉಪಾಧ್ಯಾಯರ ಮಾಲಿನಿ ಹೀಗೆ ಹಲವು ನೆನಪಿದೆ. ಹೊರಾಂಗಣ ಮೈದಾನದಲ್ಲಿ ಆಗಬೇಕಾದ ಆಟ ಕೊನೆಘಳಿಗೆಯಲ್ಲಿ ಮಳೆಯಿಂದ ಪುರಭವನದ ಒಳಗೆ ನಡೆಯುವಂತಾಯಿತು. ಹೊರಗೆ ನಡೆಯುತ್ತಿದ್ದರೆ ಇನ್ನಿಷ್ಟು ಅದ್ದೂರಿಯ ಪ್ರದರ್ಶನ ಆಗುತ್ತಿತ್ತೋ ಎನೋ?
ಹಲವು ಅದ್ಧೂರಿಯ ಯಕ್ಷಗಾನ ಕಂಡರೂ ಒಟ್ಟು ಗಮನಿಸಬೇಕಾದ ಅಂಶವೆಂದರೆ ಒಟ್ಟು ಯಕ್ಷಗಾನ ಬಯಲಾಟ ಅದ್ಧೂರಿಯಾಯಿತೇ ಹೊರತು ಮುಖ್ಯವಾದ ಯಕ್ಷಗಾನ ಅದ್ಡೂರಿಯಾದ ಉದಾಹರಣೆ ಬಹಳ ಕಡಿಮೆ. ಮೇಲ್ನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ಹೇಳಿಕೊಳ್ಳುವಂತಹ ಯಕ್ಷಗಾನ ಸವಿಯುವ ಸಂದರ್ಭ ಕೆಲವೆ ಕಲವು ಇರುತ್ತದೆ. ಪ್ರವೇಶದರ ಉಜಿತವಿದ್ದು ಕೇವಲ ಯಕ್ಷಗಾನದ ದೃಷ್ಟಿಯಿಂದ ಆಯೋಜನೆಗೊಂಡರೂ ಪ್ರೇಕ್ಷಕನಿಗೆ ಯಾವುದು ಸವಿಯಬೇಕೋ ಎಂಬ ಗೊಂದಲದಲ್ಲೆ ಕಾರ್ಯಕ್ರಮ ಮುಗಿದು ಹೋಗುತ್ತದೆ. ಆದರು ಮೆಚ್ಚತಕ್ಕ ವಿಚಾರವೆಂದರೆ ಹಲವು ಸಮಯ ಮೊದಲೇ ಕಾರ್ಯಕ್ರಮ ನಿರ್ಣಯಗೊಂಡು ಹಲವು ಹಿರಿಯ ಕಿರಿಯ ಕಲಾವಿದರನ್ನು ಒಂದೆಡೆ ಸೇರಿಸಿ ಪ್ರಸಂಗ ನಿರ್ಣಯವಾಗಿ ಪಾತ್ರ ಹಂಚಿಕೆಮಾಡಿ ಎಲ್ಲವು ಬಹಳ ಸಾಹಸದ ಕೆಲಸವೆ. ಕೇವಲ ಕಲಾವಿದನ ಕಲೆ ಮಾತ್ರ ಪ್ರತಿಭೆಯಲ್ಲ ಇಷ್ಟು ದೊಡ್ಡ ವ್ಯವಸ್ಥೆಯನ್ನು ನಿರ್ವಹಿಸುವುದೂ ಒಂದು ಪ್ರತಿಭೆಯೇ ಸರಿ.
ಒಂದು ಅದ್ಧೂರಿ ಯಕ್ಷಗಾನ ಕಾರ್ಯಕ್ರಮದ ವೆಚ್ಚವನ್ನು ಕೆಲವೋಂದು ಸಲ ಊಹಿಸಲಿಕ್ಕೂ ಅಸಾಧ್ಯವಾದಷ್ಟು ದೊಡ್ಡ ಮೊತ್ತ ಈ ಕಾರ್ಯಕ್ರಮದ ನಿಮಿತ್ತ ವ್ಯಯವಾಗಿದೆ ಎಂದರೆ ಕೆಲವೆಲ್ಲ ಚಿಂತನಗಳು ಹಾಗೇ ಮೂಡುತ್ತವೆ.ಒಂದು ಮೇಳದ ಬಯಲಾಟವನ್ನೇ ಆಡಬಹುದಾದಷ್ಟು ವೆಚ್ಚ ಕೇವಲ ಆಟದ ನೋಟಿಸಿಗೆ ಖರ್ಚಾಗುವುದನ್ನು ನೆನಸುವಾಗ ಈ ಅಧ್ಹೂರಿತನದ ಬಾಹುಳ್ಯವನ್ನು ಊಹಿಸಬಹುದು. ೫೦ ರಿಂದ ನೂರು ಮಂದಿಯ ವರೆಗೆ ಕಲಾವಿದರು ಎಂದರೆ ೪-೫ ಮೇಳದಕಲಾವಿದರು ಒಂದು ರಾತ್ರಿ ಒಂದೇ ವೇದಿಕೆಯಲ್ಲಿ....ಊಹಿಸುವಾಗ ರೋಮಾಂಚನವಾದರೂ ಕೆಲವೆಲ್ಲ ಅರ್ಥ ಹೀನ ಎನ್ನಿಸುವುದಿಲ್ಲವೆ? ದೊಡ್ಡ ದೊಡ್ಡ ಕಲಾವಿದರು ಸಾವಿರಾರು ರೂಪಾಯಿ ಸಂಭಾವನೆ ತೆಗೆದುಕೊಳ್ಳುವಾಗ ಹಲವು ಸಲ ಹೆಮ್ಮೆಪಟ್ಟುಕೊಳ್ಳುವ ವಿಚಾರವಾದರೂ ವಾಸ್ತವದಲ್ಲಿ ಯೋಚಿಸುವಾಗ ಖೇದನೀಯ ವಿಚಾರಗಳು.. ಒಂದು ಮೇಳದ ಇಡೀ ರಾತ್ರಿಯ ಅವಧಿಯ ಆಟಕ್ಕೂ ಹೀಗೆ ಅದ್ಧೂರಿಯಾಗಿಯೋ ಸ್ಪ್ರರ್ಧಾತ್ಮಕವಾಗಿಯೋ ಆಯೊಜನೆಗೊಂಡ ಆಟಕ್ಕೂ ವೆತ್ಯಾಸ ಮತ್ತು ಅಂತರ ಬಹಳವಿದೆ ಅಂತ ನನಗೆ ಅನ್ನಿಸುತ್ತದೆ.
ಮುಖ್ಯವಾಗಿ ಸಮಯದ ಸಮಸ್ಯೆ ಎಲ್ಲ ಪ್ರದರ್ಶನದಲ್ಲೂ ಕಾಣಬಹುದು. ನಿಗದಿ ಪಡಿಸಿದಂತೆ ಪ್ರಸಂಗ ಮುಗಿಯದಿರುವಾಗ ಕೆಲವು ಪದ ಸನ್ನಿವೇಶಗಳನ್ನು ಕಡಿತಗೊಳಿಸಿ ಮಂಗಳ ಹಾಡಿಬಿಡುತ್ತಾರೆ. ಹಲವು ಮುಖ್ಯ ಕಲಾವಿದರಿಗೆ ಪದಗಳನ್ನು ಲೆಕ್ಕ ಮಾಡಿ ಕೊಡುವ ಅನಿವಾರ್ಯತೆ ಬಂದು ಕಲಾವಿದರ ಪೂರ್ಣ ಸಾಮಾರ್ಥ್ಯ ರಂಗದಲ್ಲಿ ಪ್ರದರ್ಶನಗೊಳ್ಳುವುದೇ ಇಲ್ಲ. ಕೊನೆಗೆ ವೇಶ ಹಾಕಿದ್ದಕ್ಕೆ ಹರಕೆ ಸಲ್ಲಿಸಿ ಹೋಗುವ ವಾಡಿಕೆಯೂ ಇಲ್ಲದಿಲ್ಲ. ಸಮಯ ಮೀರಿ ಹೊದಮೇಲೆ ಸಂಚಾಲಕನಾಗಲಿ ಕಲಾವಿದರಾಗಿ ಏನು ಮಾಡುವುದು ಸಾಧ್ಯವೂ ಇಲ್ಲ. ಪ್ರೇಕ್ಷಕನೂ ಯಾವುದನ್ನು ನಿರೀಕ್ಷೆಯಿಟ್ಟು ಬಂದನೋ ಆ ನಿರೀಕ್ಷೆ ಈಡೇರಿದೆಯೋ ಇಲ್ಲವೋ ಎಂಬ ಸಂದಿಗ್ಢದಲ್ಲೇ ಸಮಾಧಾನ ತಾಳಿಕೊಳ್ಳುವ ಅನಿವಾರ್ಯತೆಯಲ್ಲಿ ಕರಗುತ್ತಾನೆ.
ಕರಪತ್ರದಲ್ಲಿ ಅಥವಾ ಜಾಹೀರಾತಿನಲ್ಲಿ ಅದು ಇದು ಎಂದು ಗಿಮಿಕ್ ಮಾಡಿ ಜನ ಸೇರಿಸುವ ವ್ಯಾಪಾರಿ ಮನೋಭಾವಕ್ಕೆ ಪ್ರೇಕ್ಷಕ ಮಾತ್ರವಲ್ಲ ನಿಜ ಅರ್ಥದಲ್ಲಿ ಯಕ್ಷಗಾನ ಎಂಬ ಕಲೆಯು ಬಲಿಪಶುವಾಗುವುದು ಅರಿವಿಗೆ ಬರುವುದೇ ಇಲ್ಲ. ಕೆಲವು ವರ್ಷ ಮೊದಲು ಕಲಾಕ್ಷೇತ್ರದಲ್ಲಿ ತೆಂಕು ಬಡಗು ಪೈಪೋಟಿಯ ಸ್ಪ್ರರ್ಧಾತ್ಮಕ ಯಕ್ಷಗಾನ ಆಯೋಜನೆಗೊಂಡಿತ್ತು. ಕರಪತ್ರದಲ್ಲಿನ ಕಲಾವಿದರ ಪಟ್ಟಿ ನೋಡಿ ಭರ್ಜರಿ ಆಟದ ನಿರೀಕ್ಷೆಯಲ್ಲಿ ಹೋದರೆ ಪ್ರೇಕ್ಷ್ಕರ ಜಗಲ ಗದ್ದಲ ನೋಡಿ ಹೇಸಿಹೋಗೆ ಅರ್ಧದಲ್ಲೇ ವಾಪಾಸು ಬರುವಾಗ ಎರಡು ಘಂಟೆ ರಾತ್ರಿಯವರೆ ಬರಿದೇ ನಿದ್ದೆಗೆಟ್ಟೆನಲ್ಲ ಅನ್ನಿಸಿತ್ತು. ಇಲ್ಲಿ ಸೋತದ್ದು ಯಾವುದು? ಕಲಾವಿದರೇ? ಸಂಘಟಕರೆ? ಇಲ್ಲ ಟಿಕೆಟ್ ತೆಗೆದು ಕುಳಿತ ಪ್ರೇಕ್ಷಕನೆ? ಹಾಲ್ ತುಂಬ ಪ್ರೇಕ್ಷಕ ಸೇರಿದಮೇಲೆ ಸಂಘಟಕರು ಸೋಲುವ ಪ್ರಶ್ನೆಯೇ ಇಲ್ಲ. ಕಲಾವಿದರಿಗೂ ಅಷ್ಟೆ. ಉಚಿತವಾದ ಆದರ ಗೌರವಗಳು ಸಿಕ್ಕಿರುತ್ತದೆ. ಪ್ರೇಕ್ಷಕನಿಗೆ ತಾನು ಎಲ್ಲಿ ಸೋತೆ ಎಂಬುದರ ಅರಿವೇ ಇರುವುದಿಲ್ಲ. ಬದಲಾಗಿ ಸೋತು ಹೋದದ್ದು ಯಕ್ಷಗಾನ ಎಂಬ ಕಲೆ.
ಇದಕ್ಕಿಂತ ಭಿನ್ನವಾಗಿ ಗಮನಿಸಿದರೆ ಎರಡು ಮೂರು ಮುಖ್ಯ ಕಲಾವಿದರಿರುವ ಯಕ್ಷಗಾನವಾಗಲಿ ತಾಳಮದ್ದಲೆಯಾಗಲಿ ಅಲ್ಪ ಸಮಯದಲ್ಲೇ ಅದ್ಭುತವಾಗಿ ಮೂಡಿಬರುತ್ತದೆ. ಕಲಾವಿದರಿಂದಲೂ ಸಮಯದ ಕಟ್ಟು ಪಾಡು ಇಲ್ಲದೆ ತಮ್ಮ ಪೂರ್ಣ ಸಾಮಾರ್ಥ್ಯ ಹೊರಹೊಮ್ಮಲ್ಪಡುತ್ತದೆ. ಸನ್ನಿವೇಶ ಪದವಿಂಗಡನೆಯ ಸರ್ಕಸ್ಸು ಇರುವುದಿಲ್ಲ, ಕಲಾವಿದರ ಅವಗಣನೆಯೂ ಇರದೆ ಪೂರ್ಣವಾದ ಗಮನ ರಂಗದ ಮೇಲೆಯೇ ಹಾಯಿಸುವ ಹಾಗೇ ಆಗುತ್ತದೆ. ಮುಖ್ಯವಾಗಿ ಯಕ್ಷಗಾನದ ಪ್ರದರ್ಶನದಲ್ಲಿ ಅಧ್ದೂರಿತನ ತಾನೇ ತಾನಾಗಿ ವೈಭವೀಕರಿಸಲ್ಪಡುತ್ತದೆ. ಯಕ್ಷಗಾನ ವೈಭವೀಕರೀಸುವುದು ಅಂದರೆ. ಅದು ವೇದಿಕೆಯ ಹೊರಗಿನ ಸೌಂದರ್ಯದಲ್ಲಿ ಅಲ್ಲ. ಸರಳವಾದ ರಂಗಸ್ಥಳ , ಉತ್ತಮ ಹೀಮ್ಮೇಳ ಸೂಕ್ತ ಕಲಾವಿದರಗಡಣ ಮತ್ತು ವೇಷಭೂಷಣ ಇವಿಷ್ಟೆ.ಯಕ್ಷಗಾನದಲ್ಲಿ ಬಹುವಂಶವೂ ಸಾಂಕೇತಿಕ. ಎಲ್ಲವೂ ಇಲ್ಲಿ ಪ್ರತಿನಿಧೀಕರಿಸಲ್ಪಡುತ್ತದೆ. ಈ ಚೌಕಟ್ಟನ್ನು ಮೀರಿ ಅದ್ಧೂರಿತನ ಮೆರೆಯುತ್ತದೆ ಎಂದರೆ ಅದು ವಿಷಾದನೀಯ. ಪ್ರದರ್ಶನದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಸ್ಪ್ರರ್ಧೆ ಅನಿವಾರ್ಯ ಅಂತ ಒಪ್ಪಿಕೊಂಡರು ಸ್ಪರ್ಧೆ ವೈಶಮ್ಯಕ್ಕೆ ಕಾರಣವಾದರೆ? ಎಲ್ಲರೂ ನಿರಾಳವಾಗಿ ಕುಳಿತು ಕಲೆಯ ಅಸ್ವಾದಿಸುವಂತಾಗಬೇಕು. ರಂಗದ ಮೇಲಿನ ಸನ್ನಿವೇಶಕ್ಕೆ ಸಮ್ಮೋಹಿತರಾಗಿ ಉಸಿರು ಕಟ್ಟಬೇಕೆ ಹೊರತು ರಂಗದ ಹೊರಗಿನ ಚಟುವಟಿಕೆ ಅದಕ್ಕೆ ಕಾರಣವಾಗಬಾರದಲ್ಲವೆ? ಸಂಸ್ಕೃತರ ಸುಸಂಸ್ಕೃತರ ಕಲೆ ಸಹಜ ಗುಣದಿಂದಲೇ ವೈಭವೀಕರಿಸಬೇಕು. ಈ ಗುಣ ಯಕ್ಷಗಾನದ ಅಂತರಂಗದಲ್ಲಿ ಸಾಕಷ್ಟು ಇದೆ. ಅದರ ಅರಿವಿದ್ದೂ ಮತ್ತೂ ಅನಾವಶ್ಯಕ ಅದ್ದೂರಿತನಕ್ಕೆ ತೊಡಗುತ್ತೇವೆ ಎಂದರೆ ಅದು ಆ ಶ್ರೀಮಂತ ಕಲೆಯ ಅಂತರಂಗವನ್ನು ಅರಿಯದೆ ಅದರ ಸಹಜ ಸಾಮಾರ್ಥ್ಯವನ್ನು ಅನುಮಾನಿಸಿದಂತೆ ಅಲ್ಲವೆ? ಎಲ್ಲ ಬ್ಯಾನರ್ ಗಳ ರಾಶಿ, ಇನ್ನಿತರ ಅನಗತ್ಯ ವೈಭವದ ಮಧ್ಯೆ ಯಕ್ಷಗಾನ ಎಲ್ಲಿದೆ ಎಂಬುದನ್ನು ಹುಡುಕುವ ಕಾಲ ಬಾರದಿರಲಿ..




